ನಾನೀಗ ಟೀಚರಮ್ಮ…

ಹವ್ಯಾಸಿ ಶಿಕ್ಷಕಿಯ ಕಥೆ

Team Udayavani, Nov 6, 2019, 4:05 AM IST

ನಲವತ್ತೈದು ವರ್ಷಗಳ ಹಿಂದಿನ ಮಾತು. ತೀರಾ ಸಣ್ಣ ಹಳ್ಳಿಯಲ್ಲಿ ಹುಟ್ಟಿದರೂ, ಹಿರಿಯರ ಬೆಂಬಲದಿಂದ ಉತ್ತಮ ವಿದ್ಯಾಭ್ಯಾಸ ಪಡೆಯುವ ಭಾಗ್ಯ ನನ್ನದಾಯ್ತು. ವಿಜ್ಞಾನ ಪದವಿಯಲ್ಲಿ ಉನ್ನತ ಶ್ರೇಣಿ ಪಡೆದರೂ, ನೌಕರಿಗಾಗಿ ನಡೆಸಿದ ಪ್ರಯತ್ನ ಫ‌ಲಕಾರಿ ಆಗಲಿಲ್ಲ. ಮನೆಗೆ ದಿನಪತ್ರಿಕೆ ಬರುತ್ತಿರಲಿಲ್ಲ, ರೇಡಿಯೋ ಇರಲಿಲ್ಲ. ಸುಮ್ಮನೆ ಕುಳಿತಿರಲಾಗದೆ, ನಾನು ಕಲಿತ ಖಾಸಗಿ ಶಾಲೆಯಲ್ಲಿಯೇ, ತಾತ್ಕಾಲಿಕ ನೆಲೆಯಲ್ಲಿ ಹೈಸ್ಕೂಲು ಮಕ್ಕಳ ಮೇಲ್ವಿಚಾರಣೆಯ ಕೆಲಸಕ್ಕೆ ಸೇರಿಕೊಂಡೆ.

ಸ್ವಲ್ಪ ಸಮಯದ ಬಳಿಕ, ದೂರವಾಣಿ ಇಲಾಖೆಯಲ್ಲಿ ನೌಕರಿ ದೊರೆಯಿತು. ಅಲ್ಲಿ ಮೂವತ್ತೆಂಟು ವರ್ಷಗಳ ಕಾಲ, ತಾಂತ್ರಿಕ, ಮೇಲ್ವಿಚಾರಣೆ, ಆಡಳಿತದಂಥ ವಿವಿಧ ಮುಖ್ಯ ಹುದ್ದೆಗಳನ್ನು ನಿರ್ವಹಿಸಿ, ಸಂತೃಪ್ತಿಯಿಂಲೇ ನಿವೃತ್ತಿ ಹೊಂದಿದೆ. ಆ ಬಳಿಕ ಅನಾಯಾಚಿತವಾಗಿ ಶಿಕ್ಷಕಿಯಾಗುವ ಸುಯೋಗ ಒದಗಿ ಬಂತು. ವೃತ್ತಿಯಲ್ಲದಿದ್ದರೂ, ಪ್ರವೃತ್ತಿಯಲ್ಲಿ ನಾನೀಗ ಶಿಕ್ಷಕಿ ಅನ್ನಲು ಖುಷಿಯಾಗುತ್ತದೆ. ನಿಜವಾಗಿ ನೋಡಿದರೆ, ಮಕ್ಕಳಿಗೆ ಪಾಠ ಮಾಡಿದ ಯಾವುದೇ ಅನುಭವ ನನಗಿಲ್ಲ.

ಹೀಗೇ ಒಮ್ಮೆ, ನನ್ನ ನೆಚ್ಚಿನ ಉಪನ್ಯಾಸಕಿಯ (ಅವರು ನನಗೆ ಗಣಿತ ಕಲಿಸಿದವರು)ಬಳಿ, ನಿವೃತ್ತಿಯ ನಂತರದ ಅವಕಾಶಗಳ ಬಗ್ಗೆ ಕೇಳುತ್ತಿದ್ದೆ. ಆಗ ಅವರು, “ಅನಾಥಾಶ್ರಮದ ಹತ್ತನೇ ತರಗತಿಯ ಮಕ್ಕಳಿಗೆ ಗಣಿತಕ್ಕೆ ಪ್ರತ್ಯೇಕ ಪಾಠದ ಅಗತ್ಯವಿದೆ. ನೀನ್ಯಾಕೆ ಅವರಿಗೆ ಪಾಠ ಮಾಡಬಾರದು?’ ಅಂದರು. ನಾನು ಗಾಬರಿಯಿಂದ, “ಮೇಡಂ, ನಾನು ಕಲಿತಿದ್ದು ನಲ್ವತ್ತು ವರ್ಷಗಳ ಹಿಂದೆ. ಈಗ ಅದೆಲ್ಲಾ ನೆನಪಿನಲ್ಲೂ ಇಲ್ಲ’ ಎಂದೆ. ಆಗ ಅವರು, “ಪರ್ವಾಗಿಲ್ಲ.. ಪ್ರಾರಂಭಿಸಿದರೆ ಎಲ್ಲಾ ನೆನಪಿಗೆ ಬರ್ತದೆ. ಹೆದರಬೇಡ’ ಅಂತ ಧೈರ್ಯ ತುಂಬಿದರು.

