ಕಣ್ಣೀರ ಧಾರೆ ಇದೇಕೆ ಇದೇಕೆ?

ಈರುಳ್ಳಿ ಹೆಚ್ಚಿದ್ದಕ್ಕೋ, ಬೆಲೆ ಹೆಚ್ಚಿದ್ದಕ್ಕೋ...

Team Udayavani, Dec 11, 2019, 5:36 AM IST

ರಾತ್ರಿ ಊಟಕ್ಕೆ ಎಲ್ಲರಿಗೂ ಹೊಸದಾಗಿ ಊರಿಂದ ತಂದ ಮಾವಿನ ಮಿಡಿ ಉಪ್ಪಿನಕಾಯಿ, ಕೊಬ್ಬರಿಎಣ್ಣೆ ಹಾಕಿಕೊಂಡು ಅನ್ನಕ್ಕೆ ಕಲೆಸಿ ತಿನ್ನುವ ಹುಕಿ. ಈರುಳ್ಳಿ ಹೆಚ್ಚಿಕೊಡು ಜೊತೆಗೆ ಎಂದಾಗ ಅಸಹಾಯಕಳಾಗಿ ಒಂದೇ ಒಂದು ಈರುಳ್ಳಿ ಹೆಚ್ಚಿ, ಎಲ್ಲರಿಗೂ ಪಾಲು ಮಾಡಿ ಹಾಕಿದೆ.

ಫೋನಿನಲ್ಲಿ ಮಾತನಾಡಿಕೊಂಡು ಬರುತ್ತಾ ರಸ್ತೆಯ ಪಕ್ಕದಲ್ಲಿ ನಿಂತಿದ್ದ ಈರುಳ್ಳಿ ಗಾಡಿಯನ್ನು ನೋಡಿದವಳಿಗೆ, ಮನೆಯಲ್ಲಿ ಈರುಳ್ಳಿ ಖಾಲಿಯಾಗಿದೆ ಎಂಬುದು ನೆನಪಾಯ್ತು. ತಕ್ಷಣವೇ ಫೋನ್‌ ಕಟ್‌ ಮಾಡಿ, ಗಾಡಿಯ ಬದಿ ನಿಂತು ಈರುಳ್ಳಿಯನ್ನು ಆರಿಸಲಾರಂಭಿಸಿದೆ. “ಆರ್ಸಂಗಿಲ್ಲಕ್ಕೋ’ ಎಂಬ ಗಾಡಿಯವನ ಮಾತು ಕೇಳಿ ಕಿರಿಕಿರಿಯಾಯಿತು. “ಕೊಡೋದೇ ಕಡಿಮೆಗೆ ಕೊಡ್ತಿವ್ನಿ … ನೀವು ಆರ್ಸದಾದ್ರೆ ಮೇಲಿಪ್ಪತ್ತು ಜಾಸ್ತಿ ಆಯ್ತದೆ’ ಎಂದವನ ಮಾತು ಮೈ ಉರಿಸಿತು.ಅಲ್ಲಿದ್ದುದು ಸಣ್ಣ ಸಣ್ಣ ಈರುಳ್ಳಿ ಬೇರೆ. “ಎಷ್ಟು ಕೆ.ಜಿಗೆ?’ ಸ್ವರದಲ್ಲಿದ್ದ ನನ್ನ ಅಸಹನೆಯನ್ನು ಅವನು ಲೆಕ್ಕಿಸದೆ, ನೂರು ರೂಪಾಯಿ ಎಂದಾಗ ಕೈಲಿದ್ದ ಈರುಳ್ಳಿ ಗಾಡಿಯೊಳಗೇ ಜಾರಿ ಬಿತ್ತು…

