ಹೆಣ್ಣು ಮತ್ತು ಹೊಂದಾಣಿಕೆ

Team Udayavani, Nov 15, 2019, 5:30 AM IST

“ಎರಡು ಜಡೆ ಸೇರಿದರೆ ಜಗಳ’ ಎನ್ನುತ್ತಾರೆ. ಇದು ಸತ್ಯಕ್ಕೆ ದೂರವಾದ ಮಾತು. ಶಾಲೆಯಲ್ಲಾಗಲಿ, ಕಾಲೇಜಿನಲ್ಲಾಗಲಿ, ಗೆಳತಿಯರಿಬ್ಬರು ಆತ್ಮೀಯರಾದಷ್ಟು ಗೆಳೆಯರಿಬ್ಬರು ಆಗಿದ್ದಿಲ್ಲ…

ಹೊಂದಾಣಿಕೆಗೂ ಹೆಣ್ಣಿಗೂ ಏನೋ ಒಂದು ಅವಿನಾಭಾವ ಸಂಬಂಧ. ಜೀವನದ ಪ್ರತಿಯೊಂದು ಘಟ್ಟದಲ್ಲೂ ಹೊಂದಿಕೊಳ್ಳಲೇ ಬೇಕಾದ ಅನಿವಾರ್ಯತೆ ಆಕೆಗಿರುವುದರಿಂದಲೋ ಏನೋ, ಆಕೆ ಎಲ್ಲಿಯೂ ಯಾರೊಂದಿಗೂ ಸಹಜವೆಂಬಂತೆ ಹೊಂದಿಕೊಳ್ಳುತ್ತಾಳೆ. ಇದಕ್ಕೆ ಅಪವಾದವೂ ಇಲ್ಲದಿಲ್ಲ.

ಬಾಲ್ಯದಲ್ಲಿ ಅಣ್ಣ-ತಮ್ಮಂದಿರೊಡನೆ ಹೊಂದಿಕೊಳ್ಳುವ ಆಕೆ ಅವರಲ್ಲೂ ಒಂದು ಉತ್ತಮ ಸಂಸ್ಕಾರ ಬೆಳೆಯಲು ಕಾರಣಳಾಗುತ್ತಾಳೆ. ನೀವು ನೋಡಿರಬಹುದು ಕೇವಲ ಗಂಡು ಮಕ್ಕಳೇ ಇರುವ ಮನೆಯ ಹುಡುಗರಿಗಿಂತ ಅಕ್ಕತಂಗಿಯರೊಡನೆ ಬೆಳೆದ ಹುಡುಗರಲ್ಲಿ ನಯ- ನಾಜೂಕು ಸ್ವಲ್ಪ ಜಾಸ್ತಿ.

