ಬಾಳು ಸಂಗೀತದಂತೆ…

ವಾದ್ಯ ರಿಪೇರಿಯೇ ಜೀವನಕೆ ದಾರಿ

Team Udayavani, Aug 14, 2019, 5:26 AM IST

ಇರುವುದು ಆರು ಅಡಿ ಅಗಲ, ಹತ್ತು ಅಡಿ ಉದ್ದದ ಪುಟ್ಟ ಅಂಗಡಿ. ಸುತ್ತಲೂ ಗೋಡೆಗೆ ಆವರಿಸಿದ ಥರಹೇವಾರಿ ಸಂಗೀತ ವಾದ್ಯಗಳನ್ನು ನೋಡಿದರೆ ಇಡೀ ಸಂಗೀತ ಲೋಕವೇ ಇಲ್ಲಿದೆಯೇನೋ ಎಂದು ಭಾಸವಾಗುತ್ತದೆ. ಕೊಠಡಿಯ ಪುಟ್ಟ ಜಾಗದಲ್ಲಿ ಕುಳಿತು ವಾದ್ಯಗಳ ರಿಪೇರಿ ಮಾಡುತ್ತಿರುತ್ತಾರೆ 45 ರ ಹರೆಯದ ಮಲ್ಲಮ್ಮ ಬಗರಿಕಾರ. ಸತತ 15 ವರ್ಷಗಳಿಂದ ಅವರ ಹೊಟ್ಟೆ ತುಂಬಿಸುತ್ತಿರುವುದು ತೊಗಲು ವಾದ್ಯಗಳ ರಿಪೇರಿ ಕಾಯಕವೇ!

ಬೆಳಗಾವಿ ಜಿಲ್ಲೆಯ ಸವದತ್ತಿ ಪಟ್ಟಣದ ಬಸ್‌ ನಿಲ್ದಾಣದ ಹತ್ತಿರ ಇರುವ ಗಾಯತ್ರಿ ಮ್ಯೂಸಿಕಲ್‌ ವರ್ಕ್ಸ್ ಎಂಬ ವಾದ್ಯಗಳ ಅಂಗಡಿ ನಡೆಸುತ್ತಿದ್ದಾರೆ ಮಲ್ಲಮ್ಮ. ಇದು ಅವರ ಸ್ವಂತ ಕೊಠಡಿಯಲ್ಲ. ಬಾಡಿಗೆಯ ಜಾಗದಲ್ಲಿ ಅಂಗಡಿ ನಡೆಸುತ್ತಾ, ಜೀವನದ ತಂತಿಯನ್ನು ಮೀಟುತ್ತಿದ್ದಾರೆ. ತಬಲಾ, ಡಗ್ಗಾ, ಡೋಲಕ್‌, ಮೃದಂಗ, ನಗಾರಿ, ರಣ ಹಲಗೆ, ಸಮಳ, ಚೌಡಕಿ, ಜಗ್ಗಲಗಿ ಹೀಗೆ ಅನೇಕ ವಾದ್ಯಗಳನ್ನು ಮಲ್ಲಮ್ಮನವರೇ ತಯಾರಿಸಿ, ಮಾರಾಟ ಮಾಡುತ್ತಾರೆ.

ಚರ್ಮವಾದ್ಯ ಪ್ರವೀಣೆ
ಇವರಿಗೆ ನಾಟಕ ಕಂಪನಿಯವರು, ಭಜನಾ ಸಂಘದವರು ಡೊಳ್ಳಿನ ಸಂಘದವರೇ ಗ್ರಾಹಕರು. ಯಾವ ವಾದ್ಯ ಬೇಕೆಂದು ಗ್ರಾಹಕರು ಬೇಡಿಕೆ ಇಡುತ್ತಾರೋ, ಆ ವಾದ್ಯವನ್ನು ಮಲ್ಲಮ್ಮ ತಯಾರಿಸುತ್ತಾರೆ. ಚರ್ಮ ವಾದ್ಯಗಳನ್ನು ತಯಾರಿಸಿಟ್ಟುಕೊಂಡು ಗ್ರಾಹಕರಿಗಾಗಿ ಕಾಯುವುದೂ ಉಂಟು. ಯಾವ ವಾದ್ಯದ ಮೇಲೆ ಯಾವ ಕಲಾವಿದರ‌ ಋಣವಿರುತ್ತದೋ ಯಾರಿಗೆ ಗೊತ್ತು ಎಂದು ಹೇಳುತ್ತಾರೆ ಮಲ್ಲಮ್ಮ ಬಗರಿಕಾರ.

