ಹೋಗಿ ಬಾ ಮಗುವೆ ಶಾಲೆಗೆ

Team Udayavani, Jun 7, 2019, 6:00 AM IST

ಮೊನ್ನೆ ಮೊನ್ನೆಯಷ್ಟೇ ಅಂಬೆಗಾಲಿಟ್ಟು ಮನೆಯೆಲ್ಲ ಓಡಾಡುತ್ತಿದ್ದ ಕಂದ ಈಗ ಶಾಲೆಗೆ ಹೋಗಲಿದೆೆ ಎಂಬುದು ಒಂದು ಕಡೆ ಖುಷಿಯ ಸಂಗತಿಯಾದರೆ ಮತ್ತೂಮ್ಮೆ ಅಲ್ಲಿ ಹೇಗಿರುತ್ತದೋ, ಏನು ಮಾಡುತ್ತದೋ ಎಂಬ ತಳಮಳ.

ಇನ್ನೇನು ಮಗನ ಶಾಲೆ ಶುರುವಾಗಿದೆ. ಇಷ್ಟು ದಿನ ಬೆಕ್ಕಿನ ಮರಿಯಂತೆ ನನ್ನ ಹಿಂದೆ-ಮುಂದೆ “ಅಮ್ಮಾ ಅಮ್ಮಾ’ ಎಂದು ತಿರುಗುತ್ತಿದ್ದವನು ಇನ್ನು ಪುಟ್ಟ ಬ್ಯಾಗ್‌ ಅನ್ನು ಹೆಗಲಿಗೇರಿಸಿಕೊಂಡು ಶಾಲೆಗೆ ಹೊರಡಲಿದ್ದಾನೆ. ಇಷ್ಟು ವರ್ಷ ಮನೆಬಿಟ್ಟು ಬೇರೆಲ್ಲೂ ಹೋಗದವನು ಒಂದು ಮೂರು ತಾಸು ಪ್ರಿಕೆಜಿಯಲ್ಲಿ ಕುಳಿತು ಬರಲಿದ್ದಾನೆ. ಈ ಮೂರು ಗಂಟೆ ನನ್ನ ಅವನ ಪಾಲಿಗೆ ಒಂದು ದೊಡ್ಡ ಅಂತರ ಎನ್ನಬಹುದು. ಎಲ್ಲಕ್ಕಿಂತ ಹೆಚ್ಚಾಗಿ ಸುರಿವ ಮಳೆಗೆ ಬೆಚ್ಚಗೆ ಹೊದ್ದು ಸಕ್ಕರೆ ನಿದ್ದೆಯ ಸವಿಯುತ್ತ ಆವಾಗವಾಗ ಚಿಂಟು ಚಾನೆಲ್‌ನ ಯಾವುದೋ ಪಾತ್ರಧಾರಿಯಲ್ಲಿ ನೆನಪಿಸಿಕೊಂಡು ಗುಳಿ ಕೆನ್ನೆಯ ಸುಳಿಯೊಳಗೆ ನಗು ಮೂಡಿಸುತ್ತಿದ್ದವನನ್ನು ಎಬ್ಬಿಸುವುದೇ ನನಗೊಂದು ಬೇಸರದ ಸಂಗತಿ.