ನಿವೃತ್ತಿಯ ನಂತರ ಸುಮ್ಮನೆ ಮನೆಯಲ್ಲಿ ಕೂರುವ ಬದಲು, ಇದನ್ನೊಮ್ಮೆ ಟ್ರೈ ಮಾಡೋಣ ಅಂತ ನಾನೂ ಒಪ್ಪಿಕೊಂಡೆ. ಪಾಠದ ಮೊದಲನೇ ದಿನ..ಯಾವುದೇ ಪೂರ್ವ ತಯಾರಿ ಇಲ್ಲದೆ ಹೋಗಿದ್ದೆ. ಸರಿಯಾದ ಬೆಳಕಿನ ವ್ಯವಸ್ಥೆಯಿಲ್ಲದ ದೊಡ್ಡದಾದ ಹಾಲ…ನಲ್ಲಿ ಹನ್ನೊಂದು ಮಕ್ಕಳು ನೆಲದ ಮೇಲೆ ಸಾಲಾಗಿ ಕುಳಿತಿದ್ದರು. “ನಮಸ್ತೇ ಮಾತಾಜಿ’ ಅಂತ ಒಕ್ಕೊರಲಿನಿಂದ ಸ್ವಾಗತಿಸಿದರು. ಮಕ್ಕಳೆಲ್ಲರ ಪರಿಚಯ ಮಾಡಿಕೊಂಡಿದ್ದಾಯ್ತು.

ನನಗೋ, ಆತಂಕದಿಂದ ಎದೆ ಹೊಡೆದುಕೊಳ್ಳುತ್ತಿತ್ತು. ಮಕ್ಕಳೊಂದಿಗೆ ಗಂಭೀರವಾಗಿರಲೋ, ಬೇಡವೋ ಒಂದೂ ತಿಳಿಯುತ್ತಿರಲಿಲ್ಲ. ಮಕ್ಕಳಿಗೂ ನಾನು ಹೊಸಬಳಾದ್ದರಿಂದ, ಸಹಜವಾಗಿಯೇ ಸ್ವಲ್ಪ ಹೆದರಿದ್ದರು. ಅವರಂತೆಯೇ ನಾನೂ ಹೆದರಿದ್ದೆ. ಆದರೂ, ನಗುತ್ತಾ ಮಾತಾಡಿ, ನನ್ನ ಪರಿಚಯ ಮಾಡಿಕೊಂಡೆ. ನಾನು ಶಿಕ್ಷಕಿಯಾಗಿ ಕೆಲಸ ಮಾಡಿಲ್ಲವೆಂದೂ, ಆದರೆ ಪ್ರಯತ್ನ ಪಟ್ಟು ಕಲಿಸುವೆನೆಂದೂ, ಪಾಠ ಅರ್ಥವಾಗದಿದ್ದಲ್ಲಿ ಯಾರು ಬೇಕಾದರೂ ತಕ್ಷಣ ಕೇಳಬಹುದೆಂದೂ ಮನದಟ್ಟು ಮಾಡಿಸಿದೆ. ಮಕ್ಕಳಿಗೆ ಸಮಾಧಾನವಾಯ್ತು.

ಜೀವನದಲ್ಲಿ ಮೊದಲ ಬಾರಿಗೆ, ಬೋರ್ಡ್‌ನಲ್ಲಿ ಬರೆದು ಮಕ್ಕಳಿಗೆ ಪಾಠ ಮಾಡುವ ಅವಕಾಶ ನೀಡಿದ್ದಕ್ಕೆ ಮನದಲ್ಲೇ ದೇವರಿಗೆ ವಂದಿಸಿ, ಉತ್ಸಾಹದಿಂದ ಆರಂಭಿಸಿದೆ. ಗಣಿತದ ಸೂತ್ರಗಳು, ಗಣಿತವನ್ನು ಸರಳವಾಗಿ ಹೇಳಿಕೊಡುವ ವಿಧಾನ ಇತ್ಯಾದಿಗಳು ತನ್ನಿಂದ ತಾನಾಗಿಯೇ ಹೊಳೆಯುತ್ತಾ ಹೋಗಿದ್ದು ಮಾತ್ರ ದೈವಕೃಪೆಯೇ ಇರಬೇಕು. ಒಂದು ಪಾಠವಾದ ಕೂಡಲೇ ಮಕ್ಕಳಲ್ಲಿ ಅರ್ಥವಾಯಿತೇ ಇಲ್ಲವೇ ಎಂದು ವಿಚಾರಿಸಿದಾಗ, ಸರಿಯಾಗಿ ಅರ್ಥವಾಯ್ತೆಂದು ಎಲ್ಲರೂ ಹೇಳಿದಾಗಲೇ ಸಮಾಧಾನವಾಗಿದ್ದು. ಜೊತೆಗೇ ಒಂದು ಅವರ್ಣನೀಯ ಧನ್ಯತಾ ಭಾವ.

