ಅಮ್ಮ ಎಂಬ ಅಮರಶಿಲ್ಪಿ

Team Udayavani, Jul 26, 2019, 5:09 AM IST

ಒಂದು ವರ್ಷ ತುಂಬುವ ಹೊತ್ತಿಗೆ ಹಾಲುಗಲ್ಲದ ಪುಟ್ಟ ಮಗುವಿನ ಬಾಯಿಂದ ಬರುವ ಮೊದಲ ತೊದಲು ನುಡಿ “ಅಮ್ಮ’. ದೇಹದಲ್ಲೆಲ್ಲಾದರೂ ನೋವು ಕಾಣಿಸಿಕೊಂಡರೆ ಅಯಾಚಿತವಾಗಿ ಬರುವ ಸ್ವರ “ಅಮ್ಮಾ…’. ದೈನಾಸಿಗಳು ಬಂದು ದೀನವಾಗಿ ಬೇಡುವುದು “ಅಮ್ಮಾ, ಏನಾದರೂ ಕೊಡಿ”.

ಅಮ್ಮ ಎಂದರೆ ಅಕ್ಕರೆಯ ಒತ್ತು. ಆಸರೆಯಾಗುವವಳು, ಆಧಾರವಾಗುವವಳು, ಬೇಡಿದ್ದು ನೀಡುವವಳು, ಕೊಡುಗೈಯ್ಯ ನಡಿಗೆಯವಳು. “ಅಮ್ಮ’ ವಿಶ್ವಮಯ ವಿಸ್ಮಯ. ಭಾಷೆ, ಜಾತಿ, ಲಿಂಗ, ಸಂಗಗಳನ್ನೆಲ್ಲ ಮೀರಿ ಬೆಳೆದವಳು. ಈ “ಅಮ್ಮ’ ಘಟ್ಟ ಗೃಹಿಣಿಯ ಬದುಕಿನ ಕಾಲಗತಿಯ ಉತ್ಕೃಷ್ಟ ಮಟ್ಟದ ಮೆಟ್ಟುಗಲ್ಲು.

ಗೃಹಿಣಿಯೊಳಗಿನ “ತಾಯಿ’ ಸ್ಥಾನವನ್ನು ಉತ್ತುಂಗಕ್ಕೇರಿಸುವ ಸಮಾಜ ಆಕೆಯೊಂದಿಗಿನ ಸಂಬಂಧದಲ್ಲಿ ಅದೆಂಥ ಧನ್ಯತೆಯನ್ನು ಕಂಡುಕೊಂಡಿದೆ ಎನ್ನುವುದಕ್ಕೆ ಅದೆಷ್ಟು ನುಡಿಗಟ್ಟುಗಳು : ತಾಯಿಗಿಂತ ಬಂಧುವಿಲ್ಲ, ತಾಯಿ ಕರುಳು, ಅಮ್ಮನಂತೆ ಮಗಳು, ತಾಯಿ ಋಣ ತೀರಿಸಲಾಗದು, ಮಳ್ಳಾದರೂ ತಾಯಿ. ಆಹಾ ಈ ಅಮ್ಮ ಪ್ರಕೃತಿಯಲ್ಲಿ ಅರಳಿದ ಧೀಶಕ್ತಿ ರೂಪಿಣಿ.

ಅಮ್ಮನ ಹೆಸರನ್ನೇ ತನ್ನ ಹೆಸರಿನೊಂದಿಗೆ ಅಂಟಿಸಿಕೊಂಡು ಅದೆಷ್ಟು ಸಾಧಕರು ಪ್ರಖ್ಯಾತರಾಗಿದ್ದಾರೆ. ಪ್ರಾಚೀನದಿಂದ ಅರ್ವಾಚೀನದವರೆಗೂ ಇಂತಹ ಉದಾಹರಣೆಗಳನ್ನು ನಾವು ನೋಡಬಹುದು. ಕುಂತಿಯ ಮಕ್ಕಳು ಕೌಂತೇಯರಾದರೆ, ರಾಧೆ ಸಾಕಿದ ಕರ್ಣ ರಾಧೇಯನಾದ. ಅಂಜನಾದೇವಿಯ ಪುತ್ರ ಆಂಜನೇಯ. ಹೀಗೇ ಪರಂಪರೆ ಮುಂದುವರಿದು ನಮ್ಮ ವರಕವಿ ಬೇಂದ್ರೆಯವರು “ಅಂಬಿಕಾತನಯದತ್ತ’ರಾದರು.

