ಅರ್ಧ ಶತಮಾನದ ಬದುಕು

Team Udayavani, Nov 8, 2019, 4:21 AM IST

ಪ್ರಕೃತಿಯಲ್ಲಿ ಪಕ್ಷಿಗಳು ಗೂಡುಕಟ್ಟಿ ಮೊಟ್ಟೆ ಇಟ್ಟು ಮರಿಗಳು ಹೊರಬರುತ್ತವೆ. ಆ ಮರಿಗಳ ಆರೈಕೆಯ ಸಂಪೂರ್ಣ ಹೊಣೆ ಪಕ್ಷಿಗಳದ್ದು. ರೆಕ್ಕೆಬಲಿತ ಮರಿಗಳು ಸ್ವತಂತ್ರವಾಗಿ ಹಾರಬೇಕು, ತಮ್ಮಷ್ಟಕ್ಕೆ ತಾವೇ ಬದುಕಬೇಕು. ಕಡೆಗೊಂದು ದಿನ ಗೂಡನ್ನು ಬಿಟ್ಟು ಮತ್ತೆಲ್ಲೋ ತಮ್ಮ ಗೂಡನ್ನು ಕಟ್ಟುತ್ತವೆ. ಮೊದಲಿದ್ದ ಗೂಡು ಖಾಲಿ! ಇದು ನಿಸರ್ಗ ನಿಯಮ. ಇದು ಮಾನವರಿಗೂ ಅನ್ವಯವಾಗುತ್ತದೆ. ತಂದೆ-ತಾಯಿ ಮಕ್ಕಳನ್ನು ಪಡೆದು ಅವರನ್ನು ಲಾಲಿಸಿ ಪಾಲಿಸುತ್ತಾರೆ. ಮಗು ತನ್ನ ಬದುಕಿನ ಮೊದಲ ಕೆಲವು ವರ್ಷಗಳು ತಾಯಿಯ ಮೇಲೆಯೇ ಸಂಪೂರ್ಣ ಅವಲಂಬಿತವಾಗಿರುತ್ತದೆ. ಕ್ರಮೇಣ ವಿದ್ಯಾಭ್ಯಾಸ ಒಂದು ಹಂತಕ್ಕೆ ಬಂದಾಗ/ಮುಗಿದಾಗ ಬೇರೆಡೆ ಹೋಗುವುದು ಅನಿವಾರ್ಯ.

ಐವತ್ತು ವರ್ಷ ತುಂಬಿದಾಗ, ವಾಹ್‌, ಅರ್ಧ ಸೆಂಚುರಿ ದಾಟಿಬಿಟ್ಟೆ ಎಂದು ಗಂಡಸರು ಸಂಭ್ರಮಿಸುತ್ತಾರೆ. ಆದರೆ, ಹೆಂಗಸರ ಕತೆ ಹಾಗಲ್ಲ. 50 ವರ್ಷ ಎಂಬುದು ಹೆಂಗಸರ ಪಾಲಿಗೆ ಆರ್ಥಿಕವಾಗಿಯೂ ಅಂಥ ಸಂತಸದ ಸಮಯವೇನಲ್ಲ. ಹೆಚ್ಚುತ್ತಿರುವ ಮಕ್ಕಳ ವಿದ್ಯಾಭ್ಯಾಸದ ಖರ್ಚು, ಚಿಕಿತ್ಸೆಯ ವೆಚ್ಚ, ಮಕ್ಕಳ ಭವಿಷ್ಯದ ಬಗ್ಗೆ ಆಲೋಚನೆ, ಹಣದುಬ್ಬರ, ನಿವೃತ್ತಿಯ ನಂತರ ಮುಂದೇನು ಎಂಬ ಚಿಂತೆ… ಇವೆಲ್ಲಾ ಮಹಿಳೆಯರನ್ನು ಇನ್ನಷ್ಟು ಕುಗ್ಗಿಸುತ್ತವೆ.

