ಸೀಟು ಹಿಡಿಯಲು ಓಡಿ…

Team Udayavani, Oct 16, 2019, 5:57 AM IST

ಪುಟ್ಟ ಮಗಳನ್ನು ಆ ಅಜ್ಜ-ಅಜ್ಜಿ ಪಕ್ಕ ಕೂರಿಸಿ, ಕೈಯಲ್ಲಿ ಕಚೀìಫ್ ಹಿಡಿದು, ಓಡುವ ಭಂಗಿಯಲ್ಲಿ ಸಿದ್ಧಳಾಗಿ ನಿಂತೆ. ಅಷ್ಟರಲ್ಲೇ ಚಿತ್ರದುರ್ಗದ ಮತ್ತೂಂದು ಬಸ್ಸು ಬಂತು. ಪುಣ್ಯಕ್ಕೆ, ಇದರಲ್ಲಿ ಜನ ಸ್ವಲ್ಪ ಕಡಿಮೆ ಇದ್ದರು. ಬಸ್ಸು ನಿಲ್ಲುವ ಮೊದಲೇ ಜನರೆಲ್ಲಾ ಹೋ ಎಂದು ಕೂಗುತ್ತಾ ಓಡಿದರು. ಈ ಸಲ ನಾನೂ ಅವರ ಸಮಕ್ಕೆ ಓಡಿದೆ.

ಹಬ್ಬಕ್ಕೆಂದು ಪುಟ್ಟ ಮಗಳನ್ನು ಕರೆದುಕೊಂಡು ಶಿವಮೊಗ್ಗಕ್ಕೆ ಹೊರಟಿದ್ದೆ. ಬಸ್‌ಸ್ಟಾಂಡಿನಲ್ಲಿ ನಿಲ್ಲಲೂ ಜಾಗವಿಲ್ಲದಷ್ಟು ಜನದಟ್ಟಣೆ. ನಮ್ಮ ಬಸ್‌ ಇನ್ನೂ ಬಂದಿರಲಿಲ್ಲ, ಆದರೆ, ಸೀಟ್‌ ರಿಸರ್ವ್‌ ಮಾಡಿಬಿಟ್ಟಿದ್ದರಿಂದ, ಸೀಟು ಸಿಗುತ್ತದೋ ಇಲ್ಲವೋ ಎಂಬ ಆತಂಕವಿರಲಿಲ್ಲ.

ನಮ್ಮ ಪಕ್ಕದಲ್ಲಿ ಚಿತ್ರದುರ್ಗಕ್ಕೆ ಹೊರಟಿದ್ದ ಅಜ್ಜ-ಅಜ್ಜಿ ನಿಂತಿದ್ದರು. ಈ ಜನಜಂಗುಳಿ, ಗಲಾಟೆಯಿಂದ ಅವರು ಸುಸ್ತಾಗಿದ್ದರು. ಬಸ್ಸಿಗೆ ಕಾಯುತ್ತಾ ನಿಂತಿದ್ದಾಗ ಹಾಗೇ ನಮ್ಮ ನಡುವೆ ಸಂಭಾಷಣೆ ಶುರುವಾಗಿತ್ತು. ಮಗನ ಮನೆಗೆಂದು ಬೆಂಗಳೂರಿಗೆ ಬಂದಿದ್ದವರು, ಈಗ ಮರಳಿ ತಮ್ಮೂರಿಗೆ ಹೊರಟಿದ್ದರು. ತುರ್ತು ಕೆಲಸವಿದ್ದ ಕಾರಣ ಮಗ, ಅಪ್ಪ-ಅಮ್ಮನನ್ನು ಬಸ್‌ಸ್ಟಾಂಡಿನಲ್ಲಿಯೇ ಬಿಟ್ಟು ಹೊರಟಿದ್ದ. ಸೀಟು ಕೂಡಾ ರಿಸರ್ವ್‌ಆಗಿರದ ಕಾರಣ, ಇವರಿಗೆ ಜನಜಂಗುಳಿ ನೋಡಿ, ಹೇಗಪ್ಪಾ ಬಸ್ಸು ಹತ್ತುವುದು ಅಂತ ಹೆದರಿಕೆ ಶುರುವಾಗಿತ್ತು. ಬಸ್‌ ಬಂದ ಕೂಡಲೇ ಓಡುವುದು, ಬೇಗ ಒಳನುಗ್ಗಿ ಸೀಟು ಹಿಡಿಯುವುದು ಆ ವೃದ್ಧ ದಂಪತಿಗೆ ಅಸಾಧ್ಯವಾದ ಮಾತೇ. ಬೇಡ, ಮಗನ ಮನೆಗೆ ವಾಪಸ್‌ ಹೋಗಿಬಿಡೋಣ ಎಂದರೆ, ಮನೆಯೂ ಬಹಳ ದೂರ. ಅದೂಅಲ್ಲದೇ, ಅವನೇ ಬಂದು ಕರೆದುಕೊಂಡು ಹೋಗದಿದ್ದರೆ, ಇವರಿಗೆ ವಾಪಸ್‌ ಹೋಗಲು ಸಾಧ್ಯವಿರಲಿಲ್ಲ. ಇಬ್ಬರೂ ಸಣ್ಣ ಮುಖ ಮಾಡಿಕೊಂಡು, ಏನು ಮಾಡುವುದು ಎಂದು ಹೆದರುತ್ತಾ ನಿಂತಿದ್ದರು. ಒಂದಿಬ್ಬರನ್ನು ಏನೋ ಕೇಳಲು ಪ್ರಯತ್ನಿಸಿದರಾದರೂ, ಎಲ್ಲರಿಗೂ ಅವರವರದ್ದೇ ಗಡಿಬಿಡಿ.

