ನಾನು ಯಾರಿಗೂ ಬೇಡವಾದೆನಾ?

ಅಂತರಗಂಗೆ

Team Udayavani, Jun 12, 2019, 5:00 AM IST

ಐವತ್ತನಾಲ್ಕು ವರ್ಷದ ಕಮಲಮ್ಮನವರಿಗೆ ಉರಿಯೂತ ಜಾಸ್ತಿಯಾಗಿ ಸಂಧಿವಾತ ತಜ್ಞರಲ್ಲಿ ಚಿಕಿತ್ಸೆ ಪಡೆದಿದ್ದರೂ ಪ್ರಯೋಜನವಾಗಿರಲಿಲ್ಲ. ದಿನನಿತ್ಯದ ಜೀವನವೇ ಕಷ್ಟವಾದಂತೆ ಅನಿಸುತಿತ್ತು. ಮಂಡಿನೋವು ಜಾಸ್ತಿಯಾಗಿ ಮಂಚ ಹತ್ತಿ ಇಳಿಯುವುದು ಪ್ರಯಾಸವಾಗಿತ್ತು. ಬೆನ್ನು- ಭುಜದಲ್ಲಿ ಶಕ್ತಿ ಕುಂದಿದಂತೆ ಅನಿಸುತ್ತಿತ್ತು. ಹತ್ತು ಹೆಜ್ಜೆ ನಡೆದರೆ ಕಾಲುಗಳು ಜೋಮುಗಟ್ಟುತ್ತಿದ್ದವು. ಒಲೆಯ ಮೇಲಿಂದ ಕುಕ್ಕರ್‌ ಇಳಿಸುವುದು ಕಷ್ಟವಾಗುತಿತ್ತು. ಎಷ್ಟು ಮಾತ್ರೆ ನುಂಗಿದರೂ ಸಮಸ್ಯೆ ಕಡಿಮೆಯಾಗದೇ, ವೈದ್ಯರು ಮಾನಸಿಕ ಸ್ಥಿತಿಯ ವಿಶ್ಲೇಷಣೆಗಾಗಿ ನನ್ನ ಬಳಿ ಕಳಿಸಿದ್ದರು.

ಕಮಲಮ್ಮನವರ ಪತಿಗೆ, ಅವರು ನಿವೃತ್ತಿ ಹೊಂದಿದ ಮೇಲೆ ಮನೆಯಲ್ಲಿ ಚಿಕ್ಕಪುಟ್ಟ ಕೆಲಸಗಳು ಕಿರಿಕಿರಿಯಾಗುತ್ತಿದ್ದವು. ಬಲಗಾಲಿನಲ್ಲಿ ಅವರಿಗೆ ಬಲ ಇರಲಿಲ್ಲ. ಕಮಲಮ್ಮ ನಿವೃತ್ತಿ ಹೊಂದಲು ಇನ್ನೂ ಆರೇಳು ವರ್ಷಗಳಿದ್ದಾಗಲೇ ಕಮಲಮ್ಮನವರನ್ನು ಕೆಲಸಬಿಡಲು ಪುಸಲಾಯಿಸಿದ್ದರಂತೆ. ಕಮಲಮ್ಮ ಕೆಲಸಬಿಟ್ಟ ಮೇಲೆ, ಪತಿಗೆ ಅನುಕೂಲವಾದರೂ, ಕಮಲಮ್ಮನವರಿಗೆ ಮನೆ ಹಿತವೆನಿಸಲಿಲ್ಲ. ಜೊತೆಗೆ ಪತಿಗೆ ಕೋಪ ಜಾಸ್ತಿ. ಕಾಫೀ ಬೇಗ ಕೊಟ್ಟರೆ ಸಿಟ್ಟು; ಲೇಟಾದರಂತೂ ರೇಗಿಯೇಬಿಡುತ್ತಿದ್ದರು. ಗಂಡ- ಹೆಂಡತಿಯ ನಡುವೆ ಸಮರಸ ಇರಲಿಲ್ಲ. ಬರೀ ವಾಗ್ವಾದ. ಹೆಂಡತಿ ಆಫೀಸಿನ ಗೆಳತಿಯರೊಂದಿಗೆ ಸಿನಿಮಾ/ ಪ್ರವಾಸಗಳಿಗೆ ಹೋಗಲು ಪತಿಯ ತಕರಾರಿತ್ತು.

