ನಮ್‌ ಆಲ್ಬಂ ನೋಡಿಲ್ಲ ಅಲ್ವಾ?

ನಿಮ್ಮ ನೆಚ್ಚಿನ ಚಿತ್ರಗಳನ್ನು ಆಲ್ಬಮ್ಮಿನಲ್ಲೇ ನೋಡಿರಿ!

Team Udayavani, Jun 19, 2019, 5:00 AM IST

ಮನೆಯ ಅಲ್ಮೆರಾಗಳಲ್ಲಿ, ಬಟ್ಟೆಗಳ ಮಧ್ಯದಲ್ಲಿ ದಶಕಗಳ ಕಾಲದಿಂದ ಸ್ಥಾನ ಪಡೆದಿರುವ ಫ್ಯಾಮಿಲಿ ಆಲ್ಬಮ್ಮುಗಳೇ ಪ್ರಪಂಚದ ಮೊದಲ ಇನ್‌ಸ್ಟಾಗ್ರಾಂ. ಹಿಂದೆಲ್ಲಾ ಮನೆಗೆ ಬಂದ ಅತಿಥಿಗಳಿಗೆ ಮನೆಯವರು ತಮ್ಮಲ್ಲಿದ್ದ ಫ್ಯಾಮಿಲಿ ಆಲ್ಬಮ್ಮುಗಳನ್ನು ತೋರಿಸುತ್ತಿದ್ದರು. ಅದರಲ್ಲೂ ಅತಿಥಿಗಳು ಆಲ್ಬಂ ಪುಟಗಳನ್ನು ತಿರುವುತ್ತಿದ್ದರೆ ಮನೆಯಾಕೆಗೆ ಎಲ್ಲಿಲ್ಲದ ಸಂಭ್ರಮ. ಫ್ಯಾಮಿಲಿ ಆಲ್ಬಮ್ಮುಗಳನ್ನು ಜತನದಿಂದ ಕಾಪಿಟ್ಟುಕೊಳ್ಳುತ್ತಿದ್ದ ಕಾಲ ಈಗಿಲ್ಲ. ಸಾವಿರಾರು ಫೋಟೋಗಳನ್ನು ನಾವಿಂದು ಕ್ಲಿಕ್ಕಿಸುತ್ತಿದ್ದೇವೆ, ಮೆಮೋರಿ ಕಾರ್ಡ್‌ ಭರ್ತಿಯಾಗುವಷ್ಟು ಫೋಟೋಗಳನ್ನು ತುಂಬಿಸುತ್ತಿದ್ದೇವಷ್ಟೇ…

