ಏನಂತ ಹೆಸರಿಟ್ರಿ?

ಹುಟ್ಟಿದ ಮಗುವಿಗೆ ಸಹಸ್ರ ನಾಮಾರ್ಚನೆ

Team Udayavani, Oct 16, 2019, 6:00 AM IST

ಪುರಾಣದಲ್ಲಿ ಕಡುಕಷ್ಟ ಅನುಭವಿಸಿದ ಕೆಲವರ ಹೆಸರು ಚೆನ್ನಾಗಿದೆ ಎನಿಸಿದರೂ, ಅದನ್ನು ಮಗನಿಗೆ ಇಡುವುದು ಶೋಭೆಯಲ್ಲ ಅಂತ ಅನ್ನಿಸಿತು. ಕ್ಷ, ಶಿ, ಋ, ಕ್ರೂ, ಹ್ರಂ, ಹ್ರಿಂ ಮುಂತಾದ ಬೀಜಾಕ್ಷರಗಳ ಹೆಸರುಗಳನ್ನು ಕರೆಯಲು ಕಷ್ಟ ಅಂತ ಪಕ್ಕಕ್ಕೆ ಸರಿಸಿದೆವು. ಕೆಲವೊಂದಷ್ಟು ಹೆಸರುಗಳೇನೋ ಚೆನ್ನಾಗಿದ್ದವು. ಆದರೆ, ನಿಘಂಟಿನಲ್ಲಿ ಅದಕ್ಕೆ ಅರ್ಥವೇ ಇರಲಿಲ್ಲ…

ಒಂದು ಮಗುವಿಗೆ ಹೆಸರಿಡುವುದು ಅಂದರೆ, ಅದು ಅಷ್ಟು ಸುಲಭದ ಕೆಲಸವಲ್ಲ. ಕನ್ನಡ ವರ್ಣಮಾಲೆಯಲ್ಲಿನ ಅ-ಳವರೆಗಿನ ಅಕ್ಷರಗಳಲ್ಲಿ, ಐದೋ ಆರೋ ಅಕ್ಷರಗಳನ್ನಾರಿಸಿ, ಜೀವನಪರ್ಯಂತ ಐಡೆಂಟಿಟಿ ನೀಡುವ ಅರ್ಥಪೂರ್ಣವಾದ ಹೆಸರು ಹುಡುಕಲು ಹೆತ್ತವರು ಮಾಡುವ ಸರ್ಕಸ್‌ ಅಷ್ಟಿಷ್ಟಲ್ಲ. ಮಗುವಿಗೆ ಹೆಸರಿಡುವುದರ ಹಿಂದೆ ಎಷ್ಟೆಲ್ಲಾ ಲೆಕ್ಕಾಚಾರಗಳು ನಡೆಯುತ್ತವೆ ಎಂದು ನನಗೆ ಅರ್ಥವಾಗಿದ್ದು ಮಗ ಹುಟ್ಟಿದ ಮೇಲೇ.

ಮೇ 26ರ ಬೆಳಗ್ಗೆ 6.40ರ ಸುಮಾರಿಗೆ, ಅರೆಮಂಪರಿನಲ್ಲಿ ಮಲಗಿದ್ದ ನನಗೆ- “ಮಗು ಅಳ್ತಾಯಿರೋದು ಕೇಳ್ತಿದ್ಯಾ?’ ಎಂಬ ಡಾಕ್ಟರ್‌ ದನಿ ಕೇಳಿಸಿತು. ಆ ಮಾತು ಕೇಳಿ ಭಾವುಕಳಾದ ನಾನು, “ಹೂಂ, ಕೇಳಿಸ್ತಿದೆ. ಯಾವ ಮಗು?’ ಅಂತ ಕನವರಿಸಿದೆ. “ನಿನಗೆ ಯಾವ ಮಗು ಬೇಕಿತ್ತು?’ ಅಂತ ಡಾಕ್ಟರ್‌ ಮರುಪ್ರಶ್ನೆ ಎಸೆದರು. “ಹೆಣ್ಣುಮಗು’ ಅಂದಾಗ, “better luck next time’ ಅಂತ ನಗುತ್ತಾ, ಮಗರಾಯನನ್ನು ಕೈಗಿಟ್ಟರು. ಹೆಣ್ಣು ಮಗುವಿಗಾಗಿ ಹಂಬಲಿಸಿದ್ದ ನಾನು, ಅದಾಗಲೇ ಮಗಳಿಗೆ ಇಡಲೆಂದು ಒಂದಷ್ಟು ಚಂದದ ಹೆಸರುಗಳನ್ನು ಬರೆದಿಟ್ಟುಕೊಂಡಿದ್ದೆ. ಆ ಶ್ರಮವೆಲ್ಲ ವ್ಯರ್ಥವಾಯಿತಲ್ಲ ಅಂತ ಮಗನತ್ತ ನೋಡಿದರೆ, “ಈಗ ನಂಗೇನು ಹೆಸರಿಡ್ತೀಯಾ ಅಮ್ಮಾ?’ ಅಂತ ಕೇಳಿದಂತಿತ್ತು ಅವನ ಮುಖಭಾವ.

