ಮನ ಮಿಡಿದ ಪಲ್ಲವಿ: ಓ ಕಿರಣ, ನನ್ನ ಪ್ರೀತಿಯ ಗುರುಕಿರಣ

Team Udayavani, May 23, 2018, 6:00 AM IST

ಕನ್ನಡದ ಯಶಸ್ವೀ ಸಂಗೀತ ನಿರ್ದೇಶಕ ಗುರುಕಿರಣ್‌ರ ಪತ್ನಿ ಪಲ್ಲವಿ, ಮೂಲತಃ ಉಡುಪಿಯವರು. ಕಾಲೇಜಿನಲ್ಲಿರುವಾಗ “ಮಿಸ್‌ ಮಣಿಪಾಲ್‌’ ಕಿರೀಟ ಮುಡಿಗೇರಿಸಿಕೊಂಡಿದ್ದವರು. “ಗುರೂಜಿಗೆ ಯಶಸ್ಸು ಸುಲಭಕ್ಕೆ ಬಂದಿರುವುದಲ್ಲ. ಅದರ ಹಿಂದೆ ಅಪಾರ ಪರಿಶ್ರಮ ಇದೆ’ ಎಂದವರು ಹೇಳುವಾಗ ಅವರ ಧ್ವನಿಯಲ್ಲಿ ಹೆಮ್ಮೆ ಎದ್ದು ಕಾಣುತ್ತದೆ. “ಸಂಬಂಧಗಳ ಬೆಲೆ ಗೊತ್ತಾಗಬೇಕೆಂದರೆ ಕೂಡು ಕುಟುಂಬಗಳಿರಬೇಕು’ ಎಂದು ಹೇಳುವ ಇವರು ಕೂಡು ಕುಟುಂಬದ ಸವಿ ಅನುಭವಿಸಿರುವವರು. ಪತಿಯ ಸಂಗೀತ ಪಯಣ ಮತ್ತು ತಮ್ಮ ಸಾಂಸಾರಿಕ ಕಥನವನ್ನು ಇಲ್ಲಿ ಹಂಚಿಕೊಂಡಿದ್ದಾರೆ…

ನಿಮಗೆ ಎಷ್ಟು ಭಾಷೆ ಗೊತ್ತು?
ನನ್ನ ತಂದೆ ಬ್ಯಾಂಕ್‌ ಉದ್ಯೋಗಿಯಾಗಿದ್ದರು. ಹೀಗಾಗಿ ದೇಶದ ಹಲವಾರು ಕಡೆಗಳಲ್ಲಿ ನಾನು ಬಾಲ್ಯ ಕಳೆದಿದ್ದೇನೆ. ನಾನು ಹುಟ್ಟಿದ್ದು ಚೆನ್ನೈನಲ್ಲಿ, ಅಸ್ಸಾಂ ಮತ್ತು ಇತರ ಕಡೆಗಳಲ್ಲೂ ನೆಲೆಸಿದ್ದೆವು. ಅಪ್ಪ ನಿವೃತ್ತರಾಗುವ ವೇಳೆ ನಾವು ಉಡುಪಿಯಲ್ಲಿ ಸೆಟ್ಲ ಆದ್ವಿ. ನನಗೆ ಇಂಗ್ಲಿಷ್‌, ತಮಿಳು, ಅಸ್ಸಾಮಿ, ತುಳು ಭಾಷೆ ಬರುತ್ತದೆ. ಆದ್ರೆ ನನ್ನ ಕನ್ನಡ ಮಾತ್ರ ಅಪ್ಪಟ ಮಂಗಳೂರು ಕನ್ನಡ. 

