ನನಗೂ ಒಬ್ಬ ಗೆಳೆಯ ಬೇಕು!

Team Udayavani, Jul 12, 2019, 5:00 AM IST

ಆಕಾಶ ತನ್ನೆಲ್ಲ ಮೋಡಗಳ ಒಟ್ಟುಗೂಡಿಸಿ ಬುವಿಯೆಲ್ಲ ಈ ಮಧ್ಯಾಹ್ನವೇ ಕತ್ತಲಾಗಿದೆಯೇನೋ ಎನ್ನುವಂತೆ ಅವಳ ಮನದೊಳಗಿನ ದುಗುಡಕ್ಕೆ ತನ್ನ ಸಾಥ್‌ ನೀಡಿ ಹೃದಯದ ಒಳಗೆಲ್ಲ ಮಂಕು ಕವಿಯುವಂತೆ ಮಾಡಿದೆ. ಒಬ್ಬಳೇ ಅವಳಲ್ಲಿ ಮಾತಿಗೆ ಯಾರೂ ಸಿಗದೆ ತಬ್ಬಿಬ್ಬುಗೊಂಡು ಅವಳೊಳಗಿನ ಭಾವನೆಗಳನ್ನು ಹಂಚಿಕೊಳ್ಳಲು ಯಾರಾದರೂ ಸಿಗುತ್ತಾರಾ ಅಂತ ಮೊಬೈಲ್, ಫೇಸ್‌ಬುಕ್‌, ವಾಟ್ಸಾಪ್‌ ಎಲ್ಲವನ್ನೂ ಹುಡುಕುತ್ತಾಳೆ. ಹೃದಯಕ್ಕೆ ಹತ್ತಿರವಾಗುವಂತೆ ಯಾರೂ ಸಿಗರು. ಆಗೆಲ್ಲಾ ಕಂಡಕಂಡವರ ಹತ್ತಿರ ಮನಸನು ತೆರೆದಿಟ್ಟು ಬೇಕೆಂತಲೇ ವಿಶ್ವಾಸಾರ್ಹತೆ ಬೆಳಸಿಕೊಳ್ಳಲು ಸಾಧ್ಯವೂ ಇಲ್ಲ, ಅಲ್ಲವಾ ?

ಜೀವನ ಅನ್ನುವುದು ಏನು ಇಲ್ಲವೋ ಅದಕ್ಕಾಗಿ ಪ್ರತಿಕ್ಷಣ ಪರಿತಪಿಸುತ್ತದೆ ಎಂದು ಎಲ್ಲೋ ಕೇಳಿದ್ದ ನೆನಪು. ಅದರ ಅರ್ಥ ಅವಳಿಗೆ ಈಗ ಆಗುತ್ತಿದೆ. ಅವನೊಟ್ಟಿಗಿದ್ದಾಗ ಒಂಟಿಯಾಗಿ ಅರೆ ಗಳಿಗೆ ಹಾಗೇ ಬಿಟ್ಟರೆ ಸಾಕು ನೆಮ್ಮದಿಯಿಂದ ಅವಳು ಅವಳಾಗುತ್ತಾಳೆ ಎನಿಸುತ್ತದೆ. ಅವನಿಲ್ಲದಿದ್ದಾಗ ನನ್ನ ನೆಗ್ಲೆಟ್‌ ಮಾಡುತ್ತಾ ಇದ್ದಾನೆ ಅನಿಸುತ್ತದೆ. ಹೀಗೇಕೆ ಎಂದು ಅವಳನ್ನೇ ಅವಳು ಎಷ್ಟೇ ಬಾರಿ ಪ್ರಶ್ನಿಸಿಕೊಂಡಿದ್ದರೂ ಉತ್ತರ ಸಿಕ್ಕಿಲ್ಲ. ಮೂವತ್ತು ದಾಟಿದ ಮೇಲೆ ಒಂಟಿತನ ಕಾಡುತ್ತದೆ, ಅದಕ್ಕಿಂತ ಮುಂಚೆ ಮದುವೆಯಾದರೆ ಜಂಟಿಯಾಗಿ ಕಳೆಯಬಹುದು ಜೀವನವ ಎಂದು ಅಮ್ಮ ಹೇಳಿದ ಹಿತವಚನವನ್ನು ನಂಬಿ ಮದುವೆಯಾದಳು. ಆದರೆ, ಅದು ನಿಜವಲ್ಲ ಅನ್ನುವುದು ಈಗಾಗಲೇ ತಿಳಿದುಹೋಗಿದೆ. ಹಾಗಿದ್ದರೆ ನಾನೇಕೆ ಎಲ್ಲಾ ಸಂಜೆಗಳನ್ನೂ ಒಂಟಿಯಾಗಿ ಬಾಲ್ಕನಿಯಿಂದ ಅವನ ಬರುವಿಕೆಗಾಗಿ ಇಣುಕುತ್ತಾ ಈ ಸಂಜೆ ಯಾಕಾಗಿದೆ ನೀನಿಲ್ಲದೆ… ಎಂದು ಗುನುಗುತ್ತ ಕಳೆಯಬೇಕಿತ್ತು, ಅಲ್ವಾ ? ಹೌದು, ಇಳಿಸಂಜೆಯಲ್ಲಿನ ಅವಳ ಒಂಟಿತನ ಯಾವ ಜನ್ಮದ ಶತ್ರುವಿಗೂ ಬೇಡ. ಅಷ್ಟು ಘೋರ ಆ ಕ್ಷಣಗಳು.