ಆ ಕ್ಷಣದಿಂದ ಶುರುವಾಯ್ತು ನೋಡಿ, ಹೆಸರಿಗಾಗಿ ಹುಡುಕಾಟ. ಮಗನಿಗೊಂದು ಚಂದದ ಹೆಸರಿಡುವುದೇ, ಹೆತ್ತವರ ಪಾಲಿನ ಮೊದಲ ಜವಾಬ್ದಾರಿ ಅಲ್ಲವೇ? ಅದಕ್ಕಾಗಿ ನಾವು ಪಟ್ಟ ಪಾಡು ಅಷ್ಟಿಷ್ಟಲ್ಲ. ನಾಮಕರಣಕ್ಕೆ ಒಂದು ವಾರವಿದೆ ಅನ್ನುವಾಗಲೂ, ಈ “ನೇಮ್‌ ಹಂಟ್‌’ ಮುಗಿದಿರಲಿಲ್ಲ. ನಾನಂತೂ ಅದೆಷ್ಟು, ಕೀರ್ತನೆ, ಅಷ್ಟಪದಿ, ದೇವರನಾಮ, ಶ್ಲೋಕ, ಸಹಸ್ರನಾಮಗಳನ್ನು ಕೇಳಿದೆನೋ, ಲೆಕ್ಕವೇ ಇಲ್ಲ. ಬಾಣಂತನದ ಸಮಯದಲ್ಲಿ ಬೆನ್ನಿಗೆ ಅಮ್ಮ ನೀರೆರಚುವಾಗ ಕೆಲವೊಂದು ಹಾಡುಗಳನ್ನು ಗುನುಗುತ್ತಿದ್ದಳು. ಆ ಹಾಡಿನ ಸಾಲುಗಳನ್ನೂ ಗಮನವಿಟ್ಟು ಕೇಳಿಸಿಕೊಳ್ಳುತ್ತಿದ್ದೆ, ಅಲ್ಲೇನಾದರೂ ಚಂದದ ಹೆಸರು ಸಿಗಬಹುದೇನೋ ಎಂದು!

ಮಗುವನ್ನು ನೋಡಲು ಮನೆಗೆ ಬರುವ ನೆಂಟರಿಷ್ಟರು, ಸ್ನೇಹಿತರು ಕೇಳುತ್ತಿದ್ದ ಮೊದಲ ಪ್ರಶ್ನೆ, “ಏನು ಹೆಸರಿಡುತ್ತೀರಿ?’. “ಸದ್ಯಕ್ಕೆ ಇನ್ನೂ ಹುಡುಕಿಲ್ಲ’ ಅನ್ನುತ್ತಿದ್ದೆನಾದರೂ, ಪರೀಕ್ಷೆಯಲ್ಲಿ ಮುಖ್ಯ ಪ್ರಶ್ನೆಗೇ ಉತ್ತರ ಗೊತ್ತಿರದಿದ್ದಾಗಿನ ಉದ್ವೇಗದ ಪರಿಸ್ಥಿತಿ ನನ್ನದು. “ಗಂಡ-ಹೆಂಡತಿ ಹೆಸರು ಜೋಡಿಸಿ, ಒಂದು ಹೆಸರು ಹುಡುಕಿ’ ಎಂಬ ಸಲಹೆ ಅನೇಕರಿಂದ ಬಂದಿತ್ತು. ಯಶ್‌-ರಾಧಿಕಾ, ಶಾಹಿದ್‌ ಕಪೂರ್‌-ಮೀರಾ, ರಾಣಿ ಮುಖರ್ಜಿ- ಆದಿತ್ಯ ಛೋಪ್ರಾ… ಇವರೆಲ್ಲಾ ಹಾಗೆಯೇ ಹೆಸರಿಟ್ಟಿದ್ದು. ಅದೇ ಈಗಿನ ಟ್ರೆಂಡ್‌ ಎಂಬ ಮಾತು ಬೇರೆ.