ಗುರುಕಿರಣ್‌ ಭೇಟಿ ಎಲ್ಲಿ, ಹೇಗೆ ಆಯಿತು?
ನಮ್ಮಿಬ್ಬರದ್ದೂ ಪಕ್ಕಾ ಅರೇಂಜ್‌ ಮ್ಯಾರೇಜ್‌. ಅಂದರೆ, ಹಳೇ ಕಾಲದಲ್ಲಿ ನಡೆಯುತ್ತಿತ್ತಲ್ಲ; ಆ ರೀತಿಯ ಮದುವೆ. ಅವರು ಹೆಣ್ಣು ನೋಡಲು ನಮ್ಮ ಮನೆಗೆ ಬಂದಾಗ ನಾವಿಬ್ಬರೂ ಪರಸ್ಪರ ಮೊದಲ ಬಾರಿಗೆ ನೋಡಿದ್ದು. ಆದರೆ, ಮಾತಾಡಿರಲಿಲ್ಲ. ಅದಾದ ಬಳಿಕ ಆಮಂತ್ರಣ ಪತ್ರಿಕೆಗಾಗಿ ನಾವಿಬ್ಬರೂ ಫೋಟೊ ತೆಗೆಸಿಕೊಳ್ಳಬೇಕಿತ್ತು. ಆಗ ಮತ್ತೂಮ್ಮೆ ಪರಸ್ಪರ ಮುಖ ನೋಡಿದ್ದೆವು. ಆಗಲೂ ಮಾತಿಲ್ಲ, ಕತೆಯಿಲ್ಲ. ಆಮೇಲೆ ನೇರ ಮದುವೆಯೇ. ಆಗ ನಾನು ಫೈನಲ್‌ ಇಯರ್‌ ಡಿಗ್ರಿಯಲ್ಲಿದ್ದೆ. ಪರೀಕ್ಷೆ ಮುಗಿದ ಎರಡನೇ ದಿನಕ್ಕೇ ನಮ್ಮ ಮದುವೆಯಾಯಿತು. 

-ಮದುವೆಯ ಮೊದಲ ದಿನಗಳು ಹೇಗಿದ್ದವು?
ಮದುವೆಯಾದಾಗ ನನಗೆ 20 ವರ್ಷ. ಇನ್ನು ಪ್ರಬುದ್ಧತೆಯೇ ಇರಲಿಲ್ಲ. ನನ್ನದು ಚಿಕ್ಕ ಕುಟುಂಬ. ಆದರೆ, ಗುರೂಜಿದು ಕೂಡು ಕುಟುಂಬ. ಮನೆ ತುಂಬಾ ಜನರು. ಅದೂ ಅಲ್ಲದೇ ಅವರು ಸಂಗೀತ ನಿರ್ದೇಶನ ಅಂತ ಬೆಂಗಳೂರಿನಲ್ಲೇ ನೆಲೆಸಿದ್ರು. ಆಗಾಗ ಬಂದು ಹೋಗುತ್ತಿದ್ದರು. ಬಂದಾಗ ನನ್ನನ್ನು ಹೋಟೆಲ್‌ಗೆ ಕರೆದುಕೊಂಡು ಹೋಗಿ ಎಂದರೆ, ನನ್ನ ಜೊತೆಗೆ ಮನೆಯವರನ್ನೆಲ್ಲ ಕರೆಯುತ್ತಿದ್ದರು. ಆ ವಾತಾವರಣಕ್ಕೆ ಹೊಂದಿಕೊಳ್ಳಲು ಸ್ವಲ್ಪ ಸಮಯ ಹಿಡಿಯಿತು. ಆಮೇಲಾಮೇಲೆ ಕೂಡು ಕುಟುಂಬವೇ ಇಷ್ಟ ಆಗುತ್ತಾ ಹೋಯಿತು. ಈಗ ಎಲ್ಲಿಗಾದರೂ ಹೊರಡುವುದೆಂದರೆ ನಾನೇ ಒಂದಷ್ಟು ಸ್ನೇಹಿತರು, ನೆಂಟರನ್ನೂ ನಮ್ಮ ಜೊತೆ ಹೊರಡಿಸುತ್ತೇನೆ. 

