ಕ್ಷಮಯಾ ಧರಿತ್ರಿ

Team Udayavani, Nov 15, 2019, 5:15 AM IST

ಹೆಣ್ಣು ಎಂದರೆ ಮಮತೆಯ ಒಡಲು, ಕರುಣೆಯ ಕಡಲು, ತ್ಯಾಗದ ಪ್ರತೀಕ ಎಂದೆಲ್ಲಾ ಹೇಳುತ್ತಾರೆ. ಅಷ್ಟೇ ಅಲ್ಲ, ಭೂಮಿ ತೂಕದ ಹೆಣ್ಣು ಎಂದು ಹೇಳು ವು ದರ ಮೂಲಕ ಹೆಣ್ಣು ಎಂದರೆ ಕ್ಷಮಯಾಧರಿತ್ರಿ ಎಂಬುದನ್ನು ಪುರಾಣದಲ್ಲಿಯೇ ಸ್ಪಷ್ಟವಾಗಿ ಸಾರಿ ಹೇಳಲಾಗಿದೆ. ರಾಮಾಯಣ, ಮಹಾಭಾರತದಲ್ಲಿಯೂ ಹೆಣ್ಣನ್ನು ಸಹನೆಯ ಸಾಕಾರ ರೂಪವೆಂದೇ ಬಿಂಬಿಸಲಾಗಿದೆ.

ಕಾಯೇìಷು ದಾಸಿ, ಸಲಹೇಷು ಮಂತ್ರಿ, ಭೋಜೇಷು ಮಾತ, ಶಯನೇಷು ರಂಭಾ ನಾರಿ ಕ್ಷಮಯಾ ಧರಿತ್ರಿ ಎಂದೇ ಮಹಿಳೆಯನ್ನು ಬಣ್ಣಿಸುತ್ತಾರೆ. ಸುತ್ತಮುತ್ತಲಿನ ಮಂದಿ ಎಂಥ ತಪ್ಪು ಮಾಡಿದರೂ ಉದಾರವಾಗಿ ಕ್ಷಮಿಸಿಬಿಡುವ ಗುಣವಿರುವುದು ಅವಳೊಬ್ಬಳಿಗೆ. ಎಲ್ಲ ತಪ್ಪುಗಳನ್ನು ಹೊಟ್ಟೆಗೆ ಹಾಕಿಕೊಂಡು ಕ್ಷಮಿಸಿಬಿಡುವವಳು ಹೆಣ್ಣು.

ಸಮಾಜದಲ್ಲಿ ನಡೆಯುವ ದಿನನಿತ್ಯದ ಆಗುಹೋಗುಗಳಲ್ಲಿ ಹೆಣ್ಣಿನ ಕ್ಷಮಾಗುಣವೇ ಹಲವು ಸಮಸ್ಯೆಗಳನ್ನು ಬಗೆಹರಿಸಿ ಬಿಡುತ್ತದೆ. ಮನೆಯಲ್ಲಿ ದಿನನಿತ್ಯ ನಡೆಯುವ ಜಗಳ, ಗಂಡನ ಜತೆಗೆ ನಡೆಯುವ ವಿರಸ, ಮಗನೊಂದಿಗೆ ನಡೆಯುವ ಮಾತಿನ ಚಕಮಕಿ, ಮಾವನ ಜತೆ ಉಂಟಾಗುವ ಸಣ್ಣಪುಟ್ಟ ಮಾತುಕತೆ ಎಲ್ಲದರಲ್ಲಿಯೂ ತಪ್ಪು ಯಾರದೇ ಆಗಿರಲಿ, ಕ್ಷಮಿಸಿ ಸುಮ್ಮನಾಗುವವಳು ಕ್ಷಮಯಾ ಧರಿತ್ರಿ ಮಹಿಳೆ.

ಹೆಣ್ಣು ಮಗು ಹುಟ್ಟಿದೆ ಎಂದಾಕ್ಷಣ ತಿರಸ್ಕಾರದಿಂದ ನೋಡುವವರು ಹೆಚ್ಚು. ಆದರೆ, ಬಾಲ್ಯದಿಂದಲೂ ಹೆಣ್ಣು ತನ್ನ ಸುತ್ತಮುತ್ತಲೂ ನಡೆಯುವ ಚುಚ್ಚುಮಾತುಗಳನ್ನೆಲ್ಲ ಸಹನೆಯಿಂದ ಸಹಿಸಿಕೊಂಡು ಕೇಳಿಕೊಂಡೇ ಬರುತ್ತಾಳೆ. ಹುಡುಗಿಯೊಬ್ಬಳು ಮನೆಯಿಂದ ಹೊರ ಹೊರಟಾಗ ಕೆಟ್ಟದಾಗಿ ಮಾತನಾಡಲು ನೂರು ಜನರಿರುತ್ತಾರೆ. ಆದರೆ, ಹೆಣ್ಣು ಇವೆಲ್ಲವನ್ನೂ ತಾಳ್ಮೆಯಿಂದ ಕೇಳಿಸಿಕೊಳ್ಳುತ್ತಾಳೆ. ಮನೆಮಂದಿ ನೋಡಿದ ಹುಡುಗನ ಜತೆ ಮರು ಮಾತನಾಡದೆ ಮದುವೆಯಾಗಿ ಹೋಗುತ್ತಾಳೆ. ಅಲ್ಲಿಯೂ ಅವಳ ಕ್ಷಮಾಗುಣ ಮುಂದುವರೆಯುತ್ತದೆ.