“ನವಲತ್ತು, ತಾರುಣ್ಯದ ವೃದ್ಧಾಪ್ಯ; ಐವತ್ತು, ವೃದ್ಧಾಪ್ಯದ ತಾರುಣ್ಯ’- ಇದು ಮಧ್ಯ ವಯಸ್ಸಿನ ಕುರಿತು ಪ್ರಸಿದ್ಧ ಲೇಖಕ ವಿಕ್ಟರ್‌ ಹ್ಯೂಗೋನ ಮಾತು.

ವಿದ್ಯಾಭ್ಯಾಸ, ಉದ್ಯೋಗ, ಮದುವೆ, ಮಕ್ಕಳು, ಮನೆ… ಹೀಗೆ, ಜೀವನದಲ್ಲಿ ಒಂದು ಮಟ್ಟಿಗೆ ಸಾಧಿಸಿದ್ದೇನೆ ಎನ್ನುವ ತೃಪ್ತಿದಲ್ಲಿದ್ದ ಆಕೆಗೆ, ಇದ್ದಕ್ಕಿದ್ದಂತೆ ಕನ್ನಡಿಯಲ್ಲಿ ಕಂಡಿದ್ದೇನು? ಅಲ್ಲಲ್ಲಿ ಹೊಳೆಯುವ ಬೆಳ್ಳಿಕೂದಲು, ಕಣ್ಣಂಚಿನ ಮಡಿಕೆ, ಮುಖದ ನೆರಿಗೆ, ಹೆಚ್ಚುವ ದೇಹದ ತೂಕ, ಒರಟಾದ ಚರ್ಮ… ಅರೆ! ಜಿಂಕೆಮರಿಯಂತೆ ಜಿಗಿದಾಡಿ, ಅಂದುಕೊಂಡಿದ್ದನ್ನೆಲ್ಲ ಸಾಧಿಸುತ್ತೇನೆ, ಹೊಸದಾಗಿ ಏನನ್ನಾದರೂ ಮಾಡುತ್ತೇನೆ ಎನ್ನುವ ಹುರುಪಿನ ದಿನಗಳು ಎಲ್ಲಿ ಹೋದವು? ಎಲ್ಲದಕ್ಕೂ ಹೆದರುವ ಜೀವ, ಕಾಡುವ ಹತಾಶಭಾವ- ಏನಾಗಿದೆ? ಹೆಚ್ಚೇನಿಲ್ಲ; ವಯಸ್ಸು ಐವತ್ತಾಗಿದೆ ಅಷ್ಟೇ!

ಬಾಲ್ಯ, ಹರೆಯ, ವೃದ್ಧಾಪ್ಯ ಇವು ಮಾನವ ಜೀವನದ ಮೂರು ಪ್ರಮುಖ ಹಂತಗಳು. ಬಾಲ್ಯದ ಮುಗ್ಧತೆ ಚೆಂದವಾದರೆ, ಹರೆಯದಲ್ಲಿ ಎಲ್ಲವೂ ಅಂದ. ಅದೇ ನಲವತ್ತನ್ನು ದಾಟಿ ಐವತ್ತಕ್ಕೆ ಕಾಲಿಡುತ್ತಿದ್ದಂತೆ ದೈಹಿಕ, ಮಾನಸಿಕ, ಸಾಮಾಜಿಕ ಹಾಗೂ ಆರ್ಥಿಕ ಬದಲಾವಣೆಗಳ ಚಕ್ರಕ್ಕೆ ಸಿಲುಕಿ ಮಹಿಳೆಯರು ಒದ್ದಾಡುವುದು ಸಹಜ. ಬಹಳಷ್ಟು ಸಂದರ್ಭಗಳಲ್ಲಿ , ಐವತ್ತರ ನಂತರದ ಬದುಕು ಮಹಿಳೆಗೆ ಸಂಕ್ರಮಣ ಕಾಲವಷ್ಟೇ ಅಲ್ಲ, ಸಂಘರ್ಷದ ಕಾಲವೂ ಹೌದು.