ಹುಡುಗಿಯರೇ, ಹೀಗೆ ಮದುವೆಗೆ ಮುಂಚೆ ಪ್ರಾಕ್ಟಿಕಲ್‌ ಆಗಿದ್ದವರು, ಮದುವೆಯ ನಂತರ ಇಮೋಶನಲ್‌ ಆಗಿ ಬಿಡುತ್ತಾರೆ. ಗಂಡ ಅನ್ನುವವನು ಪ್ರಾಣಿ ಎಂದು ತಿಳಿದಿದ್ದವರು, ಅವರಿಗೇ ಅರಿಯದೆ ಆತ್ಮಬಂಧುವನ್ನಾಗಿ ದೇವರ ಪಕ್ಕದ ಜಾಗದಲ್ಲಿ ಕೂರಿಸಿಬಿಡುತ್ತಾರೆ. ಆದರೆ, ಅವನು ಹಾಗಲ್ಲ. ಅಪ್ಸರೆ ನನ್ನವಳು ಎನ್ನುವುದು, ರಂಭೆ-ಊರ್ವಶಿಗೆ ನಿವಾಳಿಸಿ ಬಿಸಾಕಬೇಕು ಎನ್ನುವುದು… ಎಲ್ಲವನ್ನು ಮದುವೆಯಾದ ಮೂರೇ ತಿಂಗಳಿಗೇ ನಿಲ್ಲಿಸಿಬಿಡುತ್ತಾನೆ. ಎದುರಿಗಿರುವ ವಸ್ತು ತನ್ನ ಆಕರ್ಷಣೆಯನ್ನು ಬರಬರುತ್ತ ಕಳೆದುಕೊಳ್ಳುತ್ತಿದ್ದಂತೆ ಹಾಗೆಯೇ ಅವಳ ಬದುಕು ಕೂಡ ಮೊದಲಿನ ಒನಪು ಇಲ್ಲದೆ ಹಳಸಿದೆ ಎನ್ನಿಸುತ್ತದೆ. ಹೆಣ್ಣು ಮದುವೆಯ ನಂತರ ಮನೆಯೇ ಗುಡಿಯಮ್ಮ, ಪತಿಯೇ ದೇವರಮ್ಮ, ಮಕ್ಕಳು ಮುಂದಿನ ಜೀವನಕೆ ಕಾರಣವಮ್ಮ… ಎನ್ನುತ್ತ ಬಂಧಿಯಾಗಿ ಇರುವಾಗ ಈ ಗಂಡು ಜಾತಿಬಂಧವನೆಲ್ಲವ ಬಿಡಿಸಿಕೊಂಡು ಮತ್ತೂಂದು ಎತ್ತರವ ಏರಲು ಕಣ್ಣು ಹಾಕಿರುತ್ತದೆ. ಆದರೆ, ಅವಳು ಮಾತ್ರ ಬದುಕಿನ ದಾರಿಯಲ್ಲಿ ಹೇಳಿದರೂ ವರ್ಣಿಸಲಾಗದ, ಬರೆದರೂ ಚಿತ್ರಿಸಲಾಗದ ಹಂತವನ್ನು ತಲುಪಿರುತ್ತಾಳೆ.

