ಇದು ಕಥೆಯಲ್ಲ, ಜೀವನ!

ವಿವಾಹಿತ "ರಾಜಕುಮಾರಿ'ಯರ ಕತೆಗಳು

Team Udayavani, Feb 19, 2020, 5:48 AM IST

ಬಾಲ್ಯವಿವಾಹ ಬಹುದೊಡ್ಡ ಸಾಮಾಜಿಕ ಪಿಡುಗು. ಅದರ ತಡೆಗೆ ಎಲ್ಲ ರೀತಿಯ ಪ್ರಯತ್ನಗಳು ನಡೆಯುತ್ತಿದ್ದರೂ, ಗ್ರಾಮೀಣ ಭಾಗದಲ್ಲಿ ಇನ್ನೂ ಆ ಸಮಸ್ಯೆ ಜೀವಂತವಾಗಿದೆ. ಈ ದಿನಗಳಲ್ಲೂ ವಿವಾಹಿತ ಕಿಶೋರಿಯರು, ಬಾಲ ವಿಧವೆಯರು ಕಾಣಸಿಗುತ್ತಾರೆ. ಅದಕ್ಕೆ ಕಾರಣ, ಅನಕ್ಷರತೆ, ಆರ್ಥಿಕ ಸಮಸ್ಯೆ, ಮೂಢನಂಬಿಕೆ, ಪೋಷಕರ ಬೇಜವಾಬ್ದಾರಿತನ, ಯಾವುದೇ ಆಗಿರಬಹುದು. ಅದರ ಪರಿಣಾಮವನ್ನು ಎದುರಿಸುತ್ತಿರುವವರು ಮಾತ್ರ ಮುಗ್ಧ ಬಾಲೆಯರು…

ಮಕ್ಕಳ ಹಕ್ಕುಗಳಿಗಾಗಿ ಹೋರಾಡುತ್ತಿರುವ ಬೆಂಗಳೂರಿನ ಸಿಆರ್‌ಟಿ(ಚೈಲ್ಡ್‌ ರೈಟ್ಸ್‌ ಟ್ರಸ್ಟ್‌) ಸಂಸ್ಥೆ ಮತ್ತು ಅರ್ಪಣಂ ಎಂಬ ಎನ್‌ಜಿಒ, “ಇಮೇಜ್‌’ ಎಂಬ ಯೋಜನೆಯನ್ನು ಹಮ್ಮಿಕೊಂಡಿವೆ. ಆ ಮೂಲಕ, ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ತಾಲೂಕಿನಲ್ಲಿ ಬಾಲ್ಯ ವಿವಾಹ ತಡೆ ಮತ್ತು “ವಿವಾಹಿತ ಕಿಶೋರಿಯರ ಸಶಕ್ತೀಕರಣಕ್ಕೆ ವಿವಿಧ ಕಾರ್ಯಚಟುವಟಿಕೆಗಳನ್ನು ಆಯೋಜಿಸಿವೆ. ಯೋಜನೆಯ ವತಿಯಿಂದ ಇತ್ತೀಚೆಗೆ, ಪತ್ರಕರ್ತರಿಗಾಗಿ ಕ್ಷೇತ್ರಾಧ್ಯಯನ ಹಮ್ಮಿಕೊಳ್ಳಲಾಗಿತ್ತು. ನಾಲ್ಕೈದು ಹಳ್ಳಿಗಳಲ್ಲಿ ನಡೆಸಿದ ಕ್ಷೇತ್ರಾಧ್ಯಯನದಲ್ಲಿ ಕಂಡ, ವಿವಾಹಿತ ಕಿಶೋರಿಯರ ಕಥೆಗಳಲ್ಲಿ ಕೆಲವು ಇಲ್ಲಿವೆ.

