ಅಮ್ಮ ಅಮ್ಮನೇ ಅತ್ತೆ ಅತ್ತೇನೇ!

ಅವರು ಇವರಾಗಲ್ಲ, ಇವರು ಅವರಾಗಲ್ಲ...

Team Udayavani, Sep 18, 2019, 5:00 AM IST

ಅತ್ತೆ ಯಾವತ್ತೂ ಅಮ್ಮನಾಗುವುದಿಲ್ಲ, ಸೊಸೆ ಮಗಳಂತೆ ಇರುವುದಿಲ್ಲ ಎಂಬುದು ಹಲವರ ದೂರು, ವಾದ. ಅತ್ತೆ, ಯಾಕೆ ಅಮ್ಮನಾಗಬೇಕು? ಸೊಸೆ ಅದ್ಯಾಕೆ ಮಗಳಾಗಬೇಕು? ಅವರು “ಅವರಾಗಿಯೇ ‘ ಇದ್ದೂ ನೆಮ್ಮದಿಯಿಂದ ಬಾಳಲು ಸಾಧ್ಯವಿಲ್ಲವೇ?

ಸಂಜೆಯ ವಾಕಿಂಗ್‌ ತಪ್ಪಿ ಹೋಗಿತ್ತು. ಬೆಳಗ್ಗೆ ಬೇಗ ಎದ್ದು ನಷ್ಟ ತುಂಬಿಕೊಳ್ಳುವ ಹಪಾಹಪಿ ನನ್ನದು. ಭರಭರನೆ ನಡೆಯುತ್ತಿದ್ದವಳಿಗೆ ಮುಂದೆ ನಡೆಯುತ್ತಿದ್ದ ಒಬ್ಟಾಕೆ ಕಣ್ಣೊರೆಸಿಕೊಳ್ಳುತ್ತಿದ್ದುದೂ, ಮತ್ತೂಬ್ಬಳು ಅವಳನ್ನು ಸಮಾಧಾನ ಮಾಡುವ ರೀತಿಯಲ್ಲಿ ಬೈಯ್ಯುತ್ತಿದ್ದುದೂ ಕಾಣಿಸಿ ಹೆಜ್ಜೆಗಳನ್ನು ತುಸು ನಿಧಾನಿಸಿದೆ. ತಪ್ಪಲ್ಲವಾ ಕೇಳ್ಳೋದು ಅನ್ನಿಸಿದರೂ ಅವರ ಮಾತುಗಳು ಕಿವಿಗೆ ಬೀಳುತ್ತಲೇ ಇತ್ತು…

“ಎಷ್ಟು ಮಾಡಿದ್ರೂ ತೃಪ್ತಿ ಇಲ್ಲ ಅವರಿಗೆ. ನಾನೇನೂ ಬೇಕಂತ ಹಾಲು ಉಕ್ಕಿಸಲಿಲ್ಲ. ಸಿಮ್‌ನಲ್ಲೇ ಇಟ್ಟಿ¨ªೆ. ಅದ್ಯಾವಾಗ, ಹೆಂಗೆ ಉಕ್ಕಿತೋ ಗೊತ್ತಾಗಲಿಲ್ಲ. ಅದಕ್ಕೆ, ಮೂರು ಹೊತ್ತೂ ಮೊಬೈಲ್‌ ನೋಡ್ತಾ ಕೂತ್ರೆ ಇನ್ನೇನಾಗುತ್ತೆ.. ಹಾಲಿಟ್ಟ ಮೇಲೆ ನೋಡೋಕಾಗಲ್ವಾ ಅಂತ ಒಂದೇ ಸಮ ಬೈತಲೇ ಇದಾರೆ’…

“ಆಕೆ ಎಂದೂ ಹಾಲು ಉಕ್ಕಿಸಲೇ ಇಲ್ವಂತಾ ? ದಬಾಯಿಸಿ ಕೇಳಬೇಕಿತ್ತು ನೀನು…’
“ಹೆಂಗೆ ಕೇಳ್ತೀಯಾ? ಮೊಬೈಲ್‌ ಕೈಯ್ಯಲ್ಲಿತ್ತು.. ಸಾಕ್ಷಿ ಸಮೇತ ಸಿಕ್ಕಿ ಬಿದ್ದಂಗೆ ಆಯಿತು..ಐದು ನಿಮಿಷ ಹಿಡ್ಕೊಳಂಗಿಲ್ಲ ಬಂದುಬಿಡ್ತಾರೆ. ಆ ಕೆಲಸ ಆಗಿಲ್ಲ, ಈ ಕೆಲಸ ಆಗಿಲ್ಲ. ಮೊಬೈಲ್‌ ಬಿಡು, ಕೆಲಸ ಮಾಡು… ಇದೇ ಮಂತ್ರ’.
“ಅವರ ಮಗಳು ಹಿಡ್ಕೊಳಲ್ವಾ? ನಾನು ಎಷ್ಟು ಹೊತ್ತಿಗೆ ನಿಮ್ಮನೆಗೆ ಬಂದ್ರೂ, ನಿಮ್ಮತ್ತೆ-ಅವರ ಮಗಳ ಜೊತೆ ಮಾತು ಆಡ್ತಲೇ ಇರ್ತಾರೆ’ “ಅದನ್ನೆಲ್ಲ ಕೇಳ್ಳೋರು ಯಾರು? ಅತ್ತೆ ಯಾವತ್ತೂ ಅಮ್ಮ ಆಗೋಕಾಗೋಲ್ಲ… ಅಮ್ಮ ಅಮ್ಮನೇ .. ಅತ್ತೆ ಅತ್ತೇನೆ..’

