“ಹೋಳಿ’ ಕೂಗಿತೋ…

Team Udayavani, Mar 20, 2019, 12:30 AM IST

ಶ್ಯಾಮಲವರ್ಣ ಕೃಷ್ಣ, ತಾಯಿಯ ಬಳಿ “ನನ್ನ ಗೆಳತಿ ರಾಧೆಯೇಕೆ ಬೆಳ್ಳಗೆ?’ ಎಂದು ಪ್ರಶ್ನಿಸಿದನಂತೆ. ಅದಕ್ಕೆ ತಾಯಿ ಅವಳಿಗೂ ನೀಲಿ ಬಣ್ಣ ಹಚ್ಚು, ನಿನ್ನ ಹಾಗಾಗುತ್ತಾಳೆ ಎಂದಳಂತೆ. ಕೃಷ್ಣ ಹಾಗೇ ಮಾಡಿದ. ಅದಕ್ಕೇ ಮೊದಲು ನೀಲಿ ಬಣ್ಣ ಹಚ್ಚಿ ಹೋಳಿ ಆಡುತ್ತಾರೆ…

ಶಿವರಾತ್ರಿ ಕಳೆದದ್ದೇ ತಡ, ಸೂರ್ಯನ ಆರ್ಭಟ ಜೋರಾಗಿದೆ. ಬೆಳಗ್ಗೆ ಐದಕ್ಕೆಲ್ಲಾ ಕಿಟಕಿಯಲ್ಲಿ ಇಣುಕುವಿಕೆ ಶುರು. ಹಾಗೇ ಎದ್ದು ಬಾಗಿಲು ತೊಳೆದು ಮನೆ ಮುಂದೆ ರಂಗೋಲಿ ಬಿಡಿಸಿದ್ದಾಯ್ತು. ಅದೇಕೋ ಬಣ್ಣ ತುಂಬುವ ಉಮೇದು. ಕಣ್ಣು ಸೂಕ್ತ ಬಣ್ಣ ಹುಡುಕಿದರೆ ಮನಸ್ಸು ಭಾವದೆಳೆ ಮೀಟುತ್ತಿದೆ! ಬಣ್ಣ, ಬರೀ ಕಣ್ಣಿನ ಭ್ರಮೆಯೇ? ಅಲ್ಲ; ಅದು ಬುದ್ಧಿ- ಭಾವ- ಆತ್ಮವನ್ನು ಆವರಿಸುವ ಮಾಯೆ!

ಎಲೆಗೆ ಹಸಿರು ತುಂಬುವಾಗ ಅಜ್ಜನ ಮನೆಯ ಅಡಕೆ ತೋಟ ಥಟಕ್ಕನೇ ಕಣ್ಮುಂದೆ- ಯಾವುದೇ ಜವಾಬ್ದಾರಿಯಿಲ್ಲದೇ ನಿಶ್ಚಿಂತೆಯಿಂದ ಮನಸೋಇಚ್ಛೆ  ಕುಣಿದಾಡಿದ ದಿನಗಳು. ಬೇಸಿಗೆಯ ಬಿರುಬಿಸಿಲೂ ಹಸಿರಾಗೇ ಕಾಣುತ್ತಿದ್ದದ್ದು ಬಹುಶಃ ಪ್ರೀತಿಯ ನೆರಳಿನಿಂದ. ಕಾಲಪ್ರವಾಹದಲ್ಲಿ ಅವರೆಲ್ಲಾ ಕಣ್ಮರೆಯಾದರೂ ಎಲ್ಲೇ ಮರ-ಗಿಡ ನೋಡಿದರೂ ಹಸಿರನ್ನೇ ಉಸಿರಾಗಿಸಿಕೊಂಡಿದ್ದ ಆ ಹಿರಿಯರ ನೆನೆದು ಎದೆಯೊಳಗೊಂದು ಅಮೃತವಾಹಿನಿ. ನಮ್ಮೆಲ್ಲಾ ತಪ್ಪುಗಳನ್ನು ಕ್ಷಮಿಸುವ ಭೂಮಿತಾಯಿಯ ಒಡಲೂ ಹಸಿರೇ. ಸಮಾಧಾನ- ಸಮೃದ್ಧಿ ಸೂಚಿಸುವ ಬಣ್ಣವೆಂದೇ ಹಸಿರಿಗೆ ಪ್ರಾಶಸ್ತÂ ಎಷ್ಟೇ ವರ್ಷವಾದರೂ ಮದುವೆಯಲ್ಲಿ ಉಟ್ಟ ಹಸಿರು ಸೀರೆಯ ಹೊಳಪು, ಸೀಮಂತದಲ್ಲಿ ತೊಟ್ಟ ಹಸಿರು ಗಾಜಿನ ಬಳೆಯ ಕಿಣಿಕಿಣಿ ನೆನೆದಾಗಲೆಲ್ಲಾ ಖುಷಿಯ ತುಂತುರು. ಮನಸ್ಸನ್ನು ತಂಪುಗೊಳಿಸುವ ಅದ್ಭುತ ಶಕ್ತಿ ಹಸಿರಿನದ್ದು!