ಅಂತೂ ಚಿತ್ರದುರ್ಗಕ್ಕೆ ಹೋಗುವ ಬಸ್ಸು ಬಂತು. ಎಲ್ಲರೂ ಎದ್ದೂ ಬಿದ್ದು ಓಡತೊಡಗಿದರು. ನೋಡನೋಡುತ್ತಲೇ ತುಂಬಿದ ಬಸುರಿಯಂತೆ ಕಾಣತೊಡಗಿದ ಬಸ್ಸು, ಮತ್ತೈದು ನಿಮಿಷಗಳಲ್ಲಿ ಒಂದಷ್ಟು ಜನರನ್ನು ಹತ್ತಿಸಿಕೊಂಡು, ಮತ್ತಷ್ಟು ಜನರನ್ನು ಅಲ್ಲಿಯೇ ಬಿಟ್ಟು ಹೊರಟೇ ಬಿಟ್ಟಿತು! ಈ ಅಜ್ಜ-ಅಜ್ಜಿ ಅಸಹಾಯಕರಾಗಿ ನಿಂತೇ ಇದ್ದರು.

ಪಾಪ, ಅಳುವಂತಾಗಿದ್ದ ಅವರನ್ನು ಕಂಡು ನನಗೆ ಬಹಳ ಬೇಸರವಾಯಿತು. ಹೇಗಾದರೂ ಮಾಡಿ ಮುಂದಿನ ಬಸ್ಸಿನಲ್ಲಿ ಇವರಿಗೆ ಸೀಟು ಕೊಡಿಸಬೇಕು ಎಂಬ ನಿರ್ಧಾರಕ್ಕೆ ಬಂದೆ. ಪುಟ್ಟ ಮಗಳನ್ನು ಆ ಅಜ್ಜ-ಅಜ್ಜಿ ಪಕ್ಕ ಕೂರಿಸಿ, ಕೈಯಲ್ಲಿ ಕರ್ಚಿಫ್ ಹಿಡಿದು, ಓಡುವ ಭಂಗಿಯಲ್ಲಿ ಸಿದ್ಧಳಾಗಿ ನಿಂತೆ. ಅಷ್ಟರಲ್ಲೇ ಚಿತ್ರದುರ್ಗದ ಮತ್ತೂಂದು ಬಸ್ಸು ಬಂತು. ಪುಣ್ಯಕ್ಕೆ, ಇದರಲ್ಲಿ ಜನ ಸ್ವಲ್ಪ ಕಡಿಮೆ ಇದ್ದರು. ಬಸ್ಸು ನಿಲ್ಲುವ ಮೊದಲೇ ಜನರೆಲ್ಲಾ ಹೋ ಎಂದು ಕೂಗುತ್ತಾ ಓಡಿದರು. ಈ ಸಲ ನಾನೂ ಅವರ ಸಮಕ್ಕೆ ಓಡಿದೆ. ಅಜ್ಜ-ಅಜ್ಜಿ ಕುಳಿತಲ್ಲಿಂದಲೇ ನನ್ನನ್ನು ಹುರಿದುಂಬಿಸಿದರು!

