ರೇಡಿಯೋ ಆಟಕ್ಕೆ ಸಿಕ್ಕಿದ್ದ ಕಾಮನಬಿಲ್ಲು…
Team Udayavani, Feb 26, 2020, 6:07 AM IST
ಚಲನಚಿತ್ರಗೀತೆಗಳು ಪ್ರಸಾರವಾಗುವಾಗ ಎಸ್.ಪಿ.ಬಿ. ಜೊತೆಯಲ್ಲಿ ಹಾಡಿ ನಾನೂ ಎಸ್. ಜಾನಕಿ, ವಾಣಿ ಜಯರಾಂ ಆದ ಹಾಗೆ ಖುಷಿಪಡ್ತಾ ಇದ್ದಿದ್ದು. ಅಷ್ಟೇ ಅಲ್ಲ, ವಾಣಿ ಜಯರಾಂ ಜೊತೇಲಿ ಗಂಡುದನಿಯಲ್ಲಿ ಹಾಡಲು ಪ್ರಯತ್ನ ಮಾಡಿದ್ದೂ ಉಂಟು.
ಫೆಬ್ರವರಿ 13ರಂದು “ವಿಶ್ವ ರೇಡಿಯೋ ದಿನ’ ಅಂತ ಪ್ರಸಾರವಾದಾಗ ನನ್ನ ನೆನಪುಗಳ ಸುರುಳಿಯೂ ಬಿಚ್ಚಿಕೊಂಡಿತು. ನಾನು ಹುಟ್ಟುವ ಮೊದಲೇ ನಮ್ಮನೆಗೆ ರೇಡಿಯೊ ಬಂದುಬಿಟ್ಟಿತ್ತು. ಆಯತಾಕಾರದ ಹಾಡುವ ಮಾತಾಡುವ ಆ ಪೆಟ್ಟಿಗೆಯೆಂದರೆ ಭಾರೀ ಕುತೂಹಲ. ಎಡಗಡೆಯ ಬುರುಡೆ ತಿರುಗಿಸಿ ಆನ್/ ಆಫ್ ಮಾಡುವುದು, ವಾಲ್ಯೂಮ್ ಹೆಚ್ಚಿಸುವುದು, ಬಲಗಡೆಯ ಬುರುಡೆ ತಿರುಗಿಸಿ ಕೆಂಪುಕಡ್ಡಿಯನ್ನು ಓಡಾಡಿಸಿ ಸ್ಟೇಶನ್‌ಗಳನ್ನು ಹುಡುಕುವುದು, ಬಟನ್‌ಗಳನ್ನು ಒತ್ತಿ ಬ್ಯಾಂಡ್ ಬದಲಾಯಿಸುವುದು… ಎಷ್ಟು ಮಜಾ!
ಆದರೆ, ಇವೆಲ್ಲವನ್ನು ಮಾಡಲು ನನಗೆ ಬಿಡ್ತಾನೇ ಇರಲಿಲ್ಲ. ಅಪ್ಪ ಹಾಕಿದ್ದನ್ನು ಕೇಳ್ಳೋದಷ್ಟೇ. ಅಪ್ಪ ರೇಡಿಯೋಗಾಗಿಯೇ ಒಂದು ಎತ್ತರದ ಕಪಾಟನ್ನೂ ಮಾಡಿಸಿದ್ದರು. ನನಗೆ ಎಟುಕಬಾರದೆಂದೇ ಮಾಡಿಸಿದ್ರೇನೋ ಅಂತನ್ನಿಸ್ತಿತ್ತು. ನನ್ನಕ್ಕ ಚಿಕ್ಕವಳಿರುವಾಗ ರೇಡಿಯೋ ತರಲಿಕ್ಕಾಗಿ ದುಡ್ಡು ಕೂಡಿಡುತ್ತಿದ್ದಳಂತೆ. ದುಡ್ಡೆಂದರೆ ವಠಾರದಲ್ಲಿ ಮದುವೆ, ಮುಂಜಿ, ಸಂತರ್ಪಣೆಗಳಿಗೆ ಹೋದಾಗ ದಕ್ಷಿಣೆ ಬಂದ ಹತ್ತು ಇಪ್ಪತ್ತು ಪೈಸೆಯ ನಾಣ್ಯಗಳು. ಕಡಿಮೆ ಬಿದ್ದ ಸ್ವಲ್ಪ ದುಡ್ಡು ಸೇರಿಸಿ ರೇಡಿಯೊ ತಗೊಂಡೆ ಅಂತ ಅಪ್ಪ ನಗ್ತಿದ್ದರು.
