“ಸಿಲ್ಕ್’ ಸೌಂದರ್ಯ ಲಹರಿ

"ಮಂಗಳ'ನ ಮೊಗದಲ್ಲಿ ಚಂದಿರ ಕಂಡ

Team Udayavani, Jun 25, 2019, 6:15 PM IST

ಹೆಣ್ಣಿನ ದೇಹಸಿರಿ, ಕಣ್ಣೋಟ, ನಾಚಿಕೆ, ತುಟಿ ಅಂಚಿನ ನಗುವನ್ನು ತನ್ನದಾಗಿಸಿಕೊಂಡ ಈ ಮಂಗಳಮುಖಿಯ ಹೆಸರು ಸಿಲ್ಕ್. ತನ್ನ ರೂಪರಾಶಿಯಿಂದಲೇ ಸೌಂದರ್ಯ ಜಗತ್ತನ್ನು ಗೆಲ್ಲಲು ಹೊರಟಿರುವ ಕನ್ನಡದ ಪ್ರತಿಭೆ. ವಿದ್ಯಾಬಾಲನ್‌ಳ ಅಪ್ಪಟ ಅಭಿಮಾನಿಯಾಗಿ, ಕಥಕ್ಕಳಿ ಡ್ಯಾನ್ಸರ್‌ ಆಗಿ ವಿಶಿಷ್ಟತೆ ಮೆರೆಯುವ ಸಿಲ್ಕ್ ಬಗ್ಗೆ ಹೇಳಲು ಇನ್ನೂ ಹಲವು ಸಂಗತಿಗಳುಂಟು…

ಗಂಡು, ಹೆಣ್ಣಿನಷ್ಟೇ ಮಂಗಳಮುಖಿಯರೂ ಸಶಕ್ತರು. ಇವರು ಮನಸ್ಸು ಮಾಡಿದರೆ ಏನು ಬೇಕಾದರೂ ಸಾಧಿಸಬಲ್ಲರು ಎಂಬ ಮಾತನ್ನು ರುಜುವಾತು ಮಾಡಿರುವ ಮಂಗಳಮುಖೀಯ ಯಶೋಗಾಥೆ ಇದು. ಮಾಡೆಲಿಂಗ್‌ ಕ್ಷೇತ್ರದಲ್ಲಿ ಹೆಸರು ಮಾಡುತ್ತಿರುವ ಈಕೆ, ರ್‍ಯಾಂಪ್‌ ಮೇಲಿಟ್ಟ ಹೆಜ್ಜೆಗಳು ಇಡೀ ಮಂಗಳಮುಖಿ ಸಮುದಾಯಕ್ಕೆ ಮಾದರಿ ಹೆಜ್ಜೆಗಳಾಗಿವೆ.

ಬೆಂಗಳೂರಿನ ಸಿಲ್ಕ್, ಈ ಸಾಧನೆಗೈದಿರುವ ದಿಟ್ಟೆ. ಕಳೆದ ಆರು ವರ್ಷಗಳಿಂದ ಕೋರಮಂಗಲದಲ್ಲಿ ನೆಲೆಸಿರುವ ಸಿಲ್ಕ್, ಮೂಲತಃ ಮಡಿಕೇರಿ. ಹುಟ್ಟಿದ್ದು ಸುಹಾನ್‌ ಆಗಿ. ವಿದ್ಯಾಬಾಲನ್‌ ಅವರ ಅಪ್ಪಟ ಅಭಿಮಾನಿ. “ಸಿಲ್ಕ್’ ಚಿತ್ರದಲ್ಲಿನ ವಿದ್ಯಾರ ನಟನೆ ಹಾಗೂ ಸೌಂದರ್ಯಕ್ಕೆ ಮಾರುಹೋಗಿದ್ದರು. ಕಾಲೇಜು ದಿನಗಳಲ್ಲಿ ಥೇಟ್‌ ವಿದ್ಯಾ ಬಾಲನ್‌ರಂತೆಯೇ ನಟಿಸುತ್ತಿದ್ದ ಇವರಿಗೆ ಗೆಳೆಯರು ಕೊಟ್ಟ ಹೆಸರು “ಸಿಲ್ಕ್’. ಮುಂದೆ ಅದೇ ಹೆಸರೇ ಚಾಲ್ತಿಗೆ ಬಂತು. ಆ್ಯಕ್ಟಿಂಗ್‌ ಕಲಿಯಬೇಕೆಂಬ ಇಂಗಿತವನ್ನು ಗೆಳೆಯರಲ್ಲಿ ಹೇಳಿಕೊಂಡಾಗ, “ನೀನು ಆ್ಯಕ್ಟಿಂಗ್‌ ಕಲಿಯುವುದಕ್ಕೆ ಹೋಗುವುದು ಬೇಡ. ಕಲಿಸುವುದಕ್ಕೆ ಹೋಗು’ ಎಂದಿದ್ದರಂತೆ. ನಟನೆ, ಮಾಡೆಲಿಂಗ್‌ಗೆ ಸ್ಫೂರ್ತಿ ಸಿಕ್ಕಿದ್ದು ಆಗಲೇ ಅನ್ನುತ್ತಾರೆ ಅವರು.

