ಮದ್ವೇಗಾ? ಜಸ್ಟ್‌ ಹೋಗ್ಬರೋಣ…

ಅಯ್ಯೋ, ನಾವ್‌ ಬಂದಿದ್ದೇ ಹೆಚ್ಚು!

Team Udayavani, May 15, 2019, 6:00 AM IST

ಹಿಂದೆಲ್ಲಾ ಮದುವೆಗೆ ಇನ್ನೂ ನಾಲ್ಕೈದು ದಿನ ಇರುವಾಗಲೇ ವಧು- ವರನ ಮನೆ ಬಂಧುಗಳಿಂದ, ಆಪ್ತೆಷ್ಟರಿಂದ ತುಂಬಿ ಹೋಗುತ್ತಿತ್ತು. ಮದುವೆ ಮನೆಯ ಕೆಲಸಗಳಲ್ಲಿ ಊರ ಮಂದಿಯೂ ಕೈ ಜೋಡಿಸುತ್ತಿದ್ದರು. ಸಹಜವಾಗಿಯೇ, ಅದೊಂದು ಹಬ್ಬದ ಸಂಭ್ರಮದಂತೆ ಭಾಸವಾಗುತ್ತಿತ್ತು. ಆದರೆ ಈಗ…

ಇದು ಶುಭಕಾರ್ಯಗಳ ಸೀಸನ್‌. ಕರುಳು ಬಳ್ಳಿ, ನೆಂಟರಿಷ್ಟರು, ಆತ್ಮೀಯರು, ಸ್ನೇಹಿತರಿಂದ ಹತ್ತು ಹಲವು ಕಾರ್ಯಕ್ರಮಗಳ ಆಹ್ವಾನವಿರುತ್ತದೆ. ನಮ್ಮಂಥ ನಗರವಾಸಿಗರಿಗೆ ಒಂದು ಸಮಾರಂಭದಲ್ಲಿ ಭಾಗಿಯಾಗುವುದೆಂದರೆ ಎಷ್ಟು ಕಷ್ಟ. ಉದ್ಯೋಗಸ್ಥರಿಗೆ ರಜೆಯ ಸಮಸ್ಯೆ, ಬ್ಯುಸಿನೆಸ್‌ ಮಂದಿಗೆ ಅವರ ಒತ್ತಡಗಳು, ಶಾಲೆ- ಕಾಲೇಜು ಓದುವ ಮಕ್ಕಳಿದ್ದರೆ ಅವರ ಬೇಕು- ಬೇಡಗಳು… ಆದರೂ, ಬಾಂಧವ್ಯಕ್ಕೆ ಗೌರವವಿಟ್ಟು, ಸಲಿಗೆಗೆ ಕಟ್ಟುಬಿದ್ದು, ಸಮಾರಂಭಗಳಿಗೆ ಹೋಗಬೇಕು.

ಒಂದು ದಿನದ ಮಟ್ಟಿಗೆ ಊರಿಗೆ ಹೋಗಿ ಕಾರ್ಯಕ್ರಮ ಮುಗಿಸಿ, ಸಂಜೆಗೆ ವಾಪಸ್‌ ಬಸ್ಸು ಹತ್ತಿ ಮರುದಿನ ಎಂದಿನಂತೆ ಕರ್ತವ್ಯಕ್ಕೆ ಹಾಜರಾಗುವ ಅನಿವಾರ್ಯ ಒಂದೆಡೆಯಾದರೆ, ಕೆಲವೊಮ್ಮೆ ಕಾರ್ಯಕ್ರಮ ಬೆಂಗಳೂರಿನಲ್ಲೇ ನಡೆಯುತ್ತಿದ್ದರೂ ಆಹ್ವಾನ ನೀಡಿದವರು ಎಷ್ಟು ಆಪ್ತರು, ಕಾರ್ಯಕ್ರಮದ ಸ್ಥಳ ತಲುಪಲು ಎಷ್ಟು ಸಮಯ ಬೇಕು ಎಂದೆಲ್ಲಾ ಯೋಚಿಸಿ ಫೋನಿನಲ್ಲೇ ಶುಭಾಶಯ ಹೇಳುವುದು ಇನ್ನೊಂದೆಡೆ.

