ಮಾವಿನ ಸವಿ

Team Udayavani, Jun 28, 2019, 5:00 AM IST

ಹೇರಳವಾದ ಪೋಷಕಾಂಶಗಳನ್ನು ಹೊಂದಿರುವ ಹಣ್ಣುಗಳ ರಾಜ ಎಂದೇ ಕರೆಯಲ್ಪಡುವ ಮಾವಿನ ಹಣ್ಣುಗಳ ಸೇವನೆಯಿಂದ ನರಗಳ ದೌರ್ಬಲ್ಯ, ನಿಶ್ಯಕ್ತಿ, ಅಜೀರ್ಣ ಇತ್ಯಾದಿ ಹಲವಾರು ತೊಂದರೆಗಳಿಂದ ಪಾರಾಗಬಹುದು. ಈಗಂತು ಮಾವಿನ ಹಣ್ಣಿನ ಸುಗ್ಗಿ ಎಂದೇ ಹೇಳಬಹುದು. ಇವುಗಳನ್ನು ಉಪಯೋಗಿಸಿ ಹಲವಾರು ಸವಿರುಚಿಗಳನ್ನು ಮಾಡಿ ಸವಿಯಬಹುದು.

ಮಾವಿನ ಹಣ್ಣಿನ ಖಿರು
ಬೇಕಾಗುವ ಸಾಮಗ್ರಿ: ನೀಲಂ ಅಥವಾ ರಸಪೂರಿ ಮಾವಿನ ಹಣ್ಣು- ಒಂದು, ಸಕ್ಕರೆ- ಅರ್ಧ ಕಪ್‌, ಶ್ಯಾವಿಗೆ- ಒಂದು ಕಪ್‌, ಹಾಲು- ಎರಡು ಕಪ್‌.

ತಯಾರಿಸುವ ವಿಧಾನ: ಸಿಪ್ಪೆ ತೆಗೆದ ಮಾವಿನ ಹಣ್ಣುಗಳನ್ನು ಹೆಚ್ಚಿ ಒಂದು ಬೌಲ್‌ನಲ್ಲಿ ಹಾಕಿ ಸ್ವಲ್ಪ ಮ್ಯಾಶ್‌ ಮಾಡಿಕೊಳ್ಳಿ. ರೋಸ್ಟ್‌ ಡ್‌ ಶ್ಯಾವಿಗೆಯನ್ನು ಸ್ವಲ್ಪ ಹಾಲು ಹಾಕಿ ಚೆನ್ನಾಗಿ ಬೇಯಿಸಿ. ನಂತರ ಸಕ್ಕರೆ ಸೇರಿಸಿ ಚೆನ್ನಾಗಿ ಕುದಿಸಿ ಒಲೆಯಿಂದ ಇಳಿಸಿ ಆರಲು ಬಿಡಿ. ನಂತರ, ಇದಕ್ಕೆ ಮಾವಿನ ಹಣ್ಣು ಮತ್ತು ಉಳಿದ ಹಾಲು ಸೇರಿಸಿ ಚೆನ್ನಾಗಿ ಮಿಶ್ರಮಾಡಿ ಫ್ರಿಜ್‌ನಲ್ಲಿಟ್ಟು ತಂಪಾಗಿಸಿ ಏಲಕ್ಕಿ ಪುಡಿ ಮತ್ತು ತುಪ್ಪದಲ್ಲಿ ಹುರಿದ ಗೋಡಂಬಿ ದ್ರಾಕ್ಷಿ ಬಾದಾಮಿ ಸೇರಿಸಿ ಸರ್ವ್‌ ಮಾಡಬಹುದು.

ಮಾವಿನ ಹಣ್ಣಿನ ಐಸ್‌ಕ್ರೀಮ್‌
ಬೇಕಾಗುವ ಸಾಮಗ್ರಿ: ಹಾಲು – ಒಂದು ಲೀಟರ್‌, ಐಸ್‌ಕ್ರೀಮ್‌ ಪೌಡರ್‌- ಎರಡು ಚಮಚ, ಸಕ್ಕರೆ – ಒಂದೂವರೆ ಕಪ್‌, ಮಾವಿನ ಹಣ್ಣು – ಎರಡು.

ತಯಾರಿಸುವ ವಿಧಾನ: ದಪ್ಪ ತಳದ ಪಾತ್ರೆಯಲ್ಲಿ ಹಾಲನ್ನು ಕುದಿಸಲು ಇಡಿ. ಇದು ಕುದಿಯುತ್ತಾ ಬರುವಾಗ ಸಕ್ಕರೆ ಸೇರಿಸಿ ಸಣ್ಣ ಉರಿಯಲ್ಲಿ ಕುದಿಯಲು ಇಡಿ. ನಂತರ ಐಸ್‌ಕ್ರೀಮ್‌ ಪೌಡರ್‌ಗೆ ಆರಿದ ಹಾಲನ್ನು ಹಾಕಿ ಗಂಟುಗಳಿಲ್ಲದಂತೆ ಕದಡಿ ಇದಕ್ಕೆ ಸೇರಿಸಿ ತಳ ಹಿಡಿಯದಂತೆ ಕುದಿಸಿ ಒಲೆಯಿಂದ ಇಳಿಸಿ. ಆರಿದ ನಂತರ ಇದಕ್ಕೆ ಮಾವಿನ ಹಣ್ಣನ್ನು ಸೇರಿಸಿ ನುಣ್ಣಗೆ ರುಬ್ಬಿ ಐಸ್‌ಕ್ರೀಮ್‌ ಟ್ರೇಯಲ್ಲಿ ಜೋಡಿಸಿ ಫ್ರೀಜರ್‌ನಲ್ಲಿಟ್ಟು ಗಟ್ಟಿಯಾದ ಮೇಲೆ ಸರ್ವ್‌ ಮಾಡಬಹುದು.

