ಅವರಿಗೂ ನಮಗೂ ಏನು ವ್ಯತ್ಯಾಸ?

ಅಮ್ಮ ಹಚ್ಚಿದೊಂದು ಹಣತೆ...

Team Udayavani, Jan 15, 2020, 6:10 AM IST

ಅವರು ಎಲ್ಲರ ಮುಂದೆ ಅವಮಾನ ಮಾಡಲು ಬಂದಾಗ, ಅಮ್ಮ -“ನಿಮ್ಮ ವಸ್ತುವನ್ನು ನಾವು ಕದ್ದಿಲ್ಲ. ಅನುಮಾನವಿದ್ದರೆ ನೀವೇ ಮನೆಯೊಳಗೆ ಬಂದು ಹುಡುಕಿ’ ಅಂತಷ್ಟೇ ಹೇಳಿ, ಬಾಗಿಲಿನಿಂದ ಸರಿದು ನಿಂತಳು.

ನಮ್ಮಪ್ಪನದ್ದು ಸರ್ಕಾರಿ ಉದ್ಯೋಗ. ಆಗಾಗ್ಗೆ ಊರಿಂದೂರಿಗೆ ವರ್ಗಾವಣೆಯಾಗುವುದು ಸಾಮಾನ್ಯವಾಗಿತ್ತು. ಯಾವ ಊರಿನಲ್ಲೂ ನಾವು ಎರಡು ವರ್ಷಕ್ಕಿಂತ ಜಾಸ್ತಿ ನೆಲೆ ನಿಂತದ್ದೇ ಇಲ್ಲ. ಇನ್ನೇನು ಊರು-ಕೇರಿ ಪರಿಚಯವಾಯ್ತು, ಆಚೀಚೆಯವರು ಸ್ನೇಹಿತರಾದರು ಅನ್ನುವಷ್ಟರಲ್ಲಿ, ಮನೆ ಖಾಲಿ ಮಾಡಬೇಕಾದ ಪರಿಸ್ಥಿತಿ ಬರುತ್ತಿತ್ತು.

ನಾನು ಹೈಸ್ಕೂಲಿನಲ್ಲಿದ್ದಾಗ ನಾವೊಂದು ವಠಾರದಲ್ಲಿದ್ದೆವು. ಆರೇಳು ಮನೆಗಳಿಗೆ ಒಂದೇ ಶೌಚಾಲಯ, ಒಂದೇ ನೀರು ಹಿಡಿಯುವ ನಲ್ಲಿ ಇದ್ದ ವಠಾರವದು. ಅಕ್ಕಪಕ್ಕದವರೆಲ್ಲಾ ಅನುಸರಿಸಿಕೊಂಡು ಹೋಗುವವರಾದ್ದರಿಂದ, ಹೇಗೋ ನಡೆದು ಹೋಗುತ್ತಿತ್ತು. ಆದರೆ, ನಮ್ಮ ಮನೆಗೆ ಅಟ್ಯಾಚ್‌ ಆದಂತೆ ಇದ್ದ ಮನೆಯಲ್ಲಿದ್ದ ಹೆಂಗಸು ಮಾತ್ರ ತುಂಬಾ ವಾಚಾಳಿ. ಅಷ್ಟೇ ಅಲ್ಲ, ಇಲ್ಲಿಂದಲ್ಲಿಗೆ ಅಲ್ಲಿಂದಿಲ್ಲಿಗೆ ಮಾತುಗಳನ್ನು ಬದಲಾಯಿಸುವಲ್ಲೂ, ಇಲ್ಲಸಲ್ಲದ ಗಾಸಿಪ್‌ ಮಾಡುವುದರಲ್ಲೂ ಎತ್ತಿದ ಕೈ. ಇದು ವಠಾರದವರಿಗೆಲ್ಲಾ ಗೊತ್ತಿದ್ದರೂ, ಆಕೆಯೊಂದಿಗೆ ಎಲ್ಲರೂ ಸ್ನೇಹದಿಂದಿದ್ದರು. (ಹಿಂದಿನಿಂದ ಬೈದುಕೊಳ್ಳುತ್ತಿದ್ದುದು ಬೇರೆ ವಿಚಾರ)ಯಾಕಂದ್ರೆ, ಆಕೆಯೊಂದಿಗೆ ಜಗಳವಾಡಿ, ಅವಳ ಬಾಯಿಗೆ ಆಹಾರವಾಗುವುದು ಬೇಡ ಅಂತ ಎಲ್ಲರೂ ಸುಮ್ಮನಿರುತ್ತಿದ್ದರು.