ಬಿಳಿ ರೇಖೆಯ ಹೂಗಳಿಗೆ ತುಂಬಲು ಕೆಂಪು ಬಣ್ಣ ಆರಿಸಿದ್ದಾಯ್ತು. ಇದ್ದಕ್ಕಿದ್ದಂತೆ ಹಿಮ ನಾಡೇಕೋ ಕಣ್ಮುಂದೆ ಬಂತು. ಬಿಳಿ ಹಿಮದಲ್ಲಿ ಆಡುವ ಕನಸು ಕಂಡು ಹೋಗಿದ್ದೇನೋ ನಿಜ. ಮೊದಲ ಬಾರಿ ಹಿಮದ ಉಂಡೆ ಮಾಡಿ ಬಿಸಾಡಿ ಕುಣಿದಿದ್ದು ಹೌದಾದರೂ ಎಲ್ಲೆಡೆಯೂ ಬರೀ ಬಿಳಿಯಾದಾಗ ಮನಸ್ಸು ಖಾಲಿ. ಹಿಮದಲ್ಲಿ ಮಣಗಟ್ಟಲೇ ಭಾರದ ಸಮವಸ್ತ್ರ ಧರಿಸಿ ದೇಶ‌ ಕಾಯುವ ಯೋಧರನ್ನು ಕಂಡಾಗ ಚಳಿಯಲ್ಲೂ ಬೆವರಧಾರೆ. ಕಡುಕೆಂಪಿನ ರಕ್ತದ ಜ್ವಾಲಾಮುಖೀಗೆ ಹಿಮ ಕವಚ ತೊಡಿಸಿರಬಹುದೇ ಎಂಬ ಸಂಶಯ. ಸೇಬು ತಿನ್ನುತ್ತಾ, ಅಂಥದ್ದೇ ಕೆನ್ನೆಯ ಚಿಣ್ಣರನ್ನು ಕಂಡು ಭೂಸ್ವರ್ಗವಿದು ಎಂಬ ಖುಷಿ; ಮರುಕ್ಷಣವೇ ಪ್ರೀತಿಯ ಸಂಕೇತವಾದ ಕೆಂಪು ಬಣ್ಣ ಹೆದರಿಕೆ, ಸಿಟ್ಟು, ದ್ವೇಷದ ಬಣ್ಣವೂ ಹೌದಲ್ಲವೇ ಎಂಬ ಅನುಮಾನದ ಹೆಡೆ.

ಬಣ್ಣ ತುಂಬುವಾಗಲೇ ಸೂರ್ಯನ ಕಳ್ಳಾಟದಿಂದ ಜಗತ್ತಿಗೆ ಮಾಂತ್ರಿಕ ಸ್ಪರ್ಶ. ಎಳೆ ಬಿಸಿಲಕೋಲಿನಿಂದ ಕ್ಷಣ ಮಾತ್ರದಲ್ಲಿ ಬಾಡಿದೆಲೆ, ಬಂಗಾರದೆಲೆ. ಅರೆ, ಎಷ್ಟು ಚೆಂದ! ಪ್ರತಿ ಸೀರೆಗೂ ಮ್ಯಾಚಿಂಗ್‌ ಬ್ಲೌಸ್‌ ಹುಡುಕುತ್ತಾ ದಿನವಿಡೀ ಅಲೆಯುವ ಬದಲು ಎಲ್ಲಾ ರೇಷ್ಮೆ ಸೀರೆಗಳಿಗೂ ಆಗುವಂತೆ ಗೋಲ್ಡನ್‌ ಬ್ಲೌಸ್‌ ಹೊಲಿಸಬೇಕು ಎಂಬ ಗಂಡನ‌ ಸಲಹೆ ಬಗ್ಗೆ ನಸುನಗುತ್ತಲೇ ಗಂಭೀರ ಯೋಚನೆ. ಜತೆಯಲ್ಲೇ ಬೇಡವೆಂದರೂ ಹಳದಿ ಬಣ್ಣ ಎಂದರೆ ಸಿಡುಕುವ ಗೆಳತಿಯ ನೆನಪು. ಕಾರಣ, ಮದುವೆಯ ಸಮಯದಲ್ಲಿ ಕೊಟ್ಟ ಮಾತಿನಂತೆ ಹಾಕದ ಬಂಗಾರದ ಸರಕ್ಕಾಗಿ ಅವಳ ಬದುಕೆಂಬುದು ನಿತ್ಯದ ನರಕ. ಹೊಂಬಣ್ಣ ಹೊಳೆಯುವುದೇನೋ ನಿಜ, ಅದೆಷ್ಟು ಜನರ ಬದುಕನ್ನು ಹಾಳು ಮಾಡಿದೆಯೋ, ಮಾಡುತ್ತದೆಯೋ?