ಈ ಮಧ್ಯೆ, ಬಾಣಂತನಕ್ಕೆ ನೆರವಾಗಲೆಂದು ಚೆನ್ನೈನಿಂದ ಬಂದ ಅಜ್ಜಿ ತನ್ನ ಬತ್ತಳಿಕೆಯಿಂದ, ರಮೇಶ್‌, ಸುರೇಶ್‌, ಸಂದೇಶ್‌, ಸಂತೋಷ್‌, ವೆಂಕಟೇಶ್‌ ಮುಂತಾದ ಹಳೇಕಾಲದ ಹೆಸರುಗಳನ್ನು ಹೊರಗಿಟ್ಟಳು. ಇದುವರೆಗೆ ಯಾರೂ ಇಡದ ಹೆಸರಿಡಬೇಕು, ಎಲ್ಲರೂ ಹೆಸರು ಕೇಳಿ ಅಹುದಹುದು ಎನ್ನಬೇಕು ಅಂತ ಕನಸು ಕಾಣುತ್ತಿದ್ದ ನಾನು, ಆ ಔಟ್‌ಡೇಟೆಡ್‌ ಹೆಸರುಗಳನ್ನು ಒಪ್ಪಿಕೊಳ್ಳುತ್ತೇನೆಯೇ? ಕೊನೆಗೂ ಅಜ್ಜಿ ಈ ಹೆಸರು ಹುಡುಕುವ ಆಟದಿಂದ ಹೊರಗುಳಿದಳು.

ಇನ್ನೊಂದೆರಡು ದಿನಗಳಲ್ಲಿ ಮಗುವಿನ ಹೆಸರು ನಿಶ್ಚಯವಾಗಲೇಬೇಕು ಅಂತ ನಿರ್ಧರಿಸಿ, ಮೇನಕಾ ಗಾಂಧಿ ಬರೆದ “ಗಂಡು ಮಕ್ಕಳಿಗೆ ಹಿಂದೂ ಹೆಸರುಗಳು’ ಪುಸ್ತಕವನ್ನು ಖರೀದಿಸಿದೆ. ನಾನು ತಲೆಕೆಡಿಸಿಕೊಂಡಿರುವುದನ್ನು ನೋಡಲಾಗದೆ ಅಪ್ಪ, ಯಂಡಮೂರಿ ವೀರೇಂದ್ರನಾಥ್‌ ಬರೆದ “ಮಕ್ಕಳ ಹೆಸರಿನ ಪ್ರಪಂಚ’ ಪುಸ್ತಕವನ್ನು ತಂದುಕೊಟ್ಟರು. ಬಹಳಷ್ಟು ಒಳ್ಳೆಯ ಹೆಸರುಗಳು ಸಿಕ್ಕಿದವಾದರೂ, ಪರಿಚಿತರಲ್ಲೇ ಕೆಲವರು ಆ ಹೆಸರಿನವರಿದ್ದರು. ಹಾಗಾಗಿ ಆ ಹೆಸರುಗಳನ್ನು ಕೈ ಬಿಡಬೇಕಾಯ್ತು.

