ಅಮ್ಮಂದಿರ ಹಾಡು

ಎರಡು ದೋಣಿಯಲ್ಲಿ ಕಾಲಿಟ್ಟು...

Team Udayavani, Nov 13, 2019, 5:05 AM IST

ಕೆಲಸದ ಒತ್ತಡವೋ, ಪ್ರಯಾಣದ ಸುಸ್ತೋ,ಮಾನಸಿಕ ಹಿಂಸೆಯೋ ಅಥವಾ ಮನೆಗೆಲಸದ ಅನಿವಾರ್ಯತೆಯೊ ಗೊತ್ತಿಲ್ಲ, ಹೆತ್ತ ಮಕ್ಕಳ ಕಲಿಕೆಯ ಬಗ್ಗೆ ಅಮ್ಮಂದಿರ ಕಾಳಜಿ ಕಡಿಮೆಯಾಗುತ್ತಿದೆ. ಇದು ಒಬ್ಬರ ಸಮಸ್ಯೆಯಲ್ಲ, ಎಲ್ಲಾ ಉದ್ಯೋಗಸ್ಥ ಮಹಿಳೆಯರ ಸಮಸ್ಯೆ.

“ಮಮ್ಮಿ ಇವತ್‌ ಮ್ಯಾಥ್ಸ್ ಕ್ಲಾಸ್‌ದಾಗ 12ರ ಟೇಬಲ್ಸ್‌ ಕಲ್ಸಿದ್ರು, ಮತ್ತ ಇಂಗ್ಲಿಷ್‌ ಕ್ಲಾಸ್‌ದಾಗ ತೆನಾಲಿರಾಮನ ಕಥೆ ಹೇಳಿದ್ರು…’ ಅನ್ನೋ ಏಳೂವರೆ ವರ್ಷದ ಮಗಳಿಗೆ, “ಹುಂ’ ಎಂದಷ್ಟೇ ಉತ್ತರಿಸಿದಳು ಅಮ್ಮ. ಜೊತೆಗೆ, “ಮಮ್ಮಿ , ಇವತ್ತು ಕ್ಲಾಸ್‌ನಾಗ ರೈಮ್‌ ಹೇಳಿದ್ರ, ಮತ್ತ ಮತ್ತ ಆಲ್ಫಾಬೆಟ್‌ ಬರಸಿದ್ರ, ನಾನ್‌ ರೈಮ್ಸ್‌ ಹಾಡೂದನ್ನ ಸ್ವಲ್ಪ ಕೇಳ’… ಎಂದು ನಾಲ್ಕೂವರೆ ವರ್ಷದ ಮಗು, ತಾಯಿಯ ನಿಷ್ಕಾಳಜಿಯನ್ನು ಕಂಡು, ಆಕೆಯ ಮುಖವನ್ನು ತನ್ನೆರಡು ಚಿಕ್ಕ ಚಿಕ್ಕ ಅಂಗೈಯಲ್ಲಿ ಹಿಡಿದು ಒತ್ತಾಯವಾಗಿ ತನ್ನೆಡೆಗೆ ಕೇಂದ್ರೀಕರಿಸಲು ಪ್ರಯತ್ನಿಸುತ್ತಿತ್ತು.

ಇದು ಆ ಮಗುವಿನ ನಿತ್ಯದ ರೂಢಿ. ದಿನಾಲೂ ಶಾಲೆಯಿಂದ ಬಂದ ತಕ್ಷಣ ಅಜ್ಜಿಯ ಸುಪರ್ದಿಗೆ ಜಾರಿ, ಬೂಟ್‌ ತೆಗೆದು, ಡ್ರೆಸ್‌ ಬದಲಿಸಿ, ಮುಖ ತೊಳೆದು, ಮನಸ್ಸಿದ್ದರೆ ಊಟ ಮಾಡಿ, ಮಮ್ಮಿ ಬರುವುದರೊಳಗೆ ತನ್ನಷ್ಟಕ್ಕೆ ತಾನೇ ಹೋಂವರ್ಕ್‌ ಕೂಡಾ ಮುಗಿಸುತ್ತಿದ್ದಳು.