ಹೇಗೂ ಮಾಮೂಲಿ ಅಂಗಡಿ ಮುಂದಿದೆ… ಅಲ್ಲೇ ಕೊಳ್ಳುವಾ.. ಇವನದ್ಯಾಕೊ ವಿಪರೀತವಾಯಿತು.. ಎಂದು ಬೈದುಕೊಳ್ಳುತ್ತಾ ನಡೆದವಳು ಪರಿಚಯದ ಅಂಗಡಿಯಲ್ಲಿದ್ದ ದೊಡ್ಡ ಈರುಳ್ಳಿ ನೋಡಿ ಸಮಾಧಾನದಿಂದ ಹೇಗೆ ಕೆ.ಜಿ ಎಂದು ಅವನ ಮುಖ ನೋಡಿ ನಕ್ಕೆ .. ಈಗ ನೂರಿಪ್ಪತ್ತು ಮೇಡಂ ಎಂದ ಅವನು ನಗದೇ.. ಆ ಮಾತು ಕೇಳಿದ್ದೇ ನನ್ನ ಮುಖದ ನಗು ಕೂಡಾ ಮಾಸಿಹೋಯಿತು… ಮನೆಯಲ್ಲಿ ಯಾವಾಗಲೋ ತಂದಿಟ್ಟ ಈರುಳ್ಳಿಯ ಸ್ಟಾಕ್‌, ಈ ವೇಗದಲ್ಲಿ ಬೆಲೆ ಏರಿದ್ದು ತಿಳಿಯದಂತೆ ಮಾಡಿತ್ತು. ಯಾವಾಗಲೂ ಎರಡು ಕೆ.ಜಿ ತೆಗೆದುಕೊಳ್ಳುತ್ತಿದ್ದ ನಾನು, ಅರ್ಧ ಕೆ.ಜಿ ಕೊಂಡು, “ನಾಡಿದ್ದು ಊರಿಗೆ ಹೋಗ್ತಿದೀವಿ.. ಸಾಕಿಷ್ಟು’ ಎಂದು ಹಲ್ಲು ಬಿಟ್ಟೆ. ನನ್ನ ಮಾತನ್ನು ಅವನು ಕಿಂಚಿತ್ತೂ ನಂಬಲಿಲ್ಲವೆಂಬಂತೆ, “ಎಲ್ರೂ ಎಣಿಸಿ ಲೆಕ್ಕ ಹಾಕಿ ತೊಗೊಂಡ್‌ ಹೋಗ್ತಿದಾರೆ ಮೇಡಂ. ಕೆಲವರು ಈರುಳ್ಳಿ ತೊಗೊಳ್ಳೋದೇ ಬಿಟ್ಟುಬಿಟ್ಟಿದಾರೆ… ನೀವೇ ಅರ್ಧ ಕೆಜಿ ತೊಗೊಂಡಿದ್ದು’ ಎಂದುಬಿಟ್ಟ..ಸಿಕ್ಕಿಬಿದ್ದವಳಂತೆ, ಪೆಚ್ಚಾಗಿ ದುಡ್ಡು ಕೊಟ್ಟು ಮನೆಗೆ ಬಂದೆ.

ಈರುಳ್ಳಿ ಇರದಿದ್ದರೇನಂತೆ….
ಈರುಳ್ಳಿ ಇಲ್ದಿದ್ರೂ ನಂಗೆ ಯಥೇತ್ಛ ಬೇರೆ ಅಡುಗೆ ಮಾಡೋಕೆ ಬರುತ್ತೆ ಎಂದು ಕೊಚ್ಚಿಕೊಳ್ಳುತ್ತಿದ್ದ ನನಗೆ, ಮರುದಿನದ ತಿಂಡಿಯ ಬಗ್ಗೆ ಯೋಚಿಸಿದಂತೆಲ್ಲಾ ಈರುಳ್ಳಿ ಹಾಕುವ ತಿಂಡಿಗಳೇ ಕಣ್ಮುಂದೆ ಬರತೊಡಗಿದವು. ಇದೇನೂ ಗೊತ್ತಿಲ್ಲದೇ, ವಾರ ಇಟ್ರೂ ಹಾಳಾಗೋಲ್ಲ ಅಂತ ಆರೇಳು ಈರುಳ್ಳಿ ಹಾಕಿ ಚಟ್ನಿ ಮಾಡಿದ್ದರ ಬಗ್ಗೆ ಕೊರಗು ಕಾಡಿತು. ಬೆಳಗಿನಲ್ಲಿ ಎಣ್ಣೆ ರೊಟ್ಟಿಗೆಂದು ಒಂದೇ ಒಂದು ಈರುಳ್ಳಿಯ ಗೆಡ್ಡೆಯ ಸಿಪ್ಪೆ ಸುಲಿದೆ. ತುಸು ಕಪ್ಪುಕಪ್ಪು ಪುಡಿ ಅಂಟಿಕೊಂಡಿತ್ತು. ಮೊದಲಾಗಿದ್ದರೆ ಅದನ್ನು ನಿರ್ದಾಕ್ಷಿಣ್ಯವಾಗಿ ಕಿತ್ತೂಗೆಯುತ್ತಿದ್ದ ನಾನು, ಈಗ ಅದನ್ನೇ ನೀರಲ್ಲಿ ತಿಕ್ಕಿತಿಕ್ಕಿ ತೊಳೆದು ಸಣ್ಣಗೆ ಹೆಚ್ಚಿಕೊಂಡೆ. ಕೊತ್ತಂಬರಿ ಸೊಪ್ಪು, ಹಸಿಮೆಣಸು, ಕಾಯಿತುರಿ, ಕ್ಯಾರೆಟ್‌ ಎಲ್ಲವನ್ನೂ ಹಾಕಿದರೂ ಕಡಿಮೆ ಅನ್ನಿಸತೊಡಗಿತು. ಹಳಹಳಸಿಕೊಂಡೇ ರೊಟ್ಟಿ ತಟ್ಟಿದೆ..

