ಅಮ್ಮನಿಗೆ ಚಳಿಯೇ ಆಗ್ತಿರಲಿಲ್ವಾ…?

Team Udayavani, Nov 13, 2019, 5:15 AM IST

ದಿನ ಅಮ್ಮಂದಿರಿಗೆ ಚಳಿಯಿದ್ದೂ ಚಳಿಯಿರಲಿಲ್ಲ. ಕಷ್ಟಗಳಿದ್ದರೂ ಅದರ ಬಗ್ಗೆ ಕೊರಗುಗಳಿರಲಿಲ್ಲ. ನಾಲ್ಕು ಗೋಡೆಗಳ ಮಧ್ಯೆ ಇದ್ದರೂ ಸ್ವಾತಂತ್ರ್ಯದಿಂದ ವಂಚಿತರಾಗಿದ್ದೇವೆ ಎನಿಸಿರಲಿಲ್ಲ. ಈಗ ಕಾಲ ಬದಲಾಗಿದೆ. ಅಮ್ಮಂದಿರ ಪರಿಸ್ಥಿತಿ ಬದಲಾಗಿದೆ.

ನಾವೆಲ್ಲಾ ಆಗಿನ್ನೂ ಚಿಕ್ಕವರಿದ್ದೆವು. ಅಮ್ಮ ಬೆಳ್ಳಂಬೆಳಗ್ಗೆ ಎದ್ದು ಬಹಳಷ್ಟು ಕೆಲಸಗಳನ್ನು ಮುಗಿಸಿದರೂ ನಮಗಿನ್ನೂ ಬೆಳಗಾಗುತ್ತಿರಲಿಲ್ಲ. ಚಳಿಗಾಲದ ದಿನಗಳ ಮುಂಜಾವಿನ ಚಳಿ ನಮ್ಮನ್ನು ಮತ್ತಷ್ಟು ಮುದುಡಿ, ಹೊದ್ದು ಮಲಗಲು ಪ್ರೇರೇಪಿಸುತ್ತಿತ್ತು. ಅಮ್ಮ ಕರೆದು ಎಬ್ಬಿಸಿದಾಗ ಗಡಿಬಿಡಿಯಿಂದ ಎದ್ದು ಬಂದು, ನಿತ್ಯಕರ್ಮಗಳನ್ನು ಮುಗಿಸಿ ಅಡುಗೆ ಕೋಣೆಗೆ ಓಡುತ್ತಿದ್ದೆವು. ನೆಲಮಟ್ಟದಲ್ಲಿದ್ದ ಎರಡು ಒಲೆಗಳ ಮುಂದೆ ಚಳಿ ಕಾಯಿಸಿಕೊಳ್ಳಲು ನಮ್ಮ ನಡುವೆ ಪೈಪೋಟಿ ಶುರುವಾಗುತ್ತಿತ್ತು.

ಅಡುಗೆ ಕೋಣೆಯಲ್ಲಿ ನಮ್ಮ ತಳ್ಳಾಟ ನಡೆಯುವಾಗ ಅಮ್ಮ, “ಮನೆಯ ಹಿಂಬದಿಯ ಅಂಗಳದಲ್ಲಿ ಬಿದ್ದಿರುವ ಎಲೆಗಳನ್ನು ಗುಡಿಸಿ ಮೂಲೆಯಲ್ಲಿ ರಾಶಿ ಹಾಕಿ, ಬೆಂಕಿ ಹಚ್ಚಿ ಚಳಿ ಕಾಯಿಸಿ’ ಎಂದು ಸಲಹೆ ಕೊಡುತ್ತಿದ್ದಳು. ಆಗ ನಮ್ಮ ಓಟ ಅಂಗಳದ ಕಡೆಗೆ. ಅಂಗಳದಲ್ಲಿ ಬಿದ್ದಿದ್ದ ತರಗೆಲೆಗಳನ್ನು ಗುಡಿಸಿ, ಬೆಂಕಿ ಹಚ್ಚಿ, ಅಲ್ಲೇ ಹತ್ತಿರವಿದ್ದ ರಬ್ಬರ್‌ ತೋಟದಿಂದ ಇನ್ನಷ್ಟು ಒಣ ಎಲೆಗಳನ್ನು ತಂದು ಬೆಂಕಿಗೆ ಒಡ್ಡುತ್ತಿದ್ದೆವು. ಆಹಾ, ಹೀಗೇ ಚಳಿ ಕಾಯಿಸುತ್ತಾ ಕೂತುಬಿಡೋಣ ಅನ್ನಿಸಿದರೂ, ಶಾಲೆಗೆ ತಡವಾಗುವ ಭಯವೂ ಇತ್ತು. ಮನಸ್ಸಿಲ್ಲದ ಮನಸ್ಸಿನಿಂದ ಎದ್ದು ಶಾಲೆಗೆ ಹೊರಡುತ್ತಿದ್ದೆವು.

