ಸಾರಿ ಹೇಳುವ ಕತೆ

Team Udayavani, Sep 6, 2019, 5:28 AM IST

ಹಿಂದೆ ಹೊಸ ಸೀರೆ ಎಂದಾಕ್ಷಣ ಹೆಂಗಳೆಯರ ಮೊಗದಲ್ಲಿ ಮಂದಹಾಸ ಮೂಡುತ್ತಿತ್ತು. ಕಣ್ಣುಗಳು ಮಿನುಗುತ್ತಿದ್ದವು. ಖುಷಿ ಉಕ್ಕೇರುತ್ತಿತ್ತು. ಆಗ ಕೂಡು ಕುಟುಂಬ. ಮನೆಗೊಬ್ಬ ಯಜಮಾನ. ಮನೆಯ ಮಹಿಳೆಯರಿಗೆಲ್ಲ ಸೀರೆ ತರುತ್ತಿದ್ದದ್ದು ವರುಷಕ್ಕೊಮ್ಮೆ. ತಪ್ಪಿದರೆ ಎರಡು ಬಾರಿ. ತಾರತಮ್ಯವಿರಲಿಲ್ಲ. ಆದರೆ ಆಯ್ಕೆಯ ಹಕ್ಕಿರಲಿಲ್ಲ. ಕೈಮಗ್ಗದ ಸೀರೆಯೋ, ಕಾಲಿಲ್ಲದ ಕಟಾವ್‌ ವಾಯಿಲ್ ಸೀರೆಯೋ, ಕಾಲು ಬಂದ ಶಾಪುರಿ ಸೀರೆಯೋ ಯಾವುದಾದರೊಂದು ಸೀರೆ ಮನೆಗೆ ಬಂತೆಂದರೆ ಹಿರಿಹಿಗ್ಗು. ದೊಡ್ಡವರಿಗೆ ಉದ್ದನೆಯ ಸೀರೆ, ಎಳವೆಯರಿಗೆ ಚಿಕ್ಕ ಸೀರೆ ‘ಕಿರಗೆ ಸೀರೆ’. ಆಗ ಹೆಣ್ಮಕ್ಕಳಿಗೆ ಎಲ್ಲಿಯ ಫ್ಯಾಷನ್‌? ಸೀರೆ ಉಡುವ ಸೊಬಗೇ ಬೇರೆ. ಸಂಭ್ರಮ ಅದಕ್ಕಿಂತಲೂ ಮಿಗಿಲು. ಸೀರೆಯ ಒಳ ಕುಚ್ಚನ್ನು ಸೊಂಟಕ್ಕೆ ಒಂದು ಸುತ್ತು ತಂದು ಬಿಗಿಯಾಗಿ ಗಂಟಿಕ್ಕಿದ್ದು ಹೊಟ್ಟೆ ಇಬ್ಭಾಗವಾದಂತಾದರೂ ನಡು ಗಟ್ಟಿ. ಯಾವ ಕೆಲಸವನ್ನಾದರೂ ಮಾಡಬಲ್ಲೆನೆನ್ನುವ ಆತ್ಮವಿಶ್ವಾಸ ಹುಟ್ಟಿಸುತ್ತಿತ್ತು. ಸೀರೆಯ ಮಧ್ಯದ ಭಾಗವನ್ನ ನೆರಿಗೆ ತೆಗೆದು ಹೊಟ್ಟೆಯ ಬಳಿ ಒಳ ಸಿಕ್ಕಿಸಿ ಉಳಿದ ಭಾಗವನ್ನು ಒಂದು ಸುತ್ತು ಎಡದಿಂದ ಬಲಕ್ಕೆ ತಂದಾಗ ಉಳಿಯುವ ಸೀರೆಯ ತುದಿ ಭಾಗವೇ ಸೆರಗು. ಇದು ಎದೆಯ ತಬ್ಬಿಕೊಂಡು ಎಡ ಭುಜದ ಮೇಲೆ ಇಳಿಬಿಟ್ಟ ಮೇಲೆಯೇ ಸೀರೆ ಉಡುವ ರೀತಿ ಪೂರ್ಣಗೊಳ್ಳುತ್ತದೆ. ಕೆಲವರಂತೂ ನೆರಿಗೆಯನ್ನು ಹೊರಬದಿಗೆ ಮಡಚಿ ಬಾಳೆಕಾಯಿ ನೆರಿಗೆ ಮಾಡಿಕೊಳ್ಳುವುದೂ ಉಂಟು.