ಇಂಥ ವಿಶೇಷವಾದ ರೇಡಿಯೋನ ಬೆಳಗ್ಗೆ ಕೂ… ಅಂತಿರುವಾಗಲೇ ಅಪ್ಪ ಆನ್ ಮಾಡಿಡುತ್ತಿದ್ದರು. ಪ್ರಭಾತ ಸಂಗೀತ, ವಂದೇ ಮಾತರಂ, ಭಕ್ತಿಗೀತೆಗಳು…. ಒಂದಾದಮೇಲೊಂದು ಕಾರ್ಯಕ್ರಮಗಳು. ಮರಾಠಿ ಅಭಂಗಗಳನ್ನು ಹಾಕಿಟ್ಟರಂತೂ ಜೋಗುಳ ಹಾಡಿದಂತಾಗಿ ಏಳ್ಳೋದೇ ಬೇಡ ಅನಿಸ್ತಿತ್ತು. ಆಕಾಶವಾಣಿಯಲ್ಲಿ ಪ್ರಸಾರವಾಗುವ ಕಾರ್ಯಕ್ರಮಗಳು ಸಮಯಸೂಚಕವೂ ಆಗಿದ್ದವು. ವಾರ್ತೆ ಶುರುವಾಯ್ತು…. ಊಟಕ್ಕೆ ಎಲೆ ಹಾಕಿ. ಪ್ರದೇಶ ಸಮಾಚಾರ ಮುಗೀತಾ ಬಂತು…. ಸ್ತೋತ್ರ ಹೇಳಲು ಕೂತ್ಕೊಳ್ಳಿ. ಹೀಗೆ ಗಡಿಯಾರದ ಕೆಲಸವನ್ನೂ ರೇಡಿಯೊ ಮಾಡ್ತಿತ್ತು.
ನಾನು ಹೈಸ್ಕೂಲ್‌ವರೆಗೆ ಓದಲು ಸೋದರತ್ತೆಯ ಮನೇಲಿದ್ದಾಗ, ಮಾವ ಪ್ರತಿದಿನ ಶಾಸ್ತ್ರೀಯ ಸಂಗೀತ ಕಾರ್ಯಕ್ರಮಗಳನ್ನು ತಪ್ಪದೆ ಹಾಕ್ತಿದ್ದರು. ಅದು ಮುಗಿಯೋವರೆಗೆ ಯಾರೂ ಮಾತಾಡುವಂತಿಲ್ಲ. ಸಂಗೀತವನ್ನಾಲಿಸಿ ಆನಂದಿಸುವ ರುಚಿ ಹತ್ತಿದ್ದು ಅವರಿಂದಲೇ. ಮುಂದೆ ಕಾಲೇಜು ಓದಿಗೆ ಹಾಸ್ಟೆಲ್ ಸೇರಿದಾಗ ಹಿಂದಿ ಚಿತ್ರಗೀತೆಗಳನ್ನು ಕೇಳುವ ಆಸಕ್ತಿಯೂ ಸೇರಿಕೊಂಡಿತು.
ಮಧ್ಯಾಹ್ನ ಪ್ರಸಾರವಾಗ್ತಿದ್ದ ಭಾವಗೀತೆಗಳನ್ನು ನಾನು ಕಾದುಕುಳಿತು ಕೇಳಿ ಬರ್ಕೋತಿದ್ದೆ. ರಿಪೀಟ್ ಸಾಲು ಇದ್ದರೆ ಸರಿಯಾಗಿ ಪೂರ್ತಿ ಬರಕೊಳ್ಳಲು ಆಗ್ತಿತ್ತು. ಇಲ್ಲಾಂದ್ರೆ ಮತ್ತೆ ಆ ಹಾಡು ಬರೋತನಕ ಕಾಯೋದೇ. ಈ ನೆಪದಲ್ಲಿ ರೇಡಿಯೋ ಆಲಿಸುವುದನ್ನು ಮಾತ್ರವಲ್ಲ; ತಾಳ್ಮೆಯನ್ನೂ ಕಲಿಸುತ್ತಿತ್ತು.
