ಈ ಶತಮಾನದ ಮಾದರಿ ಹೆಣ್ಣು ಸ್ವಾಭಿಮಾನದ ಸಾಹಸಿ ಹೆಣ್ಣು: ಈಕೆ ಸುಲೋಚನಾ..
Team Udayavani, Mar 15, 2017, 3:50 AM IST
ಹುಬ್ಬಳ್ಳಿಯವರಾದ ಸುಲೋಚನಾ ಅವರಿಗೆ ಈಗಾಗಲೇ 80 ದಾಟಿದೆ. ಅನಕ್ಷರಸ್ಥೆಯಾದ ಈಕೆಗೆ, ಬಾಳಿನುದ್ದಕ್ಕೂ ಬಗೆಬಗೆಯ ಕಷ್ಟಗಳು ಎದುರಾಗಿವೆ. ವಿಧಿ ಈಕೆಯ ಬಾಳಲ್ಲಿ ವರ್ಷಕ್ಕೊಂದು ಆಟ ಆಡಿದೆ. ಅದ್ಯಾವುದಕ್ಕೂ ಈಕೆ ಹೆದರಿಲ್ಲ. ಕಷ್ಟ ಹೆಚ್ಚಾಯಿತೆಂದು ಕಣ್ಣೀರು ಹಾಕುತ್ತ ಕುಳಿತಿಲ್ಲ. ವಯಸ್ಸಾಯ್ತು, ಯಾರಾದ್ರೂ ಸಹಾಯ ಮಾಡೀಪ್ಪಾ ಎಂದು ಅಂಗಲಾಚಿಲ್ಲ. ಬದಲಾಗಿ, ಬದುಕಿರುವಷ್ಟು ದಿನ ದುಡಿಯುತ್ತಲೇ ಇರ್ತೇನೆ ಎಂದು ಘೋಷಿಸಿ ಹಾಗೆಯೇ ಬಾಳುತ್ತಿದ್ದಾಳೆ. ತನ್ನ ದುಡಿಮೆಯಲ್ಲಿ ನಾಲ್ಕು ಕಾಸು ಉಳಿಸಿ ಅಶಕ್ತರಿಗೂ ನೀಡುತ್ತಿದ್ದಾಳೆ!
ಸಾಧ್ಯ ಅಸಾಧ್ಯ ಎಂಬ ಎರಡು ರೈಲು ಕಂಬಿಯ ಮೇಲೆ ಬಾಳು ಸಾಗುತಿದೆ, ನಾವು ಸಾಧ್ಯ ಎಂದುಕೊಂಡರೆ ಅಸಾಧ್ಯವಾದುದಿಲ್ಲ, ಅಸಾಧ್ಯ ಎಂದುಕೊಂಡರೆ ಬದುಕು ನಿರರ್ಥಕ, ಜೀವನ ಎಲ್ಲವನ್ನೂ ಯಾರಿಗೂ ಕೊಟ್ಟಿಲ್ಲ ಒಂದು ಕೊಟ್ಟು ಇನ್ನೊಂದು ಬೇಕು ಎನ್ನುವ ಆಸೆಯನ್ನು ಹುಟ್ಟಿಸುತ್ತದೆ. ಆದರೆ ಎಲ್ಲವೂ ನನ್ನದಲ್ಲ. ನಾವು ಭಗವಂತನ ಅಡಿಯಾಳುಗಳು. ಯಾವುದನ್ನೂ ಕೊನೆಯಲ್ಲಿ ಒಯ್ಯುವುದಿಲ್ಲ ಎಂದು ನಿಸ್ವಾರ್ಥ ಜೀವನ ಸಾಗಿಸುತ್ತಿರುವ ಒಬ್ಬ ಮಹಿಳೆಯ ಕಥೆಯನ್ನು ನಿಮಗೆ ಹೇಳಲೇಬೇಕು.