1912ರಲ್ಲೇ ಮೈಸೂರಿನ ಮಹಾರಾಜರಿಂದ ಸ್ಥಾಪಿಸಲ್ಪಟ್ಟ ರೇಶ್ಮೆ ಗಿರಣಿಗಳಲ್ಲಿ ಚಿನ್ನ ಮತ್ತು ಬೆಳ್ಳಿಯ ಜರಿಗಳಿಂದ ಕೂಡಿದ ಮೈಸೂರು ಸಿಲ್ಕ್ ಸೀರೆಯು ಹುಟ್ಟಿಕೊಂಡಿತು. ಆದರೆ ಜನಸಾಮಾನ್ಯರಿಗೆ ಇದು ಕೈಗೆಟಕುವಂತಿರಲಿಲ್ಲ. ಬಳಿಕ ಬೇರೆ ಬೇರೆ ಪ್ರದೇಶಗಳಲ್ಲಿ ಬೇರೆ ಬೇರೆ ವಿನ್ಯಾಸದ ಸೀರೆಗಳ ಉಗಮವಾಯಿತು. ಆಂಧ್ರಪ್ರದೇಶದಿಂದ ಪೋಚಂಪಲ್ಲಿ, ವೆಂಕಟಗಿರಿ ಗದ್ವಾಲ್, ನಾರಾಯಣಪೇs್ ಸೀರೆ, ಧರ್ಮಾವರಂ ಸೀರೆ, ಒಡಿಶಾದ ಇಕ್ಕತ್‌ ಸೀರೆ. ಮಧ್ಯಪ್ರದೇಶದ ಚಂದ್ರಗಿರಿ ಸೀರೆ, ಬಿಹಾರ್‌ನ ತುಸ್ಸರ್‌ ಸೀರೆ. ಕರ್ನಾಟಕದ ಮೊಳಕಾಲ್ಮೂರು ಸೀರೆ, ಇಳಕಲ್ ಸೀರೆ. ಹೀಗೆ ಸೀರೆಗಳನ್ನು ಹತ್ತಿಯಿಂದ, ನಾರಿನ ಎಳೆಗಳಿಂದ ತಯಾರಿಸಲಾಗುತ್ತಿತ್ತು. ಇನ್ನು ಕೈಮಗ್ಗದ ಸೀರೆಯ ಹಿತ ಉಟ್ಟವರಿಗೇ ಗೊತ್ತು. ಒಂದು ರೀತಿಯ ಪ್ರಸನ್ನತೆ ಮತ್ತು ಹೆಮ್ಮೆ ಮೇಳೈಸಿಕೊಳ್ಳುತ್ತದೆ. ಹಿಂದಿನ ಕಾಲದ ಮಹಿಳೆಯರು ಸೀರೆಗಳನ್ನ ಜೋಪಾನವಾಗಿ ಇಟ್ಟುಕೊಳ್ಳುವಲ್ಲಿ ನಿಸ್ಸೀಮರು. ಹಾಗಾಗಿ ಸಾಮಾನ್ಯ ಬಡವರ್ಗದ ಹಿರಿಯ ಮಹಿಳೆಯರು ರಾತ್ರಿ ಹೊತ್ತಲ್ಲಿ ಹಳೆಯ ತುಂಡು ಸೀರೆಯಿಂದ ನೆರಿಗೆ ತೆಗೆಯದೆ ಹಾಗೇ ಒಕ್ಕಡ್ತಲ್ ಉಟ್ಟುಕೊಳ್ಳುತ್ತಿದ್ದರು. ಆದರೆ ಇಂದು ಸೀರೆ ಉಡುವವರ ಸಂಖ್ಯೆ ಇಳಿಮುಖವಾಗಿ ಬೇರೆ ಬೇರೆ ವಿನ್ಯಾಸದ ಉಡುಪುಗಳು ವಿಜೃಂಭಿಸುತ್ತಿವೆ. ರಾತ್ರಿ ಹೊತ್ತಿನ ಉಡುಗೆಯಾಗಿ ನೈಟಿ ಧಾರಣೆ ಸಮಯಾವಕಾಶವನ್ನು ಹಗಲಿಗೂ ವಿಸ್ತರಿಸಿಕೊಂಡಿದೆ. ಯುವತಿಯರು ಸೀರೆ ಉಟ್ಟರೆ ಕಾಲಿಗೆ ತೊಡರುತ್ತದೆ ಎನ್ನುವ ಸಬೂಬು ಹೇಳಿ ಉಡಲು ಹಿಂಜರಿಯುತ್ತಿದ್ದಾರೆ. ಇನ್ನುಳಿದವರು ಪ್ರಯಾಣಕ್ಕೆ ಸೀರೆ ಅಷ್ಟೇನು ಆರಾಮದಾಯಕವಲ್ಲ ಎನ್ನುವ ತೀರ್ಮಾನಕ್ಕೆ ಬಂದಿದ್ದಾರೆ. ಉತ್ತಮ ಗುಣಮಟ್ಟದ ಸೀರೆಗಳನ್ನು ಮದುವೆ-ಮುಂಜಿಗಷ್ಟೇ ಬಳಸುತ್ತಿದ್ದುದು ಇಂದು ಸಾವಿನ ಮನೆಯತ್ತ ಮುಖಮಾಡಿದೆ ಎಂದರೆ ನಂಬುತ್ತೀರಾ? ಹೌದು ಮೊನ್ನೆ ತಾನೇ ನಗರದಲ್ಲಿ ವಿವಿಧ ಪ್ರದೇಶಗಳಲ್ಲಿ ತಯಾರಾದ ಸೀರೆಗಳ ಪ್ರದರ್ಶನ ಮತ್ತು ಮಾರಾಟದ ಮಳಿಗೆಯೊಂದು ತೆರೆದಿತ್ತು. ನಾನೂ ನನ್ನ ಗೆಳತಿಯ ಒತ್ತಾಯದ ಮೇರೆಗೆ ಅವಳೊಂದಿಗೆ ಹೋಗಿದ್ದೆ. ಎರಡೂವರೆ ಸಾವಿರ ರೂಪಾಯಿ ಮೌಲ್ಯದ ಕಪ್ಪು ಬಣ್ಣದ ಸೀರೆಯನ್ನು ಎತ್ತಿಕೊಂಡವಳೇ ‘ಬಹಳ ಚೆನ್ನಾಗಿದೆ’ ಎಂದಳು. ‘ಹೌದು’ ಎನ್ನುವಷ್ಟರಲ್ಲಿ ಅಲ್ಲಿಗೆ ಬಂದ ಪರಿಚಯದಾಕೆ ‘ಹೌದು ಚೆನ್ನಾಗಿದೆ. ಕಪ್ಪು ಬಣ್ಣ. ಸಾವಿಗೆ ಉಡಬಹುದು!’ ಎಂದಾಕ್ಷಣ ಒಂದರೆ ಕ್ಷಣ ತಬ್ಬಿಬ್ಬು.