ತಮಾಷೆಯ ನೆನಪೆಂದರೆ, ಚಲನಚಿತ್ರಗೀತೆಗಳು ಪ್ರಸಾರವಾಗುವಾಗ ಎಸ್.ಪಿ.ಬಿ. ಜೊತೆಯಲ್ಲಿ ಹಾಡಿ ನಾನೂ ಎಸ್. ಜಾನಕಿ, ವಾಣಿ ಜಯರಾಂ ಆದ ಹಾಗೆ ಖುಷಿಪಡ್ತಾ ಇದ್ದಿದ್ದು. ಅಷ್ಟೇ ಅಲ್ಲ, ವಾಣಿ ಜಯರಾಂ ಜೊತೇಲಿ ಗಂಡುದನಿಯಲ್ಲಿ ಹಾಡಲು ಪ್ರಯತ್ನ ಮಾಡಿದ್ದೂ ಉಂಟು. ಆದರೆ ಅದು ಯಶಸ್ವಿ ಆಗಲಿಲ್ಲ.
ಇನ್ನು, ನಮ್ಮನೆಯ ಪಂಚರಂಗಿ ಬೆಕ್ಕು ಕೂಡಾ ರೇಡಿಯೊ ಕೇಳ್ತಿತ್ತು. ಗೊತ್ತಾ! ರೇಡಿಯೊ ಇಡುವ ಕಪಾಟಿನ ಮೇಲೆ ಜಿಗಿದು ಎಲ್ಲಿಂದ ಶಬ್ದ ಬರುತ್ತೆ ಅಂತ ಪ್ರದಕ್ಷಿಣೆ ಹಾಕಿ ಹುಡುಕ್ತಿತ್ತು. ನಡುನಡುವೆ ಪರಚಿ ಕೆರೆದು ಪರೀಕ್ಷೆನೂ ಮಾಡ್ತಿತ್ತು. ಕಿವಿ ನಿಮಿರಿಸಿ , ತಲೆ ವಾಲಿಸಿ ಕುತೂಹಲದಿಂದ ನೋಡುತ್ತಿದ್ದ ಅದರ ಪಟ ತೆಗೆಯಲು ಛೇ! ಆಗ ಕ್ಯಾಮರಾನೇ ಇರಲಿಲ್ಲ.
ಮಳೆ ಬಂದಾಗ ಗುರ್….ಅನಿದ್ದ ರೇಡಿಯೋನ ತಟ್ಟಿ, ತಿರುಗಿಸಿ, ಸರಿಯಾಗುತ್ತಾ ಅಂತ ವ್ಯರ್ಥಪ್ರಯತ್ನ ಮಾಡ್ತಾ ಇದ್ದಿದ್ದು, ಸಂಗೀತಪಾಠ, ಸಂಸ್ಕೃತ ವಾರ್ತೆಗಳು, ಹಿಂದೀಪಾಠ, ಮಕ್ಕಳಿಗಾಗಿ ವಿವಿಧ ಭಾಷೆಗಳ ಸಮೂಹಗೀತೆಗಳ ಪಾಠ … ಒಂದೇ ಎರಡೇ..! ರೇಡಿಯೋ ತರಂಗಗಳಂತೆಯೇ ಒಂದರ ಹಿಂದೊಂದು ನೆನಪಾಗ್ತಿದೆ. ಕೃಷಿರಂಗದ ಆರಂಭದ ಟ್ಯೂನ್ ಕೇಳುವಾಗಲಂತೂ ಕಾಳಿಂಗ-ಮಾಲಿಂಗ ಜೋಡೆತ್ತಿನ ಬಂಡಿ ಓಡುತ್ತಿರುವ ದೃಶ್ಯವೇ ಕಣ್ಮುಂದೆ.
ಮದುವೆಯಾಗಿ ಬೆಂಗಳೂರಿಗೆ ಬಂದ ಮೇಲೂ ರೇಡಿಯೋ ಒಡನಾಟ ಮುಂದುವರಿಯಿತು. ಮಂಗಳೂರಿನ ಬದಲಿಗೆ ಬೆಂಗಳೂರು ಸ್ಟೇಶನ್‌ಗೆ ಬದಲಾದೆ ಅಷ್ಟೆ. ಆಗ ಅದರಲ್ಲಿ “ಗೋಪಾಲ್ ಹಲ್ಲುಪುಡಿ’ ಅಂತ ಒಂದು ಜಾಹೀರಾತು ಬರ್ತಿತ್ತು. ನನ್ನ ಪುಟ್ಟ ಮಗ ಅದನ್ನು “ಗೋಪಾಲ್ ಹಾಲು ಕುಡಿ’ ಅಂದ್ಕೊಂಡಿದ್ದ. ಹಾಗೂ ಹಟ ಮಾಡದೆ ಖುಷಿಯಾಗಿ ಹಾಲು ಕುಡಿದುಬಿಡುತ್ತಿದ್ದ.
