ಮೇಕಪ್‌ ಮಾಡುವ ಸಮಯ!

Team Udayavani, Oct 4, 2019, 5:55 AM IST

ಹಿಂದೊಮ್ಮೆ ಅವಳನ್ನು ಕೇಳಿದ್ದೆ- “ನಿಂಗೆ ತುಂಬ ಬೇಜಾರಾದಾಗ, ತಾಳ್ಮೆ ಮೀರಿದಾಗ, ಆತ್ಮವಿಶ್ವಾಸ ಕುಂದಿದಾಗ ಏನ್‌ ಮಾಡ್ತೀಯಾ?’ ಅಂತ. ಅದಕ್ಕವಳು ಮೇಕಪ್‌ ಮಾಡ್ತೀನಿ ಅಂದಿದ್ಲು !

ಅಲ್ಲಿ ನೋಡು, ಆ ಹುಡುಗಿ ತುಟಿಗೆ ಪೇಯಿಂಟ್‌ ಮಾಡ್ಕೊಂಡು ಬಂದಂಗೆ ಕಾಣಿ¤ಲ್ವಾ?’ ಅಂತ ಗೆಳೆಯ, ಹುಡುಗಿಯೊಬ್ಬಳತ್ತ ಬೆರಳು ಮಾಡಿ ತೋರಿದ್ದ. ತುಟಿಯ ಬಣ್ಣ ಸ್ವಲ್ಪ ಹೆಚ್ಚಾಗಿದ್ದರೂ ಹುಡುಗಿ ಮುದ್ದಾಗಿಯೇ ಕಾಣುತ್ತಿದ್ದಳು. ಹುಡುಗಿಯರ ಮೇಕಪ್‌ ಎಷ್ಟೇ ನವಿರಾಗಿದ್ದರೂ, ಅದರ ಬಗ್ಗೆ ವ್ಯಂಗ್ಯ, ಕಮೆಂಟ್‌, ಟ್ರೋಲ್‌ಗ‌ಳು ಸಾಮಾನ್ಯವೇ ತಾನೆ?

“ಒಂದೊಳ್ಳೆ ಮನೆ ಕಟ್ಟಿಸಿ, ಅದಕ್ಕೆ ಸರಿ ಹೊಂದುವ ಬಣ್ಣ ಹೊಡೆಸದೇ ಇದ್ದರೆ ಆ ಮನೆಗೊಂದು ಕಳೆ ಇರುತ್ತಾ ನೀನೇ ಹೇಳು? ಅಷ್ಟೇ ಯಾಕೆ, ದೇವರಂಥ ದೇವರ ಮೂರ್ತಿಗೂ ಬಣ್ಣ , ಅಲಂಕಾರವಿಲ್ಲದೆ ಪೂಜಿಸೋದಿಲ್ಲ ನಾವು. ಈ ಬಣ್ಣ-ಅಲಂಕಾರ ಅನ್ನೋದೆಲ್ಲಾ ಒಂದು ಕಲೆ. ಹೆಣ್ಮಕ್ಕಳು ಮೂಲತಃ ಕಲಾವಿದರು. ಅದಕ್ಕೇ ನಾವು ಮೇಕಪ್‌ ಮಾಡಿಕೊಳ್ಳೋದು’ ಅಂದು ಗೆಳೆಯನ ಬಾಯಿ ಮುಚ್ಚಿಸಿದ್ದೆ ಅವತ್ತು.

ನಮ್ಮ ಮೇಕಪ್‌ ಬಗ್ಗೆ ಹುಡುಗರು ಯಾಕೆ ಅಷ್ಟೊಂದು ಜೋಕು ಮಾಡ್ತಾರೆ ಅನ್ನೋದು ನಂಗೆ ಅರ್ಥವಾಗದ ವಿಷಯ. ಮೇಕಪ್‌ ಮಾಡೋದ್ರಲ್ಲಿ ತಪ್ಪೇನಿದೆ ಹೇಳಿ? ಕುಂಚದಿಂದ ಬಣ್ಣ ತೆಗೆದು, ಬಿಳಿ ಹಾಳೆಯನ್ನ ಅದ್ಭುತವಾದ ಚಿತ್ರವಾಗಿ ಪರಿವರ್ತಿಸುವ ಹಾಗೆ, ಮೇಕಪ್‌ ಅನ್ನೋದು ಹೆಣ್ಣಿನ ಸೌಂದರ್ಯವನ್ನು ತಿದ್ದಿ-ತೀಡಿ ಒಂದು ಲಕ್ಷಣ ಕೊಡುತ್ತದೆ ಅಷ್ಟೇ.