ಶಾಲೆಯ ರಜಾದಿನಗಳಲ್ಲಿ ಮಾತ್ರ ಆಶ್ರಮಕ್ಕೆ ಹೋಗಿ, 2-3 ಗಂಟೆಗಳಷ್ಟು ಹೊತ್ತು ಪಾಠ ಮಾಡುತ್ತಿದ್ದೆ. ಸಮಯಾವಕಾಶ ಕಡಿಮೆ ಇದ್ದುದರಿಂದ, ಪೂರ್ತಿ ಮಾಡಲಾಗದಿದ್ದರೂ, ಮಕ್ಕಳಿಗೆ ಅವರ ಕ್ಲಾಸಿನಲ್ಲಿ ಅರ್ಥವಾಗದ ಭಾಗಗಳನ್ನು ವಿವರಿಸುತ್ತಿದ್ದೆ. ಪರೀಕ್ಷೆಗಳಲ್ಲಿ ಉತ್ತಮ ಅಂಕಗಳು ಬಂದಾಗ ಎಲ್ಲರಿಗೂ ಆಗಾಗ ಪೆನ್ನು, ಪುಸ್ತಕಗಳ ಉಡುಗೊರೆ ಕೊಟ್ಟು ಹುರಿದುಂಬಿಸುವುದೂ ನಡೆದಿತ್ತು.  ಮಧ್ಯದಲ್ಲೊಮ್ಮೆ, ನನ್ನ ಹುಟ್ಟಿದ ದಿನಾಂಕವನ್ನು ಅದು ಹೇಗೋ ತಿಳಿದು, ಮಕ್ಕಳೆಲ್ಲರೂ ಅವರದೇ ರೀತಿಯಲ್ಲಿ ಶುಭಾಶಯ ಕೋರಿದರು. ಆ ದಿನ ಮಾತ್ರ ತುಂಬಾ ಭಾವುಕಳಾಗಿಬಿಟಿದ್ದೆ.

ಕೋಣೆಯನ್ನು, ಬಣ್ಣ ಬಣ್ಣದ ನಾಲ್ಕೈದು ಬಲೂನುಗಳನ್ನು ಕಟ್ಟಿ ಅಲಂಕರಿಸಿದ್ದರು. ಮಕ್ಕಳು ತುಂಬಾ ಸಂಕೋಚದಿಂದ, ತಮ್ಮ ಕೈಯಾರೆ ಬಿಡಿಸಿದ ಚಿತ್ರ, ಅಲ್ಲೇ ಸಿಕ್ಕಿದ ಹೂ, ಹುಲ್ಲುಗಳ ಚಂದದ ಗುತ್ಛ, ಪೆನ್ನು, ಇತ್ಯಾದಿಗಳನ್ನು ಬೇಡವೆಂದರೂ ಕೊಟ್ಟು ಆಶೀರ್ವಾದ ಪಡೆದರು. ಆ ಮಕ್ಕಳೆಲ್ಲರೂ ಕಷ್ಟಪಟ್ಟು ಅಭ್ಯಾಸ ಮಾಡಿ, ಅಂತಿಮ ಪರೀಕ್ಷೆಯಲ್ಲಿ ಅತ್ಯುತ್ತಮ ಶ್ರೇಣಿ ಪಡೆದುದು ಹೆಮ್ಮೆಯ ಸಂಗತಿ. ನನ್ನ ಈ ಅರೆ ಶಿಕ್ಷಕಿ ಕಾರ್ಯವು ಈಗ ಐದನೇ ವರ್ಷಕ್ಕೆ ಕಾಲಿಟ್ಟಿದೆ. ಮನೆ ಹತ್ತಿರದ ಕೆಲ ಮಕ್ಕಳೂ, ತಿಳಿಯದ ವಿಷಯಗಳನ್ನು ಅರಿತುಕೊಳ್ಳಲು ಬರುತ್ತಿರುತ್ತಾರೆ.

