ಸ್ವಲ್ಪ “ತಾಳಿ’!

Team Udayavani, Dec 19, 2018, 6:00 AM IST

ಅಲ್ಲೆಲ್ಲೋ ಮುಂಬೈ, ದಿಲ್ಲಿಯಲ್ಲಿ ಆ ನಟಿ ತಾಳಿ ಕಟ್ಟಿದಳು! ಇಷ್ಟಕ್ಕೆ ಎಲ್ಲವೂ ಮುಗಿಯಿತೂ ಅಂತ ಅಲ್ಲ. ಆಕೆಯ ಕಟ್ಟಿದ ತಾಳಿಯ ವಿನ್ಯಾಸ ಎಂಥದ್ದು ಎನ್ನುವುದಕ್ಕೂ ತಲೆಕೆಡಿಸಿಕೊಳ್ಳುವ ಹೆಣ್ಮಕ್ಕಳಿದ್ದಾರೆ. ಇದಕ್ಕೆ ಪೂರಕವಾಗಿ ಫ್ಯಾಶನ್‌ ವಿನ್ಯಾಸಕಾರರು ಅಂಥದ್ದೇ ಮಾದರಿಯನ್ನು ಮಾರುಕಟ್ಟೆಯ ಮುಂದಿಡುತ್ತಾರೆ. ಇತ್ತೀಚೆಗೆ ದೀಪಿಕಾ, ಪ್ರಿಯಾಂಕಾಳ ಕೊರಳಿನಲ್ಲಿ ತೂಗಿಬಿದ್ದ ವಿಶಿಷ್ಟ ಮಾಂಗಲ್ಯ ಸೂತ್ರ, ಇನ್ನು ಕೆಲವೇ ದಿನಗಳಲ್ಲಿ ನಮ್ಮ ಓಣಿಗಳ ನವವಿವಾಹಿತೆಯರ ಕುತ್ತಿಗೆಯಲ್ಲೂ ಹಾಜರಿ ಹಾಕುತ್ತದೆ…

ಪ್ರೈಮ್‌ಟೈಮ್‌ನಲ್ಲಿ ಮೂಡಿಬರುತ್ತಿರುವ ಒಂದು ಸೀರಿಯಲ್ಲು. ಮನೆಯ ಸೋಫಾದ ಮೇಲೆ ಕುಳಿತ ಗೃಹಿಣಿಯ ಮನಸ್ಸು ಅದಾಗಲೇ ಟಿವಿಯೊಳಗೇ ಠಿಕಾಣಿ ಹೂಡಿದೆ. ಗಂಡ ಬಂದು ಪಕ್ಕದಲ್ಲಿ ಕುಳಿತಿದ್ದೂ ಆಕೆಗೆ ಗೊತ್ತಿಲ್ಲ. ಅವಳ ಕಣ್ಣಿಗೆ ಮೋಡಿ ಮಾಡಿದವಳು, ಧಾರಾವಾಹಿಯ ನಾಯಕಿ. ಅವಳೆಷ್ಟು ಮುದ್ದಾಗಿದ್ದಾಳೆ! ಎಂಥ ಸೀರೆ ಉಟ್ಟಿದ್ದಾಳೆ! ಇವೆಲ್ಲ ಉದ್ಗಾರಗಳಾಚೆ, ಆ ನಾಯಕಿ ಮತ್ತೂಂದು ಮೋಡಿಗೆ ಮುನ್ನುಡಿ ಹಾಡಿದ್ದಾಳೆ. ಅವಳ ಕೊರಳಿನಲ್ಲಿ ಇವತ್ತು ಹೊಸ ವಿನ್ಯಾಸದ ಮಾಂಗಲ್ಯ ಸೂತ್ರ ತೂಗುತ್ತಿದೆ. ಎಷ್ಟು ಎಳೆಯ ಮಾಂಗಲ್ಯಸರ ಅದು? ಕರಿಮಣಿ ಎಷ್ಟಿದೆ? ಪದಕದ ವಿನ್ಯಾಸ ಹೇಗಿದೆ?- ಎಂಬುದನ್ನೆಲ್ಲ ಗೃಹಿಣಿಯ ಕಂಗಳು, ಬಹುಬೇಗನೆ ಅಂದಾಜಿಸುತ್ತಾ, ಲೋಕವನ್ನು ಮರೆತಿವೆ. ಫ್ಯಾಶನ್‌ ಸ್ಕ್ಯಾನಿಂಗ್‌ ಅನ್ನೋದೇ ಇದಕ್ಕೆ. ಇದು ಹೆಣ್ಣಿಗಷ್ಟೇ ಸಿದ್ಧಿಸಿದ ಕಲೆ. ಗೃಹಿಣಿಯ ಪಾಲಿಗೆ, ಟಿವಿಯಲ್ಲಿ ಝಗಮಗಿಸುವ ಚದುರೆಯು ಕೇವಲ ಧಾರಾವಾಹಿಯಲ್ಲಿ ಬಂದು, ನಾಲ್ಕು ಡೈಲಾಗ್‌ ಹೊಡೆದು, ಮಿಂಚಿ ಹೋಗುವ ಮಾಯಾವಿ ಅಲ್ಲ. ಅವಳು ಇವತ್ತಿನ ಟ್ರೆಂಡ್‌ನ‌ ರಾಯಭಾರಿ. ಮಹಿಳಾ ಫ್ಯಾಶನ್‌ ಜಗತ್ತಿನ ಹೊಸತನ್ನು, ತಾ ಮೊದಲು ಎಂದು ಧರಿಸಿ, ಹೊಟ್ಟೆಕಿಚ್ಚಾಗುವಂತೆ ಪ್ರದರ್ಶಿಸಿ, ಆಸೆ ಹುಟ್ಟಿಸುವ ಠೀವಿ ಜೀವಿ. ಅವಳನ್ನು ಅನುಸರಿಸುವ ಜಗತ್ತು ದೊಡ್ಡದು.

