ಹುಡುಗ ಹುಡುಗಿ ಮೇಳಾಮೇಳಿ

Team Udayavani, Apr 12, 2019, 6:00 AM IST

ಪರಿಚಿತರೊಬ್ಬರು, “”ತನ್ನ ಮಗನಿಗೆ ಸರಿ ಹೊಂದುವ ಹುಡುಗಿ ಎಲ್ಲಾದ್ರು ಇದ್ರೆ ನೋಡು” ಎಂದಿದಕ್ಕೆ ಒಂದು ಸಂಬಂಧ ತೋರಿಸಿದ್ದೆ. ಸರ್ವ ರೀತಿಯಲ್ಲೂ ಅದು ಉತ್ತಮವಾಗಿದ್ದುದರಿಂದ ಖಂಡಿತ ಮದುವೆ ಆಗಬಹುದೆಂದು ನನಗೆ ತೋರಿತ್ತು. ಮತ್ತೆ ಅನೇಕ ದಿನ ಕಳೆದರೂ ಅವರಿಂದ ಏನು ಸುದ್ದಿಯೇ ಇರಲಿಲ್ಲ. ಮೊನ್ನೆ ಮಾತಿಗೆ ಸಿಕ್ಕಿದ್ದರು. “”ಏನಾಯ್ತು?” ಎಂದು ಕೇಳಿದೆ. “”ಹುಡುಗಿ ಎಲ್ಲಾ ಸರಿ, ಹೈಟು, ವೈಟು, ರೂಪ, ಐಶ್ವರ್ಯ, ವಿದ್ಯೆ, ಮನೆತನ ಎಲ್ಲವೂ ಸರಿಯಾಗಿಯೇ ಹೊಂದುತಿತ್ತು. ಆದರೆ, ಆಕೆಯದು ಮೂಲ ನಕ್ಷತ್ರ!” ಎಂದು ಕೈಯಾಡಿಸಿದಾಗ ಆಶ್ಚರ್ಯ, ಸಂತಾಪದ ಜತೆ ಜತೆ ಕೆಲವು ತಿಂಗಳ ಹಿಂದೆ ಆಕೆಯೊಡನೆ ನಡೆದ ಸಂಭಾಷಣೆ ನೆನಪಾಯಿತು. ಎರಡೂ ಗಂಡು ಮಕ್ಕಳ ಮುಂಜಿ ಭಾರಿ ಗೌಜಿಯಲ್ಲಿ ನಡೆಸಿದ್ದು ಇನ್ನೂ ನೆನಪಿತ್ತು. ಹಾಗಾಗಿ ಕುತೂಹಲದಿಂದ ಕೇಳಿದ್ದೆ,””ಜಪ ತಪ ಎಲ್ಲಾ ಮಾಡಿಯೇ ಕೆಲಸಕ್ಕೆ ಹೋಗುದಾ ಹೇಗೆ?” ಅದಕ್ಕೆ ಅವರು ನಕ್ಕು ಬಿಟ್ಟರು.

“”ಅಯ್ಯೋ ಅದೆಲ್ಲಾ ಯಾವಾಗಲೋ ನಿಂತು ಹೋಗಿದೆ. ಮೊದಲ ಒಂದೆರಡು ವರ್ಷ ಮಾಡಿರಬಹುದು. ಮತ್ತೆ ಅವರಿಗೆ ಪುರುಸೊತ್ತು ಎಲ್ಲಿ? ಅಷ್ಟಕ್ಕೂ ನಾವು ಒತ್ತಾಯ ಮಾಡಲೂ ಹೋಗುವುದಿಲ್ಲ. ನಾವೇನು ತೀರ ಸಂಪ್ರದಾಯಸ್ಥರೇನಲ್ಲ, ಆಧುನಿಕ ಮನೋಭಾವದವರು. ಈ ಜಪ ತಪ ಎಲ್ಲಾ ಸುಮ್ನೆ ಟೈಮ… ವೇಸ್ಟ್” ಮಾತುಗಳಲ್ಲಿ ಹೆಮ್ಮೆಯ ಲೇಪನದ ಘಂ ವಾಸನೆ ಬಂದಿತ್ತು. ಈಗ ನಾನು ಅವರ ಮುಖವನ್ನೇ ನೋಡಿದೆ ಹಿಂದಿನ ಮಾತುಗಳ ನೆನಪೇನಾದ್ರು ಬರುತ್ತದೋ ಅಂತ. ಆದರೆ ಅಂಥಾ ಕುರುಹೇನೂ ಕಾಣಿಸ್ಲಿಲ್ಲ.

