ಹೆಂಡತಿಯೊಬ್ಬಳು ಮನೆಯೊಳಗಿರದಿರೆ…ನೀನಿಲ್ಲದೆ ನನಗೇನಿದೆ ?

Team Udayavani, Apr 22, 2020, 5:03 PM IST

ನೀನಿಲ್ಲದೆ ನನಗೇನಿದೆ ?

ಸಾಂದರ್ಭಿಕ ಚಿತ್ರ

ಎರಡು ದಿನವಿದ್ದು ಬಂದುಬಿಡ್ತೀನಿ ಅಂತ ಹೆಂಡತಿ ತವರಿಗೆ ಹೋದಳು. ಮರುದಿನವೇ ಲಾಕ್‌ಡೌನ್‌ ಘೋಷಣೆಯಾಯಿತು. ಅವಳಿಲ್ಲದ ಮನೆಯಲ್ಲಿ ಅನುಭವಿಸಿದ
“ಬದುಕನ್ನು’ ರಾಯರು ಇಲ್ಲಿ ಬರೆದುಕೊಂಡಿದ್ದಾರೆ. ಪೋಸ್ಟ್- ಕೊರಿಯರ್‌ ಇಲ್ಲದ ಈ ಸಮಯದಲ್ಲಿ “ಪತ್ರಿಕೆಯ ಮೂಲಕವೇ’ ತಮ್ಮ “ಮನದ ಮಾತುಗಳನ್ನು’ ಮನದನ್ನೆಗೆ
ದಾಟಿಸಿದ್ದಾರೆ…

ಪ್ರೀತಿಯ ಸರೂ,
ಹತ್ತು ವರ್ಷದಿಂದ ನಾವು ಮಾತಾಡುತ್ತಲೇ ಇದ್ದೇವೆ. ನೀನೀಗ ಅಮ್ಮನ ಮನೆಗೆ ಹೋಗಿರುವಾಗಲೂ, ದಿನಾ ಮಾತಾಡುತ್ತೇವೆ. ಅದೇ ಊಟ, ತಿಂಡಿ, ಮುನಿಸು- ದಿನದ ಮಾತಷ್ಟೇ, ಎದುರಾಬದುರಾ ಮನದ ಮಾತು, ಹೊರಬರುವುದೇ ಇಲ್ಲ ನೋಡು. ಅದಕ್ಕೇ ಈ ಪತ್ರ ಬರೆಯಲು ಕುಳಿತಿದ್ದೇನೆ, ಇದನ್ನು ನೀನೆಂದೂ ನೋಡಲಾರೆಯೆಂಬ ಭರವಸೆಯೇ ಇದಕ್ಕೆ ಸ್ಫೂರ್ತಿ. ಅಕಸ್ಮಾತ್‌ ನೋಡಿದೆಯೋ, ನಾನಲ್ಲೇ ನಾಚಿಕೆಗೇ ಸತ್ತೆ! ಅದ್ಯಾವುದೋ ಹಳೆಯಕಾಲದ ಯಕ್ಷ, ಪತ್ನಿಗೆ ಮೇಘ ಸಂದೇಶ ಕಳಿಸಿದನಂತೆ. ಮೋಡಕ್ಕೆ ಮಾತು ಬರುವುದಿಲ್ಲವೆಂಬುದು ಅವನಿಗೂ ಗೊತ್ತು ನೋಡು. ನೀನು ಮಕ್ಕಳನ್ನೂ ಕರಕೊಂಡು, ಇವತ್ತು ಹೋಗಿ ನಾಳೆ ಬರುತ್ತೇನೆಂದು ತೌರಿಗೆ ಹೋದೆ. ನಿಮ್ಮನ್ನು ಬಸ್ಸು ಹತ್ತಿಸಿ ಬಂದು ಟಿವಿ ಹಾಕಿದರೆ, ಪ್ರಧಾನಿಗಳ ಭಾಷಣ ಮೊಳಗುತ್ತಿತ್ತು. ಇಪ್ಪತ್ತೂಂದು ದಿನಗಳ ಲಾಕ್‌ಡೌನ್‌! “ಅಯ್ಯೋ ಶಿವನೇ…’ ತಲೆಗೆ ಕೈಹೊತ್ತು ಕುಳಿತೆ. ಇಪ್ಪತ್ತೂಂದು ದಿನಕ್ಕೆ ನೀನೂ ತಯಾರಿರಲಿಲ್ಲ, ನಾನೂ! ಓಡಿ ಹೋಗಿವಾಪಸ್‌ ಕರೆದುಕೊಂಡು ಬಂದುಬಿಡಲಾ ಅಂತ ಹುಚ್ಚುಯೋಚನೆ. ಪಾಪ, “ತೌರಸುಖ’ಕ್ಕೆ ನಾನೇಕೆ ಕಲ್ಲು ಹಾಕಲಿ, ಅಲ್ವಾ? ನಾಳೆಯಿಂದ ಆಫಿಸೂ ಇಲ್ಲ. ನಿನ್ನ ಕಲಕಲ, ದಡಬಡ, ವಟವಟ ಏನೂ ಇಲ್ಲ; ಇಡೀ ಮನೆಯಲ್ಲಿ ಒಬ್ಬನೆಂದರೆ ಒಬ್ಬನೇ – ಇದ್ದಕ್ಕಿದ್ದಂತೆ ಖುಷಿಯಿಂದ “ಹುರ್ರೆ…’ ಎಂದು ಕೂಗಬೇಕೆನಿಸಿ ಕ್ಷಣ ತಡೆದೆ, ಮರುಕ್ಷಣವೇ ಯಾರೂ ಇಲ್ಲವೆಂಬುದು ಗಮನಕ್ಕೆ ಬಂದು ಕೂಗಿಯೂ ಬಿಟ್ಟೆ.  ಏನಾಯಿತ್ರೀ ಮುಕುಂದ್‌ ರಾವ್‌? ಅಂತ ಎದುರುಮನೆಯ ಮುದುಕ ಬಾಗಿಲು ತಟ್ಟುತ್ತಾನೆಂದು ಕಾದೆ. ಯಾರೂ ಬರಲಿಲ್ಲ!

