ಸೀರೆ! ನಿನಗೆ ಸರಿಸಾಟಿ ಯಾರೆ !

Team Udayavani, Nov 1, 2019, 4:55 AM IST

ಮೊನ್ನೆ ಯಾವುದೋ ಹಳೆಯ ಸಿನೆಮಾ ನೋಡುತ್ತ ಕುಳಿತಿದ್ದೆ. ಅದರಲ್ಲಿ ನಾಯಕನ ತಾಯಿ ಹಾಗೂ ತಂಗಿ ಬೆಂಕಿಗೆ ಸಿಲುಕಿ “ಕಾಪಾಡಿ, ಕಾಪಾಡಿ’ ಎಂದು ಅರಚುತ್ತಿದ್ದರು. ನಾಯಕ ಸ್ಟೈಲಾಗಿ ಹಾರಿ ಬಂದು ಅವರಿಬ್ಬರನ್ನು ಕಾಪಾಡುತ್ತಾನೆ. ಪಕ್ಕದಲ್ಲಿ ಮೊಬೈಲ್‌ ಮೇಲೆ ಬೆರಳಾಡಿಸುತ್ತ ಆಗಾಗ್ಗೆ ಟಿವಿ ಮೇಲೆ ಕಣ್ಣಾಡಿಸುತ್ತ ಕುಳಿತಿದ್ದ ನನ್ನ ಮಗಳು ಆ ದೃಶ್ಯವನ್ನು ನೋಡುತ್ತಲೇ, “ಈ ಸೀರೆ ಉಟ್ಕೊಂಡೇ ಇಷ್ಟೆಲ್ಲಾ ಪ್ರಾಬ್ಲಿಮ್‌ ಮಮ್ಮಿ’ ಎಂದಾಗ ಸೀರೆಗೂ, ಸಿನೆಮಾದ ದೃಶ್ಯಕ್ಕೂ ಏನು ಸಂಬಂಧ ಎನ್ನುವಂತೆ ಆಕೆಯ ಕಡೆ ನೋಡಿದೆ. “ಮತ್ತಿನ್ನೇನು, ಆ ಇಬ್ಬರು ಹೆಂಗಸರು ಚೂಡಿದಾರೋ, ಪ್ಯಾಂಟು ಶಟೋì ಹಾಕಿಕೊಂಡಿದ್ದರೆ ಇಷ್ಟೆಲ್ಲಾ ಪ್ರಾಬ್ಲೆಮ್ಮೇ ಇರ್ತಿರ್ಲಿಲ್ಲ, ಹೀರೋ ಬರೋದನ್ನು ಕಾಯೋದು ಬಿಟ್ಟು ತಾವೇ ಹಾರಿ ಹೋಗ್ಬಹುದಿತ್ತು, ಜೊತೆಗೆ ಮಹಾಭಾರತದ ದ್ರೌಪದಿಯೂ ಅಷ್ಟೆ, ಜೀನ್ಸೋ, ಚೂಡಿದಾರೋ ಹಾಕ್ಕೊಂಡಿದ್ಲು ಅಂದ್ರೆ ವಸ್ತ್ರಾಪಹರಣ ನಡೆಯುತ್ತಲೇ ಇರಲಿಲ್ಲ’ ಎನ್ನಬೇಕೆ?