ನೆಂಟರಿಷ್ಟರ ಮನೆಗೆ ಹೋದಾಗಲೆಲ್ಲಾ ನನ್ನದೊಂದು ಅಭ್ಯಾಸ. ಅವರ ಹಳೆಯ ಫೋಟೋಗಳನ್ನು ನೋಡುವುದು. ನನ್ನ ಈ ವರ್ತನೆ ನೋಡಿ ಉತ್ಸಾಹಿತರಾಗುವ ಆ ಮನೆಯವರು ಕಂತೆಗಟ್ಟಲೆ ಫ್ಯಾಮಿಲಿ ಆಲ್ಬಮ್ಮುಗಳನ್ನು ಟೀಪಾಯ… ಮೇಲಿರಿಸಿ, ಕುಡಿಯಲು ಪಾನೀಯ, ತಿನ್ನಲು ಕುರುಕಲು ತಿಂಡಿ ಪ್ಲೇಟ್‌ನಲ್ಲಿ ಕೊಟ್ಟು ಕೂರಿಸಿ ಹೋಗುತ್ತಾರೆ. ಮನೆಯ ಅಲ್ಮೆರಾಗಳಲ್ಲಿ, ಬಟ್ಟೆಗಳ ಮಧ್ಯದಲ್ಲಿ ದಶಕಗಳ ಕಾಲದಿಂದ ಸ್ಥಾನ ಪಡೆದಿರುವ ಫ್ಯಾಮಿಲಿ ಆಲ್ಬಮ್ಮುಗಳನ್ನು ಪ್ರಪಂಚದ ಮೊದಲ ಇನ್‌ಸ್ಟಗ್ರಾಮ್‌ ಎಂದು ಕರೆಯಬಹುದು. ನಮ್ಮ ಬದುಕಿನ ಪುಟಗಳನ್ನು ಇಂದು ನಾವೆಲ್ಲರೂ ಇನ್‌ಸ್ಟಗ್ರಾಮ್‌ನಂಥ ಫೋಟೋ ಶೇರಿಂಗ್‌ ಜಾಲತಾಣಗಳಲ್ಲಿ ಜಗತ್ತಿಗೇ ಪ್ರಚುರ ಪಡಿಸುತ್ತಿದ್ದೇವೆ. ಹಿಂದೆಲ್ಲಾ ಮನೆಗೆ ಬಂದ ಅತಿಥಿಗಳಿಗೆ ಮನೆಯವರು ತಮ್ಮಲ್ಲಿದ್ದ ಫ್ಯಾಮಿಲಿ ಆಲ್ಬಮ್ಮುಗಳನ್ನು ತೋರಿಸುತ್ತಿದ್ದರು. ಅದರಲ್ಲೂ ಅತಿಥಿಗಳು ಆಲ್ಬಂ ಪುಟಗಳನ್ನು ತಿರುವುತ್ತಿದ್ದರೆ ಮನೆಯಾಕೆಗೆ ಎಲ್ಲಿಲ್ಲದ ಸಂಭ್ರಮ. ನಡು ನಡುವೆ ಫೋಟೋದಲ್ಲಿರುವವರು ಯಾರು, ಅದನ್ನು ಯಾವ ಸಂದರ್ಭದಲ್ಲಿ ತೆಗೆದಿದ್ದು ಎಂಬುದನ್ನು ಸ್ಥಳದಲ್ಲೇ ಆಕೆ ವಿವರಿಸುತ್ತಿದ್ದಳು. ಇಂದು ಡಿಜಿಟಲ… ಫೋಟೋಗಳ ಜಮಾನಾ ಬಂದಿದ್ದರೂ, ಪ್ರಿಂಟು ಹಾಕಿಸಿದ ಫ್ಯಾಮಿಲಿ ಆಲ್ಬಮ್ಮುಗಳು ನೀಡುವ ಅನುಭೂತಿಯೇ ಬೇರೆ. ಸಾವಿರಾರು ಫೋಟೋಗಳನ್ನು ನಾವಿಂದು ಕ್ಲಿಕ್ಕಿಸುತ್ತಿದ್ದೇವೆ, ಮೆಮೋರಿ ಕಾರ್ಡ್‌ ಭರ್ತಿಯಾಗುವಷ್ಟು ಫೋಟೋಗಳನ್ನು ತುಂಬಿಸುತ್ತಿದ್ದೇವೆ. ಫ್ಯಾಮಿಲಿ ಆಲ್ಬಮ್ಮುಗಳನ್ನು ಜತನದಿಂದ ಕಾಪಿಟ್ಟುಕೊಳ್ಳುತ್ತಿದ್ದ ಕಾಲ ಈಗಿಲ್ಲ. ಫೋಟೋಗಳು ಮತ್ತು ಅದು ತನ್ನಲ್ಲಿ ಹಿಡಿದಿಟ್ಟ ನೆನಪುಗಳ ಭಾವ, ಇವ್ಯಾವುದರ ಕುರಿತೂ ಸೆಂಟಿಮೆಂಟಲ್‌ ಭಾವನೆ ನಮ್ಮಲ್ಲಿ ಕಳೆದು ಹೋಗುತ್ತಿದೆ ಎಂದು ಕೆಲವೊಮ್ಮೆ ನನಗೆ ಅನ್ನಿಸುತ್ತದೆ.