ಆದರೂ ಮಗ ಮೊದಲ ಬಾರಿ ಶಾಲೆಯತ್ತ ಮುಖ ಮಾಡಿದ್ದಾನೆ. ಇನ್ನು ಅವನ ಶೈಕ್ಷಣಿಕ ಜೀವನ ಶುರುವಾಗಲಿದೆ ಎಂದು ಮನಸ್ಸಿಗೆ ಸಾವಿರ ಬಾರಿ ತಿಳಿಹೇಳಿದರೂ ಒಳಗೊಳಗೆ ತಲ್ಲಣ, ಆತಂಕ ಸುಳಿದಾಡುತ್ತಲೆ ಇರುತ್ತದೆ. ಮೊನ್ನೆ ಮೊನ್ನೆಯಷ್ಟೇ ಅಂಬೆಗಾಲಿಟ್ಟು ಮನೆಯಲ್ಲ ಓಡಾಡುತ್ತಿದ್ದ ಕಂದ ಈಗ ಶಾಲೆಗೆ ಹೋಗಲಿದ್ದಾನೆ ಎಂಬುದು ಒಂದು ಕಡೆ ನನ್ನ ಪಾಲಿಗೆ ಖುಷಿಯ ಸಂಗತಿಯಾದರೆ ಮತ್ತೂಮ್ಮೆ ಅಲ್ಲಿ ಹೇಗಿರುತ್ತಾನೋ ಏನು ಮಾಡುತ್ತಾನೋ ಎಂಬ ತಳಮಳ. ಇಷ್ಟು ದಿನ ಹಟ ಹಿಡಿದಾಗ ಶಾಲೆಯಾದರೂ ಬೇಗ ಶುರುವಾಗಲಿ ನಿನ್ನ ಕಾಟ ಸ್ವಲ್ಪ ಮಟ್ಟಿಗಾದರೂ ತಪ್ಪುತ್ತೆ ಎಂದು ಬೈಯುತ್ತಿದ್ದವಳು ಈಗ ಬಾಯಿಗೆ ಬೀಗ ಜಡಿದು ಒಮ್ಮೊಮ್ಮೆ ಮಗನ ಮೇಲೆ ಮುದ್ದು ಉಕ್ಕಿ ಬಂದು ಮುದ್ದಾಡುತ್ತೇನೆ.

ಅಮ್ಮನ ತಲ್ಲಣಗಳು
ಪ್ರತಿಯೊಬ್ಬ ತಾಯಿಗೂ ಮಗುವನ್ನು ಮೊದಲ ಬಾರಿ ಶಾಲೆಗೆ ಕಳುಹಿಸುವಾಗ ಏನೋ ಒಂದು ತಳಮಳ, ಆತಂಕಗಳು ಕಾಡೇ ಕಾಡಿರುತ್ತದೆ. ಇಷ್ಟು ದಿನ ನಮ್ಮ ಕಣ್ಗಾವಲಿನಲ್ಲಿದ್ದ ಮಗು ಈಗ ಶಾಲೆಗೆ ಹೊರಟಿದೆ. ಅವನ ಬೇಕು, ಬೇಡಗಳನ್ನು ಅಲ್ಲಿ ಹೇಗೆ ಅರಹುತ್ತಾನೆ? ಮಕ್ಕಳ ಜತೆ ಹೇಗೆ ಬೆರೆಯುತ್ತಾನೋ, ಅಮ್ಮನ ನೆನಪಾಗಿ ಅಳುತ್ತಾನೋ. ಸರಿಯಾಗಿ ಊಟ ತಿನ್ನುತ್ತಾನೋ ಇಲ್ವೋ? ಬೇರೆ ಮಕ್ಕಳು ಅವನನ್ನು ಹೊಡೆದಾರೂ ಹೀಗೆ ಸಾಕಷ್ಟು ಪ್ರಶ್ನೆ, ಯೋಚನೆಗಳು ಅಮ್ಮನ ಮನದ ಪಟಲದಲ್ಲಿ ಮೂಡಿ ತಲ್ಲಣಗೊಳಿಸುತ್ತದೆ. ಇನ್ನು ಶಾಲೆ ಹತ್ತಿರವಿಲ್ಲದೇ ಬಸ್‌ನಲ್ಲಿ ಮಗು ಹೋಗುವಂತಿದ್ದರೆ ಅದೊಂದು ಮತ್ತೂಂದು ರೀತಿಯ ದುಗುಡ. ಇಷ್ಟು ದಿನ ಮನೆಯಲ್ಲಿದ್ದ ಮಗು ಶಾಲೆಗೆ ಹೋದ ನಂತರ ಮನೆಯಲ್ಲ ಖಾಲಿ ಖಾಲಿ ಅನಿಸಿಬಿಡುತ್ತದೆ. ಎಲ್ಲೋ “ಅಮ್ಮಾ’ ಎಂದು ಕರೆದಂತೆ ಅನಿಸಿಬಿಡುತ್ತದೆ. “ಎಲ್ಲಿದ್ದಿಯಾ?’, “ಏನು ಮಾಡುತ್ತಿದ್ದಿಯಾ?’ ಎಂದು ನಾವೇ ದಿನದಲ್ಲಿ ಹತ್ತಾರು ಬಾರಿ ಮಗುವನ್ನು ಕೂಗಿ ಕೂಗಿ ಕರೆದು ರೂಢಿಯಾಗಿರುವುದರಿಂದ ಬಟ್ಟೆ ಒಗೆಯುವುದಕ್ಕೆ ಹೋದಾಗ, ಸ್ನಾನ ಮಾಡುವುದಕ್ಕೆ ಹೋದಾಗ ಮಗುವನ್ನು ಮಗುವಿನ ಅನುಪಸ್ಥಿತಿ ಕಾಡುತ್ತಿರುತ್ತದೆ. ಅರೆ! ತೀರಾ ಪೊಸೆಸಿವ್‌ ತಾಯಿ ಆಗುತ್ತಿದ್ದೇನಾ ಎಂಬ ಅನುಮಾನವೂ ಮನದಲ್ಲಿ ಮೂಡುತ್ತದೆ.