ಮಾಡೆಲಿಂಗ್‌ನಲ್ಲಿ ಮಿಂಚು…
ಇತ್ತೀಚೆಗೆ ದೆಹಲಿಯಲ್ಲಿ ಆಯೋಜಿಸಿದ್ದ “ಅಲಿನಾ ಮಿಸ್‌ ಟ್ರಾನ್ಸ್‌ ಅಂಡ್‌ ಮಿಸ್ಟರ್‌ ಇಂಡಿಯಾ 2019′ ಸ್ಪರ್ಧೆಯಲ್ಲಿ ಸಿಲ್ಕ್ ಕರ್ನಾಟಕವನ್ನು ಪ್ರತಿನಿಧಿಸಿದ್ದರು. ಈ ಸ್ಪರ್ಧೆಯಲ್ಲಿ ಕೊಡವ ಮಾದರಿಯ ಸೀರೆಯನ್ನುಟ್ಟು, ತೀರ್ಪುಗಾರರ ಗಮನಸೆಳೆಯುವ ಮೂಲಕ ಫ‌ಸ್ಟ್‌ ರನ್ನರ್‌ ಅಪ್‌ ಆದರು. ಅಷ್ಟೇ ಅಲ್ಲದೇ, ಕಳೆದ ವರ್ಷ ಮುಂಬೈನಲ್ಲಿ ನಡೆದ ಸೌಂದರ್ಯ ಸ್ಪರ್ಧೆಯ ಟಾಪ್‌ 10 ವಿಜೇತರಲ್ಲಿ ಇವರೂ ಒಬ್ಬರು!

“ಕನ್ನಡದ ಸಂಸ್ಕೃತಿಯನ್ನು ರಾಷ್ಟ್ರ ಮಟ್ಟದಲ್ಲಿ ಪರಿಚಯಿಸುವ ಉದ್ದೇಶ ನನ್ನದು’ ಎನ್ನುತ್ತಾರೆ ಸಿಲ್ಕ್.

ಕಥಕ್ಕಳಿ ಡ್ಯಾನ್ಸರ್‌
ಸದಾ ಲವಲವಿಕೆಯಿಂದಿರುವ ಸಿಲ್ಕ್, ಸೋಮಾರಿತನದಿಂದ ಬಲುದೂರ. ಚಿಕ್ಕ ವಯಸ್ಸಿನಿಂದಲೇ ನೃತ್ಯ ಕಲಿತು, ಕಥಕ್ಕಳಿ ಡ್ಯಾನ್ಸರ್‌ ಆಗಿ ಗಮನ ಸೆಳೆದರು. ದಿನವೂ ಎರಡು ಗಂಟೆ ನೃತ್ಯಾಭ್ಯಾಸ, ಹೆಚ್ಚು ನೀರು ಕುಡಿಯುವುದು, ಡ್ರೈಫ‌ೂಟ್ಸ್‌ ಸೇವಿಸುವುದು ಅವರ ಬ್ಯೂಟಿ ಮತ್ತು ಫಿಟ್ನೆಸ್‌ನ ಸೀಕ್ರೆಟ್‌ ಅಂತೆ. ಎಷ್ಟೇ ದಣಿದಿದ್ದರೂ ಮನೆಗೆ ಬಂದು, ಸ್ವತಃ ಅಡುಗೆ ಮಾಡಿ ಊಟ ಮಾಡುವ ರೂಢಿ. ಫಿಟ್‌ನೆಸ್‌ನ ಕಾರಣದಿಂದ ಹೊರಗಿನ ಊಟಕ್ಕೆ ಬೈ ಬೈ ಹೇಳಿದ್ದಾರೆ.

