ಐ ಆ್ಯಮ್ ಸ್ಯಾರಿ

ಕರುನಾಡ ಸೀರೆಗಳ ಸಿರಿಲೋಕ

Team Udayavani, May 22, 2019, 6:00 AM IST

ಪ್ರತಿ ಹೆಂಗಸೂ ಅತಿಯಾಗಿ ಇಷ್ಟಪಡುವ ಉಡುಪು- ಸೀರೆ. (ಹೆಂಗಸಿನ ಸೌಂದರ್ಯ ಇಮ್ಮಡಿಯಾಗುವುದೂ ಸೀರೆಯಿಂದಲೇ!) ಈ ಕಾರಣದಿಂದಾಗಿಯೇ, ಮುನಿದ ಪ್ರೇಯಸಿಯನ್ನು, ಪತ್ನಿಯನ್ನು ಒಲಿಸಿಕೊಳ್ಳಲು “ಸ್ಯಾರಿ’ಯ ಮೊರೆ ಹೋಗುವ ಪುರುಷರಿಗೆ ಲೆಕ್ಕವಿಲ್ಲ. “ಸ್ಯಾರಿ’ಯೊಂದಿಗೇ ಹೋಗಿ “ಸಾರಿ’ ಕೇಳಿದರೆ, ಎಂಥ ತಪ್ಪನ್ನೂ ಮಾಫಿ ಮಾಡುವ ನಾರಿಯರಿದ್ದಾರೆ. ಹಾಗಾಗಿ, ಸೀರೆಯ ಜೊತೆಗೇ ಹೋದಾಗ- ಗಂಡಿಗೆ ಜಯವೆಂದ ಸರ್ವಜ್ಞ! ಸೀರೆ, ಒಂದು ಸಂಸ್ಕೃತಿಯ ಕಥೆ ಹೇಳುತ್ತದೆ. ಸೌಂದರ್ಯದ ಅನಾವರಣಕ್ಕೆ ಸಾಕ್ಷಿಯಾಗುತ್ತದೆ. ಸಂಬಂಧಗಳು ಗಟ್ಟಿಯಾಗಲೂ ಕಾರಣವಾಗುತ್ತದೆ. ಅಮ್ಮನಿಗೋ, ಅಜ್ಜಿಗೋ ಸೀರೆ ಕೊಟ್ಟು ಗಂಡು ಮಕ್ಕಳು ಧನ್ಯತೆ ಅನುಭವಿಸಿದರೆ, ತಾಯಿ ಕೊಟ್ಟ ಸೀರೆಯನ್ನು ಹೆಣ್ಣುಮಗಳು ಕಣ್ಣಿಗೆ ಒತ್ತಿಕೊಳ್ಳುತ್ತಾಳೆ. ಅದಕ್ಕೇ ಹೇಳಿದ್ದು: ಸೀರೆಯೆಂದರೆ ಸಂಸ್ಕೃತಿ, ಸೀರೆಯೆಂದರೆ ಸಂಬಂಧ! ಇಂತಿಪ್ಪ ಸೀರೆಯಲ್ಲೂ ಛಪ್ಪನ್ನೈವತ್ತಾರು ವಿಧಗಳುಂಟು. ಮೈಸೂರು ಸಿಲ್ಕ್ ಸೀರೆ, ಕಾಟನ್‌ ಸೀರೆ, ಗೌರಿ ಸೀರೆ, ಧಾರೆ ಸೀರೆ, ಮದುವೆ ಸೀರೆ, ಸೀಮಂತದ ಸೀರೆ, ಶಾಂತಲಾ ಸಿಲ್ಕ್, ಸೌಂದರ್ಯ ಸಿಲ್ಕ್, ಕಾಂಜೀವರಂ, ಶಿಫಾನ್‌, ವೈಟ್‌ ಕಾಟನ್‌, ಉಡುಪಿ ಕಾಟನ್‌, ಇಳಕಲ್‌ ಸೀರೆ…ಹೀಗೆ ಸೀರೆಗಳಲ್ಲಿ ಮಾತ್ರವಲ್ಲ; ಅವುಗಳನ್ನು ಧರಿಸುವ ಶೈಲಿಯಲ್ಲೂ ಹಲವು ಬಗೆಗಳುಂಟು. ಅಂಥದೊಂದು ವಿಶಿಷ್ಟ “ಸ್ಯಾರಿ ಲೋಕ’ ಮತ್ತು “ನಾರಿಲೋಕ’ವನ್ನು ಆಪ್ತವಾಗಿ ಪರಿಚಯಿಸುವ ಬರಹ ಇಲ್ಲಿದೆ. ಕರ್ನಾಟಕದ ಹೆಮ್ಮೆಯ ಸೀರೆಯ ಜಗತ್ತನ್ನು ಪರಿಚಯಿಸುವ ಸಣ್ಣ ಪ್ರಯತ್ನವಿದು…

1. ದಕ್ಷಿಣ ಭಾರತೀಯ ಶೈಲಿ
ಮಲೆನಾಡು, ಕರಾವಳಿ, ದಕ್ಷಿಣ ಕರ್ನಾಟಕ, ಮೈಸೂರು ಪ್ರಾಂತ್ಯ ಹೀಗೆ ಕರ್ನಾಟಕದ ಬಹುತೇಕ ಜಿಲ್ಲೆಗಳ ಮಹಿಳೆಯರು ಸೀರೆ ಉಡುವಾಗ ಅನುಸರಿಸುವುದು ದಕ್ಷಿಣ ಭಾರತೀಯ ಶೈಲಿಯನ್ನು. ಕಾಟನ್‌, ಶಿಫಾನ್‌, ಸಿಲ್ಕ್ ಹೀಗೆ ಯಾವುದೇ ಬಗೆಯ ಸೀರೆಯನ್ನಾದರೂ ಫ‌ಟಾಫ‌ಟ್‌ ಅಂತ ಉಟ್ಟು ಬಿಡಬಹುದು.
ಎಲ್ಲೆಲ್ಲಿ?: ದಕ್ಷಿಣಕನ್ನಡ, ದಾವಣಗೆರೆ, ಹಾಸನ, ಮೈಸೂರು