ಬಹುತೇಕ ಈ ಬಾಲೆಯರೆಲ್ಲಾ ಹೈಸ್ಕೂಲ್‌ ಓದುತ್ತಿರುವಾಗಲೇ ದಾಂಪತ್ಯಕ್ಕೆ ಕಾಲಿಟ್ಟವರು. ಓದುವ ವಯಸ್ಸಲ್ಲೇ ಅಮ್ಮಂದಿರಾಗಿ, ಆಡುವ ವಯಸ್ಸಲ್ಲೇ ಬಾಲ ವಿಧವೆಯರಾಗಿ ಸಂಸಾರದ ನೊಗ ಹೊತ್ತು, ತುತ್ತಿನ ಚೀಲಕ್ಕಾಗಿ ಹೋರಾಡುತ್ತಿರುವ “ರಾಜಕುಮಾರಿಯರು’. ಇದೇನು ರಾಜಕುಮಾರಿ ಅಂದುಬಿಟ್ಟಿರಿ ಅಂತ, ಅಚ್ಚರಿ ಬೇಡ. ಅರ್ಪಣಂ ಸಂಸ್ಥೆ ಈ ಹುಡುಗಿಯರಿಗೆ ಇಟ್ಟಿರುವ ಹೆಸರೇ “ರಾಜಕುಮಾರಿ’.

ಕಥೆ-1
ಅವಳು ಸುಮ (ಹೆಸರು ಬದಲಿಸಿದೆ).
ಮನೆಯಲ್ಲಿ ಬಡತನ. ಕೂಲಿಯೇ ಜೀವನಾಧಾರ. 11 ಮಕ್ಕಳಲ್ಲಿ ಇವಳು ಕೊನೆಯವಳು. ಅಮ್ಮ ಗರ್ಭಿಣಿ, ಬಾಣಂತನಗಳಲ್ಲೇ ಜೀವನ ಸವೆಸಿದರೆ, ಅಪ್ಪನ ದುಡಿಮೆಯಲ್ಲಿ ಹೊಟ್ಟೆ ತುಂಬುತ್ತಿಲ್ಲ. ಆದರೂ, ಅಪ್ಪ ತನ್ನ ಐವರು ಹೆಣ್ಣು ಮಕ್ಕಳ ಮದುವೆ ಮಾಡಿಕೊಟ್ಟರು. ಕೊನೆಯ ಸರದಿ ಸುಮಳದ್ದು. ಆದರೆ, ಸುಮಳಿಗೆ ಚೆನ್ನಾಗಿ ಓದಬೇಕೆಂಬ ಆಸೆ. 7ನೇ ತರಗತಿವರೆಗೂ ಸರ್ಕಾರಿ ಶಾಲೆಯಲ್ಲಿ ಅಡೆತಡೆ ಇಲ್ಲದೆ ಓದಿದಳು. ಇನ್ನೇನು ಪರೀಕ್ಷೆ ಬರೆಯಬೇಕೆನ್ನುವಷ್ಟರಲ್ಲಿ, ಅಪ್ಪ ಆಕೆಯ ಶಾಲೆ ಬಿಡಿಸಿ, ಮದುವೆ ಮಾಡಿಯೇಬಿಟ್ಟರು. ಅತ್ತೆ ಮನೆಯಲ್ಲಿ ಅಡುಗೆ, ಮನೆಕೆಲಸ, ಹೊಲದ ಕೆಲಸ ಇದ್ಯಾವುದೂ ಗೊತ್ತಿಲ್ಲದ ಆಕೆ, ಓದಬೇಕು ಅಂತ ಕನಸು ಕಾಣುತ್ತಾ, ಮೂಲೆಯಲ್ಲಿ ಕುಳಿತು ಅಳುತ್ತಿದ್ದಳು. ಆದರೆ, ಎಷ್ಟು ದಿನ ಅಳುವುದು? ಅದರಿಂದ ಏನು ಪ್ರಯೋಜನ? ಕೊನೆಗೆ, ಸೊಂಟಕ್ಕೆ ಸೀರೆ ಸೆರಗು ಸಿಕ್ಕಿಸಿ ಒಂದೊಂದೇ ಕೆಲಸಕ್ಕೆ ಒಗ್ಗಿಕೊಂಡಳು. ಕೆಲಸಕ್ಕೆಂದು ಗಂಡನೊಟ್ಟಗೆ ಬೆಂಗಳೂರಿಗೆ ಹೋದಳು. ಒಂದು ವರ್ಷ ಗಾರ್ಮೆಂಟ್ಸ್‌ನಲ್ಲಿ ಕೆಲಸ ಮಾಡುವಷ್ಟರಲ್ಲಿ, ಗರ್ಭಿಣಿಯಾದಳು. ಮಗ ಹುಟ್ಟಿದ. ಆದರೆ, ಮಗನ ಆರೋಗ್ಯ ಸರಿಯಿಲ್ಲದೆ, ಆಸ್ಪತ್ರೆಗೆ ಅಲೆದಾಟ ಶುರುವಾಯ್ತು. ಮಗುವಿಗೆ ಪೌಷ್ಟಿಕಾಂಶ ಕೊರತೆಯಿಂದಾಗ ಅನಾರೋಗ್ಯ ಜೊತೆಯಾಗಿತ್ತು.

