ತಾಯ್‌ ನುಡಿಯಾಗಲಿ ಕನ್ನಡ…

ಮನೇಲಿ ಮೊಳಗಲಿ ಮಾತೃಭಾಷೆ

Team Udayavani, Oct 30, 2019, 5:58 AM IST

r-14

ಕನ್ನಡದ ವಿಶಾಲ ಮರಕ್ಕೆ ಇಂಗ್ಲಿಷಿನ ಲತೆಯನ್ನು ಹಬ್ಬಿಸಿ ಬೆಳೆಸಬೇಕು ನಿಜ. ಆದರೆ, ಹಬ್ಬಿದ ಬಳ್ಳಿ ಮರವನ್ನೇ ಬಲಿ ತೆಗೆದುಕೊಳ್ಳಲು ಹೋದಾಗ, ಮರವನ್ನು ಕಾಪಾಡಬೇಕಾದದ್ದು ಎಲ್ಲರ ಕರ್ತವ್ಯ. ಅದನ್ನು ಮೊದಲಿಗೆ ಮಾಡಬೇಕಾದವಳು ಅಮ್ಮ!

ಅಂದು ಮಗನ ಮುಖದಲ್ಲಿದ್ದ ವಿಸ್ಮಯ ಕಂಡು ಸುತ್ತಲಿದ್ದ ಸಹೋದ್ಯೋಗಿಗಳಿಗೆಲ್ಲ ಅಚ್ಚರಿಯಾಗಿತ್ತು. ಅವನಿಗಾಗ ಮೂರೂವರೆ ವರ್ಷ. ಅವನ ಶಾಲೆಯ ಅವಧಿ ಕಡಿಮೆಯಿದ್ದುದರಿಂದ, ನನ್ನ ಜತೆಗೆ ಕಾಲೇಜಿಗೆ ಕರೆತಂದಿದ್ದೆ. ಅದೇ ಸಮಯದಲ್ಲಿ ವಿದ್ಯಾರ್ಥಿನಿಯೊಬ್ಬಳು ಬಂದು ಇಂಗ್ಲಿಷಿನಲ್ಲಿ ಏನೋ ಕೇಳಿದಳು. ನಾನೂ ಇಂಗ್ಲಿಷಿನಲ್ಲಿಯೇ ಉತ್ತರಿಸಿದೆ. ಅಲ್ಲೇ ಇದ್ದ ಮಗ ಮೊಗವರಳಿಸಿ, “ಅಮ್ಮಾ..ಇಷ್ಟು ಚಂದ ಇಂಗ್ಲಿಷ್‌ ಮಾತಾಡುವುದು ಯಾವಾಗ ಕಲಿತೆ ನೀನು?’ ಎಂದು ಕೇಳಿದ. “ಏನು ಮೇಡಂ ನೀವು…ಇಂಗ್ಲಿಷ್‌ ಟೀಚರ್‌ ನೀವು ಅಂತ ಮಗನಿಗೆ ಗೊತ್ತೇ ಇಲ್ವಾ?’ ಎಂದು ಎಲ್ಲರೂ ಬೆರಗಾಗಿದ್ದರು. ಅವರಿಗೆ ನಗೆಯಷ್ಟೇ ನನ್ನ ಉತ್ತರವಾಗಿ, ಅವರ ಮನದೊಳಗಿನ ಗೊಂದಲ ಮತ್ತಷ್ಟು ವ್ಯಾಪಕವಾಯಿತು.

