ಪಾತ್ರೆ ಪಗಡಿಯ ತಾಳ ಮೇಳ

Team Udayavani, Aug 30, 2019, 5:00 AM IST

ಅಡುಗೆ ಮನೆಯ ಪಾತ್ರೆಪಗಡಿಯ ತಾಳಮೇಳದೊಂದಿಗೆ ಪ್ರಾರಂಭವಾಗುವ ಗೃಹಿಣಿಯ ದಿನಚರಿ ಎಲ್ಲವನ್ನೂ ತೆರೆಯುವ, ತುಂಬಿಸುವ, ಪಕ್ವಗೊಳಿಸುವ, ಹದ ಮಾಡುವ ಕಾಯಕದಲ್ಲಿ ಕಾರ್ಯ ವಿಸ್ತರಿಸುತ್ತಾ, ಕೊನೆಗೆ ಎಲ್ಲವನ್ನೂ ಮುಚ್ಚಿ ಭದ್ರಪಡಿಸುವ ನಾಳೆಯ ನಿರೀಕ್ಷೆಯ ಚಪಾತಿಗೆ ಸಜ್ಜಾಗುವಂಥ ತರಬೇತಿಯ ಹಿಟ್ಟನ್ನು ಕಲಸಿಡುತ್ತ, ನಿಶ್ಚಿಂತ ವಿರಾಮದ ಸುರಕ್ಷಿತತೆಯನ್ನೆಲ್ಲ ಕಟ್ಟುನಿಟ್ಟುಗೊಳಿಸುತ್ತ, ನಾಳೆಯೊಂದು ಮನೆಯವರೆಲ್ಲರ ಶುಭ ನಾಳೆಯಾಗಬೇಕೆಂಬ ಇಚ್ಛಾಶಕ್ತಿಯಲ್ಲಿ ಸಕಲ ಸಿದ್ಧತೆಯೊಂದಿಗೆ ಒರಗಿ ವಿರಮಿಸುವ ಉಲ್ಲಾಸದ ಹೊತ್ತೇ ಗೃಹಿಣಿಯ ಬದುಕಿನ ಸ್ಥಿತ್ಯಂತರ ಭಾವ ಮೊಳೆಯುವ ಅಮೂಲ್ಯ ಕ್ಷಣವಾಗಿರುತ್ತದೆ.

ಮನೆಯ ಗೃಹಿಣಿ ಮನೆಕೆಲಸದಲ್ಲಿ ನಿರತಳಾಗಿದ್ದಾಳೆಂದರೆ ಆಕೆ ಅದಕ್ಕಷ್ಟೇ ಲಾಯಕ್ಕು ಎಂದು ಮೂಗು ಮುರಿಯುವವರ ಧೋರಣೆಯನ್ನು ಬದಲಿಸುವ ಶಕ್ತಿ, ಒಂದು ಲೇಖನಿಯಲ್ಲಿ, ಬರಹದಲ್ಲಿ, ಭಾವದಲ್ಲಿ, ಮೊನಚುಗೊಳಿಸುವಿಕೆಯ ಕ್ರಿಯೆಯಲ್ಲಿ ಇದೆ ಎಂದಾದರೆ, ಅಂತಹ ಪ್ರಯತ್ನ ಖಂಡಿತ ಸಾರ್ಥಕ ಉತ್ತರವಾಗುತ್ತದೆ. ಯಾವುದೋ ಒಂದು “ಬ್ರಾಂಡ್‌’ಗೆ ಅಂಟಿಕೊಂಡವರು ಪೂರ್ವಾಗ್ರಹ ಪೀಡಿತರಾಗಿಯೋ ಅಥವಾ ಹಳದಿ ಕನ್ನಡಕ ಧರಿಸಿಯೋ ವಿಮರ್ಶಾ ತಕ್ಕಡಿಯ ಸೂತ್ರ ಹಿಡಿದಿರುವರೆಂದರೆ ಅವರು ಅವರದೇ ವಲಯದಲ್ಲಿ ಕಳೆದು ಹೋಗಿದ್ದಾರೆ ಎಂದರ್ಥ. ಇನ್ನು ಇನ್ನೊಬ್ಬರ ಮೌಲ್ಯಮಾಪನ ಅಂತಹವರಿಂದ ಹೇಗೆ ಸಾಧ್ಯ. ಹಾಗಾಗಿ, ಯಾವುದೇ ಕಾರಣಕ್ಕೂ ಗೃಹಿಣಿ ಆತ್ಮವಿಶ್ವಾಸವನ್ನು ಬಿಟ್ಟುಕೊಡಬಾರದು. ತನ್ನ ದೌರ್ಬಲ್ಯವನ್ನು ಧನಾತ್ಮಕವಾಗಿ ಬಳಸಿಕೊಳ್ಳಬೇಕೇ ಹೊರತು ಸಾರಾಸಗಟಾಗಿ ತೆರೆದಿಡಬಾರದು.

