ಒಮ್ಮೆ “ಅಮ್ಮಾ…’ ಎನಬಾರದಿತ್ತೇ..?

Team Udayavani, Jan 23, 2019, 12:30 AM IST

ನಲವತ್ತಾರು ವರ್ಷದ ರೂಪಾ ತೀವ್ರವಾಗಿ ಆಯಾಸಗೊಂಡಿದ್ದರು. ಭ್ರಮನಿರಸನವಾದಂತೆ ಅವರ ವರ್ತನೆಗಳಿದ್ದವು. ಹಾಲು ಉಕ್ಕುತ್ತಿದ್ದರೂ ಒಲೆ ಆರಿಸುವುದರ ಪರಿವೇ ಇಲ್ಲದೇ, ಅಡುಗೆ ಮನೆಯಲ್ಲೇ ಪ್ರಜ್ಞೆ ತಪ್ಪಿ, ಕುಸಿದುಬಿದ್ದಿದ್ದಾರೆ. ಐಸ್‌ಕ್ರೀಮ್‌ ಅಂಗಡಿಗೆ ಹೋಗಿ, ಯಾತಕ್ಕಾಗಿ ಬಂದಿದ್ದೇನೆ ಎಂದು ಜ್ಞಾಪಿಸಿಕೊಂಡರಂತೆ. ರಾತ್ರಿ ಹೊತ್ತು ನಿದ್ದೆ ಮಾಡಲಾಗದೇ ಕಣ್ಣಿನ ರೆಪ್ಪೆಗಳು ತೆರೆದೇ ಇತ್ತು. ಮಾತೂ ನಿಂತುಹೋಗಿತ್ತು. ತೀವ್ರ ಸುಸ್ತು- ಆಯಾಸ.  

ಚಿಕ್ಕ ವಯಸ್ಸಿಗೇ ವಿಧವೆಯಾದ ರೂಪಾಗೆ ಮಕ್ಕಳಿರಲಿಲ್ಲ. ಮರುಮದುವೆಗೆ ಒಪ್ಪಿರಲಿಲ್ಲ. ನಾಲ್ಕು ವರ್ಷಗಳ ಹಿಂದೆ, ವಿಧುರ ಭಾಸ್ಕರ್‌ ಅವರನ್ನು ಭೇಟಿಯಾಗಿದ್ದ ರೂಪಾಗೆ, ಅವರ ಗುಣ ಹಿಡಿಸಿತ್ತು. ಭಾಸ್ಕರ್‌ ಕೂಡಾ ಚಿಕ್ಕ ವಯಸ್ಸಿಗೇ ಪತ್ನಿಯನ್ನು ಕಳೆದುಕೊಂಡಿದ್ದು, ಅವರ ಹದಿಹರೆಯದ ಇಬ್ಬರು ಮಕ್ಕಳಿಗೆ ತಿಳಿಸಿ, ರೂಪಾ ಅವರನ್ನು ಎರಡನೇ ಮದುವೆ ಆಗಿದ್ದರು.

ಮದುವೆಯಾದ ಮೇಲೆ ರೂಪಾಗೆ, ಭಾಸ್ಕರ್‌ ಮಕ್ಕಳೊಡನೆ ಹೆಣಗಾಡಬೇಕಾಯಿತು. ರೂಪಾ ಆ ಮಕ್ಕಳನ್ನು ಪ್ರೀತಿಸುತ್ತಿದ್ದರೂ, ತಾಯಿಯೆಂದು ಅವರು ಒಪ್ಪಿಕೊಳ್ಳಲೇ ಇಲ್ಲ. “ಅಮ್ಮ’ ಎಂದು ಕರೆಯಲಿ ಎಂದು ರೂಪಾ ಅಪೇಕ್ಷೆ ಪಟ್ಟಿದ್ದೇ ಮಕ್ಕಳಿಗೆ ಸಿಟ್ಟು. ಬುದ್ಧಿವಾದ ಹೇಳಿದರೆ, ನೀತಿ- ನಿಯಮ ಕಲಿಸಿದರೆ ಪತಿಯೂ ಒಪ್ಪುತ್ತಿರಲಿಲ್ಲ. ಮಕ್ಕಳು, ರೂಪಾಳನ್ನು ಕೆಲಸಕ್ಕೆ ಬಂದ ಆಳಿನಂತೆ ನೋಡಲು ಶುರುಮಾಡಿ, ಅನವಶ್ಯಕ ಚಾಡಿ ಹೇಳತೊಡಗಿದರು. ಭಾಸ್ಕರ್‌ ಇದನ್ನೆಲ್ಲ ಕೇಳುತ್ತಾ, ಕಿರಿಚಾಡುತ್ತಿದ್ದರು.