“ಮಾಂಗಲ್ಯ ಸರ ಸೌಂದರ್ಯ ಪ್ರತೀಕವಲ್ಲ. ಅದು ಬಾಂಧವ್ಯದ ಸೂತ್ರ’ ಎನ್ನುವ ಕಾಲದಲ್ಲಿ ಈಗ ನಾವಿಲ್ಲ. ಕಿವಿಯೋಲೆಯಂತೆ, ಕಾಲ್ಗೆಜ್ಜೆಯಂತೆ, ಉಂಗುರದಂತೆ, ಬಳೆ- ನೆಕ್ಲೇಸುಗಳಂತೆ “ಮಂಗಳಸೂತ್ರವೂ ಚೇಂಜ್‌ ಇದ್ದರೆ ಚೆನ್ನ’ ಎನ್ನುವ ಆಸೆಯೊಂದು ಪ್ರತಿ ಹೆಣ್ಮಕ್ಕಳಲ್ಲಿ ಚಿಗುರಿಬಿಟ್ಟಿದೆ. ಮಾಂಗಲ್ಯ ಸೂತ್ರವು ಎಷ್ಟೇ ವಿನ್ಯಾಸಗಳನ್ನು ಬದಲಿಸಿದರೂ, “ಅದು ಪತಿಯ ಆಯುಷ್ಯದ ಸಂಕೇತ’ ಎನ್ನುವ ನಂಬಿಕೆ ಈಗಲೂ ಇದೆ. ಅಂದೆಲ್ಲ ಅರಿಶಿನ ಕೊಂಬಿನ ತಾಳಿಯೇ, ದಾಂಪತ್ಯದ ಸೂತ್ರ. ಯಾವಾಗ ಹೆಣ್ಣಿಗೆ ಚಿನ್ನದ ಮೇಲಿನ ವ್ಯಾಮೋಹ ಹೆಚ್ಚಿತೋ, ಅದು ಕ್ರಮೇಣ ಮಾಂಗಲ್ಯಸರವನ್ನೂ ಸ್ಪರ್ಶಿಸಿತು.