ಅಷ್ಟರಲ್ಲೇ ಮತ್ತೂಬ್ಬ ಹುಟ್ಟಿದ. ಸಾಲದು ಎಂಬಂತೆ, ಗಂಡ ಅಪಘಾತದಲ್ಲಿ ಕಾಲು ಮುರಿದುಕೊಂಡ. ಕಾಲಿಗೆ ರಾಡ್‌ ಹಾಕಿದರು. ಕೆಲಸ ಮಾಡಬೇಡಿ ಅಂದರು ವೈದ್ಯರು. ಈಗ, ಸುಮಾಳೇ ಕೂಲಿ ಮಾಡಿ ಮಕ್ಕಳು, ಗಂಡನನ್ನು ಸಾಕುತ್ತಿದ್ದಾಳೆ. ಬೆಳಗ್ಗೆ 4ಕ್ಕೆಅವಳ ದಿನಚರಿ ಆರಂಭವಾದರೆ, ಅಡುಗೆ, ಮನೆಕೆಲಸ, ಮಕ್ಕಳನ್ನು ಶಾಲೆಗೆ ರೆಡಿ ಮಾಡುವುದು, ಹೊಲದಲ್ಲಿ ಕೂಲಿ ಕೆಲಸ, ಸಂಜೆ ಮನೆಗೆ ಬಂದ ಮೇಲೆ ಅಡುಗೆ, ಮಕ್ಕಳ ಓದು ಅಂತ ರಾತ್ರಿವರೆಗೂ ದುಡಿಯುತ್ತಾಳೆ. ಅರ್ಪಣಂ ಸಂಸ್ಥೆಯಲ್ಲಿ ರಾತ್ರಿ 10ರವರೆಗೂ ಹೊಲಿಗೆ ತರಬೇತಿ ಪಡೆಯುತ್ತಾಳೆ. ಜೀವನದಲ್ಲಿ ಸಾಧಿಸಬೇಕೆಂಬ ಛಲ ಇಟ್ಟುಕೊಂಡು ಬದುಕುತ್ತಿರುವ, ಸುಮಳ ಆತ್ಮವಿಶ್ವಾಸ ಯಾವ ಯೂನಿವರ್ಸಿಟಿಯಲ್ಲಿ ಪಡೆದ ಚಿನ್ನದ ಪದಕಕ್ಕೂ ಕಡಿಮೆ ಇಲ್ಲ.