ಕಂದನ ತಳಮಳ
ಇಷ್ಟು ದಿನ ಅಮ್ಮನ ಮಡಿಲು, ಮನೆಯನ್ನೇ ಆಟದ ಬಯಲು ಮಾಡಿಕೊಂಡಂತಿದ್ದ ಮಗುವಿಗೆ ಒಮ್ಮೆಲೆ ಶಾಲೆಯ ಶಿಸ್ತಿನ ವಾತಾವರಣಕ್ಕೆ ಹೊಂದಿಕೊಳ್ಳುವುದು ತುಸು ಕಷ್ಟವೆನಿಸುತ್ತದೆ. ಗುರುತು ಪರಿಚಯವಿಲ್ಲದ ಮಕ್ಕಳು, ಮಿಸ್‌, ಹೀಗೆ ಎಲ್ಲವೂ ಅವುಗಳಿಗೆ ಹೊಸತಾಗಿರುವುದರಿಂದ ಮಕ್ಕಳಲ್ಲೂ ದುಗುಡದ ಮೋಡ ಕಟ್ಟಿ ಕಣ್ಣೀರಾಗಿ ಹರಿಯುತ್ತದೆ. ತಾಯಂದಿರಿಗೆ ತುಂಬಾ ಅಂಟಿಕೊಂಡಿರುವ ಕೆಲವು ಸೂಕ್ಷ್ಮ ಮನಸ್ಥಿತಿಯ ಮಗುವಿಗೆ ಶಾಲೆ ಹಿಡಿಸುವುದು ಕಷ್ಟ. ಅದು ಅಲ್ಲದೇ, ತಾಯಂದಿರು ಇವತ್ತು ನೀನು ಸ್ಕೂಲಿಗೆ ಹೋದರೆ ನಿನಗೆ ಕೇಸರಿಬಾತ್‌ ಮಾಡಿಕೊಡುತ್ತೇನೆ ಅಥವಾ ಇನ್ನೇನು ತಂದುಕೊಡುತ್ತೇನೆ ಹೀಗೆ ಏನೇನೋ ಪುಸಲಾಯಿಸಿ, ಆಮಿಷ ವೊಡ್ಡಿ ಕಳುಹಿಸಿರುತ್ತಾರೆ. ಆದರೆ ಶಾಲೆಯಲ್ಲಿ ಇನ್ನೊಂದು ಮಗು ಅಳುವುದನ್ನು ನೋಡಿ ಈ ಮಗು ಅಳುವುದಕ್ಕೆ ಶುರುಮಾಡುತ್ತದೆ. ನಿಧಾನಕ್ಕೆ ಹೊಂದಿಕೊಂಡರೂ ಆರಂಭದ ದಿನಗಳಲ್ಲಿ ಇವೆಲ್ಲವೂ ಸಹಜವಾಗಿರುತ್ತದೆ.

