ಪುರಾಣ ಗೃಹಿಣಿಯರು!

Team Udayavani, Aug 23, 2019, 5:00 AM IST

ಸಾರ್ವಕಾಲಿಕ ಸತ್ಯ ದರ್ಶನದ, ಸತ್ವ ಪ್ರೇರಣೆಯ ನಿರಂತರವಾದ ಮನೋಚೋದಕ ಸಂಬಂಧವೆಂದರೆ ಕೃಷ್ಣ-ಯಶೋದೆಯರದು. ಪಡೆದ ಮಗು ಯಾವುದೋ, ಹಡೆದಮ್ಮ ಯಾರೊ. ಸತ್ಯಾನ್ವೇಷಣೆಯ ಪ್ರಶ್ನೆಯೇ ಹುಟ್ಟುವುದಿಲ್ಲ. ಬಿಡಿಸಲಾರದ, ಅಗಲಲಾರದ ಈ ಬಂಧದ ಮಾಯೆ, ಮತ್ತೆ ಮತ್ತೆ ಕೃಷ್ಣ ಯಶೋದೆಯರನ್ನು ನಮ್ಮೆದುರು ತಂದು ನಿಲ್ಲಿಸುತ್ತದೆ. ಕೃಷ್ಣ ಹುಟ್ಟಿದನೆನ್ನಲಾದ “ಕಾರಾಗೃಹ’ ಈಗಲೂ ಮಥುರೆಯಲ್ಲಿ ಸಾಕ್ಷಿ ಹೇಳುತ್ತಿದೆ. ದೇವರ ಶಿಶುವಿಗೆ ದಾರಿ ತೋರಿದ ಯಮುನೆ ಈಗಲೂ ಅದೇ ಹದದಲ್ಲಿ ಪ್ರವಹಿಸುತ್ತಿದ್ದಾಳೆ. ಶ್ರಾವಣ ಬಹುಳ ಅಷ್ಟಮಿ, ರೋಹಿಣಿ ನಕ್ಷತ್ರದ ಲೆಕ್ಕಾಚಾರದಲ್ಲಿ ಕೊಂಚ ಹಿಂದೆಮುಂದಾದರೂ ಎಲ್ಲವೂ ಹತ್ತಿರ ಹತ್ತಿರ ಬರುವುದೊಂದು ಸೋಜಿಗ. ಈ ಸಂದರ್ಭದಲ್ಲಿ ಅಮ್ಮಂದಿರೆಲ್ಲ ಯಶೋದೆಯರಾಗಿ, ಗೋಪಿಕೆಯರಾಗಿ ಸಂಭ್ರಮಿಸುತ್ತ, ಪುಟ್ಟ ಮಕ್ಕಳೆಲ್ಲ ಕೃಷ್ಣರಾಧೆಯರ ಅಪರಾವತಾರದಲ್ಲಿ ಬೀದಿ ಬೀದಿಯ ಸಂದುಗೊಂದಿನಲ್ಲಿ ಅಮ್ಮನ ಮಡಿಲು ದಾಟಿ, ಸೊಂಟದಿಂದಿಳಿದು, ಸೆರಗು ಹಿಡಿದು ಮುಂದೆ ಸಂಚರಿಸುತ್ತಿದ್ದರೆ ಅಲ್ಲೊಂದು ಪುಟ್ಟ ಗೋಕುಲವೇ ತೆರೆದುಕೊಳ್ಳುತ್ತದೆ.