ಅನಂತರ ಟಿ.ವಿ ಬಂದ ಮೇಲೆ ರೇಡಿಯೊ ಆಲಿಸುವಿಕೆ ಹಿಂದೆಬಿತ್ತು. ಕರೆಂಟ್ ಹೋದಾಗ ವಾರ್ತೆಗಳು ಮತ್ತು ಕ್ರಿಕೆಟ್ ಕಾಮೆಂಟರಿಗಷ್ಟೇ ಸೀಮಿತವಾಯ್ತು. ಮುಂದೆ ಇನ್ವರ್ಟರ್ ಬಂದಾಗ ಆ ಸಮಸ್ಯೆಯೂ ತಪ್ಪಿದ್ದರಿಂದ ಪ್ರಯಾಣದಲ್ಲಿ ಮಾತ್ರ ರೇಡಿಯೊ ಕೇಳುವುದಾಗಿಬಿಟ್ಟಿತು.
ಅಷ್ಟರಲ್ಲಿ ಅಂತರ್ಜಾಲದ ಮೂಲಕ ರೇಡಿಯೊ ಆಲಿಸುವ ಅವಕಾಶಗಳು ತೆರೆದುಕೊಂಡವು. ಪ್ರಸಾರಭಾರತಿಯ ಆ್ಯಪ್ ಬಂದ ಮೇಲಂತೂ ರೇಡಿಯೋ ಅಂಗೈಯಲ್ಲೇ ಬಂದು ಕುಳಿತಿತು. ಟಿ.ವಿಯೆದುರು ಹೋಗಿ ಕುಳಿತುಕೊಳ್ಳಲು ಬೇಜಾರೇ? ನಾನಿದ್ದೀನಿ…ನಾನೇ ನಿಮ್ಮ ಹತ್ರ ಬರ್ತೀನಿ.. ಮನೆಯ ಯಾವ ಮೂಲೆಗೆ ಹೋದರೂ ಹಿಂಬಾಲಿಸ್ತೀನಿ ಎನ್ನತೊಡಗಿತು. ಮತ್ತೆ… ನಿಧಾನಕ್ಕೆ ರೇಡಿಯೊ ಮನಸೆಳೆಯತೊಡಗಿತು.
ಚಿಕ್ಕವಳಿದ್ದಾಗ ಇಷ್ಟು ಪುಟ್ಟ ರೇಡಿಯೊ ಒಳಗೆ ಹೇಗೆ ಜನರು ಅವಿತುಕೊಂಡು ಹಾಡ್ತಾರೆ, ಮಾತಾಡ್ತಾರೆ? ಅಂತ ಕುತೂಹಲವಿತ್ತು. ಅದನ್ನು ನೋಡಲು ನಾನು ನಲವತ್ತು ವರ್ಷ ಕಾಯಬೇಕಾಯ್ತು. ಏಳೆಂಟು ವರ್ಷಗಳ ಹಿಂದೆ ನಮ್ಮ ಸಂಗೀತ ಕ್ಲಾಸಿನಿಂದ ವನಿತಾ ವಾಣಿಯಲ್ಲಿ ಕಾರ್ಯಕ್ರಮ ಕೊಟ್ಟಿದ್ದೆವು. ಆಗ ಸ್ಟುಡಿಯೊ ಹೇಗಿರುತ್ತೆ, ರೆಕಾರ್ಡಿಂಗ್ ಹೇಗೆ ಮಾಡ್ತಾರೆ ಎಂಬುದರ ಪ್ರತ್ಯಕ್ಷ ಅನುಭವವಾಯ್ತು. ಅನಂತರ ಕಳೆದ ವರ್ಷಾಂತ್ಯದಲ್ಲಿ ಮಂಗಳೂರು ಆಕಾಶವಾಣಿಯಲ್ಲಿ ಸ್ವರಚಿತ ಕವನವಾಚನ ಮಾಡುವ ಅವಕಾಶವೂ ದೊರೆಯಿತು. ಅದಂತೂ ಒಂದು ಅನಿರೀಕ್ಷಿತ ಸುಯೋಗವೇ ಸರಿ.
ಹೀಗೆ, ಒಂದು ಕಾಲದಲ್ಲಿ ಬಹಳ ಹತ್ತಿರವಾಗಿದ್ದ ರೇಡಿಯೋದಿಂದ ದೂರವಾಗಿ, ಈಗ ಪುನಃ ಅದರ ದನಿಯನ್ನು ಆಲಿಸಲು ಖುಷಿಯಾಗ್ತಿದೆ.
– ಮೋಹಿನಿ ದಾಮ್ಲೆ