“ಶಕ್ತಿ’ರೂಪಿಣಿ

ಎಲ್ಲಿ ಅಡಗಿತ್ತು ಇಷ್ಟೊಂದು ಧೈರ್ಯ?

Team Udayavani, Nov 6, 2019, 4:14 AM IST

“ಅವನು ಬಿಡ್ರೀ,ಕಲ್ಲು ಬಂಡೆಯಂಥ ಆಸಾಮಿ. ಯುದ್ಧ ಬೇಕಾದ್ರೂ ಗೆದ್ಕೊಂಡು ಬರ್ತಾನೆ. ಅವನ ಬಗ್ಗೆ ಯಾವುದೇ ಯೋಚನೆ ಇಲ್ಲ. ಮಗಳ ಕಥೆ ಹೇಳಿ, ಇವಳದೇ ಚಿಂತೆ ನನಗೆ…’ ಮಕ್ಕಳನ್ನು ಕುರಿತು ಮಾತಾಡುವಾಗ, ಹೆತ್ತವರು ಹೀಗೆಲ್ಲ ಹೇಳುತ್ತಿರುತ್ತಾರೆ.  ಆಗಷ್ಟೇ ಮದುವೆಯಾಗಿರುವ ಒಂದು ಜೋಡಿ ಅಂದುಕೊಳ್ಳಿ- ಈ ದಂಪತಿಯ ಪೈಕಿ ಗಂಡ, ಕೆಲಸದ ಕಾರಣಕ್ಕಾಗಿ ಏಳೆಂಟು ತಿಂಗಳಮಟ್ಟಿಗೆ ಬೇರೆ ಊರಿಗೆ ಹೋಗಬೇಕಾಗುತ್ತದೆ. ದೂರದ ಊರು.

ಹೊಸ ಜಾಗ. ಅಲ್ಲಿನ ವಾತಾವರಣ ಒಗ್ಗುವುದೋ ಇಲ್ಲವೋ ಎಂಬ ಕಾರಣದಿಂದಲೇ ಹೆಂಡತಿಯನ್ನು ತವರಿನಲ್ಲೋ ಅಥವಾ ತಂದೆಯ ಮನೆಯಲ್ಲೋ ಬಿಟ್ಟು ಹೋಗುವ ನಿರ್ಧಾರವಾಗುತ್ತದೆ. ಆಗ ಕೂಡಾ ಜೊತೆಗಿದ್ದವರು ಹೇಳುವ ಮಾತು: “ಅವನು ಬಿಡ್ರೀ, ಯಾವ ಊರಿಗೆ ಬೇಕಾದ್ರೂ ಬೇಗ ಹೊಂದಿಕೊಳ್ತಾನೆ. ಎಂಥದೇ ಸನ್ನಿವೇಶವನ್ನಾದ್ರೂ ಆರಾಮಾಗಿ ಎದುರಿಸ್ತಾನೆ. ಪಾಪ, ಈ ಹುಡುಗಿ ಕಥೆ ಏನ್ಮಾಡುವಾ ಹೇಳಿ…’

ಬಾಲ್ಯ, ಯೌವನ ಹಾಗೂ ನವ ದಾಂಪತ್ಯದ ಆರಂಭದ ವರ್ಷಗಳಲ್ಲಿ ಕುಟುಂಬದವರು, ಬಂಧುಗಳು ಹಾಗೂ ಸುತ್ತಲಿನ ಸಮಾಜದಿಂದ ಅಯ್ಯೋ ಪಾಪ ಅನ್ನಿಸಿಕೊಂಡೇ ಹೆಣ್ಣು ಬೆಳೆಯುತ್ತಾಳೆ ನಿಜ. ಆದರೆ, ಮದುವೆಯಾಗಿ ಐದಾರು ವರ್ಷಗಳು ಕಳೆದ ನಂತರದಿಂದ, ಬದುಕಿನ ಅಂತ್ಯದವರೆಗೂ ಆಕೆ ಮಾನಸಿಕವಾಗಿ ಬಹಳ ಗಟ್ಟಿಯಾಗಿಬಿಡುತ್ತಾಳೆ. ಇಂಥದೊಂದು ಬದಲಾವಣೆ, ಹೆಂಗಸರಲ್ಲಿ ತಂತಾನೇ ಆಗಿಬಿಡುತ್ತದೆ.

