ಮೀ ಟೂ ತನುಶ್ರೀ ದತ್ತಾ

Team Udayavani, Jun 21, 2019, 5:00 AM IST

ಕಳೆದ ವರ್ಷ ಬಾಲಿವುಡ್‌ನ‌ಲ್ಲಿ ಸಾಕಷ್ಟು ಸಂಚಲನ ಸೃಷ್ಟಿಸಿದ್ದ ಮಿಟೂ (ಲೈಂಗಿಕ ಕಿರುಕುಳ) ಪ್ರಕರಣ ನಿಮಗೆ ನೆನಪಿರಬಹುದು. ಬಾಲಿವುಡ್‌ನ‌ ಹಿರಿಯ ನಟ ನಾನಾ ಪಾಟೇಕರ್‌ ವಿರುದ್ಧ ನಟಿ ತನುಶ್ರೀ ದತ್ತಾ ಮಾಡಿದ್ದ ಮೀಟೂ ಪ್ರಕರಣ ನಂತರ ಇಡೀ ಭಾರತೀಯ ಚಿತ್ರರಂಗದ ಎಲ್ಲೆಡೆ ಹೋರಾಟವಾಗಿ ವ್ಯಾಪಿಸಿ ಒಂದು ಹಂತದಲ್ಲಿ ಅಲ್ಲೋಲ ಕಲ್ಲೋಲವನ್ನೇ ಮೂಡಿಸಿತ್ತು. ಇನ್ನು ಬಾಲಿವುಡ್‌ನ‌ಲ್ಲಿ ಮೀಟೂ ಹೋರಾಟಕ್ಕೆ ಮುನ್ನುಡಿ ಬರೆದಿದ್ದ ತನುಶ್ರೀ ದತ್ತಾಗೆ ಈಗ ಇದೇ ವಿಷಯದಲ್ಲಿ ತೀವ್ರ ಮುಖಭಂಗವಾಗಿದೆ.

ಹೌದು, ತನುಶ್ರೀ ದತ್ತಾ ತನ್ನ ವಿರುದ್ದ ಮೀಟೂ ಆರೋಪ ಮಾಡುತ್ತಿದ್ದಂತೆ, ಈ ಆರೋಪವನ್ನು ಗಂಭೀರವಾಗಿ ತೆಗೆದುಕೊಂಡ ನಟ ನಾನಾ ಪಾಟೇಕರ್‌ ಮುಂಬೈ ನ್ಯಾಯಾಲಯದ ಮೆಟ್ಟಿಲೇರಿದ್ದರು. ತನುಶ್ರೀ ದತ್ತಾ ತನ್ನ ಚಾರಿತ್ರ್ಯವಧೆ ಮಾಡುವ ಸಲುವಾಗಿ ಇಂಥ ದುರುದ್ದೇಶದಿಂದ ಕೂಡಿದ ಆರೋಪ ಮಾಡುತ್ತಿದ್ದಾರೆ ಎಂದು ನ್ಯಾಯಾಲಯದಲ್ಲಿ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದರು. ಬಳಿಕ ವಿಚಾರಣೆಯನ್ನು ಆರಂಭಿಸಿದ ನ್ಯಾಯಾಲಯ ತನುಶ್ರೀ ದತ್ತಾಗೆ ಮೀಟೂ ಆರೋಪಕ್ಕೆ ಸಂಬಂಧಿಸಿದಂತೆ ನಾನಾ ಪಾಟೇಕರ್‌ ವಿರುದ್ಧ ತಮ್ಮ ಬಳಿಯಿರುವ ಸೂಕ್ತ ಸಾಕ್ಷ್ಯಾಧಾರಗಳನ್ನು ನ್ಯಾಯಾಲಯಕ್ಕೆ ಸಲ್ಲಿಸುವಂತೆ ಸೂಚಿಸಿತ್ತು.

