ದಿನದರ್ಶಿಕೆ ಬದಲಾಯಿತು!

Team Udayavani, Jan 17, 2020, 5:43 AM IST

ಕ್ಯಾಲೆಂಡರುಗಳು ಬಂದವು, ಹೋದವು. ವರ್ಷಗಳು, ದಶಕಗಳೇ ಉರುಳಿದವು. ಸಮಯ ಮತ್ತು ತಾರೀಕು ತಿಳಿಯಲು ವಾಚು-ಗಡಿಯಾರದ ಆವಶ್ಯಕತೆ ಇಲ್ಲದ ಮೊಬೈಲ್‌ ಮನೆಗೆ ಬಂತು.

ಮೊಮ್ಮಗ ಸುಧನ್ವ ಮನೆಗೆ ಬಂದ ಕೂಡಲೆ, “”ನಂಗೆ ಬಿಳಿ ಹಾಳೆ ಕೊಡು, ಚಿತ್ರ ಬರೆಯಲು” ಎಂದು ಕೇಳುತ್ತಾನೆ. ಅವನಿಗಾಗಿ ಬಣ್ಣದ ಪೆನ್ಸಿಲು, ಹಾಗೇ ಹಳೇ ಕ್ಯಾಲೆಂಡರಿನ ಹಾಳೆಗಳನ್ನು ನೀಡುತ್ತೇನೆ. ದೊಡ್ಡ ದೊಡ್ಡ ಚಿತ್ರಗಳಿರುವ ಕ್ಯಾಲೆಂಡರಿನ ಹಿಂಬದಿ ಖಾಲಿ ಇರುತ್ತದೆಯಷ್ಟೆ! ಬಣ್ಣ ಬಣ್ಣದ ಪೆನ್ಸಿಲಿನಿಂದ ಗೀಚುವುದರಲ್ಲಿ ಅವನಿಗೆ ಖುಷಿ. ನನ್ನ ಮನಸ್ಸೋ ಕ್ಯಾಲೆಂಡರ್‌ಗಳ ಕತೆಯಲ್ಲಿ ಮುಳುಗುತ್ತದೆ.

ಅರವತ್ತು ವರ್ಷಗಳ ಹಿಂದೆ ಹೂವಳ್ಳಿಯ ಅಜ್ಜನ ಮನೆಯಲ್ಲಿ ಅಥವಾ ಶಿರ್ಸಿ ಪೇಟೆಯ ನಮ್ಮ ಅಪ್ಪನ ಬಾಡಿಗೆ ಗೂಡಿನಲ್ಲಿ ಕ್ಯಾಲೆಂಡರ್‌ಗಳಿರಲಿಲ್ಲ. ಯುಗಾದಿಯ ಮೊದಲ ದಿನ ಅಜ್ಜ-ಅಪ್ಪ ಗೋಕರ್ಣದ “ಬಗ್ಗೊàಣ ಪಂಚಾಂಗ’ ತಂದು ಇಟ್ಟಿರುತ್ತಿದ್ದರು. ಯುಗಾದಿ ಹಬ್ಬದಂದು ಪೂಜೆ ಮಾಡಿ ಮನೆಯ ಹಿರಿಯರು ಪಂಚಾಂಗವನ್ನು ಓದಿ ಹೇಳುತ್ತಿದ್ದರು. ಯುಗಾದಿ ಪುರುಷನ ವರ್ಣನೆ, ವರ್ಷದ ಭವಿಷ್ಯ ಕೇಳಿದ ನಂತರ ಪಂಚಾಂಗವನ್ನು ದೇವರ ಕಪಾಟಿನಲ್ಲಿ ಭದ್ರವಾಗಿ ಇಡುತ್ತಿದ್ದರು.