ಕಾಫಿ ಮಾಡಿಕೊಳ್ಳೋಣವೆಂದು ಅಡುಗೆಮನೆಗೆ ಹೋದೆ. ಸ್ಟವ್‌ ಪಕ್ಕದಲ್ಲೇ ಇದ್ದ ಪ್ಲಾಸ್ಕಿನಲ್ಲಿ, ನೀ ಮಾಡಿಟ್ಟು ಹೋದ ಕಾಫಿ ಬಿಸಿಬಿಸಿಯಾಗಿ ಪರಿಮಳ ಬೀರುತ್ತಿತ್ತು. ದಿನ ಬೆಳಗಾದರೆ ಜಗಳಾಡುತ್ತಿದ್ದರೂ, ನೀನಿಲ್ಲದ ಮನೆಯ ಬಗ್ಗೆ, ನೀನಿಲ್ಲದ ನನ್ನ ಬಗ್ಗೆ ಇಷ್ಟು ಯೋಚಿಸುತ್ತೀಯಲ್ಲೇ!  ಒಂದು ಕಪ್‌ ಕಾಫಿ ಬಗ್ಗಿಸಿಕೊಂಡು ಬಂದು ಕೂತೆ. ಕಾಫಿ ಗುಟುಕರಿಸುತ್ತಾ, ತುಸು ಹೊತ್ತು ನನ್ನಿಷ್ಟದ ಕಾದಂಬರಿ ಓದಿದೆ. ಹೊಟ್ಟೆ ಚುರುಗುಟ್ಟತೊಡಗಿತು. ಕರೆದು ಬಡಿಸಲು ನೀನಿಲ್ಲವೆಂಬುದು ನೆನಪಾಗಿ ಅಡುಗೆಮನೆಗೆ ಹೋದರೆ, ನನ್ನಿಷ್ಟದ ಬಿಸಿಬೇಳೆಬಾತ್‌, ಪಚ್ಚಡಿ! ಅರೇ, ಮಧ್ಯಾಹ್ನ ಊಟದಲ್ಲಿ ಇದಿರಲಿಲ್ಲ ಅಲ್ವೇನೇ? ಹೋಗುವಾಗ ಮಾಡಿಟ್ಟು ಹೋದೆಯಾ? ತಟ್ಟೆಗೊಂದಿಷ್ಟು ಹಾಕಿಕೊಂಡು ಬೆಡ್‌ ರೂಮಿಗೆ ಬಂದೆ. ಒಗೆದ ಶೀಟು ಹಾಸಿ, ಓರಣವಾಗಿದ್ದ ಮಂಚ ಕರೆಯಿತು. ಮಂಚದ ಮೇಲೇ ಕುಳಿತು ಟೀವಿ ನೋಡುತ್ತಾ ತಿಂದೆ (ನೀನಿದ್ದಿದ್ದರೆ ಎಷ್ಟು ರಂಪ ಮಾಡಿರುತ್ತಿದ್ದೆ ನೆನಪಿಸಿಕೋ). ನೀನಿಲ್ಲದ ಅರಾಜಕತೆಯನ್ನು ಇಷ್ಟೂ ಅನುಭವಿಸದಿದ್ದರೆ ಹೇಗೆ? ತಟ್ಟೆಯನ್ನು ಸಿಂಕಿಗೆ ಹಾಕದೇ ಅಲ್ಲೇ ಪಕ್ಕಕ್ಕಿಟ್ಟೆ. ಜೋರು ವಾಲ್ಯೂಮಿನಲ್ಲಿ ನನ್ನಿಷ್ಟದ ಮಿಡ್‌ನೈಟ್‌ ಶೋ ನೋಡುತ್ತಾ ನಿದ್ದೆಗೆ ಜಾರಿದೆ – ಮಂಚಕ್ಕೆಲ್ಲಾ ನಾನೊಬ್ಬನೇ, ತಲೆಬದಿಗೆ ಕಾಲು ಹಾಕಿದರೂ ಕೇಳುವವರಿಲ್ಲ. ಎಂತಹ ಸೊಗಸಾದ ನಿದ್ದೆ ಅಂತೀಯಾ? ಬೆಳಗ್ಗೆ ಆಟೊಮ್ಯಾಟಿಕ್ಕಾಗಿ ಶುರುವಾದ ರೇಡಿಯೋ ಚಿತ್ರಗೀತೆ ಹಾಡುತ್ತಿತ್ತು. “ನನ್ನವಳು ನನ್ನೆದೆಯ
ಹೊನ್ನಾಡನಾಡುವಳು ಬೆಳಗುಗೆನ್ನೆಯ ಚೆಲುವೆ ನನ್ನ ಮಡದಿ…’