ಮಾವಿನ ಹಣ್ಣಿನ ಕುಲ್ಪಿ
ಬೇಕಾಗುವ ಸಾಮಗ್ರಿ: ಹೆಚ್ಚಿದ ಮಾವಿನ ಹಣ್ಣು- ಎರಡು, ಸಿಹಿಯಾದ ಮೊಸರು- ಎರಡು ಕಪ್‌, ಕ್ರೀಮ್‌- ಒಂದು ಕಪ್‌, ಕಂಡೆನ್ಸ್‌ಡ್‌ಮಿಲ್ಕ್- ಅರ್ಧ ಕಪ್‌, ಲಿಂಬೆರಸ- ಸ್ವಲ್ಪ.

ತಯಾರಿಸುವ ವಿಧಾನ: ಸಿಪ್ಪೆ ತೆಗೆದ ಮಾವಿನ ಹಣ್ಣಿನ ಹೋಳುಗಳಿಗೆ ಮೊಸರು ಮತ್ತು ಕಂಡೆನ್ಸ್‌ಡ್‌ ಮಿಲ್ಕ್ ಸೇರಿಸಿ ನುಣ್ಣಗೆ ರುಬ್ಬಿ. ನಂತರ ಇದಕ್ಕೆ ಕ್ರೀಮ್‌ ಮತ್ತು ಲಿಂಬೆರಸ ಸೇರಿಸಿ ಪುನಃ ರುಬ್ಬಿ ಕುಲ್ಫಿ ಅಚ್ಚುಗಳಿಗೆ ಸುರಿದು ಫ್ರೀಜರ್‌ನಲ್ಲಿಟ್ಟು ಸೆಟ್‌ ಮಾಡಿ. ಗಟ್ಟಿಯಾದ ಮೇಲೆ ಮಾವಿನ ಹಣ್ಣಿನ ಹೋಳುಗಳ ಜೊತೆ ಅಲಂಕರಿಸಿ ಸರ್ವ್‌ ಮಾಡಬಹುದು.

ಮಾವಿನ ಹಣ್ಣಿನ ಸ್ಮೂದಿ
ಬೇಕಾಗುವ ಸಾಮಗ್ರಿ: ಹೆಚ್ಚಿದ ಮಾವಿನ ಹಣ್ಣು – ಒಂದು ಕಪ್‌, ಸಕ್ಕರೆ- ರುಚಿಗೆ ಬೇಕಷ್ಟು, ತಂಪಾದ ಹಾಲು- ಎರಡು ಕಪ್‌, ಹೆಚ್ಚಿದ ಖರ್ಜೂರ- ಎರಡು ಚಮಚ, ಗೋಡಂಬಿ ಮತ್ತು ಬಾದಾಮಿ ಚೂರುಗಳು- ನಾಲ್ಕು ಚಮಚ, ಬಾಳೆಹಣ್ಣು – ಎರಡು ಚಮಚ, ಏಲಕ್ಕಿ ಪುಡಿ-ಚಿಟಿಕೆ ಬೇಕಿದ್ದರೆ ಮಾತ್ರ.

ತಯಾರಿಸುವ ವಿಧಾನ: ಮಿಕ್ಸಿ ಜಾರಿಗೆ ಮಾವಿನ ಹಣ್ಣು, ಸಕ್ಕರೆ, ಬಾಳೆಹಣ್ಣು ಮತ್ತು ಬೇಕಷ್ಟು ಹಾಲು ಸೇರಿಸಿ ನುಣ್ಣಗೆ ರುಬ್ಬಿ ಮಿಕ್ಸಿಂಗ್‌ ಬೌಲ್‌ಗೆ ಹಾಕಿ. ನಂತರ ಇದಕ್ಕೆ ಉಳಿದ ಹಾಲು, ಸಣ್ಣಗೆ ಹೆಚ್ಚಿದ ಖರ್ಜೂರಗಳನ್ನು ಸೇರಿಸಿ ಮಿಶ್ರ ಮಾಡಿ ಸರ್ವಿಂಗ್‌ ಕಪ್‌ಗೆ ಸುರಿದು ಮೇಲಿನಿಂದ ಐಸ್‌ಪೀಸ್‌ ಮತ್ತು ಗೋಡಂಬಿ, ಬಾದಾಮಿ ಚೂರುಗಳನ್ನು ಹರಡಿ ಸರ್ವ್‌ ಮಾಡಬಹುದು.

ಗೀತಸದಾ


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