ಆ ಕ್ಷಣದಲ್ಲಿ ನಮಗೊಂದು ಪ್ರಶ್ನೆ ಕಾಡುತ್ತಿತ್ತು. “ಈ ಅಮ್ಮ ಯಾಕೆ ಚಳಿ ಕಾಯಿಸುವುದಿಲ್ಲ? ಹೇಗೂ ಆಕೆಗೆ ಶಾಲೆಗೆ ಹೋಗುವುದಕ್ಕಿಲ್ಲ. ಆರಾಮಾಗಿ ಚಳಿ ಕಾಯಿಸಬಹುದಲ್ಲ?’ ಮನದಲ್ಲಿ ಮೂಡಿದ ಈ ಪ್ರಶ್ನೆಯನ್ನು ಅಮ್ಮನ ಮುಂದಿಟ್ಟರೆ, “ಅಯ್ಯೋ, ನನಗೆ ಚಳಿಯೇ ಆಗುತ್ತಿಲ್ಲ. ಬದಲಿಗೆ ಸೆಖೆಯಾಗ್ತಿದೆ. ನಾನು ಬೆವರುತ್ತಿರುವುದು ನೋಡಿ’ ಎಂದು ಮುಖದಲ್ಲಿ ಹನಿಗೂಡಿರುವ ಬೆವರನ್ನು ತೋರಿಸುತ್ತಿದ್ದಳು. ಮಡಕೆಗಳಲ್ಲಿ ತುಂಬಿಟ್ಟಿರುವ ನೀರು ಮಂಜುಗಡ್ಡೆಯಂತಾಗಿದೆ. ಹೊರಗಡೆ ಬೀಸುತ್ತಿರುವ ಚಳಿಗಾಳಿ ಮೈ ಕೊರೆಯುತ್ತಿದೆ. ಒಳಗೂ, ಹೊರಗೂ ಓಡಾಡುತ್ತಾ ಅಮ್ಮ, ಅದೇ ನೀರನ್ನು ಬಳಸಿ ಪಾತ್ರೆ ತೊಳೆಯುವುದು, ಬಟ್ಟೆ ಒಗೆಯುವುದು ಇತ್ಯಾದಿ ಮಾಡಿದರೂ, ಆಕೆಗೆ ಯಾಕೆ ಚಳಿಯಾಗುವುದಿಲ್ಲ ಎಂಬುದು ನಮಗೆ ಅರ್ಥವೇ ಆಗುತ್ತಿರಲಿಲ್ಲ.

ನಾವು ಹುಟ್ಟಿ, ಬೆಳೆದ ಹಳ್ಳಿಯ ತೋಟದ ನಡುವಿನ ಹೆಂಚಿನ ಮನೆಯಲ್ಲಿದ್ದ ಚಳಿ, ಈಗ ನೆಲೆಸಿರುವ ಪೇಟೆಯ ನಡುವಿನ ಕಾಂಕ್ರೀಟ್‌ ಮನೆಯಲ್ಲಿ ಇಲ್ಲ. ಆದರೂ, ಚಳಿಗಾಲದ ದಿನಗಳಲ್ಲಿ ನನ್ನ ಮಕ್ಕಳು ಚಳಿ ಚಳಿ ಎಂದು ನಡುಗುತ್ತಿರುತ್ತಾರೆ. ಮೊನ್ನೆ, ಬೆಳಗ್ಗಿನ ಕೆಲಸಗಳಲ್ಲಿ ಬ್ಯುಸಿಯಾಗಿದ್ದೆ. ಇನ್ನೂ ಸವಿನಿದ್ದೆಯಲ್ಲಿದ್ದ ಏಳು ವರ್ಷದ ಮಗನ ಒದ್ದಾಟದಿಂದ ಹೊದ್ದಿದ್ದ ಹೊದಿಕೆ ದೂರ ಬಿದ್ದಿತ್ತು. ಕೋಣೆಗೆ ಹೋದಾಗ, ಚಳಿಯಿಂದ ಅವನ ರೋಮಗಳು ಎದ್ದು ನಿಂತಿರುವುದನ್ನು ಕಂಡು, ಹೊದಿಕೆ ಹೊದೆಸಿದೆ. ಆದರೆ, ನನ್ನ ಮೂಗಿನ ಕೆಳಗೆ ಬೆವರು ಸಾಲುಗಟ್ಟಿತ್ತು. ಆಗ ಒಮ್ಮೆಲೇ ನನಗೆ ಅಮ್ಮನ ನೆನಪಾಯ್ತು. ಅಮ್ಮನಿಗೇಕೆ ಚಳಿಯಾಗುವುದಿಲ್ಲ ಎಂದು ಅಂದು ನನ್ನನ್ನು ಕಾಡಿದ್ದ ಪ್ರಶ್ನೆ ದಶಕಗಳ ಬಳಿಕ ಉತ್ತರವಾಗಿ ಕಣ್ಣ ಮುಂದೆ ನಿಂತಿತ್ತು.

