ಅವಳ ಅಂತರಂಗ ಅರಿಯುವುದು ಹೇಗೆ?

Team Udayavani, Aug 14, 2019, 5:02 AM IST

ಸಂಸಾರ ನೌಕೆಯು ಸುಲಭವಾಗಿ ದಡ ಸೇರಲು ಗಂಡ- ಹೆಂಡತಿ ಇಬ್ಬರ ಪಾತ್ರವೂ ಅತಿ ಮುಖ್ಯ. ಗಂಡ ಹೆಂಡತಿಯ, ಹೆಂಡತಿ ಗಂಡನ ಮನಸ್ಸನ್ನು ಪರಸ್ಪರ ಅರಿತು, ಸಾಮರಸ್ಯದಿಂದ ಬಾಳಿದರೆ ಸಂಸಾರದಲ್ಲಿ ಯಾವ ಸಮಸ್ಯೆಯೂ ಬರುವುದಿಲ್ಲ.

ಗಂಡ ಹೆಂಡಿರ ಜಗಳ ಉಂಡು ಮಲಗುವ ತನಕ ಎಂದು ಬಲ್ಲವರು ಹೇಳುತ್ತಾರೆ. ಕೆಲವು ಸಲ ಆ ಜಗಳ ಮಲಗೆದ್ದ ನಂತರವೂ ಮುಗಿದಿರುವುದಿಲ್ಲ. ಜಗಳದ ತೀವ್ರತೆ ಹೆಚ್ಚಿದ್ದರೆ ಅದು ದಿನ, ವಾರ, ತಿಂಗಳುಗಟ್ಟಲೆ ಮುಂದುವರೆದು, ವಿಚ್ಛೇದನದ ತನಕ ಹೋದರೂ ಆಶ್ಚರ್ಯವಿಲ್ಲ. ಇತ್ತೀಚಿನ ದಿನಗಳಲ್ಲಂತೂ ಇದು ಸರ್ವೇಸಾಮಾನ್ಯವಾಗಿದೆ. ಒಂದು ಕ್ಷುಲ್ಲಕ ಕಾರಣ ಸಿಕ್ಕಿದರೂ ಸಾಕು; ಮನಸ್ಸು ವಿಚ್ಛೇದನವನ್ನು ಬಯಸುತ್ತದೆ.

ಹೀಗಾಗದಂತೆ ತಡೆಯುವುದು ಅತಿ ಮುಖ್ಯ. ವ್ಯಗ್ರ ಮನಸ್ಸಿನ ಮೇಲೆ ಕಡಿವಾಣ ಹಾಕಿ, ಸಂಸಾರದಲ್ಲಿ ಸಾಮರಸ್ಯವನ್ನು ತಂದುಕೊಳ್ಳಬೇಕು. ಯಾವಾಗಲೂ ಮನೆ ಕೆಲಸದಲ್ಲಿ ಸುಸ್ತಾಗಿರುವ ಪತ್ನಿ, ಗಂಡ ಸ್ವಲ್ಪ ಜೋರಾಗಿ ಮಾತನಾಡಿದರೂ ಸಾಕು; ಅಷ್ಟಕ್ಕೇ ಮುನಿಸಿಕೊಂಡು ಬಿಡುತ್ತಾಳೆ. ದಿನವಿಡೀ ಹೊರಗಡೆ ದುಡಿಯುವ ಉದ್ಯೋಗಸ್ಥ ಮಹಿಳೆಯರ ಮನಃಸ್ಥಿತಿಯನ್ನಂತೂ ಹೇಳುವುದೇ ಬೇಡ. ಹಾಗಾಗಿ, ಅಸಮಾಧಾನಗೊಂಡಿರುವ ಪತ್ನಿಯ ಮನಸ್ಸನ್ನು ಅರಿತು, ಮನೆಯ ಶಾಂತಿ, ನೆಮ್ಮದಿಯನ್ನು ಕಾಪಾಡಿಕೊಳ್ಳುವಲ್ಲಿ ಪತಿಯ ಪಾತ್ರ ಹೆಚ್ಚಿರುತ್ತದೆ. ಹಾಗಾದರೆ, ಮಡದಿಯ ಅಂತರಂಗವನ್ನು ಅರಿಯುವುದಾದರೂ ಹೇಗೆ?