ಮಕ್ಕಳು ಕಲಿಯುವ ಮೊದಲ ಅಕ್ಷರದ ಗುರು “ಅಮ್ಮ’. ಹಾಗಾಗಿಯೇ ಆಕೆಗೆ ಮಾತೃದೇವೋಭವವೆಂಬ ಗೌರವ. ಬಾಲ್ಯದಲ್ಲಿ ತನ್ನ ಕಂದ ಅಡೆತಡೆಗೆ ತಡವರಿಸಿ ಎಡವದಂತೆ ಕೈಹಿಡಿದು ಮುನ್ನಡೆಸುವವಳು ಅಮ್ಮ. ತಾನಿತ್ತ ಪ್ರೀತಿಯ ತುತ್ತು ಮಗುವಿನ ಮುಖದಲ್ಲಿ ಮುತ್ತಿನಂತೆ ಮೆತ್ತಿಕೊಳ್ಳಬೇಕೆನ್ನುವ ಒತ್ತಾಸೆ ಹೊತ್ತವಳು ಅಮ್ಮ. ಅಂಬೆಗಾಲಿಕ್ಕುವ ಹಸುಳೆ ಮುಂದೆ ಹೇಗೆ ನಡೆಯಬೇಕು, ಹೇಗೆ ಕೂರಬೇಕು, ಹೇಗೆ ನೋಡಬೇಕು, ಆಡಬೇಕು, ನುಡಿಯಬೇಕು ಎಂಬ ಎಲ್ಲ “ಬೇಕು’ ಸಂಹಿತೆಯ ಶಿಕ್ಷಕಿಯಾಗಿ “ಅಮ್ಮ’ನ ಪಾತ್ರ ಅನನ್ಯ. ಹಾಗೆಯೇ ಅಳಬೇಡ, ಹಠಬೇಡ, ತೆಗೆಯಬೇಡ, ಮುಟ್ಟಬೇಡ- ಹೀಗೆ “ಬೇಡ’ಗಳ ಟಿಪ್ಪಣಿಯ ತಾಕೀತೂ ಅವಳದೇ.