ಅದರ ಹಿನ್ನೆಲೆಯಿಷ್ಟು: ನನ್ನ ಮಗನನ್ನು ಶಾಲೆಗೆ ಸೇರಿಸಿದಾಗ, ಅಲ್ಲಿ ಯಾರಾದರೂ ಇಂಗ್ಲಿಷ್‌ನಲ್ಲಿ ಮಾತನಾಡಿಸಿದರೆ ಅವನಿಗೆ ತಳಮಳವಾಗುತ್ತಿತ್ತು. ಉತ್ತರಿಸಲು ತಡಬಡಾಯಿಸುತ್ತಿದ್ದ. ಅದಕ್ಕೆ ಪರಿಹಾರವೆಂಬಂತೆ, “ಮನೆಯಲ್ಲಿ ಅಮ್ಮನ ಹತ್ತಿರ ಇಂಗ್ಲಿಷ್‌ನಲ್ಲಿ ಮಾತಾಡುವುದಕ್ಕೆ ಹೇಳು. ಆಗ ನಿಂಗೆ ಸುಲಭವಾಗುತ್ತದೆ’ ಎಂದು ಶಿಕ್ಷಕಿ ಹೇಳಿದ್ದರು. ಅತ್ತುಕೊಂಡು ನನ್ನ ಬಳಿ ಬಂದು, “ಅಮ್ಮಾ, ನೀನು ಇನ್ಮೆàಲೆ ಕನ್ನಡ ಮಾತಾಡ್ಬೇಡ. ಇಂಗ್ಲಿಷಿನಲ್ಲಿ ಮಾತಾಡು’ ಎಂದ. ಅಂಥ ಅಭ್ಯಾಸಗಳನ್ನು ಸುತಾರಾಂ ಒಪ್ಪದ ನಾನು- “ಕಂದಾ, ನಂಗೆ ಇಂಗ್ಲೀಷು ಬರೋದೇ ಇಲ್ಲ. ಕನ್ನಡವಷ್ಟೇ ಬರೋದು’ ಎಂದಿದ್ದೆ. ಹೌದು! ಸುಳ್ಳು ಹೇಳುವುದು ತಪ್ಪಾದರೂ ಸುಳ್ಳು ಹೇಳಿದ್ದೆ. ಅಮ್ಮ ಹೇಳುವ ಎಂಟು ಸುಳ್ಳಿಗೆ ಇದು ಒಂಭತ್ತನೆಯದಾಗಿ ಸೇರ್ಪಡೆಯಾಗಬಹುದೇನೋ!

“ಇಂಗ್ಲಿಷ್‌ ಕಲಿಯುವುದಕ್ಕೆ ಟಿವಿಯೊಳಗೆ ಛೋಟಾಭೀಮ್‌, ಬಾಲಗಣೇಶ ಎಲ್ಲರೂ ಇದ್ದಾರಲ್ಲ. ಅವರನ್ನು ನೋಡುವಾಗ ಅವರೇನು ಹೇಳ್ತಾರೆ ಕೇಳು…ಹಾಗೇ ಮಾತಾಡಲು ಕಲಿ’ ಎಂದು ನನಗೇನೂ ಗೊತ್ತಿಲ್ಲದವಳಂತೆ ಪೋಸು ಕೊಟ್ಟಿದ್ದೆ. ನನ್ನೆದುರು ಮೇಜಿನ ಮೇಲೆ ಕುಳಿತಿದ್ದ ಶಶಿ ದೇಶಪಾಂಡೆಯವರ “ದಟ್‌ ಲಾಂಗ್‌ ಸೈಲೆನ್ಸ್‌’ (ಆ ಸುದೀರ್ಘ‌ ಮೌನ) ಕಾದಂಬರಿ ಕಣ್ಣುಮಿಟುಕಿಸಿ ನಕ್ಕಿತ್ತು!

