ಕೊಬ್ಬರಿ ಎಣ್ಣೆಯಿಂದ ಶ್ಯಾಂಪೂ ವೈವಿಧ್ಯ

Team Udayavani, Mar 10, 2017, 3:45 AM IST

ಪ್ರಾಚೀನ ಕಾಲದಿಂದಲೂ ಭಾರತೀಯರು ಅದರಲ್ಲಿಯೂ ದಕ್ಷಿಣ ಭಾರತೀಯರು ಹೊಂದಿರುವ ಕಪ್ಪು , ಕಾಂತಿಯುವ ಕೂದಲಿಗೆ ಕೊಬ್ಬರಿ ಎಣ್ಣೆಯ ನಿತ್ಯ ಲೇಪನ ಒಂದು ಮುಖ್ಯ ಕಾರಣ ಎಂಬುದು ದಿಟ.

ಹಾಂ! ಕೊಬ್ಬರಿ ಎಣ್ಣೆಯನ್ನು ಬಳಸಿ ಮನೆಯಲ್ಲೇ ವಿವಿಧ ಬಗೆಯ ಕೂದಲುಗಳಿಗೆ ಆರೋಗ್ಯವರ್ಧಕ ಹಾಗೂ ಸೌಂದರ್ಯವರ್ಧಕ ಶ್ಯಾಂಪೂಗಳನ್ನು ತಯಾರಿಸಬಹುದು.

ಅವುಗಳು ಇಂತಿವೆ:
ಕೊಬ್ಬರಿ ಎಣ್ಣೆಯ ಸಾಮಾನ್ಯ ಶ್ಯಾಂಪೂ
ಹೆಚ್ಚಿನ ಎಲ್ಲಾ ಬಗೆಯ ಕೂದಲಿಗೆ ಒಗ್ಗುವ ಎಲ್ಲರೂ ಬಳಸಬಹುದಾದ ಸುಲಭ ಕೊಬ್ಬರಿ ಎಣ್ಣೆಯ ಶ್ಯಾಂಪೂ ಇಂತಿದೆ.
ವಿಧಾನ: 1/4 ಕಪ್‌ ನೀರು, 4 ಚಮಚ ಲಿಕ್ವಿಡ್‌ ಸೋಪ್‌, 1 ಚಮಚ ಗ್ಲಿಸರಿನ್‌, 4 ಚಮಚ ಕೊಬ್ಬರಿ ಎಣ್ಣೆ.ಇವೆಲ್ಲವನ್ನೂ ಚೆನ್ನಾಗಿ ಒಂದು ಬೌಲ್‌ನಲ್ಲಿ ಕಲಕಿ, ಸ್ವಲ್ಪ ಬೆಚ್ಚಗೆ ಮಾಡಬೇಕು. ಇದನ್ನು ಕೂದಲಿಗೆ  ಚೆನ್ನಾಗಿ ನೊರೆ ಬರುವಂತೆ ಲೇಪಿಸಿ 5-10 ನಿಮಿಷ ಬಿಟ್ಟು ಕೂದಲು ಬೆಚ್ಚಗೆ ನೀರಲ್ಲಿ ತೊಳೆಯಬೇಕು.ಈ ಶ್ಯಾಂಪೂವಿನಿಂದ ಕೂದಲಿನ ಕಾಂತಿ ವರ್ಧಿಸುತ್ತದೆ.

ಕೊಬ್ಬರಿ ಎಣ್ಣೆಯ ಪಿಎಚ್‌ ಬ್ಯಾಲೆನ್ಸ್‌ ಶ್ಯಾಂಪೂ
ನಮ್ಮ ತಲೆಕೂದಲಿನ ಪಿ.ಎಚ್‌. ಅಂಶ ಅಧಿಕವಾಗಿ ಕ್ಷಾರೀಯ ಗುಣದಿಂದಾಗಿ ಕೂದಲು ಒಣಗಿ, ಹೊಟ್ಟು ಉಂಟಾಗುತ್ತದೆ ಮಾತ್ರವಲ್ಲ, ತಲೆಯಲ್ಲಿ ತುರಿಕೆ, ಶಿಲೀಂಧ್ರ (ಫ‌ಂಗಲ್‌) ಸೋಂಕು ಉಂಟಾಗಿ ಹೊಟ್ಟಿನ ಜೊತೆಗೆ ಕೂದಲೂ ಉದುರುತ್ತದೆ.

