ಸಂಬಳ ನಿಮಗೆಷ್ಟು ? ನಿಮ್ಮವರಿಗೆಷ್ಟು ?

Team Udayavani, Jun 28, 2019, 5:00 AM IST

ದೀಪಿಕಾ ಪಡುಕೋಣೆ ಅಂಥವರು ದಿಟ್ಟವಾಗಿ ಎದುರಿಸಿ ನಿಂತು ಪುರುಷರಿಗೆ ಸಮಾನವಾದ ಪಾತ್ರ ಮತ್ತು ಸಂಭಾವನೆಯನ್ನು ಕೇಳುತ್ತಿದ್ದಾರೆ, ಇಲ್ಲದಿದ್ದರೆ ಅಂತಹ ಪಾತ್ರಗಳೇ ಬೇಡ ಎನ್ನುತ್ತಿದ್ದಾರೆ. ಎಲ್ಲಾ ವಿಷಯದಲ್ಲೂ ತಮ್ಮ ಅಭಿಪ್ರಾಯವನ್ನು ಮಂಡಿಸುವ ಸಿನೆಮಾ ಜಗತ್ತು ಇಂತಹ ಸಮಸ್ಯೆಗಳಿಗೆ ಮಾತ್ರ ಮೌನವಾಗಿದೆ. ಇಲ್ಲಿ ಆಶ್ಚರ್ಯದ ಸಂಗತಿಯೆಂದರೆ, ಸ್ವತಃ ಮಹಿಳೆಯರೇ ಮೌನವಾಗಿರುವುದು, ಈ ಮೌನದ ಹಿಂದೆ ಅಸಹಾಯಕತೆ, ಅನಿಶ್ಚಿತತೆ ಅಡಗಿದೆಯೋ ಏನೋ, ಇಂತಹ ಸಮಸ್ಯೆಗಳ ಪರ ನಿಂತರೆ ಮಹಿಳೆ ತೀವ್ರವಾದ ಟೀಕೆಗೂ ಗುರಿಯಾಗುತ್ತಾಳೆ. ತೊಂದರೆಗಳಿಗೆ ಸ್ವರವಾಗುವ ಕಂಗನಾಳನ್ನು ಜನ ಬೆಂಬಲಿಸುವುದಿರಲಿ ಅಂಥ‌ವರ ಹೆಸರನ್ನು ಹೇಳುವುದೇ ತಪ್ಪು ಎನ್ನುವವರಿಲ್ಲವೆ?

ಟೀವಿಯ ದಿ ಕಾಮೆಡಿ ನೈಟ್ಸ್‌ ವಿತ್‌ ಕಪಿಲ್‌ನಲ್ಲಿ ಇತ್ತೀಚೆಗೆ ನವಜೋತ್‌ ಸಿಂಗ್‌ ಸಿದ್ಧುವಿನ ಸ್ಥಾನ ತುಂಬಿದ ಅರ್ಚನಾ ಪುರಾನ್‌ ಸಿಂಗ್‌ ಕಪಿಲನ ಪ್ರಶ್ನೆಯೊಂದಕ್ಕೆ ಉತ್ತರಿಸುತ್ತ, ತಮಗೆ ಸಿದ್ಧುವಿನ‌ ವೇತನದ ಅರ್ಧಕ್ಕಿಂತ ಕಮ್ಮಿ ವೇತನ ಸಿಗುತ್ತಿದೆ ಎಂದು ವಿಷಾದಿಸಿದಾಗ ಹೊಗೆಯಾಡುತ್ತಿದ್ದ ಸಮಸ್ಯೆ ಮತ್ತೆ ಹತ್ತಿ ಉರಿಯಿತು.