ಯಶೋದೆಯೆಂದರೆ ಸಾಮಾನ್ಯ ಗೃಹಿಣಿಯಲ್ಲ. ಕೃಷ್ಣನ ಪಾರಮ್ಯವನ್ನು ಜಗತ್ತಿಗೇ ದರ್ಶಿಸಿದ ಮಾತೃರತ್ನ. ಕೃಷ್ಣನ ಬಾಲ್ಯ ಸುಂದರವಾದದ್ದೇ ಯಶೋದೆಯಿಂದ. ಕೃಷ್ಣ ಅಸಾಮಾನ್ಯನೆನಿಸಿಕೊಂಡಿದ್ದೇ ಯಶೋದೆಯ ಸಮಭಾವದ ತಾಯಮಮತೆಯಲ್ಲಿ. ಕೃಷ್ಣ ಯಶೋದೆಯಿಂದ ಬಾಲ್ಯ ತುಂಬಿಕೊಂಡರೆ, ಯಶೋದೆ ಕೃಷ್ಣನಿಂದ ದಾರ್ಶನಿಕಳಾಗುತ್ತ ಸಾಗುತ್ತಾಳೆ. ಒಮ್ಮೆ ಮುಷ್ಟಿ ಮುಷ್ಟಿ ಮಣ್ಣನ್ನು ಬಾಯಲ್ಲಿಡುವ ಮಗು. ಯಶೋದೆಯ ಮಾತೃತ್ವ ಕಾಳಜಿ, ಮಗುವಿನ ಬಾಯಿಂದ ಮಣ್ಣು ಅಗೆಯತೊಡಗುತ್ತಾಳೆ. ಅಗೆದಷ್ಟೂ , ತೆಗೆದಷ್ಟೂ ಮುಗಿಯದ ಮಣ್ಣಿನ ಒಳಗಿಂದ ಬ್ರಹ್ಮಾಂಡ ದರ್ಶನ. ಮಗುವೆಂಬ ಆತ್ಮಶಕ್ತಿಯ ನಿಗೂಢತೆ ಯಾವ ಅರ್ಥಕ್ಕೂ ನಿಲುಕದ ಪರಮಾರ್ಥವಾಗಿ ಗೋಚರಿಸುತ್ತದೆ.

ಯಶೋದೆ ಮೊಸರು ಕಡೆಯುತ್ತಾಳೆ. ಬೆಣ್ಣೆ ತೆಗೆಯುತ್ತಾಳೆ. ತೆಗೆದ ಎಲ್ಲಾ ಬೆಣ್ಣೆ ಕೃಷ್ಣನಿಗೊಬ್ಬನಿಗೇ ಎನ್ನುತ್ತಾಳೆ. ಆದರೂ ಕೃಷ್ಣ ಮತ್ತೆ ಮತ್ತೆ ಬೆಣ್ಣೆ ಕದಿಯುತ್ತಾನೆ. ಯಶೋದೆ ಏಟು ಕೊಡುತ್ತಾಳೆ. ಬೆಣ್ಣೆ ನನ್ನ ಗೆಳೆಯರಿಗೂ ಬೇಕು ಎನ್ನುತ್ತಾನೆ ಕೃಷ್ಣ. ನನ್ನಂತಹ ಎಲ್ಲ ಮಕ್ಕಳಿಗೂ ಬೆಣ್ಣೆ ತಿನ್ನುವ ಹಕ್ಕಿದೆ. ಈ ಸೃಷ್ಟಿಯ ಪ್ರತಿಯೊಂದು ಜೀವಿಯೂ ಬೆಣ್ಣೆಯಂಥ ಪೌಷ್ಟಿಕಾಂಶಯುಕ್ತ ಆಹಾರದ ಪಾಲುದಾರನಾಗಬೇಕು. ಆ ಮೂಲಕ ಹುಟ್ಟಿದ ಎಲ್ಲ ಜೀವಿಯೂ ಆರೋಗ್ಯವಂತನಾಗಿರಬೇಕು. ಸರ್ವೇಜನಾ ಸುಖೀನೊ ಭವಂತು. ಯಶೋದೆ ಪಡೆದ ಈ “ನವನೀತ ತತ್ವ’ ಗೋಕುಲದ ಎಲ್ಲ ಮಕ್ಕಳಲ್ಲೂ ಕೃಷ್ಣನನ್ನು ಕಾಣುವ ಮನೋಭೂಮಿಕೆಯನ್ನು ಆಕೆಯಲ್ಲಿ ಸೃಜಿಸುತ್ತದೆ.