ಆದ್ದರಿಂದ ಪಿ.ಎಚ್‌. ಬ್ಯಾಲೆನ್ಸ್‌ ಮಾಡುವಂತಹ ಅಂದರೆ ಕೂದಲಿನಲ್ಲಿ ಆಮ್ಲಿàಯತೆ ಅಥವಾ ಕ್ಷಾರೀಯತೆ ಅಧಿಕವಾಗದೆ ಸಮತೋಲನದಲ್ಲಿರುವಂತೆ ಶ್ಯಾಂಪೂ ಬಳಸುವುದು ಅವಶ್ಯ. ಅಂತಹ ಸಂದರ್ಭಗಳಲ್ಲಿ ಈ ಕೆಳಗಿನ ವಿಧಾನದಲ್ಲಿ ಬಳಸುವ ಕೊಬ್ಬರಿ ಎಣ್ಣೆಯ ಶ್ಯಾಂಪೂ ಬಲು ಪರಿಣಾಮಕಾರಿ.
1/2 ಕಪ್‌ ಕೊಬ್ಬರಿ ಎಣ್ಣೆ , 1/2 ಕಪ್‌ ಘೃತಕುಮಾರಿ ಅಥವಾ ಎಲೋವೆರಾದ ಎಲೆ ತಿರುಳು, 20 ಹನಿ ಶ್ರೀಗಂಧ ತೈಲ ಅಥವಾ 2 ಚಮಚ ಶ್ರೀಗಂಧದ ಪೇಸ್ಟ್‌ .

ಇವೆಲ್ಲವನ್ನೂ ಒಂದು ಬೌಲ್‌ನಲ್ಲಿ ಚೆನ್ನಾಗಿ ಮಿಶ್ರ ಮಾಡಬೇಕು. ತದನಂತರ ಗಟ್ಟಿಯಾಗುವ ಸಲುವಾಗಿ ಫ್ರಿಜ್‌ನಲ್ಲಿಡಬೇಕು. ಈ ಮಿಶ್ರಣ ಪುಡ್ಡಿಂಗ್‌ನಂತೆ ಗಟ್ಟಿಯಾದ ಬಳಿಕ ಫ್ರಿಜ್‌ನಿಂದ ತೆಗೆಯಬೇಕು. ತದನಂತರ ತಲೆಯ ಕೂದಲಿಗೆ ಚೆನ್ನಾಗಿ ಮಾಲೀಶು ಮಾಡಿ ಲೇಪಿಸಬೇಕು. ಈ ಕೊಬ್ಬರಿ ಎಣ್ಣೆಯ ಶ್ಯಾಂಪೂವಿನಲ್ಲಿ ಸೋಪ್‌ ಅಥವಾ ಬೇಕಿಂಗ್‌ ಸೋಡಾದ ಅಂಶವಿಲ್ಲ. ಆದ್ದರಿಂದ ಇದು ತಲೆಕೂದಲಿನ ಪಿಎಚ್‌ ಮಟ್ಟವನ್ನು ಸಮತೋಲನಗೊಳಿಸುತ್ತದೆ. ಜೊತೆಗೆ ಔಷಧೀಯ ಗುಣಗಳಿಂದಾಗಿ ತುರಿಕೆ, ಕೊಳೆ, ಹೊಟ್ಟು , ಶಿಲೀಂಧ್ರದ ಸೋಂಕಿನ ಗುಳ್ಳೆ ಹಾಗೂ ಅವುಗಳಿಂದಾಗಿ ಉಂಟಾಗುವ ಕೂದಲು  ಉದುರುವಿಕೆಯನ್ನು ತಡೆಗಟ್ಟುತ್ತದೆ. ಮಕ್ಕಳಲ್ಲಿ ಈ ಶ್ಯಾಂಪೂ ಬಲು ಉಪಯುಕ್ತ.

ಕೊಬ್ಬರಿ ಎಣ್ಣೆ ಹಾಗೂ ಕಾಯಿಹಾಲಿನ ಶ್ಯಾಂಪೂ
ತುಂಬಾ ಒಣಗಿದ ಒರಟಾದ ರೂಕ್ಷ ಕೂದಲಿಗೆ ಅಥವಾ ನ್ಯೂನ ಪೋಷಣೆಯಿಂದಾಗಿ ಅಧಿಕ ಉದುರುವ ಕೂದಲಿಗೆ, ಕಾಂತಿ ಹೊಳಪು ಕಳೆದುಕೊಂಡ ಕೂದಲಿಗೆ ಉತ್ತಮ ಪೋಷಣೆಯನ್ನು ಒದಗಿಸಿ, ಕೂದಲಿನ ಕಾಂತಿ, ಮೃದುತ್ವ ವರ್ಧಿಸಿ ಕೂದಲು ಉದುರುವಿಕೆಯನ್ನು ತಡೆಗಟ್ಟುವ ಈ ಶ್ಯಾಂಪೂ ಮನೆಯಲ್ಲಿಯೇ ಸುಲಭವಾಗಿ ತಯಾರಿಸಬಹುದು.