“ಆ ಸೀರೆ ಉಟ್ಕೊಂಡು ಹೇಗಿರ್ತಿರಾ ಮಮ್ಮಿ! ಜೋರಾಗಿ ನಡೆಯೋಕ್ಕೆ ಬರೋಲ್ಲ, ಓಡೋಕ್ಕೆ ಬರೋಲ್ಲಾ, ಜಿಗಿಯೋಕೆ ಬರೋಲ್ಲ, ಬಸ್‌ ಹತ್ತೋಕೆ, ಇಳಿಯೋಕೆ ಕಷ್ಟ ಅಂತಾ ಆಕೆಯ ವಾದ. ಜೊತೆಗೆ ಮೈಮುಚ್ಚುತ್ತೆ ಅಂತೀಯಾ, ಹಿಂದುಗಡೆ ಬೆನ್ನೆಲ್ಲ ಓಪನ್‌, ಸ್ಲಿವ್ಸ್‌ ಶಾರ್ಟ್‌, ಸೊಂಟ ಎಲ್ಲ ಓಪನ್‌, ಕಾಲು ಮಾತ್ರ ಮುಚ್ಚುವ ಸೀರೆಗಿಂತ ನಮ್ಮ ಜೀನ್ಸ್‌, ಟಾಪ್‌ಗ್ಳೇ ಸೇಫ‌ು, ಜೊತೆಗೆ ನೆರಿಗೆ ಪಿನ್ನು ಮಾಡಬೇಕು, ಸೆರಗು ಪಿನ್ನು ಮಾಡಬೇಕು, ಉಟ್ಟುಕೊಳ್ಳೋಕೆ ಒಂದರ್ಧ ಗಂಟೆ ಬೇಕು, ಅದಕ್ಕೆ ತಕ್ಕ ಜ್ಯುವೆಲ್ಲರಿಸ್‌, ಪರ್ಸು, ಮೇಕಪ್ಪು ಅನ್ನೋ ಹೊತ್ತಿಗೆ ಟೈಮ್‌ ವೇಸ್ಟ್‌ ಬಹಳ ಆಗುತ್ತೆ ಎನ್ನುವ ವಾದ ಅವಳದು. ಮದುವೆಯಲ್ಲಿ ಮದುವೆ ಹೆಣ್ಣು ಮಾತ್ರ ಸೀರೆ ಉಟ್ಟುಕೊಂಡರೆ ಸಾಕು, ನೀವು ಹೆಂಗಸರೆಲ್ಲ ಮದುವೆ ಹೆಣ್ಣಿಗಿಂತ ಹೆಚ್ಚಾಗಿ ಒಳ್ಳೆ ಜಾತ್ರೆಗೆ ರೆಡಿಯಾದ ಹಾಗೆ ರೆಡಿಯಾಗಿರ್ತಿರಾ!’ ಅಂತಾ ಅಣಕಿಸುತ್ತಾಳೆ. ಆಕೆ ಹೇಳುವುದರಲ್ಲಿಯೂ ಸತ್ಯವಿಲ್ಲದಿಲ್ಲ ಎನಿಸಿತು. ಯಜಮಾನರೂ ಈ ವಿಷಯದಲ್ಲಿ ಮಕ್ಕಳಿಗೆ ಸಾಥ್‌ ನೀಡುತ್ತ, “ಹೂಂ! ಸುಮ್ಮನೆ ಒಂದು ಡ್ರೆಸ್‌ ಹಾಕಿಕೊಂಡು ಬಂದ ರಾಯಿತು, ಇದನ್ನು ಆ ಫ‌ಂಕ್ಷನ್ನಿಗೆ ಉಟ್ಟಿದ್ದೆ, ಅದನ್ನು ಈ ಫ‌ಂಕ್ಷ ನ್ನಿಗೆ ಉಟ್ಟಿದ್ದೆ ಅಂತಾ ಆರಿಸೋಕೇ ಒದ್ದಾಡ್ತೀರಾ, ಜೊತೆಗೆ ಉಡಲು ಗಂಟೆಗಟ್ಟಲೆ ಮಾಡು ತ್ತೀರಾ’ ಎಂದು ಕಿಚಾಯಿಸಿದರೂ, ಸೀರೆಯುಟ್ಟಾಗ ಅವರ ಅರಳುವ ಕಣ್ಣುಗಳು ಸತ್ಯವನ್ನು ಮರೆಮಾಚು ತ್ತಿರುತ್ತವೆ.