ರೂಪಾ, ಮರು ಮದುವೆಗಾಗಿ, ಕೆಲಸಕ್ಕೆ ರಾಜೀನಾಮೆ ನೀಡಿದ್ದರು. ಮನೆ- ಮಕ್ಕಳು- ಸಂಗಾತಿಯ ತೃಪ್ತಿ ಬಯಸಿದ್ದರು. ಪತಿ ಖಾಸಗಿ ಸಮಯವನ್ನು ಪತ್ನಿಗೆ ಕೊಡುತ್ತಿಲ್ಲ. ಲಕ್ಷಗಟ್ಟಲೆ ಹಣದ ಸಹಾಯವನ್ನು ಪತಿಯ ಮನೆಯವರಿಗೆ ಮಾಡಿದ್ದರೂ, ಆತನಿಗೆ ಕೃತಜ್ಞತಾ ಭಾವ ಇಲ್ಲ. ಪತಿಯ ಮನೆಯವರೆಲ್ಲಾ ಸೇರಿ ವಿನಾಕಾರಣ, ರೂಪಾ ಮೇಲೆ ಮಲತಾಯಿಯ ಧೋರಣೆ ತಳೆದಿದ್ದಾರೆ. ಆಕೆಗೆ ಗಂಡನಿಂದ ಪ್ರೀತಿ ಸಿಗಲೇ ಇಲ್ಲ.

ತನ್ನದಲ್ಲದ ತಪ್ಪಿಗೆ ಶಿಕ್ಷೆ ಅನುಭವಿಸಬೇಕಾದ ಪರಿಸ್ಥಿತಿಯಿಂದ ಹೊರಗೆ ಬರಲು ರೂಪಾಗೆ ಭ್ರಮನಿರಸನವಾಗಿದೆ. ಈ ವಯಸ್ಸಿನಲ್ಲಿ ಮತ್ತೆ ವಿಚ್ಛೇದನಕ್ಕೆ ಹೋಗುವುದು ಎಷ್ಟು ಸಮಂಜಸ ಎಂಬ ಪ್ರಶ್ನೆ ಕಾಡುತ್ತಿದೆ. ಸಂದಿಗ್ಧ ಪರಿಸ್ಥಿತಿಯಲ್ಲಿ ಆಗುವ ಮಾನಸಿಕ ಒತ್ತಡಕ್ಕೆ, dissociative disorder ಎಂದು ಗುರುತಿಸಿದೆ. ವಾಸ್ತವವನ್ನು ಎದುರಿಸಲಾಗದೆ, ಬಿಡಿಸಿಕೊಳ್ಳಲೂ ಆಗದೆ, ಮನಸ್ಸು ಅನೈಚ್ಚಿಕವಾಗಿ ನಿಜ ಪರಿಸ್ಥಿತಿಯ ಜೊತೆ ಸಂಪರ್ಕ ಕಳೆದುಕೊಳ್ಳುತ್ತದೆ. ನರರೋಗ ತಜ್ಞರ ಬಳಿ ಸಮಾಲೋಚನೆಗೆಂದು ಕಳಿಸಿದ್ದೆ, ಎಂ.ಆರ್‌.ಐ.ನಲ್ಲಿ ಯಾವುದೇ ತೊಂದರೆಗಳೂ ಕಾಣಿಸಲಿಲ್ಲ.