ಬದಲಾಗುವ ಅಮ್ಮನ ದಿನಚರಿ
ಇನ್ನು ಮಗು ಶಾಲೆಗೆ ಹೊರಟಿತೆಂದರೆ ಅಮ್ಮನ ದಿನಚರಿಯಲ್ಲಿ ಗಮನಾರ್ಹವಾದ ಬದಲಾವಣೆಯಾಗುತ್ತದೆ. ಇಷ್ಟು ದಿನ ಮಗು ತಡವಾಗಿ ಎದ್ದರೆ ಎಳ್ಳಷ್ಟು ಬೇಸರಿಸಿಕೊಳ್ಳದೇ ಮಗು ಏಳುವುದರೊಳಗೆ ಬೇಗ ಬೇಗನೆ ಮನೆಕೆಲಸವೆಲ್ಲಾ ಮುಗಿಸಿಕೊಳ್ಳಬಹುದು ಎಂದು ನಿರಾಳವಾಗಿದ್ದ ಅಮ್ಮನಿಗೆ ಈಗ ಸಕ್ಕರೆಯ ನಿದ್ದೆಯಲ್ಲಿರುವ ಮಗುವನ್ನು ಎಬ್ಬಿಸುವುದೇ ದುಸ್ಸಾಹಸದ ಕೆಲಸ. ಮಗು ತಡವಾಗಿ ಎದ್ದರೆ ಎಲ್ಲಾ ಕೆಲಸ ಉಲ್ಟಾಪಲ್ಟಾವಾಗುತ್ತದೆ ಎಂಬ ಚಿಂತೆ ಕಾಡುತ್ತದೆ. ಬ್ರಶ್‌ ಮಾಡಿಸುವುದರಿಂದ ಹಿಡಿದು, ಯೂನಿಫಾರ್ಮ್ ಹಾಕಿ ಬಸ್‌ಗೆ ಕಳುಹಿಸುವ ವರೆಗೂ ಕಾಲಿಗೆ ಚಕ್ರ ಕಟ್ಟಿಕೊಂಡೆ ಓಡಾಡಬೇಕಾಗುತ್ತದೆ. ಇನ್ನು ತಿಂಡಿ ತಿನ್ನುವುದಕ್ಕೆ ಹಟ ಹಿಡಿದರಂತೂ ಅವಳ ಪಾಡು ಕೇಳುವುದೇ ಬೇಡ. ಮಗು ಸರಿಯಾಗಿ ತಿನ್ನದೇ ಹೋದರೆ ಅಮ್ಮನಿಗೆ ಏಕಾದಶಿ. ಇಷ್ಟು ದಿನ ತಡವಾಗಿ ಏಳುವ ಅಮ್ಮ ಕೂಡ ಅಲರಾಂ ಇಟ್ಟುಕೊಂಡೇ ಮಲಗಬೇಕಾಗುತ್ತದೆ. ಬೆಳಿಗ್ಗೆ ತಿಂಡಿ ಏನು ಮಾಡಲಿ? ಮಧ್ಯಾಹ್ನಕ್ಕೆ ಲಂಚ್‌ ಬಾಕ್ಸ್ ಏನು ಕಟ್ಟಿಕೊಡಲಿ ಎಂದು ಯೂಟ್ಯೂಬೋ ಅಥವಾ ಇವಾಗಲೇ ಮಗುವನ್ನು ಶಾಲೆಗೆ ಕಳುಹಿಸಿದ ಗೆಳತಿಯನ್ನೋ ತಡಕಾಡುತ್ತಿರುತ್ತಾಳೆ. ಜತೆಗೆ ಮಗು ಸ್ಕೂಲಿನಿಂದ ಬರುವುದರೊಳಗೆ ಅಡುಗೆ, ಮನೆಕೆಲಸವೆಲ್ಲ ಮುಗಿಸಿಕೊಂಡು ಕಾಯಬೇಕು ಎಂಬ ಹಪಾಹಪಿ.