ನನಗೆ ಧಿಗ್ಗನೆ ಎಚ್ಚರ. ಆಗಲೇ ಬೆಳಗ್ಗೆ ಏಳೂಮುಕ್ಕಾಲು. ಲೇಟಾಯ್ತು ಅಂತ ಒಂದು ಕ್ಷಣ ಗಾಬರಿಯಾದರೂ, ಲಾಕ್‌ ಡೌನ್‌, ಬೇಗ ಎದ್ದೇಳುವ ಕೆಲಸವಿಲ್ಲ ಅಂತ ನೆನಪಾಗಿ ಮಗ್ಗುಲು ಬದಲಿಸಿದೆ. ಅಭ್ಯಾಸ ಬಲದಿಂದೆಂಬಂತೆ ಹಾಗೇ ಪಕ್ಕಕ್ಕೆ ಕೈ ಚಾಚಿದೆ- ಎಂದಿನ ನಿನ್ನ ಚಿರಪರಿಚಿತವಾದ ಸ್ಪರ್ಶ ಕೈಗೆಟುಕಲಿಲ್ಲ (ಎಂಥಾ ಹಿತವಿತ್ತೇ ಅದರಲ್ಲಿ!). ದಿನಾ ಇಷ್ಟುಹೊತ್ತಿಗೆ ದೊಡ್ಡ ಮಗ್ಗಿನ ತುಂಬ ಟೀ ತುಂಬಿಕೊಂಡು ನನ್ನನ್ನು ಎಚ್ಚರಿಸುತ್ತಿದ್ದಿ, ಇಬ್ಬರೂ ಒಟ್ಟಿಗೇ ಕುಳಿತು ಒಂದೇ ಮಗ್ಗಿನಲ್ಲಿ ಟೀ ಹೀರುತ್ತಿದ್ದೆವು (ನೀನೂ ಮಳ್ಳಿಯೇ ಇದ್ದೀಯೆ ಬಿಡು. ದಿನಾ ಜಗಳ ಕಾದರೂ, ಇದೊಂದು ಮಾತ್ರ ಹಕ್ಕಿನಂತೆ ಉಳಿಸಿಕೊಂಡು ಬಂದಿದ್ದೀ ಇಷ್ಟು ವರ್ಷವಾದರೂ! ನಾನೂ ದಿನಾ ಇದಕ್ಕಾಗೇ ಎದುರು ನೋಡ್ತೀನಿ). ಇವತ್ತು ಈ ಕ್ರಮ ತಪ್ಪಿಹೋಗಿ, ದಿನವೇ ಶುರುವಾಗಲಿಲ್ಲವೇ ಸರೂ! ಕೊನೆಗೊಮ್ಮೆ ಹೊಟ್ಟೆ ಚುರುಗುಟ್ಟತೊಡಗಿದಾಗ ಹೇಗೋ ಎದ್ದೆ. ಸ್ನಾನ ಸುರುವಿಕೊಂಡು, ನಿನ್ನೆಯದೇ ಉಳಿದ ಅಡುಗೆ ತಿಂದೆ. ಮಧ್ಯಾಹ್ನದ ಊಟದ ಚಿಂತೆ ಆಗಲೇ ಕಾಡತೊಡಗಿತು.