ಎಲ್ಲಾ ಬಣ್ಣ ತುಂಬುತ್ತಲೇ ಬಣ್ಣಗಳ ಹಬ್ಬ ಹೋಳಿ ಬಂತಲ್ಲಾ… ಸಣ್ಣವರಿದ್ದಾಗ ಎಲ್ಲರೂ ಸೇರಿ ಬಕೆಟ್‌ಗಟ್ಟಲೇ ಬಣ್ಣದ ನೀರು ಮಾಡಿ, ಸುರಿದು- ಚೆಲ್ಲಿ ಸಂಭ್ರಮಿಸಿದ್ದು ನಿಜವೇ. ಆದರೆ, ಕಾಲೇಜಿನಲ್ಲಿರುವಾಗ ಮೀನಾಕ್ಷಿ ಶೇಷಾದ್ರಿಯ “ದಾಮಿನಿ’ ಹಿಂದಿ ಸಿನಿಮಾ ನೋಡಿ, ಹೋಳಿ ಎಂದರೆ ಹೆದರಿಕೆ. ಹಾಗೆಯೇ, ಉತ್ತರ ಭಾರತೀಯ ಗೆಳತಿ ಹೇಳುತ್ತಿದ್ದ ಕತೆಯ ನೆನಪು. ಶ್ಯಾಮಲವರ್ಣ ಕೃಷ್ಣ, ತಾಯಿಯ ಬಳಿ “ನನ್ನ ಗೆಳತಿ ರಾಧೆಯೇಕೆ ಬೆಳ್ಳಗೆ?’ ಎಂದು ಪ್ರಶ್ನಿಸಿದನಂತೆ. ಅದಕ್ಕೆ ತಾಯಿ ಅವಳಿಗೂ ನೀಲಿ ಬಣ್ಣ ಹಚ್ಚು, ನಿನ್ನ ಹಾಗಾಗುತ್ತಾಳೆ ಎಂದಳಂತೆ. ಕೃಷ್ಣ ಹಾಗೇ ಮಾಡಿದ. ಅದಕ್ಕೇ ಮೊದಲು ನೀಲಿ ಬಣ್ಣ ಹಚ್ಚಿ ಹೋಳಿ ಆಡುತ್ತಾರೆ. ಹಾಗಾಗಿ, ಬಿಳಿ ಬಣ್ಣ ಶ್ರೇಷ್ಠವಲ್ಲ ಅನ್ನುತ್ತಿದ್ದಳು ಗೆಳತಿ. ಇರಬಹುದು… ಆದರೆ, ಬೇರೆ ಬಣ್ಣ ಹಚ್ಚಿ ರಾಧೆಯನ್ನು ಬದಲಿಸಬಹುದೇ? ನೀಲಿ, ಬಿಳಿ ಎಲ್ಲವೂ ಇದ್ದ ಹಾಗೆ ಇರಬಹುದಲ್ಲಾ ಎಂಬ ಯೋಚನೆ ತಲೆಯಲ್ಲಿ! ಅಂತೂ ಮನದ ನೆನಪಿನ ತೇರು ಓಡುತ್ತಿತ್ತು, ಬಣ್ಣಬಣ್ಣದ ಚಿತ್ತಾರ ನೆಲದಲ್ಲಿ ಮೂಡಿತ್ತು. ನೀಲ ಆಕಾಶ, ಕೆಂಪು ದಾಸವಾಳ, ಹಸಿರುಹೊಂಗೆ ಎಲ್ಲವೂ ಬದುಕಿಗೆ ಪ್ರೀತಿಯ ಬಣ್ಣ ತುಂಬತೊಡಗಿತ್ತು!