ಅಷ್ಟೆಲ್ಲಾ ಅಣಕಿಸಿದರೂ ಕೆಲವೊಮ್ಮೆ, “ಮಮ್ಮಿ, ನಿನಗೆ ಎಲ್ಲ ಡ್ರೆಸ್ಸುಗಳಿಗಿಂತ ಸೀರೆ ಉಟ್ಟಾಗಲೇ ಚಂದ, ಸೀರೆಯಲ್ಲಿ ಮಮ್ಮಿಗಳು ಚಂದ ಕಾಣಾರೆ’ ಎನ್ನುವ ಮಾತು ಆಗಾಗ್ಗೆ ಬಂದು ಬಿಡುತ್ತದೆ. ಇಂದಿನ ಪೀಳಿಗೆಗೆ ಸೀರೆ ಅಂದರೆ ಅಲರ್ಜಿ, ಜೊತೆಗೆ ಕೈಯಲ್ಲಿ ಬಳೆಯಿಲ್ಲ, ಹಣೆಯಲ್ಲಿ ಕುಂಕುಮವಿಲ್ಲ, ಕಾಲಲ್ಲಿ ಕಾಲಂದಿಗೆಯಿಲ್ಲ, ಎಲ್ಲಾ ಬೋಳು ಬೋಳು. ಆದರೆ ಫೇರ್‌ವೆಲ್‌, ಸೆಂಡ್‌- ಆಫ್ ಮತ್ತಿತರ ಕಾರ್ಯಕ್ರಮಗಳಿಗೆ ಒಮ್ಮೆಯಂತೂ ಸೀರೆ ಸಾಕ್ಷಿಯಾಗಿರುತ್ತದೆ. ಸ್ಯಾರಿ ಡೇ ಅಂತ ಒಂದು ದಿನವನ್ನೇ ಸೀರೆಗಾಗಿ ನಿಗದಿಪಡಿಸಿಬಿಡುತ್ತಾರೆ. ಅದಕ್ಕಾಗಿ ಅವರ ಸಂಭ್ರಮ ಹೇಳತೀರದು. ಒಂದು ತಿಂಗಳಿನಿಂದಲೇ ಸೀರೆಯ ಖರೀದಿ, ಅದಕ್ಕೆ ಹೊಸ ವಿನ್ಯಾಸದ ಬ್ಲೌಸ್‌, ಬಳೆ, ಬಿಂದಿ, ಮೇಕಪ್ಪಿನಿಂದ ಹಿಡಿದು ಮ್ಯಾಚಿಂಗ್‌ ಮ್ಯಾಚಿಂಗ್‌. ಪ್ರತಿದಿನ ಅದನ್ನು ಉಡುವ ಪ್ರಾಕ್ಟೀಸ್‌ ಏನು! ಕನ್ನಡಿಯಲ್ಲಿ ತಿರುತಿರುಗಿ ನೋಡುವುದೇನು! ಚಂದ ಕಾಣುತ್ತಲ್ವಾ ಮಮ್ಮಿ ಎಂದು ಗೋಗರೆಯುವುದೇನು! ಗೆಳತಿಯರು ಪರಸ್ಪರ ದಿನವೆಲ್ಲ ಗಂಟೆಗಟ್ಟಲೆ ಚರ್ಚಿಸುವುದೇನು! ತಮ್ಮ ತಮ್ಮ ಸೀರೆಗಳ ಫೋಟೋಗಳನ್ನು ವಾಟ್ಸಾಪಿನಲ್ಲಿ ತೇಲಿಬಿಟ್ಟು ಹೊಗಳಿಕೆಗಾಗಿ ಕಾಯುವುದೇನು! ಕಾರ್ಯಕ್ರಮ ಮುಗಿಯುವ ತನಕವೂ ಸೆಲ್ಫಿà, ಫೋಟೋಗಳದ್ದೇ ಕಾರುಬಾರು. ಇದನ್ನೆಲ್ಲ ಕಂಡಾಗ ಸೀರೆಯೆಂದರೆ ಬೈದಾಡುತ್ತಿದ್ದ ಮುದ್ದು ಹುಡುಗಿಯರಿಗೆ ಅದ್ಯಾವಾಗ ಸೀರೆ ಅಷ್ಟು ಆಪ್ತವಾಯಿತು ಎಂದು ಗೊತ್ತೇ ಆಗುವುದಿಲ್ಲ.