“ಅಮ್ಮಾ, ನಾಳೆ ಮಸಾಲೆದೋಸೆ ಮಾಡ್ತೀಯ?’ ಎಂದ ಮಗಳ ಮಾತಿಗೆ ಮಾತೃತ್ವ ಉಕ್ಕುಕ್ಕಿ ಬಂದು, ಅದಕ್ಕೇನಂತೆ ಮಾಡ್ತೀನಿ ಬಿಡು ಎಂದು ಭರವಸೆಯಿತ್ತ ಮರುಕ್ಷಣವೇ ಈರುಳ್ಳಿಯ ನೆನಪಾಗಿ ಎದೆ ಧಸಕ್ಕೆಂದಿತು. ಕೊಟ್ಟ ಭಾಷೆಗೆ ತಪ್ಪಲಾರೆನು ಎಂಬಂತೆ, ಒಂದು ದೊಡ್ಡ ಈರುಳ್ಳಿಯ ಮೈಸವರಿ ಮರುದಿನದ ಬಲಿಗೆ ಎತ್ತಿಟ್ಟೆ. ಎಂದೂ ಇಲ್ಲದೆ ರಾತ್ರಿ ಊಟಕ್ಕೆ ಎಲ್ಲರಿಗೂ ಹೊಸದಾಗಿ ಊರಿಂದ ತಂದ ಮಾವಿನ ಮಿಡಿ ಉಪ್ಪಿನಕಾಯಿ, ಕೊಬ್ಬರಿಎಣ್ಣೆ ಹಾಕಿಕೊಂಡು ಅನ್ನಕ್ಕೆ ಕಲೆಸಿ ತಿನ್ನುವ ಹುಕಿ. ಈರುಳ್ಳಿ ಹೆಚ್ಚಿಕೊಡು ಜೊತೆಗೆ ಎಂದಾಗ ಅಸಹಾಯಕಳಾಗಿ ಒಂದೇ ಒಂದು ಈರುಳ್ಳಿ ಹೆಚ್ಚಿ, ಎಲ್ಲರಿಗೂ ಪಾಲು ಮಾಡಿ ಹಾಕಿದೆ. ನನ್ನ ಆಪದ್ಧನ ಕರಗುತ್ತಲೇ ಇತ್ತು..

ಎಲ್ಲೆಲ್ಲೂ ಅಭಾವ
ಮರುದಿನ ಈರುಳ್ಳಿ ಉಳಿಸಲು ಬೆಳಗ್ಗೆ ಹತ್ತಿರದ ಹೋಟೆಲಿನಲ್ಲಿ ಒಳ್ಳೆಯ ಮಸಾಲೆದೋಸೆ ಮಾಡ್ತಾರೆ ಎಂದು ಮನವೊಲಿಸಿ ಸಂಸಾರದೊಟ್ಟಿಗೆ ಹೋದೆ.. ಮಸಾಲೆ ದೋಸೆಯ ಪಲ್ಯದಲ್ಲಿ ಈರುಳ್ಳಿಯನ್ನೇ ಹಾಕಿಲ್ಲ. ಅಲ್ಲೊಂದು ಇಲ್ಲೊಂದು ಕಾಣುತ್ತಿದೆ ಎಂದು ಮಕ್ಕಳು ಗೊಣಗುತ್ತಿದ್ದಂತೆ ಪಕ್ಕದಲ್ಲಿ ತಿನ್ನುತ್ತಿದ್ದವರು, “ಅದೇ ನೋಡ್ರಿ, ಈರುಳ್ಳಿ ದುಡ್ಡಲ್ಲಿ ದೋಸೆನೇ ತಿನ್ನಬಹುದು ಅಂತ ಇಲ್ಲಿಗೆ ಬಂದ್ವಿ… ಈರುಳ್ಳಿಯೇ ಇಲ್ಲ’ ಎನ್ನುತ್ತಾ, ನಾವು ಅವರಿಗೆ ಸುಪರಿಚಿತರು ಎಂಬಂತೆ ತಮ್ಮ ಅಳಲನ್ನು ಹಂಚಿಕೊಂಡರು.