2. ಕಚ್ಚೆ ಸೀರೆ
ಸೀರೆಯನ್ನು ಕಚ್ಚೆಯಂತೆ ಉಡುವ ಶೈಲಿ ಉಡುಪಿಯಲ್ಲಿ ಚಾಲ್ತಿಯಲ್ಲಿದೆ. ಉಡುಪಿ ಕಚ್ಚೆ ಸೀರೆಯೆಂದೇ ಪ್ರಸಿದ್ಧಿ ಪಡೆದರೂ, ಇದನ್ನು ಹೆಚ್ಚಾಗಿ ಉಡುವವರು, ಅಲ್ಲಿನ ಮಾಧ್ವ ಬ್ರಾಹ್ಮಣ ಮಹಿಳೆಯರು. 9 ಗಜದ ಸೀರೆಯಿಂದ ಉಡುವ ಈ ಶೈಲಿಯನ್ನು ಹೊರಕಚ್ಚೆ ಶೈಲಿ ಎಂದೂ ಕರೆಯುತ್ತಾರೆ.
ಎಲ್ಲೆಲ್ಲಿ?: ಉಡುಪಿ, ದಕ್ಷಿಣಕನ್ನಡ
ಎಷ್ಟು ಟೈಮ್‌ ಬೇಕು?: 3 ನಿಮಿಷ

3. ನವಾರಿ ಶೈಲಿ
ಮಹಾರಾಷ್ಟ್ರದ ಗಡಿಭಾಗದ ಜಿಲ್ಲೆ ಬೆಳಗಾವಿ ಮತ್ತು ಉತ್ತರಕರ್ನಾಟಕದ ಕೆಲವು ಜಿಲ್ಲೆಗಳಲ್ಲಿ, ಮಹಿಳೆಯರು ನವ್ವಾರಿ ಶೈಲಿಯಲ್ಲಿ ಸೀರೆ ಉಡುತ್ತಾರೆ. 9 ಗಜದ ಸೀರೆಯನ್ನು ಕಚ್ಚೆಯಂತೆ ಉಡುವ ಶೈಲಿ ಇದು. ಮರಾಠಿ ಶೈಲಿಯನ್ನೇ ಹೋಲುವ ಕಚ್ಚೆಯನ್ನು ಹುಬ್ಬಳ್ಳಿ- ಧಾರವಾಡದಲ್ಲೂ ಉಡುತ್ತಾರೆ.
ಎಲ್ಲೆಲ್ಲಿ?: ಉತ್ತರ ಕರ್ನಾಟಕ

4. ಕೊಡವ ಸೀರೆ
ಕೊಡವರ ಸಂಸ್ಕೃತಿ, ಆಚಾರ ಎಷ್ಟು ವಿಭಿನ್ನವೋ ಅವರ ಉಡುಗೆ ತೊಡುಗೆಯೂ ಅಷ್ಟೇ ವಿಭಿನ್ನ ಮತ್ತು ಸುಂದರ. ಹಬ್ಬ ಹರಿದಿನಗಳಲ್ಲಷ್ಟೇ ಅಲ್ಲದೆ, ಸಾಮಾನ್ಯ ದಿನಗಳಲ್ಲೂ ಕೊಡವ ಸ್ತ್ರೀಯರು ವಿಶೇಷ ಶೈಲಿಯಲ್ಲಿ ಸೀರೆ ಉಡುತ್ತಾರೆ. ಸೀರೆಯ ಸೆರಗನ್ನು ಹಿಂಭಾಗಕ್ಕೆ ನೆರಿಗೆ ಬರುವಂತೆ ಉಡುವುದು ವಾಡಿಕೆ. ಕೆಂಪು, ಗುಲಾಬಿಯಂಥ ಗಾಢ ಬಣ್ಣಗಳ ಸೀರೆಯನ್ನು ಕೊಡವ ಶೈಲಿಯಲ್ಲಿ ಉಟ್ಟರೆ ಹೆಣ್ಮಗಳು “ಮುತ್ತಿನ ಹಾರ’ ಸಿನಿಮಾದಲ್ಲಿ ಸುಹಾಸಿನಿ ಕಂಡಷ್ಟೇ ಮುದ್ದಾಗಿ ಕಾಣುವರು.
ಎಲ್ಲೆಲ್ಲಿ?: ಕೊಡಗು

5. ಗೊಬ್ಬೆ ಸೀರೆ
ಹಿಂದಿನ ಕಾಲದಲ್ಲಿ ಮಲೆನಾಡಿನ ಹೆಂಗಸರು ಗೊಬ್ಬೆ ಶೈಲಿಯಲ್ಲಿ ಸೀರೆ ಉಡುತ್ತಿದ್ದರು. ಈ ಶೈಲಿಯಲ್ಲಿ ಸೀರೆ, ಮೊಣಕಾಲಿನವರೆಗೆ ಅಂದರೆ ಸ್ಕರ್ಟ್‌ನಷ್ಟು ಉದ್ದ ಬರುತ್ತದೆ. ಎದೆಯ ಭಾಗವನ್ನು ಆವರಿಸುವ ಸೆರಗನ್ನು ಹಿಂಬದಿಯಿಂದ ಮುಂದಕ್ಕೆ ತಂದು, ಭುಜದ ಬದಿಯಲ್ಲಿ ಗಂಟು ಹಾಕಲಾಗುತ್ತದೆ. ಕೊಡವ ಶೈಲಿಗಿಂತ ಕೊಂಚ ಭಿನ್ನವಾದ ಈ ಶೈಲಿಯಲ್ಲಿ ಸೀರೆ ಉಡಬೇಕೆಂದರೆ 18 ಮೊಳದ ಸೀರೆಯೇ ಆಗಬೇಕು. ಮಳೆಗಾಲದಲ್ಲಿ ಗದ್ದೆ ಕೆಲಸದಲ್ಲಿ ನಿರತರಾದ ಮಲೆನಾಡ ಹೆಂಗಸರು ತಮ್ಮ ಸೀರೆಯ ತುದಿ ನೆನೆಯದಿರಲಿ, ವಸ್ತುಗಳಿಗೆ ಸಿಕ್ಕಿಕೊಂಡು ಹರಿಯದಿರಲಿ ಎಂದು ಗೊಬ್ಬೆ ಶೈಲಿಯಲ್ಲಿ ಸೀರೆ ಉಡುತ್ತಿದ್ದರು. ಮಲೆನಾಡಿನ ಕೆಲವು ಹೆಗ್ಗಡತಿಯರು ಈಗಲೂ ಈ ಶೈಲಿಯಲ್ಲೇ ಸೀರೆ ಉಡುತ್ತಾರೆ.
ಎಲ್ಲೆಲ್ಲಿ?: ಶಿವಮೊಗ್ಗ, ಚಿಕ್ಕಮಗಳೂರು
ಎಷ್ಟು ಟೈಮ್‌ ಬೇಕು?: 3 ನಿಮಿಷ