ಹೊರಗೆ ಚಳಿಯಿದ್ದರೂ ಬೆಳಗ್ಗೆ ಧಾವಂತದಲ್ಲಿ ಮನೆಗೆಲಸ ಮಾಡುವಾಗ ಬೆವೆತುಹೋಗುವ ಅನುಭವ ನಿಮಗೂ ಆಗಿರಬಹುದು. ಮಿಕ್ಸಿ, ಗ್ರೈಂಡರ್, ವಾಷಿಂಗ್‌ ಮೆಷಿನ್‌, ಇಂಡಕ್ಷನ್‌ ಕುಕ್‌, ಗ್ಯಾಸ್‌ ಸ್ಟೌ, ಕುಕ್ಕರ್‌, ಇತ್ಯಾದಿ ಉಪಕರಣಗಳಿದ್ದರೂ, ಸ್ಟೀಲ್‌/ ಕಾಪರ್‌ ಬಾಟಂ/ ಟೆಫ್ಲಾನ್‌ ಕೋಟೆಡ್‌ ಎಂದು ಸುಲಭದಲ್ಲಿ ತೊಳೆಯಬಹುದಾದ ಪಾತ್ರೆಗಳಿದ್ದರೂ ಕೆಲಸ ಮುಗಿಯುವಷ್ಟರಲ್ಲಿ ನಾನು ಬೆವರಿ, ಬಸವಳಿದಿರುತ್ತೇನೆ. ಹಾಗಾದರೆ, ಯಾವ ಸೌಕರ್ಯಗಳೂ ಇಲ್ಲದ ಆ ದಿನಗಳಲ್ಲಿ ನನ್ನಮ್ಮ ಎಷ್ಟು ಬೆವರಿರಬಹುದು, ಹೇಗೆಲ್ಲಾ ಬೆಂದಿರಬಹುದು?

ಅಮ್ಮನಂತೆಯೇ ಆ ಕಾಲದ ಎಲ್ಲಾ ಅಮ್ಮಂದಿರೂ ಅಡುಗೆ ಕೋಣೆಯಲ್ಲಿ ಅಕ್ಷರಶಃ ಬೇಯುತ್ತಿದ್ದರು. ನೆಲ ಮಟ್ಟದ ಒಲೆಯಲ್ಲಿ ಕಟ್ಟಿಗೆ ತುಂಬಿ ಉರಿಸಲು ಅಮ್ಮ ಪಡುತ್ತಿದ್ದ ಪಾಡು ಅಂತಿಂಥದ್ದಲ್ಲ. ಬಗ್ಗಿ ಕುಳಿತು ಗಾಳಿ ಊದಿ ಒಲೆ ಉರಿಸಲು ಪಾಡುಪಡುವಾಗ ಆ ಬಿಸಿಗೆ, ಹೊಗೆಗೆ ಅಮ್ಮನ ಕಣ್ಣು ಕೆಂಪಾಗಿ, ಕೆಮ್ಮು ಬಂದು, ಕಣ್ಣಲ್ಲಿ ನೀರು ಸುರಿದದ್ದರ ಕಷ್ಟ ಅಷ್ಟಾಗಿ ನನಗೆ ಗೊತ್ತಾಗುತ್ತಿರಲಿಲ್ಲ. (ಒಮ್ಮೊಮ್ಮೆ ನಾನೂ ಒಲೆ ಉರಿಸಿದ್ದಿದೆ. ಅದು ಆಗ ಕಷ್ಟದ ಕೆಲಸವೆಂದು ನನಗೆ ಅನಿಸಿರಲಿಲ್ಲ. ಎಲ್ಲರ ಮನೆಯಲ್ಲೂ ಹಾಗೇ ಇದ್ದುದರಿಂದ ಅದು ರೂಢಿಯೆನಿಸಿತ್ತು) ನಲ್ಲಿ ತಿರುಗಿಸಿದರೆ ನೀರು ಸುರಿಯುವ ವ್ಯವಸ್ಥೆ ಈಗ ಇದೆ. ಅಂದಿನ ಅಮ್ಮಂದಿರು ದೂರದಿಂದ ನೀರನ್ನು ತರಬೇಕಿತ್ತು. ಬಾವಿಯಿಂದ ನೀರೆಳೆದು ಕೊಡಗಳಲ್ಲಿ ತುಂಬಿಸಿ, ತಲೆಗೊಂದು, ಸೊಂಟಕ್ಕೆ ಒಂದು ಕೊಡ ಇಟ್ಟು ಮನೆಯ ಅಗತ್ಯಕ್ಕೆ ತಕ್ಕ ನೀರನ್ನು ತಂದು ತುಂಬಿಸುವಾಗ ಅವರಿಗೆಷ್ಟು ಕಷ್ಟ ಆಗಿರಲಿಕ್ಕಿಲ್ಲ?