ಒಮ್ಮೆ ನಮ್ಮಮ್ಮನಿಗೂ, ಆ ಮಹಿಳೆಗೂ ಜಗಳವಾಯ್ತು. ಅವರ ಮನೆಯ ಯಾವುದೋ ವಸ್ತು ಕಳೆದು ಹೋಗಿದ್ದು, ಅದನ್ನು ನಮ್ಮಮ್ಮ ಕದ್ದಿದ್ದಾಳೆಂದು ಆರೋಪ ಹೊರಿಸಿ ಜಗಳಕ್ಕೆ ಬಂದಿದ್ದರು. ಅದಕ್ಕೂ ಮೊದಲು ಒಂದೆರಡು ಬಾರಿ, ಅವರು ಯಾರಧ್ದೋ ಮನೆಯ ವಿಷಯವನ್ನು ಅಮ್ಮನ ಬಳಿ ಹೇಳಲು ಬಂದಿದ್ದಾಗ ಅಮ್ಮ, “ಬೇರೆಯವರ ವಿಷಯ ನಿಮಗ್ಯಾಕೆ?’ ಅಂತ ದಬಾಯಿಸಿದ್ದೇ, ಆ ಸುಳ್ಳು ಆರೋಪಕ್ಕೆ ಕಾರಣವಾಗಿತ್ತು. ಮೂಲತಃ ಸೌಮ್ಯ ಸ್ವಭಾವದ ಅಮ್ಮನಿಗೆ ಗಾಸಿಪ್‌ ಮಾಡುವುದು, ಜಗಳವಾಡುವುದು ಸುತಾರಾಂ ಇಷ್ಟವಾಗುತ್ತಿರಲಿಲ್ಲ. ಅವರು ಎಲ್ಲರ ಮುಂದೆ ಅವಮಾನ ಮಾಡಲು ಬಂದಾಗ, “ನಿಮ್ಮ ವಸ್ತುವನ್ನು ನಾವು ಕದ್ದಿಲ್ಲ. ಅನುಮಾನವಿದ್ದರೆ ನೀವೇ ಮನೆಯೊಳಗೆ ಬಂದು ಹುಡುಕಿ’ ಅಂತಷ್ಟೇ ಹೇಳಿ, ಬಾಗಿಲಿನಿಂದ ಸರಿದು ನಿಂತಳು. ಅವರು ಸುಮ್ಮನೆ ಹುಡುಕಿದಂತೆ ಮಾಡಿ, ಏನೋ ಗೊಣಗುತ್ತ ವಾಪಸ್‌ ಹೋದದ್ದು ನೆನಪಿದೆ. ಸ್ವಲ್ಪ ದಿನಗಳವರೆಗೆ ವಠಾರದ ಹೆಂಗಸರ್ಯಾರೂ ನಮ್ಮನ್ನು ಮಾತಾಡಿಸಿರಲಿಲ್ಲ.

ಆ ಹೆಂಗಸಿಗೆ ಮದುವೆ ವಯಸ್ಸಿಗೆ ಬಂದ ಮಗಳಿದ್ದಳು. ಅವಳು ನಮ್ಮದೇ ಶಾಲೆಯಲ್ಲಿ ಓದಿ, ನಂತರ ಬೇರೆ ಕಾಲೇಜು ಸೇರಿದ್ದಳು. ಅವಳೊಬ್ಬ ಹುಡುಗನನ್ನು ಪ್ರೀತಿಸುತ್ತಿದ್ದಾಳಂತೆ ಎಂಬ ವಿಷಯ ನನಗೆ ಗೊತ್ತಾಯ್ತು. ಆ ವಿಷಯ ನಿಜ ಅಂತ ಖಾತ್ರಿಯಾದ ಬಳಿಕ, ನಾನದನ್ನು ಅಮ್ಮನಿಗೆ ಹೇಳಿದೆ. “ಅಮ್ಮಾ, ನಮಗೆ ಅವಮಾನ ಮಾಡಲು ಬಂದಿದ್ದರಲ್ಲ ಅವರು, ಈಗ ನಾವು ಅವರ ಮಗಳ ವಿಷಯವನ್ನು ಇಡೀ ವಠಾರಕ್ಕೆಲ್ಲ ಹೇಳಿಬಿಡೋಣ. ಆಗ ಅವರಿಗೆ ಸರಿಯಾದ ಪಾಠ ಕಲಿಸಿದಂತಾಗುತ್ತೆ…’ ಅಂತ ಬಹಳ ಉತ್ಸಾಹದಲ್ಲಿ ಹೇಳಿದೆ. ಎರಡು ಕ್ಷಣ ಸುಮ್ಮನಿದ್ದ ಅಮ್ಮ, “ಆಗ ನಮಗೂ, ಆ ಹೆಂಗಸಿಗೂ ಏನು ವ್ಯತ್ಯಾಸ? ಇನ್ನೊಬ್ಬರು ತಪ್ಪು ಮಾಡಿದರು, ಅಂತ ನಾವೂ ಅದನ್ನು ಮುಂದುವರಿಸಬಾರದು…’ ಅಂದಳು.