ಜೀವನ ಸಂಘರ್ಷದಲ್ಲಿ ಮಹಿಳೆಯೂ ಕೆಲಸಕ್ಕೆ ಹೋಗುವುದು ಅನಿವಾರ್ಯ. ಕೆಲಸ ಮುಗಿಸಿ ಬಂದಮೇಲೆ, ಮನೆಯ ಇತರೆ ಕೆಲಸಗಳನ್ನು ಮಾಡಿ, ಮಾರನೆಯ ದಿನದ ಅಡುಗೆಗೂ ತಯಾರಿ ನಡೆಸಿ, ಸುಸ್ತಾಗುವ ಜೀವಕ್ಕೆ ಹೆತ್ತ ಮಕ್ಕಳ ಕಡೆ ಗಮನ ಹರಿಸಲೂ ಕೆಲವೊಮ್ಮೆ ಆಗುವುದಿಲ್ಲ. ಮರುದಿನ ಬೆಳಗ್ಗೆ ಎದ್ದರೆ ಮತ್ತದೇ ನಿತ್ಯದ ಜಂಜಾಟಗಳು, ಅಡುಗೆ, ಆಫೀಸು ಕೆಲಸ… ದುಡಿಯುವುದು ಎರಡು ಹೊತ್ತಿನ ಊಟಕ್ಕಾಗಿ ಎಂದು ಗೊತ್ತಿದ್ದರೂ, ಕೆಲವು ಸಲ ಒಂದು ತುತ್ತೂ ಬಾಯಿಗೆ ಹಾಕದೆ ನಾಗಾಲೋಟದಲ್ಲಿ ಓಡುತ್ತಿರುವುದು ಇಂದಿನ ಮಹಿಳೆಯರಿಗೆ ಅನಿವಾರ್ಯ. ಹೀಗಿರುವಾಗ ಮಕ್ಕಳ ಬೇಕು-ಬೇಡಗಳನ್ನು ಆಲಿಸಲು ಸಮಯವೆಲ್ಲಿದೆ?

ಅದರಲ್ಲೂ ಶಿಕ್ಷಕಿಯರ ಪಾಡು ಕೇಳಲೇಬೇಡಿ. ಶಾಲೆಯಲ್ಲಿ ಮಕ್ಕಳ ಶೈಕ್ಷಣಿಕ ಪ್ರಗತಿಗಾಗಿ ದುಡಿಯುವ, ಶಾಲೆಗೆ ಬಾರದ ಮಕ್ಕಳನ್ನು ಅವರ ಮನೆಗೇ ತೆರಳಿ ಕರೆದುಕೊಂಡು ಬರುವ, ಕಲಿಕೆಯಲ್ಲಿ ಹಿಂದುಳಿದ ಮಕ್ಕಳಿಗೆ ಪರಿಹಾರ ಬೋಧನೆ, ಜಾಣ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಎಂದೆಲ್ಲಾ ತಲೆ ಕೆಡಿಸಿಕೊಳ್ಳುವ ಆಕೆಗೆ, ತನ್ನದೇ ಮಗುವಿನ ಶೈಕ್ಷಣಿಕ ಪ್ರಗತಿಯತ್ತ ಗಮನ ಹರಿಸಲು ಪುರುಸೊತ್ತಿಲ್ಲ.