ಮಗು ಹುಟ್ಟಿದ ಕೂಡಲೇ, ನನ್ನ ಮತ್ತು ಗಂಡನ ಸ್ನೇಹಿತರು, ಬಂಧುಗಳನ್ನೆಲ್ಲ ಹೆಸರು ಹುಡುಕುವ ಕೆಲಸಕ್ಕೆ ಸೇರಿಸಿಕೊಂಡಿದ್ದೆವು. ವಾಟ್ಸ್‌ಆ್ಯಪ್‌ ತೆಗೆದು ನೋಡಿದರೆ, ಒಂದೊಂದು ಗ್ರೂಪ್‌ನಲ್ಲೂ ನೂರಾರು ಹೆಸರುಗಳ ಸುರಿಮಳೆ! ದೇವರು, ಪುರಾಣಪುರುಷರು, ರಾಜಮಹಾರಾಜರು ಹೀಗೆ ಹಳೆಯ ಹೆಸರುಗಳಿಂದ ಹಿಡಿದು, ಒಂದೇ ಅಕ್ಷರದ ಹೆಸರಿನವರೆಗೆ ಎಲ್ಲವೂ ಇದ್ದವು. ಪುರಾಣದಲ್ಲಿ ಕಡುಕಷ್ಟ ಅನುಭವಿಸಿದ ಕೆಲವರ ಹೆಸರು ಚೆನ್ನಾಗಿದೆ ಎನಿಸಿದರೂ, ಅದನ್ನು ಮಗನಿಗೆ ಇಡುವುದು ಶೋಭೆಯಲ್ಲ ಅಂತ ಅನ್ನಿಸಿತು. ಕರ್ಣ ಅನ್ನುವ ಹೆಸರು ಎಷ್ಟೇ ಚೆನ್ನಾಗಿದ್ದರೂ, ಅವನ ದುರಂತ ಜೀವನದ ಕತೆ ಗೊತ್ತಿದ್ದವರ್ಯಾರೂ ಆ ಹೆಸರನ್ನು ಇಡುವುದಿಲ್ಲ. ಚಕ್ರವ್ಯೂಹದೊಳಗೆ ಸಿಕ್ಕಿಕೊಂಡ ಅಭಿಮನ್ಯು, ಹುಟ್ಟುವ ಮೊದಲೇ ಪರೀಕ್ಷೆ ಎದುರಿಸಿದ ಪರೀಕ್ಷಿತನ ಹೆಸರುಗಳು ನಿರ್ದಾಕ್ಷಿಣ್ಯವಾಗಿ ರಿಜೆಕ್ಟ್ ಆದವು. ಕ್ಷ, ಶಿ, ಋ, ಕ್ರೂ, ಹ್ರಂ, ಹ್ರಿಂ ಮುಂತಾದ ಬೀಜಾಕ್ಷರಗಳ ಹೆಸರುಗಳನ್ನು ಕರೆಯಲು ಕಷ್ಟ ಅಂತ ಪಕ್ಕಕ್ಕೆ ಸರಿಸಿದೆವು. ಕೆಲವೊಂದಷ್ಟು ಹೆಸರುಗಳೇನೋ ಚೆನ್ನಾಗಿದ್ದವು. ಆದರೆ, ನಿಘಂಟಿನಲ್ಲಿ ಅದಕ್ಕೆ ಅರ್ಥವೇ ಇರಲಿಲ್ಲ. ಮುಂದೆ, ನಿನ್ನ ಹೆಸರಿನ ಅರ್ಥವೇನು ಅಂತ ಯಾರಾದರೂ ಮಗನನ್ನು ಕೇಳಿದಾಗ, ಅವನು ನಮ್ಮನ್ನು ಬೈದುಕೊಳ್ಳದಿರಲಿ ಎಂದು ಆ ಹೆಸರುಗಳನ್ನು ನಿರ್ಲಕ್ಷಿಸಬೇಕಾಯ್ತು. ಮತ್ತೆ ಕೆಲವು ಹೆಸರುಗಳು, ಮೊಟಕುಗೊಳಿಸಿ ಕರೆದಾಗ ಅನರ್ಥ ಬರುವಂತಿದ್ದವು. ಕೆಲವು ಹೆಸರನ್ನು ಹುಡುಗಿಯರಿಗೂ ಇಡಬಹುದಾಗಿತ್ತು.