ಇವತ್ತಿನ ಸಮಾಜದ ಎಲ್ಲ ವಿಕಲ್ಪಗಳಿಗೆ ಮನಸ್ಸು ಸರಿ ಇಲ್ಲದಿರುವುದೇ ಕಾರಣ ಎಂದಾದರೆ ಈ “ಮನ’ ಎಂಬ ಚಿಗುರು ಆರೋಗ್ಯವಾಗಿ ವಿಸ್ತರಿಸಿ ಬೆಳೆಯಲು ಬೇಕಾದ ಆಹಾರ, ನೀರು, ಗೊಬ್ಬರ, ಬೆಳಕು, ಮಳೆ ಎಲ್ಲದರ ಆಶ್ರಯವಿರುವುದು “ಮನೆ’ ಎಂಬ ಚಿತ್ತಸ್ಥಾವರದಲ್ಲಿ. ಮನೆಯ ಭಾವಲೋಕ ಬಣ್ಣದ ಚಿತ್ತಾರದಿಂದ ಶೃಂಗರಿಸಿಕೊಳ್ಳಬೇಕೆಂದರೆ ಅಲ್ಲಿ ಸಂತೃಪ್ತ ಗೃಹಿಣಿಯಿರಬೇಕು. ಗೃಹ ಜಗತ್ತಿನ “ಆತ್ಮಸಂಸ್ಕಾರ’ವೆಂಬ ವೃಕ್ಷದ ಬೇರನ್ನು, ಶಿಸ್ತಿನ ಮಣ್ಣಲ್ಲಿ ಗಟ್ಟಿಗೊಳಿಸುವ ನಿಗೂಢಶಕ್ತಿಯಾಗಿ ಗೃಹಿಣಿ ಪಾತ್ರ ವಹಿಸುತ್ತಾಳೆ. ಹಾಗಾಗಿ ನಿಸ್ಪೃಹತೆಯ ಸಂಭ್ರಮದಲ್ಲಿ ಉಸಿರು ಬಿಡುವ ಗೃಹಿಣಿಯಿಂದ ಮಾತ್ರ ಮನೆ ವರ್ಣಚಿತ್ತಾರವಾಗುತ್ತದೆ. ಬಣ್ಣ ತುಂಬಿಕೊಂಡು ಸುಂದರಗೊಳ್ಳುವ ಸಹಜ ಮನೋವಾಸ್ತು, ಮನೆಯನ್ನು ರೂಪಿಸುತ್ತ ಹೋದರೆ, ವಿಕಲ್ಪಮುಕ್ತ ಸ್ವಸ್ಥ, ಶ್ರೀಮಂತ ಸಮಾಜ ತನ್ನಷ್ಟಕ್ಕೇ ನಿರ್ಮಾಣವಾಗುತ್ತದೆ.