ಅಲ್ಲ, ನನಗೇನು ಅನ್ನ- ಸಾರು ಮಾಡಿಕೊಳ್ಳಲು ಬರಲ್ಲ ಎನ್ನಬೇಡ – ಚಪಾತಿ, ದೋಸೆಗಳು ನನ್ನ ಕೈಲೂ ಚಂದ್ರಮಂಡಲವೇ ಆಗುತ್ತವೆ, ರಾಗಿಮುದ್ದೆ, ಭೂಗೋಳವೇ ಆಗುತ್ತದೆ, ದೋಸೆಯೊಂದು ಮಾತ್ರ ಕಾವಲಿಯನ್ನಪ್ಪಿ, ಎಬ್ಬಿದರೆ ಹರಕಂಗಿಯಾಗುತ್ತದೆ. ಏನೀಗ? ಯಾರು ತಿನ್ನಬೇಕು ಹೇಳು, ನಾನು ತಾನೆ? ನೋಡಿ ನಗಲು ನೀನೂ ಇಲ್ಲವಲ್ಲ. ಇವತ್ತಿಗೆ 21 ದಿನವೇ ಮಾರಾಯ್ತಿ. ಬದುಕು ಬೇಸರವಾಗಿದೆ. ಆಣೆ ಮಾಡಿ ಹೇಳುತ್ತೇನೆ, ನೀನಿಲ್ಲದೇ 21 ದಿನ ಕಳೆದೆನಾ ಅಂತ ನನಗೇ ನಂಬಲಾಗುತ್ತಿಲ್ಲ. ಸಾಯ್ಲಿ ಆ ಕೋವಿಡ್ – ಹೇಗೋ ಸದ್ಯ, ನಾಳೆ ಒಮ್ಮೆ ಬಂದು ಸೇರಿಬಿಡು ಪುಣ್ಯಾತಿಗಿತ್ತಿ. ನೀನು ಏನು ಮಾಡಿ ಹಾಕಿದರೂ ಕಮಕ್ಕಿಮಕ್ಕೆನ್ನದೇ, ಚಪ್ಪರಿಸಿಕೊಂಡು ತಿನ್ನುತ್ತೇನೆ. “ಒಂದು ಹೆಣ್ಣಿಗೊಂದು ಗಂಡು ಹೇಗೊ ಸೇರಿ ಹೊಂದಿಕೊಂಡು’ ಒಟ್ಟಿಗೆ ಟೀ ಕುಡಿದುಕೊಂಡು ಬದುಕಿಬಿಡೋಣ. ಮೊನ್ನೆ ಅಂಗಡಿಗೆ ಹೋದಾಗ ಶಾವಿಗೆ, ದ್ರಾಕ್ಷಿ ಗೋಡಂಬಿ ಎಲ್ಲಾ  ತಂದಿಟ್ಟಿದ್ದೇನೆ. ನೀನು ಮನೆ ಸೇರುವ ಹೊತ್ತಿಗೆ ನಿನ್ನಿಷ್ಟದ ಶಾವಿಗೆ ಪಾಯಸ ಮಾಡಿಟ್ಟಿರುತ್ತೇನೆ.