ಅದು 1930. ಬ್ರಿಟಿಷರ ಕಪಿಮುಷ್ಟಿಯಲ್ಲಿ ಭಾರತವಿದ್ದ ಸಮಯ. ತುಳುನಾಡಿನಲ್ಲಿ ಭೀಕರ ಬರಗಾಲಕ್ಕೆ ಹೆದರಿ ಅದೆಷ್ಟೊ ಜನ ಕರ್ನಾಟಕದತ್ತ ವಲಸೆ ಬಂದರು. ಹುಬ್ಬಳ್ಳಿಗೆ ಬಂದ ವಲಸಿಗರಲ್ಲಿ ಸುಲೋಚನಾ ಪಿಳ್ಳೆ ಎಂಬ ಮಹಿಳೆ ತನ್ನ ತಂದೆಯೊಡನೆ ಬಂದರು, ಅವರಿಗೆ ಅಂದಿನ ಕ್ರಿಶ್ಚಿಯನ್ ಜನಾಂಗದ ಮಿಷನರಿಯೊಬ್ಬರು ಆಶ್ರಯವಿತ್ತರು. ಕಾಲಚಕ್ರ ಉರುಳಿದಂತೆ ಸುಲೋಚನಾಗೆ ಮದುವೆಯಾಯಿತು ಅಷ್ಟೇನೂ ಸಿರಿವಂತಿಕೆ ಇಲ್ಲದ ಸುಲೋಚನಾಗೆ ಕುಡುಕ ಗಂಡ ಸಿಕ್ಕಿದ್ದೇ ಭಾಗ್ಯವಾಗಿತ್ತು. ಅಪ್ಪನ ಹೆಗಲಿಗೆ ಹೆಗಲು ಕೊಟ್ಟು ಸಂಸಾರ ಬಂಡಿ ಸಾಗಿಸಿದಳು. ಕೆಲ ದಿನಗಳಲ್ಲೇ ಸುಲೋಚನಾರ ತಂದೆ ತೀರಿಕೊಂಡರು. ಗಂಡನ ಅಗಲಿಕೆಯಿಂದ ಮನನೊಂದ ಸುಲೋಚನಾಳ ತಾಯಿಯೂ ಸ್ವರ್ಗಸ್ಥರಾದರು.
ಮುಂದೆ ಸುಲೋಚನಾ ಹೆಣ್ಣು ಮಗುವಿಗೆ ಜನ್ಮ ನೀಡಿದಳು. ತನ್ನ ಕಷ್ಟವನ್ನು ಅ ಮುದ್ದಾದ ಮಗುವಿನ ಮುಖ ನೋಡುತ್ತಾ ಮರೆತಳು. ಕಾಲ ಗತಿಸಿದಂತೆ ಮಗಳು ಬೆಳೆದು ಮದುವೆ ವಯಸ್ಸಿಗೆ ಬಂದಳು. ಮಗಳಿಗೆ ಮದುವೆ ಮಾಡಿ ಮೊಮ್ಮಕ್ಕಳನ್ನು ಆಡಿಸುವ ಬಯಕೆ ಸುಲೋಚನಾಳದ್ದು. ಅದೊಂದು ದಿನ ಸುಲೋಚನಾ ಕೆಲಸ ಮುಗಿಸಿ ಇಳಿ ಸಂಜೆ ಮನೆಗೆ ಬಂದಾಗ ಬಿದ್ದು ಎಡಗೈ ಎಲುಬನ್ನು ಮುರಿದುಕೊಂಡಳು. ಅಕ್ಕಪಕ್ಕದ ಜನರು ಅವಳನ್ನು ಅಸ್ಪತ್ರೆಗೆ ದಾಖಲಿಸಿದಾಗ ವೈದ್ಯರು ಅವಳ ಕೈಯನ್ನು ತೆಗೆಯಬೇಕು ಎಂದು ಹೇಳಿದಾಗ, ಧೈರ್ಯ ಮಾಡಿದ ಸುಲೋಚನಾ, ದೇವರು ಸೃಷ್ಟಿಸಿದ ಈ ದೇಹ ದೇವರಿಗೇ ಮೀಸಲು. ಉಸಿರು ನಿಲ್ಲೋವರೆಗೂ ಅದನ್ನು ತೆಗೆಯಲು ಬಿಡಲಾರೆ ಎಂದು ಮುರಿದ ಕೈಯಲ್ಲೇ ಜೀವನ ಸಾಗಿಸಿದಳು. ಅವಳಿಗೆ ಮಗಳೇ ಕೈಯಾಗಿದ್ದಳು, ಅದರೆ ವಿಧಿಯ ಇಷ್ಟವೇ ಬೇರೆಯಾಗಿತ್ತು. ಕಾಯಿಲೆಗೆ ತುತ್ತಾದ ಮಗಳು ಕಣ್ಣ ಮುಂದೆ ನರಳಿ ನರಳಿ ಪ್ರಾಣ ಬಿಟ್ಟಳು. ಈ ಘಟನೆ ಸುಲೋಚನಾಳನ್ನು ಕತ್ತಲ ಗರ್ಭಕ್ಕೆ ತಳ್ಳಿತು. ಈಗ ಗಂಡನಿದ್ದರೂ ಅನಾಥೆ. ಮಗಳ ಸಾವಿನ ಸೆಲೆಯಿಂದ ಹೊರಬಂದ ಸುಲೋಚನಾ, ಬದುಕಿನ ಬಂಡಿ ಸಾಗಿಸಲು ಮನೆಗೆಲಸಕ್ಕೆ ಹೋಗಲು ಆರಂಭಿಸಿದರು.