ಅವಳಿಗೆ ಅವನನ್ನು ದೂಷಿಸಬೇಕೆನ್ನಿಸುವುದಿಲ್ಲ. ನಿಜ ಹೇಳಬೇಕೆಂದರೆ ಅವಳಿಗೆ ಗೊತ್ತು ಅವನಲ್ಲಿ ಯಾವುದೇ ಕೊರತೆಯೂ ಇಲ್ಲ ಎಂದು. ಆದರೂ ಅವನು ಅವಳಿಗೆ ತದ್ವಿರುದ್ದ ಅನ್ನುವುದಂತೂ ಸತ್ಯ. ಅವಳು ಮಾತು, ಅವನು ಮೌನಿ. ಅವಳು ಜುಳುಜುಳು ಹರಿವ ನದಿ, ಅವನು ಪ್ರಶಾಂತ ಸರೋವರ. ಅವಳು ಕಂಡ ಕನಸುಗಳನ್ನು ಜೀವನ ಅಂದುಕೊಂಡಿರುವವಳು, ಅವನು ಕನಸನ್ನು ನನಸು ಮಾಡಲು ಮೂರು ಹೊತ್ತೂ ಕೆಲಸದ ಹಿಂದೆ ಬಿದ್ದಿರುವವನು. ಅವಳು ಪ್ರತಿಕ್ಷಣ ಸದ್ದು ಮಾಡುವ ಸಿಡಿಲು-ಗುಡುಗು, ಅವನು ಇದ್ದರೂ ಇಲ್ಲದ ಹಾಗೆ ಸುರಿವ ಮಳೆ. ಇಷ್ಟೆಲ್ಲಾ ಇವೆ, ಅವರಿಬ್ಬರ ನಡುವಿನ ಅಂತರಗಳು.

ಯಾರಿಗೆ ಏನೇನೋ ನೀಡುವ ದೇವರೆ, ನನ್ನಯ ಮನವಿ ಸಲ್ಲಿಸಲೇನು- ಎನ್ನುತಾ ಮೊಗ್ಗಿನ ಮನಸು ಚಿತ್ರದ ನನಗೂ ಒಬ್ಬ ಗೆಳೆಯ ಬೇಕು ಹಾಡನ್ನೇ ಅರೆದು ಕುಡಿದು ಕನಸ ಕಂಡವಳು ಅವಳು. ಒಂದು ಕನಸನ್ನೂ ನನಸು ಮಾಡದ ಪಾಪಿ ಅವನು, ಸಂಬಂಧದಲ್ಲಿ ಅವಳ ಪತಿದೇವ. ಕಲ್ಪನೆಗಳ ಲೋಕದಲಿ ಈಜುತಾ ಜೋಡಿ ಹಕ್ಕಿಗಾಗಿ ಹುಡುಕಾಡುತ್ತ ಇದ್ದಾಗ ಅವನು ಸಿಕ್ಕಿದ್ದು, ಆಗ ಗೆದ್ದೇ ಬಿಟ್ಟೆ ಎನ್ನುವ ಅವಳ ಭಾವನೆಗಳ ಗೌರವಿಸಿ ಬರಸೆಳೆದವನು ಅವನು. ಆದರೆ, ಈಗೇನಾಗಿದೆ ನಮಗಿಬ್ಬರಿಗೆ ಎನ್ನುವುದು ಭಾವಲೋಕದಲ್ಲಿ ವಿಹರಿಸುವ ಅವಳ ಪ್ರಶ್ನೆಗಳಿಗೆ ಅವನ ಪ್ರಾಕ್ಟಿಕಲ್‌ ಮನಸ್ಸು ಕೊಡುವ ಉತ್ತರ ಅರ್ಥವಾಗುತ್ತಿಲ್ಲ. ಜೀವನದ ಎಲ್ಲಾ ನೋವಿನ, ನಲಿವಿನ, ಹತಾಶೆಯ, ದ್ವಂದ್ವದ, ಆತಂಕದ ಹೊಳೆಯಲ್ಲಿ ಹರಿವ ಅವಳ ಭಾವನೆಗಳಿಗೆ ಸೇರಲು ಕಡಲೊಂದು ಬೇಕು. ನೆಮ್ಮದಿಗಾಗಿ ಹುಡುಕುತ್ತ ಇರುವಾಗ ಅವಳ ಹಣೆಯ ಮುಂಗುರುಳನ್ನು ನೇವರಿಸಿ ಚುಂಬಿಸುವ ಜೀವ ಬೇಕು. ಅವಳು ಏನೇ ಮಾಡಿ ಬಡಿಸಿದರೂ ಕೊಂಕು ತೆಗೆಯದೆ ಊಟ ಮಾಡುವ, ಹಿಂದೆಯೇ ಹೊಗಳುವ ಆದರಗಳು ಬೇಕು. ಬೆಳಗಿನಿಂದಲೂ ಅಡಿಗೆ ಮನೆಯಲ್ಲೇ ಕಳೆದು ಹೋದ ಅವಳನ್ನು ಸರ್‌ಪ್ರೈಜ್‌ ಆಗಿ ಹಿಂದಿನಿಂದ ಬಂದು ತಬ್ಬಿ ಮುತ್ತಿಡಬೇಕು. ಮನೆಯಿಂದ ಒಂದು ಹೆಜ್ಜೆ ಹೊರಗೆ ಇಟ್ಟರೂ ಅಲ್ಲೆಲ್ಲಾ ಅವಳ ಕೈ ಅವನ ಕೈಯೊಳಗೆ ಕಳೆದು ಹೋಗಿರಬೇಕು. ಇವೆಲ್ಲವೂ ಅವಳು ಗೋಗರೆದು ಮಾಡಿಸಿಕೊಳ್ಳುವ ಕೆಲಸಗಳಲ್ಲ. ಜೀವದ ಗೆಳೆಯನಂತಿರುವ ಅವನಿಗೇ ಅರ್ಥವಾಗಬೇಕು. ಅವಳು ಹೇಳದೇ ತಿಳಿಯುವ ದೇವರಂತಹ ಗೆಳೆಯ ಅವನಾಗಬೇಕು.