6. ಮಾರ್ವಾಡಿ ಶೈಲಿ

ಉತ್ತರಭಾರತದಿಂದ ಕರ್ನಾಟಕಕ್ಕೆ ವಲಸೆ ಬಂದ ಮಾರ್ವಾಡಿ ಮತ್ತು ಜೈನ ಸಮುದಾಯದವರನ್ನು ಅವರ ಉಡುಗೆತೊಡುಗೆಯಿಂದಲೇ ಗುರುತಿಸಬಹುದು. ಹೆಚ್ಚಾಗಿ ಬಿಳಿ ಬಣ್ಣದ ಶಟೋì, ಕುರ್ತಾಗಳಲ್ಲೋ ಪುರುಷರು ಕಾಣಿಸಿಕೊಂಡರೆ, ಮಹಿಳೆಯರು ಮಾರ್ವಾಡಿ ಶೈಲಿಯಲ್ಲಿ ಉಡುವ ಸೀರೆಯಿಂದಲೇ ಕೇಂದ್ರಬಿಂದುವಾಗುತ್ತಾರೆ. ಬೆಂಗಳೂರು, ಬಳ್ಳಾರಿ, ಶಿವಮೊಗ್ಗ, ರಾಯಚೂರು… ಹೀಗೆ ಮಾರ್ವಾಡಿ ಸಮುದಾಯದ ಜನರಿರುವ ಭಾಗಗಳಲ್ಲಿ ಈ ಶೈಲಿ ಸೀರೆಯನ್ನು ಕಾಣಬಹುದು.
ಎಲ್ಲೆಲ್ಲಿ?: ಬೆಂಗಳೂರು, ಬಳ್ಳಾರಿ

7. ಇಂಡೋ- ವೆಸ್ಟರ್ನ್ ಶೈಲಿ
ಇದು ಮಹಾನಗರದ ಮಾನಿನಿಯರು ಕಂಡುಕೊಂಡ ಸೀರೆ ಉಡುವ ನೂತನ ಶೈಲಿ. ಬೆಂಗಳೂರಿನಲ್ಲೂ ಇಂಡೋ- ವೆಸ್ಟರ್ನ್ ಶೈಲಿಯ ಉಪಸ್ಥಿತಿಯನ್ನು ಕಾಣಬಹುದು. ಮಾಮೂಲಿಯಂತೆ ಲಂಗದ ಮೇಲೆ ಸೀರೆ ಉಡುವುದಕ್ಕೆ ಬದಲಾಗಿ, ಗಾಗ್ರಾ ಸ್ಕರ್ಟ್‌ ಮೇಲೆ ಸೀರೆ ಉಡುವುದು ಈ ಶೈಲಿಯ ವೈಶಿಷ್ಟé. ಕಾಲೇಜ್‌ ಡೇ, ಎಥಿ°ಕ್‌ ಡೇ, ಆಫೀಸ್‌ ಪಾರ್ಟಿ ಮುಂತಾದ ಸಂದರ್ಭಗಳಲ್ಲಿ ಹೆಣ್ಮಕ್ಕಳು ಈ ಶೈಲಿಯನ್ನು ಟ್ರೈ ಮಾಡುತ್ತಾರೆ. ಇತ್ತೀಚಿಗೆ ಜೀನ್ಸ್‌ ಪ್ಯಾಂಟ್‌ ಮೇಲೆ ಸೀರೆ ಉಡುವ ಫ್ಯಾಷನ್‌ ಕೂಡಾ ಶುರುವಾಗಿದೆ!
ಎಲ್ಲೆಲ್ಲಿ?: ಬೆಂಗಳೂರು

8. ಹಾಲಕ್ಕಿ ಸೀರೆ
ಕಾಳಿ ನದಿಯಿಂದ ಶರಾವತಿ ವ್ಯಾಪ್ತಿಯವರೆಗೆ ಅರಣ್ಯ ಭಾಗದಲ್ಲಿ ವಾಸಿಸುವ ಹಾಲಕ್ಕಿ ಒಕ್ಕಲಿಗ ಜನಾಂಗದಲ್ಲಿ ಮಹಿಳೆಯರು ವಿಭಿನ್ನವಾಗಿ ಸೀರೆಯನ್ನು ಉಡುತ್ತಾರೆ. ಇದು ಹಾಲಕ್ಕಿ ಸೀರೆ ಎಂದೇ ಹೆಸರುವಾಸಿ. ದಪ್ಪ ಮಣಿಯ ಸರ ಮತ್ತು ಕುಪ್ಪಸವಿಲ್ಲದ ಸೀರೆ, ಹಾಲಕ್ಕಿ ಮಹಿಳೆಯರ ಸ್ಪೆಷಾಲಿಟಿ. ಗೊಬ್ಬೆ ಸೀರೆಯಂತೆಯೇ ಮಂಡಿಯವರೆಗೆ ಸೀರೆಯುಟ್ಟು, ಕುತ್ತಿಗೆಯ ಎರಡೂ ಭಾಗಕ್ಕೆ ಸೀರೆಯನ್ನು ಹಾಯಿಸಿ, ಹಿಂದಿನಿಂದ ಗಂಟು ಹಾಕಿ ಕಟ್ಟಿಕೊಳ್ಳುವುದು ಈ ಶೈಲಿಯ ವೈಶಿಷ್ಟé. ಬಹಳ ಹಿಂದಿನಿಂದಲೂ ಈ ಶೈಲಿ ಚಾಲ್ತಿಯಲ್ಲಿದೆ.
ಎಲ್ಲೆಲ್ಲಿ?: ಉತ್ತರಕನ್ನಡ, ಶಿವಮೊಗ್ಗ