ಮಗ ಹೆಂಡತಿಯ ಗುಲಾಮನಂತೆ ವರ್ತಿಸುತ್ತಿದ್ದ. ಹೆಂಡತಿಯ ಆಣತಿ ಮೀರುತ್ತಿರಲಿಲ್ಲ. ತಾಯಿಯ ಮಾತಿಗೆ ಬೆಲೆ ಕೊಡುತ್ತಿರಲಿಲ್ಲ. ಆಗಾಗ್ಗೆ ಕಮಲಮ್ಮನವರಿಗೆ ನೋವಾಗುತ್ತಿತ್ತು. ಚಿಕ್ಕವಳು ಮಗಳು. ಅನ್ಯಧರ್ಮೀಯನನ್ನು ಪ್ರೀತಿ ಮಾಡಿದ್ದಾಳೆ. ಇತ್ತ ಪ್ರೀತಿಸಿದ ಹುಡುಗ ಮದುವೆಗೂ ಒಪ್ಪುವುದಿಲ್ಲ. ಸ್ನೇಹವನ್ನೂ ಕೈ ಬಿಡುವುದಿಲ್ಲ. ಮಗಳ ಮದುವೆಗೆ ಹೊಸಾ ಸಂಬಂಧಗಳು ಬರುತ್ತಿವೆ. ಚಟಪಟಾಂತ ಮಾತನಾಡುತ್ತಿದ್ದ ಮಗಳು ಇತ್ತೀಚೆಗೆ ಯಾರೊಂದಿಗೂ ಮಾತೇ ಆಡುತ್ತಿಲ್ಲ.

ಕಮಲಮ್ಮನವರ ಉರಿಯೂತ ಜಾಸ್ತಿಯಾಗಲು ಮಾನಸಿಕ ಒತ್ತಡ ಕಾರಣ ಎಂಬುದು ಸುಸ್ಪಷ್ಟವಾಗಿತ್ತು. ಕಮಲಮ್ಮನವರ ಪತಿಯನ್ನು ಕರೆಸಿದ್ದೆ. ಅನೇಕ ಗಂಡಸರಿಗೆ ಕೌನ್ಸೆಲಿಂಗ್‌ನಲ್ಲಿ ನಂಬಿಕೆ ಇರುವುದಿಲ್ಲ. ಹೆಂಡತಿ ಗೆಳತಿಯರೊಂದಿಗೆ ಸಿನಿಮಾಗೆ ಹೋಗಬಾರದು ಅಷ್ಟೇ. ಜೊತೆಗೆ ಹೆಂಡತಿಯ ಮಾನಸಿಕ ತುಮುಲ ಅವರಿಗೆ ಅರ್ಥವಾಗದ ಸಮಾಚಾರ. ಮಗನನ್ನು ಕರೆಸಿದ್ದೆ. ಮಗ ಅವನ ಪ್ರಪಂಚದಲ್ಲಿ ಮುಳುಗಿದ್ದ. ತಾಯಿ ತನ್ನ ಅಪ್ಪನನ್ನು ಇನ್ನೂ ಚೆನ್ನಾಗಿ ನೋಡಿಕೊಳ್ಳಬಹುದೆಂದು ಅವನ ಅನಿಸಿಕೆ. ಮಗನಾಗಿ ಅವನು ಹೇಗೆ ತಾಯಿಯ ಭಾವನೆಗಳಿಗೆ ಸ್ಪಂದಿಸಬಹುದೆಂದು ಅವನಿಗೆ ತಿಳಿದಿರಲಿಲ್ಲ. ಅದೇ ತನ್ನ ಹೆಂಡತಿಯ ತಾಯಿಯೊಂದಿಗೆ ಅತ್ಯಂತ ತಾಳ್ಮೆಯಿಂದ ವ್ಯವಹರಿಸುತ್ತಿದ್ದ.

ನಾನು ತಿರಸ್ಕೃತಳಾದವಳು ಎಂಬ ಭಾವ ಮನಸ್ಸಿನಲ್ಲಿ ಕೋಲಾಹಲವನ್ನು ಉಂಟುಮಾಡಿದೆ. ಕೌಟುಂಬಿಕ ಸಂಬಂಧಗಳು ಅರ್ಥ ಕಳೆದುಕೊಂಡು ಸ್ವಂತ ಮನೆಯೇ ಹಿಂಸೆಯಾಗುತ್ತದೆ. ನೌಕರಿಗೆ ರಾಜೀನಾಮೆ ಕೊಟ್ಟಿದ್ದಕ್ಕಾಗಿ ಪಶ್ಚಾತ್ತಾಪ ಪಡುತ್ತಿದ್ದರು. ಮುಂದಿನ ಜೀವನದ ಬಗ್ಗೆ ಕಮಲಮ್ಮನವರಿಗೆ ಚಿಂತೆಯಾಗುತ್ತಿತ್ತು. ಹೀಗಾಗಿ, ಉರಿಯೂತದ ಸಮಸ್ಯೆ ಜಾಸ್ತಿಯಾಗಿತ್ತು. ಕಮಲಮ್ಮ ಈಗ ಮನೆಯಲ್ಲಿಯೇ ಸೀರೆ ಅಂಗಡಿ ತೆರೆದಿದ್ದಾರೆ. ತಮ್ಮ ಗ್ರಾಹಕರೊಂದಿಗೆ ಒಡನಾಟದಿಂದಾಗಿ, ಅವರಲ್ಲಿ ಇತ್ತೀಚೆಗೆ ಸ್ವಲ್ಪ ಉಲ್ಲಾಸ ಎನಿಸುತ್ತಿದೆ.