ಸತ್ತವರ ಹೆಣ ನೋಡುವಾಗ ಉಡಬಹುದೇ, ಸಾಯುವಾಗ ಉಡಬಹುದೇ, ಅದೂ ಕಪ್ಪು ಬಣ್ಣ ಸಾವಿಗೆ ಅಚ್ಚುಮೆಚ್ಚೇ? ಒಮ್ಮೆಲೆ ದಿಗಿಲು ಬಡಿಯಿತು. ಸಾವು ಹೇಳಿಕೇಳಿ ಬರುತ್ತದೆಯೇ. ಹಿಂದೆ ಆಸುಪಾಸಿನಲ್ಲಿ ಸತ್ತ ಸುದ್ದಿ ಕಿವಿಗೆ ಬಿದ್ದಾಕ್ಷಣ ಉಟ್ಟುಡುಗೆಯಲ್ಲೇ ಓಡುತ್ತಿದ್ದ ಕಾಲ ನೋವುಮಿಶ್ರಿತ ಭಯ ಆವರಿಸಿಕೊಂಡಿರುವ ಹೊತ್ತಲ್ಲಿ ನಮ್ಮ ಮೈಮಂಡೆಯ ಪರಿವೆ ಬಗ್ಗೆ ಚಿಂತಿಸುವ ಹೊತ್ತೇ? ಈಗ ಸತ್ತ ಕೊರಡಿನ ಅಂತಿಮ ದರ್ಶನಕ್ಕೂ ಉಡುಗೆಯ ಪೂರ್ವತಯಾರಿಯೇ. ಹಬ್ಬದ ಸೀರೆ, ಧಾರೆಸೀರೆ ಬಯಕೆಯ ಸೀರೆ ಕೇಳಿದ್ದಿದೆ. ಸಾವಿನ ಸೀರೆ ಎಂದು ಕೇಳಿದ್ದು ಇದೇ ಮೊದಲು. ಇತ್ತೀಚಿನ ದಿನಗಳಲ್ಲಿ ಸಾವಿನ ಸುದ್ದಿ ವಿಜೃಂಭಿಸಲ್ಪಡುವುದಂತೂ ಸತ್ಯ. ಹಿಂದೆ ಒಂದು ಕುಟುಂಬದ ಕಷ್ಟ ಎಂದರೆ ಅದು ಊರಿನಕಷ್ಟ ಎಂಬಂತೆ ಒಬ್ಬರಿಗೊಬ್ಬರು ಹೆಗಲು ಕೊಡುತ್ತಿದ್ದರು. ಇಂದು ಭಾವನೆಗಳು ಬದಲಾಗಿವೆ.

