ಕಾಲು ದಾರೀಲಿ ಬದುಕಿನ ಅಂಬಾರಿ

ಮೆಟ್ಟನ್ನೇ ಮೆಟ್ಟಿಲಾಗಿಸಿಕೊಂಡ ಗಂಗಮ್ಮ

Team Udayavani, Jun 12, 2019, 5:50 AM IST

ದೊಡ್ಡ ದೊಡ್ಡ ಅಂಗಡಿಗಳಲ್ಲಿ, ನೂರಾರು ರೂಪಾಯಿ ಕೊಟ್ಟು, ಚೌಕಾಸಿ ಮಾಡದೆ ಚಪ್ಪಲಿ ಖರೀದಿಸುವ ನಾವು, ಅದೇ ಚಪ್ಪಲಿ ಹರಿದು ಹೋದಾಗ, ಚಮ್ಮಾರರ ಬಳಿ ಐದ್ಹತ್ತು ರೂಪಾಯಿಗೆ ಚೌಕಾಸಿಗೆ ಇಳಿಯುತ್ತೇವೆ. ಆದ್ರೆ, ಹರಿದ ಚಪ್ಪಲಿಯಿಂದಲೇ ಬದುಕು ಹೊಲಿಯುವ ಅವರ ಬಗ್ಗೆ ಒಮ್ಮೆಯಾದ್ರೂ ಯೋಚಿಸಿದ್ದೇವಾ?

ಗಡಿಬಿಡಿಯಲ್ಲಿ ಎಲ್ಲಿಗೋ ಹೊಗೋವಾಗ ಚಪ್ಪಲಿ ಕಿತ್ತು ಹೋದರೆ, ಮೊದಲು ಹುಡುಕೋದು ಚಮ್ಮಾರರನ್ನು. ರಸ್ತೆ ಬದಿಯಲ್ಲೊಂದು ಟೆಂಟ್‌ ಕಟ್ಟಿಕೊಂಡು, ಚಪ್ಪಲಿ ಹೊಲಿಯುವವರಲ್ಲಿ ಗಂಡಸರೇ ಹೆಚ್ಚು. ಚಮ್ಮಾರಿಕೆ ಮಾಡುತ್ತಿರೋ ಕೆಲವೇ ಕೆಲವು ಮಹಿಳೆಯರಲ್ಲಿ, ಐವತ್ತೈದು ವರ್ಷದ ಗಂಗಮ್ಮ ಅವರೂ ಒಬ್ಬರು. ವಿಜಯಪುರದ ಗಾಂಧಿ ಚೌಕದ ಬಳಿಯ ಸರಕಾರಿ ಕಾಲೇಜಿನ ಹತ್ತಿರ ಇವರು ಚಪ್ಪಲಿ ಹೊಲಿಯುತ್ತಿರುತ್ತಾರೆ.

ಬೆಳಗ್ಗೆದ್ದು ಚಮ್ಮಾರಿಕೆಯ ಸಾಮಗ್ರಿಗಳನ್ನು ಹಿಡಿದು ರಸ್ತೆ ಬದಿ ಕೂರುವ ಗಂಗಮ್ಮನನ್ನು, ವಾಹನದ ಧೂಳು, ಕರ್ಕಶ ಶಬ್ದ, ಬಿಸಿಲು, ಮಳೆಗಳ್ಯಾವುವೂ ಬಾಧಿಸುವುದೇ ಇಲ್ಲ. ಯಾಕೆಂದರೆ, ದುಡಿಯಲೇಬೇಕಾದ ಅನಿವಾರ್ಯ. ದಿನವಿಡೀ ಕುಳಿತರೂ 200 ರೂ. ಸಿಕ್ಕಿದರೆ ಅದೇ ಹೆಚ್ಚು ಎನ್ನುವ ಗಂಗಮ್ಮ, 35 ವರ್ಷಗಳಿಂದ ಹೊಟ್ಟೆಪಾಡಿಗೆ ಈ ಕೆಲಸ ಮಾಡುತ್ತಿದ್ದಾರೆ. 36 ವರ್ಷಗಳ ಹಿಂದೆ ನಾಪತ್ತೆಯಾದ ಗಂಡ ಈಕೆಗಾಗಿ ಬಿಟ್ಟು ಹೋಗಿದ್ದು ಚಮ್ಮಾರಿಕೆಯನ್ನು ಮಾತ್ರ.