ಅದೇ ಈ ಸೀರೆಯ ವೈಖರಿ! ಅದೆಂಥ ಆಧುನಿಕ ಉಡುಗೆಗಳ ಆಕ್ರಮಣದ ನಡುವೆಯೂ ಹೆಣ್ಣೊಬ್ಬಳು ಹೆಣ್ಣಾಗಿ ಕಂಗೊಳಿಸುವುದು ಸೀರೆಯಲ್ಲಿ ಮಾತ್ರ. ಸೀರೆ ಉಟ್ಟ ನೀರೆಗೆ ಸರಿಸಾಟಿ ಯಾರೆ? ಎನ್ನುವ ಮಾತು ಅಪ್ಪಟ ಸತ್ಯ. ಭಾರತೀಯ ಸಂಸ್ಕೃತಿಯನ್ನು ಎತ್ತಿ ಹಿಡಿಯುವುದರಲ್ಲಿ ಸೀರೆ ಮಹತ್ತರ ಪಾತ್ರ ವಹಿಸಿದೆ ಎನ್ನುವುದರಲ್ಲಿ ಉತ್ಪ್ರೇಕ್ಷೆಯಿಲ್ಲ. ದೇಶ-ವಿದೇಶದ ಮಹಿಳೆಯರೂ ನಮ್ಮ ಸೀರೆ ಉಡುಗೆಗೆ ಮಾರುಹೋಗಿದ್ದಾರೆ ಎಂದರೆ ಅದರ ಮಹತ್ವ ಅರಿವಾದೀತು. ಹಳೆಯ ಕಾಲದಿಂದ ಇಂದಿನವರೆಗೂ ಎದುರಾಳಿಯನ್ನು ಅಣಕಿಸುವಾಗ “ಸೀರೆ ಉಟ್ಟು ಬಳೆ ತೊಟ್ಟುಕೋ ಹೋಗು’ ಎನ್ನುತ್ತಾರೆಯೇ ಹೊರತು ಅಲ್ಲಿ ಹೆಣ್ಣಿನ ಮತಾöವ ಉಡುಗೆಗಳ ಬಗ್ಗೆಯೂ ಚಕಾರವಿಲ್ಲ. ಸಿನೆಮಾ ಹಾಡುಗಳಲ್ಲಿಯೂ ಸಹ “ದೂರದ ಊರಿಂದ ಹಮ್ಮಿàರ ಬಂದ, ಜರತಾರಿ ಸೀರೆ ತಂದ’, “ಸೀರೆ ಕೊಟ್ಟ ಧೀರ, ಮನಸ್ಸನ್ನಿಲ್ಲಿ ತಾರ’- ಹೀಗೆ ಎಷ್ಟೋ ಹಾಡುಗಳಲ್ಲಿ ಸೀರೆಗಲ್ಲದೆ ಬೇರೆ ಉಡುಗೆಗೆ ಸ್ಥಾನ ಸಿಕ್ಕಿದೆ? ಹೆಣ್ಣು ಹೆಣ್ತನವನ್ನು ಸಂಭ್ರಮಿಸುವ ಪ್ರತಿ ಹಂತದಲ್ಲೂ ಅಂದರೆ, ತಾಯಿಯಾಗುವಾಗ, ತಾಯಿಯಾದಾಗ, ಋತುಮತಿಯಾದಾಗ, ಮದುವೆಯಾಗುವಾಗ ಕೊನೆಗೆ ಈ ಲೋಕ ಬಿಟ್ಟು ಮಣ್ಣು ಸೇರುವಾಗಲೂ ಸೀರೆಯನ್ನು ಉಡಿ ತುಂಬಿಸಿ ಹರಸುವುದು ಸಾಮಾನ್ಯ.