ಶೃತಿ ಜ್ಞಾನವೂ ಇದೆ
ತಬಲಾ ತಯಾರಿಕೆಗೆ ಚರ್ಮ, ಗಟ್ಟಿ, ಪಡಗ, ಕರಣಿ, ಚರ್ಮದ ದಾರ ಬೇಕಾಗುತ್ತದೆ. ತಯಾರಿಸಿದ ನಂತರ ವಾದ್ಯವನ್ನು ನುಡಿಸಿ, ನಾದ ಸರಿಯಾಗಿ ಹೊಮ್ಮುತ್ತಿದೆಯೇ ಎಂದು ಪರೀಕ್ಷಿಸಿ, ಹೊಮ್ಮದಿದ್ದರೆ ಮತ್ತೆ ಚರ್ಮದ ದಾರವನ್ನು ಬಿಗಿಗೊಳಿಸಿ ಅಪಶ್ರುತಿ ಬರದ ಹಾಗೆ ಸರಿ ಮಾಡಬೇಕು. ಹಾಗಾಗಿ ವಾದ್ಯ ತಯಾರಿಕರಿಗೂ ಶೃತಿಜ್ಞಾನ ಅಗತ್ಯವಾಗಿ ಇರಬೇಕು. ಈ ವಿಷಯದಲ್ಲಿ ಮಲ್ಲಮ್ಮ, ಯಾವ ಸಂಗೀತಗಾರರಿಗೂ ಕಡಿಮೆಯಿಲ್ಲ.

ಫೈಬರ್‌ ವಾದ್ಯದಿಂದ ಪೆಟ್ಟು
ಆರು ತಿಂಗಳಿಗೊಮ್ಮೆ ಮೀರಜ್‌, ಕೊಲ್ಲಾಪುರ, ದಾವಣಗೆರೆಗೆ ಹೋಗಿ ಚರ್ಮವಾದ್ಯಗಳಿಗೆ ಬೇಕಾದ ಕಚ್ಚಾವಸ್ತುಗಳನ್ನು ತರುತ್ತಾರೆ. ನಂತರ ವಾದ್ಯಗಳನ್ನು ಸಿದ್ಧಪಡಿಸಿ ಮಾರಾಟ ಮಾಡುತ್ತಾರೆ. ಒಂದು ನಗಾರಿಯನ್ನು ತಯಾರಿಸಲು ಕನಿಷ್ಠ ಒಂದು ವಾರ ಸಮಯ ಬೇಕಾಗುತ್ತದೆ. ಫೈಬರ್‌ ವಾದ್ಯಗಳ ಭರಾಟೆಯಲ್ಲಿ ಚರ್ಮವಾದ್ಯಗಳನ್ನು ಕೇಳುವವರು ತೀರ ಕಡಿಮೆಯಾದರೂ ಕುಲ ಕಸುಬು ಬಿಡುವ ಹಾಗಿಲ್ಲ. ತಯಾರಿ ಇಲ್ಲದ ದಿನಗಳಲ್ಲಿ, ರಿಪೇರಿಗೆ ಬಂದ ವಾದ್ಯಗಳನ್ನು ಸರಿಪಡಿಸಿ, ಅವುಗಳಿಗೆ ಜೀವ ತುಂಬುವುದು ಮಲ್ಲಮ್ಮನ ಕಾಯಕ.

ಮಲ್ಲಮ್ಮ ಬಗರಿಕಾರ ಅವರಿಗೆ ಒಬ್ಬ ಪುತ್ರ, ಇಬ್ಬರು ಪುತ್ರಿಯರು ಇದ್ದಾರೆ. ಪತಿ ತೀರಿಕೊಂಡ ಬಳಿಕ ಸಂಸಾರದ ನೊಗ ಇವರ ಹೆಗಲಿಗೆ ಬಿತ್ತು. ಒಬ್ಬ ಮಗಳಿಗೆ ವಿವಾಹವಾಗಿದೆ. ಮಗ, ಬೀಡಾ ಅಂಗಡಿ ನಡೆಸುತ್ತಿದ್ದರೆ, ಇನ್ನೊಬ್ಬ ಮಗಳು ಈಗ ಹೈಸ್ಕೂಲ್‌ ಓದುತ್ತಿದ್ದಾಳೆ. ಬಡತನವೇ ಹಾಸಿ ಹೊದ್ದು ಮಲಗಿರುವ ಮಲ್ಲಮ್ಮನ ಕುಟುಂಬಕ್ಕೆ ಕಲಾಸೇವೆಯೇ ಶ್ರೀರಕ್ಷೆ.