“ನೀವು ಹುಡುಗೀರು, ಯಾರನ್ನು ಮೆಚ್ಚಿಸೋಕೆ ಅಂತ ಇಷ್ಟೆಲ್ಲಾ ಬಣ್ಣ ಬಳ್ಕೊತೀರಿ?’ ಅಂತ ಹಲವರು ಹೇಳ್ಳೋದನ್ನು ಕೇಳಿದ್ದೀನಿ. ಮೇಕಪ್‌ನ ಬಣ್ಣಗಳು ನಮ್ಮ ಜೀವನಪ್ರೀತಿ, ತಾಳ್ಮೆಯ ಸಂಕೇತವೇ ಹೊರತು, ಬೇರೆಯವರನ್ನು ಮೆಚ್ಚಿಸುವ ಪ್ರಯತ್ನವಲ್ಲ, ಎಷ್ಟು ಬೇಕೋ ಅಷ್ಟು ಕ್ರೀಮ್‌ ಅಥವಾ ಪೌಡರ್‌ ಹಚ್ಚಿ , ಕಣ್ಣ ಗಡಿಯ ಸುತ್ತ ನಾಜೂಕಾಗಿ ಕಪ್ಪು ಗೆರೆ ಎಳೆಯುತ್ತ, ಅಚ್ಚುಕಟ್ಟಾದ ಹುಬ್ಬಿನ ಮೇಲೆ ತೀಡಿ, ನಗುವ ಅಧರಕ್ಕೆ ಹೊಂದುವ ಬಣ್ಣವ ಹದವಾಗಿ ಲೇಪಿಸಿ, ಹಣೆಯ ಮಧ್ಯ ಮಿನುಗುವ ಚುಕ್ಕಿಯನ್ನಿಡುವಾಗ ನಮ್ಮೊಳಗಿನ ಕಲಾವಿದೆಗೆ ಜೀವ ಬಂದಿರುತ್ತದೆ. ಕನ್ನಡಿ ಮುಂದೆ ನಿಂತ ಆ ಕ್ಷಣದಲ್ಲಿ ಹೆಣ್ಣು ಜಗತ್ತನ್ನೇ ಮರೆಯುತ್ತಾಳೆ. ಸಂಸಾರದ ಜಂಜಡದಲ್ಲಿ ಮುಳುಗಿ ಹೋಗಿರುವ ಹೆಣ್ಣು , ತನ್ನನ್ನು ತಾನು ಸರಿಯಾಗಿ ಗಮನಿಸುವುದೇ ಮೇಕಪ್‌ ಮಾಡುವ ಹೊತ್ತಲ್ಲಿ.

ನಾನೂ ಮೊದಮೊದಲು ಮೇಕಪ್‌ ಎಂದರೆ ಮಾರು ದೂರ ಓಡುತ್ತಿದ್ದೆ. “ಸಹಜವೇ ಸುಂದರ’ ಅಂತ ನಂಬಿದ್ದವಳನ್ನು ಬದಲಿಸಿದ್ದು ಮೇಕಪ್‌ ಆರ್ಟಿಸ್ಟ್‌ ಆಗಿರುವ ಗೆಳತಿ. ತನ್ನ ಮದುವೆಗೆ ತಾನೇ ಸಿಂಗರಿಸಿಕೊಂಡು, ಅಪ್ಸರೆಯಂತೆ ನನ್ನ ಮುಂದೆ ನಿಂತಾಗ, ಇವಳೇನಾ ಅವಳು?!

ಅನ್ನುವಷ್ಟು ಚಂದ ಕಾಣುತ್ತಿದ್ದಳು. ಲಿಪ್‌ಸ್ಟಿಕ್‌, ಮಸ್ಕಾರ, ಕ್ರೀಮ್‌… ಯಾವುದೂ ಅತಿಯಾಗದಿದ್ದರೂ, ನವಿರಾದ ಮೇಕಪ್‌ ಅವಳ ಅಂದ ವನ್ನು ಇಮ್ಮಡಿಗೊಳಿಸಿತ್ತು. “ಮೇಕಪ್‌ ಅಂದ್ರೆ ಬಣ್ಣ ಬಳಿಯುವುದಲ್ಲ, ಅದೊಂದು ಕಲೆ’ ಅಂತ ಅವತ್ತು ಅವಳು ತೋರಿಸಿ ಕೊಟ್ಟಿದ್ದಳು.