ನಾನು ನಾಲ್ಕನೆಯ ತರಗತಿಯಲ್ಲಿದ್ದಾಗ, ಕುವೆಂಪು ಅವರ -“ಕನ್ನಡಕೆ ಹೋರಾಡು ಕನ್ನಡದ ಕಂದ/ ಕನ್ನಡವ ಕಾಪಾಡು ನನ್ನ ಆನಂದ/ ಜೋಗುಳದ ಹರಕೆಯಿದು ಮರೆಯದಿರು ಚಿನ್ನ/ಮರೆತೆಯಾದರೆ ಅಯ್ಯೋ… ಮರೆತಂತೆ ನನ್ನ…’ ಪದ್ಯವನ್ನು ರಾಗವಾಗಿ ಹಾಡಿ ಬಾಯಿಪಾಠ ಮಾಡಿದ್ದು ಇನ್ನೂ ನೆನಪಿದೆ. ಕನ್ನಡವೆಂಬುದು ತಾಯ ಎದೆಹಾಲಿನಂತೆ ಬಾಯಿಗೆ ಸವಿಜೇನಾಗಿಯೂ, ದೇಹಕ್ಕೆ ತಾಯಿಯಪ್ಪುಗೆಯಂತೆ ಹಿತವಾದ್ದು ಎಂದ ಕವಿಯ ಭಾವ ಆಗ ಅರ್ಥವಾಗಿರಲಿಲ್ಲ. ಆದರೆ, ಕನ್ನಡದಷ್ಟು ಆಪ್ಯಾಯಮಾನ ನಮಗಿನ್ನಾವುದಿದೆ? “ಮೇಡಂಗೆ ಅನ್ನದ ಭಾಷೆ ಇಂಗ್ಲಿಷ್‌ ಆಗಿರಬಹುದು, ಆದರೆ ಕರುಳಿನ ಭಾಷೆ ಕನ್ನಡವೇ’ ಎಂದು ನನ್ನ ಕನ್ನಡ ಸಹೋದ್ಯೋಗಿ ಮಿತ್ರರೊಬ್ಬರು ನನ್ನ ಲೇಖನಗಳನ್ನೋದಿ ಉದ್ಗರಿಸಿದ್ದರು. ಮಕ್ಕಳು ಕನ್ನಡ ಕಾಗುಣಿತ ಸರಿಯಾಗಿ ಬರೆಯದೇ ಇದ್ದರೆ ನಾನು ಸಿಟ್ಟಾಗುವುದನ್ನು ನೋಡಿ, ಅವರು ಬೆರಗಾಗಿದ್ದರು.

ಮನೆ ಮಾತು ಬಲು ಮುಖ್ಯ
ಅದೇಕೋ ಗೊತ್ತಿಲ್ಲ, ವೃತ್ತಿಯಲ್ಲಿ ಇಂಗ್ಲಿಷ್‌ ಉಪನ್ಯಾಸಕಿಯಾಗಿದ್ದರೂ ಆಪ್ತವಾದ ಬರವಣಿಗೆಗೆ ಕನ್ನಡವೇ ನನ್ನ ಆಯ್ಕೆ. ಮನಃಪೂರ್ವಕವಾಗಿ ಮಾತನಾಡುವಾಗ, ಭಾವನೆಗಳನ್ನು ಹಂಚಿಕೊಳ್ಳುವಾಗ ಮೊದಲು ಹೊರಹೊಮ್ಮುವುದು ಕನ್ನಡವೇ ಹೊರತು ಇಂಗ್ಲಿಷ್‌ ಅಲ್ಲ. “ನೆವವು ಏನಾದರೇನ್‌/ ಹೊರನುಡಿಯು ಹೊರೆಯೈ’ ಎಂದ ಕುವೆಂಪು ಕೂಡಾ, ಮೊದಲು ಇಂಗ್ಲಿಷ್‌ನಲ್ಲಿ ಸಾಹಿತ್ಯ ಕೃಷಿ ಆರಂಭಿಸಿ ನಂತರ ಅವರ ಗುರುಗಳ ಸಲಹೆಯಂತೆ ಮಾತೃಭಾಷೆಯಲ್ಲಿಯೇ ಬರೆಯಲಾಂಭಿಸಿದ್ದು. ಅವರು ಇಂಗ್ಲಿಷ್‌ನಲ್ಲಿಯೇ ಬರೆಯುತ್ತಿದ್ದರೆ ರಾಷ್ಟ್ರಕವಿಯೆಂಬ ಮನ್ನಣೆಗೆ ಪಾತ್ರವಾಗಿ, ಜ್ಞಾನಪೀಠ ಪ್ರಶಸ್ತಿಯನ್ನು ಮುಡಿಗೇರಿಸಿಕೊಳ್ಳಲು ಸಾಧ್ಯವಿತ್ತೇ ಎಂಬ ಸಂದೇಹ ಅನೇಕ ಬಾರಿ ನನ್ನನ್ನು ಕಾಡಿದೆ. “ನಿನ್ನ ನಾಡೊಡೆಯ ನೀನ್‌ ವೈರಿಯನು ತೊರೆಯೈ/ ಕನ್ನಡದ ನಾಡಿನಲಿ ಕನ್ನಡವ ಮೆರೆಯೈ’ ಎಂಬ ಅವರ ಸಂದೇಶವನ್ನು ಇಂದಿನ ತಲೆಮಾರಿನ ಶಿಕ್ಷಕರು, ಶಿಕ್ಷಣವ್ಯವಸ್ಥೆ, ವಿದ್ಯಾರ್ಥಿಗಳು ಅರ್ಥಮಾಡಿಕೊಳ್ಳಬೇಕಿದೆ. ಈ ಹೆಜ್ಜೆ ಮೊದಲಾಗಬೇಕಾದ್ದು ಅಮ್ಮನಿಂದಲೇ. ಬದಲಾಗಿ ಅಮ್ಮನ ಜೋಗುಳವೇ ಇಂಗ್ಲಿಷ್‌ ಆಗಿಬಿಟ್ಟರೆ, ಮಗು ಕನ್ನಡದೊಂದಿಗಿನ ತನ್ನ ಕರುಳ ಸಂಬಂಧವನ್ನು ಸುಲಭವಾಗಿ ಕಡಿದುಕೊಳ್ಳುತ್ತದೆ.