ಎಲ್ಲ ಗೃಹಿಣಿಯರ ಒಳಗಿನ “ಅಮ್ಮ’ ಬಯಸುವುದು ತನ್ನ ಮಕ್ಕಳು ಉತ್ತಮ ವಿದ್ಯಾಭ್ಯಾಸ ಪಡೆದು ಸಮಾಜದಲ್ಲಿ ಉನ್ನತ ಧ್ವನಿ “ಅಮ್ಮ ನಾದ’ವನ್ನು ಹೊಮ್ಮಿಸಿ ಮಕ್ಕಳ ಅಭ್ಯುದಯದ ತಂತಿ ಮೀಟಿ ಸ್ವಸ್ಥ ಸಮಾಜದ ತರಂಗಿಣಿಯಾಗಿ ಹರಿಯುತ್ತದೆ. “ಅಮ್ಮ’ನಾಗಿ ಗೃಹಿಣಿ ಮಕ್ಕಳ ಸರ್ವಮುಖ ಪ್ರಗತಿಯನ್ನು ಲಕ್ಷ್ಯದಲ್ಲಿಟ್ಟು , ಈ ನಿಟ್ಟಿನಲ್ಲಿ ಆಡುವ, ಓಡುವ, ಹಠಮಾಡುವ, ಹಾಳುಮಾಡುವ, ಬಿಸುಡುವ, ಕಚ್ಚುವ, ಪರಚುವ, ಉದ್ಧಟತನ ತೋರುವ ಮಗುವನ್ನು ಹಿಡಿದು, ಹೊಡೆದು, ಬೈಯ್ದು, ಮುದ್ದುಗರೆದು, ತಿಳಿಹೇಳಿ, ಹೊಸ ಆಸೆಯ ಆಮಿಷ ಒಡ್ಡಿ, ಅದನ್ನು ಅರ್ಥಮಾಡಿಸಿ ಸರಿದಾರಿಗೆ ತರಲು ಇನ್ನಿಲ್ಲದ ತ್ರಿಕರಣ ಶುದ್ಧ ಪ್ರಯತ್ನದಲ್ಲಿ ತೊಡಗಿಕೊಂಡ ಅಮ್ಮ ನಿರಂತರ ಗುರಿ ಸಾಧನೆಯ ಹೋರಾಟದಲ್ಲಿ ನಿರತಳಾಗಿರುತ್ತಾಳೆ. ಈ ದೃಷ್ಟಿಯಲ್ಲಿ ಬಹುಶಃ ಉದ್ಯೋಗಸ್ಥ ಮಹಿಳೆಗಿಂತ ಮನೆಯ ಗೃಹಿಣಿಯೇ ಹೆಚ್ಚು ಕಾರ್ಯನಿರತಳು ಎನ್ನಬಹುದು.

ಇಂದಿನ ಮಕ್ಕಳೇ ಮುಂದಿನ ಜನಾಂಗವೆಂಬುದನ್ನು ಅರಿತ ಗೃಹಿಣಿ ತನ್ನ ಮಗು ತನ್ನದೇ ಮುದ್ದಿನ ಖಣಿಯಾಗಿ, ಮನೆತನದ ಹೆಸರಿಗೆ ಕೀರ್ತಿ ಕಳಸವಿಟ್ಟು, ರಾಷ್ಟ್ರದ ಸತøಜೆಯಾಗಿ, ವಿಶ್ವಮಾನವನಾಗಿ, ಜೀವಲೋಕದ ನವಿರು, ಮಿಡಿತ, ತುಡಿತ, ನಲಿವು, ವೇದನೆಗಳಿಗೆಲ್ಲ ಸಂವೇದನೆಯ ಸ್ಪಂದನ ನೀಡುವ ಜೀವೋತ್ಸಾಹದ ಕಾರುಣ್ಯವಾಗಲಿ ಎಂಬ ತನ್ನ ಕನಸಿನ ಸಾಕಾರಕ್ಕಾಗಿ ಅಹರ್ನಿಶಿ ಶ್ರಮಿಸುತ್ತಾಳೆ.

“ಆಟ ಊಟಕ್ಕೆ ಮುದ್ದು. ದುಷ್ಟ ಶೀಲಕ್ಕೆ ಗುದ್ದು’ ಎಂಬ ಅಸ್ತ್ರದ ಮೂಲಕ ಮಕ್ಕಳ ದೈಹಿಕ ಹಾಗೂ ಮಾನಸಿಕ ಬೆಳವಣಿಗೆಯ ಕುರಿತು ಏಕಕಾಲದಲ್ಲಿ ಚಿಂತಿಸುವ ಗೃಹಿಣಿಯೊಳಗಿನ “ಅಮ್ಮ’ನ ಈ ಯುಗಳ ಪರಿಭಾವ, ತನ್ನೆಲ್ಲ ಆಕಾಂಕ್ಷೆಗಳ ಗೊಂಚಲನ್ನು ತನ್ನ ಮಕ್ಕಳ ಪೂರ್ಣೋನ್ನತಿಯಲ್ಲಿಯೇ ಕಂಡುಕೊಳ್ಳುವ ಅದ್ವೆ„ತದ ಧೃತಿಯಲ್ಲಿ ಸ್ಥಿತವಾಗಿರುತ್ತದೆ.