ಮದುವೆಯ ನಂತರವೋ ಹೆಣ್ಣು ಹೊಂದಾಣಿಕೆಯ ಮಹಾಪರ್ವವನ್ನೇ ಎದುರಿಸಬೇಕಾಗುತ್ತದೆ. ದಾಸವರೇಣ್ಯರಾದ ಪುರಂದರದಾಸರೇ ತಮ್ಮ ಕೀರ್ತನೆಯಲ್ಲಿ “ಬುದ್ಧಿ ಮಾತು ಹೇಳಿದರೆ ಕೇಳಬೇಕಮ್ಮ, ಮಗಳೇ, ಮನ ಶುದ್ಧಳಾಗಿ ಗಂಡನೊಡನೆ ಬಾಳಬೇಕಮ್ಮ’ ಎಂದು ಹೆಣ್ಣು ಕೊಟ್ಟ ಮನೆಯಲ್ಲಿ ಹೇಗೆ ಹೊಂದಿಕೊಂಡು ಹೋಗಬೇಕೆಂದು ಹೇಳಿದ್ದಾರೆ. ಇನ್ನೂ ಮುಂದುವರಿದು ಅವರು “ತಂಗಿಗೆ ಹೇಳಿದ ಕೃಷ್ಣ ಚಂದದಿಂದಲಿ ಬುದ್ಧಿ , ಅತ್ತೆಯ ಮನೆಯಲ್ಲಿ ಇರುವಂತ ಸುದ್ದಿ’ ಎಂದು ಶ್ರೀಕೃಷ್ಣ ಪರಮಾತ್ಮನೇ ತನ್ನ ತಂಗಿಗೆ ಗಂಡನ ಮನೆಯಲ್ಲಿ ಹೇಗೆ ಹೊಂದಿಕೊಂಡು ಹೋಗಬೇಕು ಎಂದು ತಿಳಿಸಿ¨ªಾನೆ ಎಂಬರ್ಥದಲ್ಲಿ ಕೀರ್ತನೆಯೊಂದನ್ನು ರಚಿಸಿ¨ªಾರೆ. ಆದರೆ, ಎಲ್ಲಿ ಕೂಡ ಗಂಡಿಗೆ ಹೊಂದಿಕೊಂಡು ಹೋಗು ಎಂಬರ್ಥದ ಪದ್ಯ ನನಗೆ ಸಿಗಲಿಲ್ಲ. ಅಂದರೆ ಹೊಂದಿಕೊಂಡು ಹೋಗುವುದು ಏನಿದ್ದರೂ ಹೆಣ್ಣಿನ ಜವಾಬ್ದಾರಿ. “ಸೇವಂತಿಗೆ ಚೆಂಡಿನಂತ ಮುದ್ದು ಕೋಳಿ ತಾಯಿ ಮಡಿಲಿನಲಿ ಬೀಡುಬಿಟ್ಟ ಮುದ್ದು ಕೋಳಿ’ ಎಂಬಂತಿರುವ ಹೆಣ್ಣು ಮಗಳನ್ನು ಮದುವೆ ಮಾಡಿ ಕಿವಿಗಿಷ್ಟು ಹಿತವಚನಗಳನ್ನು ತುಂಬಿ ಹೊಂದಿಕೊಂಡು ಹೋಗು ಎಂದು ಗಂಡನ ಮನೆಗೇನೋ ಕಳಿಸಿಕೊಡುತ್ತಾರೆ. ಆದರೆ, ಹೊಂದಿಕೊಂಡು ಹೋಗು ಎಂದು ಹೇಳುವುದು ಸುಲಭ. ಹೊಂದಿಕೊಂಡು ಹೋಗಲು ಬೇಕಾಗಿರುವುದು ಅಪಾರ ಸಹನೆ. ಅದು ಹೆಣ್ಣಲ್ಲಿರುವುದರಿಂದಲೇ ಆಕೆಗೆ ಅನುಸರಿಸಿಕೊಂಡು ಹೋಗಲು ಸಾಧ್ಯವಾಗಿರುವುದು. ಹುಟ್ಟಿ ಬೆಳೆದ ಪರಿಸರದಲ್ಲಿನ ರೀತಿ-ರಿವಾಜು, ಆಹಾರ ಪದ್ಧತಿಗೂ ಹೊಸ ವಾತಾವರಣದ ಪದ್ಧತಿಗೂ ಅಜಗಜಾಂತರ ವ್ಯತ್ಯಾಸವಿರಬಹುದು. ಆದರೆ, ಹೆಣ್ಣು ಹೊಂದಿಕೊಂಡು ಹೋಗಲೇಬೇಕು. ಇದು ಸುಲಭ ಸಾಧ್ಯವಾಗುವುದು ಮನೆಯ ಸದಸ್ಯರೆಲ್ಲರ ಸಹಕಾರದಿಂದಲೇ. ಮದುವೆಯಾಗುವವರೆಗೂ ಮನೆಬಿಟ್ಟು ಬೇರೆಡೆ ಹೋಗಿ ಗೊತ್ತಿರದ ಹೆಣ್ಣು ಮದುವೆಯಾಗಿ ವರ್ಷವಾಗುವುದರೊಳಗೆ ಗಂಡನ ಮನೆಗೇ ಹೊಂದಿಕೊಂಡು ಅಪರೂಪಕ್ಕೊಮ್ಮೆ ತವರಿಗೆ ಬಂದಾಗ ಜಾಗ ಬದಲಾದಕ್ಕೋ ಏನೋ ರಾತ್ರಿಯಿಡೀ ನಿದ್ರೆಯಿಲ್ಲ ಎನ್ನುವಾಗಲೋ ಅಥವಾ ಅಡುಗೆಯ ರುಚಿ ಬದಲಾಗಿದೆ ಎನ್ನುವಾಗಲೋ ಹೆತ್ತವರೇ ಮೂಗಿನ ಮೇಲೆ ಬೆರಳಿಡುವಂತಾಗುತ್ತದೆ.