ಗಂಡನ ಎಲ್ಲ ತಪ್ಪುಗಳನ್ನು ಸಹಿಸಿಕೊಂಡು, ತಿದ್ದಿಕೊಂಡು ಅನುಸರಿಸಿಕೊಂಡು ಹೋಗುತ್ತಾಳೆ. ಮಾವನ ಸಿಟ್ಟಿಗೂ ಶಾಂತ ಪ್ರತಿಕ್ರಿಯೆ ತೋರುತ್ತಾಳೆ. ಅತ್ತೆಯ ಕೊಂಕುಮಾತಿಗೆ ಮರು ನುಡಿಯುವುದಿಲ್ಲ. ನೆರಮನೆಯವರ ಚುಚ್ಚುಮಾತಿಗೂ ಕಿವುಡಿಯಾಗಿ ಬಿಡುತ್ತಾಳೆ. ಇಲ್ಲಿ ಎಲ್ಲ ಕಡೆಯೂ ಮಹಿಳೆ ಸಹನೆಯ ಮತ್ತೂಂದು ಹೆಸರಾಗಿ ಕಾಣಸಿಗುತ್ತಾಳೆ. ತನ್ನನ್ನು ನಿಂದಿಸಿದವರನ್ನು, ಟೀಕಿಸಿದವರನ್ನು, ಹೀಯಾಳಿಸಿದವರನ್ನು ಕ್ಷಮಿಸಿ ಮನೆಯ ಶಾಂತಿ, ನೆಮ್ಮದಿ ಕಾಪಾಡುತ್ತಾಳೆ.

ಅದೆಷ್ಟೋ ಸಾರಿ ಮಹಿಳೆಯರು ದಾರಿ ತಪ್ಪಿದ ಗಂಡನನ್ನು ಕ್ಷಮಿಸಿ, ತಮ್ಮ ಬಾಳನ್ನು ಸರಿಮಾಡಿಕೊಂಡ ಉದಾಹರಣೆಗಳಿವೆ. ಅದೇ ಹೆಣ್ಣೊಬ್ಬಳು ಪರಪುರುಷನ ಜತೆ ಸಂಬಂಧ ಇಟ್ಟುಕೊಂಡಳೆಂದರೆ ಗಂಡ ಅವಳನ್ನು ಸುತಾರಾಂ ಕ್ಷಮಿಸಲು ಸಿದ್ಧನಿರುವುದಿಲ್ಲ. ಆದರೆ ಹೆಣ್ಣು, ತನ್ನ ಮಕ್ಕಳ ಭವಿಷ್ಯ, ತನ್ನ ಕುಟುಂಬ ಎಲ್ಲದರ ಕನಸನ್ನೂ ಹೊತ್ತು ಪುರುಷನ ಆ ದೊಡ್ಡ ತಪ್ಪನ್ನೂ ಸುಲಭವಾಗಿ ಕ್ಷಮಿಸಿಬಿಡುತ್ತಾಳೆ.

ಹೆಣ್ಣಿನ ಈ ಕ್ಷಮಯಾಧರಿತ್ರಿ ಮನೋಭಾವವೇ ಅವಳಿಗೆ ಹಲವು ಬಾರಿ ಮುಳುವಾಗಿ ಪರಿಣಮಿಸಿದೆ. ಹೆಣ್ಣಿನ ಮೇಲಿನ ದೌರ್ಜನ್ಯ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಲೇ ಇದೆ. ಅಪರಿಚಿತರು, ಗಂಡನ ಮನೆಯವರು, ಮಲತಂದೆ, ಸ್ನೇಹಿತ, ಗಂಡನ ಸ್ನೇಹಿತ… ಹೀಗೆ ಸಂಬಂಧಗಳ ಹಂಗಿಲ್ಲದೆ ಪ್ರತಿಯೊಬ್ಬರೂ ಹೆಣ್ಣಿನ ಮೇಲೆ ದೌರ್ಜನ್ಯಕ್ಕೆ ಮುಂದಾಗುವವರೇ.

ಹೆಣ್ಣು ಸಹನಾಮೂರ್ತಿ ಹೌದು. ಆದರೆ, ಸಹನೆ ಕಳೆದುಕೊಂಡರೆ ಆಕೆ ಎಲ್ಲವನ್ನೂ ಮರೆತು ವರ್ತಿಸಬಲ್ಲಳು. ಕ್ಷಮೆಗೂ ಅರ್ಹವೇ ಇಲ್ಲದಂತೆ ಶಿಕ್ಷಿಸಬಲ್ಲಳು. ಹೆಣ್ಣಿನ ಮೇಲೆ ದೌರ್ಜನ್ಯ ಹೆಚ್ಚುತ್ತಿರುವ ಈ ದಿನಗಳಲ್ಲಿ ಮಹಿಳೆ ನಿಜವಾಗಿಯೂ ಕ್ಷಮಯಾಧರಿತ್ರಿಯಾಗಿರುವುದನ್ನು ಕಡಿಮೆ ಮಾಡಬೇಕಿದೆ.

ಪುರುಷ ಪ್ರಧಾನ ಸಮಾಜ ಹೆಣ್ಣಿನ ಕ್ಷಮಾಗುಣವನ್ನು ಬಳಸಿಕೊಳ್ಳುವ ಬದಲು ಅದನ್ನು ಗೌರವಿಸುವ ಮನೋಭಾವವನ್ನು ರೂಢಿಸಿಕೊಳ್ಳಬೇಕಿದೆ. ಆಗ ಮಾತ್ರ ಇನ್ನು ಮುಂದಿನ ಪೀಳಿಗೆಗಳಲ್ಲೂ ಹೆಣ್ಣು ಕ್ಷಮಯಾಧರಿತ್ರಿಯಾಗಿರಲು ಸಾಧ್ಯ.

ವಿನುತಾ ಪೆರ್ಲ


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