ಹೊಣೆ ಹೊರುವ ಹಣೆಬರಹ

Team Udayavani, Aug 23, 2019, 5:45 AM IST

ಅಂದು ಶುಕ್ರವಾರ. ಮನೆಯಲ್ಲಿ ಹೆಂಗಳೆಯರಿಗೆ ವಿಶೇಷ ದಿನ. ಮುಸ್ಸಂಜೆ ಏಳು ಗಂಟೆಗೆ ಗೆಳತಿ ನಯನಾಳ ಮನೆಯಲ್ಲಿ ವ್ರತದ ಉದ್ಯಾಪನೆಗೆಂದು ಕರೆದಿದ್ದರು. ಎಲ್ಲಿಯಾದರೂ ಹೋಗುವಾಗ ನನಗೆ ಸೀರೆ ಆರಿಸಿ ಕೊಡುವ ಕೆಲಸ ಸಹಾಯಕಿ ರುಕ್ಮಿಣಿಯದ್ದು. ನನ್ನ ಜೊತೆ ಅವಳು ಗೆಳತಿ, ಬಂಧು, ತಾಯಿ, ಎಲ್ಲರ ಸ್ಥಾನವನ್ನು ಸ್ವಲ್ಪ ಮಟ್ಟಿಗೆ ನಿಭಾಯಿಸುತ್ತ ಬಂದಿರುವಳು.

ಆ ದಿನ ಬೆಳಗಿನ ಮನೆಗೆಲಸವನ್ನು ಮುಗಿಸಿ, ವಿಶ್ರಾಂತಿಗೆಂಬಂತೇ ಒಂದು ಉತ್ತಮ ಕಥಾಸಂಕಲನವನ್ನು ಉಸಿರು ಬಿಗಿಹಿಡಿದು ಓದುತ್ತಿದ್ದೆ. ಆ ಭರದಲ್ಲಿ ಅವಳಿಗೆ ಸೀರೆ ವಿಚಾರ ಹೇಳುವುದನ್ನೇ ಮರೆತುಬಿಟ್ಟೆ. ನನಗೋ ಆ ಕೆಲಸ ಉದಾಸೀನ. ಆರು ಗಂಟೆಯವರೆಗೆ ಹೇಗೋ ಮುಂದೂಡಿದೆ. ಆರು ಗಂಟೆಯಾದದ್ದೇ ದಾಪುಗಾಲಿನಲ್ಲಿ ಓಡಾಟ. ಕಪಾಟಿನ ಸೀರೆಗಳನ್ನೆಲ್ಲ ಮಾತಾಡಿಸಿದೆ. ಕಡೆಯದಾಗಿ ಅಪ್ಪಿಕೊಂಡದ್ದು ನನಗಿಷ್ಟವಾದ ನೀಲಿ ಸೀರೆ. ನನ್ನೆಡೆ ಟ್ಯೂಶನ್‌ಗೆಂದು ಬರುವ ಹುಡುಗಿಯ ತಾಯಿ, ಋಣ ತೀರಿಸಲೆಂಬಂತೆ ಕೊಟ್ಟ ಹಣಕ್ಕೆ ತಕ್ಕಾಗಿ ಮಣಿಗಳನ್ನೆಲ್ಲ ಪೋಣಿಸಿ ಚಂದವಾಗಿ ಹೊಲಿದುಕೊಟ್ಟ ರವಿಕೆಯೂ ಇಷ್ಟವಾಗಿತ್ತು. ಸೀರೆಯ ತೃಪ್ತಿಯೊಂದಿದ್ದರೆ ನಾನು ಎಲ್ಲ ಕಡೆ ಮಿಂಚುಳ್ಳಿಯೇ. ಒಮ್ಮೊಮ್ಮೆ ತೊಂದರೆಯಲ್ಲಿ ಸಿಲುಕಿಸುವ ಮರೆವು, ನಿಷ್ಕಾಳಜಿಯ ಪರಿಣಾಮ ನನ್ನ ರೆಕ್ಕೆಪುಕ್ಕ ಕಿತ್ತು ಹೋದಂತಾಗುತ್ತದೆ. ಆ ದಿನದ ಮಟ್ಟಿಗೆ ಎಲ್ಲ ಸುಸೂತ್ರವಾಗಿ ಸಾಗಿತ್ತು. ಯಾವ ಕಾರ್ಯಕ್ರಮಕ್ಕೆ ಕರೆದರೂ ಅರ್ಧ ಗಂಟೆ ಕೈಯಲ್ಲಿ ಇಟ್ಟುಕೊಂಡು ಹೊರಡುವ ಪರಿಪಾಠ. ಅದರಂತೇ ಆ ಸಂಜೆಯೂ ಆರೂವರೆಗೆ ಕಾರ್‌ ಸ್ಟಾರ್ಟ್‌ ಮಾಡಿ, ಲತಾ ಮಂಗೇಶ್ಕರ್‌ ಭಜನ್‌ ಕೇಳುತ್ತ ಹೊರಟೆ. ಮೊದಲು ಸಿಗುವ ಸಿಗ್ನಲ್‌ ನನಗಾಗಿಯೇ ಎಂಬಂತೇ ಹಸಿರು ದೀಪ ಉರಿಸಿತ್ತು. ದಾಟಿ ತುಸು ದೂರದಲ್ಲಿ ಸಿಗುವ ತಿರುವಿನಲ್ಲಿ ಜನರ ನಡಿಗೆ ಸಹಜಕ್ಕಿಂತ ವೇಗವಾಗಿತ್ತು.