ಮೊನ್ನೆ ಬಂಧುವೊಬ್ಬರ ಶವಸಂಸ್ಕಾರಕ್ಕೆ ಭಾಗಿಯಾಗಲು ತೆರೆಳಿದ ಸಂದರ್ಭ. ಚಾವಡಿಯ ನಡುವಲ್ಲಿ ಮಲಗಿಸಿದ ನಿರ್ಜೀವ ಹೆಣ. ಸುತ್ತ ಸತ್ತವನ ನಿಕಟ ಬಂಧುಗಳು. ಗೋಡೆಯ ಬದಿಯಲ್ಲಿ ಒಂದಷ್ಟು ಮಾನಿನಿಯರು ಮಕ್ಕಳು. ಪರೀಕ್ಷೆ, ಫ‌ಲಿತಾಂಶ, ಸೀಟು- ಇದೇ ಮಾತುಗಳು ಚರ್ಚೆಗಳು. ಮಹಿಳೆಯರೋ ಸಮಾರಂಭವೊಂದಕ್ಕೆ ಬಂದಂತೆ. ಪೆನ್ಸಿಲ್ ಬಾರ್ಡರ್‌ ಸಿಲ್ಕ್ಸೀರೆ, ಜೂಟ್ ಸೀರೆ, ಅಂದದ ಸಿಂತೆಟಿಕ್‌ ಸೀರೆ… ಹೀಗೆ ತಮ್ಮ ಸೌಂದರ್ಯ ಪ್ರಜ್ಞೆಯನ್ನ ಎಲ್ಲೂ ಯಾವ ಸಂದರ್ಭದಲ್ಲೂ ಬಿಟ್ಟುಕೊಡಲು ಒಪ್ಪದಂತಿರುವ ಒಂದು ವರ್ಗದವರು. ಮತ್ತೂಮ್ಮೆ ಮಿತ್ರಭೋಜನದ ಸಮಾರಂಭವೊಂದರಲ್ಲಿ ಭಾಗಿಯಾಗಿದ್ದಾಗ ಸತ್ತ ವ್ಯಕ್ತಿಯ ಮನೆಯವರನ್ನು ಗುರುತಿಸಲು ಕಷ್ಟವಾಗಲೇ ಇಲ್ಲ. ಮಡದಿ, ಮಕ್ಕಳು, ಆಪ್ತ ಬಂಧುಗಳು ಉಟ್ಟ ಸೀರೆ ತೊಟ್ಟ ರವಿಕೆಯೋ ಹೊಚ್ಚ ಹೊಸ ಸಮವಸ್ತ್ರ. ಒಂದೇ ಬಗೆಯ ಸಿಲ್ಕ್ ಸೀರೆಗಳು.

