ಸುಟ್ಟ ಮೇಲೆ ಬುದ್ಧಿ ಬಂತು!

Team Udayavani, Oct 23, 2019, 4:09 AM IST

ಬಾಗಿಲು ತೆರೆಯುತ್ತಿದ್ದಂತೆಯೇ ಯಜಮಾನರ ಮೂಗಿಗೆ ವಾಸನೆ ಬಡಿಯಿತು. ಅಸಹನೆ ಯಿಂದ- “ಒಲೆ ಮೇಲೆ ಏನಿಟ್ಟಿದ್ದೀಯೆ?’ ಅಂದರು. “ಅಯ್ಯೋ, ಪಲ್ಯ ಮಾಡೋಣ ಅಂತ…’ ಅನ್ನುತ್ತಲೇ ಅಡುಗೆಮನೆಗೆ ನುಗ್ಗಿದೆ…

ಅಡುಗೆ ಕೋಣೆಯಲ್ಲಿ ಎಡವಟ್ಟುಗಳು ನಡೆಯದೇ ಇರಲು ಸಾಧ್ಯವೇ? ನಾನು ಒಂದು ದಿನವೂ ಹಾಲು ಉಕ್ಕಿಸಿಲ್ಲ, ಪಲ್ಯ ಸೀದು ಹೋಗಿಲ್ಲ, ಉಪ್ಪಿಟ್ಟು ತಳ ಹಿಡಿಸಿಲ್ಲ ಅಂತ ಧೈರ್ಯವಾಗಿ ಹೇಳುವವರು ಯಾರಾದರೂ ಇದ್ದೀರಾ? ಖಂಡಿತಾ ಇರಲಿಕ್ಕಿಲ್ಲ. ಯಾಕಂದ್ರೆ, ಅಡುಗೆ ಮನೆಯಿಂದ ಏಳೆಂಟು ನಿಮಿಷದ ಮಟ್ಟಿಗೆ ಆಚೀಚೆಗೆ ಗಮನ ಸರಿಸಿದರೂ, ಒಲೆಯ ಮೇಲಿರುವುದು ಅಧ್ವಾನಗೊಂಡಿರುತ್ತದೆ. ಅಡುಗೆ ಕೆಲಸದ ಜೊತೆ ಜೊತೆಗೆ, ಡ್ರೆಸ್‌-ಮೇಕಪ್‌ ಮಾಡಿಕೊಳ್ಳಬೇಕಾದರಂತೂ, ಕೇಳುವುದೇ ಬೇಡ. ಎರಡು ದೋಣಿಯ ಮೇಲೆ ಕಾಲಿಟ್ಟಂತೆ, ಯಾವುದನ್ನೂ ಸರಿಯಾಗಿ ಮಾಡಲು ಸಾಧ್ಯವಾಗುವುದಿಲ್ಲ.

ಅವತ್ತೂಂದು ದಿನ ಹಾಗೇ ಆಯ್ತು.. ಅದು ವಿಶ್ವ ಮಹಿಳಾ ದಿನಾಚರಣೆಯ ಮುನ್ನಾ ದಿನ. ಪ್ರತಿ ಸಣ್ಣಪುಟ್ಟ ಹಬ್ಬವನ್ನೂ ಸಂಭ್ರಮಿಸಿ ಆಚರಿಸುವ ನಾವು, ನಮ್ಮದೇ ದಿನವನ್ನು ಆಚರಿಸದೇ ಬಿಡುತ್ತೇವಾ? ಮಾರ್ಚ್‌ ಹತ್ತಿರ ಬರುತ್ತಿದ್ದಂತೆ ಬಹುತೇಕ ಎಲ್ಲ ಆಫೀಸ್‌ಗಳ‌ಲ್ಲಿ ಮಹಿಳೆಯರಿಗೋಸ್ಕರ ಸ್ಪರ್ಧೆಗಳು, ಮನರಂಜನಾ ಕಾರ್ಯಕ್ರಮಗಳು ನಡೆಯುತ್ತವೆ. ನನ್ನ ಕಚೇರಿಯಲ್ಲಿಯೂ ಅಂಥ ಪೂರ್ವ ತಯಾರಿಗಳು ನಡೆದಿದ್ದವು. ಜೊತೆಗೇ, ನನ್ನ ಸೆಕ್ಷನ್‌ನ ಎಲ್ಲ ಮಹಿಳಾ­ಮಣಿಗಳು ಒಟ್ಟಿಗೆ ಸೇರಿ, ಮಾರ್ಚ್‌ ಎಂಟರಿಂದ ಯಾವ ಬಣ್ಣದ ಸೀರೆ ಉಡೋಣ? ಎಲ್ಲರೂ ಒಂದೇ ಥರ ಕಾಣುವಂತೆ ಹೇಗೆ ರೆಡಿಯಾಗಿ ಬರೋಣ?