ಮೊನ್ನೆ ಯಾರೋ ಹಿರಿಯ ಹೆಂಗಸರು ಮಾತನಾಡುವುದು ಕಿವಿಗೆ ಬಿತ್ತು. “ಈಗಿನ ಸೊಸ್ಯಾರು ಚಂದಾಗ್‌ ಸೀರಿ ಉಡೂಡ್‌ ಬಿಟ್ಟು, ಅದೇನೋ ಸೂಡಿದಾರ, ಲೆಗ್ಗಿಂಜ್‌, ಕುರ್ತಾ, ಅದೂ ಇದೂ ಹಾಳಾ ಮೂಳಾ ಅಂತಾ ಹಾಕ್ಕೋತಾವ್‌ ರೀ. ಏನಾರ ಬಲವಂತ ಮಾಡಿದ್ರೆ, ಅತ್ಯಾರಾ ಸೀರಿ ಉಟ್ಕೊಂಡ್ರ ನಮಗ್‌ ಕೆಲ್ಸಾ ಮಾಡಾಕ್‌ ಆಗಂಗಿಲ್ಲ, ಎಲ್ಲಾ ನೀವೇ ಮಾಡ್ಬೇಕು ನೋಡ್ರೀ, ನಾ ಅಂತೂ ಗೊಂಬೀ ಕುಂತಾಂಗ್‌ ಒಂದು ಕಡೀ ಸುಮ್ನೆà ಕುಂದ್ರಾಕಿ ಅಂತಾ ಹೆದರಿಸ್ತಾರ್ರೀ. ತೊಗೊಳ್ಳೂದು ನೋಡಿದ್ರ ಎಲ್ಲಾ ಹಬ್ಬಕ್ಕೂ ಒಂದೊಂದು ಸೀರಿ ತರ್ತಾರಾ, ಒಂದೆರಡು ಸಲ ಉಟ್ಕೊಂಡ್‌ ಮ್ಯಾಗ್‌ ಮುಗೀತು ಅವುಗಳ ಕಥಿ, ಮೂಲಿಗೆ ಒಕ್ಕಾಟಾ¤ರ’ ಎನ್ನುವ ಮಾತುಗಳನ್ನು ಕೇಳಿ ನಗು ತಡೆಯಲಾಗಲಿಲ್ಲ.

ಹಳೆಯ ಕಾಲದಲ್ಲಿ ಪ್ರತಿದಿನದ ಉಪಯೋಗಕ್ಕೆ ಒಂದ್ನಾಲ್ಕು ಸೀರೆ, ಜೊತೆಗೆ ಮದುವೆ-ಮುಂಜಿಗಳಿಗೆ ಅಂತಾ ಒಂದ್ನಾಲ್ಕು ರೇಷ್ಮೆ ಸೀರೆ ಇದ್ದರೆ ಹೆಚ್ಚಿರುತ್ತಿತ್ತು. ಈಗ ಕಾಲ ಎಷ್ಟು ಬದಲಾಗಿದೆಯೆಂದರೆ, ಸಾಂಪ್ರದಾಯಿಕ ಸಮಾರಂಭಗಳಿಗಾಗಿ ರೇಷ್ಮೆ ಸೀರೆ, ಚಿಕ್ಕ ಪುಟ್ಟ ಸಮಾರಂಭಗಳಿಗೆ ಒಂದು ರೀತಿಯವು, ಪಾರ್ಟಿಗಳಿಗಾಗಿ ಝಗಮಗ ಸೀರೆಗಳು, ಉದ್ಯೋಗಸ್ಥ ಮಹಿಳೆಯರದ್ದು ಒಂದು ರೀತಿ, ಗೃಹಿಣಿಯರವು ಮತ್ತೂಂದು ರೀತಿಯ ಸಿಂಥೆಟಿಕ್‌ ಸೀರೆಗಳು, ವಯಸ್ಸಾದ ಹೆಂಗಸರ ವೈಥಿಯಮ್‌ ಅಥವಾ ಹದಿನಾರು ಗಜದ ಕಾಟನ್‌ ಸೀರೆಗಳು, ಕೊನೆಯಲ್ಲಿ ಯುವಜನತೆಗೆ ಈಗ ಸೀರೆಯ ರೀತಿಯಲ್ಲಿ ರೆಡಿ ಹೊಲಿದಿರುವ ಸ್ಟಿಚ್‌x ಸೀರೆಗಳು, ಒಂದೇ, ಎರಡೇ? ಅದರಲ್ಲೂ ಆಯಾ ರಾಜ್ಯದ ಸಾಂಪ್ರದಾಯಿಕ ಸೀರೆಗಳು, ಉಡುವ ಶೈಲಿಗಳು ಮನಮೋಹಕ. ಅದೇ ರೀತಿ ಹೆಣ್ಣುದೇವರಿಗೆ, ದೇವಸ್ಥಾನಗಳಿಗೆ ಕೊಡುವಾಗ ಸೀರೆಗಳಿಗೇ ಆದ್ಯತೆ.