ಹೆಲ್ಮೆಟ್‌ ಧರಿ ಸಿದ ಹೆಂಗಸು, ಎದುರಿನಲ್ಲಿ ಹೆಲ್ಮೆಟ್‌ ಹಾಕದವನು ಮೊಬೈಲ್‌ನಲ್ಲಿ ಮಾತಾಡುತ್ತ ಡ್ರೈವ್‌ ಮಾಡುವುದನ್ನು ತಪ್ಪು ಎಂದು ಪರಿಗಣಿಸುತ್ತಲೇ ಹೋಗಿ ಗುದ್ದಿದ್ದಳು. ಬಿದ್ದ ರಭಸಕ್ಕೆ ಧೂಳಿಂದ ತಪ್ಪಿಸಿಕೊಳ್ಳಲು ಮುಚ್ಚಿಕೊಂಡ ಹೆಲ್ಮೆಟಿನ ಪ್ಲಾಸ್ಟಿಕ್‌ ಅವಳ ತುಟಿಯ ಸೀಳಿತ್ತು. ರಕ್ತ ಹರಿಯುತ್ತಲೇ ಇತ್ತು. ಸ್ಕೂಟರ್‌ ನಿಂದ ದೂರ ಹೋಗಿ ಬಿದ್ದ ಅವಳು ಎಚ್ಚರ ತಪ್ಪಿದವಳ ಹಾಗೆ ಬಿದ್ದಿದ್ದಳು. ತಲೆಗೆ, ಕಣ್ಣಿಗೆ, ನೀರು ಚಿಮುಕಿಸುತ್ತಲೇ ಇದ್ದರೂ ಏನೂ ಗೊತ್ತಾಗದವರಂತೇ ಅಂಗಾತ ಮಲಗಿದ್ದ ಅವಳನ್ನು ನಾನು ನನ್ನ ಕಾರಿನಲ್ಲಿ ಕುಳ್ಳಿರಿಸಿ ಆಸ್ಪತ್ರೆಗೆ ಒಯ್ಯೋಣವೆಂದು ಅಲ್ಲಿರುವವರಿಗೆ ಹೇಳಿದೆ. ಕಾರಲ್ಲಿ ಕುಳ್ಳಿರಿಸಿದ್ದೇ ತಡ… “ನನ್ನ ಪರ್ಸು, ನನ್ನ ಪರ್ಸು’ ಎಂದು ಬಾಯಿ ಬಿಟ್ಟಳು. “ಗಾಡಿಯ ಬಾಕ್ಸ್‌ನಲ್ಲಿ ಇಟ್ಟಿರುವೆವು, ಲಾಕ್‌ ಕೂಡ ಆಗಿದೆ, ಮತ್ತೆ ನೋಡುವಾ’ ಎಂದು ಹೇಳಿದರೂ ಕೇಳದೇ ಕೈಯಲ್ಲೇ ಕೊಡಬೇಕೆಂದು ಬೇಡಿಕೆ ಇಡುತ್ತಿದ್ದ ಅವಳ ನೋಡಿ ನನಗೆ ನಗುವುದೋ ಅಳುವುದೋ ತಿಳಿಯದಾಯಿತು. ಅವಳ ಬೇಡಿಕೆಯಂತೆ ಕೈಯಲ್ಲೇ ಪರ್ಸು ಹಿಡಿಸಿಯೂ ಆಯಿತು. “ಹಣ ತುಂಬಿರುವ ಪರ್ಸು ಅವಳನ್ನು ಅರೆಬರೆ ಪ್ರಜ್ಞಾವಸ್ಥೆಯಲ್ಲೂ ಬಾಯಿ ಬಿಡಿಸಿತ್ತು. ಅಂತಹ ಪರಿಸ್ಥಿತಿಯಲ್ಲೂ ಅವಳ ಜವಾಬ್ದಾರಿಯ ಅರಿವು ನನ್ನನ್ನು ದಿಗ್ಭ್ರಮೆಗೊಳಿಸಿತ್ತು. ಗಾಯದ ನೋವಿನಲ್ಲೇ ಅವಳ ಕನವರಿಕೆ. “ಮಕ್ಕಳು ಇಬ್ಬರೇ ಮನೆಯಲ್ಲಿ , ನನಗೆ ಬೇಗನೇ ಹೋಗಬೇಕು ಮಗನ ಕ್ಲಾಸ್‌ ಬಿಡುವ ಸಮಯವಾಯಿತು’ ಇನ್ನೂ ಏನೇನೋ.