ಮಾತೃಭಾಷೆಯ ಮೇಲೆ ಹಿಡಿತ ಸಾಧಿಸಿದವನಿಗೆ ಇತರ ಭಾಷೆಗಳ ಕಲಿಕೆ ಸುಲಭವಾಗುತ್ತದೆ ಎಂಬುದು ಸಾರ್ವಕಾಲಿಕ ಸತ್ಯ. ಆದರೆ, ಶಾಲೆಯಲ್ಲಿ ಮಗುವಿಗೆ ಭಾಷೆ ಅಡ್ಡಿಯಾಗಬಾರದು ಎಂಬ ಕಾರಣಕ್ಕಾಗಿ ಮನೆಯಲ್ಲಿಯೂ ಇಂಗ್ಲಿಷ್‌ನಲ್ಲೇ ಸಂವಹನ ನಡೆಸಿದರೆ, ಮಗುವನ್ನು ತಾಯಿಬೇರಿನಿಂದಲೇ ಕತ್ತರಿಸಿದಂತಾಗುತ್ತದೆ. ಮನೆಮಾತನ್ನು ಮನೆಯಲ್ಲಿಯೇ ಕಲಿಯಬೇಕು ವಿನಾ ಬೇರೆಲ್ಲೂ ಕಲಿಯಲಾಗದು. ಇತರ ಭಾಷೆಗಳು ಹಾಗಲ್ಲ. ಹೊರಜಗತ್ತಿಗೆ ಮಗು ತನ್ನನ್ನು ತಾನು ತೆರೆದುಕೊಂಡಂತೆ ಹಲವು ಭಾಷೆಗಳನ್ನೂ ಕಲಿಯುತ್ತಾ ಸಾಗಬಲ್ಲದು. ಮಕ್ಕಳಲ್ಲಿ ಭಾಷಾ ಕಲಿಕೆಯ ಸಾಮರ್ಥ್ಯ ಚೆನ್ನಾಗಿಯೇ ಇರುತ್ತದೆ. ಅಷ್ಟಾಗಬೇಕಾದರೆ ಅದಕ್ಕೆ ತನ್ನ ಮಾತೃಭಾಷೆ ಚೆನ್ನಾಗಿ ತಿಳಿಯಬೇಕು.