ಸಮಯದ ಸದುಪಯೋಗ
ಮಕ್ಕಳು ಮನೆಯಲ್ಲಿದ್ದಾಗ ಅದು ಕೊಡು, ಇದು ಕೊಡು, ಎಂದು ಅಥವಾ ಏನಾದರು ಕೆಲಸ ಮಾಡುವಾಗ ರಚ್ಚೆ ಹಿಡಿಯುವುದೋ ಹೀಗೆ ಏನೇನೋ ತುಂಟಾಟ ಮಾಡುತ್ತಾ ಇರುತ್ತವೆ. ಅವರು ಸ್ಕೂಲ್‌ಗೆ ಹೋದ ನಂತರ ತಾಯಂದಿಗೆ ಒಂದಷ್ಟು ಸಮಯ ಸಿಗುತ್ತದೆ. ಇಷ್ಟು ವರ್ಷ ಮಗುವಿನ ಲಾಲನೆ-ಪಾಲನೆಯಲ್ಲಿ ಸಮಯ ಕಳೆದಿದ್ದವರಿಗೆ ಈಗ ಮಿಕ್ಕ ಸಮಯವನ್ನು ತಮ್ಮ ಆಸಕ್ತಿಯತ್ತ ಗಮನಹರಿಸಲು ಒಂದೊಳ್ಳೆ ಅವಕಾಶ. ಬರವಣಿಗೆ, ಓದು, ಗಾರ್ಡನಿಂಗ್‌ ಅಥವಾ ಯಾವುದಾದರೂ ಹೊಲಿಗೆ ಕ್ಲಾಸ್‌- ಹೀಗೆ ಸಿಕ್ಕ ಸ್ವಲ್ಪ ಸಮಯವನ್ನು ಉಪಯೋಗಿಸಿಕೊಳ್ಳಬೇಕು. ಆದಷ್ಟು ಅಡುಗೆ, ತಿಂಡಿ ಕೆಲಸವನ್ನು ಬೇಗ ಮುಗಿಸಿಕೊಳ್ಳುವ ಚಾಕಚಕ್ಯತೆ ಕಲಿತುಕೊಳ್ಳಬೇಕು. ಆಗ ಸಮಯವೂ ಕಳೆಯುತ್ತದೆ, ಹೊಸತನ್ನು ಕಲಿತ ಖುಷಿಯೂ ಇರುತ್ತದೆ.

ಮಗುವಿಗೆ ತಿಳಿಹೇಳಿ…
ಮೂರು ವರ್ಷದ ಮಗುವಿಗೆ ಗುಡ್‌ ಟಚ್‌ ಬ್ಯಾಡ್‌ ಚಟ್‌ ಬಗ್ಗೆ ಪಾಠ ಮಾಡುವುದು ಸ್ವಲ್ಪ ಕಷ್ಟವೇ, ಆದರೂ ಸರಳ ಭಾಷೆಯಲ್ಲಿ ಮಗುವಿಗೆ ಅರ್ಥವಾಗುವಂತೆ, “ಇಲ್ಲಿ ಯಾರಾದರೂ ಮುಟ್ಟಿದರೆ ಅಮ್ಮನ ಬಳಿ ಬಂದು ಹೇಳು’ ಎಂದು ತಿಳಿಹೇಳಿ. ಪ್ರತಿದಿನ ಶಾಲೆಯಲ್ಲಿ ಏನೆಲ್ಲಾ ಸಂಗತಿಗಳು ನಡೆದವೋ ಅದನ್ನೆಲ್ಲ ಅಮ್ಮನ ಬಳಿ ಕಡ್ಡಾಯವಾಗಿ ಹೇಳುವಂತೆ ಪ್ರೋತ್ಸಾಹಿಸಿ. ಪ್ರತಿಯೊಂದನ್ನೂ ಪ್ರಶ್ನಿಸಿ. ನಿನ್ನ ಜೊತೆ ಇಂದು ತರಗತಿಯಲ್ಲಿ ಯಾರು ಕೂತರು? ಮಿಸ್‌ ನಿನ್ನ ಬಳಿ ಏನು ಕೇಳಿದರು? ಶಾಲೆಯಲ್ಲಿ ಟಾಯ್ಲೆಟ್‌ ಹೋದೆಯಾ? ಯಾರಾದರೂ ನಿನಗೆ ಪೆಟ್ಟು ಕೊಟ್ಟರಾ… ಹೀಗೆ ಸಣ್ಣ ಪುಟ್ಟ ಪ್ರಶ್ನೆಗಳನ್ನು ಕೇಳಿ ತಿಳಿದುಕೊಳ್ಳಿ. ಇದರಿಂದ ನಿಮಗೆ ಮಗು ಶಾಲೆಯಲ್ಲಿ ಏನು ಮಾಡುತ್ತದೆ ಎಂಬುದು ಸ್ಪಷ್ಟವಾದರೆ, ಮಗುವಿಗೆ ಎಲ್ಲವನ್ನು ಬಂದು ಮನೆಯಲ್ಲಿ ಹೇಳಿಕೊಳ್ಳಬೇಕೆಂಬ ಸಂಗತಿ ಮನದಟ್ಟಾಗುತ್ತದೆ.