ಕಥೆ-2
ಮಗನೇ ಆದ ಮಗಳು
ಅವಳು ಶಶಿಕಲಾ. 14ನೇ ವಯಸ್ಸಿಗೆ ಮದುವೆ. 17ರ ಹರೆಯಕ್ಕೆ ವಿಧವೆ ಪಟ್ಟ. ಬಾಲ್ಯ ಕಳೆಯುವ ಮುನ್ನವೇ ಬದುಕು ಕತ್ತಲೆ. ಸೋದರತ್ತೆ ಮಗನನ್ನೇ ವರಿಸಿದ್ದ ಶಶಿಗೆ, ಅತ್ತೆ ಮನೆ ಹಳೆಯದಾದರೂ ದಾಂಪತ್ಯದ ಕಲ್ಪನೆಯೇ ಇರಲಿಲ್ಲ. ಮದುವೆಯಾದ ಹೊಸದರಲ್ಲಿ ಕೆಲಸ ಬಾರದೆ, ದಾಂಪತ್ಯಕ್ಕೆ ಹೊಂದಿಕೊಳ್ಳಲಾಗದೆ ಹೊಡೆತ, ಬಡಿತದೊಂದಿಗೆ ನಿಧಾನಕ್ಕೆ ಬದುಕಿನತ್ತ ಕಣ್ತೆರೆದಳು. ಹೇಗೋ ಇಷ್ಟವೋ, ಕಷ್ಟವೋ ಗಂಡನೊಂದಿಗೆ ಬದುಕುತ್ತಿದ್ದಳು. ಒಂದು ಮುಂಜಾನೆ ಶಶಿಯ ಬದುಕಿಗೆ ಕತ್ತಲು ಬಡಿದಿತ್ತು. ಗಂಡ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದ. ಈಕೆ ಎದೆಬಡಿದುಕೊಂಡು ಕುಸಿದು ಬಿದ್ದಳು. ಮುಂದೆ ಸೋದರತ್ತೆಯೊಂದಿಗೆ, ಹೊಂದಾಣಿಕೆ ಕಷ್ಟವೆನಿಸಿ, ತವರಿನತ್ತ ಹೆಜ್ಜೆ ಹಾಕಿದಳು. ಅಲ್ಲಿ ಅಪ್ಪನೊಂದಿಗೆ ತಾನೂ ವ್ಯವಸಾಯ ಮಾಡತೊಡಗಿವಳು. ತಂಗಿಯ ಮದುವೆಗೆ ಅಪ್ಪನಿಗೆ ಆಸರೆಯಾಗಿ ನಿಂತಳು. ಈಗ ತಂಗಿಯ ಮಗನನ್ನೂ ತಾನೇ ಸಾಕುತ್ತಿದ್ದಾಳೆ. ಅಮ್ಮನ ಆರೋಗ್ಯ ಸರಿಯಿಲ್ಲದೆ, ಅಪ್ಪ-ಅಮ್ಮನ ಜವಾಬ್ದಾರಿಯೂ ಮಗನಂತೆ ಹೆಗಲಲ್ಲಿ ಹೊತ್ತು ಸಾಗುತ್ತಿದ್ದಾಳೆ.

ಇಷ್ಟು ಚಿಕ್ಕ ವಯಸ್ಸು, ಮತ್ತೂಂದು ಮದುವೆ ಯೋಚನೆ ಮಾಡಬಾರದೆ ಎಂದು ಕೇಳಿದರೆ, ಮತ್ತೂಂದು ಮದುವೆ ಆಗುವ ಸಂಪ್ರದಾಯ ನಮ್ಮಲ್ಲಿಲ್ಲ. ಮದುವೆಯಲ್ಲಿ ನನಗೆ ನಂಬಿಕೆಯೂ ಉಳಿದಿಲ್ಲ. ಗಂಡ ಕುಡಿದು ಬಂದು ಹೊಡೆಯುತ್ತಿದ್ದ. ನನ್ನನ್ನೆಂದೂ ಸುಖವಾಗಿ ನೋಡಿಕೊಳ್ಳಲಿಲ್ಲ. ಇನ್ನೊಬ್ಬನೊಂದಿಗೆ ಬದುಕಿನಲ್ಲಿ ನೆಮ್ಮದಿ ಸಿಗುತ್ತೆ ಎಂಬ ನಂಬಿಕೆ ನನಗಿಲ್ಲ ಅನ್ನುತ್ತಾಳೆ ಶಶಿಕಲಾ.

