ಅರ್ಧ ದಾರಿ, ಒಂಟಿ ನಾರಿ

Team Udayavani, Jan 31, 2019, 12:30 AM IST

ಹೆಣ್ಣು ಮಕ್ಕಳು ಭಯದಿಂದಲೋ, ಕೀಳರಿಮೆಯಿಂದಲೋ ಗಂಡಸರ ಮೇಲೆ ಬಹಳವೇ ಅವಲಂಬಿತರಾಗುತ್ತಾರೆ. ಮದುವೆಗೆ ಮುಂಚೆ ಅಪ್ಪ, ಅಣ್ಣ, ತಮ್ಮನ ಮೇಲೆ, ನಂತರ ಗಂಡ, ಮಗನ ಮೇಲೆ ಅವಲಂಬಿತರಾಗಿ, ಅವರಿಲ್ಲದೆ ನಮ್ಮ ಯಾವ ಕೆಲಸವೂ ನಡೆಯುವುದಿಲ್ಲ ಎಂದು ಭಾವಿಸಿರುತ್ತಾರೆ. ಜೀವಿತವಿಡೀ ಹೀಗೆ ಗಂಡಸರನ್ನು ಅವಲಂಬಿಸುವ ಮನೋಭಾವದಿಂದ ಮಹಿಳೆ ಹೊರಬರುವುದು ಹೇಗೆ?

ಆಕೆ ಯಾರಿಗೋ ಫೋನ್‌ ಮಾಡಿ ಅಳುತ್ತಿದ್ದಳು. “ಬರ್ತೀನಿ ಅಂತ ಹೇಳಿ ಆಗಲೇ ಎರಡು ಗಂಟೆ ಆಯ್ತು. ಈಗಾಗಲೇ ಮೂರು ಬಸ್‌ ಬಿಟ್ಟೆ. ಆದ್ರೆ ಇವನು ಬರ್ತಾನೇ ಇಲ್ಲ. ಬರಲಿಲ್ಲ ಅಂದ್ರೆ ಬಿಡಲಿ, ನಾನೊಬ್ಬಳೇ ಹೋಗಿ ಬರುತ್ತೇನೆ’ ಎಂದು ಜೋರಾಗಿ ಬಸ್‌ನಲ್ಲಿದ್ದವರಿಗೆಲ್ಲ ಕೇಳುವಂತೆ ಮಾತಾಡುತ್ತಿದ್ದಳು. ಆಕೆಯ ಪಕ್ಕದಲ್ಲಿ ಕುಳಿತಿದ್ದ ನನಗೆ ಏನೂ ಅರ್ಥವಾಗಲಿಲ್ಲ. ಮೇಲಾಗಿ, ಅಪರಿಚಿತರ ವಿಷಯಕ್ಕೆ ತಲೆ ಹಾಕುವುದು ಸರಿಯಲ್ಲ ಅನ್ನಿಸಿತು. ಆಕೆ, ಅತ್ತು ಅತ್ತು ಸ್ವಲ್ಪ ಹೊತ್ತಿಗೆಲ್ಲಾ ಸರಿ ಹೋದಂತೆ ಕಂಡಳು. 

