ಇಷ್ಟ್ ಬೇಗ ಇದೆಲ್ಲಾ ಬೇಕಿತ್ತು…

Team Udayavani, Mar 20, 2019, 12:30 AM IST

ಗಂಡ ತೀರಿಕೊಂಡ ಮೇಲೆ ಹೆಣ್ಣೊಬ್ಬಳು ಉದ್ಯೋಗಕ್ಕೆ ಹೋಗಬೇಕಾ? ಮನೆಯಲ್ಲಿರಬೇಕಾ? ಇನ್ನೊಂದು ಮದುವೆಯಾಗಬೇಕಾ ಎಂಬುದೆಲ್ಲ ಅವಳ, ಹೆಚ್ಚೆಂದರೆ ಅವಳ ಕುಟುಂಬದ ಅತ್ಯಂತ ಖಾಸಗಿ ವಿಚಾರ. ಅದನ್ನು ಚರ್ಚಿಸುವ, ನಿರ್ಧರಿಸುವ ಹಕ್ಕು ಸಮಾಜಕ್ಕಿಲ್ಲ… 

ಮೊದಲಿಗೆ ನಿಜವಾಗಿ ನಡೆದ ಎರಡು ಘಟನೆಗಳನ್ನು ಹೇಳುತ್ತೇನೆ ನಿಮಗೆ…
ಒಂದು: ಅವನು ಮದುವೆಯಾಗಿ ಏಳು ವರ್ಷವಾಗಿತ್ತು. ಐದು ವರ್ಷದ ಮುದ್ದಾದ ಹೆಣ್ಣುಮಗುವೂ ಇತ್ತು. ಇದ್ದಕ್ಕಿದ್ದಂತೆ ಜ್ವರ ಬಂದು ಹೆಂಡತಿ ತೀರಿಕೊಂಡಳು. ವರ್ಷ ಮುಗಿಯುವುದರೊಳಗೆ ಶುಭ ಕಾರ್ಯವಾಗಬೇಕು ಅಂದರು. ಅವನು ಒಪ್ಪಿದ. ಜೇಬಿನಲ್ಲಿದ್ದ ಹೆಂಡತಿಯ ಫೋಟೋ ಜಾಗದಲ್ಲಿ ಹೊಸ ಫೋಟೋ ಬಂತು. ಸತ್ತ ಹೆಂಡತಿಯ ಮನೆಯವರೂ ಸೇರಿದಂತೆ ಎಲ್ಲರಿಗೂ ಸಂತೋಷವಾಯಿತು. 

ಎರಡು: ಅವರಿಬ್ಬರಿಗೂ ನಿಜವಾಗಿ ಮದುವೆಯಾಗುವ ವಯಸ್ಸು ಆಗಿರಲೇ ಇಲ್ಲ. ಬಾಲ್ಯ ವಿವಾಹವನ್ನು ತಡೆಯಲು ಯಾರೂ ಇಲ್ಲದೇ ಅದು ನಡೆದುಹೋಗಿತ್ತು. ಹದಿನಾರರ ಅವಳು, ಹತ್ತೂಂಬತ್ತರ ಅವನು ಗಂಡ- ಹೆಂಡತಿಯಾದರು. ಬಿಸಿರಕ್ತದ ವೇಗಕ್ಕೆ ಹೆಲ್ಮೆಟ್‌ ಇರದ ತಲೆ ಕೊಟ್ಟು, ಅವನ ಜೀವ ಹಾರಿತ್ತು. ಅದಾದ ತಿಂಗಳಾರಕ್ಕೆ ಅವಳ ಚಿಕ್ಕಪ್ಪನ ಮನೆ ಗೃಹಪ್ರವೇಶ. ಅವಳು ಸಿಂಗರಿಸಿಕೊಂಡಿದ್ದಳು. ಅವಳದೇ ವಯಸ್ಸಿನ ಹುಡುಗಿಯರೊಂದಿಗೆ ನಿಂತು ಸೆಲ್ಫಿ ತೆಗೆಸಿಕೊಂಡಳು. ಜನ ಇನ್ನಿಲ್ಲದಂತೆ ವ್ಯಂಗ್ಯ ಆಡಿದರು. ಲಿಪ್‌ಸ್ಟಿಕ್‌ ಹಾಕಂಡ್‌ ಬಂದಿದಾಳಲ್ಲ ಅಂತ ಕುಹಕವಾಡಿ ಚುಚ್ಚಿದರು. ವರ್ಷದೊಳಗೆ ಮದುವೆ ಮಾಡಿದರೆ ಶುಭ ಎಂಬುದು ಇವಳಿಗಲ್ಲ. ಮನೆ ಮಗನ ವೈರಾಗ್ಯ ಮುರಿಯಲಿಕ್ಕೊಂದು ಶುಭದ ನೆಪ. ಇವಳಿಗಾದರೋ ಲಿಪ್‌ಸ್ಟಿಕ್‌, ಪೌಡರಿಗೂ ವೈರಾಗ್ಯವಿರಲಿ. ಜೀವನಪೂರಾ ಇದ್ದರೆ, ಆಹಾ ಮಹಾ ಪತಿವ್ರತೆ. ಹೊಸಕನಸಿಗೆ ಬಿದ್ದಳ್ಳೋ, ಬಾಯಿಗೆ ಆಹಾರ.