ಮನೆಯಿಂದಲೇ ಸೀರೆಯುಟ್ಟು ಬರುವುದೋ ಅಥವಾ ಆಫೀಸಿಗೆ ಬಂದು ಬಟ್ಟೆ ಬದಲಾಯಿಸೋಣ್ವಾ…ಅಂತೆಲ್ಲಾ ಸುದೀರ್ಘ‌ ಚರ್ಚೆ ನಡೆಸಿ, ಒಂದು ನಿರ್ಧಾರಕ್ಕೆ ಬಂದೆವು. ಬೆಳಗ್ಗೆ 7ಕ್ಕೆ ಮನೆ ಬಿಟ್ಟರೆ, ನಾನು ವಾಪಸ್‌ ಮನೆ ತಲುಪುವುದು ಸಂಜೆ 6ಕ್ಕೆ. ಮನೆಗೆ ಬಂದು ಅಡುಗೆ ಮಾಡಿದ ನಂತರವೇ ಬಾಕಿ ಕೆಲಸಗಳನ್ನು ಮಾಡುವುದು ರೂಢಿ. ಆವತ್ತು, ಮರುದಿನಕ್ಕೆ ರೆಡಿಯಾಗುವ ಮತ್ತೂಂದು ಕೆಲಸವೂ ಜೊತೆಯಾಯ್ತು ನೋಡಿ, ಅಡುಗೆ ಜೊತೆಜೊತೆಗೆ ನಾಳೆ ಉಡಬೇಕಾದ ಸೀರೆಯನ್ನು ಸೆಲೆಕr… ಮಾಡಿ, ಅದಕ್ಕೊಪ್ಪುವ ವಸ್ತುಗಳನ್ನು ಜೋಡಿಸಿಕೊಳ್ಳೋಣ ಅಂತ ನಿರ್ಧರಿಸಿದೆ.

ಅಡುಗೆ ಕೋಣೆ ಹೊಕ್ಕು ಅನ್ನ, ಸಾರಿಗೆ ಕುಕ್ಕರ್‌ ಇಟ್ಟು, ಬೀನ್ಸ್ ಅನ್ನು ಚಕಚಕನೆ ಕತ್ತರಿಸಿ ಪಲ್ಯ ಮಾಡೋಣವೆಂದು ಸಣ್ಣ ಬಾಣಲಿಯನ್ನು ಸ್ಟೌ ಮೇಲಿಟ್ಟೆ. ಒಗ್ಗರಣೆ ಹಾಕಿ, ಬಾಣಲೆಗೆ ಬೀನ್ಸ್ ಹಾಕಿ, ಬೇಕಾದಷ್ಟು ನೀರು ಸೇರಿಸಿ, ಪಲ್ಯ ಬೇಯಲು ಇಟ್ಟೆ. ಆದರೆ ತಲೆಯಲ್ಲಿ ಓಡುತ್ತಿದ್ದುದ್ದು ಸೀರೆ ಮಾತ್ರ! ಹೇಗೂ, ಇದು ಬೇಯಲು ಸಮಯವಿದೆ, ಅಷ್ಟರಲ್ಲಿ ಸೀರೆಯನ್ನಾದರೂ ಆರಿಸೋಣವೆಂದು ರೂಮಿಗೆ ಬಂದೆ. ಯಾವ ಸೀರೆ ಉಡೋದು?- ಅನ್ನುವುದು ಎಷ್ಟು ಸುಲಭದ ಪ್ರಶ್ನೆಯೆಂದು ನಿಮಗೂ ಗೊತ್ತಲ್ಲ! ಕಪಾಟಿನ ಸೀರೆಯನ್ನೆಲ್ಲ ಆಚೆ ತೆಗೆದು, ಹುಡುಕಿದೆ, ಹುಡುಕಿದೆ, ಹುಡುಕಿದೆ… ಅಂತೂ ಒಂದು ಸೀರೆ ಮನಸ್ಸಿಗೆ ಇಷ್ಟವಾಯ್ತು.