ನಾನು ಇಳಿಯಬೇಕಿದ್ದ ಸ್ಥಳ ಬರಲು ಇನ್ನೂ ಅರ್ಧ ಗಂಟೆ ಇದೆ ಅನ್ನುವಾಗ, ಅವಳೇ ನನ್ನನ್ನು ನೋಡಿ ಮುಗುಳ್ನಕ್ಕಳು. ನಾನೂ ಮರುನಕ್ಕು, ತಡೆಯಲಾರದೆ, “ಯಾಕೆ? ಯಾರಾದರೂ ನಿಮ್ಮ ಜೊತೆ ಬರಬೇಕಿತ್ತಾ?’ ಎಂದು ಕೇಳಿಯೇಬಿಟ್ಟೆ. ಯಾಕಂದ್ರೆ, ನಾನು ಬಸ್‌ನಲ್ಲಿ ಮೂರು ಸೀಟ್‌ಗಳಿದ್ದ ಸೀಟಿನಲ್ಲಿ ಅವಳ ಪಕ್ಕ ಕೂರಲು ಹೋದಾಗ, ಆಕೆ ಇನ್ನೊಬ್ಬರು ಬರುವವರಿ¨ªಾರೆ ಎಂದು ಹೇಳಿ ನಡುವಿನ ಸೀಟನ್ನು ಖಾಲಿ ಬಿಟ್ಟುಕೊಂಡಿದ್ದಳು. ನನ್ನ ಪ್ರಶ್ನೆಗೆ ಆಕೆ, “ಹೌದು, ನನ್ನ ಗಂಡ ಬರುವವರಿದ್ದರು, ಬರಲಿಲ್ಲ’ ಎಂದಳು. “ಹೌದಾ’ ಎಂದು ಸುಮ್ಮನಾದೆ. ಪ್ರಯಾಣ ತುಸು ಮುಂದುವರಿದಾಗ, “ಇದು ಯಾವ ಬಿಲ್ಡಿಂಗ್‌?’ ಎಂದು ಕಿಟಕಿಯಾಚೆ ಕೈ ತೋರಿದಳು. “ಇದು ಬೆಳಗಾವಿಯ ಸುವರ್ಣಸೌಧ. ಮೊನ್ನೆ ಇಲ್ಲಿಯೇ ಅಧಿವೇಶನ ನಡೆಯಿತಲ್ಲ. ಈ ಮೊದಲು ನೋಡಿಲ್ವಾ?’ ಎಂದಾಗ, “ಇಲ್ಲ, ಇದೇ ಮೊದಲ ಸಲ ಬೆಳಗಾವಿಗೆ ಬರ್ತಾ ಇರೋದು’ ಅಂದಳು ಸಣ್ಣಗೆ.

ಆಕೆಯೇ ಮಾತು ಮುಂದುವರಿಸಿ, “ಮೇಡಂ, ಇವತ್ತು ಬೆಳಗಾವಿಯಲ್ಲಿ ನನಗೆ ಬ್ಯಾಂಕ್‌ ಎಕ್ಸಾಂ ಇದೆ. ನನಗೆ ಊರು ಗೊತ್ತಿಲ್ಲ. ಎಕ್ಸಾಂ ಸೆಂಟರ್‌ ಎಲ್ಲಿದೆ ಅಂತಲೂ ಗೊತ್ತಿಲ್ಲ. ಇವರಿಗೆ ಬನ್ನಿ ಅಂತ ಹೇಳಿದ್ದೆ. ಹೂಂ ಅಂದವರು, ಕೊನೆಗೆ ಬರಲೇ ಇಲ್ಲ’ ಎಂದು ತನ್ನ ಗೋಳನ್ನು ತೋಡಿಕೊಂಡಳು. ಆಗ ನನಗೆ, ಆಕೆ ಯಾಕೆ ಅಳುತ್ತಿದ್ದಳು, ಯಾರ ಜೊತೆ ಮಾತಾಡುತ್ತಿದ್ದಳು ಎಂಬುದು ಗೊತ್ತಾಯಿತು. ಬಸ್‌ ಬಿಡುವುದಕ್ಕಿಂತ ಮೊದಲು ಗಂಡನಿಗೆ ಹಲವು ಸಲ ಫೋನ್‌ ಮಾಡಿದರೂ, ಆತನಿಗೆ ಈಕೆ ಹತ್ತಿದ ಬಸ್‌ ಹತ್ತಲು ಆಗಲಿಲ್ಲ. ಆಕೆ ಅದನ್ನೇ ಫೋನ್‌ನಲ್ಲಿ ಅಮ್ಮನಿಗೆ ಹೇಳುತ್ತಿದ್ದಳು. ಗಂಡನಿಗೆ ಅರ್ಜೆಂಟಾಗಿ ಹೊಲದಲ್ಲಿ ಕೆಲಸ ಬಂದ ಕಾರಣ, ಈಕೆಯೊಂದಿಗೆ ಪರೀûಾ ಕೇಂದ್ರಕ್ಕೆ ಬರಲಾಗಲಿಲ್ಲ. ಇದೇ ಕಾರಣಕ್ಕೆ ಆಕೆ ಬಸ್‌ನಲ್ಲಿ ಎಲ್ಲರಿಗೂ ಕೇಳುವಂತೆ ಅತ್ತಿದ್ದಳು. 