ಇನ್ನು ಮಗು ಹುಟ್ಟಿದ ಮೇಲಂತೂ ಹೆಣ್ಣಿನ ಜೀವನ ಶೈಲಿಯೇ ಬದಲಾಗುವಷ್ಟು ಹೊಂದಾಣಿಕೆಯನ್ನು ಆಕೆ ಮಾಡಿಕೊಳ್ಳಬೇಕಾಗುತ್ತದೆ.

“ಎರಡು ಜಡೆ ಸೇರಿದರೆ ಜಗಳ’ ಎನ್ನುತ್ತಾರೆ. ಆದರೆ, ನನಗೇಕೋ ಇದು ಸತ್ಯಕ್ಕೆ ದೂರವಾದ ಮಾತು ಎಂದೆನಿಸುತ್ತದೆ. ಶಾಲೆಯಲ್ಲಾಗಲಿ ಕಾಲೇಜಿನಲ್ಲಾಗಲಿ ಗೆಳತಿಯರಿಬ್ಬರು ಆತ್ಮೀಯರಾದಷ್ಟು ಗೆಳೆಯರಿಬ್ಬರು ಆಗಿದ್ದಿಲ್ಲ. ನೀವು ನೋಡಿರಬಹುದು, ಯಾವುದೇ ಮನೆಯಲ್ಲಿ ಅತ್ತಿಗೆ-ನಾದಿನಿಯರಿಬ್ಬರು ಅಥವಾ ವಾರಗಿತ್ತಿಯರಿಬ್ಬರು ಅನ್ಯೋನ್ಯರಾಗಿರುವಷ್ಟು, ಸಲಿಗೆಯಿಂದ ಒಟ್ಟಿಗೆ ಕೂತು ಕಷ್ಟಸುಖ ಮಾತಾಡುವಷ್ಟು ಸಲೀಸಾಗಿ ಷಡªಕರಿಬ್ಬರು ಅಥವಾ ಬಾವಬಾಮೈದರು ಇರುವುದನ್ನು ನೋಡಲಿಲ್ಲ. ಅವರ ಮಾತುಕತೆ ಏನಿದ್ದರೂ ಮಳೆಬೆಳೆ, ರಾಜಕೀಯ, ಕ್ರಿಕೆಟ್‌ ಇದರ ಸುತ್ತ ಸುತ್ತುತ್ತಿರುತ್ತದೆ. ಅಕ್ಕತಂಗಿಯರ ನಡುವೆ ಅಭಿಪ್ರಾಯ ಭೇದವಿದ್ದರೂ ಹೊಂದಿಕೊಂಡು ಇರುತ್ತಾರೆ, ಅದೇ ಅಣ್ಣ-ತಮ್ಮಂದಿರ ನಡುವೆ ಭಿನ್ನಾಭಿಪ್ರಾಯ ಬಂದರೆ ಅದು ಕೋರ್ಟ್‌ ಮೆಟ್ಟಿಲೇರುತ್ತದೆ. ಮದುವೆಗೆ ಮುಂಚೆ ಯಾವ ವಿಷಯದಲ್ಲಾದರೂ ತನ್ನದೇ ಸರಿ ಎಂದು ನಿರೂಪಿಸಲು ಸಾಕ್ಷಿ ಪುರಾವೆಗಳನ್ನು ಒಟ್ಟು ಹಾಕುತ್ತಿದ್ದ ಹುಡುಗಿ ಈಗ ಮದುವೆಯ ನಂತರ ತನ್ನದು ತಪ್ಪಿಲ್ಲದಿದ್ದರೂ ವಾದ-ಪ್ರತಿವಾದಗಳಿಗಿಂತ ಮನಃಶಾಂತಿ ಮುಖ್ಯ ಎಂದು ತಿಳಿದು ಹೊಂದಿಕೊಂಡು ಹೋಗುವುದನ್ನು