ರಾಧೆಯಂತಹ ಯುವ ಗೋಪಿಕೆಯರೊಂದಿಗೆ ಕಿಶೋರ ಕೃಷ್ಣನ ಚೆಲ್ಲಾಟ, ಸಲ್ಲಾಪದ ದೂರಿಗೆಲ್ಲ ಯಶೋದೆ ತಲೆಕೆಡಿಸಿಕೊಳ್ಳದೆ ತನ್ನ ಮಮತೆಯ ಕಡಿವಾಣವನ್ನು ಸ್ವಲ್ಪವೂ ಸಡಿಲಿಸುವುದಿಲ್ಲ. ತನ್ನ ಮಗು ಎಂದರೆ ಬೇರಾರಿಗೂ ಇಲ್ಲದ ಅಮೂಲ್ಯ ರತ್ನ ಎಂಬ ಸಹಜ ಮಾತೃಭಾವದೊಂದಿಗೆ ಯಶೋದೆ ತನ್ನ ಮಗ ದೋಷರಹಿತನೆಂದು ಸಮರ್ಥಿಸಿಕೊಳ್ಳುತ್ತಿದ್ದರೆ, ಇತ್ತ ಕೃಷ್ಣ ಪ್ರೀತಿಪ್ರೇಮದ ಹಲವು ಮುಖ-ಲೋಕಗಳ ವಿಶ್ವರೂಪ ದರ್ಶನ ಮಾಡಿಸುತ್ತಾನೆ. ಅಲ್ಲಿ ಯಶೋದೆ ತನ್ನೊಳಗಿನ ಆದೃìಭಾವದ ಮಿತಿಯನ್ನರಿಯುತ್ತಾಳೆ. ಯಶೋದೆಯ ಈ ದ್ವಂದ್ವ ವ್ಯಕ್ತಿತ್ವ ಈಗಲೂ ಗೃಹಿಣಿಯರಲ್ಲಿ ಪ್ರಸ್ತುತವಾಗುತ್ತದೆ.

ಇಂತಹ ಎಷ್ಟೋ ಗೃಹಿಣಿಯರು ತಮ್ಮ ಬದುಕಿನ ತತ್ವದಲ್ಲಿ, ಸಾರ್ವಕಾಲಿಕ ಸತ್ವವನ್ನು ತುಂಬುತ್ತ ಸಾತ್ವಿಕತೆಯ ರೂಪಕವಾಗಿ ಹೋದ ಉದಾಹರಣೆಗಳನ್ನು ನಮ್ಮ ಪೌರಾಣಿಕ ಕಥಾನಕಗಳಲ್ಲಿ ಢಾಳಾಗಿ ಕಾಣಬಹುದು.

ಪಂಚಪತಿಯರೊಂದಿಗೆ ಬದುಕು ಕಟ್ಟಿಕೊಂಡ ಪಾಂಚಾಲಿ ಎಷ್ಟೋ ಸಂದರ್ಭದಲ್ಲಿ ಗಾಳಕ್ಕೆ ಸಿಕ್ಕ ಮೀನಿನ ಪರಿಸ್ಥಿತಿಗೆ ತಲುಪಿದರೂ ತನ್ನದೇ ಸತ್ಯ, ಸತ್ವ, ಶಕ್ತಿ, ಸ್ಥೈರ್ಯದಿಂದ ಬಲೆ ಹರಿದ ಸಬಲೆಯಾಗಿ ಮೂಡಿಬರುತ್ತಾಳೆ. ಮತ್ಸಯಂತ್ರದ ಪಣದಲ್ಲಿ ಗೆದ್ದವನ ಕೈಹಿಡಿದವಳು. ಕಪಟ ಜೂಜಿನ ಕಣದಲ್ಲಿ ಸೋತವನ ಪಣದ ದಾಳವಾಗುತ್ತಾಳೆ. ಎಂತೆಂಥ ಬವಣೆಯಲ್ಲೂ ಕಳೆದುಹೋಗದೆ ಮರಳಿ ಅರಳುತ್ತಾಳೆ. ಅದು ಗೃಹಿಣೀತ್ವದ ಧೀಶಕ್ತಿ.