“ಅಲ್ಲ, ಊರು ಗೊತ್ತಿಲ್ಲ ಅಂದ್ರೇನು? ಗೊತ್ತು ಮಾಡಿಕೊಳ್ಳಬೇಕಪ್ಪ. ಪರೀಕ್ಷೆ ಸೆಂಟರ್‌ ಗೊತ್ತಿಲ್ಲ ಅಂದ್ರೆ, ಯಾರಿಗಾದ್ರೂ ಕೇಳಿದ್ರೆ ಹೇಳೇ ಹೇಳ್ತಾರೆ. ಯಾಕೆ ಹೆದರಿಕೊಳ್ಳುವುದು? ಮಹಿಳೆಯರು ಒಂಟಿಯಾಗಿ ಜಗತ್ತನ್ನು ಸುತ್ತುತ್ತಿ¨ªಾರೆ. ನೀನು ಬೆಳಗಾವಿಗೆ ಹೋಗೋಕೆ ಹೆದರಿಕೆ ಅಂದರೆ ಹೇಗೆ?’ ಅಂತೆಲ್ಲಾ ಸಮಾಧಾನಿಸಿ, ಬಸ್‌ ಸ್ಟಾಂಡ್‌ ತಲುಪಿದ ನಂತರ, ಆಕೆಯ ಪರೀಕ್ಷೆ ನಡೆಯುವ ಕಾಲೇಜಿಗೆ ಹೋಗುವ ಬಸ್ಸನ್ನು ತೋರಿಸಿ, ಧೈರ್ಯ ತುಂಬಿ ಕಳುಹಿಸಿದೆ. 

ಈ ರೀತಿಯ ಸಂದರ್ಭಗಳು ಪ್ರತಿ ಹೆಣ್ಣಿಗೂ ಎದುರಾಗುತ್ತವೆ. ಹೆಣ್ಣು ಮಕ್ಕಳು ಭಯದಿಂದಲೋ, ಕೀಳರಿಮೆಯಿಂದಲೋ ಗಂಡಸರ ಮೇಲೆ ಬಹಳವೇ ಅವಲಂಬಿತರಾಗುತ್ತಾರೆ. ಮದುವೆಗೆ ಮುಂಚೆ ಅಪ್ಪ, ಅಣ್ಣ, ತಮ್ಮನ ಮೇಲೆ, ನಂತರ ಗಂಡ, ಮಗನ ಮೇಲೆ ಅವಲಂಬಿತರಾಗಿ, ಅವರಿಲ್ಲದೆ ನಮ್ಮ ಯಾವ ಕೆಲಸವೂ ನಡೆಯುವುದಿಲ್ಲ ಎಂದು ಭಾವಿಸಿರುತ್ತಾರೆ. ಜೀವಮಾನವಿಡೀ ಹೀಗೆ ಗಂಡಸರನ್ನು ಅವಲಂಬಿಸುವ ಮನೋಭಾವದಿಂದ ಮಹಿಳೆ ಹೊರ ಬರಬೇಕು. ಹಾಗಾದರೆ, ಮಹಿಳೆಗೆ ಗಂಡಸರ ಅವಶ್ಯಕತೆಯೇ ಇಲ್ಲವೇ ಎಂದು ಕೇಳಬೇಡಿ. ಇಲ್ಲಿ ಹೇಳುತ್ತಿರುವುದು ಅತಿಯಾದ ಅವಲಂಬನೆಯ ಬಗ್ಗೆ. ಅನಿವಾರ್ಯ ಪ್ರಸಂಗಗಳು ಬಂದಾಗ ಸ್ವತಂತ್ರವಾಗಿ ನಿಭಾಯಿಸುತ್ತೇನೆ ಎಂಬ ಧೈರ್ಯ ಹೆಣ್ಣಿನಲ್ಲಿರಬೇಕು. 