ದೂರದಲ್ಲೆಲ್ಲೋ ಅಂತರಿಕ್ಷದಲ್ಲಿ ಅಡಗಿ ಕುಳಿತಿರುವ ಈ ನಕ್ಷತ್ರಗಳು ಹೆಣ್ಣುಗಳನ್ನೇ ಹೆಚ್ಚಾಗಿ ಕಾಡುವುದು. ವೇದಗಳ ಕಾಲದಿಂದಲೇ ಗುರುತಿಸಲಾಗಿರುವ ಈ 27 ನಕ್ಷತ್ರಗಳಲ್ಲಿ ಕೆಲವೊಂದನ್ನು “ಕೆಟ್ಟ ನಕ್ಷತ್ರ’ವೆಂದು ಜನ ನಂಬುತ್ತಾರೆ. ಈ ನಕ್ಷತ್ರಗಳಲ್ಲಿ ಜನಿಸಿದ ಕನ್ಯೆಗೂ ಕೆಟ್ಟ ಗುಣಗಳು ಇರುವುದೆಂದು ಹೇಳಲಾಗುತ್ತದೆ. ಆಶ್ಲೇಷ ನಕ್ಷತ್ರದವಳಿಂದ ಪತಿ, ಮಾವ, ಅತ್ತೆ , ಮೈದುನರಿಗೆ ಗಂಡಾಂತರಗಳು ಬರುವುದೆಂದು ಜ್ಯೋತಿಷಿಗಳು ಹೇಳುವಾಗ ಸಹಜವಾಗಿ ಜನರು ತಮ್ಮ ಕುಟುಂಬಕ್ಕೇನಾಗುವುದೋ? ಎಂದು ಭೀತಿಯಲ್ಲಿ ತೊಳಲಾಡುತ್ತಾರೆ.

ಮಾಂಗ್ಲೀಕ್‌, ಕುಜದೋಷ, ಮಂಗಳ ದೋಷ, ಅಂಗಾರಕ ದೋಷ (ಇವೆಲ್ಲ ಒಂದೇ) ಇರುವ ಹೆಣ್ಣಿನ ಅವಸ್ಥೆ ಹೇಳತೀರದು. ಈ ದೋಷದಿಂದ ಆಕೆಗೆ ವಿಧವಾ ಯೋಗ ಇರುವುದರಿಂದ ಮೊದಲು ಆಕೆಯ ಮದುವೆ ಮರದೊಡನೆ ನೆರವೇರಿಸಲಾಗುತ್ತದೆ. ನಂತರ ಆ ಮರವನ್ನು ಕಡಿಯುತ್ತಾರೆ. ಅಲ್ಲಿಗೆ ದೋಷ ಪರಿಹಾರವಾಗಿ ವರನೊಡನೆ ಮದುವೆ ನಡೆಸಲಾಗುತ್ತದೆ. ಇನ್ನು ಮದುವೆಯ ನಂತರದ ವರನ ಕಡೆಯವರ ಯಾವುದೇ ಕಷ್ಟ-ನಷ್ಟಗಳಿಗೂ ಹೆಣ್ಣಿನ ಕಾಲ್ಗುಣವೇ ಕಾರಣ! ಇಷ್ಟಲ್ಲದೆ ಇನ್ನೂ ಇಂತ‌ಹ ಅನೇಕ ನಕ್ಷತ್ರ ದೋಷ, ಗ್ರಹ ದೋಷ, ಜಾತಕ ದೋಷಗಳು ಹಿಂಡುಹಿಂಡಾಗಿ ಹೆಣ್ಣನ್ನು ಕಾಡುತ್ತವೆ. ಇಂತಹ ಮೂಢನಂಬಿಕೆಗಳಿಂದಾಗಿ ತಮ್ಮದಲ್ಲದ ತಪ್ಪಿನಿಂದಾಗಿ ಇಂದು ಅನೇಕ ಹೆಣ್ಣುಗಳು ಮದುವೆ ಇಲ್ಲದೆ ಕುಳಿತಿದ್ದಾರೆ.

ಇಲ್ಲಿ ಇನ್ನೊಬ್ಬರಿದ್ದಾರೆ, ಅವರ ಮಗನ ಉತ್ಕೃಷ್ಟ ಜಾತಕಕ್ಕೆ ತಕ್ಕಂತೆ ಶ್ರೇಷ್ಠವಾದ ಜಾತಕಕ್ಕೆ ಬಹಳ ಹುಡುಕಾಡುತ್ತಿದ್ದರು. ಪ್ರತೀ ಜಾತಕದ ಪರಿಶೀಲನೆಗೂ ಭಾರಿ ಶುಲ್ಕ ತೆಗೆದುಕೊಳ್ಳುವ ಜ್ಯೋತಿಷಿಗಳಿಗೇ ತೋರಿಸುತ್ತಿದ್ದರು. ಬೆಲೆಗೂ ಗುಣಮಟ್ಟಕ್ಕೂ ನೇರಾನೇರ ಸಂಬಂಧವಿದೆಯೆಂದು ಹೆಚ್ಚಿನ ಜನರು ನಂಬುತ್ತಾರೆ! ಅಂತೂ ಇಂತೂ ಸರಿಯಾಗಿ ಹೊಂದಿಕೊಳ್ಳುವ ಜಾತಕ ಸಿಕ್ಕಿ ಮದುವೆಯೂ ಆಯಿತು. ಈಗ ಅವರೀರ್ವರ ಗುಣ ಹೊಂದಿಕೆಯಾಗದೆ ವಿಚ್ಛೇದನದ ಹಾದಿಯಲ್ಲಿ ಹೊರಳಿ ನಿಂತಿದ್ದಾರೆ.