ಕಲಿತಿದ್ದಾಳೆ. ಮದುವೆಯಾದೊಡನೆ ಅತ್ತೆಯೊಂದಿಗೆ ಹೊಂದಿಕೊಂಡ ಹೆಣ್ಣು ಈಗ ಇಳಿವಯಸ್ಸಿನಲ್ಲಿ ಸೊಸೆಯೊಂದಿಗೆ ಅನುಸರಿಸಿಕೊಂಡು ಹೋಗಬೇಕಾಗಿದೆ. ಈ ಮೇಲೆ ಹೇಳಿದ ಹೊಂದಾಣಿಕೆಯ ವಿಷಯವೆಲ್ಲ 70-80ರ ದಶಕದಲ್ಲಿ ಹುಟ್ಟಿದ ಹೆಣ್ಣುಮಕ್ಕಳಿಗೆ ಅನ್ವಯವಾಗುವಂಥ‌ವು. ಅದಕ್ಕೂ ಹಿಂದಿನ ಹೆಣ್ಣುಮಕ್ಕಳು ಹೊಂದಿಕೊಂಡು ಹೋಗಿದ್ದು, ಅಬಬ್ಟಾ! ಯೋಚಿಸಲೂ ಸಾಧ್ಯವಿಲ್ಲ. ಆದರೆ ಈಗಿನ ಹೆಣ್ಣುಮಕ್ಕಳಿಗೆ ಹೊಂದಾಣಿಕೆಯ ಬಿಸಿ ಅಷ್ಟು ತಾಗುತ್ತಿಲ್ಲ ಎಂದೇ ಹೇಳಬಹುದು. ಕೂಡುಕುಟುಂಬ ಮರೆಯಾಗುತ್ತಿರುವ ಈಗಿನ ಕಾಲದಲ್ಲಿ ಗಂಡ ಹೆಂಡತಿ ಮಗು ಇಂತಹ ನ್ಯೂಕ್ಲಿಯರ್‌ ಫ್ಯಾಮಿಲಿಯಲ್ಲಿ ಹೇಗಿದ್ದರೂ ಅವರದ್ದೇ ಸಾಮ್ರಾಜ್ಯ. ಹೇಳುವವರಿಲ್ಲ, ಕೇಳುವವರಿಲ್ಲ. “ನಿನಗೆ ಬೇಕಾದ ಹಾಗೆ ಇರಲು ಇದು ನಿನ್ನ ಅಮ್ಮನ ಮನೆಯಲ್ಲ’ ಎನ್ನುವ ಅತ್ತೆಗೆ “ಇದು ನಿಮ್ಮ ಅಮ್ಮನ ಮನೆಯೂ ಅಲ್ಲ’ ಎಂದು ತಣ್ಣಗೆ ಹೇಳಿ ಚಿಕ್ಕಪುಟ್ಟ ವಿಷಯಗಳನ್ನು ತಲೆಗೆ ಹಚ್ಚಿಕೊಳ್ಳದೇ ಇರಲು ಕಲಿತಿದ್ದಾರೆ ಈಗಿನ ಹುಡುಗಿಯರು. ಗಂಡು ಮಕ್ಕಳೂ ಇತ್ತೀಚೆಗೆ ಅನುಸರಿಸಿಕೊಂಡು ಹೋಗಲು ಕಲಿತಿ¨ªಾರೆ. ಇದೊಂದು ಒಳ್ಳೆಯ ಬೆಳವಣಿಗೆಯೇ. ಏನಿದ್ದರೂ ಈ ನಾಲ್ಕು ದಿನದ ಸಂಸಾರದಲ್ಲಿ ಹೆಣ್ಣಾಗಲೀ ಗಂಡಾಗಲೀ ಹೊಂದಿಕೊಂಡು ಹೋಗುವುದರಿಂದ ಸಣ್ಣವರಾಗುವುದಿಲ್ಲ ಬದಲಿಗೆ “ತಾಳಿದವನು ಬಾಳಿಯಾನು’ ಎಂಬಂತೆ ಗೆದ್ದೇ ಗೆಲ್ಲುತ್ತಾರೆ.