ಮುಖ-ಮೂತಿ ನೋಡದೇ ಎಲ್ಲರನ್ನೂ ದಬ್ಬಿ ಅಂತೂ ಬಸ್‌ ಹತ್ತಿ, ಒಳಗೆ ನುಗ್ಗಿದ್ದಾಯ್ತು. ಅಲ್ಲಿಯೂ, “ನಾನು ಮೊದಲು ಬಂದಿದ್ದು, ಅದು ನಮ್ಮದು, ಕಿಟಕಿ ಸೀಟ್‌ ಬೇಕು’ ಮುಂತಾದ ವಾದ-ವಾದಗಳು ಜೋರಾಗಿ ನಡೆದಿದ್ದವು. ಹೇಗೋ ಮಾಡಿ ಸೀಟೊಂದರ ಮೇಲೆ ಕರ್ಚಿಫ್ ಎಸೆದು, ಹಿಂದಿನ ಸೀಟಿನವರಿಗೆ ಜಾಗ ಕಾದಿಡಲು ಹೇಳಿದ್ದಾಯ್ತು. ಇದನ್ನೆಲ್ಲಾ ಹೊರಗಿನಿಂದಲೇ ಕಂಡ ಅಜ್ಜ-ಅಜ್ಜಿಗೆ ಎಲ್ಲಿಲ್ಲದ ಸಂತೋಷ. ನಾನು ಒಳಗಿನಿಂದ ಕರ್ಚಿಫ್ ಬೀಸಿದ್ದೇ ತಡ; ಒಲಿಂಪಿಕ್‌ ಮೆಡಲ್‌ ಸಿಕ್ಕವರಂತೆ ಸಂಭ್ರಮಿಸಿದರು.

ಬಸ್‌ ಏರುವ ತರಾತುರಿ ಅವರಿಗೆ. ಕಂಡಕ್ಟರ್‌ ಬೇರೆ, ಹೊರಡುವ ಟೈಮ್‌ಆಯ್ತು ಎಂದು ಅವಸರಿಸತೊಡಗಿದ್ದ. ಅಜ್ಜ-ಅಜ್ಜಿ ಬಸ್ಸು ಹತ್ತಲು ಬರುತ್ತಿದ್ದಾರೆ, ಪುಟ್ಟ ಮಗಳು ಒಬ್ಬಳೇ ನಿಂತಿದ್ದಾಳೆ ಎಂಬ ಯೋಚನೆ ಬಂದು, ನಾನು ನೂಕುನುಗ್ಗಲು ಲೆಕ್ಕಿಸದೇ ಸರಸರ ಬಸ್ಸಿನಿಂದ ಕೆಳಗಿಳಿಯತೊಡಗಿದೆ. ಆಗ ನಡೆಯಿತು ಆ ಅಚಾತುರ್ಯ; ದುಪ್ಪಟ್ಟಾ ಜಾರಿ ಕಾಲಿಗೆ ಸಿಕ್ಕು, ಧಡ್‌ಎಂದು ಬಸ್ಸಿನ ಬಾಗಿನಿಲಿಂದ ಕೆಳಗೆ ಬಿದ್ದೆ. ಸುತ್ತಲಿದ್ದವರೆಲ್ಲಾ ಕೈ ಹಿಡಿದು ಮೇಲೆಬ್ಬಿಸಿದರೂ, ನಿಲ್ಲಲಾರದಷ್ಟು ನೋವು. ಅಷ್ಟರಲ್ಲಿ ನಮ್ಮ ಬಸ್‌ ಬೇರೆ ಬಂದಿತ್ತು. ಹೇಗೋ ಮಾಡಿ ಮಗಳನ್ನು ಕರೆದುಕೊಂಡು ಬಸ್ಸು ಹತ್ತಿ ಕಾಲನ್ನು ಅಲುಗಾಡಿಸದೇ ನೋವು ನುಂಗಿ, ಪ್ರಯಾಣ ಮಾಡಿದೆ. ಬಸ್‌ಸ್ಟಾಂಡಿನಿಂದ ನೇರವಾಗಿ ಡಾಕ್ಟರ್‌ ಬಳಿ ಹೋಗಿ ಪರೀಕ್ಷೆ ಮಾಡಿಸಿದಾಗ, ಕಾಲಿನ ಕಿರುಬೆರಳಿನಲ್ಲಿ ಕೂದಲೆಳೆಯಷ್ಟು ಫ್ರಾಕ್ಚರ್‌ಆಗಿದೆ ಅಂತ ಗೊತ್ತಾಯ್ತು! ಎರಡು ವಾರ ರೆಸ್ಟ್‌ , ನೋವಿನ ಮಾತ್ರೆಯ ಉಪಚಾರದ ನಂತರ, ನಾನು ನೋವಿಲ್ಲದೆ ನಡೆಯುವಂತಾದೆ. ಅಜ್ಜ-ಅಜ್ಜಿಗೆ ಸೀಟು ಹಿಡಿಯಲು ಹೋಗಿ, ಮುರಿದದ್ದು ನನ್ನ ಕಿರುಬೆರಳು!