ಮರಾಠಾ ಸಾಮ್ರಾಜ್ಯದ ಅವಿಚ್ಛಿನ್ನ ಕನಸನ್ನು ಛತ್ರಪತಿ ಶಿವಾಜಿಯ ಬಾಲ್ಯದ ಹಸಿ ಹಸಿ ಚಿತ್ತ ಮೃತ್ತಿಕೆಯಲ್ಲಿ ಮೆತ್ತಗೆ ಬಿತ್ತಿದವಳು ತಾಯಿ (ಮರಾಠಿಯಾಲ್ಲಿ “ಆಯಿ’) ಜೀಜಾಬಾಯಿ. ಈ ಒಂದು ಮಾತೃ ಪ್ರೇರಣೆಗೆ ಹರಿದು ಹಂಚಿಹೋದ ಇಡೀ ಮರಾಠಾ ಸಾಮ್ರಾಜ್ಯವನ್ನು ಒಂದುಗೂಡಿಸುವ ಶಕ್ತಿ ಇತ್ತೆಂದರೆ ನಿಜವಾಗಿಯೂ
“ಅಮ್ಮ’ತನದ ಅಮಿತ ಸಾಧನೆಯ ಅರಿವಾಗುತ್ತದೆ. ಇಂತಹ ಒಂದು ಆದರ್ಶ ಮಾತೆಯಾಗಿ ಐತಿಹಾಸಿಕ ಪ್ರಾಮುಖ್ಯ ಪಡೆದ ಜೀಜಾಬಾಯಿಯಂತಹವರು ಹಲವು ಗೃಹಿಣಿಯರ “ಅಮ್ಮ’ ಭಾವದಲ್ಲಿ ಸಾಕಾರಗೊಂಡು ತಮ್ಮ ಮಕ್ಕಳಿಂದ ಸಾಮ್ರಾಜ್ಯವನ್ನಲ್ಲದಿದ್ದರೂ ಕೆಚ್ಚಿನ ಸ್ವದೇಶಾಭಿಮಾನದ ಹರಿಕಾರರ ದಂಡನ್ನು ಕಟ್ಟುವಲ್ಲಿ ಬಹುತೇಕ ಯಶಸ್ವಿಯಾಗಿರಬಹುದು ಎನಿಸುತ್ತದೆ.

ಬಾಲಿ ದ್ವೀಪದಲ್ಲಿ ಮೇನ್‌ ಬ್ರಾಯುತ್‌ ಎಂಬ ಹದಿನೆಂಟು ಮಕ್ಕಳ ತಾಯಿಯ ವಿಗ್ರಹಕ್ಕೆ ನಿತ್ಯ ಪೂಜೆ ಸಲ್ಲಿಸಲಾಗುತ್ತಿದೆ. ಈ ಬ್ರಾಯುತ್‌ ಒಬ್ಬ ಹಳ್ಳಿಯ ಸಾಮಾನ್ಯ ಬಡ ಮಹಿಳೆಯಾಗಿ ಹದಿನೆಂಟರಷ್ಟು ಬೃಹತ್‌ ಸಂಖ್ಯೆಯಲ್ಲಿ ಮಕ್ಕಳನ್ನು ಹೆತ್ತು ಅವರೆಲ್ಲರಿಗೂ ತನ್ನ ಪ್ರೀತಿ, ಶಿಸ್ತಿನ ಪಾಠದ ಮೂಲಕ ಸಾರ್ಥಕ ಬದುಕನ್ನು ಕಡೆದು ಕೊಟ್ಟ ಅಮರ ಶಿಲ್ಪಿಯಾಗಿ ಜನಮಾನಸದಲ್ಲಿ ಸ್ಥಾನ ಪಡೆದಿದ್ದಾಳೆ. ಮಹಾಮಾತೆಯಾಗಿ ಆದರಣೀಯಳಾಗಿದ್ದಾಳೆ.