ಇತ್ತೀಚಿಗೆ ಗೆಳತಿ ಶಿಲ್ಪಾಳ ಮನೆಗೆ ಹೋಗಿದ್ದೆ. ಶಿಲ್ಪಾಳಿಗೆ ಮೂರ್‍ನಾಲ್ಕು ವರ್ಷದ ಮಗುವಿತ್ತು. ಮಗುವನ್ನು ನೋಡಿಕೊಳ್ಳಲೆಂದೇ ಕೆಲಸ ಬಿಟ್ಟಿದ್ದಳು. ಎಲ್ಲಾ ತಾಯಂದಿರಂತೆ ಮಗುವಾದಾಗಿನಿಂದ ಶಿಲ್ಪಾಳಿಗೆ ಮಗುವೇ ಬದುಕಾಗಿಬಿಟ್ಟಿತ್ತು. ಅವಳ ಎಲ್ಲಾ ಚಟುವಟಿಕೆಗಳು ಅದರ ಸುತ್ತಲೇ ಸುತ್ತುತ್ತಿದ್ದವು. ಮಗುವಿನ ಸಣ್ಣಪುಟ್ಟ ಚೇಷ್ಟೆಗಳನ್ನೆಲ್ಲಾ ನೋಡಿ ಸ್ವರ್ಗವೇ ಸಿಕ್ಕಷ್ಟು ಸಂತಸ ಪಡುತ್ತಿದ್ದಳು. ಮಗುವಿನ ಲಾಲನೆ ಪಾಲನೆ ಜೊತೆಗೆ ಹೊಸದೊಂದು ಹವ್ಯಾಸವನ್ನು ಅವಳು ರೂಢಿಸಿಕೊಂಡಿದ್ದಳು. ಅದೆಂದರೆ, ಮಗುವಿನ ಫೋಟೋ ಕ್ಲಿಕ್ಕಿಸುವುದು. ಮಗು ಕೈಕಾಲು ಆಡಿಸಿದರೂ ಫೋಟೋ, ನಕ್ಕರೂ ಫೋಟೋ, ಅತ್ತರೂ ಫೋಟೋ. ಪತಿ ಮಹೇಶ್‌ “ಯಾಕಪ್ಪಾ ಇಷ್ಟೊಂದು ಫೋಟೋ?’ ಎಂದು ಕೇಳಿದರೆ, ನಾಳೆ ಇವೆಲ್ಲಾ ನೆನಪಿಟ್ಟುಕೊಳ್ಳೋದು ಬೇಡವಾ ಎಂದು ಸಬೂಬು ಹೇಳಿಬಿಡುತ್ತಿದ್ದಳು.