ಕಲಿಕೆಯಲ್ಲಿ ಹಿಂದುಳಿದ ಮಕ್ಕಳಿಗೆ ಕಲಿಸಿಯೇ ತೀರಬೇಕೆಂಬ ಛಲದಿಂದ, ಅವರನ್ನು ಪ್ರೀತಿಯಿಂದ ಮನವೊಲಿಸಿ, ಅಭ್ಯಾಸದಲ್ಲಿ ಉತ್ಸಾಹ ತುಂಬುವವಳು ಶಿಕ್ಷಕಿಯೇ. ಅದು ಆಕೆಯ ವೃತ್ತಿ ಜೀವನಕ್ಕೆ ಅವಶ್ಯ ಹಾಗೂ ಪೂರಕವಾದದ್ದು.ಅದಕ್ಕೆ ವಿರುದ್ಧವಾದ ಸನ್ನಿವೇಶ ಮನೆಯಲ್ಲಿರುತ್ತದೆ. ಕಲಿಕೆಯಲ್ಲಿ ಅತೀವ ಆಸಕ್ತಿಯಿರುವ, ಅತೀ ಚೂಟಿಯಾದ ಮಗು , ತನ್ನೆಲ್ಲಾ ಹೊಮ್‌ವರ್ಕ್‌ ಮಾಡಿ , ತನಗೆ ಬುಕ್‌ಗಳಲ್ಲಿ ಸಿಕ್ಕ ಸ್ಟಾರ್‌ಗಳನ್ನು, ಅಮ್ಮನಿಗೆ ತೋರಿಸಲು ಉತ್ಸುಕವಾಗಿರುತ್ತದೆ. ಆದರೆ, ಅಮ್ಮನಿಗೋ ಸಮಯವಿಲ್ಲ. ಮಗು ಹೇಳುವುದನ್ನು ಗಮನವಿಟ್ಟು ಕೇಳುವ ತಾಳ್ಮೆಯಿಲ್ಲ. ಮನೆಯ ಮಕ್ಕಳಿಗೆ ನಮ್ಮದೇ ವೃತ್ತಿಯ ಸದುಪಯೋಗವಾಗುತ್ತಿಲ್ಲವಲ್ಲ ಎಂದು ಬೇಸರವಾಗುತ್ತದೆ.

ಕೆಲಸದ ಒತ್ತಡವೋ, ಪ್ರಯಾಣದ ಸುಸ್ತೋ,ಮಾನಸಿಕ ಹಿಂಸೆಯೋ ಅಥವಾ ಮನೆಗೆಲಸದ ಅನಿವಾರ್ಯತೆಯೊ ಗೊತ್ತಿಲ್ಲ, ಹೆತ್ತ ಮಕ್ಕಳ ಕಲಿಕೆಯ ಬಗ್ಗೆ ಅಮ್ಮಂದಿರ ಕಾಳಜಿ ಕಡಿಮೆಯಾಗುತ್ತಿದೆ. ಇದು ಒಬ್ಬರ ಸಮಸ್ಯೆಯಲ್ಲ, ಎಲ್ಲಾ ಉದ್ಯೋಗಸ್ಥ ಮಹಿಳೆಯರ ಸಮಸ್ಯೆ. ನಮ್ಮ ಡಿಗ್ರಿ, ನಾವು ಮಾಡುವ ವೃತ್ತಿ ನಮ್ಮ ಮಕ್ಕಳಿಗೆಯೇ ಉಪಯೋಗವಾಗುವುದಿಲ್ಲ. ದಿನದ 6-8 ಗಂಟೆಗಳನ್ನು ವೃತ್ತಿನಿರತ ತಾಯಿ ಕೆಲಸದಲ್ಲಿ ಕಳೆಯುವುದರಿಂದ, ಸಹಜವಾಗಿಯೇ ಆಕೆಗೆ ಸುಸ್ತು ಆವರಿಸುತ್ತದೆ. ಮಕ್ಕಳ ಬಗ್ಗೆ ತೋರುವ ನಿರಾಸಕ್ತಿ ಆಕೆಗೆ ಅರಿವಾಗದೇ ಇರದು. ಆದರೆ, ನೌಕರಿಯ ಅನಿವಾರ್ಯತೆ ಹಾಗೂ ಮಕ್ಕಳ ಕಾಳಜಿಯ ಮಧ್ಯೆ ಜೀವನ ಗರ್ರನೆ ತಿರುಗಿವ ಬುಗುರಿಯಾಗಿದೆ. ಗಟ್ಟಿಯಾಗಿ ನಿಲ್ಲಲಾಗದ ಪರಿಸ್ಥಿತಿಯಲ್ಲಿ ದೂಷಿಸುವುದಾದರೂ ಯಾರನ್ನು?