ಇದು ಕೇವಲ ನಗರದ ಮಂದಿಯ ಕತೆಯಲ್ಲ. ಇತ್ತೀಚೆಗೆ, ಹಳ್ಳಿಗಳಲ್ಲಿಯೂ ಮದುವೆ- ಮುಂಜಿಗಳಿಗೆ ಊಟದ ಸಮಯಕ್ಕೂ ಸ್ವಲ್ಪ ಮುಂಚೆ ತಲುಪಿ, ಎದುರಿಗೆ ಸಿಕ್ಕವರನ್ನೆಲ್ಲ ಮಾತನಾಡಿಸಿ, ಒಂದಷ್ಟು ಫೋಟೋ ಕ್ಲಿಕ್ಕಿಸಿಕೊಂಡು, ವಧು-ವರರನ್ನು ಮಾತನಾಡಿಸಿ, ಕಾರ್ಯಕ್ರಮದ ಅದ್ಧೂರಿತನ, ವೈಭವವನ್ನೆಲ್ಲ ಕಣ್ಣಲ್ಲೇ ಅಳೆದು, ಊಟ ಮಾಡಿ, ತಾಂಬೂಲ ಸ್ವೀಕರಿಸಿ ಅಲ್ಲಿಂದ ಜಾಗ ಖಾಲಿ ಮಾಡುವುದು ಸಾಮಾನ್ಯವಾಗಿದೆ. ಕೆಲವೇ ಕೆಲವು ಹಳ್ಳಿಗಳಲ್ಲಿ, ದೊಡ್ಡ ಕುಟುಂಬಗಳಿರುವಲ್ಲಿ, ಮದುವೆ ಸಡಗರ, ನೆಂಟರಿಷ್ಟರ ಕಲರವ, ಹರಟೆ-ನಗು ಇತ್ಯಾದಿ ಕಂಡುಬರುತ್ತದೆ. ಉಳಿದಂತೆ, ಮದುವೆಯಂಥ ದೊಡ್ಡ ಸಮಾರಂಭಗಳು ಕೂಡಾ ಒಂದು ಹೊತ್ತಿನ ವಿಸಿಟ್‌ಗೆ ಸೀಮಿತವಾಗಿರುವುದು ವಿಷಾದನೀಯ.

ಹಿಂದೊಂದು ಕಾಲವಿತ್ತು…
ಹಿಂದಿನ ತಲೆಮಾರಿನ ಕಾರ್ಯಕ್ರಮಗಳೆಂದರೆ ಅದರ ಗಮ್ಮತ್ತೇ ಬೇರೆ ಇತ್ತು. ನಮ್ಮ ಅಜ್ಜ-ಅಜ್ಜಿಯರ ಕಾಲದಲ್ಲಿ, ಮಲೆನಾಡಿನಲ್ಲಿ ಮದುವೆಯೆಂದರೆ 7 ದಿನಗಳ ಕಾರ್ಯಕ್ರಮವಂತೆ! ಇವೆಂಟ್‌ ಮ್ಯಾನೇಜ್‌ಮೆಂಟ್‌ನ ಕಾಲವಲ್ಲ ಅದು. ಪರಸ್ಪರ ಸಹಕಾರದ ಬಲದ ಮೇಲೆಯೇ ಕಾರ್ಯಕ್ರಮಗಳು ಯಶಸ್ವಿಗೊಳ್ಳುತ್ತಿದ್ದವು. ದೊಡ್ಡ ಕುಟುಂಬಗಳಿರುತ್ತಿದ್ದ ಕಾರಣ, ಮನೆ ಮಂದಿ, ಅಕ್ಕ ತಂಗಿಯರು, ತವರು ಮನೆ ನೆಂಟರಿಷ್ಟರೆಲ್ಲರೂ ಒಂದು ವಾರದ ಮುಂಚೆಯೇ ಕಾರ್ಯಕ್ರಮಕ್ಕೆ ಅಣಿ ಮಾಡಿಕೊಡಲು ಬರುತ್ತಿದ್ದರು. ಬಾಲ್ಯದಲ್ಲಿ ನಾವೂ ಹೀಗೆ ಅಮ್ಮನ ಜೊತೆ ನೆಂಟರ ಮನೆಗೆ ಹೋಗಿ, ನಾಲ್ಕಾರು ದಿನ ಅಲ್ಲೇ ಝಂಡಾ ಊರಿ, ಸಂಭ್ರಮಿಸಿದ್ದು ನೆನಪಿದೆ.