ಮೇಲೆ ಹೇಳಿದ ಯುವತಿಯ ಉದಾಹರಣೆಯನ್ನೇ ತೆಗೆದುಕೊಂಡರೆ, ಆಕೆಯ ಗಂಡನೇನೂ ಬೇಕಂತಲೇ ಆಕೆಯ ಜೊತೆ ಬರಲಿಲ್ಲವಂತಲ್ಲ. ಆತನಿಗೆ ಅನಿವಾರ್ಯ ಕೆಲಸ ಬಂದು, ಬಿಟ್ಟು ಬರದಾದಾಗ ಈಕೆ ಒಬ್ಬಳೇ ಪ್ರಯಾಣಿಸುವ ಸಂದರ್ಭ ಒದಗಿ ಬಂತು. ಇಲ್ಲಿ ಗಂಡನದ್ದು ತಪ್ಪು ಎನ್ನುವಂತಿಲ್ಲ. ವರ್ಷದ ದುಡಿಮೆಯ ಕುರಿತು ಯೋಚಿಸಿದರೆ, ಆತ ತನ್ನ ಕೆಲಸಕ್ಕೆ ಆದ್ಯತೆ ನೀಡಿರುವುದು ಸರಿಯೇ. ಹಾಗಂತ, ಆತನಿಗೆ ಹೆಂಡತಿಯ ಬಗ್ಗೆ, ಆಕೆಯ ವಿದ್ಯಾಭ್ಯಾಸದ, ಕೆಲಸದ ಬಗ್ಗೆ ತಾತ್ಸಾರ ಅನ್ನುವಂತಿಲ್ಲ.

ಇದು ಒಬ್ಬ ಕೃಷಿಕನ ಕಥೆಯಾದರೆ, ಇತರ ವೃತ್ತಿಗಳಲ್ಲಿ ಇರುವ ಪುರುಷರೂ ಅವರದ್ದೇ ಆದ ವೃತ್ತಿಯ ಪರಿಧಿಯಲ್ಲಿ ಸಿಲುಕಿರುತ್ತಾರೆ. ಅಚಾನಕ್ಕಾಗಿ ಬರುವ ಮೇಲಧಿಕಾರಿ, ಭಾಗವಹಿಸಲೇಬೇಕಾದ ಮೀಟಿಂಗ್‌, ಮುಗಿಸಲೇಬೇಕಾದ ಕೆಲಸಗಳು… ಹೀಗೆ ಅನಿವಾರ್ಯ ಸಂದರ್ಭಗಳಲ್ಲಿ ಹೆಂಡತಿಯ ಇಷ್ಟಾರ್ಥಗಳನ್ನು ಪೂರೈಸುವಲ್ಲಿ ಅಡಚಣೆಗಳಾಗುತ್ತವೆ. ಉದ್ದೇಶಪೂರ್ವಕವಾಗಿ ಹೆಂಡತಿಯನ್ನು ತಿರಸ್ಕರಿಸುವ ಅಥವಾ ಆಕೆಯ ಬೇಡಿಕೆಗಳಿಗೆ ಕವಡೆ ಕಿಮ್ಮತ್ತೂ ಕೊಡದ ಗಂಡಸರೂ ಇರಬಹುದು. ಆದರೆ, ಎಲ್ಲರೂ ಹಾಗಿರುವುದಿಲ್ಲ. ಇಂಥ ಸಂದರ್ಭಗಳನ್ನು ಒಂಟಿಯಾಗಿ ನಿಭಾಯಿಸುವಷ್ಟು ಸ್ವಾವಲಂಬನೆಯನ್ನು ಮಹಿಳೆ ಬೆಳೆಸಿಕೊಳ್ಳಬೇಕು.