ಹೀಗೆ, ಒಂದು ಹೆಸರನ್ನು 360 ಡಿಗ್ರಿ ದೃಷ್ಟಿಕೋನದಿಂದ ನೋಡಿ, ಕೆಲವೊಂದನ್ನು ಆಯ್ಕೆ ಮಾಡಿದೆವು. ಸರಿ, ಇದರಲ್ಲೇ ಒಂದನ್ನು ಇಡೋಣ ಅಂದುಕೊಂಡರೆ, ಇವತ್ತು ಮನಸ್ಸಿಗೆ ಮುದ ನೀಡಿದ ಹೆಸರು, ಮರುದಿನ ಬೆಳಗ್ಗೆ ಆಗುವಷ್ಟರಲ್ಲಿ ಹಳೆಯದೆನಿಸುತ್ತಿತ್ತು ಅಥವಾ ಕುಟುಂಬದಲ್ಲಿ ಯಾರೋ ಒಬ್ಬರು, “ಏ, ಆ ಹೆಸರು ಚೆನ್ನಾಗಿಲ್ಲ’ ಅಂದುಬಿಡುತ್ತಿದ್ದರು. ಯಾರೋ ಒಬ್ಬರು ತಿರಸ್ಕರಿಸಿದರೂ ಸಾಕು, ಆ ಹೆಸರನ್ನು ಇಡಬೇಕೆಂದು ಅನ್ನಿಸುತ್ತಿರಲಿಲ್ಲ.

ಕೊನೆಗೆ ಅಳೆದು ತೂಗಿ 24 ಹೆಸರುಗಳ ಪಟ್ಟಿ ಮಾಡಿದೆವು. ಆ ಪಟ್ಟಿಯನ್ನು ಮನೆ-ಮಂದಿಯ ಮುಂದೆ ಇಟ್ಟು, ಒಂದನ್ನು ಆರಿಸುವಂತೆ ಹೇಳಿದೆವು. “ಈ ಮಗುವಿಗೆ ಹೆಸರಿಟ್ಟಿದ್ದು ನಾನೇ’ ಅಂತ ಕರೆಸಿಕೊಳ್ಳುವ ತವಕ ಎಲ್ಲರಿಗೂ ಇದ್ದುದರಿಂದ, ಅವರೆಲ್ಲರೂ ತಮಗಿಷ್ಟವಾದ ಹೆಸರೇ ಚೆನ್ನಾಗಿದೆಯೆಂದು ಪ್ರತಿಪಾದಿಸಿದರು. ಆಗ ನಮ್ಮ ಕೈ ಹಿಡಿದಿದ್ದು, ಸಂಗೀತದ ಮೇಲಿರುವ ಆಸಕ್ತಿ. ಕುಟುಂಬದಲ್ಲಿ ಎಲ್ಲರೂ ಸಂಗೀತಪ್ರಿಯರೇ ಆಗಿರುವುದರಿಂದ, “ನಿನಾದ್‌’ ಎಂಬ ಹೆಸರನ್ನು ಎಲ್ಲರೂ ಇಷ್ಟಪಟ್ಟರು. ಅದರ ಜೊತೆಗೆ, ವಿಷ್ಣು ಸಹಸ್ರನಾಮದಿಂದ ಆರಿಸಿದ “ಶರ್ವ’ ಎಂಬುದನ್ನು ಸೇರಿಸಿ, ಮಗುವಿನ ಕಿವಿಯಲ್ಲಿ “ನಿನಾದ್‌ ಶರ್ವ’ ಎಂದು ಮೂರು ಬಾರಿ ಉಸುರಿ, ಅಬ್ಟಾ ಅಂತೂ ಹೆಸರು ಹುಡುಕಿದೆವು ಅಂತ ನಿಟ್ಟುಸಿರುಬಿಟ್ಟೆವು.