ಪುರುಷರಿಗೇಕೆ ಮ್ಯಾಚಿಂಗ್‌ ಬ್ಲೌಸ್‌ ಹುಡ್ಕೊದು ಕಷ್ಟ?
ಬಣ್ಣದ ಭಾವಗಳನ್ನು ಗುರುತಿಸೋದರಲ್ಲಿ ಪುರುಷರು ಯಾಕೋ ಹಿಂದೆ. ಆಕಾಶ ನೀಲಿ, ಸಮುದ್ರ ನೀಲಿ, ಹಸಿರು ಮಿಶ್ರಿತ ನೀಲಿ… ಹೀಗೆ ಬಣ್ಣದ ಸೂಕ್ಷ್ಮ ವ್ಯತ್ಯಾಸಗಳು ಪುರುಷರಿಗೆ ತಲೆನೋವಿನ ವಿಷಯ. ಇದಕ್ಕೆ ಮಾನವ ಶಾಸ್ತ್ರಜ್ಞರು ನೀಡುವ ಕಾರಣ ಹೀಗಿದೆ… “ಶಿಲಾಯುಗದಲ್ಲಿ ಪುರುಷನ ಕೆಲಸ ಕಾಡಿಗೆ ಹೋಗಿ ಬೇಟೆಯಾಡುವುದು. ಮಹಿಳೆಗೆ ಹಣ್ಣು, ತರಕಾರಿ, ಎಲೆ ಎಲ್ಲವನ್ನೂ ಆರಿಸಿ, ಬಳಸುವ ಸಂಗ್ರಹಣೆಯ ಕೆಲಸ. ದೂರದಿಂದಲೇ ಬೇಟೆ ಕಂಡೊಡನೆ ಹೆಚ್ಚು ಯೋಚಿಸದೇ ಕೊಂದು, ಮನೆಗೆ ತರುವುದು ಪುರುಷನಿಗೆ ಅನಿವಾರ್ಯ. ದೂರದಿಂದ ಬಣ್ಣ ಗುರುತಿಸುವುದರಲ್ಲಿ ಪುರುಷರು ಚುರುಕು. ಅದೇ ಮಹಿಳೆ ಸಾಕಷ್ಟು ಅಲೆದು, ಬಣ್ಣ- ರುಚಿ ನೋಡಿ, ಆರೋಗ್ಯಕರ ಹಣ್ಣು- ತರಕಾರಿ ಆರಿಸಬೇಕಿತ್ತು. ಸುರಕ್ಷಿತವಾಗಿರಲು ಸೂಕ್ಷ್ಮವಾಗಿ ಗಮನಿಸುವುದು ಅಗತ್ಯವಾಗಿತ್ತು. ಹಂತಹಂತವಾಗಿ ಮಾನವ ವಿಕಾಸ ನಡೆದರೂ ಆ ಮೂಲ ಪ್ರವೃತ್ತಿ ಬದಲಾಗಿಲ್ಲ. ಹೀಗಾಗಿ, ಸೀರೆಗೆ ಮ್ಯಾಚಿಂಗ್‌ ಬ್ಲೌಸ್‌ ಹುಡುಕೋದು ಪುರುಷರಿಗೆ ಇಷ್ಟವಿಲ್ಲ ಎನ್ನುವುದಕ್ಕಿಂತ ಕಷ್ಟ ಎನ್ನುವುದೇ ಸರಿ!