ಇಷ್ಟಾದ ಮೇಲೂ ವಿಧಿ, ಸುಲೋಚನಾರ ವಿಷಯದಲ್ಲಿ ಕರುಣೆ ತೋರಲಿಲ್ಲ. ಮುಂದಿನ ಕೆಲ ದಿನಗಳಲ್ಲಿ ಆಕೆಯ ಗಂಡನೂ ತೀರಿ ಹೋದ. ಆಡಿಸುವವನು ನೀನಿರುವಾಗ ಆಡುವಾಕೆ ನಾನಲ್ಲವೇನು ಎಂದು ದೇವರ ಮೇಲೆ ಭಾರ ಹಾಕಿ ಒಂಟಿ ಜೀವನ ಸಾಗಿಸುವ ನಿರ್ಧಾರಕ್ಕೆ ಬಂದರು ಸುಲೋಚನಾ. ವಯಸ್ಸಾದ ಕಾರಣದಿಂದ ಅವರಿಗೆ ದೃಷ್ಟಿದೋಷದಿಂದ ಕಣ್ಣು ಕಾಣದಂತಾಯಿತು. ಆದರೂ ಸುಲೋಚನಾಳ ದುಡಿದು ಬದುಕಬೇಕು ಎನ್ನುವ ಛಲ ಆಶ್ರಮಕ್ಕೆ ಸೇರಿಸುವೇ ಬಾ ಎಂದ ಮಂದಿಯನ್ನ ನಿಬ್ಬೆರಗಾಗಿಸಿತು. ಬೇಡಿ ತಿನ್ನುವುದು ಹೇಡಿಗಳ ಲಕ್ಷಣ, ದುಡಿದು ತಿನ್ನುವುದು ಸಜ್ಜನರ ಲಕ್ಷಣ ಎಂಬ ಅವಳ ಮಾತು ಯುವ ಜನಾಂಗವನ್ನು ಹುಬ್ಬೇರಿಸುವಂತೆ ಮಾಡುವುದು ನಿಶ್ಚಿತ.
ಉಳಿ ಪೆಟ್ಟು ತಿಂದ ಕಲ್ಲು ಒಂದು ಪರಿಪೂರ್ಣ ಶಿಲೆಯಾಗಿ ನಿಲ್ಲುತ್ತದೆ ಎಂಬುದಕ್ಕೆ ಹುಬ್ಬಳಿಯ ಮಿಷನ್ ಕಾಂಪೌಂಡ್ನಲ್ಲಿ ವಾಸವಾಗಿರುವ 84 ವರ್ಷದ ಸುಲೋಚನ ಪಿಳ್ಳೆ ಅವರೇ ಸಾಕ್ಷಿ ಅನ್ನಬಹುದು. ಈ ಅಜ್ಜಿ, ತಲೆಯ ಮೇಲೆ ಬುಟ್ಟಿಯನ್ನಿಟ್ಟುಕೊಂಡು ಜನತಾ ಮಾರ್ಕೆಟ್ಗೆ ನಡೆದಳೆಂದರೆ ಅಕ್ಕ ಪಕ್ಕದ ಜನ ನಿಂತು ಬೆರಗಾಗಿ ನೋಡುತ್ತಾರೆ. ಮಾರ್ಕೆಟ್ನಿಂದ ತಂದ ವಸ್ತುಗಳನ್ನು ಮನೆಯಲ್ಲಿಯೇ ಕುಳಿತು ಮಾರುತ್ತ ಜೀವನ ಸಾಗಿಸುತಿದ್ದಾಳೆ. ಅಂದಿನ ದಿನದ ದುಡಿಮೆಯಲ್ಲಿ ತನಗೆ ಬೇಕಾದಷ್ಟು ಇಟ್ಟುಕೊಂಡು ಉಳಿದದ್ದು ಕೂಡಿ ಹಾಕಿ ಮಹಿಳಾ ಕಲ್ಯಾಣ ಸಂಘವೊಂದಕ್ಕೆ ನೀಡುವುದರ ಮೂಲಕ ಮಹಿಳೆಯರಿಗೆ ದೈರ್ಯ ತುಂಬುವ ಕಾರ್ಯದಲ್ಲಿ ತೊಡಗಿದ್ದಾಳೆ, ತಾನು ಬದುಕುವುದಲ್ಲದೆ ತನ್ನ ಸುತ್ತಮುತ್ತಲಿನ ಅಸಹಾಯಕರಿಗೂ ಕೈಲಾದಷ್ಟು ನೆರವು ನೀಡುವ ಹೆಬ್ಬಯಕೆ ಈ ತಾಯಿಯದು.
ಕೃಷ್ಣಕುಮಾರ ಎನ್.ಕೆ., ಧಾರವಾಡ