ಗಂಡ ತೀರಿಕೊಂಡ ಮೇಲೆ ಚೆಂದದ ಸೀರೆ ಉಟ್ಟು, ಕನ್ನಡಿಯಲಿ ಮುಖ ತೀಡಿಕೊಂಡರೆ ಮಾತಾಡುವ ಈ ಸಮಾಜ, ಗಂಡ ಸತ್ತ ಸ್ವಲ್ಪ ದಿನಗಳಲ್ಲಿ ಸಾರ್ವಜನಿಕ ಬದುಕಿಗೆ ಪ್ರವೇಶ ಪಡೆಯುವೆ ಅಂದರೆ ಸುಮ್ಮನಿರುತ್ತದೆಯೇ? ಯಾವಾಗ? ಆ ನಿರ್ಧಾರ ಮತ್ತದೇ ಪುರುಷ ಸಮಾಜದ್ದಾಗಿದ್ದಾಗ. ಇತ್ತೀಚೆಗೆ ರಾಜಕೀಯ ರಂಗ ಇಂಥ ಕಠೊರ ಮಾತಿಗೆ ಸಾಕ್ಷಿ ಬರೆದಿದ್ದು ನಿಮ್ಮ ಕಣ್ಣೆದುರೂ ಇದ್ದಿರಬಹುದು. ಆ ಮಾತು ಅವರಾಡಿದ್ದಾರೆ ನಿಜ. ಆಡದೆಯೂ ಅನೇಕರ ಮನಸ್ಸಿನಲ್ಲಿ “ಇಷ್ಟ್ ಬೇಗ ಇದೆಲ್ಲ ಬೇಕಿತ್ತಾ?’ ಎಂಬ ಭಾವನೆ ಇದ್ದಿದ್ದು ಹೌದು. ವೈಯಕ್ತಿಕ ನೋವು ನಲಿವುಗಳಿಗೆ ಸಾರ್ವಜನಿಕರು ಸಮಯದ ಮಿತಿ ಹೇರುವ ಬಗೆ ಇದು. ನಮ್ಮ ಸಮಾಜದ್ದು. 