ದೈಹಿಕ-ಮಾನಸಿಕ ಸಮಸ್ಯೆಗಳು
ನಲವತ್ತರ ಅಂಚಿನಲ್ಲಿ ಕಂಡುಬರುವ “ವಯಸ್ಸಾಗುವಿಕೆ’ಯ ಆರಂಭಿಕ ಲಕ್ಷಣಗಳು ಐವತ್ತರಲ್ಲಿ ಪ್ರಖರವಾಗುತ್ತವೆ. ದೇಹದ ಜೀವಕೋಶಗಳ ಸಾಮರ್ಥ್ಯ ಕುಗ್ಗಿದಂತೆ ಮತ್ತು ಜೀವನಶೈಲಿಯ ಪರಿಣಾಮವಾಗಿ ಮಧುಮೇಹ, ಏರಿದ ರಕ್ತದೊತ್ತಡ, ಮೂಳೆಗಳ ಸಾಂದ್ರತೆ ಕಡಿಮೆಯಾಗಿ ಪೊಳ್ಳು ಮೂಳೆಗಳು ಜೊತೆಯಾಗುತ್ತವೆ. ಹೀಗಾಗಿ ಕೈ-ಕಾಲು ನೋವು ಶುರುವಾಗುತ್ತದೆ. ಆನಂತರದಲ್ಲಿ ಒಂದೊಂದಾಗಿ ರೋಗ-ತೊಂದರೆಗಳ ದಾಳಿ. ಇದರ ಜತೆಗೇ ಋತುಬಂಧವಾಗಿ ನಿಶ್ಶಕ್ತಿ. ಕುಗ್ಗಿದ ಸಾಮರ್ಥ್ಯ, ಸಿಟ್ಟು-ಸಿಡಿಮಿಡಿ-ಕಿರಿಕಿರಿ. ಕ್ಯಾನ್ಸರ್‌ನಂಥ ರೋಗಗಳ ಸಂಭವನೀಯತೆ ಹೆಚ್ಚಾಗಿಬಿಟ್ಟರೆ ಎಂಬ ಭಯ. ವಯೋಸಹಜವಾಗಿ ಆಗುವ ಬದಲಾವಣೆಗಳಿಂದ ಮಹಿಳೆಯ ಬಾಹ್ಯರೂಪವೂ ಬದಲಾಗುತ್ತದೆ. ಇದು ಸಹಜವಾದರೂ, ಮಹಿಳೆಯರಲ್ಲಿ “ತಾನು ಆಕರ್ಷಕವಾಗಿಲ್ಲ, ಲೈಂಗಿಕವಾಗಿ ಅಸಮರ್ಥಳು, ಮಕ್ಕಳಾಗಲು ಸಾಧ್ಯವಿಲ್ಲ’ ಎಂಬ ಕೀಳರಿಮೆ ಹುಟ್ಟಿ ಜೀವನಸಂಗಾತಿಯ ಜತೆಯೂ ಸಂಬಂಧ ಹದಗೆಡುತ್ತದೆ. ಹರೆಯದ ಹುಮ್ಮಸ್ಸಿನಲ್ಲಿ ರಾಣಿಯಂತೆ ಹುಕುಂ ಮಾಡಿ, ಮಹಾರಾಣಿಯಂತೆ ಮೆರೆದಿದ್ದವಳು ಬದಲಾದ ಸಂದರ್ಭದಲ್ಲಿ ಜಾರುವ ವಯಸ್ಸನ್ನು ನಿಲ್ಲಿಸಲಾಗದೇ ಅಸಹಾಯಕಳಾಗಿ ತೊಳಲಾಡುತ್ತಾಳೆ. ಇವೆಲ್ಲದರ ಜತೆ ಬದಲಾದ ಸನ್ನಿವೇಶಗಳು, ಪೋಷಕರ ಅನಾರೋಗ್ಯ/ಸಾವು, ಪತಿಯ ಕಾಯಿಲೆಯಂಥ ಘಟನೆಗಳು ಮಹಿಳೆಯನ್ನು ಕಂಗೆಡಿಸುತ್ತದೆ. ಇವೆಲ್ಲವೂ ಆಕೆಯ ಮೇಲೆ ಹೆಚ್ಚಿನ ಒತ್ತಡ, ಜವಾಬ್ದಾರಿ ಹೇರುತ್ತವೆ. ಪರಿಣಾಮ, ಕುಂದುತ್ತಿರುವ ದೇಹದ ಶಕ್ತಿ, ಗೊಂದಲಕ್ಕೊಳಗಾದ ಮನಸ್ಸು ಇವುಗಳ ಮೇಲೆ ಇನ್ನಷ್ಟು ಹೊರೆ, ಬದುಕು ಭಾರ ಅನ್ನಿಸತೊಡಗುತ್ತದೆ.