ಹಾಗಿರುವಾಗಲೇ ಶಿಲ್ಪಾಳ ಎದೆ ಹಾರಿಹೋಗುವಂಥ ಆ ಘಟನೆ ನಡೆದುಹೋಗಿತ್ತು. ಕೈಲಿ ಹಿಡಿದಿದ್ದ ಮೊಬೈಲು ಜಾರಿ ನೀರು ತುಂಬಿದ್ದ ಬಕೆಟ್‌ನೊಳಗೆ ಬಿದ್ದುಬಿಟ್ಟಿತು. ಹೊರತೆಗೆದಾಗ ಮೊಬೈಲು ನಿಶ್ಶಬ್ದವಾಗಿತ್ತು. ಯಾವ ಬಟನ್ನುಗಳೂ ಕೆಲಸ ಮಾಡುತ್ತಿರಲಿಲ್ಲ. ರಿಪೇರಿ ಮಾಡಿಸಿದರೆ ಸರಿ ಹೋದೀತು ಎಂದು ಸಮಾಧಾನ ತಂದುಕೊಂಡಳು. ರಿಪೇರಿಯವನೂ ಅವಳು ಎಣಿಸಿದ್ದಂತೆಯೇ ಮೊಬೈಲನ್ನು ಮತ್ತೆ ಕಾರ್ಯಾಚರಿಸುವಂತೆ ಮಾಡಿಕೊಟ್ಟ. ಸರಿಯಾದ ಮೊಬೈಲನ್ನು ಕೈಲಿ ಹಿಡಿದ ಶಿಲ್ಪಾಳಿಗೆ ಶಾಕ್‌ ಆಗುವುದೊಂದು ಬಾಕಿ. ಒಂದೆರಡು ವರ್ಷಗಳಿಂದ ತಾನು ತೆಗೆದಿದ್ದ ಮಗುವಿನ ಫೋಟೋಗಳಷ್ಟೂ ಡಿಲೀಟ್‌ ಆಗಿತ್ತು. ರಿಪೇರಿಯವನು ತಾನೇನೂ ಮಾಡಲು ಸಾಧ್ಯವಿಲ್ಲವೆಂದು ಕೈಚೆಲ್ಲಿದ. ಅವಳು ಅಳುಮೊಗದಿಂದ ಮನೆಗೆ ಬಂದಳು. ಮನಸ್ಸಿನಿಂದ ನೆನಪುಗಳೆಲ್ಲಾ ಮಾಯವಾದಂತೆ ಭಾಸವಾಯಿತು ಅವಳಿಗೆ. ಫೋಟೋಗಳನ್ನು ಪ್ರಿಂಟ್‌ ಮಾಡಿಸಿದ್ದರೂ ಆಗಿರುತ್ತಿತ್ತು ಎಂದನ್ನಿಸಿತು ಆಗವಳಿಗೆ. ಆದರೆ, ಸಾವಿರಾರು ಫೋಟೋಗಳನ್ನು ಪ್ರಿಂಟ್‌ ಹಾಕಿಸುವುದೆಲ್ಲಿಂದ? ಇಲ್ಲವೇ ಮತ್ತೂಂದು ಮೆಮೋರಿ ಕಾರ್ಡ್‌ನಲ್ಲಾದರೂ ಸೇವ್‌ ಮಾಡಿಡಬಹುದಿತ್ತು ಎಂಬ ಉಪಾಯವೂ ಅವಳಿಗೆ ಹೊಳೆದಿದ್ದು ಆಗಲೇ. ಆದರೆ, ಈಗ ಅವೆಲ್ಲಾ ಹೊಳೆದು ಏನು ಪ್ರಯೋಜನ, ಅನಾಹುತವೆಲ್ಲಾ ಆದಮೇಲೆ.

