ಹೆಸರಿನ ಕುರಿತೇ ಪಿಎಚ್.ಡಿ!
Team Udayavani, Jul 3, 2019, 5:00 AM IST
ಕೆಲವೊಮ್ಮೆ ಮನುಷ್ಯನ ಹೆಸರೇ ಅವನನ್ನು ನಗೆಪಾಟಲಿಗೆ, ಮುಜುಗರಕ್ಕೆ ಈಡು ಮಾಡಿಬಿಡುತ್ತದೆ. ಅದಕ್ಕಾಗಿಯೇ ಈಗಿನ ಹೆತ್ತವರು, ಮಕ್ಕಳಿಗೆ ಹೆಸರಿಡುವ ಮುನ್ನ ಸಾವಿರ ಬಾರಿ ಯೋಚನೆ ಮಾಡುತ್ತಾರೆ. ಆದರೆ, ಇಲ್ಲೊಬ್ಬ ಮಹಿಳೆಗೆ ಆಕೆಯ ತಾಯಿ ಅದ್ಯಾವ ಗುಂಗಿನಲ್ಲಿ ಹೆಸರಿಟ್ಟಳ್ಳೋ ಏನೋ, ಆ ಹೆಸರಿನಿಂದ ಆಕೆ ಬಹಳಷ್ಟು ಅವಮಾನ ಅನುಭವಿಸಬೇಕಾಯ್ತು. ಆಕೆಯ ಹೆಸರೇನು ಗೊತ್ತಾ? ಮೆರುವಾನ ಪೆಪ್ಸಿ!
ಮೆರುವಾನ (marijuana) ಅಂದರೆ, ಗಾಂಜಾ ಅಂತ ಅರ್ಥ! ಶಾಲೆ-ಕಾಲೇಜಿನಲ್ಲಿ ಸ್ನೇಹಿತರೆಲ್ಲ ಆಕೆ ಹೆಸರು ಕೇಳಿ ಹಾಸ್ಯ ಮಾಡಿದರೆ, ಅಧ್ಯಾಪಕರೂ ಹಾಜರಿ ಕರೆವಾಗ ಅವಳ ಹೆಸರು ಕೇಳಿ ಹೌಹಾರಿ, ಇದೆಂಥ ಹೆಸರು ಎಂದು ಮೂಗು ಮುರಿಯುತ್ತಿದ್ದರಂತೆ. ನೀನ್ಯಾಕೆ ಹೆಸರು ಬದಲಿಸಿಕೊಳ್ಳಬಾರದು ಅಂತ ಕೆಲವರೆಂದರೆ, ಇನ್ನೂ ಕೆಲವರು ಮೇರಿ ಅಂತ ನಿಕ್‌ನೇಮ್ ಇಟ್ಟರಂತೆ. ಆದರೆ, ಮೆರುವಾನ ತನ್ನ ಹೆಸರಿನಿಂದಲೇ ಗುರುತಿಸಿಕೊಳ್ಳಲು ಬಯಸುತ್ತಿದ್ದಳು. ಯಾರದ್ರೂ ಮೇರಿ ಅಂದರೆ, ನಾನು ಮೇರಿಯಲ್ಲ, ಮೆರುವಾನ ಅನ್ನುತ್ತಿದ್ದಳು. ವಿಷಯ ಅದಲ್ಲ, ವಿಚಿತ್ರ ಹೆಸರಿನ ಕಾರಣದಿಂದ ಸಾಕಷ್ಟು ತೊಂದರೆ ಅನುಭವಿಸಿದ ಆಕೆ, ಆ ವಿಷಯದ ಮೇಲೆಯೇ ಪಿಎಚ್.ಡಿ ಮಾಡಿ ಡಾಕ್ಟರ್ ಮೆರುವಾನ ಆಗಿದ್ದಾಳೆ. ತನ್ನಂತೆಯೇ ನೋವು ಅನುಭವಿಸಿದ ಅನೇಕ ಶಾಲೆ-ಕಾಲೇಜು ಮಕ್ಕಳಿಂದ ಮಾಹಿತಿ ಸಂಗ್ರಹಿಸಿ ಮಂಡಿಸಿದ, ಬ್ಲಾಕ್ ನೇಮ್ಸ್ ಇನ್ ವೈಟ್ ಕ್ಲಾಸ್‌ರೂಮ್ಸ್ ಎಂಬ ಪ್ರಬಂಧ ಸಾಕಷ್ಟು ಸುದ್ದಿ ಮಾಡಿದೆ. ಒಳ್ಳೆಯ ಹೆಸರು ಸಂಪಾದಿಸೋದು ಅಂದ್ರೆ ಇದೇ ಅಲ್ವಾ?