ಇವೆಲ್ಲದರ ಪರಿಣಾಮವಾಗಿ, ಅಂದರೆ ದೇಹ-ಮನಸ್ಸು ಸಂಬಂಧಗಳ ಬದಲಾವಣೆಗಳಿಂದ ಮಹಿಳೆಯ ಆರೋಗ್ಯದಲ್ಲಿ ತೊಂದರೆಗಳು ಸಾಮಾನ್ಯ ಎಂಬಂತೆ ಆಗಿಬಿಡುತ್ತದೆ. ಆದರೆ, ಅಂಕಿಗಳಲ್ಲಿ ವಯಸ್ಸು ಎಷ್ಟೇ ಇರಲಿ, ಅದನ್ನು ಅನುಭವಿಸುವ ರೀತಿ ನಮ್ಮ ಮನಸ್ಸಿನಲ್ಲಿದೆ. ಆದ್ದರಿಂದ, ಬರಲಿರುವ ದಿನಗಳ ಬಗ್ಗೆ ಭಯ ಪಡುವುದಕ್ಕಿಂತ ಮಾಗಿದ ದೇಹ, ಮನಸ್ಸುಗಳ ಇಂದಿನ ಪ್ರಬುದ್ಧ ಜೀವನವನ್ನು ಆದಷ್ಟೂ ಸಂತೋಷವಾಗಿ ಕಳೆದರೆ, ಫಿಫ್ಟಿ ಕ್ಯಾನ್‌ ಬಿ ಫ‌ನ್‌!