ಪಟ್ಟಣದಲ್ಲಿ ಗಂಡ-ಹೆಂಡತಿ ಮಕ್ಕಳು ಅಷ್ಟೇ ಇರುವ ಕುಟುಂಬದಲ್ಲಿ ಹೆಣ್ಣಿಗೆ ಇರುವ ಜವಾಬ್ದಾರಿ ಹೇಳಿಕೊಳ್ಳಲು ಆಗದಂಥಾದ್ದು. ತನ್ನ ಜೀವದ ಪರಿವೆಯಿಲ್ಲದೇ ನಿಭಾಯಿಸಬೇಕು. ನಗರದ ಜೀವನ ದೂರದಿಂದ ರಂಗು ರಂಗಾಗಿ ಕಂಡರೂ ಅದನ್ನು ಅನುಭವಿಸಲು ಸಮಯವೂ, ನಿರಾಳತೆಯೂ ಯಾರಿಗೂ ಇರುವುದಿಲ್ಲ. ಆಫೀಸಿನಿಂದ ಮನೆಗೆ ದಾರಿಯಲ್ಲಿದ್ದ ಅವಳ ಗಂಡನಿಗೆ ಫೋನಾಯಿಸಿ ವಿಷಯ ತಿಳಿಸಿ, ಚಿಕಿತ್ಸೆ ಕೊಡಿಸಿ ಮನೆಗೆ ತಲುಪಿಸಿ ನಾನು ಪೂಜೆಯ ಮನೆ ಪ್ರವೇಶಿಸುವಾಗ ಅರ್ಧ ಗಂಟೆ ವಿಳಂಬ. ಅಲ್ಲಿಯೂ ಅದೇ ಗುಂಗು. ಸುಮ್ಮನೆ ಕುಳಿತು ಹೆಂಗಳೆಯರ ಮಾತನ್ನು ಆಲಿಸುತ್ತಿದ್ದೆ. ಮಾತನಾಡುವ ತ್ರಾಣ ಇರಲಿಲ್ಲ. ಒಬ್ಬೊಬ್ಬರದ್ದು ಒಂದೊಂದು ಬಗೆಯ ಆರೋಗ್ಯ ಸಮಸ್ಯೆ. ಥೈರಾಯಿಡ್‌, ಪ್ರೋಜಾನ್‌ ಶೋಲ್ಡಾರ್‌, ಗರ್ಭಕೋಶ ಕಾಯಿಲೆ, ಪಿತ್ತಕೋಶ ಕಾಯಿಲೆ ಅಬ್ಬಬ್ಟಾ…