ಮಹೇಶ್‌ ಕಚೇರಿಯಿಂದ ಮನೆಗೆ ವಾಪಸ್ಸಾದಾಗ ಯಾವತ್ತೂ ಉತ್ಸಾಹದಿಂದ ಪುಟಿಯುತ್ತಾ ಕ್ಯಾಮೆರಾ ಹಿಡಿದು ಮಗುವಿನ ಹಿಂದೋಡುತ್ತಿದ್ದವಳು ಮಂಕಾಗಿರುವುದನ್ನು ಗಮನಿಸಿದ. ಯಾಕಪ್ಪಾ ಫೋಟೋ ತೆಗೆಯುತ್ತಿಲ್ಲವಲ್ಲಾ ಎಂದು ಕೇಳಿದಾಗ ದುಃಖದಿಂದಲೇ ನಡೆದದ್ದೆಲ್ಲವನ್ನೂ ಹೇಳಿದಳು. ಅವನು ಒಡನೆಯೇ ತನ್ನ ಲ್ಯಾಪ್‌ಟಾಪ್‌ನ ಮುಚ್ಚಳ ತೆರೆದು ಜಿಮೇಲ್‌ ಅಕೌಂಟಿಗೆ ಲಾಗಿನ್‌ ಆಗಿ ಗೂಗಲ್‌ ಡ್ರೈವ್‌ ಜಾಲತಾಣವನ್ನು ಓಪನ್‌ ಮಾಡಿದ. ತನ್ನಾಕೆಯನ್ನು ಕರೆದು ಅದರಲ್ಲಿದ್ದುದನ್ನು ತೋರಿಸಿದ. ಶಿಲ್ಪಾ ಕಳೆದುಕೊಂಡಿದ್ದ ಫೋಟೋಗಳಷ್ಟೂ ಅಲ್ಲಿತ್ತು. ಅವಳಿಗೆ ತಿಳಿಯದಂತೆ ಮಹೇಶ್‌ ಅದನ್ನು ಗೂಗಲ್‌ ಡ್ರೈವ್‌ನ ತನ್ನ ಖಾತೆಯಲ್ಲಿ ಸೇವ್‌ ಮಾಡಿಡುತ್ತಿದ್ದ. ಮಗು ಹುಟ್ಟಿದಂದಿನಿಂದ ಕಳೆದ ವಾರ ಮಗು ಸ್ನಾನದ ಮನೆಯಲ್ಲಿ ಮಾಡಿದ ಚೇಷ್ಟೆಯ ಫೋಟೋವರೆಗೂ ಎಲ್ಲವೂ ಅಲ್ಲಿ ಭದ್ರವಾಗಿದ್ದವು. ಪತಿರಾಯ ಸಾಫ್ಟ್ವೇರ್‌ ಎಂಜಿನಿಯರ್‌ ಆಗಿದ್ದಕ್ಕೂ ಸಾರ್ಥಕವಾಯ್ತು ಎಂಬಂತೆ ಒಮ್ಮೆಲೇ ಪ್ರೀತಿಯುಕ್ಕಿ ಕೆನ್ನೆಗೆ ಮುತ್ತು ಕೊಟ್ಟೇ ಬಿಟ್ಟಳಂತೆ! ಅದನ್ನೂ ಹೇಳುತ್ತಲೂ ಮತ್ತೂಮ್ಮೆ ನಾಚಿ ನೀರಾದಳು ಆಕೆ. ಈಗಲಾದರೂ ಫ್ಯಾಮಿಲಿ ಫೋಟೋ ಮಹತ್ವ ಗೊತ್ತಾಯ್ತಾ?:)

ಒಂದು ಲಕ್ಷ ಕೋಟಿ
ಪ್ರಖ್ಯಾತ ಫೋಟೋಗ್ರಫಿ ಉತ್ಪನ್ನ ತಯಾರಕ ಕಂಪನಿ ಕೊಡ್ಯಾಕ್‌, 2000 ಇಸವಿಯನ್ನು ಗಮನಾರ್ಹ ಎಂದು ಬಣ್ಣಿಸಿತ್ತು. ಏಕೆಂದರೆ ಆಗಿನ್ನೂ ಸ್ಮಾರ್ಟ್‌ಫೋನುಗಳು, ಅಧಿಕ ಮೆಗಾಪಿಕ್ಸೆಲ್‌ಗ‌ಳ ಗೀಳು ಶುರುವಾಗಿರಲಿಲ್ಲ. ಜನರು ಇನ್ನೂ ರೀಲುಗಳನ್ನು ಬಳಸುತ್ತಿದ್ದರು. ಈಗಿನಂತೆ ಬೇಕಾಬಿಟ್ಟಿ, ಮನಸೋಇಚ್ಛೆ ಫೋಟೋ ತೆಗೆಯುತ್ತಿರಲಿಲ್ಲ. ರೀಲು ಖಾಲಿಯಾಗುವುದೆಂಬ ಕಾರಣಕ್ಕೆ ಅಳೆದು ತೂಗಿ ಫೋಟೋ ಕ್ಲಿಕ್ಕಿಸುತ್ತಿದ್ದರು. ಹೀಗಾಗಿ, ಪ್ರತಿವರ್ಷ ಜಗತ್ತಿನಾದ್ಯಂತ ತೆಗೆಯಲ್ಪಡುತ್ತಿದ್ದ ಒಟ್ಟು ಫೋಟೋಗಳ ಸಂಖ್ಯೆ 8000 ಕೋಟಿಯ ಆಸುಪಾಸಿನಲ್ಲಿರುತ್ತಿತ್ತು. 2017ನೇ ಇಸವಿಯಲ್ಲಿ ಈ ಸಂಖ್ಯೆ, ಒಂದು ಲಕ್ಷ ಕೋಟಿ ದಾಟಿತ್ತು. ಡಿಜಿಟಲ್‌ ಕಾಮೆರಾಗಳು, ಕ್ಯಾಮೆರಾ ಫೋನುಗಳ ಸುಧಾರಿತ ತಂತ್ರಜ್ಞಾನದ ಫ‌ಲಶ್ರುತಿ ಇದಾಗಿತ್ತು.