ಭಾಷೆ ಎಂದರೆ ಸಂಸ್ಕೃತಿ
ಇತ್ತೀಚೆಗೆ, ರಾಧಿಕಾ ಪಂಡಿತ್‌ ತನ್ನ ಮಗುವಿಗೆ ತಮ್ಮ ಮನೆಮಾತು ಕಲಿಸುತ್ತಿದ್ದ ವಿಡಿಯೋ ನೋಡಿ ಅನೇಕರು ಅವರು ಕನ್ನಡವನ್ನೇ ಕಲಿಸಬೇಕೆಂದು ಗುಲ್ಲೆಬ್ಬಿಸಿದ್ದರು! ಕರಾವಳಿಯ ತೀರದುದ್ದಕ್ಕೂ ಅದೆಷ್ಟೊಂದು ಭಾಷೆಗಳಿಲ್ಲ, ಆ ಭಾಷೆಗಳನ್ನಾಡುವ ಅದೆಷ್ಟು ಜನರಿಲ್ಲ. ಮಗು, ಮನೆಮಾತು ಕಲಿಯದ ಹೊರತು ಬೇರಾವ ಭಾಷೆಯೂ ಸಿದ್ಧಿಸುವುದಿಲ್ಲ. ಸಿದ್ಧಿಸಲಾರದು. ತನ್ನುಸಿರಿನ ಭಾಷೆಯನ್ನು ಅಮ್ಮನೇ ಮಕ್ಕಳಿಂದ ದೂರವಾಗಿಸುವಂಥ ಸಂದರ್ಭ ಬರಬಾರದಲ್ಲ!

ಭಾಷೆ ಎಂದರೆ ಬುದ್ಧಿ ಭಾವಗಳ ವಿದ್ಯುದಾಲಿಂಗನ. ಬುದ್ಧಿಯ ಅಲಗಿನ ಸ್ಪರ್ಶವಿಲ್ಲದೆ ಭಾವ ಕೀವಾಗುತ್ತದೆ. ಭಾವದ ಸಂಪರ್ಕವಿಲ್ಲದೆ ಬುದ್ಧಿ ರಾಕ್ಷಸವಾಗುತ್ತದೆ ಎಂದರು ಅನಂತಮೂರ್ತಿ. ಭಾವಕ್ಕೂ ಬುದ್ಧಿಗೂ ಅದೆಂಥಾ ಸಂಬಂಧ! ಅದೆರಡನ್ನು ಬೆಸೆಯಬಲ್ಲುದು ಭಾಷೆಯೇ ಎಂದರೆ ಭಾಷೆಯ ಔನ್ನತ್ಯವನ್ನು ನಾವು ಅರಿತುಕೊಳ್ಳಬಹುದು. ನಮ್ಮ ತುಳುನಾಡಿನಲ್ಲಿ ಯಾರದಾದರೂ ವರ್ತನೆ ಸರಿಯಿಲ್ಲದಿದ್ದರೆ “ಅವನಿಗೆ ಸ್ವಲ್ಪವೂ ಭಾಷೆಯಿಲ್ಲ’ ಎಂದು ಬೈದುಕೊಳ್ಳುವ ಅಭ್ಯಾಸವಿದೆ. ಇಲ್ಲಿ ಭಾಷೆ ಎಂದರೆ ಅವನ ಸಂಸ್ಕಾರ, ಸಂಸ್ಕೃತಿ ಎಂದಾಯಿತು. ಎಷ್ಟೋ ಬಾರಿ ಅನಿಸುವುದಿದೆ, ಮಕ್ಕಳ ಭಾಷೆ ಸರಿಯಿಲ್ಲ ಎಂದರೆ ಅವರ ಸಂಸ್ಕಾರವೂ ಅಂತೆಯೇ ಇರುವುದು ನಿಜವಷ್ಟೇ. ಆಂಗ್ಲಭಾಷಾ ವ್ಯಾಮೋಹದಿಂದ ಇಂದು ಮಕ್ಕಳು ಅಕ್ಷರಶಃ ತ್ರಿಶಂಕು ಸ್ವರ್ಗದಲ್ಲಿದ್ದಾರೆ. ಅತ್ತ ಇಂಗ್ಲಿಷಾಗಲೀ ಇತ್ತ ಕನ್ನಡವಾಗಲೀ ಸರಿಯಾಗಿ ಬಾರದೇ, ಅವರ ಒಟ್ಟೂ ವ್ಯಕ್ತಿತ್ವವೇ ಅರ್ಥಕ್ಕೆ ನಿಲುಕದ್ದು ಎಂಬಂತಾಗಿದೆ. ನಮ್ಮ ಬಾಲ್ಯದಲ್ಲಿ ಕನ್ನಡವನ್ನು ಅಚ್ಚುಕಟ್ಟಾಗಿ ಕಲಿತ ಮೇಲಷ್ಟೇ ಇಂಗ್ಲಿಷ್‌-ಹಿಂದಿಗೆ ಪ್ರವೇಶಿಕೆ. ಇಂದು ಹಾಗಿಲ್ಲ. ಯುಕೆಜಿಯ ಮಗುವಿಗೇ ಇಂಗ್ಲಿಷ್‌, ಕನ್ನಡ, ಹಿಂದಿ, ಸಂಸ್ಕೃತ ಎಲ್ಲವನ್ನೂ ಕಲಿಸುವ ಭರಾಟೆಯಲ್ಲಿ, ಮಗು ಯಾವ ಭಾಷೆ ಕಲಿಯುತ್ತದೋ ಬಿಡುತ್ತದೋ ಪಾಪ. ಮಕ್ಕಳಿಗೆ ನಾಲ್ಕಾರು ಭಾಷೆಗಳನ್ನು ಕಲಿಯುವ ಕೌಶಲ್ಯ ಇರುವುದಾದರೂ, ಎಲ್ಲವನ್ನೂ ಒಂದೇ ಸಲ ಧೋ ಎಂದು ಸುರಿವ ಮಳೆಯಂತೆ ಸುರಿಸಿದರೆ ಅದು ಬೊಗಸೆ ತುಂಬೀತೇ?

