ಹೇನು ಸಮಾಚಾರ!

ಹೇನು, ಪರಿಹಾರ ಏನು?

Team Udayavani, Jun 19, 2019, 5:00 AM IST

“ಅಮ್ಮಾ, ತಲೆಯೊಳಗೆ ಏನೋ ಹರಿದಾಡಿದಂಗೆ ಆಗ್ತಾ ಇದೆ…’ ಅಂತ ಮಗಳೇನಾದ್ರೂ ರಾಗ ಎಳೆದ್ರೆ ಅದನ್ನ ಕಡೆಗಣಿಸದೆ, ತಕ್ಷಣ ಕಾರ್ಯೋನ್ಮುಖರಾಗಿ. ಇಲ್ಲದಿದ್ದರೆ ಮಗಳ ತಲೆ ತುರಿಕೆ, ಮನೆಮಂದಿಯ ತಲೆಗೆಲ್ಲ ದಾಟಿ, ನಿಮ್ಮ ತಲೆಬೇನೆಗೆ ಕಾರಣವಾಗಬಹುದು…

ಆಕೆ ಮುದ್ದಾದ ಹುಡುಗಿ ಪ್ರೀತಿ. ನೀಳವಾದ ದಪ್ಪಗಿನ ಕೂದಲೇ ಆಕೆಯ ಆಕರ್ಷಣೆ. ಒಂದು ದಿನ ಶಾಲೆಯಿಂದ ಬಂದವಳೇ, “ಅಮ್ಮಾ, ತಲೆಯಲ್ಲಿ ಏನೋ ಇದೆ. ಆಚೆ ಈಚೆ ಓಡಿದ ಹಾಗೆ ಆಗ್ತಾ ಇದೆ. ವಿಪರೀತ ಕಡಿತ, ತುರಿಕೆ. ನೋಡಮ್ಮಾ ಒಮ್ಮೆ…’ ಎನ್ನುತ್ತಾ ಅಳಲು ಪ್ರಾರಂಭಿಸಿದಳು. ಒಂದು ಕ್ಷಣ ದಿಗಿಲಾದರೂ, ಸಾವರಿಸಿಕೊಂಡು, “ಮಗಳೇ, ಗಡಿಬಿಡಿ ಯಾಕೆ ಮಾಡ್ಕೊತೀಯ? ಇದು ಆ ತಲೆಯಾಸುರನದೇ ಕಾರುಬಾರು. ನೀನೇನೂ ನಾಚಿಕೆಪಟ್ಕೊàಬೇಡ. ಸಣ್ಣವಳಿದ್ದಾಗ ನಾನೂ ಈ ಸಮಸ್ಯೆಗೆ ಒಳಗಾದವಳೇ’ ಎಂದು ಮಗಳನ್ನು ಸಮಾಧಾನಿಸಿದಳು ಸುಧಾ.

ನೀಳ, ದಪ್ಪ ಹಾಗೂ ಸುಂದರ ತಲೆಗೂದಲು ಮಗಳಿಗಿರಲಿ ಅನ್ನುವ ಬಯಕೆ ಹೆಚ್ಚಿನ ಅಮ್ಮಂದಿರದು. ಚಿಕ್ಕ ಪ್ರಾಯದಲ್ಲಿ ಮಕ್ಕಳ ತಲೆಗೂದಲ ಕಾಳಜಿ ಹೊರುವವಳೂ ಅವಳೇ ತಾನೆ? ಶಾಲಾ ಜೀವನಕ್ಕೆ ಮಗು ಕಾಲಿಡುತ್ತಿದ್ದಂತೆ ಅಮ್ಮನಾದವಳ ಮುಂದೆ ಉದ್ಭವಿಸುವ ಸಮಸ್ಯೆಗಳಲ್ಲಿ ತಲೆಯಾಸುರನೂಒಬ್ಬ. ತರಗತಿಯಲ್ಲಿ ಓದುವ ಯಾವುದೋ ಒಂದು ಮಗುವಿನ ತಲೆಯಲ್ಲಿ ಈ ತಲೆಯಾಸುರ ಮನೆ ಮಾಡಿದ್ದಾನೆಂದರೆ, ಮತ್ತೆ ಜೊತೆಯಾಗಿ ಆಡುವ ಬಹಳಷ್ಟು ಮಕ್ಕಳಿಗೆ ಅದು ಹರಡುವುದು ಗ್ಯಾರಂಟಿ. ಅಲ್ಲಿಗೇ ಸುಮ್ಮನಿರದ ಈ ತಲೆಯಾಸುರ, ಆ ಮಗುವಿನ ಮನೆಮಂದಿಯ ತಲೆಯೊಳಗೂ ಹೊಕ್ಕು ಕಿರಿಕಿರಿ ಕೊಡಲು ಪ್ರಾರಂಭಿಸುತ್ತಾನೆ…. ಮಗುವಿನ ಅಮ್ಮನೇ ಅವನ ಮೊದಲ ಟಾರ್ಗೆಟ್‌.