ನಮ್ಮಲ್ಲಿ ಕಾಣದ ದೇವರನ್ನು ದೇವಿ, ಮಾತೆ ಎಂದು ಪೂಜಿಸುತ್ತೇವೆ. ಆದರೆ ಬಾಲಿ ದ್ವೀಪದಲ್ಲಿ ಜನರ ನಡುವೆಯೇ ತನ್ನ ಆದರ್ಶ ಮೌಲ್ಯಗಳೊಂದಿಗೆ ಬದುಕಿ ಬಾಳಿದ ಒಬ್ಬ ಸಾಮಾನ್ಯ ಗೃಹಿಣಿಯನ್ನು ಮಹಾಮಾತೆ ಎಂದು ಆರಾಧಿಸಲಾಗುತ್ತದೆ.

-ವಿಜಯಲಕ್ಷ್ಮಿ ಶ್ಯಾನ್‌ಭೋಗ್‌

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

  • ಅಂದು ಶುಕ್ರವಾರ. ಮನೆಯಲ್ಲಿ ಹೆಂಗಳೆಯರಿಗೆ ವಿಶೇಷ ದಿನ. ಮುಸ್ಸಂಜೆ ಏಳು ಗಂಟೆಗೆ ಗೆಳತಿ ನಯನಾಳ ಮನೆಯಲ್ಲಿ ವ್ರತದ ಉದ್ಯಾಪನೆಗೆಂದು ಕರೆದಿದ್ದರು. ಎಲ್ಲಿಯಾದರೂ...

  • ಅಷ್ಟಮಿ ಬಂತೆಂದರೆ ಸಾಮಾನ್ಯವಾಗಿ ಶ್ರೀಕೃಷ್ಣನಿಗೆ ಪ್ರಿಯವಾದ ಅವಲಕ್ಕಿಯ ನೆನಪಾಗುತ್ತದೆ. ಅವಲಕ್ಕಿಯನ್ನು ಉಪಯೋಗಿಸಿ ಬಹಳ ಸುಲಭವಾಗಿ ಸಿಹಿಯನ್ನು ತಯಾರಿಸಬಹುದು. ಅವಲಕ್ಕಿ...

  • ಬಾಲಿವುಡ್‌ನ‌ಲ್ಲಿ ನಿಧನದ ಬಳಿಕವೂ ಆಗಾಗ್ಗೆ ಸುದ್ದಿಯಾಗಿ ಸಿನಿಪ್ರಿಯರನ್ನು, ಬಾಲಿವುಡ್‌ ಮಂದಿಯನ್ನು ಕಾಡುತ್ತಿರುವ ನಟಿ ಶ್ರೀದೇವಿ. ಶ್ರೀದೇವಿಯ ವೈಯಕ್ತಿಕ...

  • ತಾಯೆ ಯಶೋದಾ, ನಿನ್ನ ಮಗನ ತುಂಟಾಟವನ್ನು ಹೇಗೆ ಹೇಳಲಿ... ತಾಯೇ ಯಶೋದಾ ಉಂದನ್‌ ಆಯರ್‌ಕುಲತ್ತುದಿತ್ತ ಮಾಯನ್‌ ಗೋಪಾಲಕೃಷ್ಣನ್‌ ಸೆಯ್ಯಮ್‌... ಇದು ತಮಿಳು ಭಾಷೆಯಲ್ಲಿರುವ...

  • ಸಾಂಪ್ರದಾಯಿಕ ಉಡುಗೆ-ತೊಡುಗೆಗಳಿಗೆ ಅಧಿಕ ಮಹತ್ವ ನೀಡುವ ರಾಜ್ಯಗಳಲ್ಲಿ ತಮಿಳುನಾಡು ಒಂದು. ಮಹಿಳೆಯರು ಉಡುವ ಸಾಂಪ್ರದಾಯಿಕ ಸೀರೆ ಹಾಗೂ ಕುಪ್ಪಸ ಸೀರೆ ಉಡುವ...

ಹೊಸ ಸೇರ್ಪಡೆ