ಮಾರನೆದಿನ ಸಂಜೆ, ಆ ಮಹಿಳೆ ಒಬ್ಬರೇ ಇದ್ದಾಗ ಅವರ ಬಳಿ ಹೋಗಿ ಅಮ್ಮ, “ನಿಮ್ಮ ಮಗಳ ಬಗ್ಗೆ ಹೀಗೆಲ್ಲಾ ಸುದ್ದಿ ಹರಡುತ್ತಿದೆ. ನೀವೇ ಒಮ್ಮೆ ವಿಚಾರಿಸಿ. ಹೆಣ್ಣುಮಕ್ಕಳ ಬಗ್ಗೆ ಹಾಗೆಲ್ಲಾ ಜನ ಮಾತಾಡುವುದು ಸರಿಯಲ್ಲ’ ಅಂತ ನೇರವಾಗಿಯೇ ಹೇಳಿ ಬಂದಳು.

ಆ ಘಟನೆ ನನ್ನ ಮನಸ್ಸಿನಲ್ಲಿ ನೀತಿ ಪಾಠವಾಗಿ ಉಳಿದು ಹೋಗಿದೆ. ಯಾರೋ ನನ್ನ ಬಗ್ಗೆ ಕೆಟ್ಟದಾಗಿ ಮಾತಾಡಿದರು ಅಂತ ಗೊತ್ತಾದಾಗ, ನಾನೂ ಅವರ ಬಗ್ಗೆ ಇಲ್ಲಸಲ್ಲದ್ದನ್ನೆಲ್ಲ ಮಾತನಾಡಬೇಕು ಅಂದುಕೊಳ್ಳುತ್ತೇನೆ. ಆದರೆ, ಹಾಗೆ ಅನ್ನಿಸಿದಾಗೆಲ್ಲಾ, ಅಮ್ಮ ಮರೆಯಲ್ಲೆಲ್ಲೋ ನಿಂತು “ಅವರಂತೆಯೇ ನೀನೂ ಮಾಡಿದರೆ, ನಿನಗೂ, ಅವರಿಗೂ ಏನು ವ್ಯತ್ಯಾಸ?’ ಅಂತ ಕೇಳಿದಂತಾಗುತ್ತದೆ.

-ಆಶಾ ಕೃಷ್ಣಮೂರ್ತಿ

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

  • ಅಬ್ಟಾ, ಆಫೀಸಲ್ಲಿ ತುಂಬಾ ಕೆಲಸ ಇತ್ತು ಅಂತ ಮನೆಗೆ ಬಂದು ಮೈ ಚಾಚುವ ಅನುಕೂಲ ಬಹುತೇಕ ಉದ್ಯೋಗಸ್ಥೆಯರಿಗೆ ಇಲ್ಲ. ಆಫೀಸಿಂದ ಅವರು ಸೀದಾ ಬರುವುದೇ ಅಡುಗೆಮನೆಗೆ. ಅಲ್ಲಿ...

  • ಮೆಜಸ್ಟಿಕ್‌ ಬಸ್‌ ಸ್ಟಾಂಡ್‌ನ‌ ಪ್ಲಾಟ್‌ಫಾರ್ಮ್ ಬಳಿಯ ತೂತಿನಿಂದ ಇಲಿಯೊಂದು ಹೊರಬಂದು, ಹತ್ತಿರದಲ್ಲಿ ಬಿದ್ದಿದ್ದ ಬಿಸ್ಕತ್ತನ್ನು ತಿಂದು ಓಡಿತು! ಅಬ್ಟಾ, ಎಷ್ಟು...

  • ಶಾಲೆ ಎಂದಕೂಡಲೇ ಮೊದಲು ನೆನಪಾಗೋದು, ಮಕ್ಕಳು. ಜುಟ್ಟು ಕಟ್ಟಿದ ಹುಡುಗಿಯರು, ಯೂನಿಫಾರ್ಮ್ ಚಡ್ಡಿ ತೊಟ್ಟ ಸಣ್ಣ ಹುಡುಗರು. ಆದರೆ, ಅಜ್ಜಿಯರೇ ವಿದ್ಯಾರ್ಥಿಗಳಾಗಿರುವ...