ನಾನು ಹೇಳುತ್ತಿರುವ ಈ ತಲೆಯಾಸುರ ಯಾರಂತ ಗೊತ್ತಾಯ್ತಲ್ಲ? ಅದೇರೀ, ಹೇನು. ಕೂದಲ ಸಾಮ್ರಾಜ್ಯದೊಳಗೆ ಒಮ್ಮೆ ಅದರ ಪ್ರವೇಶವಾಯೆ¤ಂದರೆ ಮುಗಿಯಿತು. ಅದರಿಂದ ಮುಕ್ತಿ ಪಡೆಯುವಷ್ಟರಲ್ಲಿ ಪೀಡಿತ ವ್ಯಕ್ತಿ ಹೈರಾಣು… ಹೇನು ಒಂದು ಮೊಟ್ಟೆ ಇಟ್ಟರೂ ಸಾಕು, ಅದರ ಸಂತತಿ ಡಬಲ್‌ ಆಗಲು.

ಏನಿದು ಹೇನು?
ಮನುಷ್ಯರ, ಅದರಲ್ಲೂ ಮಕ್ಕಳ ತಲೆಯಲ್ಲಿ ವಾಸಿಸುವ ಪರಾವಲಂಬಿ ಕೀಟವೇ ಹೇನು. ಇದರ ಮೊಟ್ಟೆಗೆ ಚೀರು, ಸೀರು ಎನ್ನುತ್ತಾರೆ. ದಪ್ಪನೆಯ ತಲೆಗೂದಲೇ ಇದರ ಅಡಗುತಾಣ. ಹಾಗಾಗಿ ಹೆಣ್ಣು ಮಕ್ಕಳೆಂದರೆ ಹೇನುಗಳಿಗೆ ಬಲುಪ್ರೀತಿ. ದಿನಂಪ್ರತಿ ತಲೆಗೆ ಸ್ನಾನ ಮಾಡುವ, ಚಿಕ್ಕಗೂದಲನ್ನು ಹೊಂದಿರುವ ಗಂಡು ಮಕ್ಕಳಿಗೆ ಹೇನಿನ ಸಮಸ್ಯೆ ಹೆಚ್ಚಾಗಿ ಬಾಧಿಸದು. ಮನುಷ್ಯನ ರಕ್ತವೇ ಇದರ ಮುಖ್ಯ ಆಹಾರ. ಆಶ್ಚರ್ಯವೆಂದರೆ, ಒಂದು ಬಾರಿಗೆ ಹೇನು ನೂರಕ್ಕೂ ಹೆಚ್ಚು ಮೊಟ್ಟೆಗಳನ್ನಿಡುತ್ತವಂತೆ. ಅತ್ಯಂತ ಹೆಚ್ಚು ಕಡಿತದ ನೋವು ಉಂಟು ಮಾಡುವಲ್ಲಿ ಮರಿ ಹೇನುಗಳೇ ಮುಂದು.ಪ್ರಾಣಿಗಳ ಶರೀರದಲ್ಲಿರುವ ಹೇನಿನಂತೆ ಇವು ಹಾರುವುದಿಲ್ಲ ಎಂಬುದಷ್ಟೇ ಸಮಾಧಾನದ ವಿಷಯ. ಹೇನುಗಳು ರಾತ್ರಿ ಮಲಗಿದಾಗ ಏಳು ಹಾಸಿಗೆಯನ್ನು ದಾಟಿ ಮುಂದೆ ಸಾಗಬಲ್ಲವು ಎಂಬುದು ಹಿರಿಯರ ನಂಬಿಕೆ. ಅಂದರೆ, ತಲೆಯಲ್ಲಿ ಹೇನು ಇರುವವರ ಪಕ್ಕ ಮಲಗಿದರೆ, ನಾಳೆ ನೀವೂ ತಲೆ ಕೆರೆದುಕೊಳ್ಳಬೇಕಾದೀತು!