ಕರುನಾಡ ವರ್ಲ್ಡ್ ಫೇಮಸ್‌ ಸೀರೆಗಳು
1. ಮೈಸೂರು ಸಿಲ್ಕ್
ಇಂದಿಗೂ ಯಾರಿಗಾದರೂ ದುಬಾರಿ ಬೆಲೆಯ ಉಡುಗೊರೆ ಕೊಡಬೇಕೆಂದಾಗ ಅಥವಾ ನಮ್ಮ ರಾಜ್ಯಕ್ಕೆ ಭೇಟಿಯಿತ್ತ ವಿದೇಶಿಯರು ತಮ್ಮ ಊರಿಗೆ ವಾಪಸ್ಸಾಗುವಾಗ ಕನ್ನಡಿಗರು ಮೈಸೂರು ಸಿಲ್ಕ್ ಸೀರೆ ಕೊಡುವುದಿದೆ. ಶುದ್ಧ ರೇಷ್ಮೆ ಮತ್ತು ಶೇ.65ರಷ್ಟು ಬೆಳ್ಳಿ ಹಾಗೂ ಶೇ.35ರಷ್ಟು ಚಿನ್ನದಿಂದ ಮಾಡಲ್ಪಟ್ಟ ಜರಿಗಳು, ಅತ್ಯಾಕರ್ಷಕ ಚಿತ್ತಾರಗಳು, ಇವೆಲ್ಲದರಿಂದಾಗಿ ನಮ್ಮ ಮೈಸೂರು ಸಿಲ್ಕ್ ಸೀರೆ ಅಪಾರ ಖ್ಯಾತಿ ಗಳಿಸಿದೆ. ಮೈಸೂರು ಮಹಾರಾಜರ ಕಾಲದಲ್ಲಿ ಅಭಿವೃದ್ಧಿಗೊಂಡ ರೇಷ್ಮೆ ಸೀರೆ ಉದ್ಯಮ ಈಗಲೂ ತನ್ನ ಜನಪ್ರಿಯತೆ ಉಳಿಸಿಕೊಂಡಿದೆ.

2. ಇಳಕಲ್‌ ಸೀರೆ
ಬಾಗಲಕೋಟೆ ಜಿಲ್ಲೆಯ ಇಳಕಲ್‌ನಲ್ಲಿ ಶತಮಾನಗಳಿಂದ ತಯಾರಾಗುತ್ತಿರುವ ಸೀರೆಗಳು ಪ್ರಾಂತ್ಯದ ಹೆಸರಿನಿಂದಲೇ ಗುರುತಿಸಿಕೊಂಡಿವೆ. ಹಿಂದೆಲ್ಲಾ ಹಬ್ಬ ಹರಿದಿನಗಳಲ್ಲಿ ಈ ಸೀರೆಗೆ ವಿಶೇಷ ಗೌರವ ಸಲ್ಲುತ್ತಿತ್ತು. ಸೆರಗಿನ ತುದಿಯಲ್ಲಿ ಹೆಣಿಗೆ, ಕೋಟೆ ರಕ್ಷಕ, ಟೋಪಿ ತೆನೆ, ಜೋಳದ ತೆನೆ, ಇತ್ಯಾದಿಗಳ ವಿನ್ಯಾಸವಿರುತ್ತದೆ. ಈ ಸೀರೆಗಳು ವಿಶೇಷವಾಗಿ ಕಾಣುವಲ್ಲಿ ಬಣ್ಣದ ಪಾತ್ರವೂ ಇದೆ. ವಿನ್ಯಾಸ ಮತ್ತು ಬಣ್ಣ ಮಾತ್ರದಿಂದಲೇ ಈ ಸೀರೆಯನ್ನು ಪತ್ತೆಹಚ್ಚಿಬಿಡಬಹುದು. ಸಾಮಾನ್ಯವಾಗಿ ಈ ಸಾಂಪ್ರದಾಯಿಕ ಸೀರೆಗಳಲ್ಲಿ ತಿಳಿಯಾದ ಕೆಂಪು, ಕಂದು, ಹಸಿರು ಬಣ್ಣ ಗಾಢವಾಗಿರುತ್ತದೆ. ಅಲ್ಲದೆ ಸೀರೆಯ ಅಂಚು ವಿಶಾಲವಾಗಿ 4 ರಿಂದ 6 ಇಂಚಿನಷ್ಟಿರುತ್ತದೆ.
3. ಮೊಳಕಾಲ್ಮೂರು ಸೀರೆ
ಇಳಕಲ್‌ ಸೀರೆಯಂತೆಯೇ, ಪ್ರಾಂತ್ಯದಿಂದಲೇ ಹೆಸರು ಪಡೆದುಕೊಂಡ ಸೀರೆಗಳಲ್ಲಿ ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ಕೂಡಾ ಒಂದು. ಮೊಳಕಾಲ್ಮೂರನ್ನು ರೇಷ್ಮೆ ಸೀರೆಯ ತವರೂರು ಎನ್ನಲಾಗುತ್ತದೆ. ಈ ಸೀರೆಗಳ ಅಂಚು ಮತ್ತು ವಿನ್ಯಾಸದಲ್ಲಿ ಹಣ್ಣುಗಳು, ಪ್ರಾಣಿಗಳು ಮತ್ತು ನಾನಾ ಬಗೆಯ ಹೂವುಗಳ ಚಿತ್ರಗಳಿರುತ್ತವೆ.

4. ಉಡುಪಿ ಸೀರೆ
ಮಾಜಿ ಪ್ರಧಾನಿ ಇಂದಿರಾಗಾಂಧಿ, ಮಮತಾ ಬ್ಯಾನರ್ಜಿಯವರ ಮನಗೆದ್ದದ್ದು ಉಡುಪಿ ಸೀರೆ. ಇಲ್ಲಿ ಗಮನಿಸಬೇಕಾದ ಅಂಶವೆಂದರೆ ಈ ಇಬ್ಬರು ಮಹಿಳೆಯರೂ ವಿಶಿಷ್ಟವಾಗಿ ಸೀರೆಯುಡುವ ಶೈಲಿಯಿಂದ ಪ್ರಸಿದ್ಧರಾದವರು ಮತ್ತು ಸೀರೆಯ ಕುರಿತು ಪ್ರೀತಿ, ವ್ಯಾಮೋಹ ಬೆಳೆಸಿಕೊಂಡವರು. ಇಂಥವರು ಕರ್ನಾಟಕದ್ದೇ ಆದ ಉಡುಪಿ ಸೀರೆಗೆ ಮನ ಸೋತಿದ್ದರೆಂದರೆ ಅದು ಕನ್ನಡಿಗರಿಗೆ ಸಂದ ಗೌರವವೇ ಸರಿ. ಕೈಮಗ್ಗದಲ್ಲೇ ನೇಯುವ ಈ ಸೀರೆಗಳು ಗಾಢ ಬಣ್ಣದ ಅಂಚು ಮತ್ತು ಸೆರಗು, ತಿಳಿ ಬಣ್ಣದ ಮೈ ಹೊಂದಿರುತ್ತವೆ. ಈ ಸೀರೆಗಳನ್ನು ಉಡುವುದೂ ಸುಲಭ ಎನ್ನುವುದು ಅನುಭವಸ್ಥರ ಅಭಿಪ್ರಾಯ.