ಅದನ್ನು ಹೊರಗೆಳೆದು, ಮ್ಯಾಚಿಂಗ್ಸ್ಗಳಿಗಾಗಿ ತಡಕಾಡತೊಡಗಿದೆ. ಇನ್ನೇನು ಎಲ್ಲವೂ ಅಂದುಕೊಂಡಂತೆ ಸಿಕ್ಕಿತಲ್ಲ ಅಂತ, ಸೀರೆಯ ಸೆರಗನ್ನು ಅಂದವಾಗಿ ಮಡಿಸತೊಡಗಿದೆ. ಅದೊಂದು ಹಂತಕ್ಕೆ ತಲುಪಿ, ಅಗತ್ಯವಿದ್ದ ಕಡೆ ಪಿನ್‌ ಹಾಕಿ, ಮತ್ತದೇ ಸೀರೆಯನ್ನು ಹ್ಯಾಂಗರ್‌ ಅಲ್ಲಿ ನೇತು ಹಾಕಿ, ಇನ್ನೇನು ಕಪಾಟಿನ ಒಳಗೆ ಇಡಬೇಕು ಅನ್ನುವಷ್ಟರಲ್ಲಿ ಯಜಮಾನರು ಮನೆಗೆ ಬಂದರು. ಬಾಗಿಲು ತೆರೆಯುತ್ತಿದ್ದಂತೆಯೇ ಅವರ ಮೂಗಿಗೆ ಘಮ್ಮನೆಂದು (??) ವಾಸನೆ ಬಡಿಯಿತು, “ಹೇ, ಏನೇ ಇದೆ ಒಲೆ ಮೇಲೆ?’ ಅಂತ ಅಲ್ಲಿಂದಲೇ ಕೇಳಿದಾಗ, ಜಗತ್ತನ್ನೇ ಮರೆತಿದ್ದ ನಾನು ವಾಸ್ತವ ಲೋಕಕ್ಕಿಳಿದೆ!

“ಗ್ಯಾಸ್‌ ಮೇಲೆ ಪಲ್ಯಕ್ಕಿಟ್ಟಿದ್ದೇ ರೀ…’ ಎಂದು ಕೂಗುತ್ತಾ, ಅಡುಗೆ ಮನೆಗೆ ಓಡಿದೆ. ಬೀನ್ಸ್ ಪಲ್ಯ, ಬಾಣಲೆಯ ತಳ ಹಿಡಿದಿತ್ತು! ಈ ಸೀರೆಯ ಪಲ್ಲು ಸರಿಯಿದೆಯಾ, ಸೆರಗು-ನೆರಿಗೆಯ ತಾಳಮೇಳ ಹೇಗಿದೆ ಅಂತ ನೋಡುವಷ್ಟರಲ್ಲಿ ಪಲ್ಯ ಕರಕಲಾಗಿತ್ತು! ಎರಡೂ ಕೆಲಸಾನ ಒಟ್ಟಿಗೇ ಮಾಡ್ತೀನಿ ಅಂತ ಹೋಗಿ, ಇದೇನು ಮಾಡಿದ್ನಪ್ಪಾ ಅಂತ ಹಣೆ ಚಚ್ಚಿಕೊಂಡೆ… ನಿನಗೆ, ಹೊಟ್ಟೆಗಿಂತ ಸೀರೆಯೇ ಮುಖ್ಯ ಅಲ್ವಾ ಎಂದು ಕರ್ರಗಾಗಿದ್ದ ಬೀನ್ಸ್ ಪಲ್ಯ ನನ್ನ ಕೆಕ್ಕರಿಸಿ ನೋಡುತ್ತಿತ್ತು!