-ಪತ್ನಿ ಉದ್ಯೋಗಸ್ಥೆ ಅಲ್ಲದಿದ್ದರೆ, ವಾರಕ್ಕೆರಡು ಬಾರಿಯಾದರೂ ಆಫೀಸ್‌ನಿಂದ ಬೇಗ ಬಂದು ಆಕೆಯನ್ನು ಹೊರಗೆ ತಿರುಗಾಡಲು ಕರೆದುಕೊಂಡು ಹೋಗಿ.
-ಮಡದಿಯ ಜನ್ಮದಿನವನ್ನು ನೆನೆಪಿಟ್ಟುಕೊಂಡು, ಬೆಳಗ್ಗೆಯೇ ಶುಭಾಶಯ ಕೋರಿ, ಸಾಧ್ಯವಾದ ಉಡುಗೊರೆಯನ್ನು ನೀಡಿ.
– ಉಡುಗೊರೆ ದುಬಾರಿಯದ್ದೇ ಆಗಬೇಕಿಲ್ಲ, ಇಷ್ಟವಾದ ಸಿಹಿತಿಂಡಿಯೋ, ಒಂದು ಮೊಳ ಮಲ್ಲಿಗೆಯೋ ಸಾಕು, ಆಕೆ ಖುಷಿಪಡಲು.
-ಕೈ ಹಿಡಿದವಳ ಅಭಿಪ್ರಾಯಕ್ಕೆ ಬೆಲೆ ಕೊಡುವುದು, ಆಕೆಯೊಂದಿಗೆ ಸಮಸ್ಯೆಗಳನ್ನು ಚರ್ಚಿಸುವುದು ಮುಖ್ಯ.
– ಹೆಂಡತಿ ವಿದ್ಯಾವಂತೆಯಾಗಿದ್ದರೆ, ಆಫೀಸಿನ ಅಥವಾ ಮನೆಯ ಸಮಸ್ಯೆಗಳ ಬಗ್ಗೆ ಅವಳ ಸಲಹೆ ಪಡೆದುಕೊಳ್ಳಿ.
-ಗೆಳೆಯರ ಎದುರು, ನಿಮ್ಮ ತಂದೆ, ತಾಯಿಯ ಎದುರು ಮಡದಿಯನ್ನು ಹೀಯಾಳಿಸಬೇಡಿ. ಇಂಥ ವರ್ತನೆ ಅವಳಲ್ಲಿ ಕೀಳರಿಮೆಯನ್ನು ಹುಟ್ಟಿಸಬಹುದು.
-ಹೆಣ್ಣು ಮದುವೆಯಾಗಿ ಎಷ್ಟೇ ವರ್ಷಗಳಾದರೂ ತನ್ನ ತವರನ್ನು ಬಿಟ್ಟುಕೊಡುವುದಿಲ್ಲ. ಆದ್ದರಿಂದ ಅವಳ ತವರು ಮನೆಯವರನ್ನು ಅವಳೆದುರು ಹೀಯಾಳಿಸುವ ಮೂರ್ಖತನ ಬೇಡ.
– ವರ್ಷಕ್ಕೊಮ್ಮೆಯಾದರೂ ಕೆಲವು ದಿನಗಳ ಮಟ್ಟಿಗೆ ಇಬ್ಬರೂ ಜೊತೆಯಾಗಿ ಆಕೆಯ ತವರಿಗೆ ಹೋಗಿ ಬನ್ನಿ.
-ಹಾಂ, ಅವಳ ಸೌಂದರ್ಯವನ್ನು ಹೊಗಳಲು ಮರೆಯಬೇಡಿ. ಹೊಗಳಿಕೆಗೆ ಮನಸೋಲದ ಹೆಣ್ಣು ಈ ಪ್ರಪಂಚದಲ್ಲೇ ಇಲ್ಲ!