ದೊನ್ನೆ-ಬಾಳೆ ಶಾಸ್ತ್ರ
ಮನೆಯ ಎದುರಿನ ವಿಶಾಲ ಅಂಗಳದಲ್ಲಿ ಚಪ್ಪರ ಹಾಕಿ, ಮದುವೆ ನಡೆಸುತ್ತಿದ್ದ ಕಾಲವದು. ಈಗಲೂ ಕೆಲವು ಹಳ್ಳಿಗಳಲ್ಲಿ ಹಾಗೆ ನಡೆಯುತ್ತದೆ. ಊರಿನಲ್ಲಿ ಯಾರದ್ದಾದರೂ ಮದುವೆಯೆಂದರೆ, ಅದು ಇಡೀ ಊರಿಗೆ “ಹಬ್ಬ’ವಿದ್ದಂತೆ. ಮದುವೆಗೂ ಎರಡು ದಿನ ಮುಂಚಿತವಾಗಿ ಊರಿನವರೆಲ್ಲ ಬಂದು, ತಮ್ಮ ಕೈಲಾದಷ್ಟು ಸಹಾಯ ಮಾಡುತ್ತಾರೆ. ಇದಕ್ಕೆ “ದೊನ್ನೆ- ಬಾಳೆ ಶಾಸ್ತ್ರ’ ಎಂದು ಹೆಸರು. ಊಟಕ್ಕೆ, ಬಾಳೆ ಎಲೆಗಳನ್ನು ಕತ್ತರಿಸಿ ಸ್ವತ್ಛಗೊಳಿಸುವುದು, ದೊನ್ನೆ ತಯಾರಿ, ಅಡುಗೆಗೆ ತರಕಾರಿಗಳನ್ನು ಸ್ವತ್ಛಗೊಳಿಸಿ ಹೆಚ್ಚಿ ಕೊಡುವುದು, ತಾಂಬೂಲ ತಯಾರಿ, ಮದುವೆ ಚಪ್ಪರಕ್ಕೆ ಕಂಬ ಹೂತು, ಮಂಟಪ ಕಟ್ಟಿ, ತೋರಣಗಳ ಸಿದ್ಧತೆ, ನಂತರದಲ್ಲಿ ದೊನ್ನೆ ಬಾಳೆ ಶಾಸ್ತ್ರಕ್ಕೆ ಬಂದವರಿಗೆ ತಿಂಡಿ ಮತ್ತು ಪಾನೀಯದ ವ್ಯವಸ್ಥೆ ಇರುತ್ತದೆ. ಬೆಲ್ಲ ಹಾಕಿ ಮಾಡಿದ ಅವಲಕ್ಕಿ, ಅರಳು, ಮಂಡಕ್ಕಿ, ಕಾಫಿ, ಕಷಾಯ… ಆಹಾ, ಅದರ ರುಚಿ ಬಲ್ಲವನೇ ಬಲ್ಲ! ಹೀಗೆ ಹೆಂಗಸರು- ಗಂಡಸರೆಂಬ ಭೇದಭಾವವಿಲ್ಲದೆ, ಸಂಜೆ ಊರವರೆಲ್ಲರೂ ಸುತ್ತಲೂ ಕುಳಿತು ಕಥೆ ಹೇಳುತ್ತಾ, ಒಬ್ಬರಿಗೊಬ್ಬರ ಕಾಲು ಎಳೆಯುತ್ತ ಒಟ್ಟಾಗಿ ಸಂತಸ ಪಡುವ ಕಾರ್ಯಕ್ರಮವೇ ಒಂದು ಸುಖ.