ಸಕ್ಕರೆ ಕಾಯಿಲೆ ಬಂದವರಿಗೆ ಸಿಹಿ ತಿನ್ನೋ ಬಯಕೆ ಬಂದ ಹಾಗೆ ನನಗೆ ಕೂತರೂ ನಿಂತರೂ ಈರುಳ್ಳಿಯ ಯೋಚನೆ ಕಾಡತೊಡಗಿತು. ಸಂಜೆಯ ಮಳೆಗೆ ಮಗಳು ಪಾರ್ಕಿನ ಬಳಿ ಕ್ಯಾರೆಟ್‌ ತುರಿ, ಯಥೇತ್ಛವಾಗಿ ಈರುಳ್ಳಿ ಹಾಕಿ ಮಾಡುವ ಕ್ಯಾಪ್ಸಿಕಂ ಮಸಾಲಾ ಬೋಂಡಾ ತರಲು ಹೋದವಳು, ಹೋದ ವೇಗದಲ್ಲೇ ಹಿಂತಿರುಗಿದಳು. “ಈರುಳ್ಳಿಯನ್ನ ನೆಪಕ್ಕೆ ಹಾಕ್ತಿದ್ದಾನೆ ಅಲ್ಲಿ… ಪಾನೀಪುರಿಯವನ ಹತ್ರ ಕೂಡಾ ಹಿಡಿ ಈರುಳ್ಳಿ ಇದೆ. ತಿನ್ನೋಕೆ ಇಷ್ಟ ಆಗ್ಲಿಲ್ಲ. ನೀನೇ ಈಗ ಈರುಳ್ಳಿ ಬಜ್ಜಿ ಮಾಡಿಬಿಡು’ ಅಂದಳು. ನಾನು, ಉಳಿದಿದ್ದ ಎರಡೇ ಎರಡು ಈರುಳ್ಳಿ ನೋಡುತ್ತಾ ತಲೆ ಮೇಲೆ ಕೈ ಹೊತ್ತು ಕುಳಿತೆ.

-ಮಾಲಿನಿ ಗುರುಪ್ರಸನ್ನ

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

  • ಅಬ್ಟಾ, ಆಫೀಸಲ್ಲಿ ತುಂಬಾ ಕೆಲಸ ಇತ್ತು ಅಂತ ಮನೆಗೆ ಬಂದು ಮೈ ಚಾಚುವ ಅನುಕೂಲ ಬಹುತೇಕ ಉದ್ಯೋಗಸ್ಥೆಯರಿಗೆ ಇಲ್ಲ. ಆಫೀಸಿಂದ ಅವರು ಸೀದಾ ಬರುವುದೇ ಅಡುಗೆಮನೆಗೆ. ಅಲ್ಲಿ...

  • ಮೆಜಸ್ಟಿಕ್‌ ಬಸ್‌ ಸ್ಟಾಂಡ್‌ನ‌ ಪ್ಲಾಟ್‌ಫಾರ್ಮ್ ಬಳಿಯ ತೂತಿನಿಂದ ಇಲಿಯೊಂದು ಹೊರಬಂದು, ಹತ್ತಿರದಲ್ಲಿ ಬಿದ್ದಿದ್ದ ಬಿಸ್ಕತ್ತನ್ನು ತಿಂದು ಓಡಿತು! ಅಬ್ಟಾ, ಎಷ್ಟು...

  • ಶಾಲೆ ಎಂದಕೂಡಲೇ ಮೊದಲು ನೆನಪಾಗೋದು, ಮಕ್ಕಳು. ಜುಟ್ಟು ಕಟ್ಟಿದ ಹುಡುಗಿಯರು, ಯೂನಿಫಾರ್ಮ್ ಚಡ್ಡಿ ತೊಟ್ಟ ಸಣ್ಣ ಹುಡುಗರು. ಆದರೆ, ಅಜ್ಜಿಯರೇ ವಿದ್ಯಾರ್ಥಿಗಳಾಗಿರುವ...

  • ಗಣಿತ ಶಿಕ್ಷಕಿ ಮೇಧಾ, ರಾಗಬದ್ಧವಾಗಿ ಗಣಪತಿಯ ಭಜನೆಯಲ್ಲಿ ತನ್ಮಯರಾಗಿದ್ದರೆ, ಅವರ ಮುಂದೆ ಬಿಳಿಯ ಕ್ಯಾನ್ವಾಸ್‌ ಮೇಲೆ ಕಪ್ಪು ಶಾಯಿಯ ಜೆಲ್‌ ಪೆನ್‌ ಹಿಡಿದು ಸರಸರನೆ...

  • ಮದುವೆಗಳು ಸ್ವರ್ಗದಲ್ಲಿ ನಡೆಯುತ್ತವಂತೆ. ಆದರೆ, ಹನಿಮೂನ್‌/ ಮಧುಚಂದ್ರ ಮಾತ್ರ ಇಂಥದ್ದೇ ಸ್ಥಳ, ದೇಶದಲ್ಲಿ ನಡೆಯಬೇಕು ಅಂತ ಇಂದಿನ ಜೋಡಿಗಳು ಬಯಸುತ್ತವೆ. ಮಧುಚಂದ್ರದ...

ಹೊಸ ಸೇರ್ಪಡೆ