ಮಕ್ಕಳ ಸ್ಕೂಲ್‌ ಮನೇಲಲ್ವೆ?

ಮಗ, ಮಗಳು ಇಬ್ಬರಿಗೂ ಪಾಠ ಮಾಡಿ...

Team Udayavani, Sep 11, 2019, 5:06 AM IST

ರಸ್ತೆಯಲ್ಲಿ ಯಾರೋ ಒಬ್ಬ ಹುಡುಗಿಯನ್ನು ಚುಡಾಯಿಸಿದರೆ, ಕಾಲೇಜಿನಲ್ಲಿ ಗೆಳತಿಯನ್ನು ಗೇಲಿ ಮಾಡಿದರೆ ಅಥವಾ ಹುಡುಗಿಯರ ಬಗ್ಗೆ ಕೇವಲವಾಗಿ ಮಾತನಾಡಿದರೆ, ಅವನನ್ನು ಕೇಳುವ ಮೊದಲ ಪ್ರಶ್ನೆ- “ಅಪ್ಪ-ಅಮ್ಮ ಇದನ್ನೇ ಹೇಳಿಕೊಟ್ಟಿದ್ದಾ?’ ಯಾಕಂದ್ರೆ, ಮನೆಯಲ್ಲಿ ನೀವು ಹೆಣ್ಣನ್ನು ಹೇಗೆ ನಡೆಸಿಕೊಳ್ಳುತ್ತೀರೋ, ಮಕ್ಕಳೂ ಅದನ್ನೇ ಕಲಿಯುತ್ತವೆ. ಮನೆಯೇ ಮೊದಲ ಪಾಠಶಾಲೆ ಅನ್ನುವುದು ಅದಕ್ಕೇ. ಕೇವಲ ಅಕ್ಷರಾಭ್ಯಾಸ ಮಾತ್ರವಲ್ಲ, ಮಗುವಿನ ಗುಣ-ನಡತೆಗೂ ಮನೆಯೇ ಬುನಾದಿ.

3-5 ವರ್ಷ ವಯೋಮಾನದಲ್ಲಿಯೇ ಮಕ್ಕಳು, ಲಿಂಗ ಭೇದವನ್ನು ಗುರುತಿಸಬಲ್ಲರಂತೆ. ಹಾಗಾಗಿ, ಅಆಇಈ, ಎಬಿಸಿಡಿ ಕಲಿಸುವುದಕ್ಕೂ ಮುಂಚೆ, ನಿಮ್ಮ ಮಗ/ಮಗಳಲ್ಲಿ ಲಿಂಗ ಸಮಾನತೆಯ ಬೀಜ ಬಿತ್ತಬೇಕು. ಗಂಡು-ಹೆಣ್ಣು ಸಮಾನರು ಅಂತ ಅವರಲ್ಲಿ ತಿಳಿವಳಿಕೆ ಮೂಡಿಸಬೇಕು.
ಅಷ್ಟು ಚಿಕ್ಕ ಮಕ್ಕಳಿಗೆ ಅವನ್ನೆಲ್ಲ ಹೇಗೆ ಕಲಿಸುವುದು ಅಂತೀರಾ? ಕಲಿಸುವುದು ಅಂದರೆ ಬೆತ್ತ ಹಿಡಿದು ಬೋಧಿಸುವುದಿಲ್ಲ, ಸ್ಲೇಟು-ಬಳಪ ಹಿಡಿಸಿ ತಿದ್ದಿಸುವುದೂ ಅಲ್ಲ. ನಿಮ್ಮ ನಡವಳಿಕೆ, ನೀವಾಡುವ ಮಾತು, ನೋಡುವ ಕಾರ್ಯಕ್ರಮಗಳಿಂದಲೂ ಮಕ್ಕಳು ಕಲಿಯುತ್ತವೆ…