ಹಾಗೆ ನೋಡಿದರೆ, ಮಾಂಗಲ್ಯಸೂತ್ರದ ವಿನ್ಯಾಸದ ಪಲ್ಲಟಗಳಲ್ಲಿ ಸಿನಿಮಾ, ಧಾರಾವಾಹಿ, ರೂಪದರ್ಶಿಯರದ್ದೇ ಬಹುಮುಖ್ಯ ಪಾತ್ರ. ಹೆಣ್ಣು ಹೀರೋಯಿನ್‌ ಆಗಿ, ಸೌಂದರ್ಯದ ನಾನಾ ಅವತಾರತ ತಾಳಿ ಟಿವಿಯಲ್ಲಿ ಬಂದಾಗ, ಅದನ್ನು ನೋಡುತ್ತಾ ಕುಳಿತಾಕೆಯೂ ತನ್ನನ್ನೇ ಆ ಸ್ಥಾನದಲ್ಲಿ ಕಲ್ಪಿಸಿಕೊಂಡಳು. ಅವಳು ಉಟ್ಟ ಸೀರೆ, ಧರಿಸಿದ ಆಭರಣ, ಮೇಕಪ್ಪು… ಎಲ್ಲವೂ ಈಕೆಯನ್ನೂ ಇಂಚಿಂಚಾಗಿ ಪ್ರಭಾವಿಸತೊಡಗಿತು. ಹಾಗೆ ಪ್ರಭಾವಿಸಿದ ಅಂಶಗಳಲ್ಲಿ ಮಂಗಲಸೂತ್ರವೂ ಒಂದು. ನಟಿಯ ಕೊರಳಲ್ಲಿ ಅದ್ಧೂರಿಯ, ದೊಡ್ಡ- ದೊಡ್ಡ ಮಾಂಗಲ್ಯ ಸರಗಳು ತೂಗಿಬಿದ್ದಾಗ, ವೀಕ್ಷಕಿಯೂ ಅದನ್ನೇ ಬಯಸಿದಳು. ಮತ್ತೆ ಕೆಲವು ನಟಿಯರು, ಸ್ಟೆçಲಿಷ್‌ ಮಾಂಗಲ್ಯಸೂತ್ರಗಳನ್ನು ತೊಟ್ಟು, ಅಭಿಮಾನಿನಿಯರ ಕಂಗಳಲ್ಲಿ ಆಸೆ ಹೊತ್ತಿಸಿಬಿಟ್ಟರು. ಅದೇ ಥರದ ಸರಗಳನ್ನು ತಮ್ಮ ಮದುವೆಯಲ್ಲೂ ಮಾಡಿಸಿ, ಆಸೆಯನ್ನು ತಣಿಸಿಕೊಂಡವರಿಗೆ ಲೆಕ್ಕವೇ ಇಲ್ಲ. ಈಗಂತೂ ಚಿಕ್ಕದಾದ, ಚೊಕ್ಕದಾದ ಮಾಂಗಲ್ಯ ಸರಗಳು ಹೊಸ ಟ್ರೆಂಡ್‌ ಅನ್ನೇ ಸೃಷ್ಟಿಸಿಬಿಟ್ಟಿವೆ.