ಇವತ್ತು ಜ್ಯೋತಿಷ್ಯ ಶಾಸ್ತ್ರವನ್ನು ಆಳವಾಗಿ ಅಭ್ಯಸಿಸಿದ ಜ್ಞಾನಿಗಳೂ, ವಿಚಾರವಂತರೂ ನಮ್ಮ ಸಮಾಜದಲ್ಲಿ ಅನೇಕರು ಇದ್ದಾರೆ. ಇಂತ‌ಹವರಿಂದ ಸಮಾಜವನ್ನು ತಿದ್ದುವ ಕೆಲಸವಾಗಬೇಕು. ಇವರ ಮಾತುಗಳಿಗೆ ಒಳ್ಳೆಯ ಪರಿಣಾಮ ಇದೆ, ಬದಲಾವಣೆ ತರುವ ಶಕ್ತಿ ಇದೆ. ಧರ್ಮ, ಶಾಸ್ತ್ರ ಇವುಗಳ ಹೆಸರಲ್ಲಿ ಜನರಲ್ಲಿ ಹೆದರಿಕೆ ಹುಟ್ಟಿಸಬಾರದು.
ಜೀವನದಲ್ಲಿ ಭಾರಿ ನೋವನ್ನು ಅನುಭವಿಸಿದವರು ಬಲು ಬೇಗನೆ ಮೂಢನಂಬಿಕೆಗೆ ಬಲಿಯಾಗುತ್ತಾರೆ. ಇಂತಹವರ ಬದುಕು ಭಯದ ಬಲೆಯಲ್ಲಿ ಸಿಲುಕಿಕೊಳ್ಳುತ್ತದೆ. ಯಾವುದೇ ವ್ಯಕ್ತಿಯ ಸ್ವಭಾವ, ಗುಣನಡತೆಗಳು ಸ್ವಲ್ಪ ಮಟ್ಟಿಗೆ ವಂಶವಾಹಿಗಳಿಂದ ಪ್ರೇರಿತವಾದರೂ ಬಹುವಾಗಿ ಆ ವ್ಯಕ್ತಿ ಬೆಳೆದುಬಂದ ಪರಿಸರವೇ ಕಾರಣವೆಂದು ಯಾವಾಗಲೋ ವಿಜ್ಞಾನಿಗಳು ಸಾಕ್ಷಿ ಸಮೇತವಾಗಿ ನಮ್ಮ ಮುಂದೆ ಇಟ್ಟಾಗಿದೆ. ಇನ್ನು ಆಸ್ಪತ್ರೆಗಳಲ್ಲಿ ಮಾರಣಾಂತಿಕ‌ ಕಾಯಿಲೆಯಿಂದ ನರಳುತ್ತಿರುವವರು, ಅಫ‌ಘಾತಕ್ಕೆ ಸಿಲುಕಿದವರು, ಅಂಗವಿಹೀನರಾದವರು, ಮೈಯೆಲ್ಲಾ ಸುಟ್ಟುಕೊಂಡವರು, ಅಕಾಲಿಕ ಮರಣ ಹೊಂದಿದವರ ಬಗ್ಗೆ ಸ್ವಲ್ಪ ವಿಚಾರಿಸಿದರೆ ಯಾವುದೇ ತಾರತಮ್ಯವಿಲ್ಲದೆ ಎಲ್ಲಾ ನಕ್ಷತ್ರಗಳ ಒಡೆಯ-ಒಡತಿಯರು ಇರುವುದು ನಮಗೆ ಗೋಚರಕ್ಕೆ ಬರುವುದು. ಆದಾಗ್ಯೂ ವಿದ್ಯಾವಂತರು ವಿಚಾರವಂತರೂ ಕೂಡ ಮೂಢನಂಬಿಕೆಗಳಿಗೆ ಜೋತುಬೀಳುವುದನ್ನು ಕಂಡಾಗ, ಅಸಹಾಯಕತೆಯಿಂದ ಕೇವಲ ನಿಟ್ಟುಸಿರೇ ಪ್ರತಿಕ್ರಿಯೆ ಆಗಿಬಿಡುತ್ತದೆ.