ಟಾಪ್‌ 10 ಸೀರೆ ಹಾಡುಗಳು
1. ನಾರಿಯ ಸೀರೆ ಕದ್ದ ರಾಧೆಯ ಮನವ ಗೆದ್ದ (ದಾರಿ ತಪ್ಪಿದ ಮಗ- 1975)
2. ದೂರದ ಊರಿಂದ ಹಮ್ಮಿàರ ಬಂದ ಜರತಾರಿ ಸೀರೆ ತಂದ (ಸ್ವಾಭಿಮಾನ- 1985)
3. ಇವ ಯಾವ ಸೀಮೆ ಗಂಡು ಕಾಣಮ್ಮೊà, ಇವನಿಗೆ ನನ್ನ ಸೀರೆ ಮ್ಯಾಲ ಯಾಕ ಕಣ್ಣಮ್ಮೊà (ರಣರಂಗ- 1988)
4. ಯಾರೆ ನೀನು ಸುಂದರ ಚೆಲುವೆ ಒಬ್ಬಳೆ ನಿಂತಿರುವೆ (ರಣಧೀರ- 1988)
5. ತಂದೆ ಕೊಡಿಸೋ ಸೀರೆ ಮದುವೆ ಆಗೋವರೆಗೆ (ಮಿಡಿದ ಹೃದಯಗಳು- 1993)
6. ಪುಟ್ಟಮಲ್ಲಿ ಪುಟ್ಟಮಲ್ಲಿ… ಅವಳು ನಾಕು ಮೊಳ, ಸೀರೆ ಎಂಟು ಮೊಳ (ಪುಟ್ನಂಜ  1995)
7. ಇಳಕಲ್‌ ಸೀರೆ ಉಟ್ಕೊಂಡು ಮೊಳಕಾಲ್‌ ಗಂಟ ಎತ್ಕೊಂಡು (ಕೌರವ 1998)
8. ಹೆಣ್ಣಿಗೆ ಸೀರೆ ಯಾಕೆ (ನೀಲಕಂಠ 2006)
9. ಉಡಿಸುವೆ ಬೆಳಕಿನ ಸೀರೆಯ (ಪಂಚರಂಗಿ- 2010)
10. ಸೀರೇಲಿ ಹುಡುಗೀರ ನೋಡಲೇಬಾರದು (ರನ್ನ- 2015)

ರಶ್ಮಿಕಾ 61 ವರ್ಷಗಳಷ್ಟು ಹಳೆಯ ಸೀರೆಯುಟ್ಟಿದ್ದು!
ಸೀರೆ ಎಂದರೆ ಅದು ಕೇವಲ ಸಂಸ್ಕೃತಿಯ ಪ್ರತೀಕವಲ್ಲ, ಚಂದಗಾಣಿಸುವುದಕ್ಕೆ ಸೀಮಿತವಾದ ದಿರಿಸೂ ಅಲ್ಲ. ಅದರಲ್ಲಿ ಒಂದು ಭಾವನಾತ್ಮಕ ಸೆಳೆತವೂ ಇದೆ ಎನ್ನುವುದಕ್ಕೆ ನಟಿ ರಶ್ಮಿಕಾ ಮಂದಣ್ಣ ಸಾಕ್ಷಿ. ಅವರು ಇತ್ತೀಚೆಗೆ ಒಂದು ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ಒಂದು ಹಳೇ ಸೀರೆಯನ್ನುಟ್ಟುಕೊಂಡು ಹೋಗಿದ್ದರು. ಎಲ್ಲರೂ ಹೊಚ್ಚ ಹೊಸ ಡಿಸೈನರ್‌ ದಿರಿಸುಗಳನ್ನು ಧರಿಸಿದ್ದರೆ, ಅವರ ಮಧ್ಯ ರಶ್ಮಿಕಾ ಮಾತ್ರ ಹಳೆ ಬಟ್ಟೆಯಲ್ಲಿ ಬಂದಿದ್ದು ಎಲ್ಲರ ಹುಬ್ಬೇರಿಸಿತ್ತು. ಆದರೆ ವಿಷಯ ತಿಳಿದಾಗ ಅಷ್ಟೂ ಜನರ ನಡುವೆ ಕಂಗೊಳಿಸಿದ್ದು, ಮಿನುಗಿದ್ದು, ಅಷ್ಟೇ ಯಾಕೆ? ಟಾಕ್‌ ಆಫ್ ದ ಟೌನ್‌ ಆಗಿದ್ದು ರಶ್ಮಿಕಾ. 61 ವರುಷ ಹಳೆಯದಾದ ಆ ಸೀರೆ ಅವರ ಅಜ್ಜಿಯದಾಗಿತ್ತು. ಅಜ್ಜಿಯಿಂದ ಅಮ್ಮನಿಗೆ, ಅಮ್ಮನಿಂದ ರಶ್ಮಿಕಾಗೆ ಉಡುಗೊರೆಯಾಗಿ ಬಂದ ಆ ಸೀರೆ ಮೂರು ತಲೆಮಾರುಗಳ ಕತೆ ಹೇಳುತ್ತಿತ್ತು.