ಇಂತಿ ನಿನ್ನ
ಮುಕುಂದ

ಪತ್ರ ಬರೆದು ದಿಂಬಿನಡಿಯಿಟ್ಟ ಮುಕುಂದ, ಟಿವಿ ಹಚ್ಚಿದ.
ಪ್ರಧಾನಿಗಳು ಮತ್ತೂಮ್ಮೆ ಹೇಳುತ್ತಿದ್ದರು: “ದೇಸ್‌
ವಾಸಿಯೋಂ, ತೀನ್‌ ಮೈ ತಕ್‌ ಲಾಕ್‌ ಡೌನ್‌ ಔರ್‌ ಬಢಾನಾ
ಪಡೇಗಾ…’ ದಸಕ್ಕನೆ ಕುಸಿದು ಕುಳಿತ ಮುಕುಂದ.
ಮುಂದಿನದು ಕೇಳಲಾಗಲಿಲ್ಲ. ತಲೆಕೊಡವಿ ರೇಡಿಯೊ
ಹಚ್ಚಿದ. ಮಿರ್ಜಾ ಘಾಲಿಬ್‌ನ ಗೀತೆಯೊಂದು ತೇಲಿ
ಬರುತ್ತಿತ್ತು:

ಏ ನ ಥೀ ಹಮಾರಿ ಕಿಸ್ಮತ್‌ ಕಿ
ವಿಸಾಲ್-ಏ-ಯಾರ್‌ ಹೋತಾ
ಅಗರ್‌ ಔರ್‌ ಜೀತೇ ರೆಹತೇ
ಯಹೀ ಇಂತೆಜಾರ್‌ ಹೋತಾ…

ಮಂಜುನಾಥ ಕೊಳ್ಳೇಗಾಲ

ಟಾಪ್ ನ್ಯೂಸ್

Jayaprakash Hegde “ಉತ್ತಮ ಕೆಲಸ ಮಾಡಿಸಿಕೊಳ್ಳಬೇಕಾದ ಅವಶ್ಯಕತೆ ಮತದಾರರಿಗಿದೆ’

Jayaprakash Hegde “ಉತ್ತಮ ಕೆಲಸ ಮಾಡಿಸಿಕೊಳ್ಳಬೇಕಾದ ಅವಶ್ಯಕತೆ ಮತದಾರರಿಗಿದೆ’

Kundapura “ಪ್ರವಾಸೋದ್ಯಮ ಅಭಿವೃದ್ಧಿಗಾಗಿ ಗೆಲ್ಲಿಸಿ’: ಜಯಪ್ರಕಾಶ್‌ ಹೆಗ್ಡೆKundapura “ಪ್ರವಾಸೋದ್ಯಮ ಅಭಿವೃದ್ಧಿಗಾಗಿ ಗೆಲ್ಲಿಸಿ’: ಜಯಪ್ರಕಾಶ್‌ ಹೆಗ್ಡೆ

Kundapura “ಪ್ರವಾಸೋದ್ಯಮ ಅಭಿವೃದ್ಧಿಗಾಗಿ ಗೆಲ್ಲಿಸಿ’: ಜಯಪ್ರಕಾಶ್‌ ಹೆಗ್ಡೆ

Malpe ಮೀನುಗಾರಿಕೆ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ: ಜೆ.ಪಿ. ಹೆಗ್ಡೆ

Malpe ಮೀನುಗಾರಿಕೆ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ: ಜೆ.ಪಿ. ಹೆಗ್ಡೆ