ಕಥೆ-3
ಚೆನ್ನಾಗಿ ಓದಿ, ಪತ್ರಕರ್ತೆಯಾಗಬೇಕೆಂಬ ಆಸೆ ಪದ್ಮಜಾಗೆ ಇತ್ತು. ಈಕೆಯದ್ದು ಅನ್ಯಾಯದ ವಿರುದ್ಧ ಹೋರಾಡುವ ಮನೋಭಾವ, ಹೇಳಿದ್ದನ್ನ ಛಕ್ಕನೆ ಗ್ರಹಿಸುವ ಬುದ್ಧಿವಂತ ಹುಡುಗಿ. ಇಷ್ಟೆಲ್ಲಾ ಗುರಿ ಇಟ್ಟುಕೊಂಡು ಹತ್ತನೇ ತರಗತಿ ಓದುತ್ತಿದ್ದ ಬಾಲೆಗೆ, ಮದುವೆ ನಿಶ್ಚಯಿಸಿದರು. “ನಾನು ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆಯಲೇಬೇಕೆಂದು’ ಈಕೆ ಹಠಕ್ಕೆ ಬಿದ್ದಳು. ಊಟ, ನಿದ್ದೆ ಬಿಟ್ಟು ತಂದೆ ಬಳಿ ಗೋಗರೆದಳು. ಆಗ ಅಪ್ಪ, “ಪರೀಕ್ಷೆ ಬರೆಸುವೆ. ಆದರೆ, ನೀನು ಮದುವೆಯಾಗಬೇಕು’ ಅಂತ ಷರತ್ತು ವಿಧಿಸಿದರು. ಅವಳು ಪರೀಕ್ಷೆಗೂ, ಮನೆಯವರು ಮದುವೆಗೂ ತಯಾರಿ ನಡೆಸಿದರು. ಹೊಸ‌ ಸೀರೆ, ಒಡವೆ ತಂದುಕೊಟ್ಟು ಅಪ್ಪ, ತಾಳಿ ಕಟ್ಟಿಸಿಯೇ ಬಿಟ್ಟರು. ಅವಳು ಎಸ್ಸೆಸ್ಸೆಲ್ಸಿಯಲ್ಲಿ ಶೇ.70 ಅಂಕ ಗಳಿಸಿದಳು. ಮದುವೆಯಾಗಿ ಹೋಗಿದೆ. ಓದು ಮುಂದುವರಿಸಲು ಹೇಗೆ ಸಾಧ್ಯ ಅಂತ ಯೋಚಿಸುವಷ್ಟರಲ್ಲಿ ಆಕೆಗೆ 3 ತಿಂಗಳು! ಅನಾರೋಗ್ಯ ಕಾಡಿತು. ಹೆರಿಗೆ ಸಮಸ್ಯೆಯಿಂದ ತಾಯಿ-ಮಗು ಉಳಿದಿದ್ದೇ ಹೆಚ್ಚು. ಪುನರ್ಜನ್ಮ ಪಡೆದ ಪದ್ಮಜಾ ಈಗ, ಮಗುವಿನ ಲಾಲನೆ-ಪಾಲನೆ, ಹೊಲಿಗೆ ತರಬೇತಿ, ಸೀರೆ ಕುಪ್ಪಸಗಳಿಗೆ ಕುಸುರಿ ಕೆಲಸ ಮಾಡುತ್ತಲೇ ಪಿಯುಸಿ ಪರೀಕ್ಷೆ ಬರೆಯಲು ಅಣಿಯಾಗಿದ್ದಾಳೆ. ಮನೆಯಲ್ಲಿ ಅತ್ತೆ, ಗಂಡನ ಮನವೊಲಿಸಿ ಓದು ಮುಂದುವರಿಸಿದ್ದಾಳೆ. ತನ್ನ ಸುತ್ತಮುತ್ತ, ನೆಂಟರಲ್ಲಿ ಬಾಲ್ಯ ವಿವಾಹ ನಡೆಯುವ ಸುಳಿವು ಸಿಕ್ಕ ಕೂಡಲೇ ಅದನ್ನು ತಡೆದು ಅವರಲ್ಲಿ ಜಾಗೃತಿ ಮೂಡಿಸುತ್ತಾಳೆ.