ದೀಪಿಕಾ ಸೀರೆಯಲ್ಲಿ ಕರುನಾಡ ಲಾಂಛನ!
ಬಾಲಿವುಡ್‌ ನಟಿ ದೀಪಿಕಾ ಪಡುಕೋಣೆ ಮದುವೆಯಲ್ಲಿ ಉಟ್ಟ ಸೀರೆಯನ್ನು ಖ್ಯಾತ ವಸ್ತ್ರ ವಿನ್ಯಾಸಕ ಸಬಸಾಚಿ ಮುಖರ್ಜಿ ವಿನ್ಯಾಸ ಮಾಡಿದ್ದೆಂದು ಸುದ್ದಿಯಾಗಿತ್ತು. ಆದರೆ, ಅದು ಬೆಂಗಳೂರಿನ “ಅಂಗಡಿ ಗ್ಯಾಲರಿಯಾ’ದಲ್ಲಿ ಖರೀದಿಸಿದ ಸೀರೆ. ಕೊಂಕಣಿ ಸಂಪ್ರದಾಯದಲ್ಲಿ, ಮದುವೆಯ ಸೀರೆಯನ್ನು ಹೆಣ್ಣಿನ ತಾಯಿ ಉಡುಗೊರೆಯಾಗಿ ಕೊಡಬೇಕು. ಹಾಗಾಗಿ, ತಾಯಿಯಿಂದ ದೀಪಿಕಾಗೆ ಸಿಕ್ಕಿದ ಸೀರೆಯದು. ಹೊಂಬಣ್ಣದ, ಅಪ್ಪಟ ಕೈ ಮಗ್ಗದ ಕಾಂಜೀವರಂ ಸೀರೆಯಲ್ಲಿ, ಕರ್ನಾಟಕ ಲಾಂಛನವಾದ ಗಂಡಭೇರುಂಡ ಪಕ್ಷಿಯ ವಿನ್ಯಾಸವಿದ್ದಿದ್ದು ವಿಶೇಷ.

ಹೆಣ್ಣುಮಕ್ಕಳಿಗೆ ಪ್ರಿಯವಾದ ಸೀರೆಗಳಿವು
1. ತವರುಮನೆ ಸೀರೆ: ಗೌರಿ ಹಬ್ಬದಲ್ಲಿ ಬಾಗೀನದ ಜೊತೆಗೆ ಹೆಣ್ಮಕ್ಕಳಿಗೆ ಸೀರೆ ಕೊಡುವ ಸಂಪ್ರದಾಯವಿದೆ. ಮದುವೆಯಾದ ಮೇಲೆ, ತವರುಮನೆಯಿಂದ ಅಪ್ಪನೋ, ಅಣ್ಣನೋ ಕಳುಹಿಸುವ ಆ ಸೀರೆಗಾಗಿಯೇ ಹೆಣ್ಮಕ್ಕಳು ಹಬ್ಬವನ್ನು ಎದುರು ನೋಡುತ್ತಿರುತ್ತಾರೆ.
2. ನಿಶ್ಚಿತಾರ್ಥ ಸೀರೆ: ನಿಶ್ಚಿತಾರ್ಥದ ದಿನ ಹುಡುಗಿ ಉಡುವ ಸೀರೆಯನ್ನು ಗಂಡಿನ ಕಡೆಯವರು ನೀಡಬೇಕು. ಅವರು ಯಾವ ಸೀರೆ ಕೊಡುತ್ತಾರೆ ಎಂಬುದು ಹುಡುಗಿಯ ಮನೆಯಲ್ಲಿ ಚರ್ಚೆಯಾಗುವ ವಿಷಯ. ಯಾಕಂದ್ರೆ, ಆ ಸೀರೆ, ಗಂಡಿನ ಮನೆಯವರ ಪ್ರತಿಷ್ಠೆಯ ಸೂಚಕ.
3. ಧಾರೆ ಸೀರೆ: ಹೆಣ್ಣು ಮದುವೆಯ ದಿನ ಉಡುವುದು ಧಾರೆ ಸೀರೆ. ಹಾಗೆಯೇ, ಮಗಳನ್ನು ಗಂಡನ ಮನೆಗೆ ಕಳುಹಿಸುವಾಗ ಮಡಿಲು ತುಂಬಿ ಕಳುಹಿಸುವುದು ಸಂಪ್ರದಾಯ. ಆಗ ಉಡುವ ಸೀರೆಗೆ ಮಡಿಲಕ್ಕಿ ಸೀರೆ ಎನ್ನುತ್ತಾರೆ. ಧಾರೆ ಮತ್ತು ಮಡಿಲಕ್ಕಿ ಸೀರೆಗಳು, ಎಂದೆಂದಿಗೂ ಕಪಾಟಿನಲ್ಲಿ ಬೆಚ್ಚಗಿರುವ, ತವರನ್ನು ಪದೇ ಪದೆ ನೆನಪಿಸುವ ಸೀರೆಗಳು.
4. ಸೀಮಂತದ ಸೀರೆ: ಗರ್ಭಿಣಿಯರಿಗೆ ಸೀಮಂತದ ಸಂದರ್ಭದಲ್ಲಿ ತವರಿನವರು ಸೀರೆ ಕೊಡುತ್ತಾರೆ. ಸಮೃದ್ಧಿಯ ಸಂಕೇತವೆಂದು ಹಸಿರು ಸೀರೆಯನ್ನು ಕೊಡುವುದು ವಾಡಿಕೆ. ಕನಿಷ್ಠ ಪಕ್ಷ ಹಸಿರು ಅಂಚು ಇರುವ ಸೀರೆಯನ್ನೇ ಆರಿಸಿಕೊಳ್ಳುವುದು ರೂಢಿ.
5. ಮಲಿರ್‌ ಸೀರೆ: ಹೆಣ್ಣು ಮದುವೆಯಾಗಿ ಹೋದರೂ, ತವರಿನಿಂದ ದೂರಾಗುವುದಿಲ್ಲ. ಮುಂದೆ ಆಕೆ, ಮಗನಧ್ದೋ- ಮಗಳಧ್ದೋ ಮದುವೆ ಮಾಡುವಾಗ ಆಕೆಗೆ ತವರಿನವರು ಸೀರೆ ಕೊಡುವ ಸಂಪ್ರದಾಯವಿದೆ. ಅದಕ್ಕೆ ಮಲಿರ್‌ ಸೀರೆ ಎಂದು ಹೆಸರು. ಆಕೆ ಆ ಸೀರೆಯನ್ನುಟ್ಟು ಮಗನ/ ಮಗಳ ಧಾರೆ ಎರೆಯಬೇಕು.