  • ಗಣಿತ ಶಿಕ್ಷಕಿ ಮೇಧಾ, ರಾಗಬದ್ಧವಾಗಿ ಗಣಪತಿಯ ಭಜನೆಯಲ್ಲಿ ತನ್ಮಯರಾಗಿದ್ದರೆ, ಅವರ ಮುಂದೆ ಬಿಳಿಯ ಕ್ಯಾನ್ವಾಸ್‌ ಮೇಲೆ ಕಪ್ಪು ಶಾಯಿಯ ಜೆಲ್‌ ಪೆನ್‌ ಹಿಡಿದು ಸರಸರನೆ...

  • ಮದುವೆಗಳು ಸ್ವರ್ಗದಲ್ಲಿ ನಡೆಯುತ್ತವಂತೆ. ಆದರೆ, ಹನಿಮೂನ್‌/ ಮಧುಚಂದ್ರ ಮಾತ್ರ ಇಂಥದ್ದೇ ಸ್ಥಳ, ದೇಶದಲ್ಲಿ ನಡೆಯಬೇಕು ಅಂತ ಇಂದಿನ ಜೋಡಿಗಳು ಬಯಸುತ್ತವೆ. ಮಧುಚಂದ್ರದ...

ಹೊಸ ಸೇರ್ಪಡೆ

  • ಈ ಹಿಂದೆ 3 ಬಾರಿ, ಸಾವಿರಕ್ಕೂ ಅಧಿಕ ಕಲಾವಿದರಿಂದ ಹಾಡಿಸಿ ಲಿಮ್ಕಾ ದಾಖಲೆಗೆ ಸಾಕ್ಷಿಯಾಗಿದ್ದ "ರಂಗಸಂಸ್ಥಾನ'ವು ಪ್ರಸ್ತುತ "ನಾದ ಮಂಜರಿ' ಎಂಬ ಸಮೂಹ ಗಾಯನ ಏರ್ಪಡಿಸಿದೆ....

  • "ವಿಮಾನ ಏರುವುದಕ್ಕೂ ಮೊದಲು, ಕೊಳಲನ್ನು ನುಡಿಸುತ್ತಾ ನುಡಿಸುತ್ತಾ ಆಕಾಶ ಕಂಡವನು ನಾನು. ಮನಸ್ಸು ಹಕ್ಕಿಯಾಗಿ, ಭೂಮಿಗೆ ಇಳಿಯುವುದನ್ನೇ ಮರೆಯುತ್ತಿದ್ದೆ' ಎಂದವರು,...

  • ಶಿಖರ್‌ ಧವನ್‌ ಸತತ ಗಾಯಗಳಿಂದಾಗಿ ಮುಂಬರುವ ನ್ಯೂಜಿಲೆಂಡ್‌ ಸರಣಿಯಿಂದ ಹೊರಬಿದ್ದಿದ್ದಾರೆ. ಧವನ್‌ ಉತ್ತಮ ಫಾರ್ಮ್ನಲ್ಲಿದ್ದಾರೆ. ಆಸ್ಟ್ರೇಲಿಯ ವಿರುದ್ಧ ಸರಣಿಯ...

  • ಕುಂದಾಪುರ: ನಗರದಲ್ಲಿ ಬಿಸಿಎಂ ಹಾಸ್ಟೆಲ್‌ ಎಲ್ಲಿದೆ ಎಂದು ಕೇಳಿದರೆ ಸಿಗುವ ಉತ್ತರ ಬಹಳ ಸುಲಭದ್ದು. ಇಲ್ಲಿನ ತಾಲೂಕು ಪಂಚಾಯತ್‌ ಬಳಿಯ ರಸ್ತೆಯಲ್ಲಿ ಹೋಗುವಾಗ...

  • ನಾಯಿಯನ್ನು ಬಹುವಾಗಿ ಪ್ರೀತಿಸುವವರಿದ್ದಾರೆ. ಕೆಲವರಿಗೆ ಬೀದಿನಾಯಿಯೂ ಮುದ್ದು ಅನ್ನಿಸುವುದುಂಟು. ಇನ್ನು, ನೂರಾರು ಮುದ್ದು ಮುದ್ದು ನಾಯಿಗಳು ಒಂದೆಡೆ ಸೇರಿದರೆ,...