ಸಮಯ ನೋಡಲೊಂದು ಗೋಡೆ ಗಡಿಯಾರ, ತಿಥಿ-ಮಿತಿ ತಿಳಿಯಲು ಪಂಚಾಂಗ- ಅದರಲ್ಲೇ ದಿನಾಂಕವೂ ಇರುತ್ತಿತ್ತಲ್ಲವೇ? ಹಾಗಾಗಿ, ಕ್ಯಾಲೆಂಡರ್‌ ಮನೆಗೆ ಬಂದದ್ದು ತುಂಬಾ ತಡವಾಗಿ. ಅಪ್ಪ ಮೊದಲ ಬಾರಿ ಕ್ಯಾಲೆಂಡರ್‌ ತಂದು ಗೋಡೆಗೆ ನೇತು ಹಾಕಿದಾಗ ಎಂಥ ಸಂಭ್ರಮ. ಹನ್ನೆರಡು ಹಾಳೆಗಳ ಆ ಕ್ಯಾಲೆಂಡರ್‌ನಲ್ಲಿ ದೊಡ್ಡದಾಗಿ ತಿಂಗಳು-ದಿನಾಂಕಗಳು. ಭಾನುವಾರ ಮತ್ತು ರಜಾ ದಿನಗಳು ಕೆಂಪು ಬಣ್ಣದಲ್ಲಿ , ಉಳಿದದ್ದು ಕಪ್ಪು ಬಣ್ಣದಲ್ಲಿ. ಪ್ರತಿ ದಿನಾಂಕದ ಮೇಲೆ ರಾಹುಕಾಲ-ಗುಳಿಕಕಾಲ… ಮುಂತಾಗಿ. ಹುಣ್ಣಿಮೆ-ಅಮಾವಾಸ್ಯೆ ಹಬ್ಬಗಳನ್ನು ಈಗ ನಾವೇ ಮಕ್ಕಳು ತಿಳಿಯಬಹುದಾಗಿತ್ತು. ಸೋಮವಾರದಿಂದ ಶಾಲೆ ಶುರುವಾಗಿ ಐದು ದಿನ ಕಳೆದು ಶನಿವಾರ ಬಂದ ಕೂಡಲೇ ಕೆಂಪು ಬಣ್ಣದ ಭಾನುವಾರ ನೋಡುತ್ತ ಖುಶಿ ತಡೆಯಲಾಗುತ್ತಿರಲಿಲ್ಲ. ಒಂದು ತಿಂಗಳು ಮುಗಿದೊಡನೆ ಆ ತಿಂಗಳ ಹಾಳೆ ಹರಿಯುವುದು ಅಥವಾ ತಿರುಗಿಸಿ ಹಾಕುವುದರೊಂದಿಗೆ ಎಷ್ಟು ಬೇಗ ಒಂದು ತಿಂಗಳು ಕಳೆಯಿತು ಎಂಬ ಬೆರಗು. ಹಾಲು ಖರೀದಿಸಿದ ಲೆಕ್ಕವನ್ನು ಅಮ್ಮ ಅದರ ಮೇಲೆ ಬರೆಯುತ್ತಿದ್ದರು. ಅಪ್ಪ ತನ್ನ ನೆನಪಿಗೆ ಗುರುತು ಮಾಡಿದ ತಾರೀಕುಗಳು. ಅದನ್ನು ಗಮನಿಸಿಯೇ ತಿಂಗಳ ಹಾಳೆ ಹರಿಯಬೇಕಾಗುತ್ತಿತ್ತು. ಹಾಗೆ ತಿರುಗಿಸುತ್ತ ವರ್ಷವೇ ಕಳೆದು ಹೋಗುತ್ತಿತ್ತು. ನಮ್ಮ ಮನೆಯಲ್ಲಿ ಮೂರು ಬಾರಿ ಹೊಸ ವರ್ಷ ಆಚರಣೆ ಇರುತ್ತಿತ್ತು. ಜನವರಿ 1, ಯುಗಾದಿ ಮತ್ತು ನಮ್ಮ ಶಾಲೆಗಳ ಹೊಸವರ್ಷ ಜೂನ್‌ 1.