ಇನ್ನು ಮದುವೆ ಖರೀದಿ ಅಂತ ಅಂಗಡಿಗೆ ಧಾಂಗುಡಿ ಇಟ್ಟರೆ ಮದುವೆ ಹೆಣ್ಣಿಗೆ ತರುವ ಸೀರೆಗಳ ಜೊತೆಗೆ ಸಂಬಂಧಿಕರಿಗೆ, ಆತ್ಮೀಯರಿಗೆ ಕೊಡುವುದಕ್ಕಾಗಿ ಸೀರೆಯ ರಾಶಿಯನ್ನೇ ಖರೀದಿ ಮಾಡುವುದುಂಟು. ಅದೆಷ್ಟೇ ಬೇರೆ ಉಡುಗೊರೆಗಳನ್ನು ಕೊಡುವವರಿದ್ದರೂ ಸೀರೆಗೆ ಇರುವ ಖದರೇ ಬೇರೆ.

ಒಮ್ಮೆ ಹೆಣ್ಣಿನ ಮೈಯಪ್ಪಿ ಮುದ್ದಾಡುವ ಸೀರೆ, ಮುಂದೆ ಮಕ್ಕಳಿಗೆ ಜೋಳಿಗೆಯಾಗಿ, ಜೋಕಾಲಿಯಾಗಿ, ಬಡವರ ಮನೆಯ ಕರ್ಟನ್ನಾಗಿ, ದಿಂಬು ಕವರುಗಳಾಗಿ, ಮುಟ್ಟಿನ ಬಟ್ಟೆಯಿಂದ, ಕೊನೆಗೆ ಮಗುವಿಗೆ ಹಾಸುವ ದುಪ್ಪಟವಾಗಿ, ಹೊದೆಯುವ ಕೌದಿಯಾಗಿ, ಒರೆಸೋ ಬಟ್ಟೆಯ ತನಕ ತನ್ನ ಕಾಯವನ್ನು ಸವೆಸಿ ತನ್ನತನವನ್ನು ಮೆರೆಯುವ ಪರಿ ಅಚ್ಚರಿ.

ನಳಿನಿ ಟಿ. ಭೀಮಪ್ಪ

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

  • ಕವಿಗಳು, ಸುಂದರ ದಂತಪಂಕ್ತಿಯನ್ನು ದಾಳಿಂಬೆ ಕಾಳುಗಳಿಗೆ ಹೋಲಿಸಿ, ಕಾವ್ಯದ ಸೊಗಸನ್ನು ಹೆಚ್ಚಿಸುತ್ತಾರೆ. ಹಾಗೆಯೇ ದಾಳಿಂಬೆ ಹಣ್ಣು , ನಮ್ಮ ಆರೋಗ್ಯವನ್ನು, ಸೌಂದರ್ಯವನ್ನು...

  • ಪ್ರಕೃತಿಯಲ್ಲಿ ಪಕ್ಷಿಗಳು ಗೂಡುಕಟ್ಟಿ ಮೊಟ್ಟೆ ಇಟ್ಟು ಮರಿಗಳು ಹೊರಬರುತ್ತವೆ. ಆ ಮರಿಗಳ ಆರೈಕೆಯ ಸಂಪೂರ್ಣ ಹೊಣೆ ಪಕ್ಷಿಗಳದ್ದು. ರೆಕ್ಕೆಬಲಿತ ಮರಿಗಳು ಸ್ವತಂತ್ರವಾಗಿ...

  • ಮಕ್ಕಳ ವಿದ್ಯಾಭ್ಯಾಸ, ಅವರಿಗೆ ಕೆಲಸ, ಮದುವೆ ಮುಂತಾದ ಜವಾಬ್ದಾರಿಗಳೆಲ್ಲಾ ಮುಗಿದು, "ರಾಮಾ ಕೃಷ್ಣ' ಅಂತ ನಮ್ಮ ಪಾಡಿಗೆ ಇದ್ದ ನಮಗೆ ಇದ್ದಕ್ಕಿದ್ದಂತೆ ಒಂದು ಭಡ್ತಿ...