ಸಮಯ ಮುಗಿದಿದ್ದರಿಂದ ಮನೆ ಕಡೆ ಹೊರಟೆ. ಅವರಿಬ್ಬರ ಮಾತುಕತೆ ಮನಸ್ಸಿನಲ್ಲಿ ಮತ್ತೆ ಮತ್ತೆ ಮರುಕಳಿಸುತ್ತಲೇ ಇತ್ತು. ತಿಂಡಿ ಮಾಡುವಾಗ, ಅವರ ಅತ್ತೆ ತನ್ನ ಗೆಳತಿಯ ಜೊತೆ “ಮಗಳು ಮಗಳೇ.. ಸೊಸೆ ಸೊಸೆಯೇ’ ಎಂದು ಹೇಳುತ್ತಿರಬಹುದಾ ಎಂಬ ಆಲೋಚನೆ ಸುಳಿಯಿತು. ತಿಂಡಿ ಕೊಡುತ್ತಾ ಮಗಳ ಬಳಿ ಅದನ್ನೇ ಹೇಳಿದೆ. ಐದು ನಿಮಿಷ ಬಿಟ್ಟು ಅವಳು ಕೈ ತೊಳೆಯುತ್ತಾ- “ಈ ಅತ್ತೆ, ಯಾಕೆ ಅಮ್ಮನಾಗಬೇಕು? ಸೊಸೆ ಯಾಕೆ ಮಗಳಾಗಬೇಕು? ಹಂಗೆಲ್ಲಾ ಅಂದ್ಕೊಂಡು ಯಾಕೆ ಒ¨ªಾಡಬೇಕು? ತುಂಬಾ ಕಾಂಪ್ಲಿಕೇಟಪ್ಪಾ ಈ ವಿಷಯಗಳು..’ ಎಂದು ಗೊಣಗಿದಳು. ನಂತರ, ಕಾಲೇಜಿಗೆ ಹೊತ್ತಾಯಿತೆಂದು ಓಡಿಹೋದಳು. ಹಾಗೇ ಯೋಚಿಸುತ್ತಾ ಕೂತೆ..