ಫ್ಯಾಮಿಲಿ ಫೋಟೋ ಪವರ್‌
ಫ್ಯಾಮಿಲಿ ಫೋಟೋಗೆ ಇರುವ ತಾಕತ್ತನ್ನು ತಿಳಿಸುವ ಒಂದು ಘಟನೆ ಇಲ್ಲಿದೆ. ಸ್ಕಾಟ್ಲೆಂಡ್‌ನ‌ ಮನಃಶಾಸ್ತ್ರಜ್ಞ ರಿಚರ್ಡ್‌ ವೈಸ್‌ಮನ್‌ ಒಂದು ವಿಲಕ್ಷಣವಾದ ಸಂಶೋಧನೆ ಕೈಗೊಂಡ. ಸಾರ್ವಜನಿಕ ಸ್ಥಳಗಳಲ್ಲಿ ಪರ್ಸುಗಳನ್ನು ಬೇಕೆಂದೇ ಬೀಳಿಸಿ ಬರುವುದು. ಈ ರೀತಿ ಆತ ಬಿಟ್ಟುಬಂದ ಪರ್ಸುಗಳು 240. ಖಾಲಿ ಪರ್ಸ್‌ ಎಂದುಕೊಳ್ಳದಿರಿ ಅದರಲ್ಲಿ ದುಡ್ಡು ಕೂಡಾ ಇತ್ತು. ಅವನಿಗೆಲ್ಲೋ ಅರಳು ಮರಳಿರಬೇಕು ಎಂದುಕೊಳ್ಳದಿರಿ. ಪರ್ಸಿನಲ್ಲಿ ದುಡ್ಡಿನ ಜೊತೆಗೆ ಫ್ಯಾಮಿಲಿ ಫೋಟೋವನ್ನು ಇಟ್ಟಿದ್ದ. ಇನ್ನು ಕೆಲ ಪರ್ಸುಗಳಲ್ಲಿ ಮಗುವಿನ ಭಾವಚಿತ್ರವಿದ್ದರೆ ಮತ್ತು ಕೆಲವುದರಲ್ಲಿ ಬರೀ ದುಡ್ಡು ಮಾತ್ರ ಇಟ್ಟಿದ್ದ! ಈ ಪರ್ಸುಗಳಲ್ಲಿ ಅನೇಕವು ಹಿಂದಿರುಗಿ ಬಂದವು. ಸಿಕ್ಕವರು ಪರ್ಸ್‌ನ ಐ.ಡಿ. ಕಾರ್ಡ್‌ನಲ್ಲಿದ್ದ ವಿಳಾಸಕ್ಕೆ ಅದನ್ನು ಕೊರಿಯರ್‌ ಮಾಡಿದರು. ಸಂಶೋಧನೆಯ ಫ‌ಲಿತಾಂಶ ಅಚ್ಚರಿ ಮೂಡಿಸುವಂಥದ್ದು. ಯಾವ ಫೋಟೋ ಇಲ್ಲದ ಪರ್ಸುಗಳಲ್ಲಿ ಶೇ.22ರಷ್ಟು ಮಾತ್ರ ಮರಳಿದರೆ, ಫ್ಯಾಮಿಲಿ ಫೋಟೋ ಇದ್ದ ಪರ್ಸುಗಳಲ್ಲಿ ಶೇ.88ರಷ್ಟು ಮರಳಿದವು. ನಾವು ಫ್ಯಾಮಿಲಿ ಫೋಟೋಗಳಿಗೆ ನೀಡುವ ಬೆಲೆಯನ್ನು ಇದರಿಂದ ತಿಳಿಯಬಹುದು.