ಅರ್ಜುನನ ಪತ್ನಿ ಸುಭದ್ರೆ ಪತಿಯ ಅನುಪಸ್ಥಿತಿಯಲ್ಲೂ , ಮಗ ಅಭಿಮನ್ಯುವನ್ನು ಸಕಲ ವಿದ್ಯಾ ಪಾರಂಗತನಾಗಿ, ಮಹಾಭಾರತ ಯುದ್ಧದಲ್ಲಿ ಗುಡುಗುವ ವೀರಪುತ್ರನನ್ನಾಗಿ ರೂಪಿಸಿದ ಪರಿ ಗೃಹಿಣಿಯೊಬ್ಬಳ ಸಾರ್ಥಕ ಬದುಕಿನ ನಿರೂಪಣೆಯಾಗಿ ನಿಲ್ಲುತ್ತದೆ.

ಅದೇ ರೀತಿ ಮಹಾಭಾರತ ಕಥೆಯಲ್ಲಿ ಚಿತ್ರಾಂಗದೆಯೆಂಬ ದಿಟ್ಟ , ಸಮರ್ಥ, ಸಾಧನಶೀಲ ಗೃಹಿಣಿಯೊಬ್ಬಳು, ಹುಟ್ಟಿದ ಮೇಲೆ ತಂದೆಯನ್ನೇ ಪ್ರತ್ಯಕ್ಷವಾಗಿ ನೋಡದ ಮಗುವಿನಲ್ಲಿ ತನ್ನ ಸಂಕಲ್ಪಶಕ್ತಿಯ ಕಲ್ಪನಾವೇದಿಯ ಪ್ರತಿಭೆಯ ಮೂಲಕ ತಂದೆಯ ರೂಪ, ಶೌರ್ಯ, ಗೌರವವನ್ನು ಎಳೆಯ ಭಾವದೊಸರಿನ ಮಣ್ಣಲ್ಲಿ ಬಿತ್ತಿ “ಬಬ್ರುವಾಹನ’ನೆಂಬ ಬಹು ಅಪರೂಪದ ಭಕ್ತಿ, ವಿನಯ, ಸಾಹಸ, ಸಾಧನೆಯ ವೀರಾಗ್ರಣಿಯನ್ನು ರೂಪಿಸಿಕೊಟ್ಟ ಲೋಕವಿಖ್ಯಾತೆ.

ಕುಂತಿ ಏಕಾಂಗಿಯಾಗಿ ಹಲವು ಜವಾಬ್ದಾರಿಗಳನ್ನು ನಿಭಾಯಿಸಿದ ಆದರ್ಶ ಗೃಹಿಣಿ ಎನ್ನಬಹುದು. ಪಂಚ ಪಾಂಡವರ ಮಾತೆಯಾಗಿಯೂ, ಕಾಡು, ಮೇಡುಗಳನ್ನೆಲ್ಲ ಅಲೆಯುವ ಕಡುಕಷ್ಟಕಾಲದಲ್ಲೂ ಮಕ್ಕಳಿಗೆ ಧರ್ಮಸೂಕ್ಷ್ಮತೆಯನ್ನು ಸಮರ್ಥವಾಗಿ ಬೋಧಿಸಿದ ಕಾರಣ ಯಾವ ಸಂದರ್ಭದಲ್ಲೂ ಆಕೆಯ ಮಕ್ಕಳು ಧೃತಿಗೆಡಲಿಲ್ಲ.

ಇದಕ್ಕೆ ವ್ಯತಿರಿಕ್ತವಾಗಿ ಮಹಾಭಾರತದಲ್ಲಿ ಬರುವ ಒಂದು ಗೃಹಿಣಿಯ ಪಾತ್ರ “ಗಾಂಧಾರಿ’. ಆಕೆ ಗಂಡನ ಸಕಲ ಕಷ್ಟಗಳಲ್ಲೂ ತಾನು ಭಾಗಿ ಎಂಬ ಧೋರಣೆಯಲ್ಲಿ ಕುರುಡ ಪತಿಗೆ ಕಾಣದ ಪ್ರಪಂಚವನ್ನು ತಾನೂ ನೋಡುವುದಿಲ್ಲವೆಂದು ಕಣ್ಣಿಗೆ ಬಟ್ಟೆ ಕಟ್ಟಿಕೊಂಡು, ಗಂಡನ ಎಲ್ಲ ಅನ್ಯಾಯ, ಅಪಚಾರಗಳಿಗೆ ಕುರುಡಾಗಿ ಕುಳಿತು ತನ್ನ ನೂರು ಕರುಳ ಕುಡಿಗಳನ್ನು ಕಳೆದುಕೊಂಡಳು.