* ಸುಪ್ರೀತಾ ವೆಂಕಟ್‌

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

  • ಮೊದಲೆಲ್ಲಾ ಕ್ಲೀನ್‌ ಶೇವ್‌ ಮಾಡಿದ ಹುಡುಗನನ್ನು ಹುಡುಗಿಯರು ಮೆಚ್ಚಿಕೊಳ್ಳುತ್ತಿದ್ರು. ಆದ್ರೆ ಕಾಲ ಕಳೆದಂತೆ ಹುಡುಗಿಯರ ಅಭಿರುಚಿಗಳೂ ಬದಲಾಗಿವೆ. ಈಗ ಕುರುಚಲು...

  • ಇತ್ತೀಚಿನ ದಿನಗಳಲ್ಲಿ ನಾವೆಲ್ಲಾ ಮೊಬೈಲ್‌ ಆ್ಯಪ್‌ಗಳಿಗೆ ದಾಸರಾಗಿದ್ದೇವೆ. ನಮ್ಮ ಎಲ್ಲ ಚಟುವಟಿಕೆಗಳು, ಇಷ್ಟ-ಕಷ್ಟಗಳು, ಬೇಕು-ಬೇಡಗಳು, ಖಾಸಗಿ ಮಾಹಿತಿಗಳು ಅವಕ್ಕೆ...

  • ಒರಳು ಕಲ್ಲಿನಲ್ಲಿ ಬೆಳಗಿನ ದೋಸೆಗೆ ಹಿಟ್ಟು ರುಬ್ಬಿ, ಬಿಸಿ ಬಿಸಿ ದೋಸೆ ಹೊಯ್ದು ಮನೆಯವರಿಗೆಲ್ಲ ಬಡಿಸುತ್ತಿದ್ದ ಅಮ್ಮನಿಗೆ, ಕೊನೆಗೆ ದೋಸೆಯೇ ಉಳಿಯುತ್ತಿರಲಿಲ್ಲ....

  • ಒಳ್ಳೆ ಜರಿ ಪೀತಾಂಬರದ ಲಂಗ, ಇದ್ದ ಬದ್ದ ಒಡವೆಗಳನ್ನೆಲ್ಲ ಹಾಕಿ, ದಸರಾ ಬೊಂಬೆಗಳಂತೆ ಸಾಲಾಗಿ ಕೂರಿಸುತ್ತಿದ್ದರು, ಕೈಯಲ್ಲೊಂದು ಕರ್ಚೀಫ್ ಇಟ್ಟು...  ಆಗೆಲ್ಲಾ...

  • ಅಂಗಡಿಯಿಂದ ತಂದ ಸಕ್ಕರೆ ಬಳಸುತ್ತೇನೆ ಅಂತ, ದಿನಸಿ ಸಾಮಗ್ರಿಗಳಿದ್ದ ರಟ್ಟಿನ ಪೆಟ್ಟಿಗೆ ತೆಗೆದೆ. ವಸ್ತುಗಳನ್ನು ಒಂದೊಂದಾಗಿ ಆಚೆಗಿಡತೊಡಗಿದೆ. ಸಕ್ಕರೆ ಸಿಗಲಿಲ್ಲ....

ಹೊಸ ಸೇರ್ಪಡೆ