ಹೆಸರಿನಲ್ಲೇನಿದೆ ಅಂತ ಷೇಕ್ಸ್‌ಪಿಯರ್‌ ಹೇಳಿದ್ದಾರೆ. ಸಾರ ಇರುವುದು ಹೆಸರಿನಲ್ಲಲ್ಲ, ವ್ಯಕ್ತಿತ್ವದಲ್ಲಿ ಅಂತ ನಮಗೂ ಗೊತ್ತು. ಆದರೂ, ಮಗುವೊಂದಕ್ಕೆ ಹೆಸರಿಡುವುದು ಯಾವ ಸಂಶೋಧನೆ, ಅನ್ವೇಷಣೆಗಿಂತಲೂ ಕಡಿಮೆಯಾದುದಲ್ಲ ಎಂಬುದು ನನ್ನ ಅಭಿಪ್ರಾಯ. ನೀವೇನಂತೀರಾ?

-ವಿನೀತ ಸುಮಂತ್‌

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

  • ಮೊದಲೆಲ್ಲಾ ಕ್ಲೀನ್‌ ಶೇವ್‌ ಮಾಡಿದ ಹುಡುಗನನ್ನು ಹುಡುಗಿಯರು ಮೆಚ್ಚಿಕೊಳ್ಳುತ್ತಿದ್ರು. ಆದ್ರೆ ಕಾಲ ಕಳೆದಂತೆ ಹುಡುಗಿಯರ ಅಭಿರುಚಿಗಳೂ ಬದಲಾಗಿವೆ. ಈಗ ಕುರುಚಲು...

  • ಇತ್ತೀಚಿನ ದಿನಗಳಲ್ಲಿ ನಾವೆಲ್ಲಾ ಮೊಬೈಲ್‌ ಆ್ಯಪ್‌ಗಳಿಗೆ ದಾಸರಾಗಿದ್ದೇವೆ. ನಮ್ಮ ಎಲ್ಲ ಚಟುವಟಿಕೆಗಳು, ಇಷ್ಟ-ಕಷ್ಟಗಳು, ಬೇಕು-ಬೇಡಗಳು, ಖಾಸಗಿ ಮಾಹಿತಿಗಳು ಅವಕ್ಕೆ...

  • ಒರಳು ಕಲ್ಲಿನಲ್ಲಿ ಬೆಳಗಿನ ದೋಸೆಗೆ ಹಿಟ್ಟು ರುಬ್ಬಿ, ಬಿಸಿ ಬಿಸಿ ದೋಸೆ ಹೊಯ್ದು ಮನೆಯವರಿಗೆಲ್ಲ ಬಡಿಸುತ್ತಿದ್ದ ಅಮ್ಮನಿಗೆ, ಕೊನೆಗೆ ದೋಸೆಯೇ ಉಳಿಯುತ್ತಿರಲಿಲ್ಲ....

  • ಒಳ್ಳೆ ಜರಿ ಪೀತಾಂಬರದ ಲಂಗ, ಇದ್ದ ಬದ್ದ ಒಡವೆಗಳನ್ನೆಲ್ಲ ಹಾಕಿ, ದಸರಾ ಬೊಂಬೆಗಳಂತೆ ಸಾಲಾಗಿ ಕೂರಿಸುತ್ತಿದ್ದರು, ಕೈಯಲ್ಲೊಂದು ಕರ್ಚೀಫ್ ಇಟ್ಟು...  ಆಗೆಲ್ಲಾ...

  • ಅಂಗಡಿಯಿಂದ ತಂದ ಸಕ್ಕರೆ ಬಳಸುತ್ತೇನೆ ಅಂತ, ದಿನಸಿ ಸಾಮಗ್ರಿಗಳಿದ್ದ ರಟ್ಟಿನ ಪೆಟ್ಟಿಗೆ ತೆಗೆದೆ. ವಸ್ತುಗಳನ್ನು ಒಂದೊಂದಾಗಿ ಆಚೆಗಿಡತೊಡಗಿದೆ. ಸಕ್ಕರೆ ಸಿಗಲಿಲ್ಲ....

ಹೊಸ ಸೇರ್ಪಡೆ