ಬಾಲಿವುಡ್‌ನ‌ ಗಾಳಿ
ಅಲ್ಲೆಲ್ಲೋ ಮುಂಬೈ, ದಿಲ್ಲಿಯಲ್ಲಿ ಆ ನಟಿ ತಾಳಿ ಕಟ್ಟಿದಳು! ಇಷ್ಟಕ್ಕೆ ಎಲ್ಲವೂ ಮುಗಿಯಿತೂ ಅಂತ ಅಲ್ಲ. ಆಕೆಯ ಕಟ್ಟಿದ ತಾಳಿಯ ವಿನ್ಯಾಸ ಎಂಥದ್ದು ಎನ್ನುವುದಕ್ಕೂ ತಲೆಕೆಡಿಸಿಕೊಳ್ಳುವ ಹೆಣ್ಮಕ್ಕಳಿದ್ದಾರೆ. ಇದಕ್ಕೆ ಪೂರಕವಾಗಿ ಫ್ಯಾಶನ್‌ ವಿನ್ಯಾಸಕಾರರು ಅಂಥದ್ದೇ ಮಾದರಿಯನ್ನು ಮಾರುಕಟ್ಟೆಗೆ ಬಿಡುತ್ತಾರೆ. ಅದರಲ್ಲೂ ಇತ್ತೀಚೆಗೆ ಶಿಲ್ಪಾ ಶೆಟ್ಟಿ, ಸೋನಂ ಕಪೂರ್‌, ಅನುಷ್ಕಾ ಶರ್ಮ, ದೀಪಿಕಾ ಪಡುಕೋಣೆ ಹಾಗೂ ಪ್ರಿಯಾಂಕಾ ಚೋಪ್ರಾ ಅವರು ತಮ್ಮ ವಿವಾಹಗಳಲ್ಲಿ ತೊಟ್ಟ ಮಂಗಳಸೂತ್ರ, ಆ ಹೊತ್ತಿನಲ್ಲಿ ಬ್ರೇಕಿಂಗ್‌ ನ್ಯೂಸೇ ಆಗಿಹೋದವು. ನಟಿ ದೀಪಿಕಾ ಪಡುಕೋಣೆಯ ತಾಳಿಯಲ್ಲಿನ ವಜ್ರದ ಪೆಂಡೆಂಟ್‌ ಬರೋಬ್ಬರಿ 20 ಲಕ್ಷ ರೂ. ಬೆಲೆಬಾಳುತ್ತದೆ. ಪ್ರಿಯಾಂಕಾ ಚೋಪ್ರಾಳ ಮಾಂಗಲ್ಯಸೂತ್ರದಲ್ಲಿ ಕರಿ ಮಣಿಗಳು, ನೀರಿನ ಹನಿಯ ಆಕಾರದ ವಜ್ರದ ಪೆಂಡೆಂಟ್‌ನ ಅಕ್ಕಪಕ್ಕದಲ್ಲಿವೆ. ಇಡೀ ಸರದಲ್ಲಿ ಅವೇ ಹೈಲೈಟ್‌. ಇದನ್ನು ಪಾಶ್ಚಾತ್ಯ ಉಡುಗೆ ಜೊತೆಯೂ ತೊಡಬಹುದು. ಮದುವೆ ಬಳಿಕ ಆ್ಯಪ್‌ ಒಂದರ ಲಾಂಚ್‌ಗಾಗಿ ಬಂದ ಪ್ರಿಯಾಂಕಾ ಚೋಪ್ರಾ ತನ್ನ ಮಾಂಗಲ್ಯಸೂತ್ರವನ್ನು ಗೌನ್‌ ಮೇಲೆ ತೊಟ್ಟಾಗ, ಆಕೆಯ ರೂಪಸಿರಿಯ ಮೇಲೆ ಕಣ್‌ ಹಾಕಿದ ಕನ್ಯಾಮಣಿಗಳೂ ಅನೇಕರು. “ಪ್ರತಿಬಾರಿ ಹೆಸರಾಂತ ನಟಿಯರ ವಿವಾಹದ ಬಳಿಕ ಮಾಂಗಲ್ಯ ಸೂತ್ರದಲ್ಲಿ ನಾನಾ ಮಾರ್ಪಾಡುಗಳು ಆಗುತ್ತವೆ. ಇದು ನಟಿಯ ಮೇಲೆ ತೋರುವ ಅಭಿಮಾನ ಹೌದಾದರೂ, ಆಕೆಯಂತೆ ತಾನೂ ಮಿನುಗಬೇಕೆಂಬ ಆಸೆಯೂ ಅನೇಕರಲ್ಲಿರುತ್ತದೆ’ ಎನ್ನುವುದು ಆಭರಣ ವಿನ್ಯಾಸಕರೊಬ್ಬರ ಮಾತು.