ಅಂಕಿ- ಅಂಶ
7- ಒಂದು ಇಳಕಲ್‌ ಸೀರೆ ನೇಯಲು ತಗುಲುವ ದಿನ
65- ಮೈಸೂರು ಸಿಲ್ಕ್ ಸೀರೆಯಲ್ಲಿರುವ ಬೆಳ್ಳಿ
240- ಸೀರೆಯ ಮೇಲೆ ಚಿನ್ನದೆಳೆಯ ಬಾರ್ಡರ್‌ ಮೂಡಿಸಲು ಇಷ್ಟು ನಿಮಿಷಗಳು ಬೇಕು.
1912- ಮೈಸೂರು ಸಿಲ್ಕ್ ಫ್ಯಾಕ್ಟರಿ ಆರಂಭವಾದ ವರ್ಷ

ಸೀರೆಗಳ ಫ್ಯಾಷನ್‌ ಶೋ
ಪ್ರಖ್ಯಾತ ಉಡುಪು ಬ್ರ್ಯಾಂಡ್‌ಗಳು ಮತ್ತು ಸೌಂದರ್ಯವರ್ಧಕ ತಯಾರಕ ಸಂಸ್ಥೆಗಳು ನಡೆಸುವ‌ ಫ್ಯಾಷನ್‌ ವೀಕ್‌ನಂಥ ಅದ್ಧೂರಿ ವೇದಿಕೆಗಳಲ್ಲಿ ಡಿಸೈನರ್‌ ಸೀರೆಗಳ ಫ್ಯಾಷನ್‌ ಶೋಗಳು ನಡೆಯೋದು ಗೊತ್ತೇ ಇದೆ. ಹಾಗೆಯೇ, ಪಾರಂಪರಿಕ ಶೈಲಿಯಲ್ಲಿ ಸೀರೆಯುಟ್ಟು ಕ್ಯಾಟ್‌ ವಾಕ್‌ ಮಾಡುವ ಫ್ಯಾಷನ್‌ ಶೋಗಳು ಕೂಡಾ ನಡೆಯುತ್ತವೆ. ಪ್ರವಾಸೋದ್ಯಮ ಇಲಾಖೆ ವತಿಯಿಂದ ಮೈಸೂರು ಸಿಲ್ಕ್ ಸೀರೆಗಳ ಫ್ಯಾಷನ್‌ ಶೋ ನಡೆದಿತ್ತು. ಅಷ್ಟೇ ಅಲ್ಲದೆ, ಅಮ್ಮಂದಿರ ಧಾರೆ ಸೀರೆಯನ್ನು ಉಟ್ಟು ರ್‍ಯಾಂಪ್‌ ವಾಕ್‌ ಮಾಡುವುದು, ಕಾಲೇಜುಗಳಲ್ಲಿ ಇತ್ತೀಚೆಗೆ ಟ್ರೆಂಡ್‌ ಆಗುತ್ತಿದೆ.

ಸಿನಿಮಾ ಟು ಸೀರೆ
ಹೆಣ್ಮಕ್ಕಳ ಸೀರೆ ಪ್ರೀತಿಯನ್ನು ಮತ್ತಷ್ಟು ಹೆಚ್ಚಿಸಿದ ಖ್ಯಾತಿ ಸಿನಿಮಾಗಳಿಗೆ ಸಲ್ಲಬೇಕು. ಕಲ್ಪನಾ, ಸರಿತಾ, ಭಾರತಿ, ಆರತಿ, ಲಕ್ಷ್ಮಿ ಮುಂತಾದ ನಟಿಯರನ್ನು ಮತ್ತಷ್ಟು ಮುದ್ದಾಗಿ ತೋರಿಸಿದ್ದೇ ಸೀರೆ. ಅದರಲ್ಲೂ ಮಿನುಗುತಾರೆ ಕಲ್ಪನಾರ ಸೀರೆ ಸ್ಟೈಲ್‌ ಎಷ್ಟು ಜನಪ್ರಿಯವಾಗಿತ್ತೆಂದರೆ, “ಕಲ್ಪನಾ ಯಾವ ಸೀರೆ ಉಟ್ಟಿದ್ದಾಳೆ ನೋಡೋಣ’ ಅಂತಲೇ ಜನ ಕುತೂಹಲದಿಂದ ಥಿಯೇಟರ್‌ಗೆ ಹೋಗುತ್ತಿದ್ದರಂತೆ. ಸ್ವತಃ ತಾವೇ ವಸ್ತ್ರವಿನ್ಯಾಸ ಮಾಡಿಕೊಳ್ಳುತ್ತಿದ್ದ ಕಲ್ಪನಾರ ಕೆಲವು ಸ್ಟೈಲ್‌ಗ‌ಳು ಈಗಲೂ ರೆಟ್ರೋ ಸ್ಟೈಲ್‌ ಹೆಸರಿನಲ್ಲಿ ಚಾಲ್ತಿಯಲ್ಲಿವೆ. “ಬಂಧನ’ ಸಿನಿಮಾದಲ್ಲಿ ಸುಹಾಸಿನಿ ಉಟ್ಟ ಸೀರೆಗಳೂ ಜನಪ್ರಿಯವಾಗಿದ್ದವು. ಆ ಸಮಯದಲ್ಲೇ ಮೈಸೂರು ಸಿಲ್ಕ್ನವರು “ಬಂಧನ ಸೀರೆ’ ಎಂಬ ಹೆಸರಿನಲ್ಲೇ ವಿಶೇಷ ಸೀರೆಗಳನ್ನೇ ಮಾರುಕಟ್ಟೆಗೆ ಬಿಟ್ಟಿದ್ದು. ಕಾಲ ಬದಲಾದರೂ, “ರಾಮಾಚಾರಿ’ಯಲ್ಲಿ ಮಾಲಾಶ್ರೀ, “ಹುಬ್ಬಳ್ಳಿ’ಯಲ್ಲಿ ರಕ್ಷಿತಾ, “ಆಪ್ತಮಿತ್ರ’ದ ಸೌಂದರ್ಯ, “ಹುಡುಗರು’ ಸಿನಿಮಾದಲ್ಲಿ ರಾಧಿಕಾ ಪಂಡಿತ್‌ರ ಮೂಲಕ ಹೀಗೆ ಸೀರೆ ಸಂಸ್ಕೃತಿ ಮುಂದುವರಿದಿದ್ದು ಸೀರೆಯ ಹೆಗ್ಗಳಿಕೆ.