ನಗ್ರಪ್ಪಾ ಎಲ್ಲಾರೂ…
ಹಳೆಯ ಫ್ಯಾಮಿಲಿ ಫೋಟೋಗಳಲ್ಲಿ ಜನರು ನಗದೇ ಇರುವುದನ್ನು ನೀವು ಗಮನಿಸಿದ್ದೀರಾ? ಹಳೆಯದು ಎಂದರೆ ಕನಿಷ್ಠ ಪಕ್ಷ 6- 7 ದಶಕಗಳಿಗೂ ಹಿಂದಿನದು. ಅಷ್ಟು ಹಳೆಯ ಫೋಟೋ ಮುಂದಿನ ಬಾರಿ ಸಿಕ್ಕಾಗ ಗಮನಿಸಿ, ಜನರು ಮುಖವನ್ನು ಗಂಟಿಕ್ಕಿಕೊಂಡಿರುವ ಸಂಗತಿ ನಿಮ್ಮ ಕಣ್ಣಿಗೂ ಬಿದ್ದೀತು. ಫ್ಯಾಮಿಲಿ ಫೋಟೋಗೆ ಪೋಸ್‌ ಕೊಡುವಾಗ ಇತರರಿಗಿಂತ ನಾವೇ ಚಂದಕೆ ಕಾಣಬೇಕು ಎಂದು ಸಿಂಗರಿಸಿಕೊಂಡು ಬರುತ್ತೇವೆ. ಫೋಟೋದಲ್ಲಿ ನಾವೇ ಎದ್ದುಕಾಣಬೇಕು ಎಂಬ ದೃಷ್ಟಿಯಿಂದ ಡಕ್‌ ಫೇಸ್‌, ಕಣ್ಣಗಲಿಸುವುದು, ಹೀಗೆ… ಏನೇನು ಮಾಡಬೇಕೋ ಅವೆಲ್ಲ ಕಸರತ್ತನ್ನೂ ಮಾಡುತ್ತೇವೆ. ಆದರೆ, ಆ ಹಳೆಯ ಫೋಟೋದಲ್ಲೇಕೆ ಜನರು ಮುಖ ಗಂಟಿಕ್ಕಿಕೊಂಡಿರುತ್ತಿದ್ದರು? ಅದಕ್ಕೆ ಕಾರಣ ತಿಳಿದರೆ ನೀವು ನಕ್ಕುಬಿಡುತ್ತೀರಾ. ಆಗಿನ ಕ್ಯಾಮೆರಾಗಳು ಭಾರಿ ತೂಕವನ್ನು ಹೊಂದಿರುತ್ತಿದ್ದವು. ಅದನ್ನು ಆಪರೇಟ್‌ ಮಾಡುವುದು ಸುಲಭವಿರಲಿಲ್ಲ. ಕ್ಯಾಮೆರಾದ ಎದುರಿನ ದೃಶ್ಯಾವಳಿ ನೆಗೆಟಿವ್‌ ಪ್ಲೇಟ್‌ ಮೇಲೆ ಮೂಡಲು ಗಂಟೆಗಳ ಕಾಲ ಹಿಡಿಯುತ್ತಿತ್ತು. ಅದರ ಅರ್ಥ ನಿಮಗೂ ಗೊತ್ತಾಗಿರಬೇಕಲ್ಲ? ಅಷ್ಟು ಸಮಯ ಅಂದರೆ ಗಂಟೆಗಟ್ಟಲೆ ವ್ಯಕ್ತಿಗಳು ಕ್ಯಾಮೆರಾ ಮುಂದೆ ವಿಗ್ರಹದಂತೆ ಕುಳಿತೋ ನಿಂತೋ ಇರಬೇಕಾಗುತ್ತಿತ್ತು. ಅಷ್ಟು ದೀರ್ಘ‌ ಕಾಲ ನಗುತ್ತಲೇ ಇರುವುದಕ್ಕಾಗುತ್ತದೆಯೇ?