ದೂರ ಮಾಡಬೇಡಿ
ಹೇನಿನ ಕಡಿತದಿಂದ ಕಿರಿಕಿರಿ ಅನುಭವಿಸುವವರು ಸಮಸ್ಯೆಯಿಂದ ಹೊರ ಬರಲು ಯೋಚಿಸುತ್ತಿರುತ್ತಾರೆ. ಇದರ ಜೊತೆಗೆ ಮನೆಮಂದಿ ಪದೇ ಪದೆ, ನಿನ್ನ ತಲೆಯಲ್ಲಿ ಹೇನಿದೆ ಎಂದು ಹೇಳುತ್ತಾ ಇದ್ದರೆ ಅವರಿಗೂ ಬೇಜಾರಾಗುತ್ತದೆ. ಹೇನು ಹರಡುವುದೆಂದು ಎಳೆಯ ಮಕ್ಕಳ ಜೊತೆ ಮಲಗುವುದನ್ನು ಅವಾಯ್ಡ ಮಾಡತೊಡಗಿದರೆ, ಅವರ ಮನಸ್ಸು ಕುಗ್ಗುತ್ತದೆ. ಮಕ್ಕಳ ಮನಸ್ಸು ಬಹು ಸೂಕ್ಷ್ಮ. ಹಾಗಾಗಿ, ಅವರ ಎಳೆ ಮನಸ್ಸಿಗೆ ಘಾಸಿಯಾಗದಂತೆ ನೋಡಿಕೊಳ್ಳಬೇಕು. ಮಕ್ಕಳನ್ನು ಬೇರ್ಪಡಿಸುವ ಬದಲು ಅವರು ಬಳಸುವ ಬಾಚಣಿಗೆ, ಟೋಪಿ ಇನ್ನಿತರ ವಸ್ತುಗಳನ್ನು ಮನೆಯ ಇನ್ನಿತರ ಮಕ್ಕಳು ಬಳಸದಂತೆ ಕಾಳಜಿ ವಹಿಸಬಹುದು.

ಹೇನಿಗೆ ಏನು ಮಾಡ್ಬೇಕು?
– ತಲೆಯಲ್ಲಿ ಹೇನಿದೆ ಅಂತ ಅರಿವಾದ ತಕ್ಷಣ ಬಾಚಿ ತೆಗೆಯುವುದೇ ಮೊದಲ ಪರಿಹಾರ. ಹೇನು ಬಾಚಲೆಂದೇ ಚೂಪಾದ, ಅತೀ ಹತ್ತಿರ ಹಲ್ಲು ಹೊಂದಿರುವ ಬಾಚಣಿಗೆಗಳು ಲಭ್ಯ.

– ತಲೆಗೆ ತೆಂಗಿನೆಣ್ಣೆ ಹಚ್ಚಿ ಬಾಚಿದರೆ ಚಿಕ್ಕ ಹೇನುಗಳೂ ಬಾಚಣಿಗೆಯ ಹಲ್ಲುಗಳಿಂದ ತಪ್ಪಿಸಿಕೊಳ್ಳಲಾರವು.

– ತಲೆಗೂದಲನ್ನು ಚೆನ್ನಾಗಿ ಆರೈಕೆ ಮಾಡುವುದರಿಂದ ಹೇನಿನ ಸಮಸ್ಯೆ ಕಾಡದಂತೆ ತಡೆಯಬಹುದು.

– ಎರಡು ದಿನಕ್ಕೊಮ್ಮೆ ತಲೆಗೆ ಸ್ನಾನ ಮಾಡುವುದರಿಂದ ಹೇನಿನ ಕಾಟದಿಂದ ಮುಕ್ತಿ ಪಡೆಯಬಹುದು. ಸ್ನಾನದ ನಂತರ, ತಲೆಗೂದಲು ಚೆನ್ನಾಗಿ ಒಣಗಿದ ನಂತರವೇ, ಹೆಣೆಯಬೇಕು.

– ಹೇನು ಬಾಧಿತ ವ್ಯಕ್ತಿಯ ಬಾಚಣಿಗೆ, ಮಂಕೀ ಕ್ಯಾಪ್‌, ಟೋಪಿಯನ್ನು ಬಳಸದೇ ಹೇನು ಹರಡದಂತೆ ತಡೆಯಿರಿ.

-ಹೇನಿನ ಕಾಟ ಅತಿಯಾಗಿದ್ದರೆ ವೈದ್ಯರನ್ನು ಭೇಟಿಯಾಗಿ, ಸಲಹೆ ಪಡೆಯಿರಿ

– ಬೇವಿನ ಎಣ್ಣೆಯನ್ನು ಹಚ್ಚುವುದರಿಂದ ಹೇನಿನ ಸಮಸ್ಯೆಗೆ ತಕ್ಕಮಟ್ಟಿಗೆ ಪರಿಹಾರ ಸಿಗುತ್ತದೆ.