  • ಈಗ ಕಾರ್ತಿಕ ಮಾಸ. ಕಾರ್ತಿಕದ ಚಳಿಗೆ ಎಣ್ಣೆ , ತುಪ್ಪದ ಖಾದ್ಯದಿಂದ ಚರ್ಮಕ್ಕೆ ಕಾಂತಿ ಬರುವುದು. ಇಲ್ಲಿವೆ ಅಂತಹ ಕೆಲವು ರಿಸಿಪಿಗಳು. ಉಬ್ಬು ನೆವರಿ ಬೇಕಾಗುವ ಸಾಮಗ್ರಿ:...

  • ಮೊಳಕಾಲ್ಮೂರು ಎಂಬ ಚಿತ್ರದುರ್ಗದ ಚಿಕ್ಕ ಪ್ರದೇಶದಲ್ಲಿ ತಯಾರಾಗುವ ಈ ರೇಶಿಮೆ ಸೀರೆ, ತನ್ನ ವಿಶಿಷ್ಟ ವಿನ್ಯಾಸಗಳಿಂದಾಗಿ ಕರ್ನಾಟಕದಲ್ಲಿ ಮಾತ್ರವಲ್ಲ ಭಾರತದೆಲ್ಲೆಡೆ...

ಹೊಸ ಸೇರ್ಪಡೆ

  • „ಡಿ.ಎಸ್‌. ಕೊಪ್ಪದ ಸವದತ್ತಿ: ಪಟ್ಟಣದಲ್ಲಿ ಟ್ರಾಫಿಕ್‌ ಸಮಸ್ಯೆಗೆ ಕಡಿವಾಣ ಹಾಕಲು ಏಕಮುಖೀ ಸಂಚಾರ ವ್ಯವಸ್ಥೆ ಜಾರಿಗೊಳಿಸಲಾಗಿದೆ. ಆದರೆ ಸಾರಿಗೆ ಬಸ್‌ಗಳು...

  • ಜಮಖಂಡಿ: ನಗರದಲ್ಲಿ ಮಾವಾ ಮಾರಾಟ ದಂಧೆ ಜೋರಾಗಿದೆ. ತಂಬಾಕು, ಅಡಿಕೆ ಉಪಯೋಗಿಸಿ ಮನೆಯಲ್ಲಿ ಮಾವಾ ಸಿದ್ಧಗೊಳಿಸಿ ಮಾರಾಟ ಮಾಡುವ ದಂಧೆ ರಾಜಾರೋಷವಾಗಿ ನಡೆಯುತ್ತಿದ್ದು,...

  • ಬಸವರಾಜ ಹೊಂಗಲ್‌ ಧಾರವಾಡ: ಈ ಜಿಲ್ಲೆ ಸಹಕಾರಿ ಕ್ಷೇತ್ರಕ್ಕೆ ಕೊಟ್ಟ ಕೊಡುಗೆಯನ್ನು ದೇಶವಷ್ಟೇ ಅಲ್ಲ ಏಷಿಯಾ ಖಂಡವೇ ಸ್ಮರಿಸುತ್ತದೆ. ಇಲ್ಲಿ ಸರ್ಕಾರಕ್ಕೂ ಮೊದಲೇ...

  • ಇಂಧೋರ್: ಭಾರತದ ವೇಗಿಗಳ ಬಿಗು ದಾಳಿಗೆ ನಲುಗಿದ ಬಾಂಗ್ಲಾದೇಶ ಮೊದಲ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್ ನಲ್ಲಿ ಕೇವಲ 150 ರನ್ ಗಳಿಗೆ ತನ್ನೆಲ್ಲಾ ವಿಕೆಟ್ ಕಳೆದುಕೊಂಡಿದೆ. ಮುಶ್ಫಿಕರ್...

  • ಚಿಕ್ಕಮಗಳೂರು: ದೌರ್ಜನ್ಯಕ್ಕೆ ಒಳಗಾದ ಮಹಿಳೆಯರು ಮತ್ತು ಮಕ್ಕಳಿಗೆ ಸಾಂತ್ವನ ಹೇಳುವುದರೊಂದಿಗೆ ಅವರಿಗೆ ಅಗತ್ಯ ಕಾನೂನಡಿ ನೆರವು, ಚಿಕಿತ್ಸೆ ಹಾಗೂ ಪರಿಹಾರ ಕಲ್ಪಿಸಲು...