ಗೃಹಿಣಿಯ ಕಾರ್ಯತತ್ಪರತೆ, ಗೃಹ ಬದುಕಿನ ಪರಿಧಿಯಲ್ಲಿನ ಆಕೆಯ ಭಾವ ವಿಸ್ತಾರ ಅರ್ಥ ಮಾಡಿಕೊಂಡಷ್ಟೂ ಆಳವಾಗುತ್ತ ಹೋಗುತ್ತದೆ. ಗೃಹಿಣಿಯ ಕ್ರಿಯಾತ್ಮಕ ಸೃಜನಶೀಲತ್ವದ ಅರ್ಥಾಂತರಾಳದ ವ್ಯಾಪ್ತಿಯ ಅರಿವಾದಷ್ಟೂ ಅದರ ಅರ್ಥ ಬೆಳೆಯುತ್ತ ಹೋಗುತ್ತದೆ. ಈ ನಿಟ್ಟಿನಲ್ಲಿ ಆಕೆ ನಿಗೂಢ ಭೂಮಿಕೆಯ ನೆರಳಾಗಿ ನೇಪಥ್ಯದಲ್ಲಿದ್ದುಕೊಂಡೇ ಸೂತ್ರಧಾರಿಣಿಯ ಪಾತ್ರ ವಹಿಸುತ್ತಾಳೆ. ಇಂದು ತಮಸೋಮಾ ಜ್ಯೋತಿರ್ಗಮಯ ಎಂಬುದು ಗೃಹಿಣಿಯ ನಿತ್ಯ ಮಂತ್ರವಾಗಬೇಕು. ಹಾಗೂ ನಿರಂತರ ಆಶಯವಾಗಬೇಕು. ಆಕೆಯ ಅಪ್ರತಿಮ ದೃಶ್ಯ, ಅಸದೃಶ ವ್ಯಕ್ತಿತ್ವವೆನ್ನುವುದು “ನಿರ್ಲಕ್ಷ್ಯ’ವೆಂಬ ಗಾಢಾಂಧಕಾರದಿಂದ “ನಿತ್ಯ ಗೌರವ’ವೆಂಬ ಬೆಳಕಿಗೆ ತೆರೆದುಕೊಳ್ಳಬೇಕು. ಹತ್ತಿಕ್ಕುವ ತಮಸ್ಸಿನಿಂದ ನಿರಾಳ ಉಸಿರಿನ ತೈಲದಲ್ಲಿ ಬೆಳಗುವ ಜ್ಯೋತಿ ಆಕೆಯ ಬದುಕಿನಲ್ಲಿ ಹರಡಿಕೊಳ್ಳಬೇಕು. ತಾತ್ಸಾರ, ತಿರಸ್ಕಾರ, ಮೊಟಕುಗೊಳಿಸುವಿಕೆಗೆಲ್ಲ ಅಂತ್ಯ ಹಾಡುವ ಒಂದು ಬೆಳಗು ಗೀತೆ ಪಲ್ಲವಿ ವಿಸ್ತರಿಸುತ್ತ ಸಾಗಬೇಕು. ಸಾಗುತ್ತಲೇ ಇರಬೇಕು.

.
ಇಂದಿನವರೆಗೆ ಉದಯವಾಣಿ ಮಹಿಳಾ ಸಂಪದದಲ್ಲಿ ಪ್ರಕಟವಾಗುತ್ತ ಬಂದ ನನ್ನ ಈ “ಗೃಹಮುಚ್ಯತೆ’ ಅಂಕಣ ಲೇಖನ ಮಾಲೆಗೆ ಹಲವು ಕಡೆಗಳಿಂದ, ಹೋದಲ್ಲೆಲ್ಲ ಜನರು ಲೇಖನವನ್ನು ಮೆಚ್ಚಿ ಮಾತನಾಡುತ್ತಾರೆ. ಮುಂದಿನ ಶುಕ್ರವಾರದ ಸಂಚಿಕೆಗಾಗಿ ಕಾಯುತ್ತಿರುತ್ತೇವೆ ಎನ್ನುತ್ತಾರೆ. ಓದುಗರ, ಸ್ನೇಹಿತರ ಈ ಅಭಿಮಾನಕ್ಕಾಗಿ ನಿಜಕ್ಕೂ ನನಗೆ ಸಂತಸವಾಗಿದೆ. ಈ ಅಂಕಣ ಲೇಖನವನ್ನು ಪ್ರಕಟಿಸುವ ಮೂಲಕ ನನ್ನೊಳಗಿನ ವಿಚಾರಧಾರೆಯನ್ನು ಹರಿಬಿಡಲು ಸದವಕಾಶವನ್ನೂ ನನ್ನ ಮನದ ಮಾತುಗಳಿಗೆ ಪ್ರಶಸ್ತ ವೇದಿಕೆಯನ್ನೂ ಒದಗಿಸಿಕೊಟ್ಟ ನನ್ನ ನೆಚ್ಚಿನ ಉದಯವಾಣಿಗೆ ಕೃತಜ್ಞತೆಯ ಹೂಹಾರವನ್ನರ್ಪಿಸುತ್ತೇನೆ. ನನಗೆ ಮೆಚ್ಚುಗೆ, ಪ್ರಶಂಸೆ ವ್ಯಕ್ತಪಡಿಸಿದ ನನ್ನೆಲ್ಲಾ ಪ್ರೀತಿಯ ಓದುಗರಿಗೆ ನಾನು ಆಭಾರಿಯಾಗಿದ್ದೇನೆ. ಮತ್ತೂಮ್ಮೆ ನಾವು ಹೀಗೇ ಭೇಟಿಯಾಗೋಣ ಎನ್ನುತ್ತ ನನ್ನ ಈ ನುಡಿವಾಹಿನಿಯನ್ನು ಇಲ್ಲಿ ಸಂಪನ್ನಗೊಳಿಸುತ್ತಿದ್ದೇನೆ.