ವರ್ಷಗಳು ಉರುಳಿದಂತೆ ಮನೆಗೆ ಹೊಸ ಹೊಸ ರೀತಿಯ ಕ್ಯಾಲೆಂಡರ್‌ ಬರತೊಡಗಿತು. ಈಗ ಮನೆ ಗೋಡೆ ಮೇಲೆ ನಾಲ್ಕಾರು ಕ್ಯಾಲೆಂಡರ್‌ಗಳು ನೇತಾಡತೊಡಗಿದವು. ದಿನಸಿ ಅಂಗಡಿಯವರು, ಔಷಧಿ ಅಂಗಡಿಯವರು, ಸೈಕಲ್‌ ಶಾಪ್‌ನವರು ಕ್ಯಾಲೆಂಡರ್‌ ಕಾಣಿಕೆ ನೀಡತೊಡಗಿದ್ದರು. ಚಿತ್ರವುಳ್ಳ ಬಣ್ಣ ಬಣ್ಣದ ಕ್ಯಾಲೆಂಡರ್‌. ಹೆಚ್ಚಾಗಿ ಮಹಾಗಣಪತಿಯ ಚಿತ್ರವಿರುವ ಕ್ಯಾಲೆಂಡರ್‌. ಕೆಳಗೆ ದಿನಾಂಕಗಳು ಸಣ್ಣದಾಗಿ ಇರುತ್ತಿದ್ದವು. ಮೇಲೆ ದೊಡ್ಡ ಚಿತ್ರ, ಹನ್ನೆರಡು ತಿಂಗಳ ವಿವರ ಸಣ್ಣದಾಗಿ ಹಾಕಿರುತ್ತಿದ್ದರು. ಲಕ್ಷ್ಮಿ, ಸರಸ್ವತಿ, ಪಾರ್ವತಿ, ಗಣಪತಿ, ಬಾಲಕೃಷ್ಣ, ಹನುಮಂತ ಮುಂತಾದ ಜನಪ್ರಿಯ ದೇವರ ಚಿತ್ರಗಳಿರುವ ಕ್ಯಾಲೆಂಡರ್‌ಗಳು. ಅಪ್ಪನಿಗೆ ಈಗ ಹೊಸ ಹುಚ್ಚು. ಹಳೆ ಕ್ಯಾಲೆಂಡರ್‌ನ ದೇವರುಗಳಿಗೆ ಕಟ್ಟು ಹಾಕಿಸಿ ದೇವರ ಮನೆ ಗೋಡೆಗಳಿಗೆ ಅಲಂಕರಿಸಲು ಆಸೆ. ನಾಲ್ಕಾರು ವರ್ಷಗಳಲ್ಲಿ ದೇವರ ಕೋಣೆ ಪೂರ್ತಿ ನಾನಾ ದೇವರುಗಳ, ನಾನಾ ಭಂಗಿಗಳ ಫೋಟೋಗಳಿಂದ ತುಂಬಿ ತುಳುಕುತ್ತಿತ್ತು.

ಬಳಿಕ ಬಂತು ದೇಶಭಕ್ತರ ಚಿತ್ರಗಳಿರುವ ಕ್ಯಾಲೆಂಡರ್‌. ಹೆಚ್ಚು ಜನಪ್ರಿಯವಾದದ್ದು ಬಾಪೂರವರದ್ದು. ನಂತರ ನೆಹರೂ, ತಿಲಕ… ಮುಂತಾದವರು ಕ್ಯಾಲೆಂಡರ್‌ಗಳಲ್ಲಿ ಬರತೊಡಗಿದರು. ಅದರಲ್ಲೇ ಮಾಯಾ ಚಿತ್ರಗಳ ಕ್ಯಾಲೆಂಡರು ಬಂದು ಮಕ್ಕಳಾದ ನಮಗೆ ಅದನ್ನು ನೋಡುವುದೇ ಒಂದು ಮೋಜು. ಥಟ್ಟನೆ ನೋಡಿದರೆ ಎರಡು ಮರ, ಸೂಕ್ಷ್ಮವಾಗಿ ನೋಡಿದರೆ ಮಧ್ಯದಲ್ಲಿ ಗಾಂಧೀಜಿ ಅಥವಾ ಬುದ್ಧ, ಕೆಲವೊಮ್ಮೆ ಇಬ್ಬರೂ ಮರದ ರೇಖೆಗಳಲ್ಲಿ ಅಡಗಿರುತ್ತಿದ್ದರು.