ಅಮೆರಿಕದ ಮಹಿಳಾ ಫ‌ುಟ್ಬಾಲ್‌ ಟೀಮ್‌ “ಯು.ಎಸ್‌. ಸೊಕರ್‌ ಫೆಡರೇಶನ್‌’ನ ಮೇಲೆ ಕೇಸು ಹಾಕಿದೆಯಂತೆ, ಟೆನ್ನಿಸ್‌ ಆಟಗಾರ್ತಿ ಸೆರೇನಾ ವಿಲಿಯಮ್ಸ… ಇದಕ್ಕೆ ಬೆಂಬಲ ವ್ಯಕ್ತಪಡಿಸಿದಳಂತೆ. “ಇಲ್ಲಿ ಹಲವು ಸಲ ಮಹಿಳಾ ಆಟಗಾರ್ತಿಯರಿಗೆ ಸಿಗಬೇಕಾದ ವೈದ್ಯಕೀಯ ನೆರವು, ತರಬೇತಿ ಒಂದೂ ಸರಿಯಾಗಿ ಸಿಗುತ್ತಿಲ್ಲವಂತೆ, ಅದಕ್ಕಾಗಿ ಈ ಹೋರಾಟ’- ಇದು ಅತೀ ಮುಂದುವರೆದ ದೇಶವಾದ ಅಮೆರಿಕದಲ್ಲಿ ನಡೆದ ಗಲಾಟೆ, ಅಲ್ಲೇ ಹೀಗಾದರೆ ಬೇರೆ ಕಡೆ ಹೇಗೆ?

ಈಗ ಹೆಚ್ಚು ಹೆಚ್ಚು ಮಹಿಳೆಯರು ವಿದ್ಯಾವಂತರಾಗಿ, ಮನೆ ಕೆಲಸದೊಡನೆ ಆಫೀಸಿನ ಕೆಲಸವನ್ನೂ ಮಾಡುತ್ತ “ಮಹಿಳೆಯರು ಮಲ್ಟಿ ಟಾಸ್ಕ್ ಸ್ಪೆಷಲಿಸ್ಟ್’ ಎಂಬ ಬಿರುದನ್ನೂ ದಕ್ಕಿಸಿಕೊಳ್ಳುತ್ತಿದ್ದಾರೆ. ಮೇಲುನೋಟಕ್ಕೆ ಎಲ್ಲವೂ ಸರಿಯಾಗಿದೆ ಅನ್ನಿಸಿದರೂ ಹಳೆಯ ಸಮಸ್ಯೆ ಇನ್ನೂ ಜೀವಂತವಾಗಿದೆ. ಅಲ್ಲಿ, ಇಲ್ಲಿ ಒಬ್ಬಿಬ್ಬರು ಬಾಯಿಬಿಟ್ಟರೂ ಅದರ ಬಗ್ಗೆ ಹೆಚ್ಚು ಚರ್ಚೆಯಾಗಲಿ, ಹೇಳಿಕೆಗಳಾಗಲಿ, ವಿರೋಧವಾಗಲಿ ಕಂಡುಬರುತ್ತಿಲ್ಲ, ಸಮಸ್ಯೆಗೆ ಪರಿಹಾರವೂ ಸಿಕ್ಕಿಲ್ಲ.

ವೇತನ ತಾರತಮ್ಯದ ಬಗ್ಗೆ ವಾದ-ವಿವಾದಗಳು ಬಹಳ ಹಿಂದಿನಿಂದಲೂ ಇತ್ತು. ಮಹಿಳೆಯ ಹೌಸ್‌ ಮೇಕರ್‌ ಅಥವಾ ಹೌಸ್‌ ವೈಫ್ ಉದ್ಯೋಗಕ್ಕೆ ವೇತನವಿದೆಯೆ? ಯಾವಾಗ ಮಹಿಳೆ ಉದ್ಯೋಗವನ್ನರಸಿ ಹೊರಗೆ ಕಾಲಿಟ್ಟಳ್ಳೋ ಹಲವು ಸಮಸ್ಯೆಗಳು “ಅವಳ’ನ್ನು ಅರಸಿ ಬಂದವು ಎಲ್ಲವನ್ನೂ ಎದುರಿಸಿ ನಿಂತರೂ ಹಲವು ಕಡೆ ಪುರುಷರಿಗೆ ಸರಿಸಮನಾದ ವೇತನ, ಸೌಕರ್ಯ, ಭಡ್ತಿ ಸಿಗದೆ ಮನಸ್ಸು ಮುದುಡುವ ಪರಿಸ್ಥಿತಿ.

ಯಾಕಾಗಿ ಮಹಿಳೆಯರಿಗೆ ಕಡಿಮೆ ವೇತನ? ಪುರುಷರಷ್ಟು ದೈಹಿಕವಾಗಿ ಮಹಿಳೆ ಶಕ್ತಿವಂತಳಲ್ಲವೆಂದೇ? ಅಥವಾ ಇದು ಪುರುಷ ಸಮಾಜದವರ ತಂತ್ರವೆ?