ಶಾಂತಲಾ ಎನ್‌. ಹೆಗ್ಡೆ


ಈ ವಿಭಾಗದಿಂದ ಇನ್ನಷ್ಟು

  • ಗಂಡನಾದವನು ಸಾಮಾನ್ಯ ನಾಗರಿಕನಾಗಿರುತ್ತಾನೆ ಎಂದಿಟ್ಟುಕೊಳ್ಳಿ. ಸಮಾಜದಲ್ಲಿ ಅವನಿಗೆ ಘನತೆಯ ಸ್ಥಾನಮಾನವೇನೂ ಇರುವುದಿಲ್ಲ. ಹೇಳಿಕೊಳ್ಳುವ ಸಾಧನೆಯನ್ನೇನೂ...

  • ಟಿವಿ ಎಂಬ ಮಾಯಾಂಗನೆಯು ಮನುಷ್ಯನನ್ನು ಆವರಿಸಿಕೊಳ್ಳದ ಕಾಲದಲ್ಲಿ ನನ್ನ ವಿದ್ಯಾಭ್ಯಾಸ ಮುಗಿದಿತ್ತು ಎಂಬುದು ನನ್ನ ಪೂರ್ವಜನ್ಮ ಪುಣ್ಯದ ಫ‌ಲ. ಆಗಿನ ಹಳ್ಳಿಗಳ...

  • ಕಥನ ಸಾಹಿತ್ಯದ ಮೂಲಕ ಅಪಾರ ಓದುಗ ವರ್ಗವನ್ನು ಸೃಷ್ಟಿಸಿದ ಕನ್ನಡದ ಜನಪ್ರಿಯ ಲೇಖಕಿಯರಲ್ಲಿ ಪದ್ಮಾ ಶೆಣೈ ಕೂಡ ಒಬ್ಬರು. ಸ್ವಾತಂತ್ರ್ಯೋತ್ತರ ಅವಧಿಯಲ್ಲಿ ತಮ್ಮ...

  • ರಾಜಕುಮಾರಿ ಮನೆಯೊಳಗೆ ಬಗ್ಗಿ ನೋಡಿದಳಂತೆ. ಆಗ ಕಂಡದ್ದೇನು ಗೊತ್ತಾ? ಅಲ್ಲಿದ್ದಾಕೆಯ ಕೋರೆದಾಡೆಗಳು ಹೊರ ಬಂದಿದ್ದವು. ಇನ್ನೇನು ರಾಜಕುಮಾರಿಯನ್ನು ಸುಟ್ಟು ತಿನ್ನುವ...

  • ದಕ್ಷಿಣದಿಂದ ಉತ್ತರಕ್ಕೆ ಹೋಗಿ ಬಾಲಿವುಡ್‌ ಅಂಗಳದಲ್ಲಿ ತಮ್ಮದೇ ಆದ ಛಾಪು ಮೂಡಿಸಿ ಮಿಂಚುತ್ತಿರುವ ನಟಿಯರ ಸಂಖ್ಯೆ ಸಾಕಷ್ಟು ದೊಡ್ಡದಿದೆ. ಇನ್ನು, ಇತ್ತೀಚೆಗೆ...

ಹೊಸ ಸೇರ್ಪಡೆ