ಮೇಕಪ್‌ ಅಂದ್ರೆ ಸುಮ್ನೆಯಾ?
ಹಿಂದೊಮ್ಮೆ ಅವಳನ್ನು ಕೇಳಿದ್ದೆ- “ನಿಂಗೆ ತುಂಬ ಬೇಜಾರಾದಾಗ, ತಾಳ್ಮೆ ಮೀರಿದಾಗ, ಆತ್ಮವಿಶ್ವಾಸ ಕುಂದಿದಾಗ ಏನ್‌ ಮಾಡ್ತೀಯಾ?’ ಅಂತ. ಅದಕ್ಕವಳು ಮೇಕಪ್‌ ಮಾಡ್ತೀನಿ ಅಂದಿದ್ಲು ! ಭಾವನೆಯಲ್ಲಿ ಕಳೆಗುಂದಿದ ಮುಖಕ್ಕೆ ತಿಳಿನೀರು ಚಿಮುಕಿಸಿ, ಹಳೆಯ ಚಿಂತೆಗಳನ್ನೆಲ್ಲ ಒರೆಸಿ ಹಾಕ್ತೀನಿ. ತಂಪಾದ ತ್ವಚೆಗೆ ಭರವಸೆ ಎಂಬ ಫೌಂಡೇಶನ್‌ ಕ್ರೀಮ್‌ ಹಾಕಿ, ಬೇಡದ ಕಲೆಗಳನ್ನೆಲ್ಲ ಮುಚ್ಚಿ, ಮೇಲೆ ಪೌಡರ್‌ನ ಹೊದಿಕೆ ಹೊದಿಸಿ, ಹೊಸ ಬಣ್ಣ ಕೊಡ್ತೀನಿ. ನಾಚದಿದ್ದರೂ ಕೆನ್ನೆಯನ್ನು ಗುಲಾಬಿ ಬಣ್ಣಕ್ಕೆ ಕೊಂಡುಹೋಗಿ, “ಹೀಗೇ ಇರು’ ಅಂತ ಪೂಸಿ ಹೊಡೆದು, ಕೆಲಸ ಮಾಡಿ ಮಾಡಿ ಸುಸ್ತಾಗಿ ಕಪ್ಪಾದ ಕಂಗಳ ಸುತ್ತ ಬಣ್ಣ ಬಳಿದು, ಕಪ್ಪು ತೊಲಗಿಸಿ, “ಫ್ರೆಷ್‌ ಕಾಣಿಸ್ಬೇಕು’ ಅಂತ ಬುದ್ಧಿ ಹೇಳ್ತೀನಿ. ಆಮೇಲೆ ನಿರಾಸೆಯ ಕಣ್ಣೀರು ಒರೆಸುತ್ತಾ, ಕಣಕ್ಕಪ್ಪಲ್ಲಿ ಅದನ್ನು ಮರೆಮಾಚಿ, ಕಣ್ರೆಪ್ಪೆಗೆ “ಕನಸು ಕಂಗಳ ಜೋಪಾನ ಮಾಡು’ ಅಂತ ಮಸ್ಕಾರದಿಂದ ಮಸ್ಕಾ ಹೊಡಿತೀನಿ. ನಂತರ ನನಗೆ, ಅಂತ ಕರೆವ ಹುಬ್ಬಿಗೂ ಶೇಪ್‌ ಕೊಡುತ್ತಾ, ಒಂದು ಕ್ಷಣ ನನ್ನನ್ನೇ ನಾನು ಕನ್ನಡಿಯಲ್ಲಿ ದಿಟ್ಟಿಸುತ್ತೇನೆ. ಆಗ ಮೂಡುವ ಮುಗುಳ್ನಗೆಗೆ ಸೋತು, ತುಟಿಗೆ ಬಣ್ಣದ ಉಡುಗೊರೆ ನೀಡುವೆ. ನನಗಾಗಿ ನಾನು ಇಷ್ಟೆಲ್ಲಾ ಮಾಡುವಾಗ ಏನೋ ಒಂಥರಾ ಆತ್ಮವಿಶ್ವಾಸ ಬರುತ್ತೆ’ ಎಂದಿದ್ದಳು!