ಮರುದಿನ ನಯನಾ ಫೋನ್‌ ಮಾಡಿ ಚಿನ್ನದಂಗಡಿಯಲ್ಲಿ ಕಿವಿಯೋಲೆ ಖರೀದಿಸಲು ಅವಳ ಜೊತೆಗೆ ಬರಬೇಕೆಂದು ಹಠ ಹಿಡಿದಳು. ಅವಳ ಬೇಡಿಕೆಯಂತೇ ಡಬಲ್‌ ರೈಡಿಂಗ್‌ನಲ್ಲಿ ಇಬ್ಬರೂ ಹೊರಟೆವು. ಅಂಗಡಿಯಲ್ಲಿ ಕಾರ್ಡ್‌ ವ್ಯವಹಾರವಿರದ ಕಾರಣ ಪಕ್ಕದ ಎಟಿಎಮ್‌ನಲ್ಲಿ ಹಣ ತೆಗೆದು ಓಲೆ ಖರೀದಿಸಿ ಮನೆಗೆ ಬಂದಾಯಿತು. ಮಾರನೆಯ ದಿನವೂ ಶಾಪಿಂಗ್‌ ಕೆಲಸ ಬಾಕಿ ಇತ್ತೆಂದು ಹೊರಟೆವು. ಆ ದಿನ ಬ್ಯಾಗ್‌ ಅಂಗಡಿಯಲ್ಲಿ ಹಣ ಪಾವತಿಸಬೇಕೆಂದರೆ, ಕಾರ್ಡ್‌ ಇಲ್ಲ.ಮೊದಲ ದಿನ ಓಲೆ ತರುವಾಗ ಉಪಯೋಗಿಸಿದ್ದೇ ಕೊನೆ ಎಂಬುದು ನೆನಪಾದಾಗ ಅವಳು ಮುಡಿದ ಪ್ರಸಾದದ ಹೂವು ಒಣಗಿಹೋಯಿತು. ಕ್ಷಣವೂ ತಡಮಾಡದೆ ಅದೇ ಎಟಿಎಮ್‌ ಕಡೆ ಧಾವಿಸಿದಳು. ಅವಳ ಹಿಂದೆ ನಾನೂ. ಸುರಕ್ಷಾ ಸಿಬ್ಬಂದಿಯೂ ಅಲ್ಲಿ ಇರಲಿಲ್ಲ. ಕಸದ ಬುಟ್ಟಿಯ ಕಾಗದಗಳನ್ನೆಲ್ಲ ಕೆಳಗೆ ಸುರಿದು ಹುಡುಕಾಡುತ್ತಿದ್ದೆವು. ಇನ್ನೇನು ಕಾರ್ಡ್‌ ಬ್ಲಾಕ್‌ ಮಾಡಬೇಕೆನ್ನುವಷ್ಟರಲ್ಲಿ ಆಗಲೇ ಜಿಮ್‌ ಮುಗಿಸಿ ಬಂದವನಂತೇ ಕಾಣುವ ಎತ್ತರದ ದಾಂಡಿಗ ವ್ಯಕ್ತಿ ಬಂದು ಎಟಿಎಮ್‌ ಯಂತ್ರದಿಂದ ಹಣ ತೆಗೆದ. ನಮ್ಮ ಚಡಪಡಿಕೆಯ ಹುಡುಕಾಟದ ಕಾರಣ ತಿಳಿಯುತ್ತಲೇ ಎತ್ತರದ ಯಂತ್ರದ ಮೇಲ್ಭಾಗದಲ್ಲಿ ಹುಡುಕುವಂತೆ ಕಣ್ಣು ಹಾಯಿಸಿದ. ಒಂದು ದಿನವಾದರೂ ವಿಶ್ರಾಂತಿ ಸಿಕ್ಕಿತೆಂಬ ಧನ್ಯತೆಯ ಭಾವದಲ್ಲಿ ಕುಳಿತ ಕಾರ್ಡ್‌ ಅವನ ಕೈಗೆಟುಕಿತು. ನೋಡಿದರೆ ಅದು ಅವಳದೇ. ಗಟಗಟನೆ ಬಾಟಲಿಯ ನೀರ ಕುಡಿದು, ಬ್ಯಾಗ್‌ನ ಅಂಗಡಿಯಲ್ಲಿ ಹಣ ಪಾವತಿಸಿ, ಪಕ್ಕದ ಶಾಪಿಂಗ್‌ ಸಂಕೀರ್ಣಕ್ಕೆ ಮ್ಯಾಚಿಂಗ್‌ ದುಪಟ್ಟಾ ಖರೀದಿಸಲು ಹೆಜ್ಜೆ ಹಾಕಿದೆವು. ಸಾಲಿನಲ್ಲಿ ಇರುವ ಎಲ್ಲಾ ಅಂಗಡಿಗಳಿಗೂ ಭೇಟಿ ಕೊಟ್ಟೆವು. ಕೊನೆಯ ಅಂಗಡಿಯಲ್ಲಿ ಅಂತೂ ಬೇಕಾದ ಬಣ್ಣ ಸಿಕ್ಕಿತು. ಖರೀದಿಸಿ ಹೊರಬಂದು ಮನೆಯಕಡೆ ಮುಖವಾಗಿ ಸ್ಕೂಟರ್‌ ತಿರುಗಿಸಿ ಕೀಲಿ ತೆಗೆಯನೋಡಿದರೆ ಕೀಲಿ ಮಾಯ! ಯಾವುದೋ ಅಂಗಡಿಯಲ್ಲಿ ಕೈವಾರಾಗಿದೆಯೋ, ದಾರಿಯಲ್ಲಿ ಕೈ ಜಾರಿದೆಯೋ ತಿಳಿಯದಾಗಿ ಮತ್ತೆ ಹುಡುಕಾಟ ನಮ್ಮ ಪಾಲಿಗೆ. ದಾರಿಯಲ್ಲೆಲ್ಲ ಹುಡುಕಿ, ಭೇಟಿ ನೀಡಿದ ಒಂದೊಂದೇ ಅಂಗಡಿ ಹೊಕ್ಕು ಹೊರಬಂದೆವು. ಅಂತೂ ಒಂದು ಅಂಗಡಿಯಲ್ಲಿ ಬಟ್ಟೆಗಳ ನಡುವೆ ಮರೆಯಾದ ಕೀಲಿ ಕೈ ಸೇರಿತು. ಯುದ್ಧದಲ್ಲಿ ವಿಜಯಿಯಾದವರಂತೇ ಖುಷಿಪಟ್ಟೆವು. ಬಳಲಿ ಬೆಂಡಾಗಿ ಮನೆಗೆ ಬಂದೆವು. ಅವಳೊಂದು ತುಪ್ಪದ ದೀಪ ಹಚ್ಚಿದ್ದಳಂತೆ ! ಮೊದಲ ದಿನವಷ್ಟೇ ಪೂಜೆಯ ತಯಾರಿಯ ಜವಾಬ್ದಾರಿ ಮುಗಿಸಿದ ನಯನಾಗೆ ಮರುದಿವಸ ಮುಂಜಾನೆ ಊರಿಗೆ ಹೊರಡಬೇಕಿತ್ತು. ದಿನಚರಿಯ ಕೆಲಸಗಳ ಜೊತೆಗೆ ಎಲ್ಲರ ಲಗ್ಗೇಜ್‌ ಪ್ಯಾಕಿಂಗ್‌ ಮಾಡುವುದು, ಇನ್ನೂ ಹಲವು ಹೇಳಿಕೊಳ್ಳಲಾಗದ ಕೆಲಸಗಳು, ಜವಾಬ್ದಾರಿಗಳು ಇದ್ದವು ಅವಳಿಗೆ. ಎಲ್ಲವನ್ನೂ ಅಚ್ಚುಕಟ್ಟಾಗಿ ನಿಭಾಯಿಸುವ ಜಾಣೆ ಅವಳು. ಆದರೂ ಆ ಒಂದು ದಿನ ಅವಳ ತಾಳ್ಮೆಯನ್ನು ಪರೀಕ್ಷಿಸುವಂತಿತ್ತು. ಸಂಜೆ ಪೋನಾಯಿಸಿ ಅವಳ ಬೇಜವಾಬ್ದಾರಿತನದ ಬಗ್ಗೆ ಭಾಷಣ ಬಿಗಿಯುವುದೋ, ತಿಳಿ ಹೇಳುವುದೋ ಮಾಡದೇ ನಿಧಾನವಾಗಿ ಅವಳ ಒತ್ತಡದ ದಿನಚರಿಯನ್ನೇ ಹೇಳಿ, ಹೊಗಳಿ ಸಮಾಧಾನಪಡಿಸಿದೆ. ಮನಸ್ಸು ನಿರಾಳವಾದ ಮೇಲೆ ಅದನ್ನೇ ತಮಾಷೆ ಮಾಡಿ ನಕ್ಕೆವು.