 ಗಂಡ- ಹೆಂಡತಿ ಎಂಬ ಸಂಬಂಧದಲ್ಲಿ ಎಲ್ಲರೆದುರೂ ಆಡಲಾರದ ಅದೆಷ್ಟೋ ಗುಟ್ಟುಗಳಿರುತ್ತವೆ. ಅವನು ತೀರಿಕೊಂಡ ಮೇಲೆ ಅವಳ ಒಳಗೆ ಏನಾಗುತ್ತಿದೆ ಎಂಬುದು ಅವಳೊಬ್ಬಳಿಗೆ ಮಾತ್ರ ಗೊತ್ತು. ಕುಡಿದು ಬಡಿವ, ಅನುಮಾನಿಸುವ, ನಿತ್ಯ ಹಿಂಸೆ ಕೊಡುವ ಗಂಡ ಸತ್ತವಳಿಗೆ ನೋವೇ ಆಗುವುದೋ, ನಿಟ್ಟುಸಿರೇ ಸಿಗುವುದೋ ಬಲ್ಲವರು ಯಾರು? ನಿನ್ನ ಗಂಡ ಸತ್ತ ಮೇಲೆ ನೀನು ದುಃಖಪಡಲೇಬೇಕು. ನಿಟ್ಟುಸಿರು ಬಿಡಕೂಡದು ಅಂತ ಅವಳಿಗೆ ಹೇಳಲು ಸಮಾಜಕ್ಕೆ ಹಕ್ಕಿದೆಯೇ? ಅವಳ ಎದೆಯಲ್ಲಿ ವಿವರಿಸಲಾರದಷ್ಟು ನೋವಿರಬಹುದು. ಆದರೆ ಅವಳು, “ಅವನು ಸತ್ತೇ ಇಲ್ಲ. ನನ್ನ ನೆನಪುಗಳಲ್ಲಿ ಬದುಕಿದ್ದಾನೆ’ ಅಂತ ನಂಬಿ ನಡೆಯಬಹುದು. ಆ ನಂಬಿಕೆ ಅವಳ ದಿನಚರಿಯನ್ನು ಒಂದಿಷ್ಟೂ ಬದಲಿಸದಿರಬಹುದು. ಅದು ಅವಳ ಖಾಸಗಿತನ. ಇವಳೇನು ಹೀಗಿದ್ದಾಳೆ ಅಂತ ಕೇಳಲು ನಾವ್ಯಾರು? ಗಂಡ ಸತ್ತ ಮೇಲೆ ಹೆಣ್ಣೊಬ್ಬಳು ಉದ್ಯೋಗRಕೆ ಹೋಗಬೇಕಾ? ಮನೆಯಲ್ಲಿರಬೇಕಾ? ಇನ್ನೊಂದು ಮದುವೆಯಾಗಬೇಕಾ ಎಂಬುದೆಲ್ಲ ಅವಳ, ಹೆಚ್ಚೆಂದರೆ ಅವಳ ಕುಟುಂಬದ ಅತ್ಯಂತ ಖಾಸಗಿ ವಿಚಾರ. ಅದನ್ನು ಚರ್ಚಿಸುವ, ನಿರ್ಧರಿಸುವ ಹಕ್ಕು ಸಮಾಜಕ್ಕಿಲ್ಲ. ಚುನಾವಣೆಯ ವಿಷಯವಾದರೂ ಅಷ್ಟೇ. ಗಂಡ ಸತ್ತ ಹೊಸದು. ನೀನು ಅಳುತ್ತಾ ಕೂರುವುದು ಬಿಟ್ಟು ಚುನಾವಣೆಗೆ ನಿಲ್ಲುವುದಾ? ಭಾಷಣ ಮಾಡುವುದಾ? ಅಂತ ಯಾರೂ ಕೇಳುವಂತಿಲ್ಲ. ಓಟು ಹಾಕುವುದು, ಬಿಡುವುದು ಜನರ ಇಷ್ಟ. ಆದರೆ, “ಗಂಡ ಸತ್ತ ಹೊಸದರಲ್ಲೇ ಇದೆಲ್ಲ ಬೇಕಿತ್ತಾ?’ ಅಂತ ಕೇಳುವಂತಿಲ್ಲ. ಅದು ಅತ್ಯಂತ ಹೀನ ಮಾತು. 