ಜಮುನಾ ರಾಣಿ ಎಚ್‌. ಎಸ್‌


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ

  • ಕುಂದಾಪುರ: ರಾಜ್ಯದ ನಿರ್ವಸಿತ ಮೀನುಗಾರರಿಗೆ ಆಶ್ರಯ ಕಲ್ಪಿಸುವ ಮತ್ಸ್ಯಾಶ್ರಯ ಯೋಜನೆಯನ್ನು ಮೀನುಗಾರರ ಬೇಡಿಕೆಯಂತೆ ರಾಜೀವ್‌ ಗಾಂಧಿ ವಸತಿ ನಿಗಮದ ಬದಲು ಮತ್ತೆ...

  • ಮುಖ್ಯವಾಹಿನಿ ರಾಜಕೀಯ ಪಕ್ಷಗಳಿಗೆ ಆಟದ ಮೈದಾನವಾಗುತ್ತಿರುವ ವಿದ್ಯಾರ್ಥಿಒಕ್ಕೂಟಗಳನ್ನು ಮುಂದಿನ 10 ವರ್ಷಗಳವರೆಗೆ ನಿಷೇಧಿಸಬೇಕು. ಈ ವಿದ್ಯಾರ್ಥಿ ಒಕ್ಕೂಟಗಳಿಂದಾಗಿ...

  • ನಗದು ರಹಿತ ವಹಿವಾಟುಗಳಲ್ಲಿ ತೊಡಗಿಸಿಕೊಳ್ಳುವರ ಪ್ರಮಾಣ ಹೆಚ್ಚುತ್ತಿದ್ದು,ಹಣ ವರ್ಗಾವಣೆ, ಬಿಲ್‌ ಪಾವತಿ ಗಳನ್ನು ಕಾರ್ಡ್‌ ಅಥವಾ ಆ್ಯಪ್‌ಗ್ಳ ಮೂಲಕ ಮಾಡುತ್ತಿದ್ದಾರೆ....

  • ಯಾವುದೇ ಚಿತ್ರರಂಗವಿರಲಿ, ಸಾಮಾನ್ಯವಾಗಿ ಸ್ಟಾರ್‌ ನಟರು ಅಲ್ಲಿನ ಹಿರಿಯ ನಿರ್ದೇಶಕರು, ಅದರಲ್ಲೂ ಸಾಕಷ್ಟು ಹಿಟ್‌ ಚಿತ್ರಗಳನ್ನು ನಿರ್ದೇಶಿಸಿ ಜನಪ್ರಿಯವಾದ...

  • ದರ್ಶನ್‌ ನಾಯಕರಾಗಿ ನಟಿಸಿರುವ "ಒಡೆಯ' ಚಿತ್ರದ ಹಾಡು, ಟ್ರೇಲರ್‌ ಈಗಾಗಲೇ ಬಿಡುಗಡೆಯಾಗಿ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಬಿಡುಗಡೆಯ ಹಂತದಲ್ಲಿರುವ "ಒಡೆಯ' ಬಗ್ಗೆ...