ಅಬ್ಬಬ್ಟಾ , ಇಷ್ಟೆಲ್ಲಾ ವಿಷಯ ಅಡಗಿದೆಯಾ ಈ ಮೇಕಪ್‌ನಲ್ಲಿ? ನಾನೂ ಯಾಕೆ, ಇವನ್ನೆಲ್ಲ ಟ್ರೈ ಮಾಡಬಾರದು ಅಂತ, ಮೊದಲ ಸಂಬಳದಲ್ಲಿ ಕೆಲವು ಅಲಂಕಾರಿಕ ವಸ್ತುಗಳನ್ನು ಖರೀದಿಸಿದೆ. ಸದ್ಯ, ನನ್ನ ಪುಟ್ಟ ಮೇಕಪ್‌ ಕಿಟ್‌ನಲ್ಲಿ ಫೌಂಡೇಶನ್‌ ಕ್ರೀಮ್‌, ತ್ವಚೆಗೆ ಹೊಂದುವ ಪೌಡರ್‌, ನಸುಗೆಂಪು ಲಿಪ್‌ಸ್ಟಿಕ್‌, ವಾಟರ್‌ ಪ್ರೂಫ್ ಐ ಲೈನರ್‌, ಕಾಡಿಗೆ ಬೆಚ್ಚಗೆ ಕುಳಿತಿವೆ. ದಿನವೂ ಆಫೀಸಿಗೆ ಹೊರಡುವ ಮುನ್ನ ಅವುಗಳೆಲ್ಲ ಒಂದೊಂದಾಗಿ ಹೊರಗೆ ಬಂದು, ನನ್ನ ಮುಖವನ್ನು ಮುದ್ದಿಸಿ, ಮತ್ತೆ ಒಳ ಸೇರುತ್ತವೆ. ಕೆನ್ನೆ ಕೊಂಚ ಕೆಂಪಾಯಿತೇ, ತುಟಿಯ ರಂಗು ಹೆಚ್ಚೇ ಅಂತ ಗುನುಗುತ್ತಾ, ನನ್ನ ಬಗ್ಗೆ ನಾನೇ ತುಸು ಹೆಚ್ಚು ಕಾಳಜಿ ತೋರಿಸುತ್ತಿದ್ದೇನೆ. ರೆಪ್ಪೆ ಮಿಟುಕಿಸದೆ, ಕೈ ನಡುಗಿಸದೆ ಐ ಲೈನರ್‌ ಹಚ್ಚುವಾಗಿನ ಧ್ಯಾನಸ್ಥ ಸ್ಥಿತಿ, ಮೊದಲಿಗಿಂತ ಹೆಚ್ಚು ತಾಳ್ಮೆಯನ್ನು ಕಲಿಸಿದೆ.

ನಾನಂದ್ರೆ ನಂಗಿಷ್ಟ
ಅಲಂಕಾರ ಮಾಡದೆ ಪೂಜಿಸುವ ದೇವರೇ ಇಲ್ಲ ಅಂದ್ಮೇಲೆ, ನಮ್ಮನ್ನು ನಾವು ಅಲಂಕರಿಸಿಕೊಳ್ಳಲು ಸಂಕೋಚ ಯಾಕೆ? ಮೇಕಪ್‌ನ ಬಣ್ಣ ಚರ್ಮಕ್ಕೆ ಹೊಳಪು ನೀಡಿದರೆ, ಅದು ಕೊಡುವ ಆತ್ಮವಿಶ್ವಾಸ ಕೀಳರಿಮೆಗಳನ್ನು ತೊಲಗಿಸಿ ಮನಸ್ಸಿನ ಸೌಂದರ್ಯವನ್ನು ಹೆಚ್ಚಿಸುತ್ತೆ. ಇನ್ಮುಂದೆ ಯಾರಾದ್ರೂ ನಿಮ್ಮ ಮೇಕಪ್‌ ಬಗ್ಗೆ ಹಾಸ್ಯ ಮಾಡಿದರೆ- “ನಾನಂದ್ರೆ ನನಗೆ ತುಂಬಾ ಇಷ್ಟ. ಹಾಗಾಗಿ, ಸ್ವಲ್ಪ ಜಾಸ್ತಿಯೇ ಅಲಂಕರಿಸಿಕೊಂಡೆ’ ಅನ್ನಿ.