ಮದುವೆ ವೇಳೆಗಾಗಲೇ ಗುರುಕಿರಣ್‌ ಸಂಗೀತ ನಿರ್ದೇಶಕರಾಗಿ ಹೆಸರು ಮಾಡಿದ್ರಾ?
ನಾವು ಮದುವೆಯಾಗುವ ವೇಳೆ ಗುರುಕಿರಣ್‌ “ಎ’ ಚಿತ್ರಕ್ಕೆ ಸಂಗೀತ ನಿರ್ದೇಶನ ಮಾಡುತ್ತಿದ್ದರು. ಮದುವೆಯಾಗುವಾಗ ಅವರಿಗೆ ಸಂಗೀತದಲ್ಲಿ ಆಸಕ್ತಿ ಇದೆ, ರವಿಕಿರಣ್‌ರ ಧಾರಾವಾಹಿಗಳಿಗೆ ಸಂಗೀತ ನೀಡುತ್ತಾರೆ ಎಂದಷ್ಟೇ ಗೊತ್ತಿತ್ತು. ಅವರಿಗೆ ಅದರಲ್ಲೇ ಏನಾದರೂ ಸಾಧಿಸಬೇಕು ಎಂಬ ಹಠ ಇದೆ ಎಂದು ತಿಳಿದಿರಲಿಲ್ಲ. “ಎ’ ಚಿತ್ರದ ಸಂಗೀತ ಸೂಪರ್‌ಹಿಟ್‌ ಆದ ಬಳಿಕವೇ ಗೊತ್ತಾಗಿದ್ದು ಇವರ ಪ್ರತಿಭೆ ಎಂಥದ್ದು ಎಂದು. 

ಅವರ ಯಶಸ್ಸಿನ ಪ್ರತಿಹಂತದಲ್ಲೂ ನೀವಿದ್ದೀರ? ಹಿಂತಿರುಗಿ ನೋಡಿದರೆ ಏನನ್ನಿಸುತ್ತೆ? 
ಮದುವೆಯಾಗಿ 4 ವರ್ಷ ನಾನು ಮಂಗಳೂರಿನಲ್ಲಿ ಅತ್ತೆ ಮನೆಯಲ್ಲೇ ಇದ್ದೆ. ಮನೆಯಲ್ಲಿ ಎಷ್ಟೇ ಅನುಕೂಲಗಳಿದ್ದರೂ, ಗುರೂಜಿ ಅವರ ಸಂಗೀತ ನಿರ್ದೇಶನದಿಂದ ಬಂದ ಸಂಪಾದನೆ ಹೊರತು ಮನೆಯ ಹಣವನ್ನು ಮುಟ್ಟುತ್ತಿರಲಿಲ್ಲ. ಹೀಗಾಗಿ ಅವರು ಒಂದು ಹಂತಕ್ಕೆ ಸೆಟಲ್‌ ಆಗೋವರೆಗೆ ಮನೆ ಮಾಡಿ ನನ್ನನ್ನು ಮತ್ತು ನಮ್ಮ ಮಗುವನ್ನು ಕರೆದುಕೊಂಡು ಹೋಗಲಿಲ್ಲ. ನಾನು ಬೆಂಗಳೂರಿಗೆ ಬಂದ ಬಳಿಕವೇ ನನಗೆ ಗುರೂಜಿ ಎಷ್ಟು ಶ್ರಮ ವಹಿಸುತ್ತಿದ್ದಾರೆ ಎಂದು ತಿಳಿದಿದ್ದು. ಲಕ್‌ ಎಂಬುದು ಏನೂ ಅಲ್ಲ. ಶ್ರಮವೇ ಎಲ್ಲಾ ಎಂಬುದು ತಿಳಿದಿದ್ದೇ ಬೆಂಗಳೂರಿಗೆ ಬಂದ ಮೇಲೆಯೇ.