-ಒಳ್ಳೆಯ ಉದಾಹರಣೆಯಾಗಿ
ತಂದೆಯಾದವನು, ಅಮ್ಮ ಮಾಡುವ ಕೆಲಸ ಕೀಳು ಅಂತ ಭಾವಿಸಿದರೆ ಮಕ್ಕಳ ಮನಸ್ಸಿನಲ್ಲಿಯೂ ಅದೇ ಭಾವನೆ ಬರುತ್ತದೆ. ಹೆಂಡತಿಯ ಸಲಹೆ-ಅಭಿಪ್ರಾಯಗಳನ್ನು ಕಡೆಗಣಿಸುವುದು, ನಿನಗೇನೂ ಗೊತ್ತಿಲ್ಲ ಅಂತ ಮಕ್ಕಳೆದುರು ಹೀಯಾಳಿಸುವುದು, ನೀನು ಅಡುಗೆ ಕೆಲಸಕ್ಕೇ ಲಾಯಕ್ಕು ಅನ್ನುವುದು…ಇತ್ಯಾದಿ ನಡವಳಿಕೆಗಳನ್ನು ಮಕ್ಕಳು ನೋಡಿ ಕಲಿಯುತ್ತವೆ. ಅಪ್ಪನ ಕೆಲಸ ಶ್ರೇಷ್ಠ. ಅಮ್ಮನ ಕೆಲಸ ಕನಿಷ್ಠ ಎಂಬ ಭಾವನೆ ಮಕ್ಕಳಲ್ಲಿ ಮೂಡದಂತೆ, ಹೆತ್ತವರು ಮಾದರಿಯಾಗಬೇಕು. ಮನೆಯ ಕೆಲಸಗಳನ್ನು ಇಬ್ಬರೂ ಹಂಚಿಕೊಂಡು ಮಾಡುವುದು, ಪರಸ್ಪರರ ಮಾತಿಗೆ ಬೆಲೆ ನೀಡುವುದು, ಗಂಡು-ಹೆಣ್ಣು ಮಕ್ಕಳನ್ನು ಸಮಾನವಾಗಿ ಕಾಣುವುದು ಲಿಂಗ ಸಮಾನತೆಯ ಮೊದಲ ಮೆಟ್ಟಿಲು.

-ಆಟವೂ ಪಾಠವೇ
ಮೊದಲ ಐದಾರು ವರ್ಷಗಳಲ್ಲಿ ಮಕ್ಕಳು ಕಲಿಯುವುದೆಲ್ಲವೂ ಆಟದ ಮೂಲಕವೇ. ಹಾಗಾಗಿ, ಆಟದ ಮೂಲಕವೇ ಅವರಿಗೆ ಬದುಕಿನ ಪಾಠ ಹೇಳುವುದು ಉತ್ತಮ. ಹುಡುಗರು ಗೊಂಬೆಗಳ ಜೊತೆ ಆಟವಾಡಬಾರದು, ಅಡುಗೆ ಆಟ ಆಡಬಾರದು, ಕಾರು, ಬೈಕು, ಗನ್‌, ಬ್ಯಾಟು-ಬಾಲ್‌ಗ‌ಳಂಥ ಆಟಿಕೆಗಳು ಹುಡುಗಿಯರಿಗಲ್ಲ… ಇತ್ಯಾದಿ ನಿಯಮಗಳು ಮಕ್ಕಳಲ್ಲಿ ಲಿಂಗ ತಾರತಮ್ಯದ ಭಾವನೆ ಸೃಷ್ಟಿಸುತ್ತವೆ. ಗಂಡು-ಹೆಣ್ಣಿನ ಕುರಿತಾದ ಪೂರ್ವಗ್ರಹದ ಯೋಚನೆಗಳು ಮಕ್ಕಳ ಮನಸ್ಸಿಗೆ ತಾಕದಂತೆ ಎಚ್ಚರ ವಹಿಸಿ.