ಮಹಿಳೆ ನಿಭಾಯಿಸುವ ಜವಾಬ್ದಾರಿ ಅವಳನ್ನು ಒಮ್ಮೊಮ್ಮೆ ಎಚ್ಚರಿಸುತ್ತದೆ, ಕೆಲವೊಮ್ಮೆ ಕಂಗಾಲಾಗಿಸುತ್ತದೆ. ಬಹುತೇಕವಾಗಿ ಪಟ್ಟಣಗಳಲ್ಲಿ ಹೆಚ್ಚಿನ ಮಹಿಳೆಯರಿಗೆ ಒಂದಲ್ಲ ಒಂದು ದಿನ ಎದುರಿಸಬೇಕಾಗುವಂತಹ ಇಂತಹ ಸಮಸ್ಯೆ ಮರುಕಳಿಸದ ಹಾಗೇ ಮಾಡಲು ಪ್ರಸ್ತುತ ಮನಸ್ಕಳಾಗಿ ಎಲ್ಲವನ್ನೂ ನಿಭಾಯಿಸಬೇಕಾಗುತ್ತದೆ.ಒತ್ತಡ, ಸಮಸ್ಯೆ ಮಹಿಳೆಯರಿಗೂ, ಪುರುಷರಿಗೂ ಇರುವಂಥಾದ್ದೇ. ಅದನ್ನು ಆತ್ಮೀಯರಲ್ಲಿ ಬಡಬಡಾಯಿಸಿ, ಹಗುರಾಗಿಸಿಕೊಳ್ಳುವ ಕಲೆ ಮಹಿಳೆಗೊಂದು ವರವೇ. “ನನಗೊಬ್ಬಳಿಗೇ ಯಾಕೆ ಹೀಗೆ’ ಎಂದು ಚಡಪಡಿಸುತ್ತಿದ್ದ ನನ್ನ ಮನಸ್ಸಂತೂ “ಎಲ್ಲರಿಗೂ ಹೀಗೇ’ ಎಂದು ಸಮಾಧಾನ ಪಡಿಸುತ್ತಿತ್ತು.