ಟ್ರೆಂಡ್‌ಗೆ ಅಂಟಿದ ವಿವಾದ
ಮಂಗಳಸೂತ್ರಗಳು ಫ್ಯಾಷನ್‌ ಲೋಕದಲ್ಲಿ ಟ್ರೆಂಡ್‌ನ‌ ಜತೆಗೆ ವಿವಾದವನ್ನೂ ಸೃಷ್ಟಿಸಿದವು. ನಟಿ ಶಿಲ್ಪಾ ಶೆಟ್ಟಿ ತಮ್ಮ ಮಾಂಗಲ್ಯ ಸೂತ್ರವನ್ನು ಬ್ರೇಸ್ಲೆಟ್‌ನಂತೆ ಧರಿಸುತ್ತಿರುವುದಕ್ಕೂ ಆಕ್ಷೇಪ ಎದುರಾಗಿತ್ತು. ಇದೇ ಥರ ನಟಿ ಸೋನಂ ಕಪೂರ್‌ ಮಾಂಗಲ್ಯಸೂತ್ರದಲ್ಲಿ ತನ್ನ ಹಾಗೂ ತನ್ನ ಪತಿಯ ಜನ್ಮ ರಾಶಿ ಚಿಹ್ನೆಗಳನ್ನು ಮೂಡಿಸಿ, ಬ್ರೇಸ್ಲೆಟ್‌ನಂತೆ ಧರಿಸಿದಾಗ, ಸಾಮಾಜಿಕ ಜಾಲತಾಣಗಳು ಟೀಕೆಯ ಬಾಣಗಳನ್ನು ಬಿಟ್ಟವು. “ಹೃದಯಕ್ಕೆ ಹತ್ತಿರವಾಗಿರಬೇಕಿದ್ದ ಮಾಂಗಲ್ಯಸೂತ್ರವನ್ನು ಕೈಗೆ ಕಟ್ಟಿಕೊಂಡು ಫ್ಯಾಷನ್‌ ಸ್ಟೇಟ್‌ಮೆಂಟ್‌ ನೀಡುತ್ತಿರುವ ನಟಿಯರು ಸಂಪ್ರದಾಯ ಮತ್ತು ಪರಂಪರೆಯನ್ನು ಗಾಳಿಗೆ ತೂರುತ್ತಿದ್ದಾರೆ. ನಾಳೆ ಇವರುಗಳು ತಾಳಿಯನ್ನು ಗೆಜ್ಜೆಯಂತೆ ಕಟ್ಟಿಕೊಂಡರೆ, ಅದೂ ಟ್ರೆಂಡ್‌ ಆಗುತ್ತದೆ! ಇವರನ್ನು ಮಾದರಿಯಾಗಿ ಕಾಣುವ ಕುರುಡು ಅಭಿಮಾನಿಗಳೂ ನಾಳೆ ಸಂಪ್ರದಾಯವನ್ನು ತೊರೆದು ಮನಸ್ಸಿಗೆ ಬಂದಂತೆ ಆಡುತ್ತಾರೆ’ ಎಂದು ಕೆಲವರು ಬೇಸರ ವ್ಯಕ್ತಪಡಿಸಿದರು. ಮತ್ತೆ ಹಲವರು, “ಸೆಲೆಬ್ರೆಟಿಗಳೂ ಮನುಷ್ಯರಲ್ಲವೇ? ಅವರಿಗೂ ಪರ್ಸನಲ್‌ ಲೈಫ್ ಇದೆ. ಅವರಿಗೆ ಇಷ್ಟಬಂದಂತೆ ಬದುಕಲು ಹಕ್ಕಿದೆ’ ಎನ್ನುತ್ತಾ ತಾರೆಗಳ ಪರ ನಿಂತರು.