ಸಂಗಾತಿಯನ್ನು ಕಳೆದುಕೊಂಡ ನಂತರದ ದುಃಖ ಯಾವಾಗ ಕೊನೆಯಾಗಬಹುದು? ಇಷ್ಟನೇ ದಿನ, ತಿಂಗಳು, ವರುಷ? ಇದಕ್ಕೆ ಗೆರೆ ಹಾಕಿದಂಥ ಉತ್ತರ ಯಾರ ಬಳಿಯಲ್ಲಾದರೂ ಉಂಟಾ? ಇದೂ ಅತ್ಯಂತ ವೈಯಕ್ತಿಕ ವಿಚಾರ. ತನ್ನ ಕಣ್ಣೀರು ಒರೆಸಿಕೊಂಡು ಇನ್ನು ನಾನು ಹೊಸ ಬದುಕಿಗೆ ಸಿದ್ಧ ಅಂತ ಹೊರಡುವ ಸಮಯ ಅವರವರದು. ಕಣ್ಣೀರು ಹಾಕುವುದೇ ಇಲ್ಲ ಅಂತ ನಿರ್ಧರಿಸಿದರೂ ಅದು ಅವಳ ಇಷ್ಟ. ಅಯ್ಯೋ, ಗಂಡ ಸತ್ತ ಅಂತ ಅವಳು ಅಳಲೇ ಇಲ್ಲ ಅನ್ನಲು ಯಾರಿಗೆ ಹಕ್ಕಿದೆ? ಆದರೆ, ಹಳ್ಳಿಯಿಂದ ಪಟ್ಟಣದವರೆಗೆ, ಕುಡುಕನ ಹೆಂಡತಿಯಿಂದ ಸೆಲೆಬ್ರಿಟಿಗಳವರೆಗೆ ನಮ್ಮ ಸಮಾಜ ಯಾರನ್ನೂ ಬಿಡದೇ ಹಕ್ಕು ಚಲಾಯಿಸುತ್ತದೆ.  

ಖಾಸಗೀತನದ ಮೆಲೆ ದಾಳಿ ಮಾಡುವುದು ಮತ್ತು ವೈಯಕ್ತಿಕ ಸ್ಪೇಸ್‌ ಕೊಡದೇ ಎಲ್ಲಕ್ಕೂ ಮೂಗು ತೂರಿಸುವುದು ಭಾರತೀಯ ಸಮಾಜದ ಲಕ್ಷಣವೇನೋ. ಅದರಲ್ಲೂ ಹೆಣ್ಣುಮಕ್ಕಳಿಗೆ ವೈಯಕ್ತಿಕ ಹಕ್ಕು ಮತ್ತು ಸ್ಪೇಸ್‌ ಕೊಡಬೇಕೆನ್ನುವುದು ನಾವಿನ್ನೂ ಕಲಿಯಬೇಕಾದ, ಕಲಿಯುತ್ತಿರುವ ಪಾಠ. ಹೆಂಡತಿ ಸತ್ತ ಆರು ತಿಂಗಳೊಳಗೆ ಗಂಡ ನಾನೊಬ್ಬನೇ ಟ್ರಿಪ್‌ ಹೋಗಿ ಬರುವೆ ಅಂದರೆ ದುಃಖ ಮರೆಯಲಿಕ್ಕೆ ಅಂತ ಕರುಣೆ ತೋರುವ ನಾವು, ಗಂಡ ಸತ್ತ ಆರು ತಿಂಗಳಲಿ ಅದೇ ಮಾತನ್ನು ಹೆಣ್ಣು ಆಡಿದರೆ ಯಾರೋ ಕೆಲವರ ಹೊರತು, ಬಹುತೇಕ ಈ ಸಮಾಜ ಹೇಗೆ ಪ್ರತಿಕ್ರಿಯಿಸುತ್ತದೆ ಅನ್ನುವುದರಲ್ಲೇ ನಮ್ಮ ಬೇಧ ನೀತಿ ಇದೆ.