ಆಮೇಲೆ ಮನೆಗೆ ಸಿನೆಮಾ ನಟಿಯರ ಹಾವಳಿ ಪ್ರಾರಂಭವಾಯಿತು. ಅದರಲ್ಲೂ ಹಿಂದಿ ತಾರಾಲೋಕದ ವೈಜಯಂತಿ ಮಾಲಾ, ನರ್ಗಿàಸ್‌, ಮಧುಬಾಲಾ, ಬೀನಾರಾಯ್‌ ಮುಂತಾದವರ ಕ್ಯಾಲೆಂಡರ್‌. ಅದನ್ನು ಸಂಗ್ರಹಿಸಿ ಗೆಳತಿಯವರಿಗೆ ತೋರಿಸುವ ಸಂಭ್ರಮ ಒಂದಿಷ್ಟು ತಿಂಗಳು. “”ಹೀಗೆ ಸಿನೆಮಾ ನಟಿಯರ ಕ್ಯಾಲೆಂಡರ್‌ ನೋಡುತ್ತಿದ್ದರೆ ನೀವು ವಿದ್ಯಾ ಭ್ಯಾಸ ಮಾಡಿದ ಹಾಗೆ!” ಎಂದು ಮನೆಗೆ ಬಂದ ಹಿರಿಯರು ಬೈದದ್ದು ಇತ್ತು. ಆದರೆ, ಈ ನಟಿಯರ ಚಿತ್ರದ ಕ್ಯಾಲೆಂಡರ್‌ ಹಳೆಯದಾದ ಮೇಲೆ ನಮ್ಮ ಶಾಲೆಯ ಪಠ್ಯಪುಸ್ತಕ, ಪಟ್ಟಿ (ಅಂದರೆ ನೋಟ್ಸ್‌ ಬುಕ್‌!) ಗೆ ಬ್ಯಾಂಡ್‌ ಹಾಕಲು ಉಪಯೋಗಿಸತೊಡಗಿದೆವು. ಆದರೆ, ಅದಕ್ಕೆ ತತ್ತರಿ ಬಿತ್ತು. ತರಗತಿಯಲ್ಲಿ ಆ ನಟಿಯರ ಅರ್ಧ ಮುಖವನ್ನೇ ನೋಡುತ್ತ ನಮ್ಮ ಏಕಾಗ್ರತೆ ಹಾಳಾಗುತ್ತದೆ ಎಂದು ಗುರುಗಳು ಗದರಿಸತೊಡಗಿದರು. ಆಮೇಲೆ ಕೆಲವು ಕಾಲ ಅದನ್ನು ತಿರುಗಿಸಿ, ಖಾಲಿ ಹಾಳೆ ಮೇಲೆ ಬರುವಂತೆ ಬ್ಯಾಂಡ್‌ ಹಾಕತೊಡಗಿದೆವು. ಅದು ನಿಂತಿತು- ಎಲ್ಲರೂ ಒಂದೇ ರೀತಿ ಕಂದು ಬಣ್ಣದ ಪೇಪರ್‌ ಬ್ಯಾಂಡ್‌ ಹಾಕಬೇಕೆಂಬ ಕಾನ್ವೆಂಟ್‌ ಶಿಸ್ತು ರೂಢಿಗೆ ಬಂತು!

ಕ್ಯಾಲೆಂಡರುಗಳು ಬಂದವು, ಹೋದವು. ವರ್ಷಗಳು, ದಶಕಗಳೇ ಉರುಳಿದವು. ಸಮಯ ಮತ್ತು ತಾರೀಕು ತಿಳಿಯಲು ವಾಚು-ಗಡಿಯಾರದ ಆವಶ್ಯಕತೆ ಇಲ್ಲದ ಮೊಬೈಲ್‌ ಮನೆಗೆ ಬಂತು. ಆದರೂ ಕ್ಯಾಲೆಂಡರ್‌ಗಳು ಉಳಿದುಕೊಂಡಿವೆ. ಬೇರೆ ಬೇರೆ ದೇಶಗಳ ಪ್ರೇಕ್ಷಣೀಯ ಸ್ಥಳದ ಮಾಹಿತಿ ಇರುವ ದೊಡ್ಡ ದೊಡ್ಡ ಕ್ಯಾಲೆಂಡರ್‌ ಬರುತ್ತಿವೆ. ಟೇಬಲ್‌ ಮೇಲೆ ಇಡುವ ಪುಟ್ಟ ಕ್ಯಾಲೆಂಡರ್‌ ಡೆಸ್ಕ್ ಕ್ಯಾಲೆಂಡರ್‌ ಬಂದಿವೆ. ಕ್ಯಾಲೆಂಡರ್‌ ರೂಪದರ್ಶಿಗಳಿಗಾಗಿ ತಮ್ಮ ಹಣದ ಸಾಮ್ರಾಜ್ಯವನ್ನು ಕಳೆದುಕೊಂಡ ಹೆಂಡದ ದೊರೆಗಳ ಕತೆ ಎಲ್ಲರಿಗೂ ಗೊತ್ತೇ ಇದೆ.