ಗಂಡ ಎಲ್ಲಿ ಹೋದ ಅಂತ ತಿಳಿಯದ ಗಂಗಮ್ಮನಿಗೆ ಜೀವನ ಸಾಕು ಅನ್ನಿಸಿತ್ತು. ಆದರೆ, ಮಡಿಲಲ್ಲಿ ಮೂವರು ಗಂಡು ಮಕ್ಕಳು, ಇಬ್ಬರು ಹೆಣ್ಣು ಮಕ್ಕಳು ಇದ್ದರಲ್ಲ; ಅವರ ಮುಖ ನೋಡಿ, ಬದುಕು ನಡೆಸಲು ನಿರ್ಧರಿಸಿದ ಆಕೆ, ಗಂಡನ ಕುಲಕಸುಬಾದ ಚಮ್ಮಾರಿಕೆಯಲ್ಲಿ ತೊಡಗಿದರು. ಮುಂದೆ ಅದೇ ವೃತ್ತಿಯಿಂದ ಸಂಸಾರ ತೂಗಿಸುತ್ತಾ, ಹೆಣ್ಣುಮಕ್ಕಳ ಮದುವೆಯನ್ನೂ ಮಾಡಿ ದಿಟ್ಟೆ ಈಕೆ. ಈಗ ಗಂಡು ಮಕ್ಕಳೂ ಚಮ್ಮಾರಿಕೆಯಲ್ಲಿ ತೊಡಗಿಕೊಂಡು, ತಾಯಿಗೆ ನೆರವಾಗುತ್ತಿದ್ದಾರೆ.

ಸರ್ಕಾರಕ್ಕೆ ಬಾಡಿಗೆ
ಪ್ರತಿದಿನ ತಾವು ಕುಳಿತುಕೊಳ್ಳುವ ಸ್ಥಳದ ಬಾಡಿಗೆಯನ್ನು ಸರ್ಕಾರಕ್ಕೆ ಕೊಡಬೇಕು. ವ್ಯಾಪಾರವಾಗಲಿ, ಬಿಡಲಿ, ಸರ್ಕಾರ ಅದನ್ನು ಕೇಳುವುದಿಲ್ಲ. ಒಂದು ಚಪ್ಪಲಿ ಹೊಲಿದಿದ್ದಕ್ಕೆ 10-15 ರೂ. ಆಗುತ್ತೆ. ಆದ್ರೆ, ಕೆಲವರು ಅದರಲ್ಲೂ ಚೌಕಾಸಿಗಿಳಿದು 5 ರೂಪಾಯನ್ನಷ್ಟೇ ಕೊಟ್ಟು ಹೋಗ್ತಾರಂತೆ. ದಿನಕ್ಕೆ 10-12 ಮಂದಿ ಬಂದರೆ ಅದೇ ಹೆಚ್ಚು. ಉಳಿದ ಸಮಯದಲ್ಲಿ ಚರ್ಮ ತಂದು, ಎರಿ ಮಣ್ಣು ಹಚ್ಚಿ, ಸುತ್ತಲು ಮೊಳೆ ಬಡಿದು, ದಿನಕ್ಕೆ ಒಂದು ಜೋಡಿ ಚಪ್ಪಲಿ ತಯಾರಿಸ್ತಾರೆ. ಆ ಚಪ್ಪಲಿಗಳನ್ನು ರೈತರು, ಕುರಿಗಾಹಿಗಳು ಖರೀದಿಸ್ತಾರಂತೆ. ಕೆಲವೊಮ್ಮೆ ಚರ್ಮದ ಚಪ್ಪಲಿಗಳನ್ನು ಅಂಗಡಿಗೂ ಮಾರುತ್ತಾರೆ. ಗಂಗಮ್ಮ ಓದಿದ್ದು ಮೂರನೇ ಕ್ಲಾಸ್‌ವರೆಗೆ ಮಾತ್ರ. ಓದುವ ಆಸೆಯಿದ್ದರೂ, ಬಡತನ ಎಂಬ ಶತ್ರು ಓದಲು ಬಿಡಲಿಲ್ಲ ಎಂದು ವಿಷಾದಿಸುತ್ತಾರವರು.