ಅಳುತ್ತಾ ಕೂರುವುದಿಲ್ಲ: ಒಂದೆರಡು ಉದಾಹರಣೆ ಕೇಳಿ: ಭಾವುಕ ಮನಸ್ಸಿನ ಒಂದು ಹುಡುಗಿ, ಕಾಲೇಜಿನಲ್ಲಿದ್ದಾಗ ಪ್ರೇಮದ ಸುಳಿಗೆ ಬಿದ್ದಿರುತ್ತಾಳೆ ಅಂದುಕೊಳ್ಳಿ. ಬದುಕುವುದಿದ್ದರೆ ಅವನ ಜೊತೆಗಷ್ಟೇ. ಅವನಿಲ್ಲದಿದ್ದರೆ ಈ ಬದುಕಿಗೆ ಅರ್ಥವೇ ಇಲ್ಲ ಎಂದೂ ಆಕೆ ಐದಾರು ಬಾರಿ ಹೇಳಿರುತ್ತಾಳೆ. ಅಂಥವಳಿಗೆ, ಯಾವುದೋ ಕಾರಣ ಹೇಳಿ, ಹುಡುಗ ಕೈಕೊಟ್ಟು ಹೋಗಿಬಿಡುತ್ತಾನೆ! ನಂಬಿ, ಇಂಥ ಸಂದರ್ಭಗಳಲ್ಲಿ ಹೆಣ್ಣು ಅಧೀರಳಾಗುವುದಿಲ್ಲ.

ಅವನಿಲ್ಲದಿದ್ದರೆ ಬಾಳಿಲ್ಲ ಎಂದು ಡಿಪ್ರಶನ್‌ಗೆ ಜಾರುವುದಿಲ್ಲ. ಬದಲಿಗೆ, ಹಳೆಯದ್ದೆಲ್ಲ ಒಂದು ಕನಸು ಎಂದುಕೊಂಡು, ಹೊಸ ಬದುಕಿಗೆ ತನ್ನನ್ನು ಅರ್ಪಿಸಿಕೊಳ್ಳುತ್ತಾಳೆ. ನಲವತ್ತರ ಆಸುಪಾಸಿನಲ್ಲೇ ಹೆಂಡತಿಯನ್ನು ಕಳೆದುಕೊಂಡರೆ- ಗಂಡ ಅನ್ನಿಸಿಕೊಂಡವನು ಒಂಟಿಯಾದೆನೆಂಬ ಸಂಕಟದಲ್ಲಿ ಒದ್ದಾಡಿ ಹೋಗುತ್ತಾನೆ. ಅವಳು ಜೊತೆಗಿಲ್ಲ ಎಂಬ ಕಾರಣದಿಂದಲೇ ದುಶ್ಚಟಗಳ ದಾಸನಾಗುತ್ತಾನೆ. 25-30 ವರ್ಷ ಜೊತೆಯಾಗಿ ಬದುಕಿದ್ದವರಂತೂ, ಹೆಂಡತಿಯ ನಿಧನದ ನಂತರ, ಮಾನಸಿಕವಾಗಿ ದಿಢೀರ್‌ ಕುಸಿದುಹೋಗುತ್ತಾರೆ.