ಇಬ್ಬರಲ್ಲಿ ಯಾರು ಹೆಚ್ಚು ರೊಮ್ಯಾಂಟಿಕ್‌? ಉಡುಗೊರೆ, ಶುಭಾಶಯ ವಿನಿಮಯವನ್ನು ಇಬ್ಬರಲ್ಲಿ ಯಾರು ಹೆಚ್ಚು ಮಾಡುವುದು?
ಮದುವೆಯಾದ ಹೊಸತರಲ್ಲಿ ಗುರು ನನ್ನ ಬರ್ತ್‌ಡೇ, ಆ್ಯನಿವರ್ಸರಿಗೆಲ್ಲಾ ಶುಭಾಶಯ ಹೇಳಲಿ, ಸರ್‌ಪ್ರೈಸ್‌ ಗಿಫ್ಟ್ ಕೊಡಲಿ ಎಂದು ತುಂಬಾ ಆಸೆ ಪಡ್ತಾ ಇದ್ದೆ. ಆದರೆ ಅವರಿಗೆ ಗಿಫ್ಟ್ ಕೊಡುವ, ವಿಶ್‌ ಮಾಡುವ ಅಭ್ಯಾಸವೇ ಇರಲಿಲ್ಲ. ನಾನಾಗಿಯೇ ಕೇಳಿದರೆ ದುಡ್ಡು ಕೊಟ್ಟು ಏನಾದರೂ ತಗೊ ಎಂದು ಹೇಳಿಬಿಡುತ್ತಿದ್ದರು. ಕಡೆಗೆ ನನಗೇ ಅರ್ಥ ಆಯಿತು ಗಿಫ್ಟ್ ಯಾವತ್ತೂ ಪ್ರೀತಿಯ ಮಾನದಂಡವಲ್ಲ ಎಂದು. ಅದಕ್ಕೇ ಮಕ್ಕಳಿಗೂ ನಾವು ಗಿಫ್ಟ್ ಕೊಡುವ ಅಭ್ಯಾಸ ಮಾಡಿಲ್ಲ. ಗಿಫ್ಟ್ ಕೊಟ್ಟರೆ ಮಾತ್ರ ನಮ್ಮ ಅಪ್ಪ ಅಮ್ಮನಿಗೆ ನಮ್ಮ ಮೇಲೆ ಪ್ರೀತಿ. ಇಲ್ಲದಿದ್ದರೆ ಪ್ರೀತಿಯಿಲ್ಲ ಎಂದು ಅವರು ತಿಳಿದುಕೊಳ್ಳಬಾರದು. ಒಮ್ಮೆ ನಾವು ಅವರಿಗೆ ಗಿಫ್ಟ್ ಕೊಟ್ಟು ಅಭ್ಯಾಸ ಮಾಡಿಸಿದರೆ ಅವರು ನಮ್ಮಿಂದ ಅದನ್ನೇ ನಿರೀಕ್ಷಿಸುತ್ತಾರೆ.

ಮಕ್ಕಳು ಏನು ಓದುತ್ತಿದ್ದಾರೆ? ಅವರಿಗೂ ಸಂಗೀತದಲ್ಲಿ ಆಸಕ್ತಿ ಇದೆಯಾ?
ಮಗ ಸೆಕೆಂಡ್‌ ಪಿ.ಯು.ಸಿ ಮುಗಿಸಿದ್ದಾನೆ. ಮಗಳು 8ನೇ ತರಗತಿಯಲ್ಲಿದ್ದಾಳೆ. ಇಬ್ಬರೂ ಸಂಗೀತ, ಪಿಯಾನೊ ಕಲಿಯುತ್ತಿದ್ದಾರೆ. ಇಬ್ಬರಿಗೂ ಸಂಗೀತದಲ್ಲಿ ಬಹಳ ಆಸಕ್ತಿಯಿದೆ. ಇಬ್ಬರಲ್ಲಿ ಒಬ್ಬರಾದರೂ ಸಂಗೀತ ಕ್ಷೇತ್ರಕ್ಕೆ ಬಂದರೆ ನಮಗೆ ಖುಷಿ. 

ನಿಮ್ಮ ಹವ್ಯಾಸಗಳೇನು?
ನಾನು ತುಂಬಾ ಪುಸ್ತಕಗಳನ್ನು ಓದುತ್ತೇನೆ. ಸಿಡ್ನಿ ಶೆಲ್ಡನ್‌ ಬರೆಯುವ ಥ್ರಿಲ್ಲರ್‌ ಪುಸ್ತಕಗಳು ನನಗೆ ಇಷ್ಟ. ಮಗಳ ಜೊತೆ ನಾನೂ ಸಂಗೀತ ಕಲಿಯಲು ಹೋಗುತ್ತಿದ್ದೇನೆ. ಬಿಡುವಿನ ವೇಳೆ ಭಜನೆ, ಸ್ವರ ಹಾಡಿಕೊಳ್ಳುತ್ತೇನೆ. ಗುರೂಜಿ ಸದಾ ಬ್ಯುಸಿ ಇರ್ತಾರೆ. ಹೀಗಾಗಿ ಮಕ್ಕಳಿಗೆ ಪ್ರವಾಸ, ಶಾಪಿಂಗ್‌ ಕರೆದುಕೊಂಡು ಹೋಗುವ ಜವಾಬ್ದಾರಿಯೂ ನನ್ನ ಮೇಲೆಯೇ ಇರುತ್ತದೆ. 