ಸಾಮಗ್ರಿ: 1/4 ಕಪ್‌ ದಪ್ಪ ಕಾಯಿಹಾಲು, 5 ಚಮಚ ಆಲಿವ್‌ ತೈಲ, 5 ಚಮಚ ಕೊಬ್ಬರಿ ಎಣ್ಣೆ  ಹಾಗೂ ಬಿಸಿನೀರು.
ವಿಧಾನ: ಮೊದಲು ಕಾಯಿಹಾಲು ಹಾಗೂ ಎರಡೂ ಬಗೆಯ ಎಣ್ಣೆಗಳನ್ನು ಕಲಕಿ ಚೆನ್ನಾಗಿ ಪೇಸ್ಟ್‌ ತಯಾರಿಸಬೇಕು. ಇದನ್ನು ಕೂದಲಿಗೆ ಲೇಪಿಸಿ ತುದಿ ಬೆರಳುಗಳಿಂದ ವರ್ತುಲಾಕಾರವಾಗಿ ಮಾಲೀಶು ಮಾಡಬೇಕು. 10-15 ನಿಮಿಷದ ಬಳಿಕ ಬಿಸಿನೀರಿನಲ್ಲಿ ದಪ್ಪ ಬಟ್ಟೆ (ಟರ್ಕಿ ಟವೆಲ್‌) ಅದ್ದಿ ಕೂದಲಿಗೆ ಶಾಖ ನೀಡಬೇಕು. ಹತ್ತು ನಿಮಿಷಗಳ ಬಳಿಕ ಬಿಸಿ ನೀರಿನಲ್ಲಿ ತೊಳೆಯಬೇಕು. ರೇಶಿಮೆಯ ನುಣುಪಿನ ಕೂದಲು ಉಂಟಾಗುತ್ತದೆ. ಜೊತೆಗೆ ಹೊಟ್ಟು , ಕೂದಲು ಉದುರುವುದು ನಿವಾರಣೆಯಾಗುತ್ತದೆ.

– ಡಾ| ಅನುರಾಧಾ ಕಾಮತ್‌

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

  • ಮನಸ್ಸಿನಷ್ಟು ನಿಗೂಢವಾದದ್ದು ಬೇರೊಂದಿಲ್ಲ. ನಮ್ಮ ಎಲ್ಲ ಕ್ರಿಯೆಗಳಿಗೂ ಹೈಕಮಾಂಡ್‌ ಮನುಷ್ಯನ ಮಸ್ತಿಷ್ಕವೇ, ನಮ್ಮ ಅಂಗಾಗಗಳೆಲ್ಲ ನಮ್ಮ ಮನಸ್ಸಿನ ಅಧೀನ. ವಿಶ್ವವಿಖ್ಯಾತಿ...

  • ಹಿಂದಿ ಚಿತ್ರರಂಗದಲ್ಲಿ ಇತ್ತೀಚೆಗೆ ಸಿನಿಮಾಗಳಿಗಿಂತ ವೆಬ್‌ ಸೀರೀಸ್‌ಗಳೇ ದೊಡ್ಡ ಪ್ರಮಾಣದಲ್ಲಿ ಸದ್ದು ಮಾಡುತ್ತಿವೆ. ಹೌದು, ಕಳೆದ ಎರಡು ವರ್ಷಗಳಿಂದ ಹಿಂದಿಯಲ್ಲಿ...

  • ಮಕ್ಕಳ ಮನೋವಿಜ್ಞಾನದ ಅರಿವಿರದವರು, ಮಕ್ಕಳ ಮನಸ್ಸನ್ನು ಅರಿಯದವರು ಒಬ್ಬ ಉತ್ತಮ ಶಿಕ್ಷಕನಾಗಲು ಸಾಧ್ಯವಿಲ್ಲ. ಪಾಠ ಬೋಧನೆಯ ಮೂಲಕ ತನ್ನ ಜ್ಞಾನವನ್ನು ಮಗುವಿಗೆ...

  • ನಮ್ಮ ಹೆಮ್ಮೆಯ ಕನ್ನಡ ನಾಡಿನ ಮಹಿಳೆಯರ ಸಾಂಪ್ರದಾಯಿಕ ಉಡುಗೆಯು ಬಹು ವೈವಿಧ್ಯಪೂರ್ಣವಾಗಿದೆ. ಕನ್ನಡ ನಾಡಿನ ಮಹಿಳೆಯರ ಸಾಂಪ್ರದಾಯಿಕ ಉಡುಗೆ "ಸೀರೆ'. ಈ ಸೀರೆಗಳಲ್ಲಿಯೂ...

  • ಬೆಳಗಿನ ಬಿಡುವಿಲ್ಲದ ಸಮಯದಲ್ಲಿ ತಿಂಡಿ ಅಥವಾ ಲಂಚ್‌ ಬಾಕ್ಸ್‌ಗೆ ಫ‌ಟಾಫ‌ಟ್‌ ಅಂತ ಕಡಿಮೆ ಸಾಮಗ್ರಿಗಳನ್ನು ಬಳಸಿಕೊಂಡು ಸರಳ‌ವಾಗಿ ತಯಾರಿಸುವ ರುಚಿಕರ ಹಾಗೂ...

ಹೊಸ ಸೇರ್ಪಡೆ