ಪವಿತ್ರಾ ರಾಘವೇಂದ್ರ ಶೆಟ್ಟಿ

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

  • ಬೀಡಿ ಉದ್ಯಮವು ಕರಾವಳಿಯ ಜಿಲ್ಲೆಗಳಲ್ಲಿ ಲಕ್ಷಾಂತರ ಮಹಿಳೆಯರಿಗೆ ಬದುಕು ಕೊಟ್ಟಿದೆ. ಎರಡು ದಶಕಗಳ ಹಿಂದೆ ಉಡುಪಿ, ಮಂಗಳೂರು ಮತ್ತು ಕಾಸರಗೋಡು ಜಿಲ್ಲೆಗಳಲ್ಲಿ...

  • ಇಂದು ರಾಷ್ಟ್ರೀಯ ಬಾಲಕಿಯರ ದಿನ. ಬದುಕು ಕೊಡುವ, ಬದುಕನ್ನು ಕಟ್ಟಲು ನೆರವಾಗುವ ಹೆಣ್ಣುಮಕ್ಕಳು ಬೇಡವೆನ್ನುವ ಮನೋಭಾವ ಬೆಳೆಯದಂತೆ ಮನೆಯ ಗಂಡುಮಗುವಿಗೆ ತಿಳಿಹೇಳುವುದು...

  • "ನಮ್‌ ಕುಂದಾಪ್ರ ಹುಡ್ಗ ಬೆಂಗ್ಳೂರಲ್ಲಿ ಇದ್ರೆಂತಾಯಿತ್‌, ಅವ ಇಲ್ಲಿಯವನೇ ಅಲ್ದಾ ...' ಅನ್ನೋ ಅಕ್ಕರೆಯಲ್ಲಿ ಚಲನಚಿತ್ರ ನಿರ್ದೆಶಕ ರಿಷಭ್‌ ಶೆಟ್ಟಿ ಅವರ ಮನೆಯನ್ನು...

  • "ಕಾಲು ತೊಳೆದು ಒಳಗೆ ಬಾ ಎಂದು ಎಷ್ಟು ಸಲ ಹೇಳಬೇಕು ನಿನಗೆ, ನೋಡಿಲ್ಲಿ ಹೇಗಾಗಿದೆ ನೆಲ?' ಅಮ್ಮ ಬೊಬ್ಬಿಡುತ್ತಿದ್ದರೆ ಸುಳ್ಳು ಸುಳ್ಳೇ ಕಾಲು ತೊಳೆದೆನೆಂದು ಹೇಳಿದ...

  • ಕೆಲದಿನಗಳ ಹಿಂದಷ್ಟೇ ಬಾಲಿವುಡ್‌ ನಟಿ ದೀಪಿಕಾ ಪಡುಕೋಣೆ ಅಭಿನಯದ ಛಪಾಕ್‌ ಸಿನಿಮಾ ಅದ್ದೂರಿಯಾಗಿ ತೆರೆಗೆ ಬಂದಿತ್ತು. ಆದರೆ, ಛಪಾಕ್‌ ಸಿನಿಮಾ ಬಿಡುಗಡೆಗೂ ಮೊದಲು...

ಹೊಸ ಸೇರ್ಪಡೆ