ಮಾಲಾ ಮ ಅಕ್ಕಿಶೆಟ್ಟಿ


ಈ ವಿಭಾಗದಿಂದ ಇನ್ನಷ್ಟು

  • ಪ್ರಕೃತಿ ಮತ್ತು ಭೂಮಿಯ ಹೋಲಿಕೆ ಸಲ್ಲುವುದು ತಾಯಿಗೆ ಮಾತ್ರ. ಆಕೆ ಸಹನಾಮಯಿ. ಮಕ್ಕಳ ಎಲ್ಲ ಕಷ್ಟವನ್ನು ಹೊರಲು ಆಕೆ ಸದಾ ಸಿದ್ಧ. ಈ ಮಾತಿಗೆ ಸಾಕ್ಷಿ ಎನ್ನುವಂಥ ತಾಯಿಯೊಬ್ಬಳು...

  • ಬಸ್ಸಿನಲ್ಲಿ ಪ್ರಯಾಣಿಕರನ್ನು ಹತ್ತಿಸಿಕೊಳ್ಳುವ ತನಕ ಒಂದು ಹಂತ. ನಂತರ ಬಸ್‌ ಲೈಟ್‌ ಆಫ್ ಮಾಡಿಬಿಡುತ್ತಾರಲ್ಲ? ಆಗ ಕೆಲವು ಗಂಡಸರ "ವಾಸನಾ' ವ್ಯಕ್ತಿತ್ವದ ಅನಾವರಣ...

  • ಟ್ರ್ಯಾಕ್‌ ಪ್ಯಾಂಟ್‌ ಅಥವಾ ಶರ್ಟ್‌ಗಳನ್ನು ಈ ಮೊದಲು ಕ್ರೀಡೆ, ಜಾಗಿಂಗ್‌ ಅಥವಾ ಯೋಗಾಸನ ತರಗತಿಗೆ ಹೋಗುವಾಗ ತೊಡುವ ಪದ್ಧತಿ ಇತ್ತು. ಆದರೆ, ಈಗ ಟ್ರ್ಯಾಕ್‌ಸೂಟ್‌ನಲ್ಲಿಯೇ...

  • ರಾತ್ರಿ ಊಟಕ್ಕೆ ಎಲ್ಲರಿಗೂ ಹೊಸದಾಗಿ ಊರಿಂದ ತಂದ ಮಾವಿನ ಮಿಡಿ ಉಪ್ಪಿನಕಾಯಿ, ಕೊಬ್ಬರಿಎಣ್ಣೆ ಹಾಕಿಕೊಂಡು ಅನ್ನಕ್ಕೆ ಕಲೆಸಿ ತಿನ್ನುವ ಹುಕಿ. ಈರುಳ್ಳಿ ಹೆಚ್ಚಿಕೊಡು...

  • ಹೆಣ್ಣು ಮಕ್ಕಳ ಪಾಲಿಗೆ ರಾತ್ರಿ ಪ್ರಯಾಣ ಯಾವತ್ತಿಗೂ ಆತಂಕದ ವಿಷಯವೇ. ಸರಿಯಾದ ಸಮಯಕ್ಕೆ ಬಸ್‌ ಬರದಿದ್ದರೆ, ನಿಲ್ದಾಣದಲ್ಲಿ ಯಾರಾದರೂ ಹಲ್ಲೆ ಮಾಡಿದರೆ, ಬಸ್‌ನಲ್ಲಿ...

ಹೊಸ ಸೇರ್ಪಡೆ