ಇದೆಲ್ಲದರ ನಡುವೆ ಆಭರಣ ತಯಾರಕರು ಮಾಡರ್ನ್ ಮಹಿಳೆಗಾಗಿ ಉಂಗುರ ರೂಪದಲ್ಲಿ ಮಾಂಗಲ್ಯ ಸೂತ್ರಗಳನ್ನು ತಯಾರಿಸಲೂ ಮುಂದಾದರು. ಉಂಗುರದಲ್ಲಿ ಕರಿಮಣಿಗಳನ್ನು ಬಳಸಿ, ಬಂಗಾರದ ಬೆಸುಗೆ ನೀಡಿ ಹೊಸ ಲುಕ್‌ ಕೊಟ್ಟರು. ಸಾಂಪ್ರದಾಯಿಕ ಹಾಗೂ ಪಾಶ್ಚಾತ್ಯ, ಎರಡೂ ಉಡುಗೆಗಳ ಜೊತೆ ಚೆನ್ನಾಗಿ ಕಾಣುವ ಈ ಮಾಂಗಲ್ಯಸೂತ್ರದ ಉಂಗುರಕ್ಕೆ ಅವರ ಊಹೆಯಂತೆ ಬೇಡಿಕೆಯೂ ಹೆಚ್ಚಾಯಿತು! ಮಂಗಳ ಸೂತ್ರ ವಿನ್ಯಾಸದ ಮಾದರಿ ಬದಲಾಗಿರಬಹುದು, ತೊಡುವ ವಿಧಾನವೂ ಬೇರೆಯೇ ಆಗಿರಬಹುದು. ಆದರೆ, ವಿವಾಹದ ನಂತರ ಅದನ್ನು ಧರಿಸಲೇಬೇಕೆಂಬ ಭಾವ ಯಾವತ್ತೂ ಬದಲಾಗಿಲ್ಲ. ಹಾಗಾಗಿ, ಮಾಂಗಲ್ಯಸೂತ್ರಕ್ಕೆ ನಾನಾ ಮಾರ್ಪಾಡುಗಳ ಸ್ಪರ್ಶ ಸಿಗುತ್ತಲೇ ಹೋಗುತ್ತಿದೆ. 

ಲಕ್ಷ ಲಕ್ಷಗಳನು ದಾಟಿ…
ಬೇರೆಲ್ಲ ನಟಿಮಣಿಯರಿಗಿಂತ ಬಾಲಿವುಡ್‌ ನಟಿಯರ ಮಂಗಳಸೂತ್ರ ಸಖತ್‌ ದುಬಾರಿ. ಒಬ್ಬೊಬ್ಬರ ಕೊರಳಿನಲ್ಲೂ ಲಕ್ಷಾಂತರ ರೂ. ಮೌಲ್ಯದ ಸೂತ್ರಗಳೇ ಕಾಣಿಸುತ್ತವೆ. ದೀಪಿಕಾ ಪಡುಕೋಣೆ (20 ಲಕ್ಷ ರೂ.), ಅನುಷ್ಕಾ ಶರ್ಮಾ (50 ಲಕ್ಷ ರೂ.), ಶಿಲ್ಪಾ ಶೆಟ್ಟಿ (30 ಲಕ್ಷ ರೂ.), ಐಶ್ವರ್ಯಾ ರೈ (45 ಲಕ್ಷ ರೂ.), ಕಾಜೋಲ್‌ (21 ಲಕ್ಷ ರೂ.), ಮಾಧುರಿ ದೀಕ್ಷಿತ್‌ (8.5 ಲಕ್ಷ ರೂ.) ಮೌಲ್ಯದ ಮಂಗಳಸೂತ್ರವನ್ನು ಕಟ್ಟಿಸಿಕೊಂಡಿದ್ದಾರೆ.
     
ಕೈಗಳಲ್ಲಿ ಇವರ ತಾಳಿ!
ಕೆಲವು ನಟಿಯರ ಕುತ್ತಿಗೆಯಲ್ಲಿ ತಾಳಿ ಕಾಣಿಸಲಿಲ್ಲವೆಂದರೆ, ಕೂಡಲೇ ಅವರ ಕೈಗಳನ್ನು ನೋಡಬೇಕು. ಈ ಪರಂಪರೆಗೆ ಮೊದಲು ನಾಂದಿ ಹಾಡಿದ್ದು ಶಿಲ್ಪಾ ಶೆಟ್ಟಿ. ಅವರು ಬ್ರೇಸ್ಲೆಟ್‌ನಂತೆ ಕೈಗೆ ತಾಳಿ ಕಟ್ಟಿಕೊಂಡಿದ್ದಾರೆ. ಸೋನಂ ಕಪೂರ್‌ ಕೂಡ ತಮ್ಮ ಮಾಂಗಲ್ಯಸೂತ್ರದಲ್ಲಿ ಪತಿಯ ಜನ್ಮ ರಾಶಿ ಚಿಹ್ನೆಗಳನ್ನು ಮೂಡಿಸಿ, ಬ್ರೇಸ್ಲೆಟ್‌ನಂತೆ ಧರಿಸಿದ್ದಾರೆ. ಪ್ರಿಯಾಂಕಾ ಚೋಪ್ರಾ ಕೂಡ ವಿವಾಹ ಪೂರ್ವದಲ್ಲಿ ಮಂಗಳಸೂತ್ರವನ್ನೇ ಹೋಲುವಂಥ ಬ್ರೇಸ್‌ಲೆಟ್‌ ತೊಟ್ಟು ಅಚ್ಚರಿ ಮೂಡಿಸಿದ್ದರು. 