-ಹೇನುಗಳು ಬ್ಯಾಕ್ಟೀರಿಯಾಗಳನ್ನು ಉತ್ಪತ್ತಿ ಮಾಡಿ, ತಲೆಯ ಆರೋಗ್ಯ ಕೆಡುವಂತೆ ಮಾಡಬಲ್ಲವು. ಹೇನು ಕಚ್ಚಿದ ಜಾಗದಲ್ಲಿ ಅಲರ್ಜಿ ಉಂಟಾಗಿ ಕಜ್ಜಿಯಾಗಬಹುದು. ಹಾಗಾಗಿ ಹೇನಿನ ಸಂತತಿ ಹೆಚ್ಚಾಗುವ ಮೊದಲೇ ಎಚ್ಚರಿಕೆ ವಹಿಸುವುದು ಅಗತ್ಯ.

– ಶಾಲೆಗೆ ಹೋಗುವ ಮಕ್ಕಳು ಬೇರೆಯವರಿಂದ ಹೇನು ಅಂಟಿಸಿಕೊಳ್ಳುವ ಸಾಧ್ಯತೆ ಇರುವುದರಿಂದ, ಆಗಾಗ ಅವರ ತಲೆಯ ಕಡೆ ಹಿರಿಯರು ಗಮನ ಕೊಡಬೇಕು.

– ವಂದನಾ ರವಿ ಕೆ.ವೈ.


ಈ ವಿಭಾಗದಿಂದ ಇನ್ನಷ್ಟು

  • ಪ್ರಕೃತಿ ಮತ್ತು ಭೂಮಿಯ ಹೋಲಿಕೆ ಸಲ್ಲುವುದು ತಾಯಿಗೆ ಮಾತ್ರ. ಆಕೆ ಸಹನಾಮಯಿ. ಮಕ್ಕಳ ಎಲ್ಲ ಕಷ್ಟವನ್ನು ಹೊರಲು ಆಕೆ ಸದಾ ಸಿದ್ಧ. ಈ ಮಾತಿಗೆ ಸಾಕ್ಷಿ ಎನ್ನುವಂಥ ತಾಯಿಯೊಬ್ಬಳು...

  • ಬಸ್ಸಿನಲ್ಲಿ ಪ್ರಯಾಣಿಕರನ್ನು ಹತ್ತಿಸಿಕೊಳ್ಳುವ ತನಕ ಒಂದು ಹಂತ. ನಂತರ ಬಸ್‌ ಲೈಟ್‌ ಆಫ್ ಮಾಡಿಬಿಡುತ್ತಾರಲ್ಲ? ಆಗ ಕೆಲವು ಗಂಡಸರ "ವಾಸನಾ' ವ್ಯಕ್ತಿತ್ವದ ಅನಾವರಣ...

  • ಟ್ರ್ಯಾಕ್‌ ಪ್ಯಾಂಟ್‌ ಅಥವಾ ಶರ್ಟ್‌ಗಳನ್ನು ಈ ಮೊದಲು ಕ್ರೀಡೆ, ಜಾಗಿಂಗ್‌ ಅಥವಾ ಯೋಗಾಸನ ತರಗತಿಗೆ ಹೋಗುವಾಗ ತೊಡುವ ಪದ್ಧತಿ ಇತ್ತು. ಆದರೆ, ಈಗ ಟ್ರ್ಯಾಕ್‌ಸೂಟ್‌ನಲ್ಲಿಯೇ...

  • ರಾತ್ರಿ ಊಟಕ್ಕೆ ಎಲ್ಲರಿಗೂ ಹೊಸದಾಗಿ ಊರಿಂದ ತಂದ ಮಾವಿನ ಮಿಡಿ ಉಪ್ಪಿನಕಾಯಿ, ಕೊಬ್ಬರಿಎಣ್ಣೆ ಹಾಕಿಕೊಂಡು ಅನ್ನಕ್ಕೆ ಕಲೆಸಿ ತಿನ್ನುವ ಹುಕಿ. ಈರುಳ್ಳಿ ಹೆಚ್ಚಿಕೊಡು...

  • ಹೆಣ್ಣು ಮಕ್ಕಳ ಪಾಲಿಗೆ ರಾತ್ರಿ ಪ್ರಯಾಣ ಯಾವತ್ತಿಗೂ ಆತಂಕದ ವಿಷಯವೇ. ಸರಿಯಾದ ಸಮಯಕ್ಕೆ ಬಸ್‌ ಬರದಿದ್ದರೆ, ನಿಲ್ದಾಣದಲ್ಲಿ ಯಾರಾದರೂ ಹಲ್ಲೆ ಮಾಡಿದರೆ, ಬಸ್‌ನಲ್ಲಿ...

ಹೊಸ ಸೇರ್ಪಡೆ