-ಮಾತಾಡುವಾಗ ಎಚ್ಚರ
“ಹುಡುಗನಾಗಿ, ಹುಡುಗೀರ ಥರ ಅಳ್ಳೋಕೆ ನಾಚಿಕೆಯಾಗಲ್ವಾ?’, “ಗಂಡುಬೀರಿ ಥರಾ ಆಡಬೇಡ’, “ಹುಡುಗಿಯಾದವಳು ತಗ್ಗಿ ಬಗ್ಗಿ ನಡೆಯಬೇಕು’… ಮಕ್ಕಳೆದುರು ಆಡುವ ಇಂಥ ಮಾತುಗಳು ಅವರ ಮೇಲೆ ಬಹಳ ಪರಿಣಾಮ ಬೀರುತ್ತವೆ. ಹುಡುಗನಾದವನು ಅಳಲೇಬಾರದು, ಹುಡುಗಿಯಾದವಳು ಎಲ್ಲರಿಗೂ ಅಂಜಿ ನಡೆಯಬೇಕು ಅಂತ ಅವರು ಭಾವಿಸಿಬಿಡುತ್ತಾರೆ. ಅಪ್ಪಿತಪ್ಪಿಯೂ ಈ ಯೋಚನೆಗಳನ್ನು ಅವರ ತಲೆಗೆ ತುಂಬಬೇಡಿ.

-ಗುಡ್‌ ಟಚ್‌, ಬ್ಯಾಡ್‌ ಟಚ್‌ ಬಗ್ಗೆ ಅರಿವು
ಲಿಂಗ ಸಮಾನತೆಯ ಪಾಠ ಹೇಳುವ ಜೊತೆಜೊತೆಗೆ, ಗಂಡು-ಹೆಣ್ಣಿನ ದೇಹ ರಚನೆಯಲ್ಲಿರುವ ವ್ಯತ್ಯಾಸವನ್ನೂ ಅವರಿಗೆ ತಿಳಿಸಿ ಹೇಳಬೇಕು. ಮನೆಯ ಸುರಕ್ಷಿತ ವಾತಾವರಣದಿಂದ ಮಕ್ಕಳನ್ನು ಹೊರಜಗತ್ತಿಗೆ ಕಳಿಸುವ ಮುನ್ನವೇ, ಗುಡ್‌ ಟಚ್‌, ಬ್ಯಾಡ್‌ ಟಚ್‌ ಬಗ್ಗೆ ವಿವರಿಸಬೇಕು. “ನಿನ್ನ ದೇಹದ ಮೇಲೆ ನಿನಗಲ್ಲದೆ ಬೇರೆ ಯಾರಿಗೂ ಅಧಿಕಾರವಿಲ್ಲ’ ಎಂದು ಹುಡುಗಿಯರಿಗಷ್ಟೇ ಅಲ್ಲ, ಹುಡುಗರಿಗೂ ಹೇಳಿ.

-ಮಗಳಲ್ಲಿ ಆತ್ಮವಿಶ್ವಾಸ ತುಂಬಿ
ಹೆಣ್ಣುಮಕ್ಕಳ ಹೆತ್ತವರನ್ನು ಕಾಡುವ ಭಯ-ಆತಂಕಗಳು ನೂರಾರು. ಸ್ವತಂತ್ರವಾಗಿ ಬಿಟ್ಟರೆ ಎಲ್ಲಿ ಮಗಳು ಕೈ ಮೀರಿ ಹೋಗಿಬಿಡುತ್ತಾಳ್ಳೋ ಅಂತ ಹೆದರಿ, ಅವಳ ಚಲನವಲನಗಳ ಮೇಲೆ ಹದ್ದಿನ ಕಣ್ಣಿಡುವವರಿದ್ದಾರೆ. ಅದು ತಪ್ಪಲ್ಲದಿದ್ದರೂ, ಹುಡುಗಿಯಾದವಳು ಹೀಗೆ ಮಾಡಬಾರದು, ಹಾಗೆ ನಡೆಯಬಾರದು ಅಂತೆಲ್ಲಾ ನಿರ್ಬಂಧ ಹೇರುವುದರಿಂದ ಮಗಳ ಆತ್ಮವಿಶ್ವಾಸ ಕುಂದಬಹುದು. ತಾನು ಅಬಲೆ ಎಂಬ ಕಲ್ಪನೆ ಮೂಡಬಹುದು. ಬದಲಿಗೆ, ಸ್ವಾತಂತ್ರ್ಯ ಮತ್ತು ಸ್ವೇಚ್ಛಾಚಾರದ ನಡುವಿನ ಅಂತರವನ್ನು ಅರ್ಥ ಮಾಡಿಸಿ, ಆತ್ಮರಕ್ಷಣೆಯ ವಿಧಾನಗಳನ್ನು ಕಲಿಸಿ.