ಅಷ್ಟಕ್ಕೇ ಮುಗಿಯದೆ, ಮದುವೆಯ ಸಮಯದಲ್ಲಿ ಅತಿಥಿ ಸತ್ಕಾರಕ್ಕೆಂದು ಅಕ್ಕಪಕ್ಕದ ಮನೆಯವರೆಲ್ಲ ತಮ್ಮ ಮನೆಗಳಲ್ಲಿ, ನೆಂಟರು ತಂಗಲು ವ್ಯವಸ್ಥೆ ಮಾಡುತ್ತಾರೆ. ದೊಡ್ಡ ಪ್ರಮಾಣದ ಅಡುಗೆಗೆ ಮತ್ತು ಬಳಕೆಗೆ ಹೆಚ್ಚುವರಿ ಪಾತ್ರೆ ಪಗಡಗಳು ನೆರೆಹೊರೆಯವರಿಂದಲೇ ಸಂಗ್ರಹವಾಗುತ್ತವೆ.

ಈ ಮದುವೆ ಮುಂಜಿಗಳಲ್ಲಿ ಮನೆಯ ಯಜಮಾನ ಎಷ್ಟೇ ಪೂಜೆ, ವಸ್ತ್ರ, ಆಭರಣ, ಭೋಜನ ದಿನಸಿ ಇನ್ನಿತರ ವ್ಯವಸ್ಥೆಗಳನ್ನು ಮಾಡಿಕೊಂಡರೂ ಕಡೆಗೆ ಶಾಸ್ತ್ರಗಳನ್ನು ಹೇಳಿ-ಕೇಳಿ ಮಾಡಲು ಒಂದಷ್ಟು ಹಿರಿಯ ಜೀವಗಳು, ತತ್‌ಕ್ಷಣಕ್ಕೆ ಎದುರಾಗುವ ಸಮಸ್ಯೆಗಳಿಗೆ, “ಮಾಡಿದರಾಯ್ತು ಬಿಡಿ’ ಎಂದು ಮನೋಸ್ಥೈರ್ಯ ನೀಡುವ ಭಾವ ನೆಂಟರು-ಆತ್ಮೀಯರು, ಬಲವಿರುವ ಗಂಡು ಹೈಕ್ಳುಗಳು, ಅಲಂಕಾರ ಮಾಡಿಕೊಂಡು ಹಿಂದೆ ಮುಂದೆ ತಿರುಗಾಡಿಕೊಂಡಿರುವ ಹೆಣ್ಮಕ್ಕಳು, ಹಾಡು, ಕಥೆ, ಸೊಲ್ಲು, ಹರಟೆ, ನಗು ಇವೆಲ್ಲಾ ಸೇರಿ ಗೌಜು ಪ್ರಾರಂಭವಾದರೇನೇ ಸಮಾಧಾನ.