“ಸುತ್ತಮುತ್ತ ಗಂಡಸರೇ ಚಪ್ಪಲಿ ಹೊಲಿಯೋದು. ಅವರ ಮಧ್ಯೆ ನಾನೊಬ್ಬಳೇ ಮಹಿಳೆ. ನನಗೆ ಚಪ್ಪಲಿ ಹೊಲಿಯೋದರ ಬಗ್ಗೆ ಯಾವುದೇ ನಾಚಿಕೆಯಿಲ್ಲ. ನಾಚಿಕೆ ಅಂತ ಸುಮ್ಮನಿದ್ದಿದ್ದರೆ ಇಷ್ಟೊತ್ತಿಗೆ ನಾನೂ, ನನ್ನ ಮಕ್ಕಳೂ ಕೆರೆ, ಬಾವಿ ನೋಡಿಕೊಳ್ಳಬೇಕಾಗುತ್ತಿತ್ತು. ಕಷ್ಟ ಎಲ್ರಿಗೂ ಬರುತ್ತೆ, ಛಲದಿಂದ ದುಡೀಬೇಕು ಅಷ್ಟೆ’
-ಗಂಗಮ್ಮ ಮಾನೆ

-ವಿದ್ಯಾಶ್ರೀ ಗಾಣಿಗೇರ


ಈ ವಿಭಾಗದಿಂದ ಇನ್ನಷ್ಟು

  • ನಯನಾಗೆ 27 ವರ್ಷಕ್ಕೆ ಮದುವೆಯಾಯ್ತು. ಎಂಜಿನಿಯರಿಂಗ್‌ ಮುಗಿಸಿ ಮೂರು ವರ್ಷ ಸಣ್ಣ ಕಂಪನಿಯಲ್ಲಿ, ಕಡಿಮೆ ಸಂಬಳಕ್ಕೆ ದುಡಿದಿದ್ದ ಆಕೆಗೆ ಆಗಷ್ಟೇ ಹೆಸರಾಂತ ಎಂಎನ್‌ಸಿಯಲ್ಲಿ...

  • ಇಷ್ಟು ಸಣ್ಣ ವಯಸ್ಸಿನಲ್ಲೇ ಮೊಬೈಲ್‌ನಲ್ಲಿ ಆ್ಯಪ್‌ಗ್ಳನ್ನು ಡೌನ್‌ಲೋಡ್‌ ಮಾಡುತ್ತಾನೆ, ಅವನಿಗೆ ಗೊತ್ತಿಲ್ಲದ ಗೇಮೇ ಇಲ್ಲ, ಯುಟ್ಯೂಬ್‌ನಲ್ಲಿ ತನಗೆ ಬೇಕಾದ್ದನ್ನು...

  • ಮನೆಯಲ್ಲಿ ಹೆಣ್ಣುಮಗು ಹುಟ್ಟಿದರೆ ಅವರಿಗೆ ಸಂಭ್ರಮ. ಗಂಡು ಮಗುವಿಗೆ ಆದ್ಯತೆ ಕಡಿಮೆ. ಮನೆಯ ಹೆಚ್ಚಿನ ಜವಾಬ್ದಾರಿಗಳನ್ನು ಹೆಣ್ಣೇ ಹೊರುತ್ತಾಳೆ. ಕೊನೆಯ ಮಗಳು...

  • ಎಲ್ಲದಕ್ಕೂ ಒಂದು ಕೊನೆ ಅಂತ ಇರತದ. ಅದ ಆಗಬೇಕು. ಮೊನ್ನೆ, ನಿಮ್ಮ ಅಪ್ಪಾರ ಕೊಡಸಿದ ಸೈಕಲನ್ನ ಮಾರಲ್ಲದನ ಇಟಕೊಂಡ್ರಿ. ಬೇಕಾದ್ದು, ಬ್ಯಾಡಾದ್ದು ಎಲ್ಲಾ ಇಟಕೊಂಡ...

  • ಬದುಕು ಕೆಲವೊಮ್ಮೆ ಸೈಕಲ್‌ ಹೊಡಿಸುತ್ತೆ, ನೂರಾರು ಕಷ್ಟಗಳನ್ನು ತಲೆಯ ಮೇಲೆ ಸುರಿಯುತ್ತೆ. ಕೆಲವರು ಕಷ್ಟಗಳಿಗೆ ಶರಣಾಗಿ ಬಿಡುತಾರೆ. ಇನ್ನೂ ಕೆಲವರು ಕಷ್ಟಗಳಿಗೇ...

ಹೊಸ ಸೇರ್ಪಡೆ