– ಡಾ.ಕೆ.ಎಸ್‌.ಚೈತ್ರಾ

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

  • ಜಂಜಾಟದ ಬದುಕಿನಿಂದ ಬೇಸತ್ತವರು, ಶ್ರೀಮಂತಿಕೆಯ ಜೊತೆಗೇ ಬದುಕಿದರೂ ನೆಮ್ಮದಿ ಇಲ್ಲದೆ ಸಂಕಟಪಟ್ಟವರು ಮಾತ್ರವಲ್ಲ; ಉದ್ಯೋಗ ನಿಮಿತ್ತ ಪರ ಊರಿಗೆ ಬಂದು ಆಶ್ರಯ...

  • ಹಂಚಿನ ಮೇಲ್ಛಾವಣಿಯ ಪುಟ್ಟ ಮನೆಯಲ್ಲಿ ಬಡತನವೇ ತುಂಬಿದ್ದರೂ ಕನಸುಗಳಿಗೆ ಅಲ್ಲಿ ಬರವಿರಲಿಲ್ಲ. ತಂದೆ-ತಾಯಿ ಕೂಲಿ ಕಾರ್ಮಿಕರು. ಹೆತ್ತವರ ಕಷ್ಟಕ್ಕೆ ನೆರವಾಗಲು...

  • ದಿನ ಅಮ್ಮಂದಿರಿಗೆ ಚಳಿಯಿದ್ದೂ ಚಳಿಯಿರಲಿಲ್ಲ. ಕಷ್ಟಗಳಿದ್ದರೂ ಅದರ ಬಗ್ಗೆ ಕೊರಗುಗಳಿರಲಿಲ್ಲ. ನಾಲ್ಕು ಗೋಡೆಗಳ ಮಧ್ಯೆ ಇದ್ದರೂ ಸ್ವಾತಂತ್ರ್ಯದಿಂದ ವಂಚಿತರಾಗಿದ್ದೇವೆ...

  • ಪಗಡೆಯಾಟ ಇಂದು ನಿನ್ನೆಯದಲ್ಲ. ಋಗ್ವೇದದಲ್ಲಿ "ಅಕ್ಷ' ಎಂಬ ಹೆಸರಿನಿಂದ ಈ ಆಟದ ಉಲ್ಲೇಖವಿದೆ. ಪಗಡೆ ದಾಳಗಳೊಂದಿಗೆ ಅಪ್ಸರೆಯರು ನೃತ್ಯ ಮಾಡಿದರೆಂಬ ವರ್ಣನೆ ಅಥರ್ವಣ...

  • ಕೆಲಸದ ಒತ್ತಡವೋ, ಪ್ರಯಾಣದ ಸುಸ್ತೋ,ಮಾನಸಿಕ ಹಿಂಸೆಯೋ ಅಥವಾ ಮನೆಗೆಲಸದ ಅನಿವಾರ್ಯತೆಯೊ ಗೊತ್ತಿಲ್ಲ, ಹೆತ್ತ ಮಕ್ಕಳ ಕಲಿಕೆಯ ಬಗ್ಗೆ ಅಮ್ಮಂದಿರ ಕಾಳಜಿ ಕಡಿಮೆಯಾಗುತ್ತಿದೆ....

ಹೊಸ ಸೇರ್ಪಡೆ