ನೀವಿಬ್ಬರು ಜಗಳ ಆಡೋದೇ ಇಲ್ವಾ? 
ನಾವು ಈಗಲೂ ಕಿತ್ತಾಡುತ್ತಲೇ ಇರುತ್ತೇವೆ. ಮದುವೆ ಆದ ಹೊಸತರಲ್ಲಿ ನಾನು ತುಂಬಾ ಜಗಳ ತಗೆಯುತ್ತಿದ್ದೆ. ಈಗ ಅವರನ್ನು ಕೇಳುತ್ತಿರುತ್ತೇನೆ “ನೀವು ಅದ್ಹೇಗೆ ನನ್ನನ್ನು ಸಹಿಸಿಕೊಳ್ತಾ ಇದ್ರಿ?’ ಅಂತ. 

ಅಡುಗೆಯಲ್ಲಿ ಎಕ್ಸ್‌ಪರ್ಟ್‌ ಅಂತೆ ನೀವು?
ನನಗೆ ನಾನ್‌ವೆಜ್‌ ಅಡುಗೆ ಮಾಡಲು ಇಷ್ಟ. ನಾವು ಮಂಗಳೂರಿನವರು, ನಮಗೆ ಮೀನು ಇಲ್ಲದ ಊಟ ಊಟವೇ ಅಲ್ಲ. ಮೀನು ಫ್ರೈ, ನೀರ್‌ ದೋಸೆ, ಕೋರಿ ರೊಟ್ಟಿ, ಮೀನು ಸಾರು ಮಾಡುವುದರಲ್ಲಿ ನಾನು ಎಕ್ಸ್‌ಪರ್ಟ್‌. ರೆಸ್ಟೋರೆಂಟ್‌ಗಳಿಗೆ ಹೋದಾಗ ನಾವ್ಯಾರೂ ಮೀನು ತಿನ್ನುವುದಿಲ್ಲ. ಮನೆಯಲ್ಲಿ ಎಲ್ಲರಿಗೂ ನಾನು ಮಾಡುವ ಮೀನಿನ ಪದಾರ್ಥಗಳೇ ಇಷ್ಟ.

ಗುರುಕಿರಣ್‌ರ ಯಾವ ಸಿನಿಮಾದ ಹಾಡುಗಳು ನಿಮಗಿಷ್ಟ?
“ಜೋಗಿ’  ಮತ್ತು “ಆಪ್ತಮಿತ್ರ’ ಹಾಡುಗಳು ತುಂಬಾ ಇಷ್ಟ.

ರವಿಕಿರಣ್‌- ಗುರುಕಿರಣ್‌ ಅಣ್ಣತಮ್ಮ ಅಲ್ಲ…
ಧಾರಾವಾಹಿ ನಿರ್ದೇಶಕ ರವಿಕಿರಣ್‌ ಮತ್ತು ಗುರುಕಿರಣ್‌ ಅಣ್ಣ ತಮ್ಮಂದಿರು ಎಂದೇ ಹೆಚ್ಚಿನವರು ತಿಳಿದಿದ್ದಾರೆ. ಇಬ್ಬರೂ ನೋಡಲು ಕೂಡ ಒಂದೇ ರೀತಿ ಇದ್ದಾರೆ. ಒಟ್ಟಿಗೇ ಕೆಲಸ ಮಾಡುತ್ತಾರೆ. ಹೆಸರುಗಳೂ ಒಂದೇ ರೀತಿ ಇವೆ. ಆದರೆ, ರವಿಕಿರಣ್‌ ಮತ್ತು ಗುರುಕಿರಣ್‌ ಇಬ್ಬರೂ ಆಪ್ತ ಸ್ನೇಹಿತರು. ಯಾರಾದರೂ, “ರವಿಕಿರಣ್‌ ನಿಮ್ಮ ಅಣ್ಣನಾ?’ ಅಂತ ಗುರುಕಿರಣ್‌ಗೆ ಕೇಳಿದರೆ, ಇವರು ಹೌದು ಎಂದೇ ಹೇಳುತ್ತಾರೆ. ಇಬ್ಬರ ಸಂಬಂಧ ಸ್ವಂತ ಅಣ್ಣತಮ್ಮಂದಿರ ಸಂಬಂಧದಂತೆಯೇ ಇದೆ.