ಕಿವಿಯೋಲೆ ಕ್ರೇಝ್
ಅಲಂಕಾರಕ್ಕೆ ಹೆಚ್ಚು ಒತ್ತು ನೀಡುವ ಸಿಲ್ಕ್, ತಾವು ಹೋಗುವ ಕಾರ್ಯಕ್ರಮದ ಆಧಾರದ ಮೇಲೆ ಅಲಂಕಾರದ ಶೈಲಿಯನ್ನು ನಿರ್ಧರಿಸಿಕೊಳ್ಳುತ್ತಾರೆ. ಫ್ಯಾಷನ್‌ ಟ್ರೆಂಡ್‌ಗೆ ಸದಾ ಅಪ್‌ಡೇಟ್‌ ಆಗಿರೋ ಅವರಿಗೆ ಶಾಪಿಂಗ್‌ ಅಂದ್ರೆ ತುಂಬಾ ಇಷ್ಟ. ಹೆಚ್ಚಾ ಕಡಿಮೆ ದಿನವೂ ಶಾಪಿಂಗ್‌ ಹೋಗುವ ಅವರು, ಚಂದದ ಕಿವಿ ಓಲೆ ಎಲ್ಲಿ ಸಿಕ್ಕರೂ ಖರೀದಿಸುತ್ತಾರೆ. ಇವರ ಬಳಿ ಕಿವಿಯೋಲೆಗಳ ದೊಡ್ಡ ಕಲೆಕ್ಷನ್‌ ಇದ್ದು, ನಿನ್ನ ಕಿವಿಯೋಲೆ ನಿನ್ನ ಸೌಂದರ್ಯವನ್ನು ಹೆಚ್ಚಿಸುತ್ತದೆ ಎಂದು ಹಲವರಿಂದ ಪ್ರಶಂಸೆಯನ್ನೂ ಗಳಿಸಿದ್ದಾರೆ. ಎಲ್ಲರಿಗೂ ಅವರದ್ದೇ ಆದ ಸೌಂದರ್ಯವಿದ್ದು, ಬೇರೆಯವರ ಜೊತೆ ನಮ್ಮನ್ನು ಹೋಲಿಸಿ ಬೇಸರಪಟ್ಟುಕೊಳ್ಳುವುದು ತಪ್ಪು ಅನ್ನೋದು ಸಿಲ್ಕ್ ಅವರ ಕಿವಿಮಾತು.

ಟೀಚರ್‌ ಆಗೋ ಕನಸಿತ್ತು…
ಬಿ.ಎ. ಓದಿರುವ ಸಿಲ್ಕ್ಗೆ ಟೀಚರ್‌ ಆಗುವ ಕನಸಿತ್ತು. ಮಂಗಳಮುಖಿ ಟೀಚರ್‌ ಅನ್ನು ಮಕ್ಕಳು ಸರ್‌ ಎಂದು ಕರೆಯಬೇಕೋ, ಮೇಡಂ ಅಂತಲೋ… ಎಂದು ಕೆಲವರು ಹಂಗಿಸಿದ್ದರಿಂದ ಅವರು ಶಿಕ್ಷಕಿಯಾಗುವ ಗುರಿಯನ್ನು ಬಿಟ್ಟುಬಿಟ್ಟರು. ನಂತರ, ಸಹೋದರನ ಸಲಹೆ ಹಾಗೂ ಅವರ ಕುಟುಂಬದ ಸಹಕಾರದಿಂದ ಮಾಡೆಲಿಂಗ್‌ ಕ್ಷೇತ್ರದಲ್ಲಿ ಗುರುತಿಸಿಕೊಳ್ಳುವ ಧೈರ್ಯ ಮಾಡಿದರಂತೆ.