Rahul Gandhi: ಜಾತಿಗಣತಿಯನ್ನು ಯಾವ ಶಕ್ತಿಯೂ ತಡೆಯಲಾರದು: ರಾಹುಲ್‌ ಗಾಂಧಿ

Rahul Gandhi: ಜಾತಿಗಣತಿಯನ್ನು ಯಾವ ಶಕ್ತಿಯೂ ತಡೆಯಲಾರದು: ರಾಹುಲ್‌ ಗಾಂಧಿ

Sagara: ಮಹಿಳೆಯ ಗರ್ಭಕೋಶದಲ್ಲಿದ್ದ 7 ಕೆಜಿ ಗಡ್ಡೆ ಹೊರತೆಗೆದ ವೈದ್ಯರು

Sagara: ಮಹಿಳೆಯ ಗರ್ಭಕೋಶದಲ್ಲಿದ್ದ 7 ಕೆಜಿ ಗಡ್ಡೆ ಹೊರತೆಗೆದ ವೈದ್ಯರು

Sirsi: ಏ. 28ಕ್ಕೆ ಶಿರಸಿಗೆ ಪ್ರಧಾನಿ ಮೋದಿ… ಸಿದ್ಧತೆ ಆರಂಭ: ಕಾಗೇರಿ

Sirsi: ಏ. 28ಕ್ಕೆ ಶಿರಸಿಗೆ ಪ್ರಧಾನಿ ಮೋದಿ… ಸಿದ್ಧತೆ ಆರಂಭ: ಕಾಗೇರಿ

ಮೂಲಭೂತ ಸೌಕರ್ಯ ಕೊಡಿ ಎಂದಿದ್ದೇನೆ ಹೊರತು, ಒಕ್ಕಲೆಬ್ಬಿಸಿ ಎಂದಿಲ್ಲ; ಬೇಳೂರು ಸ್ಪಷ್ಟನೆ

ಮೂಲಭೂತ ಸೌಕರ್ಯ ಕೊಡಿ ಎಂದಿದ್ದೇನೆ ಹೊರತು, ಒಕ್ಕಲೆಬ್ಬಿಸಿ ಎಂದಿಲ್ಲ; ಬೇಳೂರು ಸ್ಪಷ್ಟನೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಪರೂಪದ ಅತಿಥಿ

ಅಪರೂಪದ ಅತಿಥಿ

Untitled-2

ಅವತಾರಪುರುಷ ಶ್ರೀರಾಮ

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಮಾವಿನ ಬಗ್ಗೆ ಮನದ ಮಾತು…

ಮಾವಿನ ಬಗ್ಗೆ ಮನದ ಮಾತು…

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Jayaprakash Hegde “ಉತ್ತಮ ಕೆಲಸ ಮಾಡಿಸಿಕೊಳ್ಳಬೇಕಾದ ಅವಶ್ಯಕತೆ ಮತದಾರರಿಗಿದೆ’

Jayaprakash Hegde “ಉತ್ತಮ ಕೆಲಸ ಮಾಡಿಸಿಕೊಳ್ಳಬೇಕಾದ ಅವಶ್ಯಕತೆ ಮತದಾರರಿಗಿದೆ’

Kundapura “ಪ್ರವಾಸೋದ್ಯಮ ಅಭಿವೃದ್ಧಿಗಾಗಿ ಗೆಲ್ಲಿಸಿ’: ಜಯಪ್ರಕಾಶ್‌ ಹೆಗ್ಡೆKundapura “ಪ್ರವಾಸೋದ್ಯಮ ಅಭಿವೃದ್ಧಿಗಾಗಿ ಗೆಲ್ಲಿಸಿ’: ಜಯಪ್ರಕಾಶ್‌ ಹೆಗ್ಡೆ

Kundapura “ಪ್ರವಾಸೋದ್ಯಮ ಅಭಿವೃದ್ಧಿಗಾಗಿ ಗೆಲ್ಲಿಸಿ’: ಜಯಪ್ರಕಾಶ್‌ ಹೆಗ್ಡೆ

Malpe ಮೀನುಗಾರಿಕೆ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ: ಜೆ.ಪಿ. ಹೆಗ್ಡೆ

Malpe ಮೀನುಗಾರಿಕೆ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ: ಜೆ.ಪಿ. ಹೆಗ್ಡೆ

Subramanya ಏನೆಕಲ್ಲು: ಕಾರಿಗೆ ಗೂಡ್ಸ್‌ ಆಟೋ ಢಿಕ್ಕಿ

Subramanya ಏನೆಕಲ್ಲು: ಕಾರಿಗೆ ಗೂಡ್ಸ್‌ ಆಟೋ ಢಿಕ್ಕಿ

Rahul Gandhi: ಜಾತಿಗಣತಿಯನ್ನು ಯಾವ ಶಕ್ತಿಯೂ ತಡೆಯಲಾರದು: ರಾಹುಲ್‌ ಗಾಂಧಿ

Rahul Gandhi: ಜಾತಿಗಣತಿಯನ್ನು ಯಾವ ಶಕ್ತಿಯೂ ತಡೆಯಲಾರದು: ರಾಹುಲ್‌ ಗಾಂಧಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.