ಅವರ ತಾಳ್ಮೆ ನನಗೆ ಸಿಟ್ಟು ತರಿಸುತ್ತೆ!
ಗುರೂಜಿ ತುಂಬಾ ಸಮಾಧಾನಿ. ಎಂಥ ಸಂದರ್ಭದಲ್ಲೂ ಅವರು ಟೆನÒನ್‌ ಮಾಡಿಕೊಳ್ಳಲ್ಲ. ಗಡಿಬಿಡಿ ಮಾಡುವುದಿಲ್ಲ. ಯಾರ ಮೇಲೂ ರೇಗಾಡುವುದಿಲ್ಲ. ಕಡೇ ಪಕ್ಷ ನಮಗೆ ತೊಂದರೆ ಮಾಡಿದವರ ಮೇಲಾದರೂ ಅವರಿಗೆ ಕೋಪ ಬರಲಿ ಅಂತ ನಾನು ನಿರೀಕ್ಷಿಸುತ್ತೇನೆ. ಆದರೆ, ಅವರಿಂದ ಅದೂ ಸಾಧ್ಯವಿಲ್ಲ. ಎಲ್ಲಾ ಸಮಸ್ಯೆಗೂ ನಾನೇ ಟೆನÒನ್‌ ಮಾಡಿಕೊಂಡು, ಪರಿಹಾರ ಕಂಡುಕೊಳ್ಳಬೇಕು.  ಆ ವಿಷಯಕ್ಕೆ ನನಗೆ ಅವರ ಮೇಲೆ ಬಹಳ ಕೋಪ ಬರುತ್ತದೆ. ಆದರೆ, ಅವರ ಅದೇ ತಾಳ್ಮೆಗೆ ಅವರ ಮೇಲಿನ ಪ್ರೀತಿ ದುಪ್ಪಟ್ಟು ಆಗೋದು. ನನ್ನನ್ನು, ಮಕ್ಕಳನ್ನು ಸೇರಿಸಿ ಯಾರ ಮೇಲೂ ಅವರು  ಕೋಪ ತೋರುವವರಲ್ಲ. 

“ಮಿಸ್‌ ಮಣಿಪಾಲ್‌’ ಆಗಿದ್ದೆ…
ನಾನು ಉಡುಪಿಯ ಪೂರ್ಣಪ್ರಜ್ಞ ಕಾಲೇಜಿನಲ್ಲಿ ಡಿಗ್ರಿ ಓದುತ್ತಿದ್ದಾಗ, ಸ್ನೇಹಿತರ ಒತ್ತಾಯದ ಮೇರೆಗೆ “ಮಿಸ್‌ ಮಣಿಪಾಲ್‌’ ಸ್ಪರ್ಧೆಯಲ್ಲಿ ಭಾಗವಹಿಸಿದ್ದೆ. ನೀನು ಎತ್ತರ ಇದ್ದೀಯ, ಪ್ರಯತ್ನ ಮಾಡು ಎಂದು ಅವರೆಲ್ಲ ಹುರಿದುಂಬಿಸಿದರು. ಸ್ಪರ್ಧಿಸಲು ನನಗೆ ಸ್ವಲ್ಪವೂ ಧೈರ್ಯ ಇರಲಿಲ್ಲ. ಮಣಿಪಾಲ್‌ನಲ್ಲಿ ಹೊರರಾಜ್ಯದ, ಹೊರದೇಶದ ವಿದ್ಯಾರ್ಥಿಗಳ ದಂಡೇ ಇರುತ್ತದೆ. ಅವರ ಮಧ್ಯೆ ನಾನು ಸ್ಪರ್ಧಿಸುವುದಾ!? ಅಂತ ಭಯ ಇತ್ತು. ಆದರೆ, ನಾನು  ಪ್ರತಿ ಸುತ್ತಿನಲ್ಲೂ ಗೆಲ್ಲುತ್ತಾ “ಮಿಸ್‌ ಮಣಿಪಾಲ್‌’ ಪಟ್ಟ ಗೆದ್ದುಕೊಂಡೆ. ಕಾಲೇಜಿನಲ್ಲಿ ಬ್ರಿಲಿಯಂಟ್‌ ವಿದ್ಯಾರ್ಥಿನಿ ನಾನು. ಸೌಂದರ್ಯ ಸ್ಪರ್ಧೆಯಲ್ಲೂ ಜಾಣತನದ ಉತ್ತರಗಳನ್ನು ನೀಡಿಯೇ ಟೈಟಲ್‌ ಗೆದ್ದೆ. 