ಪ್ರತಿವರ್ಷ ಮೊದಲ ದಿನ ಹಳೆ ಕ್ಯಾಲೆಂಡರ್‌ ತೆಗೆದು ಹಾಕುವಾಗ ಏನೋ ವಿಷಾದ, ಮತ್ತೇನೋ ಸಂಭ್ರಮ, ಬದುಕೇ ಹೀಗೆ!

ವಿಜಯಾ ಶ್ರೀಧರ್‌

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

  • ಮಹಿಳೆಯರ ಪೈಕಿ ಅನೇಕರು ಹೊಟ್ಟೆತುಂಬಾ ನೀರು ಕುಡಿಯುವುದು ಕಡಿಮೆ. ಅದರಲ್ಲಿಯೂ ಮನೆಯ ಹೊರಗೆ ಕೆಲಸ ಮಾಡುವವರು, ಪ್ರಯಾಣ ಮಾಡುವವರು, ಕಾರ್ಮಿಕ ಮಹಿಳೆಯರು ನೀರು ಕುಡಿಯಲು...

  • ತುಳಸೀ ಗೌಡರ ಬದುಕಿನಲ್ಲಿ ತೀವ್ರ ನೋವಿನ ಹಾದಿ ಎದುರಾದಾಗ ಅವರಿಗೆ ನೆರಳಾದುದು ಹಸಿರು ಗಿಡಗಳು. ನಿಸ್ವಾರ್ಥವಾಗಿ ಹಸಿರು ಸಿರಿಯನ್ನು ಪ್ರೀತಿಸಿದ ಅವರು ನಿಜಕ್ಕೂ...

  • ಹದಿನೇಳು ವರ್ಷದ ಹಿಂದೆ ಮದುವೆಯಾಗಿ ಈ ಬೃಹತ್‌ ಮನೆಯೊಳಗೆ ಕಾಲಿಟ್ಟಾಗ ನನಗೆ ವಾಸ್ತುಶಾಸ್ತ್ರದ ಬಗ್ಗೆ ತಿಳಿವಳಿಕೆಯೇ ಇರಲಿಲ್ಲ. ಅತ್ತೆ ಸರಸ್ವತಿ ಅವರಾಗಲಿ, ಮಾವ...

  • ಉಡುಪಿ -ಕುಂದಾಪುರ ನಡುವೆ ಓಡಾಡುವ ಎಕ್ಸ್‌ಪ್ರೆಸ್‌ ಬಸ್‌ "ಭಾರತಿ'ಯಲ್ಲಿ ಬಸ್‌ ನಿರ್ವಾಹಕಿಯಾಗಿ ಕೆಲಸ ಮಾಡುತ್ತಿರುವ ರೇಖಾ, ಮೂಲತಃ ಬಾಗಲಕೋಟೆಯವರು. ಆದರೆ, ಸುಮಾರು...

  • ನಂಗಿದು ಬೇಡ, ಬೇರೆ ಮಾಡಿಕೊಡು'' ಎಂದು ರಚ್ಚೆ ಹಿಡಿದು ಅಳುತ್ತ ನೆಲದಲ್ಲಿ ಹೊರಳಾಡುತ್ತಿದ್ದ ಹತ್ತು ವರ್ಷದ ಮೊಮ್ಮಗನ ಹಠಕ್ಕೆ ಮಣಿದು, ನೋಯುತ್ತಿದ್ದ ತನ್ನ ಮೊಣಕಾಲುಗಳನ್ನು...

ಹೊಸ ಸೇರ್ಪಡೆ