– ಹರ್ಷವರ್ಧನ್‌ ಸುಳ್ಯ


ಈ ವಿಭಾಗದಿಂದ ಇನ್ನಷ್ಟು

  • ನಯನಾಗೆ 27 ವರ್ಷಕ್ಕೆ ಮದುವೆಯಾಯ್ತು. ಎಂಜಿನಿಯರಿಂಗ್‌ ಮುಗಿಸಿ ಮೂರು ವರ್ಷ ಸಣ್ಣ ಕಂಪನಿಯಲ್ಲಿ, ಕಡಿಮೆ ಸಂಬಳಕ್ಕೆ ದುಡಿದಿದ್ದ ಆಕೆಗೆ ಆಗಷ್ಟೇ ಹೆಸರಾಂತ ಎಂಎನ್‌ಸಿಯಲ್ಲಿ...

  • ಇಷ್ಟು ಸಣ್ಣ ವಯಸ್ಸಿನಲ್ಲೇ ಮೊಬೈಲ್‌ನಲ್ಲಿ ಆ್ಯಪ್‌ಗ್ಳನ್ನು ಡೌನ್‌ಲೋಡ್‌ ಮಾಡುತ್ತಾನೆ, ಅವನಿಗೆ ಗೊತ್ತಿಲ್ಲದ ಗೇಮೇ ಇಲ್ಲ, ಯುಟ್ಯೂಬ್‌ನಲ್ಲಿ ತನಗೆ ಬೇಕಾದ್ದನ್ನು...

  • ಮನೆಯಲ್ಲಿ ಹೆಣ್ಣುಮಗು ಹುಟ್ಟಿದರೆ ಅವರಿಗೆ ಸಂಭ್ರಮ. ಗಂಡು ಮಗುವಿಗೆ ಆದ್ಯತೆ ಕಡಿಮೆ. ಮನೆಯ ಹೆಚ್ಚಿನ ಜವಾಬ್ದಾರಿಗಳನ್ನು ಹೆಣ್ಣೇ ಹೊರುತ್ತಾಳೆ. ಕೊನೆಯ ಮಗಳು...

  • ಎಲ್ಲದಕ್ಕೂ ಒಂದು ಕೊನೆ ಅಂತ ಇರತದ. ಅದ ಆಗಬೇಕು. ಮೊನ್ನೆ, ನಿಮ್ಮ ಅಪ್ಪಾರ ಕೊಡಸಿದ ಸೈಕಲನ್ನ ಮಾರಲ್ಲದನ ಇಟಕೊಂಡ್ರಿ. ಬೇಕಾದ್ದು, ಬ್ಯಾಡಾದ್ದು ಎಲ್ಲಾ ಇಟಕೊಂಡ...

  • ಬದುಕು ಕೆಲವೊಮ್ಮೆ ಸೈಕಲ್‌ ಹೊಡಿಸುತ್ತೆ, ನೂರಾರು ಕಷ್ಟಗಳನ್ನು ತಲೆಯ ಮೇಲೆ ಸುರಿಯುತ್ತೆ. ಕೆಲವರು ಕಷ್ಟಗಳಿಗೆ ಶರಣಾಗಿ ಬಿಡುತಾರೆ. ಇನ್ನೂ ಕೆಲವರು ಕಷ್ಟಗಳಿಗೇ...

ಹೊಸ ಸೇರ್ಪಡೆ