ಮಾತು, ಹೃದಯ ತಲುಪಲಿ
ನೀವು ವ್ಯಕ್ತಿಯೊಬ್ಬನಲ್ಲಿ ಅವನಿಗೆ ಅರ್ಥವಾಗುವ ಭಾಷೆಯಲ್ಲಿ ಮಾತನಾಡಿದರೆ, ಅದು ಅವನ ಮೆದುಳನ್ನು ತಲುಪುತ್ತದೆ. ಆದರೆ ನೀವು ಅವನಲ್ಲಿ ಅವನದೇ ಭಾಷೆಯಲ್ಲಿ ಮಾತನಾಡಿದರೆ ಅದು ಅವನ ಹೃದಯವನ್ನು ತಲುಪುತ್ತದೆ ಎಂದರು ನೆಲ್ಸನ್‌ ಮಂಡೇಲಾ. ಕನ್ನಡ ನಮ್ಮ ಹೃದಯದ ಭಾಷೆಯಾದರೆ, ಇಂಗ್ಲಿಷ್‌ ನಮಗೆ ಬುದ್ಧಿಯ ಭಾಷೆ. ಹೃದಯದೆಡೆಗಿನ ಒಲವನ್ನು ಮನೆಯಲ್ಲಿ ಬೆಳೆಸುವ ಕೆಲಸವನ್ನು ಅಮ್ಮ ಮಾಡಬೇಕು. ಭಾಷೆ ಮೊದಲ್ಗೊಳ್ಳುವುದು ಅಲ್ಲಿಂದಲೇ. ಕಂದನ ಕಣ್ಣಲ್ಲಿ ಕಣ್ಣಿಟ್ಟು ನುಡಿಸುವಾಗ, ನಗಿಸುವಾಗ, ಉಣಿಸುವಾಗ ನಮ್ಮತನ ಉಳಿಯುವುದು ನಮ್ಮ ಭಾಷೆಯಿಂದಲೇ. ಅದನ್ನು ಮರೆತು, ಇನ್ನೊಂದು ಸಂಸ್ಕೃತಿಯನ್ನು ನಮ್ಮದಾಗಿಸಿಕೊಳ್ಳ ಹೊರಟರೆ, ಬೆಳೆದ ಮರವನ್ನು ಕಿತ್ತು ಬೇರೆಡೆ ನೆಡುವ ಪ್ರಯತ್ನದಂತೆ ವ್ಯರ್ಥವಾದೀತು. ಅಂಕಗಳ ಬೆಂಬತ್ತಿ ನಡೆಯುತ್ತಿರುವ ನಮ್ಮ ಪಯಣದಲ್ಲಿ “ಅಯ್ಯೋ.. ಕನ್ನಡದಲ್ಲಿ ಮಾರ್ಕ್ಸ್ ತಗೊಂಡು ಏನು ಮಾಡ್ಬೇಕು ಬಿಡು, ಸಬೆjಕ್ಟ್ಗಳಲ್ಲಿ ಚೆನ್ನಾಗಿ ಬಂದರೆ ಸಾಕು’ ಎಂಬ ಅಸಡ್ಡೆಯ ಮಾತು ಅಮ್ಮಂದಿರಿಂದಲೇ ಬಂದರೆ ಮಕ್ಕಳನ್ನು ಕನ್ನಡದೆಡೆಗೆ ಕರೆದೊಯ್ಯುವ ಬಗೆ ಹೇಗೆ? ಅಮ್ಮ ಮರೆತ ಭಾಷೆ, ಸಂಸ್ಕೃತಿಯನ್ನು ಮಕ್ಕಳು ಕಲಿಯುವುದು ಸಾಧ್ಯವೇ?