ಮಕ್ಕಳು ತಂದೆ- ತಾಯಿಯ ಮರು ಮದುವೆಯನ್ನು ಒಪ್ಪದಿರುವುದು ಸಹಜ. ಆದರೆ, ವಿದುರ- ವಿಧವೆ ಸಂಗಾತಿಗಳಾಗಿ ಬದುಕುವುದು ತಪ್ಪಲ್ಲ. ರೂಪಾ ಈಗ ಮತ್ತೂಂದು ಊರಲ್ಲಿ ಕೆಲಸದಲ್ಲಿದ್ದಾರೆ. ಹದಿನೈದು ದಿನಕ್ಕೊಮ್ಮೆ ಪತಿ ಅವರನ್ನು ನೋಡಲು ಬರುತ್ತಾರೆ. ಹೆಂಡತಿ- ಮಕ್ಕಳ ನಡುವೆ ಸಮಯವನ್ನು ತೂಗಿಸಲು ಭಾಸ್ಕರ್‌ ಕಲಿತಿದ್ದಾರೆ. ಜೋಡಿ ಹಕ್ಕಿಗಳಾಗಿ, ಸಂಗಾತಿ ಜೀವನ ನಡೆಸಿದ್ದಾರೆ. ಅನಾರೋಗ್ಯವಿಲ್ಲದೇ, ಖುಷಿಯಾಗಿದ್ದಾರೆ.

 ಶುಭಾ ಮಧುಸೂದನ್‌, ಚಿಕಿತ್ಸಾ ಮನೋ ವಿಜ್ಞಾನಿ


ಈ ವಿಭಾಗದಿಂದ ಇನ್ನಷ್ಟು

  • ಹಿಂದೆಲ್ಲಾ ಮದುವೆಗೆ ಇನ್ನೂ ನಾಲ್ಕೈದು ದಿನ ಇರುವಾಗಲೇ ವಧು- ವರನ ಮನೆ ಬಂಧುಗಳಿಂದ, ಆಪ್ತೆಷ್ಟರಿಂದ ತುಂಬಿ ಹೋಗುತ್ತಿತ್ತು. ಮದುವೆ ಮನೆಯ ಕೆಲಸಗಳಲ್ಲಿ ಊರ ಮಂದಿಯೂ...

  • ಬೇಸಿಗೆಯಲ್ಲಿ ತಂಪಾಗಿರಿಸುವ ಮತ್ತು ಚಳಿಗಾಲದಲ್ಲಿ ಬೆಚ್ಚಗಿರಿಸುವ ಖಾದಿ ಮತ್ತು ಹತ್ತಿಯ ಕುರ್ತಿಗಳಿಗೆ ಬೇಡಿಕೆ ಹೆಚ್ಚು. ಇವನ್ನು ವಿಶೇಷ ಸಮಾರಂಭಗಳಿಗೆ ತೊಡಬಹುದು....

  • ಮನೆಯಲ್ಲಿ ಎಲ್ಲರಿಗಿಂತ ಲೇಟಾಗಿ ಮಲಗಿ, ಎಲ್ಲರಿಗಿಂತ ಬೇಗ ಏಳುವವಳು ಅಮ್ಮ. ನಿತ್ಯವೂ ಎಂಟು ಗಂಟೆ ನಿದ್ದೆ ಮಾಡಲೇಬೇಕು ಅಂತ ಯಾರೇ ಹೇಳಿದರೂ, ಕೆಲಸದೊತ್ತಡ ಅವಳ...

  • ಈಗಷ್ಟೇ ಮದುವೆಯಾದ ಹುಡುಗಿಯರೇನಾದರೂ, "ನಂಗೆ ಹುಳಿ ತಿನ್ಬೇಕು ಅನ್ನಿಸ್ತಿದೆ' ಅಂದುಬಿಟ್ಟರೆ, ಎಲ್ಲರೂ ಕಣ್ಣರಳಿಸಿ ಕೇಳುವುದೊಂದೇ, "ಏನೇ, ಪ್ರಗ್ನೆಂಟಾ?' ಅಂತ....

  • ಬೇಸಿಗೆಯ ಈ ಕಾಲದಲ್ಲಿ, ಧಗೆಯಿಂದಾಗಿ ಬಾಯಾರಿಕೆ ಹೆಚ್ಚಾಗುತ್ತದೆ. ಎಷ್ಟು ನೀರು ಕುಡಿದರೂ ಸಾಲದು ಅನ್ನೋ ಪರಿಸ್ಥಿತಿ. ನೀರು ಕುಡಿಯದಿದ್ದರೆ, ಆರೋಗ್ಯ ಹದಗೆಡುತ್ತದೆ....

ಹೊಸ ಸೇರ್ಪಡೆ