ಲಿಪ್‌ಸ್ಟಿಕ್ಕಿಗೂ ಬೇಗುದಿಗೂ ಏನ್ರೀ ಸಂಬಂಧ?
ಸಾಹಸಸಿಂಹ ವಿಷ್ಣುವರ್ಧನ್‌ ತೀರಿಕೊಂಡಾಗಲೂ ಇದೇ ಆಗಿತ್ತು. ಭಾರತಿಯವರು ಗೊಳ್ಳೋ ಅಂತ ಅಳಲಿಲ್ಲ. ಗಂಭೀರವದನರಾಗಿದ್ದರು. ಅಂತ್ಯಕ್ರಿಯೆ ವೇಳೆ ನೀಟಾಗಿ ರೆಡಿಯಾಗಿದ್ದರು. ಯಾಕೋ ಅನೇಕರಿಗೆ ಇದು ಇಷ್ಟವಾದಂತಿರಲಿಲ್ಲ. ಟಿ.ವಿ. ನೋಡುತ್ತಿದ್ದ ಅನೇಕರು “ಗಂಡ ಸತ್ತಿದ್ರೂ ಎಷ್ಟ್ ಚೆನಾಗ್‌ ರೆಡಿಯಾಗ್‌ ಬಂದಿದಾರೆ. ಅಳಲೇ ಇಲ್ಲ. ಲಿಪ್‌ಸ್ಟಿಕ್‌ ಬೇರೆ ಹಾಕಿದಾರೆ’ ಅಂತ ಕಮೆಂಟು ಪಾಸ್‌ ಮಾಡಿದ್ದುಂಟು. ತುಟಿಯ ಮೇಲಿನ ಲಿಪ್‌ಸ್ಟಿಕ್‌ ಎದೆಯೊಳಗಿನ ಬೇಗುದಿಯ ಅಳತೆಮಾಪನವೇ?

ಕುಸುಮಬಾಲೆ


ಈ ವಿಭಾಗದಿಂದ ಇನ್ನಷ್ಟು

  • ಹಿಂದೆಲ್ಲಾ ಮದುವೆಗೆ ಇನ್ನೂ ನಾಲ್ಕೈದು ದಿನ ಇರುವಾಗಲೇ ವಧು- ವರನ ಮನೆ ಬಂಧುಗಳಿಂದ, ಆಪ್ತೆಷ್ಟರಿಂದ ತುಂಬಿ ಹೋಗುತ್ತಿತ್ತು. ಮದುವೆ ಮನೆಯ ಕೆಲಸಗಳಲ್ಲಿ ಊರ ಮಂದಿಯೂ...

  • ಬೇಸಿಗೆಯಲ್ಲಿ ತಂಪಾಗಿರಿಸುವ ಮತ್ತು ಚಳಿಗಾಲದಲ್ಲಿ ಬೆಚ್ಚಗಿರಿಸುವ ಖಾದಿ ಮತ್ತು ಹತ್ತಿಯ ಕುರ್ತಿಗಳಿಗೆ ಬೇಡಿಕೆ ಹೆಚ್ಚು. ಇವನ್ನು ವಿಶೇಷ ಸಮಾರಂಭಗಳಿಗೆ ತೊಡಬಹುದು....

  • ಮನೆಯಲ್ಲಿ ಎಲ್ಲರಿಗಿಂತ ಲೇಟಾಗಿ ಮಲಗಿ, ಎಲ್ಲರಿಗಿಂತ ಬೇಗ ಏಳುವವಳು ಅಮ್ಮ. ನಿತ್ಯವೂ ಎಂಟು ಗಂಟೆ ನಿದ್ದೆ ಮಾಡಲೇಬೇಕು ಅಂತ ಯಾರೇ ಹೇಳಿದರೂ, ಕೆಲಸದೊತ್ತಡ ಅವಳ...

  • ಈಗಷ್ಟೇ ಮದುವೆಯಾದ ಹುಡುಗಿಯರೇನಾದರೂ, "ನಂಗೆ ಹುಳಿ ತಿನ್ಬೇಕು ಅನ್ನಿಸ್ತಿದೆ' ಅಂದುಬಿಟ್ಟರೆ, ಎಲ್ಲರೂ ಕಣ್ಣರಳಿಸಿ ಕೇಳುವುದೊಂದೇ, "ಏನೇ, ಪ್ರಗ್ನೆಂಟಾ?' ಅಂತ....

  • ಬೇಸಿಗೆಯ ಈ ಕಾಲದಲ್ಲಿ, ಧಗೆಯಿಂದಾಗಿ ಬಾಯಾರಿಕೆ ಹೆಚ್ಚಾಗುತ್ತದೆ. ಎಷ್ಟು ನೀರು ಕುಡಿದರೂ ಸಾಲದು ಅನ್ನೋ ಪರಿಸ್ಥಿತಿ. ನೀರು ಕುಡಿಯದಿದ್ದರೆ, ಆರೋಗ್ಯ ಹದಗೆಡುತ್ತದೆ....

ಹೊಸ ಸೇರ್ಪಡೆ