ಸಾವಿನ ಮನೆಯಲ್ಲೂ ಹೊಸ ಸಂಪ್ರದಾಯದ ಹುಟ್ಟು. ತಮ್ಮ ಸ್ಥಾನಮಾನ ವೈಭೋಗದ ಸಮಾಗಮ. ಇಲ್ಲ, ಬದುಕು ನಶ್ವರ ಎನಿಸುವಂತಹ ಸಂದರ್ಭ, ಸಂಸಾರದ ಕೊಂಡಿಯೊಂದು ಕಳಚಿದ ಸನ್ನಿವೇಶ. ಅಂತಹದ್ದರಲ್ಲಿ ಹೊಸ ಬಟ್ಟೆ ಹೊಲಿಸಿಕೊಳ್ಳಲು ಮನಸ್ಸು ಬರುವುದಾದರೂ ಹೇಗೆ? ಅಷ್ಟೇ ಅಲ್ಲ, ನನ್ನ ಬಹುಕಾಲದ ಗೆಳತಿಯ ಪತಿ ದೈವಾದೀನರಾದ ಸುದ್ದಿ ತಿಳಿದು ಅವಳನ್ನು ಮಾತಾಡಿಸಿ ಬರಲು ಅವಳಲ್ಲಿ ತೆರಳಿದ್ದೆ. ಆವಾಗಲೇ ಅವರ ಮನೆಯ ಒಬ್ಟಾಕೆ ಗೆಳತಿಯ ಕಿವಿಯಲ್ಲಿ ಏನೋ ಪಿಸುಗುಟ್ಟಿದರು. ಏನೆಂದರೆ, ಮಿತ್ರಭೋಜನಕ್ಕೆ ಬಿಳಿಸೀರೆ ಉಡಲು ಕುಪ್ಪಸ ಹೊಲಿಯಲು ಅಳತೆ ರವಿಕೆ ಬೇಕಂತೆ. ಅಬ್ಟಾ…! ಕೇಳಿ ಅಚ್ಚರಿಗೊಂಡೆ. ಸೂತಕದ ಮನೆ. ನೋವು ಮೆತ್ತಿಕೊಂಡ ವಾತಾವರಣ. ಅಂತದ್ದರಲ್ಲೂ ಪ್ರತಿಷ್ಟೆಗಾಗಿ ಮುಂಜಾಗೃತೆ. ತಮ್ಮ ಡೌಲಿನ ಪ್ರದರ್ಶನಕ್ಕೆ ಸಾವಿನ ಮನೆಯಲ್ಲೂ ಸೀರೆಯ ಬಗ್ಗೆ ಕಾಳಜಿ ಕಾಣುವಾಗ ನಾವೆಲ್ಲಿದ್ದೇವೆ ಅನಿಸಿತು. ವಿವಿಧ ವಿನ್ಯಾಸದ ಉಡುಪುಗಳೇ ವಿಜೃಂಭಿಸುತ್ತಿರುವಾಗ ಸೀರೆ ಬಳಸುವ ಅವಕಾಶಗಳು ಕಡಿಮೆಯಾಗುತ್ತಿರುವುದಕ್ಕೆ ಈ ರೀತಿಯ ಬಳಕೆಯೇ? ಸಾವಿನ ಮನೆಗೂ ಇಂಥ‌ದ್ದೇ ಸೀರೆ ಎನ್ನುವ ನಿಯಮವೇನಾದರೂ ಹುಟ್ಟಿಕೊಂಡಿದೆಯೇ. ಅರ್ಥವಾಗದ ಕಾಲಘಟ್ಟ. ಸೀರೆ ನಿನ್ನ ಬಳಕೆ ತುಂಬಾ ವಿರಳವಾದರೂ ಪರವಾಗಿಲ್ಲ. ಬಳಸುವಲ್ಲಿಯೇ ಬಳಸುವಂಥದ್ದನ್ನೇ ಬಳಸಿಕೊಂಡರೆ ಮಾತ್ರ ಅದಕ್ಕೊಂದು ಸೊಬಗು, ಹೆಮ್ಮೆ ಮತ್ತು ಖುಷಿ.