ಆದರೆ ಹೆಣ್ಣು ಹಾಗಲ್ಲ! ಇಂಥ ಸಂಕಟಗಳು ಜೊತೆಯಾದಾಗ ಆಕೆ ಭೋರಿಟ್ಟು ಅಳುತ್ತಾಳೆ. ಸಾವಿನಂಥ, ತತ್ತರಿಸಿ ಹೋಗುವಂಥ ಸಂದರ್ಭಗಳು ಜೊತೆಯಾದಾಗಲೆಲ್ಲ ಆಕೆ ಅಳುತ್ತಲೇ ಇರುತ್ತಾಳೆಂಬುದೂ ನಿಜ. ಆದರೆ, ಇಂಥ ಆಘಾತಗಳಿಂದ ಅಷ್ಟೇ ಬೇಗ ಚೇತರಿಸಿಕೊಳ್ಳುತ್ತಾಳೆ. 40 ಅಥವಾ 50ರ ಪ್ರಾಯದಲ್ಲೇ ಪತಿಯನ್ನು ಕಳೆದುಕೊಂಡರೂ, ಇಡೀ ಕುಟುಂಬವನ್ನು ಸಲಹುತ್ತ, ಎಲ್ಲರಿಗೂ ಧೈರ್ಯ ಹೇಳುತ್ತ, ಎಲ್ಲವನ್ನೂ ಸಂಭಾಳಿಸುತ್ತ ಬದುಕುತ್ತಿರುವ ಹೆಂಗಸರು ಪ್ರತಿ ಕುಟುಂಬದಲ್ಲೂ, ಊರಿನಲ್ಲೂ ಇದ್ದಾರಲ್ಲ…ಅದರರ್ಥ ಇಷ್ಟೆ: ಕಠಿಣ ಸಂದರ್ಭಗಳನ್ನು ಎದುರಿಸಬೇಕಾದಾಗ ಹೆಣ್ಣು ಪರ್ವತದಂತೆ ಗಟ್ಟಿಯಾಗಿ ನಿಂತು ಅದನ್ನು ಎದುರಿಸುತ್ತಾಳೆ.

ಎಲ್ಲಿಂದ ಬಂತು ಪವರ್‌?: ಅದುವರೆಗೂ-ಅಳುಮುಂಜಿ, ಪಾಪದ ಹೆಂಗಸು, ಅಮಾಯಕಿ…ಎಂದೆಲ್ಲಾ ಕರೆಸಿಕೊಂಡಿದ್ದ ಹೆಂಗಸು, ಗೃಹಿಣಿ ಅನ್ನಿಸಿಕೊಂಡ ನಂತರ, ಹೀಗೆ “ಪವರ್‌ಫ‌ುಲ್‌’ ಆಗಿ ಬದಲಾಗಲು ಹೇಗೆ ಸಾಧ್ಯವಾಯಿತು? ಸಂಕಟ ಮತ್ತು ಸವಾಲು-ಎರಡನ್ನೂ ಎದುರಿಸುವ “ಶಕ್ತಿ’ ಆಕೆಗೆ ಅದೆಲ್ಲಿಂದ ಪ್ರಾಪ್ತವಾಯ್ತು? ಕೇಳಿ: ಹೆಣ್ಣೊಬ್ಬಳು ಮೆಚೂರ್ಡ್‌ ಅನ್ನಿಸಿಕೊಳ್ಳುತ್ತಾಳಲ್ಲ; ಆ ಕ್ಷಣದಿಂದಲೇ ಅವಳ ದೇಹ ಮತ್ತು ಮನಸ್ಸು- ಸವಾಲುಗಳನ್ನು, ಸಂಘರ್ಷವನ್ನು ಎದುರಿಸಲು ಸಜ್ಜಾಗಿಬಿಡುತ್ತದೆ.

ಹೊಟ್ಟೆನೋವು, ರಕ್ತಸ್ರಾವ, ಚುಚ್ಚುಮಾತುಗಳನ್ನು ಎದುರಿಸುತ್ತಲೇ, ಒಂದು ನೋವಿನಿಂದ ಕಳಚಿಕೊಳ್ಳುವ ಹೊಸದೊಂದು ಸಡಗರಕ್ಕೆ ತೆರೆದುಕೊಳ್ಳುವ ಅವಕಾಶ ಹೆಣ್ಣಿಗೆ ಮೇಲಿಂದ ಮೇಲೆ ಒದಗಿಬರುತ್ತದೆ. “ಯುವತಿ’ ಅನ್ನಿಸಿಕೊಂಡಿದ್ದಷ್ಟು ದಿನ ಹೆತ್ತವರು ಮತ್ತು ಕುಟುಂಬದವರನ್ನು ಅವಲಂಬಿಸಿದ ಹೆಣ್ಣು, ಗೃಹಿಣಿ ಅನ್ನಿಸಿಕೊಂಡಾಕ್ಷಣ, ತಾನೇ ಒಂದು ಕೇಂದ್ರವಾಗುತ್ತಾಳೆ. ಹೆರಿಗೆಯ ಸಂದರ್ಭದಲ್ಲಂತೂ ಹೆಣ್ಣು- ಸಾವಿಗೆ ಮುಖಾಮುಖೀ ನಿಂತು ಹೋರಾಡುತ್ತಾಳೆ. ಹೆಚ್ಚಿನ ಸಂದರ್ಭದಲ್ಲಿ ಅವಳೇ ಗೆಲ್ಲುತ್ತಾಳೆ.