ತಾಯಿ ಅಂದ್ಕೋ ಅತ್ತೆಯನ್ನು, ಮಗಳು ಅಂದ್ಕೋಳಿ ಸೊಸೆಯನ್ನು .. ಹೀಗೆ ಪರಸ್ಪರ ನಿರೀಕ್ಷೆ ಇಟ್ಕೊಂಡು ಬರೋ ಸಂಬಂಧಗಳು ಹೀಗೆ ಅಂದುಕೊಳ್ಳುವ ಸಮಸ್ಯೆಗೆ ಸಿಕ್ಕಿಯೇ ನೋಯುತ್ತವಾ? ಆ ಮನೆಗೆ ಹೋದಕೂಡಲೇ, ಮಗಳಾದರೆ ಕೂಡಿಸಿ ಮಾಡುತ್ತಿದ್ದಳು ಎನ್ನುವ ಅತ್ತೆಗೂ.. ಅಮ್ಮನಾಗಿದ್ದರೆ ಸಣ್ಣ ತಪ್ಪುಗಳನ್ನೂ ಎತ್ತಿ ಹಿಡಿಯುತ್ತಿರಲಿಲ್ಲ ಎನ್ನುವ ಸೊಸೆಗೂ ಆ ಮಾತುಗಳು ಎಷ್ಟು ಪೊಳ್ಳು ಎಂಬುದು ತಿಳಿಯದ್ದೇನಲ್ಲ. ಗಂಟೆ ಒಂಬತ್ತಾದರೂ ಎದ್ದು ಬಾರದ ಮಗಳನ್ನು ಒದ್ದು ಎಬ್ಬಿಸುವ ಅಮ್ಮ , ಟೈಮಿಗೆ ಸರಿಯಾಗಿ ತಿಂಡಿ ಕೊಡಲಿಲ್ಲವೆಂದು ಧುಮುಗುಟ್ಟುತ್ತಾ ಹೊರಡುವ ಮಗಳು ಮದುವೆಯ ನಂತರವೇ ಆದರ್ಶದ ಮಾತುಗಳನ್ನು ಆರಂಭಿಸುವುದಾ? ಇಲ್ಲಿ ಅಮ್ಮನನ್ನು ಅತ್ತೆ ಎಂದೋ… ಮಗಳನ್ನು ಸೊಸೆ ಎಂದೋ ಓದಿಕೊಂಡರೆ ? ಎದ್ದು ಬಾರದ ಸೊಸೆಯನ್ನು ಒದ್ದು ಎಬ್ಬಿಸುವ ಅತ್ತೆಯಿದ್ದರೆ? ಟೈಮಿಗೆ ತಿಂಡಿ ಕೊಡಲಿಲ್ಲವೆಂದು ಧುಮುಗುಟ್ಟಿದರೆ ಸೊಸೆ? ಅಮ್ಮ ಇರುವುದು ಹಾಗೇ. ಬೈಯ್ಯುತ್ತಾಳೆ .. ಮುದ್ದಿಸುತ್ತಾಳೆ. ಕಾಲೇಜಿಗೆ ಹೋಗದಿದ್ದರೆ ಉಗಿದು ಉಪ್ಪು ಹಾಕುತ್ತಾಳೆ. ತುಸು ಮೈ ಕಾಣುವ ಬಟ್ಟೆ ಹಾಕಿದರೆ, ಮೈ ಕಾಣದಂತೆ ಮೊದುÉ ಬಟ್ಟೆ ಸರಿಮಾಡ್ಕೊà ಎನ್ನುತ್ತಾಳೆ. ಕಾಳಜಿ ವಹಿಸುತ್ತಾಳೆ.. ಬೇಕಾದ ಅಡುಗೆ ಮಾಡಿಹಾಕುತ್ತಾಳೆ.. ಎಲ್ಲವೂ ಪ್ರೀತಿಯಾಗಿಯೇ ಕಾಣುತ್ತದೆ.. ಎಲ್ಲವೂ ಪರಮ ಪ್ರೀತಿಯೇ. ಏಕೆಂದರೆ, ಅಲ್ಲಿ ಕಾಣಿಸುವುದು ಅವಳ ವರ್ತನೆಯಲ್ಲ ..ಅವಳ ಒಂದಂಶ ತಾನೆಂಬ ಅರಿವು. ಅವಳ ಎದೆಯೊಳಗಿರುವ ಬೆಚ್ಚನೆಯ ಪ್ರೀತಿ.. ಮತ್ತು ಆ ಪ್ರೀತಿಯ ಬಗ್ಗೆ ಮಗಳಿಗಿರುವ ದೃಢ ನಂಬಿಕೆ. ಸ್ವಂತ ಭಾವ.. ತನ್ನದೆಂಬ ಭಾವ…

ಅತ್ತೆಗೂ ತನ್ನ ಮಗಳ ಬಗ್ಗೆ ಹೀಗೇ.. ಸೊಸೆಗೂ ತನ್ನಮ್ಮನ ಬಗ್ಗೆ ಹೀಗೇ.. ಸ್ವಂತ ಅದು.. ತನ್ನದೆಂಬ ಭಾವ.. ತಾಯಿಯಂತೆಯೇ ಏಕೆ ಕಾಣಬೇಕು ಅತ್ತೆಯನ್ನು? ಅತ್ತೆಯಂತೆಯೇ ಕಾಣಬಾರದೇಕೆ? ಮಗಳೆಂದು ಕರೆಯುವ ಬದಲು ಸೊಸೆಯಂತೆಯೇ ಪ್ರೀತಿಸಬಾರದೇಕೆ ಸೊಸೆಯನ್ನು? ಮನೆಗೆ ಬಂದು, ನಿಧಾನವಾಗಿ ಪರಸ್ಪರ ಹೊಂದಿಕೊಳ್ಳಲು ಕಲಿತು ವರ್ಷಗಳ ನಂತರ ಉದಿಸುವ.. ಉದಿಸಬಹುದಾದ ತಮ್ಮದೆಂಬ ಭಾವವನ್ನು ಅವಸರದಲ್ಲಿ ಕೃತಕವಾಗಿ ಆವಾಹಿಸಿಕೊಂಡಂತಾಗುವುದಿಲ್ಲವೇ? ಈ ಕೃತಕವಾಗಿ ಹೊರಹೊಮ್ಮಿಸಿಕೊಳ್ಳುವ ಭಾವಗಳು ಅದಕ್ಕೆ ಅನುಗುಣವಾಗಿ, ಕಷ್ಟಪಟ್ಟು ತಾನಲ್ಲದ ಹಾಗಿರಲು ನಡೆಸುವ ಪ್ರಯತ್ನ.. ಎಲ್ಲವೂ ಒಂದು ದಿನ ಕುಸಿದಾಗ ನಿಜ ಮುಖಗಳು ಹೊರಬಂದು ಒಬ್ಬರ ಮೇಲೊಬ್ಬರು ತಪ್ಪು ಹಾಕುವ ಹಾಗಾಗುತ್ತದೆಯಾ?