ಪುರುಷಾಳಿಗೂ ಹೆಣ್ಣಾಳಿಗೂ ವೇತನ ಸಮಸ್ಯೆ
ಕೆಳ ಶ್ರೇಣಿಯ ಕೆಲಸಗಳಲ್ಲಿ ವೇತನ ತಾರತಮ್ಯ ಸಾರಾಸಗಟಾಗಿ ನಡೆಯುತ್ತದೆ, ಪುರುಷರಿಗೆ ದಿನಗೂಲಿ 600 ರೂಪಾಯಿ, ಮಹಿಳೆಯರಿಗೆ 450-500 ರೂಪಾಯಿ. ತಾರತಮ್ಯ ಸ್ಪಷ್ಟ, ಏಕೆ ಹೀಗೆ? ಕಟ್ಟಡದ ಕೆಲಸವೇ ಇರಲಿ, ಕೂಲಿ ಕೆಲಸವೇ ಇರಲಿ ಮಹಿಳೆಯೆಂದು ಸುಲಭದ ಕೆಲಸವನ್ನು, ಪುರುಷರಿಗೆ ಕಷ್ಟದ ಕೆಲಸವೇನೂ ಕೊಡುವುದೂ ಇಲ್ಲ, ಮಾಡುವುದೂ ಇಲ್ಲ. ಕಲ್ಲನ್ನು ಒಡೆಯುವ ಕೆಲಸವನ್ನು ಹೆಂಗಸರೂ ಮಾಡುತ್ತಾರೆ, ಕಾಂಕ್ರೀಟ್‌ ಕೆಲಸದಲ್ಲೂ ಗಂಡಸರಿಗೆ ಸರಿಸಮಾನವಾಗಿ ಮಹಿಳೆಯರು ಕೆಲಸ ಮಾಡುತ್ತಿದ್ದಾರೆ. ಅಲ್ಲದೆ, ಗಂಡಸರಾದರೆ ಆಗಾಗ ಬೀಡಿ, ಸಿಗರೇಟು ಎಂದು ಅರ್ಧ-ಒಂದು ಗಂಟೆಗೊಮ್ಮೆ ಹತ್ತು ನಿಮಿಷದ ಬಿಡುವು ಮಾಡಿಕೊಳ್ಳುತ್ತಾರೆ. ಮೊನ್ನೆ ರಸ್ತೆಯಲ್ಲಿ ರಿಪೇರಿ ಕೆಲಸ ನಡೆಯುತ್ತಿರಬೇಕಾದರೆ ರಸ್ತೆ ದಾಟಲಾಗದೆ ಸುಮ್ಮನೆ ನಿಲ್ಲಬೇಕಾಗಿ ಬಂತು. ಆಗ ನೋಡಿದ್ದಿಷ್ಟು, 2-3 ಗಂಡಸರು, 2-3 ಹೆಂಗಸರು ಜಲ್ಲಿ ಕಲ್ಲುನ್ನು ಹಾಸುತ್ತ ಬಿಸಿಯಾದ ಟಾರನ್ನು ಸುರಿಯುತ್ತಿದ್ದರು, ಬೇಸಿಗೆಯ ಬಿಸಿಲನ್ನು ಲೆಕ್ಕಿಸದೆ ಗಂಡಸರಿಗೆ ಸರಿಸಮಾನವಾಗಿ ಮಹಿಳೆಯರು ಕೆಲಸ ಮಾಡುತ್ತಿದ್ದರು. ಅದೇ ಸಂಬಳ ಕೇಳಿದರೆ ಗಂಡಸರಿಗಿಂತ ನೂರೋ, ಇನ್ನೂರೋ ಕಡಿಮೆ, ಅಷ್ಟೇ ಅಲ್ಲ, ಎಷ್ಟೋ ಸಲ “ಮಿನಿಮಮ್‌ ವೇಜಸ್‌ ಆ್ಯಕ್ಟ್’ನ ಕಾಯಿದೆ ಪ್ರಕಾರ ಇಂತಿಷ್ಟೆಂದು ನಿಗದಿಯಾದ ಸಂಬಳವೂ ಸಿಗುವುದಿಲ್ಲ. ಅಲ್ಲದೆ ಕಾನೂನಿನ ಪ್ರಕಾರ ಮಹಿಳೆಯರಿಗೆ ಹೆರಿಗೆ ರಜಾ, ರಜಾ ಸಂಬಳ ಸಿಗಬೇಕು, ರಾತ್ರಿ ಪಾಳೆಯದಲ್ಲಿರುವ ಹೆಂಗಸರಿಗೆ ಸರಿಯಾದ ಸಾರಿಗೆ ವ್ಯವಸ್ಥೆ ಕೊಡಬೇಕು. ಇದು ಎಷ್ಟು ಮಹಿಳಾ ಉದ್ಯೋಗಿಗಳಿಗೆ ಗೊತ್ತು? ಎಷ್ಟು ಮಹಿಳೆಯರಿಗೆ ಸಿಗುತ್ತಿದೆ. ಇದು ಅಸಂಘಟಿತ ವಲಯದ ಕಥೆ.