ತಯಾರಿಸಿದ ವಾದ್ಯದಿಂದ ನಾದ ಸರಿಯಾಗಿ ಹೊಮ್ಮುತ್ತಿದೆಯೇ ಅಂತ ಪರೀಕ್ಷಿಸಿ, ಅಪಸ್ವರ ಹೊರಡುತ್ತಿದ್ದರೆ ಚರ್ಮದ ದಾರವನ್ನು ಪುನಃ ಬಿಗಿಗೊಳಿಸಬೇಕಾಗುತ್ತೆ. ಹಾಗಾಗಿ ವಾದ್ಯ ತಯಾರಿಕರಿಗೂ ಶೃತಿಜ್ಞಾನ ಅಗತ್ಯ.
– ಮಲ್ಲಮ್ಮ

-ಟಿ. ಶಿವಕುಮಾರ್‌

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

  • ಪುರಾಣದಲ್ಲಿ ಕಡುಕಷ್ಟ ಅನುಭವಿಸಿದ ಕೆಲವರ ಹೆಸರು ಚೆನ್ನಾಗಿದೆ ಎನಿಸಿದರೂ, ಅದನ್ನು ಮಗನಿಗೆ ಇಡುವುದು ಶೋಭೆಯಲ್ಲ ಅಂತ ಅನ್ನಿಸಿತು. ಕ್ಷ, ಶಿ, ಋ, ಕ್ರೂ, ಹ್ರಂ, ಹ್ರಿಂ...

  • ಅಡುಗೆಗೆ ಬಳಸುವ ಕಾಳು, ಹಿಟ್ಟು, ತಾಜಾ ತರಕಾರಿ, ಸೊಪ್ಪು, ಉಪ್ಪು, ಹಣ್ಣು... ಇವನ್ನೆಲ್ಲ ಇಡುವುದೇ ಪ್ಲಾಸ್ಟಿಕ್‌ಡಬ್ಬಿಗಳಲ್ಲಿ/ ಕವರ್‌ಗಳಲ್ಲಿ. ಹೀಗೆ ಮಾಡುವ ಮೂಲಕ,...

  • ಪುಟ್ಟ ಮಗಳನ್ನು ಆ ಅಜ್ಜ-ಅಜ್ಜಿ ಪಕ್ಕ ಕೂರಿಸಿ, ಕೈಯಲ್ಲಿ ಕಚೀìಫ್ ಹಿಡಿದು, ಓಡುವ ಭಂಗಿಯಲ್ಲಿ ಸಿದ್ಧಳಾಗಿ ನಿಂತೆ. ಅಷ್ಟರಲ್ಲೇ ಚಿತ್ರದುರ್ಗದ ಮತ್ತೂಂದು ಬಸ್ಸು...

  • ಅಡುಗೆಮನೆಯ ಸಿಂಕ್‌ನಲ್ಲಿರೋ ಪಾತ್ರೆಗಳನ್ನು ಒಂದು ಹೊತ್ತು ತೊಳೆಯದಿದ್ದರೂ ಹಿಮಾಲಯ ಪರ್ವತವನ್ನೇ ಮೀರಿಸುವಂತೆ, ನಲ್ಲಿಗೆ ಮುತ್ತಿಡುತ್ತಾ ನಿಂತುಬಿಡುತ್ತವೆ....

  • ಹೆತ್ತವರ ಕಷ್ಟಕ್ಕೆ ಹೆಣ್ಣುಮಕ್ಕಳು ಬೇಗ ಕರಗುತ್ತಾರೆ. ಅಪ್ಪ-ಅಮ್ಮನನ್ನು ಮಗನಿಗಿಂತ, ಮಗಳೇ ಚೆನ್ನಾಗಿ ನೋಡಿಕೊಳ್ಳುತ್ತಾಳೆ ಎನ್ನುವುದು ನೂರಕ್ಕೆ ನೂರು ಸತ್ಯ....

ಹೊಸ ಸೇರ್ಪಡೆ