ಕೃಷ್ಣನ ನೆಲದಲ್ಲಿ “ಬಿಳಿ’ಗೂ ರಂಗು!
ಗೋಪಿಲೋಲ ಕೃಷ್ಣನ ವೃಂದಾವನದಲ್ಲಿ ಹೋಳಿಯಂದು ಬಣ್ಣದ ಹೊಳೆ, ಹೂಗಳ ಮಳೆ. ಆದರೆ, ಶತಶತಮಾನಗಳಿಂದ ಬರೀ ಬಿಳಿ ಸೀರೆಯುಟ್ಟು ಕತ್ತಲಲ್ಲಿ ಅಡಗಿರುವ ಸಾವಿರಾರು ಮಹಿಳೆಯರ ಬದುಕಿನಲ್ಲಿ ಮಾತ್ರ ಬಣ್ಣವೇ ಇಲ್ಲ. “ವಿಧವೆ’ ಪಟ್ಟ ಹೊತ್ತ ಅವರದ್ದು ಬರೀ ಕಪ್ಪು- ಬಿಳುಪಿನ ಪ್ರಪಂಚ. ಆದರೆ, 2013ರಿಂದ ಅವರ ಬಾಳಲ್ಲೂ ಬಣ್ಣದ ಆಗಮನವಾಗಿದೆ. ಪ್ರಾಚೀನ ಗೋಪಿನಾಥ ದೇಗುಲದ ಆವರಣದಲ್ಲಿ ಅವರಿಗೂ ಮುಕ್ತವಾಗಿ ಹೋಳಿ ಆಡುವ ವ್ಯವಸ್ಥೆ ಮಾಡಲಾಗಿದೆ. ಸಾವಿರಾರು ಕೆ.ಜಿ. ಗುಲಾಲ್‌, ಗುಲಾಬಿ, ಚೆಂಡು ಹೂಗಳ ರಾಶಿಯ ಮಧ್ಯೆ ಪಿಚಕಾರಿ ಹಿಡಿದು ಬಣ್ಣ ಎರಚಾಡುವ ಮಹಿಳೆಯರಿಗೆ ವಯಸ್ಸು, ದೇಶ, ಕಾಲದ ಪರಿವೆಯೇ ಇರಲಿಲ್ಲ. ಬಣ್ಣಕ್ಕೇ ರಂಗೇರಿದ ಸಾರ್ಥಕ ಕ್ಷಣವದು!

ಡಾ. ಕೆ.ಎಸ್‌. ಚೈತ್ರಾ


ಈ ವಿಭಾಗದಿಂದ ಇನ್ನಷ್ಟು

  • ಹಿಂದೆಲ್ಲಾ ಮದುವೆಗೆ ಇನ್ನೂ ನಾಲ್ಕೈದು ದಿನ ಇರುವಾಗಲೇ ವಧು- ವರನ ಮನೆ ಬಂಧುಗಳಿಂದ, ಆಪ್ತೆಷ್ಟರಿಂದ ತುಂಬಿ ಹೋಗುತ್ತಿತ್ತು. ಮದುವೆ ಮನೆಯ ಕೆಲಸಗಳಲ್ಲಿ ಊರ ಮಂದಿಯೂ...

  • ಬೇಸಿಗೆಯಲ್ಲಿ ತಂಪಾಗಿರಿಸುವ ಮತ್ತು ಚಳಿಗಾಲದಲ್ಲಿ ಬೆಚ್ಚಗಿರಿಸುವ ಖಾದಿ ಮತ್ತು ಹತ್ತಿಯ ಕುರ್ತಿಗಳಿಗೆ ಬೇಡಿಕೆ ಹೆಚ್ಚು. ಇವನ್ನು ವಿಶೇಷ ಸಮಾರಂಭಗಳಿಗೆ ತೊಡಬಹುದು....

  • ಮನೆಯಲ್ಲಿ ಎಲ್ಲರಿಗಿಂತ ಲೇಟಾಗಿ ಮಲಗಿ, ಎಲ್ಲರಿಗಿಂತ ಬೇಗ ಏಳುವವಳು ಅಮ್ಮ. ನಿತ್ಯವೂ ಎಂಟು ಗಂಟೆ ನಿದ್ದೆ ಮಾಡಲೇಬೇಕು ಅಂತ ಯಾರೇ ಹೇಳಿದರೂ, ಕೆಲಸದೊತ್ತಡ ಅವಳ...

  • ಈಗಷ್ಟೇ ಮದುವೆಯಾದ ಹುಡುಗಿಯರೇನಾದರೂ, "ನಂಗೆ ಹುಳಿ ತಿನ್ಬೇಕು ಅನ್ನಿಸ್ತಿದೆ' ಅಂದುಬಿಟ್ಟರೆ, ಎಲ್ಲರೂ ಕಣ್ಣರಳಿಸಿ ಕೇಳುವುದೊಂದೇ, "ಏನೇ, ಪ್ರಗ್ನೆಂಟಾ?' ಅಂತ....

  • ಬೇಸಿಗೆಯ ಈ ಕಾಲದಲ್ಲಿ, ಧಗೆಯಿಂದಾಗಿ ಬಾಯಾರಿಕೆ ಹೆಚ್ಚಾಗುತ್ತದೆ. ಎಷ್ಟು ನೀರು ಕುಡಿದರೂ ಸಾಲದು ಅನ್ನೋ ಪರಿಸ್ಥಿತಿ. ನೀರು ಕುಡಿಯದಿದ್ದರೆ, ಆರೋಗ್ಯ ಹದಗೆಡುತ್ತದೆ....

ಹೊಸ ಸೇರ್ಪಡೆ