ಎಂಪ್ಟಿಸೆನ್ಸ್ ಸಿಂಡ್ರೋಮ್‌!
ಪ್ರಕೃತಿಯಲ್ಲಿ ಪಕ್ಷಿಗಳು ಗೂಡುಕಟ್ಟಿ ಮೊಟ್ಟೆ ಇಟ್ಟು ಮರಿಗಳು ಹೊರಬರುತ್ತವೆ. ಆ ಮರಿಗಳ ಆರೈಕೆಯ ಸಂಪೂರ್ಣ ಹೊಣೆ ಪಕ್ಷಿಗಳದ್ದು. ರೆಕ್ಕೆಬಲಿತ ಮರಿಗಳು ಸ್ವತಂತ್ರವಾಗಿ ಹಾರಬೇಕು, ತಮ್ಮಷ್ಟಕ್ಕೆ ತಾವೇ ಬದುಕಬೇಕು. ಕಡೆಗೊಂದು ದಿನ ಗೂಡನ್ನು ಬಿಟ್ಟು ಮತ್ತೆಲ್ಲೋ ತಮ್ಮ ಗೂಡನ್ನು ಕಟ್ಟುತ್ತವೆ. ಮೊದಲಿದ್ದ ಗೂಡು ಖಾಲಿ! ಇದು ನಿಸರ್ಗ ನಿಯಮ. ಇದು ಮಾನವರಿಗೂ ಅನ್ವಯವಾಗುತ್ತದೆ. ತಂದೆ-ತಾಯಿ ಮಕ್ಕಳನ್ನು ಪಡೆದು ಅವರನ್ನು ಲಾಲಿಸಿ ಪಾಲಿಸುತ್ತಾರೆ. ಮಗು ತನ್ನ ಬದುಕಿನ ಮೊದಲ ಕೆಲವು ವರ್ಷಗಳು ತಾಯಿಯ ಮೇಲೆಯೇ ಸಂಪೂರ್ಣ ಅವಲಂಬಿತವಾಗಿರುತ್ತದೆ. ಕ್ರಮೇಣ ವಿದ್ಯಾಭ್ಯಾಸ ಒಂದು ಹಂತಕ್ಕೆ ಬಂದಾಗ/ಮುಗಿದಾಗ ಬೇರೆಡೆ ಹೋಗುವುದು ಅನಿವಾರ್ಯ. ಆಗ ಅದುವರೆಗೆ ಮಕ್ಕಳ ಬೇಕು-ಬೇಡಗಳನ್ನು ಪೂರೈಸಿದ, ಅವರ ಜವಾಬ್ದಾರಿ ಹೊತ್ತ ತಾಯಿಗೆ, ಅಗಲುವಿಕೆ ಬೇಸರ ಕಾಡುವುದು ಸಹಜ. ಇದನ್ನು “ಖಾಲಿ ಗೂಡಿನ ಸಹಲಕ್ಷಣ’ ಎನ್ನಲಾಗುತ್ತದೆ. ಇದಕ್ಕೆ ಹೊಂದಿಕೊಳ್ಳಲು ಸಾಮಾನ್ಯವಾಗಿ ತಗಲುವ ಸಮಯ ಒಂದು ವರ್ಷ. ಇದು ಜೀವನದ ಒಂದು ಹಂತದಿಂದ ಇನ್ನೊಂದು ಹಂತಕ್ಕೆ ಮುನ್ನಡೆಯುವಾಗ ಆಗುವ ಪ್ರಕ್ರಿಯೆ. ಪೋಷಕರಿಬ್ಬರಲ್ಲೂ ಇದು ಕಾಣಿಸಬಹುದಾದರೂ ಮಧ್ಯ ವಯಸ್ಸಿನ ತಾಯಿಯರಲ್ಲಿ ಹೆಚ್ಚಾಗಿ ಕಾಣಿಸುತ್ತದೆ.

ಐವತ್ತರಲ್ಲಿ ಬಾಳಪಥ ಹೀಗಿರಲಿ…
.ದೈಹಿಕ ಬದಲಾವಣೆಗಳ ಬಗ್ಗೆ ಅತಿಯಾದ ಕಾಳಜಿ ಬೇಡ. ಆತ್ಮವಿಶ್ವಾಸ ಹೆಚ್ಚಿಸುವ, ವಯಸ್ಸಿಗೆ ಸೂಕ್ತ ಅನ್ನಿಸುವ ಹಿತ-ಮಿತ ಅಲಂಕಾರ ಇರಲಿ.
.ಸಂಗಾತಿಯೊಡನೆ ಕೇವಲ ದೈಹಿಕ ಸಂಬಂಧವಷ್ಟೇ ಅಲ್ಲ, ಭಾವನಾತ್ಮಕ-ಮಾನಸಿಕ ಆತ್ಮೀಯತೆ.
.ಒಳ್ಳೆಯ ಸಮತೋಲನ ಆಹಾರ, ಸರಿಯಾದ ಸಮಯಕ್ಕೆ ನಿದ್ದೆ ಮತ್ತು ನಿತ್ಯ ಅರ್ಧಗಂಟೆ ವ್ಯಾಯಾಮ.
.ಮುಂದಿನ ದಿನಗಳಿಗಾಗಿ ಹಣ ಉಳಿಸುವ ದೂರದೃಷ್ಟಿ.
.ಮಕ್ಕಳು ದೂರದಲ್ಲಿದ್ದರೂ ಪತ್ರ, ದೂರವಾಣಿ, ಇ-ಮೇಲ್‌ ಮೂಲಕ ಅವರೊಡನೆ ನಿರಂತರ ಸಂಪರ್ಕ.
.ನೃತ್ಯ, ಸಂಗೀತ, ಚಿತ್ರಕಲೆ, ನಾಟಕ, ತೋಟಗಾರಿಕೆ- ಹೀಗೆ ದೇಹದ ಸಾಮರ್ಥ್ಯಕ್ಕೆ ಅನುಗುಣವಾಗಿ ಮನಸ್ಸಿಗೆ ಖುಷಿಕೊಡುವ ಏನನ್ನಾದರೂ ಹೊಸತನ್ನು ಕಲಿಯುವ ಪ್ರಯತ್ನ ಮಾಡಿ.
.ದೈನಂದಿನ ಏಕತಾನತೆ ಕಳೆಯಲು ಪುಟ್ಟ ಪ್ರವಾಸ, ಗೆಳತಿಯರೊಂದಿಗೆ ಹರಟೆ, ಪಾರ್ಕ್‌ನಲ್ಲಿ ತಿರುಗಾಟ.
.ಆರೋಗ್ಯದ ಬಗ್ಗೆ ಕಾಳಜಿ, ನಿಯಮಿತವಾಗಿ ವೈದ್ಯರ ಭೇಟಿ.