24 ಗಂಟೆಗಳನ್ನೂ ಹೆಂಡತಿಗೆಂದೇ ಮೀಸಲಿಡಲು ಸಾಧ್ಯವಿಲ್ಲ. ಇದನ್ನು ಹೆಂಡತಿಗೆ ಮನದಟ್ಟು ಮಾಡಿಸಿ, ಆಕೆ ಸ್ವಾವಲಂಬಿಯಾಗುವಂತೆ ಪ್ರೇರೇಪಿಸುವ ಕೆಲಸ ಗಂಡನದ್ದು. ಮಹಿಳೆಯರೂ ಅಷ್ಟೇ, “ತವರಿನಲ್ಲಿ ಅಪ್ಪ, ಅಣ್ಣ ನನ್ನನ್ನು ಎಷ್ಟು ಚೆನ್ನಾಗಿ ನೋಡಿಕೊಳ್ಳುತ್ತಿದ್ದರು. ಆದ್ರೆ, ಗಂಡನಿಗೆ ನನ್ನ ಬಗ್ಗೆ ಕಾಳಜಿಯೇ ಇಲ್ಲ’ ಎಂದು ದೂರುವ ಬದಲು, ನನ್ನ ಕೆಲಸವನ್ನು ನಾನೇ ಮಾಡಿಕೊಳ್ಳುತ್ತೇನೆ ಎಂಬ ಆತ್ಮವಿಶ್ವಾಸ ಮೈಗೂಡಿಸಿಕೊಳ್ಳಬೇಕು. ಜೀವನಪೂರ್ತಿ ಅಪ್ಪ, ಅಣ್ಣ, ತಮ್ಮ, ಗಂಡ, ಮಗನ ನೆರಳಿನಲ್ಲೇ ಇರುತ್ತೇನೆ ಎಂದರೆ ಆಗುವುದಿಲ್ಲ, ಅಲ್ಲವೇ?

ಇವತ್ತೇ ಚಾಲೆಂಜ್‌ ತಗೊಳ್ಳಿ…
1. “ನನಗೆ ಗೊತ್ತಾಗೋದಿಲ್ಲ, ನೀವೇ ಮಾಡಿ’ ಎಂದು ಎಲ್ಲವನ್ನೂ ಗಂಡನಿಗೇ ವಹಿಸಬೇಡಿ.
2. ಬ್ಯಾಂಕ್‌, ಆಸ್ಪತ್ರೆ, ದಿನಸಿ ಖರೀದಿ, ಮಕ್ಕಳ ಶಾಲೆಯ ಮೀಟಿಂಗ್‌… ಹೀಗೆ ಅಗತ್ಯದ ಕೆಲಸಗಳನ್ನು ಒಬ್ಬರೇ ನಿಭಾಯಿಸಲು ಕಲಿತುಕೊಳ್ಳಿ.
3. ಸಿಟಿಯಲ್ಲಿ ಒಬ್ಬರೇ ಓಡಾಡಿ ಅಭ್ಯಾಸ ಇಲ್ಲದಿದ್ದರೆ, ಗಂಡನೊಂದಿಗೆ ಅಥವಾ ಗೆಳತಿಯರೊಂದಿಗೆ ಓಡಾಡಿ ಸ್ಥಳಗಳ ಪರಿಚಯ ಮಾಡಿಕೊಳ್ಳಿ. ಕ್ರಮೇಣ ಎಲ್ಲವೂ ಅಭ್ಯಾಸವಾಗುತ್ತದೆ.
4. ಬಸ್ಸು, ರೈಲು ಟಿಕೆಟ್‌ ಬುಕಿಂಗ್‌, ಬ್ಯಾಂಕ್‌ ವ್ಯವಹಾರ, ಎಟಿಎಂ ಬಳಕೆ… ಇತ್ಯಾದಿ ವಿಷಯಗಳನ್ನು ಕಲಿತುಕೊಳ್ಳುವುದು ಉತ್ತಮ
5. ವಿದ್ಯಾಭ್ಯಾಸ ಏನೇ ಇದ್ದರೂ, ಜನರೊಂದಿಗೆ ವ್ಯವಹರಿಸಿದಾಗ ಮಾತ್ರ ಪ್ರಪಂಚ ಜ್ಞಾನ ಅರಿವಾಗಲು ಸಾಧ್ಯ. 