ಆದರೆ, ವಿಚಾರಣೆ ಆರಂಭವಾದ ಬಳಿಕ ತನುಶ್ರೀ ದತ್ತಾ ಕೇವಲ ಒಂದು ಬಾರಿ ಹೊರತುಪಡಿಸಿದರೆ ಮತ್ತೆ ನ್ಯಾಯಾಲಕ್ಕೆ ಹಾಜರಾಗಲಿಲ್ಲ. ಅಲ್ಲದೆ ಆರೋಪಕ್ಕೆ ಸಂಬಂಧಿಸಿದಂತೆ ಸೂಕ್ತ ಸಾಕ್ಷ್ಯಾಧಾರಗಳನ್ನೂ ನ್ಯಾಯಾಲಯಕ್ಕೆ ಸಲ್ಲಿಸಲಿಲ್ಲ. ತನುಶ್ರೀ ದತ್ತಾ ಗೈರು ಹಾಜರಿಯಿಂದಾಗಿ ನ್ಯಾಯಾಲಯ ಅನೇಕ ಬಾರಿ ಕಲಾಪವನ್ನು ಮುಂದೂಡಿ, ಸಾಕಷ್ಟು ಸಮಯಾವಕಾಶ ಕೊಟ್ಟರೂ ತನುಶ್ರೀ ದತ್ತಾ ಕಡೆಯಿಂದ ಸೂಕ್ತ ಪ್ರತಿಕ್ರಿಯೆ ಬಂದಿಲ್ಲ. ಹೀಗಾಗಿ ತನುಶ್ರೀ ದತ್ತಾ ಲೈಂಗಿಕ ಕಿರುಕುಳ ಪ್ರಕರಣಕ್ಕೆ ಸಂಬಂಧಿಸಿದಂತೆ ಅಂಧೇರಿ ನ್ಯಾಯಾಲಯದಲ್ಲಿ ಮುಂಬೈ ಪೊಲೀಸರು ಆರೋಪಿ ವಿರುದ್ಧ ಪ್ರಕರಣ ದಾಖಲಿಸಲು ಹಾಗೂ ವಿಚಾರಣೆ ನಡೆಸಲು ಯಾವುದೇ ಸಾಕ್ಷಿ ಲಭ್ಯವಾಗಿಲ್ಲ ಎಂದು “ಬಿ ರಿಪೋರ್ಟ್‌’ ಸಲ್ಲಿಸಿದ್ದಾರೆ.

ಇದೇ ವೇಳೆ ತನುಶ್ರೀ ದತ್ತಾ ಅವರ ಬಗ್ಗೆ ಗರಂ ಆದ ನ್ಯಾಯಾಲಯ, ಆರೋಪಿ ವಿರುದ್ಧ ಯಾವುದೇ ಸಾಕ್ಷಿ ಲಭ್ಯವಾಗದ ಕಾರಣ ದುರುದ್ದೇಶ ಪೂರ್ವಕವಾಗಿ ದೂರು ದಾಖಲಿಸಲಾಗಿದೆ ಎಂದು ಅಭಿಪ್ರಾಯಪಟ್ಟಿದ್ದು, ಕೋರ್ಟ್‌ ಸಮಯ ಹಾಳು ಮಾಡಿದ ತನುಶ್ರೀ ದತ್ತಾ ಅವರನ್ನು ತರಾಟೆಗೆ ತೆಗೆದುಕೊಂಡಿದೆ. ಆದರೆ ಕೋರ್ಟ್‌ ತೀರ್ಪಿನ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ತನುಶ್ರೀ ದತ್ತಾ, ಈ ಪ್ರಕರಣದ ಬಗ್ಗೆ ಹೈಕೋರ್ಟ್‌ ಮೆಟ್ಟಿಲೇರುವುದಾಗಿ ತಿಳಿಸಿದ್ದಾರೆ. ಒಟ್ಟಾರೆ ಕಳೆದೊಂದು ವರ್ಷದಿಂದ ಸಾಕಷ್ಟು ಸುದ್ದಿಯಲ್ಲಿರುವ ತನುಶ್ರೀ ದತ್ತಾ ಮಿಟೂ ಆರೋಪ ಹೇಗೆ ತಾರ್ಕಿಕ ಅಂತ್ಯ ಕಾಣುತ್ತದೆ ಎಂಬ ಕುತೂಹಲ ಎಲ್ಲರಲ್ಲಿದೆ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