ರುಬ್ಬುವ ಕಲ್ಲಲ್ಲಿ ದಿನಕ್ಕೆ ಹಲವು ಬಾರಿ ಹಿಟ್ಟನ್ನೋ, ಮಸಾಲೆಯನ್ನೋ ರುಬ್ಬುವಾಗ ಅವರು ಸ್ವಲ್ಪ ಸಮಯ ಸುಮ್ಮನೇ ಕುಳಿತು ದಣಿವಾರಿಸಿಕೊಳ್ಳಲು ಬಯಸಿರಲಿಕ್ಕಿಲ್ಲವೇ? ಮನೆಯ ನೆಲಕ್ಕೆ ಸೆಗಣಿ ಸಾರಿಸಿ ಅಂದಗೊಳಿಸುವಾಗ ತಮ್ಮ ಕೈಯ ಸೌಂದರ್ಯ ಹಾಳಾಗುತ್ತದೆಂಬ ಕಲ್ಪನೆಯೇ ಅವರಿಗಿರಲಿಲ್ಲ. ತರಹೇವಾರಿ ಮನೆಕೆಲಸಗಳನ್ನೆಲ್ಲ ಮುಗಿಸಿ ತೋಟ, ಹೊಲ ಗದ್ದೆಗಳ ಕೆಲಸದಲ್ಲೂ ಪಾಲ್ಗೊಂಡಾಗ ಅವರಿಗೆ ತಮ್ಮ ಬಗ್ಗೆ ಯೋಚಿಸಲು ಸಮಯವೇ ಇರಲಿಲ್ಲ.

ಹೌದು. ಅಂದಿನ ಅಮ್ಮಂದಿರಿಗೆ ಚಳಿಯಿದ್ದೂ ಚಳಿಯಿರಲಿಲ್ಲ. ಕಷ್ಟಗಳಿದ್ದರೂ ಅದರ ಬಗ್ಗೆ ಕೊರಗುಗಳಿರಲಿಲ್ಲ. ನಾಲ್ಕು ಗೋಡೆಗಳ ಮಧ್ಯೆ ಇದ್ದರೂ ಸ್ವಾತಂತ್ರ್ಯದಿಂದ ವಂಚಿತರಾಗಿದ್ದೇವೆ ಎನಿಸಿರಲಿಲ್ಲ. ಈಗ ಕಾಲ ಬದಲಾಗಿದೆ. ಅಮ್ಮಂದಿರ ಪರಿಸ್ಥಿತಿ ಬದಲಾಗಿದೆ. ಹೈಟೆಕ್‌ ವ್ಯವಸ್ಥೆಗಳ ನಡುವೆ ಬದುಕಿಯೂ ನೂರಾರು ದೂರು, ದುಗುಡ, ದುಮ್ಮಾನಗಳಿರುವ ಆಧುನಿಕ ಅಮ್ಮಂದಿರು ಒಮ್ಮೆಯಾದರೂ ತಮ್ಮ ಅಮ್ಮಂದಿರನ್ನು ನೆನೆಯುವುದು ಒಳಿತು. ನನ್ನ ಅಮ್ಮನಿಗೇಕೆ ಚಳಿಯಾಗಲಿಲ್ಲ, ನನ್ನ ಅಮ್ಮನಿಗೇಕೆ ಆಸೆಗಳಿರಲಿಲ್ಲ, ನನ್ನ ಅಮ್ಮನಿಗೇಕೆ ಸುಸ್ತಾಗುತ್ತಿರಲಿಲ್ಲ… ಇಂತಹ ನೂರಾರು ಪ್ರಶ್ನೆಗಳಿಗೆ ಉತ್ತರ ಹುಡುಕುವ ಪ್ರಯತ್ನದೊಂದಿಗೆ ನಮ್ಮನ್ನು ನಾವು ಕಂಡುಕೊಳ್ಳುವ ಪ್ರಯತ್ನವನ್ನೂ ಮಾಡೋಣ..