ಕಲಿಸಿದ ವಿದ್ಯೆಯನ್ನು ಸಮರ್ಪಕವಾಗಿ ಕಲಿಯಬೇಕಾದರೆ ಮಗುವಿನಲ್ಲಿ ಅತಿಮುಖ್ಯವಾಗಿ ಬೇಕಾಗಿರುವುದು ತನ್ನ ಮಾತೃಭಾಷೆಯ ಸುಧಾರಿತ, ಸಮರ್ಪಕ ಬಳಕೆ. ಅದು ಮಗುವಿಗೆ ಕೊಡಬಹುದಾದ ಆತ್ಮವಿಶ್ವಾಸ ಬಹಳ ದೊಡ್ಡದಾದ್ದು. ನನ್ನ ಕನ್ನಡ ಚೆನ್ನಾಗಿಲ್ಲ ಎಂದು ಕೊರಗುವವರ ಬಗ್ಗೆ ವಿಷಾದವೆನಿಸುತ್ತದೆ. ಕನ್ನಡದ ವಿಶಾಲಮರಕ್ಕೆ ಇಂಗ್ಲಿಷಿನ ಲತೆಯನ್ನು ಹಬ್ಬಿಸಿ ಬೆಳೆಸಬೇಕು ನಿಜ. ಆದರೆ, ಹಬ್ಬಿದ ಬಳ್ಳಿ ಮರವನ್ನೇ ಬಲಿತೆಗೆದುಕೊಳ್ಳಲು ಹೊರಟರೆ, ಮರವನ್ನು ಜೋಪಾನ ಮಾಡಬೇಕಾದ್ದು ನಮ್ಮೆಲ್ಲರ ಕರ್ತವ್ಯ. ಈ ಕೆಲಸವನ್ನು ದೃಢವಾಗಿ, ಧೈರ್ಯವಾಗಿ, ಮೊದಲಿಗೆ ಮಾಡಬೇಕಾದವಳು ಅಮ್ಮನೇ.

- ಆರತಿ ಪಟ್ರಮೆ

ಟಾಪ್ ನ್ಯೂಸ್

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಪರೂಪದ ಅತಿಥಿ

ಅಪರೂಪದ ಅತಿಥಿ

Untitled-2

ಅವತಾರಪುರುಷ ಶ್ರೀರಾಮ

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಮಾವಿನ ಬಗ್ಗೆ ಮನದ ಮಾತು…

ಮಾವಿನ ಬಗ್ಗೆ ಮನದ ಮಾತು…

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.