“ಗಂಡು, ಹೆಣ್ಣಿನಷ್ಟೇ ನಾವೂ ಸಮಾನರು. ನಾವೂ ಇತರರಂತೆ ಬದುಕಲು ಬಯಸುತ್ತೇವೆ. ನಮ್ಮನ್ನು ಬೇರೆ ದೃಷ್ಟಿಯಲ್ಲಿ ನೋಡುವ ಅವಶ್ಯಕತೆ ಇಲ್ಲ. ನಮ್ಮನ್ನೂ ನಿಮ್ಮಲ್ಲೊಬ್ಬರಂತೆ ಭಾವಿಸಿ; ಅಷ್ಟು ಸಾಕು.
– ಸಿಲ್ಕ್, ಮಂಗಳಮುಖಿ ರೂಪದರ್ಶಿ

– ಉಮೇಶ್‌ ರೈತನಗರ

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

  • ಬೆಲ್ಟ್ ಈಗ ಕೇವಲ ಬೆಲ್ಟ್ ಆಗಿ ಉಳಿದಿಲ್ಲ. ಅದೊಂದು ಫ್ಯಾಷನ್‌ ಟ್ರೆಂಡ್‌ ಆಗಿದೆ. ಪ್ಯಾಂಟ್‌ ಜಾರದಂತೆ ತಡೆಯಲಷ್ಟೇ ಅದನ್ನು ತೊಡುವುದಲ್ಲ. ಬೆಲ್ಟ್ ಈಗ ಫ್ಯಾಷನ್‌...

  • ಸೀರೆ ಉಡೋದು ಅಂದ್ರೇನು ಪ್ಯಾಂಟು ಶರ್ಟು ಹಾಕ್ಕೊಂಡಷ್ಟು ಸುಲಭವಾ? ಸೀರೆ ಉಡೋ ಕಷ್ಟ ನಮಗಷ್ಟೇ ಗೊತ್ತು. ಫ್ಯಾನ್ಸಿ ಸೀರೆಗಾದರೆ ಹದಿನೈದರಿಂದ ಇಪ್ಪತ್ತು ನಿಮಿಷ...

  • ಸಿಟಿ ಮಕ್ಕಳ ಊಟದ ಬಾಕ್ಸ್‌ ತೆರೆದು ನೋಡಿದರೆ, ಕೆಲವರ ಬಾಕ್ಸ್‌ನಲ್ಲಾದರೂ ಬ್ರೆಡ್‌-ಜ್ಯಾಮ್‌ ಇರುತ್ತದೆ. ದಿನವೂ ಬಾಕ್ಸ್‌ನಲ್ಲಿ ಬ್ರೆಡ್‌-ಜ್ಯಾಮ್‌ ತುಂಬಿ ಕಳಿಸುವ...

  • ಸೆಲೆಬ್ರಿಟಿ ನಟಿಯೊಬ್ಬಳು ಆಗಾಗ ನೆನಪಿಸಿಕೊಳ್ಳುವ ಸಂಗತಿ, ಪದೇ ಪದೆ ನೋಡುವ ಫೋಟೊ ಯಾವುದಿರಬಹುದು? ಮೊದಲ ಬಾರಿಗೆ ಬಣ್ಣ ಹಚ್ಚಿದ್ದು, ಮೊದಲ ರ್‍ಯಾಂಪ್‌ ವಾಕ್‌,...

  • ವರ್ಷವಿಡೀ ಕಡಿಮೆ ಬೆಲೆಗೆ ಸಿಗುವ ತರಕಾರಿಯೆಂದರೆ ಬದನೆ. ಅದನ್ನು ಬಡವರ ಬಾದಾಮಿ ಎಂದೂ ಕರೆಯುವುದುಂಟು. ರುಚಿಕರ ತರಕಾರಿಗಳ ಸಾಲಿನಲ್ಲಿ ಬದನೆಕಾಯಿಗಂತೂ ಪ್ರಮುಖ...

ಹೊಸ ಸೇರ್ಪಡೆ