ಮುಖವಾಡ ಬೇಡ
ನಿಮ್ಮ ನಿಜ ಬಣ್ಣ , ಆಕಾರವನ್ನು , ನಿಮ್ಮತನವನ್ನು ಮರೆಮಾಚಲು ಮೇಕಪ್‌ ಮಾಡುವುದರಲ್ಲಿ ಅರ್ಥವಿಲ್ಲ. ಸೌಂದರ್ಯದ ಬಗ್ಗೆ ಕೀಳರಿಮೆ ಪಟ್ಟು , ಅದನ್ನು ಮುಚ್ಚಿಡಲು ಪ್ರಯತ್ನಪಟ್ಟಾಗ ಅಲಂಕಾರ ಹೋಗಿ ಅವಾಂತರ ಆಗುತ್ತೆ. ಸಹಜ ಸೌಂದರ್ಯಕ್ಕೆ ಚೂರು ಮೆರುಗು ಕೊಡುವುದು ಅಲಂಕಾರವೇ ಹೊರತು, ನೈಜ ಬಣ್ಣ ಹುದುಗಿಸಲು ಕೃತಕತೆಯನ್ನು ಲೇಪಿಸಿಕೊಳ್ಳುವುದಲ್ಲ. ಕ್ರೀಮ್‌ ಹಚ್ಚಿದ್ದು ಜಾಸ್ತಿ ಆಯ್ತಾ, ತುಟಿಯ ಬಣ್ಣ ಮುಖಕ್ಕೆ ಹೊಂದುತ್ತಾ, ಅಂತೆಲ್ಲಾ ಪ್ರಶ್ನೆಗಳು ಮೂಡುವಷ್ಟು ಮೇಕಪ್‌ ಮಾಡಿಕೊಂಡರೆ, ಕೀಳರಿಮೆ ಮತ್ತಷ್ಟು ಹೆಚ್ಚಬಹುದು. ಮೇಕಪ್‌ ನಿಮ್ಮ ಬಲವೇ ಹೊರತು, ದೌರ್ಬಲ್ಯವಲ್ಲ ಅನ್ನೋದನ್ನು ಮರೆಯಬೇಡಿ.

ಸಹನಾ ಕಾರಂತ

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

  • ದಿನನಿತ್ಯ ಬಳಸುವ ಸೊಪ್ಪಿಗೂ ಹೆಣ್ಣಿಗೂ ಅವಿನಾಭಾವ ಸಂಬಂಧವಿದೆ. ಪ್ರಕೃತಿದತ್ತವಾಗಿರುವ ತಾಯ್ತನದ ಕಾರಣದಿಂದ ಕಾಪಿಡುವ, ಬೆಳೆಸುವ, ಪಾಲಿಸುವ ಗುಣಗಳು ಅವಳಲ್ಲಿ...

  • ಪ್ರತಿಯೊಬ್ಬ ಮಹಿಳೆಯೂ ತಾನು ಸೌಂದರ್ಯವತಿಯಾಗಿ, ವಿಭಿನ್ನವಾಗಿ ಮತ್ತು ಪರಿಪೂರ್ಣವಾಗಿ ಕಾಣಬೇಕೆಂದು ಬಯಸುತ್ತಾಳೆ ! ಸೀರೆ ಉಟ್ಟರೆ ನಾರಿಯ ಅಂದ ದುಪ್ಪಟ್ಟಾಗುತ್ತದೆ...

  • ರೊಟ್ಟಿ ಜನಪ್ರಿಯ ಉಪಹಾರಗಳಲ್ಲಿ ಒಂದು. ಬೆಳಗ್ಗಿನ ಉಪಹಾರಕ್ಕೆ ಶೀಘ್ರವಾಗಿ ಮತ್ತು ಸುಲಭವಾಗಿ ತಯಾರಿಸಿಕೊಳ್ಳಬಹುದಾದ ರುಚಿಕರ ರೊಟ್ಟಿ ವೈವಿಧ್ಯ ಇಲ್ಲಿದೆ. ಪಾಲಕ್‌...

  • ಬಾಲಿಶ ಹೇಳಿಕೆಗಳಿಂದ ಟ್ರೋಲ್‌ ಆಗುತ್ತಿರುವ ನಟಿ ಅಲಿಯಾ ಭಟ್‌, ಈ ಬಾರಿ ತನ್ನ "ಹೃದಯವಂತಿಕೆ'ಯ ಕಾರ್ಯದಿಂದ ಸಿನಿಪ್ರಿಯರ ಮೆಚ್ಚುಗೆಗೆ ಪಾತ್ರವಾಗಿದ್ದಾರೆ. ಹೌದು,...

  • ಶಾಲೆಯಲ್ಲಿ ತರಗತಿ ಪ್ರಾರಂಭವಾಗುವ ಮೊದಲು ಕ್ಷೀರಭಾಗ್ಯದ ಹಾಲನ್ನು ವಿತರಿಸುತ್ತೇವೆ. ಒಬ್ಬಳು ಬಂದು ಇನ್ನೊಂದು ಹುಡುಗಿಯ ಹೆಸರು ಹೇಳಿ, ""ಮೇಡಂ, ಅವಳು ಹಾಲು ಕುಡಿಯುವುದಿಲ್ಲವಂತೆ''...

ಹೊಸ ಸೇರ್ಪಡೆ