ಮಾಲಾ ಮ. ಅಕ್ಕಿಶೆಟ್ಟಿ, ಬೆಳಗಾವಿ 

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

  • ದೇವರೇ, ಬೇವು ಸ್ವಲ್ಪವೇ ಕೊಡು. ಮಡಿಲ ತುಂಬಾ ಬೆಲ್ಲ ನೀಡು. ನಿನ್ನ ಮಡಿಲಲ್ಲಿ ಬೆಳೆ ಬೆಳೆದು ಸಾವಿರಾರು ಜನರಿಗೆ ಅನ್ನ ನೀಡುವ, ನಿನ್ನನ್ನೇ ನಂಬಿದ ಜನರ ಕೈಬಿಡದಿರು....

  • ಗಾಢ ಬಣ್ಣಗಳನ್ನು ಇಷ್ಟಪಡುವವರಿಗೆ ಕೆಂಪು ಬಣ್ಣದ ಮೇಲೆ ಖಂಡಿತಾ ಒಲವಿರುತ್ತದೆ. ಕೆಂಪು ಅಶುಭದ ಸಂಕೇತ ಅಂತ ಕೆಲವರು ನಂಬುತ್ತಾರಾದರೂ, ಫ್ಯಾಷನ್‌ ಪ್ರಪಂಚಕ್ಕೆ...

  • "ವಯಸ್ಸನ್ನ ನೋಡಿಕೊಂತಾ ಕೂತರೆ ಹೊಟ್ಟೆಪಾಡು ನಡೀಬೇಕಲ್ಲ? ಹೊಟ್ಟೆಗೆ ಒಂದೊತ್ತಿನ ಊಟ ಹಾಕೋರಿಲ್ಲ ಈಗ. ಇದ್ದ ಆಯಸ್ಸನ್ನೆಲ್ಲ ಮಕ್ಕಳ ಬೆಳವಣಿಗೆಗೆ ಮುಡಿಪಾಗಿಟ್ಟಾಯ್ತು....

  • ನಂಬಿದ ಮೌಲ್ಯಗಳಿಗೆ ಧಕ್ಕೆ ಉಂಟಾದಾಗ, ಶರೀರ ಕುಸಿಯುತ್ತದೆ. ಮೈಕೈ ನೋವುತ್ತದೆ. ಮನಸ್ಸಿನ ಪ್ರತಿಯೊಂದು ಆಲೋಚನೆಗಳಿಗೆ ಮತ್ತು ಭಾವನೆಗಳಿಗೆ ಅಂಗಾಂಗಗಳು ಪ್ರತಿಕ್ರಿಯಿಸುತ್ತವೆ. 48ರ...

  • ಬ್ಯೂಟಿ ಪಾರ್ಲರ್‌ಗೆ ಹೋಗಿ ಫೇಶಿಯಲ್‌ ಮಾಡಿಸಿಕೊಳ್ಳೋದು ಮಹಾ ಬೋರು ಅಂತ ಅನ್ನಿಸಿದೆಯಾ? ನನಗಂತೂ ಹಾಗೇ ಅನ್ನಿಸ್ತಿತ್ತು. ಅದಕ್ಕೇ ಪಾರ್ಲರ್‌ಗೆ ಹೋಗೋದನ್ನೇ...

ಹೊಸ ಸೇರ್ಪಡೆ