ಇನ್ನು ರಾಮಾಯಣದಲ್ಲಿ ಬರುವ ಸೀತೆಯಂತೂ ಗೃಹಿಣಿಯ ಸಹನಶೀಲತೆಯ ಪರಾಕಾಷ್ಠೆಯೆನಿಸುತ್ತದೆ. ಒಂದು ಕಾಲದ ಪರುಷಪ್ರಧಾನ ಸಮಾಜದಲ್ಲಿ ಗೃಹಿಣಿಯ ಅಸಹಾಯಕತೆ, ಅನಿವಾರ್ಯತೆ, ನಿರೀಕ್ಷೆಗಳು ಎಂತಹ ಒಂದು ವಿಪರೀತ ಮಟ್ಟದಲ್ಲಿತ್ತು ಎಂಬುದು ನಮಗೆ ಅರಿವಾಗುತ್ತದೆ. ಅದರ ಜೊತೆಜೊತೆಗೇ ಈ ಸೀತೆ ಇಂದಿನ ಗೃಹಿಣಿಯರಲ್ಲೂ ತನ್ನ ಪ್ರತಿರೂಪದ ಭಾವ ಮೂಡಿಸುತ್ತಿರುವುದೂ ಇಂದಿನ ವಾಸ್ತವಕ್ಕೆ ಹತ್ತಿರವೇ ಆಗಿದೆ.

ಇಡೀ ರಾಮಾಯಣ ಕಥಾನಕದಲ್ಲಿ ಊರ್ಮಿಳೆಯ ಪಾತ್ರ ಮಾತ್ರ ವಿಶಿಷ್ಟ ಹಾಗೂ ವಿಶೇಷವಾದುದೆಂದು ಅನೇಕ ನಮ್ಮ ಕವಿ, ಸಾಹಿತಿಗಳು ಗುರುತಿಸಿದ್ದಾರೆ. ಆಗಷ್ಟೇ ಮದುವೆಯಾಗಿ ಹೊಸ ಕನಸುಗಳ ಹಾಡು ಗುನುಗುನಿಸುವ ಸುವರ್ಣ ಕ್ಷಣದಲ್ಲಿ ಪತಿ ಲಕ್ಷ್ಮಣ ತನ್ನನ್ನಗಲಿ ಏಕಾಂಗಿಯಾಗಿ ಕಾಡಿಗೆ ಹೊರಟು ನಿಂತಿದ್ದಾನೆ. ಅದೂ ಒಂದೆರಡು ದಿನವಲ್ಲ. ವಾರವಲ್ಲ. ತಿಂಗಳಲ್ಲ. ಹದಿನಾಲ್ಕು ವರ್ಷ. ಈ ದೀರ್ಘ‌ ಅವಧಿಯಲ್ಲಿ ಲಕ್ಷ್ಮಣ ಕಾಡಿನಲ್ಲಿ ಅಣ್ಣನ ಸೇವೆಯಲ್ಲಿ ಕಳೆದರೆ, ಊರ್ಮಿಳೆ ಅರಮನೆಯಲ್ಲಿಯೇ ಋಷಿಸದೃಶ ಬದುಕು ಕಟ್ಟಿಕೊಂಡು ಪ್ರತಿಕ್ಷಣವೂ ಮಾನಸರೂಪಿಣಿಯಾಗಿ ಕಾಡಿನ ಲಕ್ಷ್ಮಣನ ಜೊತೆಗೆ ಇರುತ್ತಾಳೆ. ಈ ಪ್ರೇಮ ಕಾರುಣ್ಯದ ಗಾಥೆಯೇ ಇಂದಿಗೂ ಕೆಲವು ಪತಿಯಿಂದ ದೂರವಿರುವ ಗೃಹಿಣಿಯರಿಗೆ ಮಾರ್ಗದರ್ಶಿಯಾಗಿರಲೂಬಹುದು.

ವಿಜಯಲಕ್ಷ್ಮಿ ಶ್ಯಾನ್‌ಭೋಗ್‌

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