ಆನಂತರದಲ್ಲಿ, ಕುಟುಂಬ ನಿರ್ವಹಣೆಯ ಜವಾಬ್ದಾರಿ ಕೈಗೆ ಬಂದಾಗ- ಹಾಲು, ತರಕಾರಿ, ಹಣ್ಣು, ಅಕ್ಕಿ, ಸಾಸಿವೆ ಡಬ್ಬಿಯ ಹಣ… ಇವೆಲ್ಲವನ್ನೂ ಹೊಂದಿಸುವ ಆ ನೆಪದಲ್ಲಿ ಅಕೌಂಟೆಂಟ್‌ ಆಗಿಬಿಡುವ ಸಾಮರ್ಥ್ಯ ಆಕೆಗೆ ದಕ್ಕುತ್ತದೆ. ಗಂಡ ಮತ್ತು ಮಕ್ಕಳನ್ನು ಸಂಭಾಳಿಸುವ ಸಂದರ್ಭದಲ್ಲಿ ಇಡೀ ಕುಟುಂಬದ ಆಧಾರಸ್ತಂಭದಂತೆ ವ್ಯವಹರಿಸುವ ಕಲೆ ಅವಳಿಗೆ ಜೊತೆಯಾಗುತ್ತದೆ. ಮಕ್ಕಳ, ಬಂಧುಗಳ ಕ್ಷೇಮ ಸಮಾಚಾರ ವಿಚಾರಿಸುವುದು, ಅವರನ್ನು ಸಲಹುವುದು, ಅನಿರೀಕ್ಷಿತ ಕಷ್ಟಗಳಿಗೆ ಎದೆಯೊಡ್ಡಿ ನಿಲ್ಲುವುದು ಸೇರಿದಮತೆ ಹತ್ತಾರು ಬಗೆಯ ಬದುಕಿನ ಮ್ಯಾನೇಜ್‌ಮೆಂಟ್‌ ಪಾಠಗಳು ಗುರುವಿಲ್ಲದೆಯೇ ಅವಳನ್ನು ತಲುಪುತ್ತವೆ.

ತಾಳುವ ಶಕ್ತಿ ಅವಳಿಗೇ ಜಾಸ್ತಿ: ಹೆಣ್ಣನ್ನು ಭೂಮಿಗೂ, ಗಂಡನ್ನು ಆಕಾಶಕ್ಕೂ ಹೋಲಿಸುವುದುಂಟು. ಒಂದರ್ಥದಲ್ಲಿ ಇದು ಸರಿಯಾದ ಹೋಲಿಕೆ ಅನ್ನಬಹುದು. ಗುದ್ದಲಿ, ಹಾರೆ, ಸಂದೂಕದ ಪೆಟ್ಟುಗಳು, ಪ್ರವಾಹದಂಥ ಅವಘಡಗಳು ಸಾವಿರ ಬರಲಿ; ಅವನ್ನೆಲ್ಲ ಭೂಮಿ ಸಹಿಸಿಕೊಳ್ಳುತ್ತದೆ. ಸಾವಿರ ಪೆಟ್ಟು ತಿಂದಮೇಲೂ ತನ್ನ ಒಡಲಿಂದ ಮುದ್ದಾದ ಹೂವನ್ನು, ರುಚಿಯಾದ ಹಣ್ಣನ್ನು, ಶಕ್ತಿಯುತ ಧಾನ್ಯವನ್ನು ಧಾರೆ ಎರೆಯುತ್ತದೆ.