ಇನ್ನು ಮದುವೆಯ ದಿನ ಮಾಂಗಲ್ಯಧಾರಣೆ, ಸಪ್ತಪದಿ, ಲಾಜಾಹೋಮ, ಕನ್ಯಾದಾನ ಹೀಗೆ ಒಂದರ ಮೇಲೊಂದರಂತೆ ನಡೆಯುವ ವಿಧಿ-ವಿಧಾನಕ್ಕೂ ಒಂದೊಂದು ಹಾಡುಗಳಿವೆ. ಹಿರಿಯ ಮಹಿಳೆಯರು ರಾಗವಾಗಿ ಹಾಡು ಹಾಡಿ, ಮದುವೆಗೆ ಕಳೆ ತುಂಬುತ್ತಾರೆ. ಎಷ್ಟೋ ವರ್ಷಗಳಿಂದ ಕಾಣದ ಜನರು, ನಿಯಮಿತವಾಗಿ ಹೋಗಲಾರದೆ ಬಾಂಧವ್ಯ ಬಿಟ್ಟು ಹೋದ ಸಂಬಂಧಿಗಳು ಎಲ್ಲರೂ ಒಂದೆಡೆ ಸೇರಿದಾಗ ಸಿಗುವ ಸಂತೋಷಕ್ಕೆ ಮಿತಿಯಿದೆಯೇ? ಅವುಗಳನ್ನೆಲ್ಲ ಅನುಭವಿಸಿಯೇ ತೀರಬೇಕು. ಒರಳು ಕಲ್ಲಿಗೆ ಅರಿಶಿನ, ಅಕ್ಕಿ ಇನ್ನಿತರ ವಸ್ತುಗಳನ್ನು ಹಾಕಿ ಕುಟ್ಟುವುದರಿಂದ ಪ್ರಾರಂಭವಾಗುವ ವಿಧಿ ವಿಧಾನಗಳು, ಅಣ್ಣ-ತಮ್ಮ, ಅಕ್ಕ-ತಂಗಿಯರ ಗ್ಯಾಂಗ್‌ ಸೇರಿಕೊಂಡಾಗ ಮಗದಷ್ಟು ರಂಗೇರುತ್ತದೆ. ಊರ ಕರೆಯುವ (ಆಹ್ವಾನಿಸುವ) ಶಾಸ್ತ್ರ, ಅರಿಶಿನ ಶಾಸ್ತ್ರ ವೆಂಬ ಹೋಳಿ ಆಟ, ವರನ ಕಾಶೀಯಾತ್ರೆ ಪುರಾಣದ ಹಾಸ್ಯಾಸ್ಪದ ಸಂಭಾಷಣೆಗಳು, ವಧುವರರಿಗೆ ಆರತಿ ಎತ್ತಿ ದುಡ್ಡು ಕೀಳುವ ಮೋಜು, ಓಕುಳಿಯ ಹೋಳಿ, ಕಡೆಗೆ ಪ್ರಸ್ಥಕ್ಕೆ ಕೋಣೆಯನ್ನು ಸಿಂಗರಿಸಿ ಒಂದಷ್ಟು ಇನಾಮು ಕೇಳಿ ಸತಾಯಿಸುವವರೆಗೆ ಕಸಿನ್ಸ್ ಗಳ ಪಾತ್ರ ಬಲು ದೊಡ್ಡದು.

ಊರ ಕಡೆಗಿನ ಮದುವೆ ಊಟಕ್ಕೊಂದು ವಿಶೇಷ ರುಚಿ ಇರುತ್ತದೆ. ಏಕೆಂದರೆ, ಸ್ಥಳೀಯ ತರಕಾರಿಗಳನ್ನೇ ಅಡುಗೆಗೆ ಬಳಸಿ, ಪದಾರ್ಥಗಳನ್ನು ತಯಾರಿಸುತ್ತಾರೆ. ಸೀಸನಲ್‌ ಉಪ್ಪಿನಕಾಯಿಗಳು, ರುಚಿಕಟ್ಟಾದ ಸಾರು, ಮಾವಿನಕಾಯಿ ನೀರುಗೊಜ್ಜು, ಹಲಸಿನಕಾಯಿ ಹಪ್ಪಳ, ಸೂಜಿಮೆಣಸು ಹಾಕಿ ಬೀಸಿದ ಬೀಸುಗೊಜ್ಜು, ಇನ್ನಿತರ ಸಾಂಪ್ರದಾಯಿಕ ಅಡುಗೆಗಳು ಮಲೆನಾಡಿನ ಮದುವೆ ಊಟದ ಘಮವನ್ನು ಹೆಚ್ಚಿಸುತ್ತವೆ. ಊಟದ ಸಮಯದಲ್ಲಿ, ಕುಟುಂಬದವರು ನಿಧಾನಕ್ಕೆ ಊಟ ಸಾಗಲಿ ಎಂದು ಹೇಳುತ್ತಾ, ಪಂಕ್ತಿಯ ಪ್ರತಿಯೊಬ್ಬರನ್ನೂ ಮಾತನಾಡಿಸುವ ಬಗೆ ಅತ್ಯಂತ ಆತ್ಮೀಯ ಭಾವವನ್ನು ನೀಡುತ್ತದೆ.