ಅದಿತಿಮಾನಸ ಟಿ.ಎಸ್‌.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

  • ದೇವರೇ, ಬೇವು ಸ್ವಲ್ಪವೇ ಕೊಡು. ಮಡಿಲ ತುಂಬಾ ಬೆಲ್ಲ ನೀಡು. ನಿನ್ನ ಮಡಿಲಲ್ಲಿ ಬೆಳೆ ಬೆಳೆದು ಸಾವಿರಾರು ಜನರಿಗೆ ಅನ್ನ ನೀಡುವ, ನಿನ್ನನ್ನೇ ನಂಬಿದ ಜನರ ಕೈಬಿಡದಿರು....

  • ಗಾಢ ಬಣ್ಣಗಳನ್ನು ಇಷ್ಟಪಡುವವರಿಗೆ ಕೆಂಪು ಬಣ್ಣದ ಮೇಲೆ ಖಂಡಿತಾ ಒಲವಿರುತ್ತದೆ. ಕೆಂಪು ಅಶುಭದ ಸಂಕೇತ ಅಂತ ಕೆಲವರು ನಂಬುತ್ತಾರಾದರೂ, ಫ್ಯಾಷನ್‌ ಪ್ರಪಂಚಕ್ಕೆ...

  • "ವಯಸ್ಸನ್ನ ನೋಡಿಕೊಂತಾ ಕೂತರೆ ಹೊಟ್ಟೆಪಾಡು ನಡೀಬೇಕಲ್ಲ? ಹೊಟ್ಟೆಗೆ ಒಂದೊತ್ತಿನ ಊಟ ಹಾಕೋರಿಲ್ಲ ಈಗ. ಇದ್ದ ಆಯಸ್ಸನ್ನೆಲ್ಲ ಮಕ್ಕಳ ಬೆಳವಣಿಗೆಗೆ ಮುಡಿಪಾಗಿಟ್ಟಾಯ್ತು....

  • ನಂಬಿದ ಮೌಲ್ಯಗಳಿಗೆ ಧಕ್ಕೆ ಉಂಟಾದಾಗ, ಶರೀರ ಕುಸಿಯುತ್ತದೆ. ಮೈಕೈ ನೋವುತ್ತದೆ. ಮನಸ್ಸಿನ ಪ್ರತಿಯೊಂದು ಆಲೋಚನೆಗಳಿಗೆ ಮತ್ತು ಭಾವನೆಗಳಿಗೆ ಅಂಗಾಂಗಗಳು ಪ್ರತಿಕ್ರಿಯಿಸುತ್ತವೆ. 48ರ...

  • ಬ್ಯೂಟಿ ಪಾರ್ಲರ್‌ಗೆ ಹೋಗಿ ಫೇಶಿಯಲ್‌ ಮಾಡಿಸಿಕೊಳ್ಳೋದು ಮಹಾ ಬೋರು ಅಂತ ಅನ್ನಿಸಿದೆಯಾ? ನನಗಂತೂ ಹಾಗೇ ಅನ್ನಿಸ್ತಿತ್ತು. ಅದಕ್ಕೇ ಪಾರ್ಲರ್‌ಗೆ ಹೋಗೋದನ್ನೇ...

ಹೊಸ ಸೇರ್ಪಡೆ