(ಆದರೆ ಗಂಡು ಹಾಗಲ್ಲ. ಕೋಪ, ಅಸಹನೆ, ಆಕ್ರೋಶ ಎಲ್ಲವನ್ನೂ ಥೇಟ್‌ ಮಳೆಯಂತೆಯೇ ಒಂದೇ ಬಾರಿಗೆ ಸುರಿಸಿಬಿಡುತ್ತಾನೆ) ಹೆಣ್ಣು ಹಾಗೆಯೇ. ತಾಳ್ಮೆ ಎಂಬುದು ಅವಳಿಗೆ ಜಾಸ್ತಿ. ತಾಳ್ಮೆಯೇ ಅವಳ ಆಸ್ತಿ. ಆಕೆಗೆ ನೋವು ತಿನ್ನುವಂಥ ದೇಹವನ್ನು ಕೊಟ್ಟ ಪ್ರಕೃತಿಯೇ, ಆ ನೋವನ್ನೆಲ್ಲ ಎದುರಿಸಿ ನಿಲ್ಲುವಂಥ ಆತ್ಮಸ್ಥೈರ್ಯವನ್ನು ಕಾಣಿಕೆಯ ರೂಪದಲ್ಲಿ ನೀಡಿದೆ. ಹೆಣ್ಣೆಂದರೆ ಮಾಯೆಯಲ್ಲ, ಅದು ಸಾವಿರ ಸವಾಲುಗಳನ್ನು ಮೆಟ್ಟಿ ನಿಲ್ಲುವ ಶಕ್ತಿ ಎನ್ನಲು ಇಷ್ಟು ಸಾಕಲ್ಲವೇ?

* ಗೀತಾಂಜಲಿ

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

  • ಜಂಜಾಟದ ಬದುಕಿನಿಂದ ಬೇಸತ್ತವರು, ಶ್ರೀಮಂತಿಕೆಯ ಜೊತೆಗೇ ಬದುಕಿದರೂ ನೆಮ್ಮದಿ ಇಲ್ಲದೆ ಸಂಕಟಪಟ್ಟವರು ಮಾತ್ರವಲ್ಲ; ಉದ್ಯೋಗ ನಿಮಿತ್ತ ಪರ ಊರಿಗೆ ಬಂದು ಆಶ್ರಯ...

  • ಹಂಚಿನ ಮೇಲ್ಛಾವಣಿಯ ಪುಟ್ಟ ಮನೆಯಲ್ಲಿ ಬಡತನವೇ ತುಂಬಿದ್ದರೂ ಕನಸುಗಳಿಗೆ ಅಲ್ಲಿ ಬರವಿರಲಿಲ್ಲ. ತಂದೆ-ತಾಯಿ ಕೂಲಿ ಕಾರ್ಮಿಕರು. ಹೆತ್ತವರ ಕಷ್ಟಕ್ಕೆ ನೆರವಾಗಲು...

  • ದಿನ ಅಮ್ಮಂದಿರಿಗೆ ಚಳಿಯಿದ್ದೂ ಚಳಿಯಿರಲಿಲ್ಲ. ಕಷ್ಟಗಳಿದ್ದರೂ ಅದರ ಬಗ್ಗೆ ಕೊರಗುಗಳಿರಲಿಲ್ಲ. ನಾಲ್ಕು ಗೋಡೆಗಳ ಮಧ್ಯೆ ಇದ್ದರೂ ಸ್ವಾತಂತ್ರ್ಯದಿಂದ ವಂಚಿತರಾಗಿದ್ದೇವೆ...

  • ಪಗಡೆಯಾಟ ಇಂದು ನಿನ್ನೆಯದಲ್ಲ. ಋಗ್ವೇದದಲ್ಲಿ "ಅಕ್ಷ' ಎಂಬ ಹೆಸರಿನಿಂದ ಈ ಆಟದ ಉಲ್ಲೇಖವಿದೆ. ಪಗಡೆ ದಾಳಗಳೊಂದಿಗೆ ಅಪ್ಸರೆಯರು ನೃತ್ಯ ಮಾಡಿದರೆಂಬ ವರ್ಣನೆ ಅಥರ್ವಣ...

  • ಕೆಲಸದ ಒತ್ತಡವೋ, ಪ್ರಯಾಣದ ಸುಸ್ತೋ,ಮಾನಸಿಕ ಹಿಂಸೆಯೋ ಅಥವಾ ಮನೆಗೆಲಸದ ಅನಿವಾರ್ಯತೆಯೊ ಗೊತ್ತಿಲ್ಲ, ಹೆತ್ತ ಮಕ್ಕಳ ಕಲಿಕೆಯ ಬಗ್ಗೆ ಅಮ್ಮಂದಿರ ಕಾಳಜಿ ಕಡಿಮೆಯಾಗುತ್ತಿದೆ....

ಹೊಸ ಸೇರ್ಪಡೆ