ಸಂಸಾರ ನೌಕೆಯು ಸುಲಭವಾಗಿ ದಡ ಸೇರಲು ಗಂಡ- ಹೆಂಡತಿ ಇಬ್ಬರ ಪಾತ್ರವೂ ಅತಿ ಮುಖ್ಯ. ಗಂಡ ಹೆಂಡತಿಯ, ಹೆಂಡತಿ ಗಂಡನ ಮನಸ್ಸನ್ನು ಪರಸ್ಪರ ಅರಿತು, ಸಾಮರಸ್ಯದಿಂದ ಬಾಳಿದರೆ ಸಂಸಾರದಲ್ಲಿ ಯಾವ ಸಮಸ್ಯೆಯೂ ಬರುವುದಿಲ್ಲ. ಒಬ್ಬರ ಮೇಲೊಬ್ಬರು ದಬ್ಟಾಳಿಕೆ ನಡೆಸಿ, ಅಧಿಕಾರ ಚಲಾಯಿಸಿದರೆ, ಸಂಸಾರ ಒಡೆದ ನೌಕೆಯಾಗುತ್ತದೆ. ಜಗಳವೆಂಬ ಮುಳ್ಳನ್ನು ಚಿಗುರಿನಲ್ಲೇ ಚಿವುಟಿ, ಸಂತೋಷವೆಂಬ ಹೂವಿಗೆ ಅರಳಲು ಅವಕಾಶ ಮಾಡಿಕೊಡಿ.

– ಪುಷ್ಪ ಎನ್‌.ಕೆ.ರಾವ್‌


ಈ ವಿಭಾಗದಿಂದ ಇನ್ನಷ್ಟು

  • ನಯನಾಗೆ 27 ವರ್ಷಕ್ಕೆ ಮದುವೆಯಾಯ್ತು. ಎಂಜಿನಿಯರಿಂಗ್‌ ಮುಗಿಸಿ ಮೂರು ವರ್ಷ ಸಣ್ಣ ಕಂಪನಿಯಲ್ಲಿ, ಕಡಿಮೆ ಸಂಬಳಕ್ಕೆ ದುಡಿದಿದ್ದ ಆಕೆಗೆ ಆಗಷ್ಟೇ ಹೆಸರಾಂತ ಎಂಎನ್‌ಸಿಯಲ್ಲಿ...

  • ಇಷ್ಟು ಸಣ್ಣ ವಯಸ್ಸಿನಲ್ಲೇ ಮೊಬೈಲ್‌ನಲ್ಲಿ ಆ್ಯಪ್‌ಗ್ಳನ್ನು ಡೌನ್‌ಲೋಡ್‌ ಮಾಡುತ್ತಾನೆ, ಅವನಿಗೆ ಗೊತ್ತಿಲ್ಲದ ಗೇಮೇ ಇಲ್ಲ, ಯುಟ್ಯೂಬ್‌ನಲ್ಲಿ ತನಗೆ ಬೇಕಾದ್ದನ್ನು...

  • ಮನೆಯಲ್ಲಿ ಹೆಣ್ಣುಮಗು ಹುಟ್ಟಿದರೆ ಅವರಿಗೆ ಸಂಭ್ರಮ. ಗಂಡು ಮಗುವಿಗೆ ಆದ್ಯತೆ ಕಡಿಮೆ. ಮನೆಯ ಹೆಚ್ಚಿನ ಜವಾಬ್ದಾರಿಗಳನ್ನು ಹೆಣ್ಣೇ ಹೊರುತ್ತಾಳೆ. ಕೊನೆಯ ಮಗಳು...

  • ಎಲ್ಲದಕ್ಕೂ ಒಂದು ಕೊನೆ ಅಂತ ಇರತದ. ಅದ ಆಗಬೇಕು. ಮೊನ್ನೆ, ನಿಮ್ಮ ಅಪ್ಪಾರ ಕೊಡಸಿದ ಸೈಕಲನ್ನ ಮಾರಲ್ಲದನ ಇಟಕೊಂಡ್ರಿ. ಬೇಕಾದ್ದು, ಬ್ಯಾಡಾದ್ದು ಎಲ್ಲಾ ಇಟಕೊಂಡ...

  • ಬದುಕು ಕೆಲವೊಮ್ಮೆ ಸೈಕಲ್‌ ಹೊಡಿಸುತ್ತೆ, ನೂರಾರು ಕಷ್ಟಗಳನ್ನು ತಲೆಯ ಮೇಲೆ ಸುರಿಯುತ್ತೆ. ಕೆಲವರು ಕಷ್ಟಗಳಿಗೆ ಶರಣಾಗಿ ಬಿಡುತಾರೆ. ಇನ್ನೂ ಕೆಲವರು ಕಷ್ಟಗಳಿಗೇ...

ಹೊಸ ಸೇರ್ಪಡೆ