ವಸಂತ ಶೆಟ್ಟಿ

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.ಈ ವಿಭಾಗದಿಂದ ಇನ್ನಷ್ಟು

  • ಅಜ್ಜಿ-ಅಮ್ಮ, ಮಕ್ಕಳ ಪಾಲನೆಯನ್ನು ಬೇರೆ ಬೇರೆಯಾಗಿ ನೋಡುವುದಾದರೂ ಏಕೆ? ಅಜ್ಜಿಯೂ "ಅಮ್ಮ'ನಾಗಿಯೇ ಮಕ್ಕಳನ್ನು ಬೆಳೆಸಿರುತ್ತಾಳಷ್ಟೆ. ಆದರೆ, ಅಜ್ಜಿಯಾಗಿ ಮಾಗುವ...

  • ಬಿಡುವಿನ ವೇಳೆಗಳಲ್ಲಿ ಪರಸ್ಪರ ಕಷ್ಟ-ಸುಖ ಹಂಚಿಕೊಳ್ಳುವ ಪರಿಪಾಠ ಹೆಚ್ಚಿನ ಎಲ್ಲಾ ಕಚೇರಿಗಳಲ್ಲೂ ಇರುತ್ತದೆ. ಈ ಚರ್ಚೆಗಳ ಸಂದರ್ಭದಲ್ಲಿ ಗಂಡಸರು, ಹೆಂಗಸರು...

  • ಬಾಲಿವುಡ್‌ ಚೆಲುವೆ ವಿದ್ಯಾ ಬಾಲನ್‌ ಯಾವಾಗಲೂ ವಿಭಿನ್ನ ಪಾತ್ರಗಳಿಗೆ ತೆರೆದುಕೊಳ್ಳುವ ನಟಿ. ಬಹುಶಃ ಹಾಗಾಗಿಯೇ ಪ್ರತಿ ಚಿತ್ರದಲ್ಲೂ ವಿಭಿನ್ನ ಪಾತ್ರಗಳು ವಿದ್ಯಾ...

  • ""ರೀ, ನಾನು ದಪ್ಪಗಾಗಿದ್ದೀನ? ಅಂತ ಗಂಡನಲ್ಲಿ ಕೇಳಿದೆ. ನೀನ್ಯಾವಾಗ ಸಣ್ಣಗಿದ್ದೆ ಅನ್ನೋ ಥರ ನೋಡಿ, "ಹಾಗೆ ಕಾಣುತ್ತಪ್ಪಾ!' ಅಂತ ಅಡ್ಡಗೋಡೆಯ ಮೇಲೆ ದೀಪವಿಟ್ಟರು. ಸುಪುತ್ರನಲ್ಲಿ...

  • ಬದನೆ ಹೆಚ್ಚಾಗಿ ಉಪಯೋಗದಲ್ಲಿರುವ ಸಾಮಾನ್ಯ ತರಕಾರಿ. ಬದನೆ ಎಂದರೆ ಎಲ್ಲರೂ ಇಷ್ಟಪಡುತ್ತಾರೆ. ಆದರೆ, ಬದನೆಕಾಯಿ ಎಂದರೆ ಮುಖ ಸಿಂಡರಿಸುವವರೂ ಕೆಲವರು ಇದ್ದಾರೆ....

ಹೊಸ ಸೇರ್ಪಡೆ