ಮೊನ್ನೆ ಒಬ್ಬರು ಒಂದು ಮಾತು ಹೇಳಿದರು: ಮಗಳ ಮದುವೆಯಾದರೆ ಅಳಿಯ ಮಗನಾಗಿಬಿಡುತ್ತಾನೆ… ಮಗ ಮದುವೆಯಾದ ಮೇಲೆ ಮಗನಾಗಿ ಉಳಿಯುವುದಿಲ್ಲ. ಹೆಂಡತಿಗೆ ಗಂಡನಾಗುತ್ತಾನೆ. ಇದಕ್ಕೆ ಪ್ರತಿಯಾಗಿ ನಾನೇನೂ ಮಾತನಾಡಲಿಲ್ಲ. ಅವರ ಮೊದಲನೆಯ ಸಾಲಿನ ಹೆಮ್ಮೆಯೇ ಎರಡನೆಯ ಸಾಲಿನ ದುರಂತಕ್ಕೂ ಕಾರಣವೇನೋ ಎನ್ನಿಸಿ ವಿಷಾದ ಮೂಡಿತು.

-ಮಾಲಿನಿ ಗುರುಪ್ರಸನ್ನ


ಈ ವಿಭಾಗದಿಂದ ಇನ್ನಷ್ಟು

  • ನಯನಾಗೆ 27 ವರ್ಷಕ್ಕೆ ಮದುವೆಯಾಯ್ತು. ಎಂಜಿನಿಯರಿಂಗ್‌ ಮುಗಿಸಿ ಮೂರು ವರ್ಷ ಸಣ್ಣ ಕಂಪನಿಯಲ್ಲಿ, ಕಡಿಮೆ ಸಂಬಳಕ್ಕೆ ದುಡಿದಿದ್ದ ಆಕೆಗೆ ಆಗಷ್ಟೇ ಹೆಸರಾಂತ ಎಂಎನ್‌ಸಿಯಲ್ಲಿ...

  • ಇಷ್ಟು ಸಣ್ಣ ವಯಸ್ಸಿನಲ್ಲೇ ಮೊಬೈಲ್‌ನಲ್ಲಿ ಆ್ಯಪ್‌ಗ್ಳನ್ನು ಡೌನ್‌ಲೋಡ್‌ ಮಾಡುತ್ತಾನೆ, ಅವನಿಗೆ ಗೊತ್ತಿಲ್ಲದ ಗೇಮೇ ಇಲ್ಲ, ಯುಟ್ಯೂಬ್‌ನಲ್ಲಿ ತನಗೆ ಬೇಕಾದ್ದನ್ನು...

  • ಮನೆಯಲ್ಲಿ ಹೆಣ್ಣುಮಗು ಹುಟ್ಟಿದರೆ ಅವರಿಗೆ ಸಂಭ್ರಮ. ಗಂಡು ಮಗುವಿಗೆ ಆದ್ಯತೆ ಕಡಿಮೆ. ಮನೆಯ ಹೆಚ್ಚಿನ ಜವಾಬ್ದಾರಿಗಳನ್ನು ಹೆಣ್ಣೇ ಹೊರುತ್ತಾಳೆ. ಕೊನೆಯ ಮಗಳು...

  • ಎಲ್ಲದಕ್ಕೂ ಒಂದು ಕೊನೆ ಅಂತ ಇರತದ. ಅದ ಆಗಬೇಕು. ಮೊನ್ನೆ, ನಿಮ್ಮ ಅಪ್ಪಾರ ಕೊಡಸಿದ ಸೈಕಲನ್ನ ಮಾರಲ್ಲದನ ಇಟಕೊಂಡ್ರಿ. ಬೇಕಾದ್ದು, ಬ್ಯಾಡಾದ್ದು ಎಲ್ಲಾ ಇಟಕೊಂಡ...

  • ಬದುಕು ಕೆಲವೊಮ್ಮೆ ಸೈಕಲ್‌ ಹೊಡಿಸುತ್ತೆ, ನೂರಾರು ಕಷ್ಟಗಳನ್ನು ತಲೆಯ ಮೇಲೆ ಸುರಿಯುತ್ತೆ. ಕೆಲವರು ಕಷ್ಟಗಳಿಗೆ ಶರಣಾಗಿ ಬಿಡುತಾರೆ. ಇನ್ನೂ ಕೆಲವರು ಕಷ್ಟಗಳಿಗೇ...

ಹೊಸ ಸೇರ್ಪಡೆ