ಎಷ್ಟೇ ಹೊತ್ತಿಗೆ ಬಂದರೂ, ಖುಷಿಯಿಂದ, ಅರ್ಥವಾಗುವಂತೆ ವಿವರಿಸುತ್ತೇನೆ. ಇಪ್ಪತ್ತು ಕಿ.ಮೀ. ದೂರದ ಗುರುಕುಲದಲ್ಲಿ ಆಗಾಗ್ಗೆ ಹೋಗಿ ಪಾಠ ಮಾಡಿ ಬರುತ್ತೇನೆ.  ಹೊಟ್ಟೆಪಾಡಿಗಾಗಿ ಸಾವಿರ ಕೆಲಸಗಳನ್ನು ಮಾಡಬಹುದು. ಆದರೆ, ತುಂಬು ಹೃದಯದಿಂದ ಮಾಡುವ ಶಿಕ್ಷಕ ವೃತ್ತಿಯಲ್ಲಿ ಸಿಗುವ ಸಂತೃಪ್ತಿ ಬೇರೆ ಯಾವುದರಲ್ಲಿಯೂ ಸಿಗದು. ನಾಲ್ಕು ದಶಕಗಳ ಕಾಲ ನಾನು ಮಾಡಿದ ಬೇರೆಲ್ಲ ಕೆಲಸಕ್ಕಿಂತ, ನಿವೃತ್ತಿ ನಂತರ ಮಾಡುತ್ತಿರುವ ಈ ಕೆಲಸ ನನಗೆ ಬಹಳ ನೆಮ್ಮದಿ ನೀಡಿದೆ.

* ಶಂಕರಿ ಶರ್ಮ

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

  • ಜಂಜಾಟದ ಬದುಕಿನಿಂದ ಬೇಸತ್ತವರು, ಶ್ರೀಮಂತಿಕೆಯ ಜೊತೆಗೇ ಬದುಕಿದರೂ ನೆಮ್ಮದಿ ಇಲ್ಲದೆ ಸಂಕಟಪಟ್ಟವರು ಮಾತ್ರವಲ್ಲ; ಉದ್ಯೋಗ ನಿಮಿತ್ತ ಪರ ಊರಿಗೆ ಬಂದು ಆಶ್ರಯ...

  • ಹಂಚಿನ ಮೇಲ್ಛಾವಣಿಯ ಪುಟ್ಟ ಮನೆಯಲ್ಲಿ ಬಡತನವೇ ತುಂಬಿದ್ದರೂ ಕನಸುಗಳಿಗೆ ಅಲ್ಲಿ ಬರವಿರಲಿಲ್ಲ. ತಂದೆ-ತಾಯಿ ಕೂಲಿ ಕಾರ್ಮಿಕರು. ಹೆತ್ತವರ ಕಷ್ಟಕ್ಕೆ ನೆರವಾಗಲು...

  • ದಿನ ಅಮ್ಮಂದಿರಿಗೆ ಚಳಿಯಿದ್ದೂ ಚಳಿಯಿರಲಿಲ್ಲ. ಕಷ್ಟಗಳಿದ್ದರೂ ಅದರ ಬಗ್ಗೆ ಕೊರಗುಗಳಿರಲಿಲ್ಲ. ನಾಲ್ಕು ಗೋಡೆಗಳ ಮಧ್ಯೆ ಇದ್ದರೂ ಸ್ವಾತಂತ್ರ್ಯದಿಂದ ವಂಚಿತರಾಗಿದ್ದೇವೆ...

  • ಪಗಡೆಯಾಟ ಇಂದು ನಿನ್ನೆಯದಲ್ಲ. ಋಗ್ವೇದದಲ್ಲಿ "ಅಕ್ಷ' ಎಂಬ ಹೆಸರಿನಿಂದ ಈ ಆಟದ ಉಲ್ಲೇಖವಿದೆ. ಪಗಡೆ ದಾಳಗಳೊಂದಿಗೆ ಅಪ್ಸರೆಯರು ನೃತ್ಯ ಮಾಡಿದರೆಂಬ ವರ್ಣನೆ ಅಥರ್ವಣ...

  • ಕೆಲಸದ ಒತ್ತಡವೋ, ಪ್ರಯಾಣದ ಸುಸ್ತೋ,ಮಾನಸಿಕ ಹಿಂಸೆಯೋ ಅಥವಾ ಮನೆಗೆಲಸದ ಅನಿವಾರ್ಯತೆಯೊ ಗೊತ್ತಿಲ್ಲ, ಹೆತ್ತ ಮಕ್ಕಳ ಕಲಿಕೆಯ ಬಗ್ಗೆ ಅಮ್ಮಂದಿರ ಕಾಳಜಿ ಕಡಿಮೆಯಾಗುತ್ತಿದೆ....

ಹೊಸ ಸೇರ್ಪಡೆ