-ಜೆಸ್ಸಿ ಪಿ.ವಿ.


ಈ ವಿಭಾಗದಿಂದ ಇನ್ನಷ್ಟು

  • ಪ್ರಕೃತಿ ಮತ್ತು ಭೂಮಿಯ ಹೋಲಿಕೆ ಸಲ್ಲುವುದು ತಾಯಿಗೆ ಮಾತ್ರ. ಆಕೆ ಸಹನಾಮಯಿ. ಮಕ್ಕಳ ಎಲ್ಲ ಕಷ್ಟವನ್ನು ಹೊರಲು ಆಕೆ ಸದಾ ಸಿದ್ಧ. ಈ ಮಾತಿಗೆ ಸಾಕ್ಷಿ ಎನ್ನುವಂಥ ತಾಯಿಯೊಬ್ಬಳು...

  • ಬಸ್ಸಿನಲ್ಲಿ ಪ್ರಯಾಣಿಕರನ್ನು ಹತ್ತಿಸಿಕೊಳ್ಳುವ ತನಕ ಒಂದು ಹಂತ. ನಂತರ ಬಸ್‌ ಲೈಟ್‌ ಆಫ್ ಮಾಡಿಬಿಡುತ್ತಾರಲ್ಲ? ಆಗ ಕೆಲವು ಗಂಡಸರ "ವಾಸನಾ' ವ್ಯಕ್ತಿತ್ವದ ಅನಾವರಣ...

  • ಟ್ರ್ಯಾಕ್‌ ಪ್ಯಾಂಟ್‌ ಅಥವಾ ಶರ್ಟ್‌ಗಳನ್ನು ಈ ಮೊದಲು ಕ್ರೀಡೆ, ಜಾಗಿಂಗ್‌ ಅಥವಾ ಯೋಗಾಸನ ತರಗತಿಗೆ ಹೋಗುವಾಗ ತೊಡುವ ಪದ್ಧತಿ ಇತ್ತು. ಆದರೆ, ಈಗ ಟ್ರ್ಯಾಕ್‌ಸೂಟ್‌ನಲ್ಲಿಯೇ...

  • ರಾತ್ರಿ ಊಟಕ್ಕೆ ಎಲ್ಲರಿಗೂ ಹೊಸದಾಗಿ ಊರಿಂದ ತಂದ ಮಾವಿನ ಮಿಡಿ ಉಪ್ಪಿನಕಾಯಿ, ಕೊಬ್ಬರಿಎಣ್ಣೆ ಹಾಕಿಕೊಂಡು ಅನ್ನಕ್ಕೆ ಕಲೆಸಿ ತಿನ್ನುವ ಹುಕಿ. ಈರುಳ್ಳಿ ಹೆಚ್ಚಿಕೊಡು...

  • ಹೆಣ್ಣು ಮಕ್ಕಳ ಪಾಲಿಗೆ ರಾತ್ರಿ ಪ್ರಯಾಣ ಯಾವತ್ತಿಗೂ ಆತಂಕದ ವಿಷಯವೇ. ಸರಿಯಾದ ಸಮಯಕ್ಕೆ ಬಸ್‌ ಬರದಿದ್ದರೆ, ನಿಲ್ದಾಣದಲ್ಲಿ ಯಾರಾದರೂ ಹಲ್ಲೆ ಮಾಡಿದರೆ, ಬಸ್‌ನಲ್ಲಿ...

ಹೊಸ ಸೇರ್ಪಡೆ