ಮೇಲುನೋಟಕ್ಕೆ ಉನ್ನತ ಮತ್ತು ಮಧ್ಯಮ ಶ್ರೇಣಿಯ ಉದ್ಯೋಗ ಮತ್ತು ವೇತನದಲ್ಲಿ ಪುರುಷ ಮತ್ತು ಮಹಿಳೆಯರಲ್ಲಿ ತಾರತಮ್ಯ ಕಂಡುಬರುವುದಿಲ್ಲ. ಆದರೆ, ಸೂಕ್ಷ್ಮವಾಗಿ ಗಮನಿಸಿದಾಗ ಕ್ರೂರ ಸತ್ಯಗಳು ಹೊರಗೆ ಬರುತ್ತದೆ. ನನ್ನ ಚಿಕ್ಕಮ್ಮನ ಮಗಳು ಸಾಫ್ಟ್ ವೇರ್‌ ಇಂಜಿನಿಯರ್‌, ಸಂದರ್ಶನಕ್ಕೆ ಹೋದಾಗ, “ಮದುವೆ ಆಗಿ ಎಷ್ಟು ವರ್ಷ ಆಯಿತು? ಮಕ್ಕಳಿದ್ದಾರೆಯೇ?’ ಎಂದು ಕೇಳಿದರಂತೆ.

“ಮಕ್ಕಳಿಲ್ಲ ಸರ್‌, ಮದುವೆಯಾಗಿ ಮೂರು ವರ್ಷವಾಯಿತು’ ಎಂದಳು. ಕೂಡಲೇ ಸಂದರ್ಶಕ, “ನಿಮಗೆ ಕೆಲಸ ಕೊಟ್ಟರೆ ನಾಳೆ ಆರು ತಿಂಗಳ ಹೆರಿಗೆ ರಜೆ ಮತ್ತು ಸಂಬಳ ಕೊಡಬೇಕಾದ ಪ್ರಮೇಯ ಬರುತ್ತದಲ್ಲವೇ?’ ಎಂದು ಇವಳನ್ನೇ ಕೇಳಿದರಂತೆ. ಇನ್ನು ಕೆಲವು ಕಡೆ ಪುರುಷ ಮತ್ತು ಮಹಿಳೆಯರಲ್ಲಿ ವೇತನ ತಾರತಮ್ಯ ಇಲ್ಲದಿದ್ದರೂ ಬಡ್ತಿ ಕೊಡುವ ಸಂದರ್ಭ ಬಂದಾಗ ಪುರುಷರಿಗೇ ಆದ್ಯತೆ ಕೊಡುವುದನ್ನು ಗಮನಿಸಿದ್ದೇವೆ, ಪಾಪ ಗಂಡಸರು ಮನೆಯ ಜವಾಬ್ದಾರಿ ಇದೆ, ಹೆಂಗಸರಿಗಾದರೆ ಸಂಬಳ, ಪಾಕೆಟ್‌ ಮನಿ, ಬಟ್ಟೆ, ಒಡವೆಗಾಗಿ ಸಂಬಳವನ್ನು ಖರ್ಚು ಮಾಡುತ್ತಾರೆ ಎನ್ನುವ ಕಿವಿಮಾತುಗಳೂ ತೂರಿ ಬರುತ್ತವೆ. ಅದೇ ಆಫೀಸಿನಲ್ಲಿ ಟಾರ್ಗೆಟ್‌ ಕೊಡುವಾಗ, ಡೆಡ್‌ಲೈನ್‌ ಕೊಡುವಾಗ ಗಂಡಸರು, ಹೆಂಗಸರು ಎಂಬ ಭೇದಭಾವವನ್ನು ನಾವು ನೋಡಿಲ್ಲ.