ಓಶೋ ಹೇಳುತ್ತಾರೆ- ಮೂಢನಂಬಿಕೆಗಳು ನಮ್ಮ ಹೆದರಿಕೆಯ ಮೇಲೆ ಹುಲುಸಾಗಿ ಬೆಳೆಯುತ್ತದೆ. ಹಾಗಾಗಿ, ಧರ್ಮವನ್ನು ಅಧರ್ಮಿಗಳಿಂದ ಮಾತ್ರವಲ್ಲದೆ ಅದನ್ನು ಧಾರ್ಮಿಕರೆನ್ನಿಸಿಕೊಂಡ ಜನರಿಂದಲೂ ರಕ್ಷಿಸಬೇಕಾಗಿದೆ. ಹಾಗೂ ಇದೊಂದು ಅತ್ಯಂತ ಕಷ್ಟದ ಕೆಲಸವಾಗಿದೆ.
ಜೀವನ ಸಂಗಾತಿಯನ್ನು ಆಯ್ದುಕೊಳ್ಳುವಾಗ ಜಾತಕದ ಗಣಗಳಿಗಿಂತಲೂ, ವಿದ್ಯೆ, ಸಂಸ್ಕಾರ, ನಡತೆಯೆಂಬ ಗುಣಗಳಿಗೇ ಜನರು ಆದ್ಯತೆ ನೀಡಲಿ, ಅವರ ಬಾಳು ಬಂಗಾರವಾಗಲಿ ಎಂದೇ ನಾನು ಆಶಿಸುವೆ. ನೀವೇನಂತೀರ?

ಶಾಂತಲಾ ರಾವ್‌

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

  • ಅಂದು ಶುಕ್ರವಾರ. ಮನೆಯಲ್ಲಿ ಹೆಂಗಳೆಯರಿಗೆ ವಿಶೇಷ ದಿನ. ಮುಸ್ಸಂಜೆ ಏಳು ಗಂಟೆಗೆ ಗೆಳತಿ ನಯನಾಳ ಮನೆಯಲ್ಲಿ ವ್ರತದ ಉದ್ಯಾಪನೆಗೆಂದು ಕರೆದಿದ್ದರು. ಎಲ್ಲಿಯಾದರೂ...

  • ಅಷ್ಟಮಿ ಬಂತೆಂದರೆ ಸಾಮಾನ್ಯವಾಗಿ ಶ್ರೀಕೃಷ್ಣನಿಗೆ ಪ್ರಿಯವಾದ ಅವಲಕ್ಕಿಯ ನೆನಪಾಗುತ್ತದೆ. ಅವಲಕ್ಕಿಯನ್ನು ಉಪಯೋಗಿಸಿ ಬಹಳ ಸುಲಭವಾಗಿ ಸಿಹಿಯನ್ನು ತಯಾರಿಸಬಹುದು. ಅವಲಕ್ಕಿ...

  • ಬಾಲಿವುಡ್‌ನ‌ಲ್ಲಿ ನಿಧನದ ಬಳಿಕವೂ ಆಗಾಗ್ಗೆ ಸುದ್ದಿಯಾಗಿ ಸಿನಿಪ್ರಿಯರನ್ನು, ಬಾಲಿವುಡ್‌ ಮಂದಿಯನ್ನು ಕಾಡುತ್ತಿರುವ ನಟಿ ಶ್ರೀದೇವಿ. ಶ್ರೀದೇವಿಯ ವೈಯಕ್ತಿಕ...

  • ತಾಯೆ ಯಶೋದಾ, ನಿನ್ನ ಮಗನ ತುಂಟಾಟವನ್ನು ಹೇಗೆ ಹೇಳಲಿ... ತಾಯೇ ಯಶೋದಾ ಉಂದನ್‌ ಆಯರ್‌ಕುಲತ್ತುದಿತ್ತ ಮಾಯನ್‌ ಗೋಪಾಲಕೃಷ್ಣನ್‌ ಸೆಯ್ಯಮ್‌... ಇದು ತಮಿಳು ಭಾಷೆಯಲ್ಲಿರುವ...

  • ಸಾಂಪ್ರದಾಯಿಕ ಉಡುಗೆ-ತೊಡುಗೆಗಳಿಗೆ ಅಧಿಕ ಮಹತ್ವ ನೀಡುವ ರಾಜ್ಯಗಳಲ್ಲಿ ತಮಿಳುನಾಡು ಒಂದು. ಮಹಿಳೆಯರು ಉಡುವ ಸಾಂಪ್ರದಾಯಿಕ ಸೀರೆ ಹಾಗೂ ಕುಪ್ಪಸ ಸೀರೆ ಉಡುವ...

ಹೊಸ ಸೇರ್ಪಡೆ