ಕಲಾಚಿದಾನಂದ

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.ಈ ವಿಭಾಗದಿಂದ ಇನ್ನಷ್ಟು

  • ಅಜ್ಜಿ-ಅಮ್ಮ, ಮಕ್ಕಳ ಪಾಲನೆಯನ್ನು ಬೇರೆ ಬೇರೆಯಾಗಿ ನೋಡುವುದಾದರೂ ಏಕೆ? ಅಜ್ಜಿಯೂ "ಅಮ್ಮ'ನಾಗಿಯೇ ಮಕ್ಕಳನ್ನು ಬೆಳೆಸಿರುತ್ತಾಳಷ್ಟೆ. ಆದರೆ, ಅಜ್ಜಿಯಾಗಿ ಮಾಗುವ...

  • ಬಿಡುವಿನ ವೇಳೆಗಳಲ್ಲಿ ಪರಸ್ಪರ ಕಷ್ಟ-ಸುಖ ಹಂಚಿಕೊಳ್ಳುವ ಪರಿಪಾಠ ಹೆಚ್ಚಿನ ಎಲ್ಲಾ ಕಚೇರಿಗಳಲ್ಲೂ ಇರುತ್ತದೆ. ಈ ಚರ್ಚೆಗಳ ಸಂದರ್ಭದಲ್ಲಿ ಗಂಡಸರು, ಹೆಂಗಸರು...

  • ಬಾಲಿವುಡ್‌ ಚೆಲುವೆ ವಿದ್ಯಾ ಬಾಲನ್‌ ಯಾವಾಗಲೂ ವಿಭಿನ್ನ ಪಾತ್ರಗಳಿಗೆ ತೆರೆದುಕೊಳ್ಳುವ ನಟಿ. ಬಹುಶಃ ಹಾಗಾಗಿಯೇ ಪ್ರತಿ ಚಿತ್ರದಲ್ಲೂ ವಿಭಿನ್ನ ಪಾತ್ರಗಳು ವಿದ್ಯಾ...

  • ""ರೀ, ನಾನು ದಪ್ಪಗಾಗಿದ್ದೀನ? ಅಂತ ಗಂಡನಲ್ಲಿ ಕೇಳಿದೆ. ನೀನ್ಯಾವಾಗ ಸಣ್ಣಗಿದ್ದೆ ಅನ್ನೋ ಥರ ನೋಡಿ, "ಹಾಗೆ ಕಾಣುತ್ತಪ್ಪಾ!' ಅಂತ ಅಡ್ಡಗೋಡೆಯ ಮೇಲೆ ದೀಪವಿಟ್ಟರು. ಸುಪುತ್ರನಲ್ಲಿ...

  • ಬದನೆ ಹೆಚ್ಚಾಗಿ ಉಪಯೋಗದಲ್ಲಿರುವ ಸಾಮಾನ್ಯ ತರಕಾರಿ. ಬದನೆ ಎಂದರೆ ಎಲ್ಲರೂ ಇಷ್ಟಪಡುತ್ತಾರೆ. ಆದರೆ, ಬದನೆಕಾಯಿ ಎಂದರೆ ಮುಖ ಸಿಂಡರಿಸುವವರೂ ಕೆಲವರು ಇದ್ದಾರೆ....

ಹೊಸ ಸೇರ್ಪಡೆ