ವಿ.ಸೂ.: ತೀವ್ರ ಚಿಂತೆಯನ್ನು ದೂರ ಮಾಡಿಕೊಂಡರೆ, ಸಂಧಿವಾತದ ಸಮಸ್ಯೆ ನಿವಾರಣೆಯಾಗುತ್ತದೆ.

ಡಾ. ಶುಭಾ ಮಧುಸೂದನ್‌
ಚಿಕಿತ್ಸಾ ಮನೋವಿಜ್ಞಾನಿ

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

  • ದೇವರೇ, ಬೇವು ಸ್ವಲ್ಪವೇ ಕೊಡು. ಮಡಿಲ ತುಂಬಾ ಬೆಲ್ಲ ನೀಡು. ನಿನ್ನ ಮಡಿಲಲ್ಲಿ ಬೆಳೆ ಬೆಳೆದು ಸಾವಿರಾರು ಜನರಿಗೆ ಅನ್ನ ನೀಡುವ, ನಿನ್ನನ್ನೇ ನಂಬಿದ ಜನರ ಕೈಬಿಡದಿರು....

  • ಗಾಢ ಬಣ್ಣಗಳನ್ನು ಇಷ್ಟಪಡುವವರಿಗೆ ಕೆಂಪು ಬಣ್ಣದ ಮೇಲೆ ಖಂಡಿತಾ ಒಲವಿರುತ್ತದೆ. ಕೆಂಪು ಅಶುಭದ ಸಂಕೇತ ಅಂತ ಕೆಲವರು ನಂಬುತ್ತಾರಾದರೂ, ಫ್ಯಾಷನ್‌ ಪ್ರಪಂಚಕ್ಕೆ...

  • "ವಯಸ್ಸನ್ನ ನೋಡಿಕೊಂತಾ ಕೂತರೆ ಹೊಟ್ಟೆಪಾಡು ನಡೀಬೇಕಲ್ಲ? ಹೊಟ್ಟೆಗೆ ಒಂದೊತ್ತಿನ ಊಟ ಹಾಕೋರಿಲ್ಲ ಈಗ. ಇದ್ದ ಆಯಸ್ಸನ್ನೆಲ್ಲ ಮಕ್ಕಳ ಬೆಳವಣಿಗೆಗೆ ಮುಡಿಪಾಗಿಟ್ಟಾಯ್ತು....

  • ನಂಬಿದ ಮೌಲ್ಯಗಳಿಗೆ ಧಕ್ಕೆ ಉಂಟಾದಾಗ, ಶರೀರ ಕುಸಿಯುತ್ತದೆ. ಮೈಕೈ ನೋವುತ್ತದೆ. ಮನಸ್ಸಿನ ಪ್ರತಿಯೊಂದು ಆಲೋಚನೆಗಳಿಗೆ ಮತ್ತು ಭಾವನೆಗಳಿಗೆ ಅಂಗಾಂಗಗಳು ಪ್ರತಿಕ್ರಿಯಿಸುತ್ತವೆ. 48ರ...

  • ಬ್ಯೂಟಿ ಪಾರ್ಲರ್‌ಗೆ ಹೋಗಿ ಫೇಶಿಯಲ್‌ ಮಾಡಿಸಿಕೊಳ್ಳೋದು ಮಹಾ ಬೋರು ಅಂತ ಅನ್ನಿಸಿದೆಯಾ? ನನಗಂತೂ ಹಾಗೇ ಅನ್ನಿಸ್ತಿತ್ತು. ಅದಕ್ಕೇ ಪಾರ್ಲರ್‌ಗೆ ಹೋಗೋದನ್ನೇ...

ಹೊಸ ಸೇರ್ಪಡೆ