“ಫ್ಯಾಷನ್‌ ಜಗತ್ತಿನಲ್ಲಿ ಸೀರೆಯಷ್ಟು ಪ್ರಯೋಗಕ್ಕೆ ಒಳಗಾದ ವಸ್ತ್ರ ಮತ್ತೂಂದಿಲ್ಲ ಅನ್ನಿಸುತ್ತೆ. ಶತಮಾನಗಳಷ್ಟು ಹಳೆಯದಾದ ಈ ಉಡುಪು, ಇಂದಿಗೂ ಹೆಣ್ಮಕ್ಕಳ ನೆಚ್ಚಿನ ಡ್ರೆಸ್‌ ಅನ್ನಿಸಿಕೊಳ್ಳಲು ಅದೂ ಒಂದು ಕಾರಣ. ಬೇಕಾದರೆ ಹಿಂದಿನ ಮತ್ತು ಈಗಿನ ಸಿನಿಮಾಗಳನ್ನೇ ಗಮನಿಸಿ. ಸೀರೆ ಮಾತ್ರ ಎಂದೆಂದಿಗೂ ಪ್ರಸ್ತುತ. ವಸ್ತ್ರ ವಿನ್ಯಾಸಕರು ಕಾಲಕ್ಕೆ ತಕ್ಕಂತೆ ಬದಲಾವಣೆಗಳನ್ನು ಮಾಡಿಕೊಳ್ಳುತ್ತಿರುತ್ತಾರೆ. “ಸಂತು ಸ್ಟ್ರೇಟ್‌ ಫಾರ್‌ವರ್ಡ್‌’ನಲ್ಲಿ ರಾಧಿಕಾ ಪಂಡಿತ್‌ರಿಗೆ ನಾನು ಡಿಸೈನ್‌ ಮಾಡಿದ, ಅರ್ಧ ಹಸಿರು- ಅರ್ಧ ಗುಲಾಬಿ ಬಣ್ಣದ ಸೀರೆ ಹಾಗೂ ಅವರ ಮದುವೆಯಲ್ಲಿ ಧರಿಸಿದ್ದ ಗೋಲ್ಡ್‌ ಸೀರೆಯನ್ನು ತುಂಬಾ ಜನ ಮೆಚ್ಚಿಕೊಂಡಿದ್ದರು. ಹೀಗೆ ಹೊಸ ರೂಪದೊಂದಿಗೆ ಬರುವ ಸೀರೆಗೆ ಎಂದಿಗೂ ಪ್ರಾಮುಖ್ಯತೆ ಇದ್ದೇ ಇರುತ್ತದೆ.
-ಸಾನಿಯಾ ಸರ್ದಾರಿಯ, ಖ್ಯಾತ ವಸ್ತ್ರವಿನ್ಯಾಸಕಿ

ಪ್ರಿಯಾಂಕ

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

  • ದೇವರೇ, ಬೇವು ಸ್ವಲ್ಪವೇ ಕೊಡು. ಮಡಿಲ ತುಂಬಾ ಬೆಲ್ಲ ನೀಡು. ನಿನ್ನ ಮಡಿಲಲ್ಲಿ ಬೆಳೆ ಬೆಳೆದು ಸಾವಿರಾರು ಜನರಿಗೆ ಅನ್ನ ನೀಡುವ, ನಿನ್ನನ್ನೇ ನಂಬಿದ ಜನರ ಕೈಬಿಡದಿರು....

  • ಗಾಢ ಬಣ್ಣಗಳನ್ನು ಇಷ್ಟಪಡುವವರಿಗೆ ಕೆಂಪು ಬಣ್ಣದ ಮೇಲೆ ಖಂಡಿತಾ ಒಲವಿರುತ್ತದೆ. ಕೆಂಪು ಅಶುಭದ ಸಂಕೇತ ಅಂತ ಕೆಲವರು ನಂಬುತ್ತಾರಾದರೂ, ಫ್ಯಾಷನ್‌ ಪ್ರಪಂಚಕ್ಕೆ...

  • "ವಯಸ್ಸನ್ನ ನೋಡಿಕೊಂತಾ ಕೂತರೆ ಹೊಟ್ಟೆಪಾಡು ನಡೀಬೇಕಲ್ಲ? ಹೊಟ್ಟೆಗೆ ಒಂದೊತ್ತಿನ ಊಟ ಹಾಕೋರಿಲ್ಲ ಈಗ. ಇದ್ದ ಆಯಸ್ಸನ್ನೆಲ್ಲ ಮಕ್ಕಳ ಬೆಳವಣಿಗೆಗೆ ಮುಡಿಪಾಗಿಟ್ಟಾಯ್ತು....

  • ನಂಬಿದ ಮೌಲ್ಯಗಳಿಗೆ ಧಕ್ಕೆ ಉಂಟಾದಾಗ, ಶರೀರ ಕುಸಿಯುತ್ತದೆ. ಮೈಕೈ ನೋವುತ್ತದೆ. ಮನಸ್ಸಿನ ಪ್ರತಿಯೊಂದು ಆಲೋಚನೆಗಳಿಗೆ ಮತ್ತು ಭಾವನೆಗಳಿಗೆ ಅಂಗಾಂಗಗಳು ಪ್ರತಿಕ್ರಿಯಿಸುತ್ತವೆ. 48ರ...

  • ಬ್ಯೂಟಿ ಪಾರ್ಲರ್‌ಗೆ ಹೋಗಿ ಫೇಶಿಯಲ್‌ ಮಾಡಿಸಿಕೊಳ್ಳೋದು ಮಹಾ ಬೋರು ಅಂತ ಅನ್ನಿಸಿದೆಯಾ? ನನಗಂತೂ ಹಾಗೇ ಅನ್ನಿಸ್ತಿತ್ತು. ಅದಕ್ಕೇ ಪಾರ್ಲರ್‌ಗೆ ಹೋಗೋದನ್ನೇ...

ಹೊಸ ಸೇರ್ಪಡೆ