ಚೇತನ ಜೆ.ಕೆ.


ಈ ವಿಭಾಗದಿಂದ ಇನ್ನಷ್ಟು

  • ಮನೆಗೆ ಬೀಗ ಹಾಕ್ಕೊಂಡು ಎಲ್ಲರೂ ಹೋಗಬೇಕಾದ ಪರಿಸ್ಥಿತಿ ಬಂದಾಗ ಮತ್ತೂಂದಿಷ್ಟು ಹೆಚ್ಚಿನ ಜವಾಬ್ದಾರಿ. ಎಲ್ಲರ ಬಟ್ಟೆ, ಸಾಮಾನುಗಳನ್ನು ಸರಿಯಾಗಿ ಪ್ಯಾಕ್‌ ಮಾಡೋದು...

  • ಮಾವಿನ ಮರ ಹೂ ಬಿಟ್ಟಾಗಲೇ, ಈ ವರ್ಷ ಮಾವಿನ ಹಣ್ಣು ಮತ್ತು ಕಾಯಿಯಿಂದ ಯಾವೆಲ್ಲಾ ಅಡುಗೆ ಮಾಡಬಹುದು ಅಂತ ಗೃಹಿಣಿಯರು ಲೆಕ್ಕ ಹಾಕುತ್ತಾರೆ. ಮಾವಿನ ಹಣ್ಣನ್ನು ಹಾಗೇ...

  • ನಿರ್ಜಲೀಕರಣ, ಸನ್‌ಬರ್ನ್, ತುರಿಕೆ, ಬೆವರುಸಾಲೆ, ಕಜ್ಜಿ, ಬಾಯಿಹುಣ್ಣು, ಉರಿಮೂತ್ರ ಸಮಸ್ಯೆ, ನಿದ್ರಾಹೀನತೆ... ಬೇಸಿಗೆಯಲ್ಲಿ ನಮ್ಮನ್ನು ಕಾಡುವ ಸಮಸ್ಯೆಗಳು ಒಂದೇ,...

  • "ಕಾಡು ಕುದುರೆ ಓಡಿ ಬಂದಿತ್ತಾ...' ಗೀತೆಯ ಮೂಲಕ ರಾಷ್ಟ್ರಪ್ರಶಸ್ತಿಗೆ ಪಾತ್ರರಾದವರು ಶಿವಮೊಗ್ಗ ಸುಬ್ಬಣ್ಣ. ಅವರ ಸಿರಿಕಂಠವನ್ನು ಪ್ರಧಾನಿ ನೆಹರು ಅವರೂ ಮೆಚ್ಚಿಕೊಂಡಿದ್ದರು....

  • ಲಾಭ ಮಾಡುವುದೇ ವ್ಯಾಪಾರದ ಮೂಲ ಉದ್ದೇಶ ಎಂಬ ಮಾತಿದೆ. ಆದ್ರೆ, ಕೆಲವರಿಗೆ ವ್ಯಾಪಾರವೇ ಬದುಕಿನ ಮೂಲಾಧಾರ. ಸಂಸಾರದ ತಕ್ಕಡಿ ತೂಗಿಸಲು, ತಕ್ಕಡಿ ಹಿಡಿಯಲೇಬೇಕಾದ ಅನಿವಾರ್ಯಕ್ಕೆ...

ಹೊಸ ಸೇರ್ಪಡೆ