– ಗಂಡುಮಕ್ಕಳಲ್ಲಿ ಅರಿವು ಮೂಡಿಸಿ
ಮಗಳಿಗೆ ಹೇಗಿರಬಾರದು ಎಂದು ನೀತಿಪಾಠ ಹೇಳುವುದಕ್ಕಿಂತ, ಮಗನಿಗೆ ಹೇಗಿರಬೇಕು ಎಂದು ಕಲಿಸುವುದು ಹೆತ್ತವರ ಮೊದಲ ಜವಾಬ್ದಾರಿ. ಮನೆಯಲ್ಲಿ ಅಕ್ಕ-ತಂಗಿ, ಅಮ್ಮನನ್ನು ಗೌರವಿಸುವ ಹುಡುಗ ಮುಂದೆ ಹೆಂಡತಿಯನ್ನು ಗೌರವಿಸುತ್ತಾನೆ.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

  • ಪ್ರಿಸ್ಕೂಲ್‌ ನಡೆಸುವ ಗೆಳತಿ, ಎರಡು ದಿನ ರಜೆಯಲ್ಲಿ ಮಕ್ಕಳನ್ನು ನೋಡಿಕೊಳ್ಳಲು ಆಗದೆ ಒದ್ದಾಡ್ತೀರ. ನಾವು ವಾರಪೂರ್ತಿ ಅವರನ್ನು ನೋಡಿಕೊಳ್ತೀವಲ್ಲ, ನಮ್ಮ...

  • ಇತ್ತೀಚಿನ ದಿನಗಳಲ್ಲಿ ಸ್ತ್ರೀಯರನ್ನು ಸಾಮಾನ್ಯವಾಗಿ ಕಾಡುವ ಸಮಸ್ಯೆ ಪಿ.ಸಿ.ಓ.ಎಸ್‌, ಪಿ.ಸಿ.ಓ.ಡಿ. ರೋಗ ಲಕ್ಷಣಗಳು ಗೋಚರಿಸುತ್ತಿದ್ದರೂ ಅನೇಕರು ಅದನ್ನು ಗುರುತಿಸಿ,...

  • ಹಳ್ಳಿ ಮನೆಯ ಹಿತ್ತಲಿನಲ್ಲಿ, ಹೂದೋಟದಲ್ಲಿ ಬೆಳೆಯುವ, ನೋಡಲು ತುಳಸಿಯಂತೆಯೇ ಕಾಣುವ ಸಸ್ಯ ಕಾಮಕಸ್ತೂರಿ. ಸುಗಂಧಭರಿತವಾಗಿರುವ ಇದರ ಎಲೆಗಳನ್ನು ದೇವರ ಪೂಜೆಗೆ,...

  • "ಹುಚ್ಚಿ, ಅವರ ಮನೀ ಅನಬಾರದವಾ. ನಿನ್ನ ಮನೀ ಅದು. ತವರಮನಿ ಎಷ್ಟು ದಿನದ್ದು, ಕಡೀ ಪೂರೈಸೋದು ಅತ್ತೀಮನೀನೇ. ಆ ಮನೀ ಮಂದಿ ಎಲ್ಲಾ ನಿನ್ನವರೇ. ಗಂಡಗ "ಅವರು' ಅನಬಾರದು, "ಇವರು'...

  • ಹರ್‌ನಾಮ್‌ ಕೌರ್‌, ಭಾರತೀಯ ಮೂಲದ ಇಂಗ್ಲೆಂಡ್‌ ನಿವಾಸಿ. 29 ವರ್ಷದ ಈ ಯುವತಿಯ ಹೆಸರು 2015ರಲ್ಲಿ ಗಿನ್ನೆಸ್‌ ಪುಸ್ತಕಕ್ಕೆ ಸೇರಿತು. "ಅತಿ ಉದ್ದ ಗಡ್ಡ ಹೊಂದಿರುವ ಜಗತ್ತಿನ...

ಹೊಸ ಸೇರ್ಪಡೆ