ಉನ್ನತ ಶ್ರೇಣಿಯ ಕೆಲಸಗಳಾದ ಡಿಪಾರ್ಟ್‌ಮೆಂಟ್‌ ಹೆಡ್‌, ಬ್ರಾಂಚ್‌ ಮ್ಯಾನೇಜರ್‌, ಮ್ಯಾನೆಜಿಂಗ್‌ ಡೈರೆಕ್ಟರ್‌ ಹುದ್ದೆಗಳಿಗೆ ಬೇಕಾದ ಅನುಭವ, ವಿದ್ಯೆ ಮಹಿಳೆಯರಲ್ಲಿ ಇದ್ದರೂ ಪುರುಷರನ್ನೇ ಆಯ್ಕೆ ಮಾಡುವುದು ಜಾಸ್ತಿ. ಏಕೆ, ಮಹಿಳೆಯರ ಮೇಲೆ ನಂಬಿಕೆ ಇಲ್ಲ, ಅಪ್ಪಿತಪ್ಪಿ ಮಹಿಳೆ ಆಯ್ಕೆ ಆದರೂ ಭತ್ಯೆ, ವೇತನ ಪುರುಷರಿಗೆ ಕೊಟ್ಟಷ್ಟು ಕೊಡುವುದಿಲ್ಲ. ಇವೆಲ್ಲ ಕಂಡೂಕಾಣದಂತೆ ಇರುವ ಹಲವು ವಿಧದ ತಾರತಮ್ಯಗಳು.

ಇನ್ನು ಮನರಂಜನೆಯ ಜಗತ್ತಿಗೆ ಬರೋಣ, ನಾಟಕ, ಟೀವಿ, ಸಿನೆಮಾ, ಇಲ್ಲಿ ಡೈರೆಕ್ಟರ್‌ ಆಗಿರಲಿ, ನಟ, ನಟಿಯರಾಗಿರಲಿ, ಹಾಡುಗಾರರಾಗಿರಲಿ, ಎಲ್ಲ ಕಡೆ ಪುರುಷರಿಗಿಂತ ಮಹಿಳೆಯರಿಗೆ 30-40 ಶತಮಾನವಾದರೂ ಕಡಿಮೆ ವೇತನ. ಅದಕ್ಕಾಗಿ ದೀಪಿಕಾ ಪಡುಕೋಣೆ ಅಂಥವರು ದಿಟ್ಟವಾಗಿ ಎದುರಿಸಿ ನಿಂತು ಪುರುಷರಿಗೆ ಸಮಾನವಾದ ಪಾತ್ರ ಮತ್ತು ಸಂಭಾವನೆಯನ್ನು ಕೇಳುತ್ತಿದ್ದಾರೆ, ಇಲ್ಲದಿದ್ದರೆ ಅಂತಹ ಪಾತ್ರಗಳೇ ಬೇಡ ಎನ್ನುತ್ತಿದ್ದಾರೆ. ಎಲ್ಲಾ ವಿಷಯದಲ್ಲೂ ತಮ್ಮ ಅಭಿಪ್ರಾಯವನ್ನು ಮಂಡಿಸುವ ಸಿನೆಮಾ ಜಗತ್ತು ಇಂತಹ ಸಮಸ್ಯೆಗಳಿಗೆ ಮಾತ್ರ ಮೌನವಾಗಿದೆ. ಇಲ್ಲಿ ಆಶ್ಚರ್ಯದ ಸಂಗತಿಯೆಂದರೆ, ಸ್ವತಃ ಮಹಿಳೆಯರೇ ಮೌನವಾಗಿರುವುದು, ಈ ಮೌನದ ಹಿಂದೆ ಅಸಹಾಯಕತೆ, ಅನಿಶ್ಚಿತತೆ ಅಡಗಿದೆಯೋ ಏನೋ, ಇಂತಹ ಸಮಸ್ಯೆಗಳ ಪರ ನಿಂತರೆ ಮಹಿಳೆ ತೀವ್ರವಾದ ಟೀಕೆಗೂ ಗುರಿಯಾಗುತ್ತಾಳೆ. ತೊಂದರೆಗಳಿಗೆ ಸ್ವರವಾಗುವ ಕಂಗನಾಳನ್ನು ಜನ ಬೆಂಬಲಿಸುವುದಿರಲಿ ಅಂಥ‌ವರ ಹೆಸರನ್ನು ಹೇಳುವುದೇ ತಪ್ಪು ಎನ್ನುವವರಿಲ್ಲವೇ? ಪುರುಷರಿರಲಿ, ಎಷ್ಟು ಜನ ಮಹಿಳೆಯರು ಮಹಿಳೆಯರ ಸಮಸ್ಯೆಗಳಿಗೆ ಸ್ಪಂದಿಸುತ್ತಿದ್ದಾರೆ?