ಆದರೆ, ಇಂದು ಎಲ್ಲರ ಭಾವನೆಗಳೂ ಬರಿದಾಗಿವೆ. ಮದುವೆ ಎನ್ನುವುದು ಜಸ್ಟ್‌ ವಿಸಿಟ್‌ ಅಷ್ಟೇ. ಮುಖ ತೋರಿಸಿ ಬರುವ ಕಾರ್ಯಕ್ರಮ ಅದು. ಕಾಲ ಎಷ್ಟು ಬದಲಾಗಿದೆ ನೋಡಿ…

ಸೌಮ್ಯ ಬೀನಾ

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

  • ಹಿಂದೂಗಳ ಪಾಲಿನ ಪ್ರಮುಖ ಹಬ್ಬಗಳಲ್ಲಿ ಯುಗಾದಿಯೂ ಒಂದು. ಪ್ರತಿ ಬಾರಿಯೂ ಹಸಿರನ್ನು, ಆ ನೆಪದಲ್ಲಿ, ಸಂಭ್ರಮ, ಸಂತೋಷ, ಸಡಗರವನ್ನು ಹೊತ್ತು ತರುವುದು ಯುಗಾದಿಯ ವಿಶೇಷ....

  • ಚಂದದ ದಿರಿಸಿಗೆ ಅಂದದ ಒಡವೆ ಧರಿಸಿದರೇ ಚೆನ್ನ. ಒಡವೆ ಅಂದರೆ ಬಂಗಾರದ್ದೇ ಆಗಬೇಕಿಲ್ಲ. ಚಿನ್ನವನ್ನೇ ನಾಚಿಸುವಷ್ಟು ಚೆನ್ನಾಗಿರುವ ಕೃತಕ ಆಭರಣಗಳು ಈಗ ಎಲ್ಲರ ಮೆಚ್ಚುಗೆ...

  • ಹಬ್ಬದ ಸಂಭ್ರಮವನ್ನು ಕೊರೊನಾ ನುಂಗಿಬಿಟ್ಟಿದೆ. ಮನೆಯಿಂದ ಹೊರಗೆ ಹೋಗುವಂತಿಲ್ಲ. ಯುಗಾದಿ ಶಾಪಿಂಗ್‌ ಮಾಡೇ ಇಲ್ಲ ಅಂತಿದ್ದೀರಾ? ಚಿಂತೆ ಬೇಡ. ವಾರ್ಡ್‌ರೋಬ್‌ನಲ್ಲಿರುವ...

  • ಬಾಡಿಗೆ ತಾಯ್ತನ ನಮ್ಮ ದೇಶಕ್ಕೆ ಹೊಸದೇನಲ್ಲ. ಆರೋಗ್ಯ ಸಂಬಂಧಿ ಸಮಸ್ಯೆ ಹೊಂದಿರುವವರು ಹಾಗೂ ನವಮಾಸ ಗರ್ಭ ಹೊತ್ತು ಪ್ರಸವೋತ್ತರ ವಿಶ್ರಾಂತಿಗೆ ಸಮಯದ ಕೊರತೆ...

  • ಬದುಕಿನಲ್ಲಿ ಸಿಹಿ-ಕಹಿಗಳು ಸಮಾನವಾಗಿ ಬರಲಿ, ಎರಡನ್ನೂ ಸಮಚಿತ್ತದಿಂದ ಸ್ವೀಕರಿಸುವ ಮನೋಭಾವ ಬೆಳೆಯಲಿ ಎಂಬುದರ ಸಂಕೇತವಾಗಿ ಯುಗಾದಿ ದಿನ, ಬೇವು-ಬೆಲ್ಲ ತಿನ್ನುತ್ತೇವೆ....

ಹೊಸ ಸೇರ್ಪಡೆ