ಕೆ. ಎಸ್‌. ಚೈತ್ರಾ

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

  • ಮೊನ್ನೆ ಗೆಳತಿಯ ಮನೆಗೆ ಹೋಗಿದ್ದೆ. ಅವಳ ಮನೆಗೆ ಹೋಗುವ ದಾರಿಯಲ್ಲಿ ರಸ್ತೆ ಬದಿಯಲ್ಲಿ ಒಂದು ದೊಡ್ಡ ಮರವಿತ್ತು. ಬಿಸಿಲಿನಿಂದ ನಡೆದು ಹೋಗುವವರಿಗೆಲ್ಲ ಆ ಮರ ನೆರಳು...

  • "ಎರಡು ಜಡೆ ಸೇರಿದರೆ ಜಗಳ' ಎನ್ನುತ್ತಾರೆ. ಇದು ಸತ್ಯಕ್ಕೆ ದೂರವಾದ ಮಾತು. ಶಾಲೆಯಲ್ಲಾಗಲಿ, ಕಾಲೇಜಿನಲ್ಲಾಗಲಿ, ಗೆಳತಿಯರಿಬ್ಬರು ಆತ್ಮೀಯರಾದಷ್ಟು ಗೆಳೆಯರಿಬ್ಬರು...

  • ಕ್ಯಾಪ್ಸಿಕಮ್‌, ದೊಣ್ಣೆಮೆಣಸು, ದಪ್ಪಮೆಣಸು ಇತ್ಯಾದಿ ಹೆಸರುಗಳಿಂದ ಕರೆಯುವ ಈ ಮೆಣಸಿನಕಾಯಿಯಿಂದ ಹಲವಾರು ವೈವಿಧ್ಯಗಳನ್ನು ತಯಾರಿಸಬಹುದು. ಕ್ಯಾಪ್ಸಿಕಮ್‌...

  • ಇತ್ತೀಚೆಗೆ ನಟಿ ಅನುಷ್ಕಾ ಶೆಟ್ಟಿ ಯಾವ ಚಿತ್ರಗಳಲ್ಲೂ ಕಾಣಿಸಿಕೊಳ್ಳುತ್ತಿಲ್ಲವಲ್ಲ ಎಂದು ಬೇಸರಿಸಿಕೊಳ್ಳುತ್ತಿದ್ದ ಅಭಿಮಾನಿಗಳ ಮುಂದೆ ಅನುಷ್ಕಾ ಶೆಟ್ಟಿ...

  • ಹೆಣ್ಣು ಎಂದರೆ ಮಮತೆಯ ಒಡಲು, ಕರುಣೆಯ ಕಡಲು, ತ್ಯಾಗದ ಪ್ರತೀಕ ಎಂದೆಲ್ಲಾ ಹೇಳುತ್ತಾರೆ. ಅಷ್ಟೇ ಅಲ್ಲ, ಭೂಮಿ ತೂಕದ ಹೆಣ್ಣು ಎಂದು ಹೇಳು ವು ದರ ಮೂಲಕ ಹೆಣ್ಣು ಎಂದರೆ...

ಹೊಸ ಸೇರ್ಪಡೆ