ಪುರುಷ, ಮಹಿಳೆಯರೆಲ್ಲರೂ ಸರಿಸಮಾನರು, ಆದರೆ ಸಮಾಜದಲ್ಲೀಗ ಕೆಲವರು ಹೆಚ್ಚು ಸಮಾನರು? ಇದಕ್ಕೆ ಕೊನೆ ಎಂದು?

ಗೀತಾ ಕುಂದಾಪುರ

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

  • ಮಧ್ಯಪ್ರದೇಶ-ಭಾರತದ ಹೃದಯ ಎಂದೇ ಖ್ಯಾತಿ ಹೊಂದಿದೆ. ಭಾರತದ ಭೂಪಟದ ಮಧ್ಯ ಭಾಗದಲ್ಲಿ ಇರುವ ಮಧ್ಯಪ್ರದೇಶದ ಮಹಿಳೆಯರ ಸಾಂಪ್ರದಾಯಿಕ ಉಡುಗೆ-ತೊಡುಗೆ ಹೃದಯಕ್ಕೆ...

  • ವಾರ, ತಿಥಿ ಇಲ್ಲದೆ ಬರುವವರು ಅತಿಥಿಗಳು. ದಾರಿಯಲ್ಲಿ ಸಿಕ್ಕಾಗಲೆಲ್ಲ "ಮನೆಗೆ ಬನ್ನಿ ಮನೆಗೆ ಬನ್ನಿ' ಎನ್ನುತ್ತಿದ್ದ ನನ್ನ ಅತ್ತೆಯ ದೂರದ ಸಂಬಂಧಿಯೊಬ್ಬರ ಮನೆಯ...

  • ಕ್ಯಾಪ್ಸೂಲ್‌ ಗೊತ್ತಲ್ವಾ? ಈ ಮಳೆಗಾಲದಲ್ಲಿ ನೀವೆಲ್ಲರೂ ಮರೆಯದೇ ಒಂದೊಂದು ಕ್ಯಾಪ್ಸೂಲ್‌ ಖರೀದಿಸಿ. ಹಾಂ, ಮಳೆಯಲ್ಲಿ ನೆನೆದು ಜ್ವರ ಬರಿಸಿಕೊಂಡಾಗ ತೆಗೆದುಕೊಳ್ಳುವ...

  • ಮಳೆಗಾಲ ಬಂತೆಂದರೆ ಕಲ್ಲಣಬೆ, ಕೊಡೆ ಅಣಬೆ ಅಲ್ಲಲ್ಲಿ ಸಿಗುತ್ತದೆ. ಮಶ್ರೂಮ್‌ನಿಂದ (ಅಣಬೆ) ವಿವಿಧ ರೀತಿಯ ಅಡುಗೆ ತಯಾರಿಸಬಹುದು. ಇದು ವಿಟಾಮಿನ್‌ "ಡಿ' ಹೊಂದಿರುವುದಲ್ಲದೆ...

  • ಹೆಣ್ಣು ಮಕ್ಕಳನ್ನು ಹೊರಗೆ ಕಳುಹಿಸಲು ಭಯಪಡುವ ಕಾಲವೂ ಒಂದಿತ್ತು. ಆ ದಿನಗಳಲ್ಲೆಲ್ಲ ಟೂರಿಂಗ್‌ ಟಾಕೀಸ್‌ಗೆ ಹೋಗಿ ಸಿನೆಮಾ ನೋಡುವುದೇ ಒಂದು ಸಂಭ್ರಮ. ಅಂಥ ಟೂರಿಂಗ್‌...

ಹೊಸ ಸೇರ್ಪಡೆ