ಬಾಲ್ಯ ವಿವಾಹದ ದುಷ್ಪರಿಣಾಮ
-ಬಾಲ್ಯ ವಿವಾಹದಿಂದ ಹೆಣ್ಣು ಮಕ್ಕಳ ಆರೋಗ್ಯ ಕ್ಷೀಣಿಸುತ್ತದೆ. ಗರ್ಭ ತಾಳುವ ಶಕ್ತಿ ಇಲ್ಲದೆ ರಕ್ತ ಹೀನತೆ, ಶಿಶು ಮರಣ, ಅಪೌಷ್ಟಿಕ ಹಾಗೂ ವಿಕಲಾಂಗ ಮಕ್ಕಳು ಜನಿಸಬಹುದು. -ಆಡುವ, ಓದುವ ವಯಸ್ಸಿನಲ್ಲಿ ಸಂಸಾರದ ಜವಾಬ್ದಾರಿ ಹೊರಲಾರದೆ ಮಾನಸಿಕ ದುಗುಡಕ್ಕೆ, ಖನ್ನತೆಗೆ ಒಳಗಾಗುವರು.
– ಭ್ರೂಣಕ್ಕೆ ಅಗತ್ಯವಿದ್ದಷ್ಟು ಪೋಷಕಾಂಶಗಳು ಪೂರೈಸುವ ಶಕ್ತಿ, ಎಳೆಯ ಗರ್ಭಕೋಶಕ್ಕೆ ಇರುವುದಿಲ್ಲ. ಅದರಿಂದ, ಪ್ರಸವದಲ್ಲಿ ತಾಯಿ-ಮಗು ಮರಣಕ್ಕೀಡಾಗಬಹುದು.

ಬಿ.ವಿ. ಅನುರಾಧಾ

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

  • ಹಿಂದೂಗಳ ಪಾಲಿನ ಪ್ರಮುಖ ಹಬ್ಬಗಳಲ್ಲಿ ಯುಗಾದಿಯೂ ಒಂದು. ಪ್ರತಿ ಬಾರಿಯೂ ಹಸಿರನ್ನು, ಆ ನೆಪದಲ್ಲಿ, ಸಂಭ್ರಮ, ಸಂತೋಷ, ಸಡಗರವನ್ನು ಹೊತ್ತು ತರುವುದು ಯುಗಾದಿಯ ವಿಶೇಷ....

  • ಚಂದದ ದಿರಿಸಿಗೆ ಅಂದದ ಒಡವೆ ಧರಿಸಿದರೇ ಚೆನ್ನ. ಒಡವೆ ಅಂದರೆ ಬಂಗಾರದ್ದೇ ಆಗಬೇಕಿಲ್ಲ. ಚಿನ್ನವನ್ನೇ ನಾಚಿಸುವಷ್ಟು ಚೆನ್ನಾಗಿರುವ ಕೃತಕ ಆಭರಣಗಳು ಈಗ ಎಲ್ಲರ ಮೆಚ್ಚುಗೆ...

  • ಹಬ್ಬದ ಸಂಭ್ರಮವನ್ನು ಕೊರೊನಾ ನುಂಗಿಬಿಟ್ಟಿದೆ. ಮನೆಯಿಂದ ಹೊರಗೆ ಹೋಗುವಂತಿಲ್ಲ. ಯುಗಾದಿ ಶಾಪಿಂಗ್‌ ಮಾಡೇ ಇಲ್ಲ ಅಂತಿದ್ದೀರಾ? ಚಿಂತೆ ಬೇಡ. ವಾರ್ಡ್‌ರೋಬ್‌ನಲ್ಲಿರುವ...

  • ಬಾಡಿಗೆ ತಾಯ್ತನ ನಮ್ಮ ದೇಶಕ್ಕೆ ಹೊಸದೇನಲ್ಲ. ಆರೋಗ್ಯ ಸಂಬಂಧಿ ಸಮಸ್ಯೆ ಹೊಂದಿರುವವರು ಹಾಗೂ ನವಮಾಸ ಗರ್ಭ ಹೊತ್ತು ಪ್ರಸವೋತ್ತರ ವಿಶ್ರಾಂತಿಗೆ ಸಮಯದ ಕೊರತೆ...

  • ಬದುಕಿನಲ್ಲಿ ಸಿಹಿ-ಕಹಿಗಳು ಸಮಾನವಾಗಿ ಬರಲಿ, ಎರಡನ್ನೂ ಸಮಚಿತ್ತದಿಂದ ಸ್ವೀಕರಿಸುವ ಮನೋಭಾವ ಬೆಳೆಯಲಿ ಎಂಬುದರ ಸಂಕೇತವಾಗಿ ಯುಗಾದಿ ದಿನ, ಬೇವು-ಬೆಲ್ಲ ತಿನ್ನುತ್ತೇವೆ....

ಹೊಸ ಸೇರ್ಪಡೆ