(ಅಂಕಣ ಮುಕ್ತಾಯ )

ವಿಜಯಲಕ್ಷ್ಮಿ ಶ್ಯಾನ್‌ಭೋಗ್‌

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.ಈ ವಿಭಾಗದಿಂದ ಇನ್ನಷ್ಟು

  • ಅಜ್ಜಿ-ಅಮ್ಮ, ಮಕ್ಕಳ ಪಾಲನೆಯನ್ನು ಬೇರೆ ಬೇರೆಯಾಗಿ ನೋಡುವುದಾದರೂ ಏಕೆ? ಅಜ್ಜಿಯೂ "ಅಮ್ಮ'ನಾಗಿಯೇ ಮಕ್ಕಳನ್ನು ಬೆಳೆಸಿರುತ್ತಾಳಷ್ಟೆ. ಆದರೆ, ಅಜ್ಜಿಯಾಗಿ ಮಾಗುವ...

  • ಬಿಡುವಿನ ವೇಳೆಗಳಲ್ಲಿ ಪರಸ್ಪರ ಕಷ್ಟ-ಸುಖ ಹಂಚಿಕೊಳ್ಳುವ ಪರಿಪಾಠ ಹೆಚ್ಚಿನ ಎಲ್ಲಾ ಕಚೇರಿಗಳಲ್ಲೂ ಇರುತ್ತದೆ. ಈ ಚರ್ಚೆಗಳ ಸಂದರ್ಭದಲ್ಲಿ ಗಂಡಸರು, ಹೆಂಗಸರು...

  • ಬಾಲಿವುಡ್‌ ಚೆಲುವೆ ವಿದ್ಯಾ ಬಾಲನ್‌ ಯಾವಾಗಲೂ ವಿಭಿನ್ನ ಪಾತ್ರಗಳಿಗೆ ತೆರೆದುಕೊಳ್ಳುವ ನಟಿ. ಬಹುಶಃ ಹಾಗಾಗಿಯೇ ಪ್ರತಿ ಚಿತ್ರದಲ್ಲೂ ವಿಭಿನ್ನ ಪಾತ್ರಗಳು ವಿದ್ಯಾ...

  • ""ರೀ, ನಾನು ದಪ್ಪಗಾಗಿದ್ದೀನ? ಅಂತ ಗಂಡನಲ್ಲಿ ಕೇಳಿದೆ. ನೀನ್ಯಾವಾಗ ಸಣ್ಣಗಿದ್ದೆ ಅನ್ನೋ ಥರ ನೋಡಿ, "ಹಾಗೆ ಕಾಣುತ್ತಪ್ಪಾ!' ಅಂತ ಅಡ್ಡಗೋಡೆಯ ಮೇಲೆ ದೀಪವಿಟ್ಟರು. ಸುಪುತ್ರನಲ್ಲಿ...

  • ಬದನೆ ಹೆಚ್ಚಾಗಿ ಉಪಯೋಗದಲ್ಲಿರುವ ಸಾಮಾನ್ಯ ತರಕಾರಿ. ಬದನೆ ಎಂದರೆ ಎಲ್ಲರೂ ಇಷ್ಟಪಡುತ್ತಾರೆ. ಆದರೆ, ಬದನೆಕಾಯಿ ಎಂದರೆ ಮುಖ ಸಿಂಡರಿಸುವವರೂ ಕೆಲವರು ಇದ್ದಾರೆ....

ಹೊಸ ಸೇರ್ಪಡೆ